ಭಾನುವಾರ, ಮಾರ್ಚ್ 26, 2023
25 °C

ದಾದಾಪೀರ್ ಜೈಮನ್ ಬರೆದ ಕವಿತೆ: ಅಕ್ಷರ ಅಕ್ಷಯ

ದಾದಾಪೀರ್ ಜೈಮನ್ Updated:

ಅಕ್ಷರ ಗಾತ್ರ : | |

Prajavani

ಮೊದಲ ಸಲ
ಕಾಗದದ ಎದೆಯೊಳಗೆ
ಅಕ್ಷರ ಕಣ್ಣು ತೆರೆದಾಗ
ಕನಸಿನಲಿ ಕಳೆದುಹೋದ ಕಂದ
ಸಿಕ್ಕಿಬಿಟ್ಟಂಥ ರೋಮಾಂಚನವಾಗುತ್ತದೆ ಲೋಕಕ್ಕೆ

ಅಕ್ಷರ ತೊಟ್ಟಿಲೊಳಗೆ
ತೊದಲು ನುಡಿವಾಗ
ಲೋಕದಾತ್ಮದ ಒಳದನಿ
ಕ್ಷೀಣವಾಗಿ ಕೇಳಿಸುತ್ತದೆ

ಅಕ್ಷರ ಅಂಬೆಗಾಲಿಟ್ಟು
ಹೊಸ ಹಾದಿ ಮೂಡಿದಾಗ
ಲೋಕದ ಹೊಟ್ಟೆಯೊಳಗೆ
ಚಿಟುಗು ಮುಳ್ಳು ಮಿಸುಕಾಡುತ್ತದೆ

ಲೋಕವೇ ಕೊರೆದಿಟ್ಟ
ಸಾಲುಗಳ ನಡುವಲ್ಲಿ
ಗತ್ತಿನಲಿ ನಡೆಯುತ್ತಾ
ಕವಿತೆಯಾದಾಗ
ಲೋಕದ ಕಣ್ಣು ಕೆಂಪಾಗುತ್ತದೆ

ಕಬ್ಬಿಣ ಕತ್ತಲ ಸರಳಿನ ಸೆರೆಮನೆಯೊಳಗೆ
ಬಂಧಿಸಿದಾಗೆಲ್ಲ
ಅಕ್ಷರ ಕಾಗದದಿಂದ ಮೇಲೆದ್ದು
ಹಾಡಾಗುತ್ತದೆ

ಹಾಡಿನ ಹೆಜ್ಜೆಯ ಹಿಡಿಯದೆ
ಸೋಲಲು
ಬೂಟುಗಾಲಿನ ಬಂದೂಕುಗಳು ಗುಂಡಿಕ್ಕುವಾಗ
ಹಾಡು ಗಾಳಿಯಲ್ಲಿ ಬೆರೆತುಹೋಗುತ್ತದೆ

ಬದುಕಲೆಂದು ಲೋಕ ಉಸಿರಾಡುವಾಗ
ತೂರಿಬಿಡುತ್ತದೆ
ದೇಹದ ಆತ್ಮದೊಳಗೆ
ಆತ್ಮದ ದೇಹದೊಳಗೆ
ಅಲ್ಲಿಂದ ಲೋಕ ನಂಬುವ
ಜನ್ಮ ಜನ್ಮಾoತರದವರೆಗೂ
ಅಕ್ಷರ ಅಕ್ಷಯವಾಗುತ್ತಲೇ ಇರುತ್ತದೆ
ಕವಿತೆ ಹಾಡು ಉಸಿರಾಗುತ್ತಾ
ಕನ್ನಡಿ ಹಿಡಿಯುತ್ತಲೇ ಇರುತ್ತದೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು