ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿತೆ | ರೂಹು ಅರಳಿದ ಕಾಲ

Last Updated 8 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಮುಂಗಾರು ಮಳೆಯ ಕಾಲಕೆ
ಅವಳ ಮನದ ಅಂಗಳದಲಿ
ಅವನ ನೆನಪು ನುಗ್ಗಿ ಬರುತ್ತದೆ

ಅಂದು ನಡುಹಗಲು ಬಿರುಮಳೆ ಜೋರು
ಮನೆ ಎದುರಿನ ಹೂದೋಟದಲಿ
ಹೂವುಗಳು ಮೈಬಿರಿದು ಸಂಭ್ರಮಿಸುತ್ತಿದ್ದವು
ಅದನ್ನು ನೋಡುತ್ತ
ಮಳೆಯಲ್ಲಿ ನೆನೆಯುತ್ತ
ಒದ್ದೆ ಮುದ್ದೆಯಾಗಿ
ಹರುಷ ಚಿಮ್ಮಿತು ಅವಳೊಳಗೆ

ಮನೆಯ ಒಳಗೋಡಿದ್ದಳು
ನಡುಹಗಲಲೂ ಕತ್ತಲು ಕವಿದಿತ್ತು
ಹಚ್ಚಿದಳು ಮೇಣದಬತ್ತಿ
ಒದ್ದೆಬಟ್ಟೆಯಲಿ ತನ್ನ ಮೇಲೆ
ತಾನೇ ಮೋಹಗೊಂಡು ನಾಚಿನೀರಾದಳು

ಅವನು ಕಳ್ಳಹೆಜ್ಜೆಯಿಡುತ್ತ ಒಳ ಬಂದುದು
ಅವಳರಿವಿಗೆ ಬಂದಿರಲೇ ಇಲ್ಲ
ಬಿರುಗಾಳಿಯಂತೆ ನುಗ್ಗಿ
ಹಿಂದಿನಿಂದ ಹಿಡಿದಪ್ಪಿ
ಸಿಹಿ ಕಂಗಳಲಿ ಎವೆಯಿಕ್ಕದೇ ನೋಡಿ
ಉಕ್ಕಿಸಿದ್ದ ಅವಳ ಮೊಗದಲ್ಲಿ
ಕೆಂಪು ನಾಚಿಕೆಯ ನದಿಯನ್ನು

ಮುಂದಿನದನು ನೆನೆನೆನೆದು
ನಿಂತಲ್ಲಿ ನಿಲಲಾಗದೇ
ಈಗಲೂ ಅದೇ ಮುಂಗಾರು ರಾಚುತಿರಲು
ಬಾಗಿಲ ಬಳಿ ನಿಂತು ನಿರೀಕ್ಷಿಸುವಳು ಅವನನ್ನು

ಇಲ್ಲೇ ಇದೇ ಮಂಚದಲಿ ಅವನು
ನವಿರಾಗಿ ಕೂರಿಸಿದ್ದು
ನೆಲದ ಮೇಲೆ ಕೂತವನೇ
ಪಾದಗಳಿಗೆ ಲೊಚಲೊಚನೆ ಮುತ್ತಿಕ್ಕಿದ್ದು
ತಪ್ಪಿಸಿಕೊಂಡು ಓಡಲು
ಹವಣಿಸಿದ ಅವಳು
ಅದೇಕೋ ಥಟ್ಟನೆ ನಿಂತೇ ಬಿಟ್ಟಿದ್ದಳು
ಅವನು ಬಳಿ ಸಾರಲೆಂದೇ!
ಬಂದು ಸೊಂಟ ಬಳಸಲೆಂದೇ!
ನಡೆದದ್ದು ಅದೇ
ಎಲ್ಲವೂ ಅವಳೆಣಿಸಿದಂತೆಯೇ

ಕೋಣೆಯ ಆವರಣದಲ್ಲೆಲ್ಲೆಲ್ಲೂ
ಅವನ ಬಿಸಿಯುಸಿರಿದೆ ಇಂದು
ಹಿಂಬಾಲಿಸಿ ಬಂದು
ಗೋಡೆಗೊರಗಿಸಿ ಅಪ್ಪಿಕೊಂಡನಲ್ಲ
ಅಲ್ಲಿ ಇನ್ನೂ ಆ ಕಲೆಯ ಗುರುತು ಇದೆ
ಎದೆಯೊಳಗೆ ಏನೋ ಕಲಕಿದಂತಾಗಿ
ಕಡಲೆದ್ದು ಮೊರೆದಂತಾಗಿ
ತಪ್ಪಿಸಿಕೊಳ್ಳಲೆತ್ನಿಸಿದವಳೇ
ಒಡ್ಡಿಕೊಂಡಿದ್ದಳು ಬೆತ್ತಲೆ ದೇಹವನ್ನು
ಅವನ ಬಿಸಿ ಮುತ್ತುಗಳ ಸುರಿಮಳೆಗೆ

ದೇಹದ ಅಂಗಾಂಗ
ಜ್ವಾಲಾಗ್ನಿಯಾಗಿ ಹೊತ್ತಿ ಉರಿದಿತ್ತು
ಹೊರಗೆ ಬಿರುಗಾಳಿಯ ರಭಸಕ್ಕೆ
ಬಿರುಮಳೆಯ ಹೊಡೆತಕ್ಕೆ
ಸರಭರನೆ ತೂಗಿದ್ದವು ಮರದ ಎಲೆಗಳು

ಮತ್ತದೇ ಅನುಭವಕೆ
ಮತ್ತದೇ ಲಜ್ಜೆಗೆ
ಹಾತೊರೆದಿದೆ ಅವಳ ಮನ
ಅದೆಂತಹ ಹಿತವಿತ್ತು
ಅವನ ಅಪ್ಪುಗೆಯಲಿ
ಬೆಚ್ಚಗಿನ ನೋವಿನಲ್ಲೂ
ನಲಿವಿನ ಉತ್ತುಂಗವಿತ್ತು

ಸೋಲನ್ನು ಅರಿಯದವರು
ಸೋತು ಗೆದ್ದಿದ್ದರು ಒಲವಿನಲ್ಲಿ
ದೀರ್ಘ ನಿಟ್ಟುಸಿರಿನ ಮಾದಕತೆಯಲ್ಲಿ
ತಬ್ಬಿ ಘಾಸಿಗೊಳಿಸಿದಷ್ಟೂ ಅವನು
ಅರಳಿದ್ದಳು ಅವಳು
ಪುಟಿವ ಚೆಂಡಿನಂತೆ
ಅವನ ತೋಳುಗಳಲಿ ಕರಗುತ್ತ
ಪ್ರೀತಿಯಲಿ ಹೊಸ ಜೀವ ಪಡೆದಿದ್ದಳು

ಈಗ ಮತ್ತೆ ಮುಂಗಾರಿನ ಒಂದು ದಿನ
ಗೊತ್ತು ಅವಳಿಗೆ ನಿರಾಶೆಗೊಳಿಸಿದ್ದಿಲ್ಲ
ಎಂದೂ ಅವನು ಬರಬಹುದು ಈಗವನು
ಯಾವ ಗಳಿಗೆಗೂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT