ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿತೆ: ಮಗ್ಗಲು ಬದಲಾಯಿಸುವುದಿಲ್ಲ

Last Updated 27 ಡಿಸೆಂಬರ್ 2020, 3:59 IST
ಅಕ್ಷರ ಗಾತ್ರ

ನಟ್ಟನಡುವೆ, ಉತ್ತುಂಗದೆಶೆಯಲ್ಲಿಯೂ
ಜ್ಞಾನದಾರೋಹಣದಲ್ಲಿಯೂ
ಅತಂತ್ರಸ್ಥಿತಿಯ ಆಲಾಪದಲ್ಲಿಯೂ
ಪೂರ್ಣಗೊಂಡ ದಾರಿಯ ಕೊನೆಯಲ್ಲಿಯೂ
ಎಷ್ಟು ಸತ್ತಮನಗಳ ಹೊದ್ದುಮಲಗಿದರೂ
ಮಗ್ಗುಲು ಬದಲಾಯಿಸುವುದಿಲ್ಲ
ಮಗ್ಗುಲು ಬದಲಾಯಿಸಲು ಆಗುವುದಿಲ್ಲ

ಇಂದಿನದಲ್ಲ, ಹಿಂದಣ ಜನುಮಕಂಟಿದ್ದು
ಕಣ್ಣಕಪ್ಪೆ ಕಟ್ಟಿಕೊಂಡು
ತಲೆಯೆತ್ತಿದರೆ ಅಪಾಯವೆಂಬಂತೆ
ನಿಟ್ಟಿಸುರನ್ನೂ ಪಿಸುಮಾತಾಗಿಸಿಕೊಂಡು
ಆಡಿದರೆ ಮತ್ತೆ ಆಡಲಾರವೇನೂ ಎಂಬಂತೆ
ಒಂದೇಕಡೆ ಕಣ್ಣುನೆಟ್ಟಿ ಮಲಗಿ
ಮಗ್ಗುಲು ಬದಲಾಯಿಸುವುದಿಲ್ಲ
ಮಗ್ಗುಲು ಬದಲಾಯಿಸಲು ಆಗುವುದಿಲ್ಲ

ಬೆನ್ನಹಿಂದಿನ ಭಯಾನಕ ಅದೃಶ್ಯ ಶಕ್ತಿಗಳ ಹಾರಟಕ್ಕೆ
ಕಪ್ಪುಬೆಳಕ ಕಣ್ಣಕುಕ್ಕುವಿಕೆಗೆ
ನೆತ್ತರಸವಿರಿದ ಮುಳ್ಳು ಹಾಸಿಗಿಗೆ
ಹೀಗೆ ಇರು ನೀನು ಎಂಬ ಅಪ್ಪಣೆಗೆ
ಕಣ್ಣತಿರುಗಿಸಿದರೆ ಕತ್ತುಹಿಚುಕುವ ಕೈಗಳಿಂದಾಗಿ
ಮಗ್ಗುಲು ಬದಲಾಯಿಸುವುದಿಲ್ಲ
ಮಗ್ಗುಲು ಬದಲಾಯಿಸಲು ಆಗುವುದಿಲ್ಲ

ಕ್ರಾಂತಿಯೆಂಬ ಬ್ರಾಂತಿಗೆ ಮುರುಟಿಹೋದವು ಮನಗಳು
ಸಮಾಜದುದ್ದಾರದಲಿ ಎಲ್ಲಿಯೂ ದಕ್ಕಲಿಲ್ಲ
ಸಮಾಧಿಗಳು ತುಳಿದು ನೆಲಸಮವಾದವು
ಅನನ್ಯವಾಗಲಿಲ್ಲ, ಯಾರ ನೆನಪಲಲುಳಿಯಲಿಲ್ಲ
ಸುಟ್ಟುಕರಕಲಾದ ಆತ್ಮಗಳ ಕಂಡು
ಮಗ್ಗುಲು ಬದಲಾಯಿಸುವುದಿಲ್ಲ
ಮಗ್ಗುಲು ಬದಲಾಯಿಸಲು ಆಗುವುದಿಲ್ಲ

ಜೋಮುಹಿಡಿದ ದೇಹದಲಿ ಮನಕೂ ಜೋಮು ಹಿಡಿದು
ಚಿವಿಟಿದರೂ ಸ್ಪರ್ಶವಿರದೆ
ನೋವು ನಲಿವುಗಳ ಬೇಧವರಿಯದೆ
ಇಡೀ ರಾತ್ರಿಗೆ, ದೂರದಲ್ಲಿಯ ನಾಯಿ-ನರಿಗಳ ಕೂಗಿಗೆ
ಕಿರಿಚಿದರೂ ಹೊರಬರದ ಶಬುದಕ್ಕೆ
ಮಗ್ಗುಲು ಬದಲಾಯಿಸುವುದಿಲ್ಲ
ಮಗ್ಗುಲು ಬದಲಾಯಿಸಲು ಆಗುವುದಿಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT