ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಿತಾ ಅಮೃತರಾಜ್‌ ಅವರ ಕವಿತೆ: ಒಂದು ಮಳೆ ಬಿದ್ದಾಗ

Last Updated 18 ಜೂನ್ 2022, 19:30 IST
ಅಕ್ಷರ ಗಾತ್ರ

ಒಂದು ಮಳೆ ಬಿದ್ದಾಗ..

ಬರಡು ನೆಲ ಹದಗೊಳ್ಳುತ್ತದೆ

ಒಣ ಬೀಜ ಮೆದುಗೊಳ್ಳುತ್ತದೆ

ಹಸಿರು ಮುಕ್ಕಳಿಸಿ ನೆಗೆಯುತ್ತದೆ

ಒಂದು ಮಳೆ ಬಿದ್ದಾಗ..

ಬಡಕಲು ನದಿ ಉಕ್ಕೇರುತ್ತದೆ

ತೊರೆ ಶರಧಿ ನೋಡುತ್ತದೆ

ಸೂರಿನಡಿಯಲ್ಲಿ ಸ್ವರ್ಗ ಇಳಿಯುತ್ತದೆ

ಒಂದು ಮಳೆ ಬಿದ್ದಾಗ..

ಮಗು ಅಂಗಳಕ್ಕೆ ಓಡುತ್ತದೆ

ನೆತ್ತಿಯೊಡ್ಡಿ ನೆನೆಯುತ್ತದೆ

ಕಣ್ಣ ತುಂಬ ಕಡಲ ತುಂಬಿಕೊಳ್ಳುತ್ತದೆ

ಒಂದು ಮಳೆ ಬಿದ್ದಾಗ..

ಅಂಗಡಿಗಳು ತೆರೆದುಕೊಳ್ಳುತ್ತವೆ

ಬಾಗಿಲಿಗೆ ಛತ್ರಿ, ಮಳೆಕೋಟು ತೋರಣ ಕಟ್ಟುತ್ತವೆ

ರಿಯಾಯಿತಿ ದರದ ಹಣೆಪಟ್ಟಿ ಹೊತ್ತ ವ್ಯಾಪಾರ

ಬಿರುಸಿನಲ್ಲಿ ಸಾಗುತ್ತದೆ

ಒಳಗಿಳಿಸಿಕೊಳ್ಳದೆ, ಮುದಗೊಳ್ಳದೆ

ಅವಸರದ ಅಕಾಲಿಕ ಮಾಗುವಿಕೆಗೆ ಸಿಕ್ಕಿ

ಎದೆ ತೋಯದವರ ನೆನೆದು

ಮಳೆ ಈಗೀಗ ಲಯ ಕಳೆದುಕೊಳ್ಳುತ್ತಿದೆ

ಆದರೂ..

ಮನುಷ್ಯರಿಲ್ಲದ ನಾಡಿನಲ್ಲಿ ಮಳೆ

ಹೊಯ್ಯುತ್ತಲೇ ಇದೆ

ಧಾವಂತಕ್ಕಂಟಿ ದೇಶಾಂತರ ಹೋದವರು

ಅಚಾನಕ್ ಹನಿಯೊಂದು ತಾಕಿ

ಮಗುವಿನಂತಾಗಬಹುದೆಂಬ ಆಸೆಯಲ್ಲಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT