ಭಾನುವಾರ, ಸೆಪ್ಟೆಂಬರ್ 27, 2020
24 °C

ಈ ಶಹರದಲಿ... ಈ ಗೋಡೆಗಳು...

ಆರಿಫ್ ರಾಜಾ Updated:

ಅಕ್ಷರ ಗಾತ್ರ : | |

Prajavani

ಈ ಶಹರದಲಿ

ಈ ಗೋಡೆಗಳು

ಕೇವಲ ಈ ಗೋಡೆಗಳು

ಈ ಗೋಡೆಗಳು ಮಾತ್ರ ನನ್ನವೇ

 

ಇಷ್ಟೊಂದು ಗೋಡೆಗಳ ಬಿಟ್ಟುಬಂದೆ

ಊರಿಂದ ಊರಿಗೆ ಬೆನ್ನ ಹಿಂದೆ

 

ಬಣ್ಣಹಚ್ಚಿದ ಗೋಡೆ, ಸುಣ್ಣ ಹಚ್ಚಿದ ಗೋಡೆ

ಕರುಕಲಾದ ಗೋಡೆ, ಬಿರುಕು ಬಿಟ್ಟ ಗೋಡೆ

ಮೋಟು ಗೋಡೆ, ಚೋಟು ಗೋಡೆ

ಎತ್ತರದ ಗೋಡೆ, ನಿರುತ್ತರದ ಗೋಡೆ

 

ಬಿಟ್ಟುಬಂದ ಹಾಳು ಗೋಡೆಗಳೆಷ್ಟೋ

ಗೋಡೆಗೆ ನೇತು ಹಾಕಿದ

ಆಪ್ತ ಮುಖಗಳೆಷ್ಟೋ

 

ಗೋಡೆಗಳಿಗೆ ಗೊತ್ತು ಮುಖಗಳ ಲೆಕ್ಕ

ಮುಖವಾಡಗಳ ಲೆಕ್ಕ ಗೊತ್ತಿಲ್ಲ

 

ಪರಿಚಿತ ಮುಖ ಅಪರಿಚಿತ ಗೋಡೆ

ಅಪರಿಚಿತ ಮುಖ ಪರಿಚಿತ ಗೋಡೆ

ಒಂದೊಂದು ಮುಖವು ಇಲ್ಲಿ

ಚಲಿಸುವ ಗೋಡೆ

ಪಿಸುಗುಡುತ್ತವೆ ಯಾರಿಗೂ ಕೇಳದ ಹಾಗೆ

 

ಈ ರಾತ್ರಿ ಈ ನಿರಾಶೆಯ ಕಣ್ಣುಗಳು

ಬೆಡ್‍ರೂಮಿನ ಗೋಡೆಗಳ ಮೇಲೆ

ಬರೆವ ಮಾಗಿಯ ಮುಖವ

ಬಹುಶ: ಯಾರೂ ಓದಲಾರರು

 

ಅರ್ಧಬಿದ್ದು ಇನ್ನರ್ಧ ವಾಲಿನಿಂತ

ಈ ಶಹರದ ಗೋಡೆಗಳು

ಎದೆ ತೂತು ಮಾಡಿಕೊಂಡು ಬಯಲಿಗೆ ಬಿದ್ದ

ಪ್ರೇಮಿಗಳ ಹಾಗೆ

 

ಯಾವುದೋ ಊರಿನಲಿ ಬಿಟ್ಟುಬಂದ ನಿಮ್ಮ ಮುಖ

ಇನ್ಯಾವುದೋ ಊರಲಿ ನಿಮಗೇ ಎದುರಾದರೆ

ದಯಮಾಡಿ ಗೋಡೆಗಳ ಮೇಲೆ ಗೂಬೆ ಕೂರಿಸಬೇಡಿ

 

ಕೆಲವು ಮುಖಗಳೇ ಹೀಗೆ

ಕ್ಷಮಿಸಿ

ಕೆಲವು ಗೋಡೆಗಳೇ ಹೀಗೆ

ಬೇಟೆನಾಯಿಗಳ ಹಾಗೆ

ಜೀವನ ಪರ್ಯಂತ ನಿಮ್ಮ ಬೆನ್ನುಹತ್ತಿ ಬಂದುಬಿಡುತ್ತವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.