ಗೆರೆಯೊಳಗೆ ದುಂಡಗಿನ
ಅಕ್ಷರಗಳನ್ನಿಟ್ಟು ಪದ ಹೊಸೆದರೆ
ಅದೊಂದು ಹೂ ದಂಡೆಯಂತೇ ಕಾಣುತ್ತದೆ
ಹೂ ದಂಡೆಯೂ ಜೆಡೆಬಿಲ್ಲೆಯಾಗಲು
ದಾರದ ಗೆರೆಯೊಳಗೇ ಕೂರಬೇಕು
ಗೆರೆ ಗೆರೆ ಕೂತಾಗ ಚೌಕಟ್ಟಾಗುತ್ತದೆ
ಅದರೊಳಗೆ ಒಂದಷ್ಟು ಬಣ್ಣದ ಪುಡಿ
ಎರಚಿದರೆ ರಂಗೋಲಿಯಾಗುತ್ತದೆ
ಚೌಕಟ್ಟಿನೊಳಗೆ ಮಾತ್ರ ಹಬ್ಬಿಕೊಂಡ ಬಳ್ಳಿ
ನೋಡಲು ಎಷ್ಟು ಚೆಂದ?
ಕೆಲವು ಗೆರೆಗಳನ್ನ ಅವರೇ ಎಳೆದು ನಮ್ಮನ್ನ
ಕೂರಿಸಿದ್ದಾರೆ
ಇನ್ನು ಕೆಲವು ಗೆರೆಗಳ ನಾವೇ ಎಳೆದುಕೊಂಡಿದ್ದೇವೆ
ಬದುಕ ಚೆಂದಗಾಣಿಸಲು ಗೆರೆಯೊಂದು ತೀರಾ ಅಗತ್ಯವೆಂಬ ಭ್ರಮೆಯೊಂದು ಬಲಿತಿದೆ
ಗೆರೆಯೊಳಗೇ ಕೂತು ಕಲಿತ
ಅಭ್ಯಾಸ ಬಲ
ಈಗ ಖಾಲಿ ಹಾಳೆಯ ಮೇಲೆಯೂ
ಪದ ಅತ್ತಿತ್ತಲಾಗುವುದಿಲ್ಲ
ಚಿತ್ತ ಚಾಂಚಲ್ಯದಲ್ಲೂ ಗೆರೆ ದಾಟಿ
ಕಣ್ಣು ಕದಲುವುದಿಲ್ಲ
ಈ ಗೆರೆಯಿಂದಾಗಿ ದೊಡ್ಡ ರಾಮಾಯಣವೇ
ಸಂಭವಿಸುತ್ತದೆ ಅಂತ ಗೊತ್ತಿದ್ದರೂ ಇತ್ತಿತ್ತಲಾಗಿ
ಒಮ್ಮೆಯಾದರೂ ಸಣ್ಣಕೆ ಕದಲಿ
ಗೆರೆ ಮೀರಬೇಕು ಅಂತನ್ನಿಸುವುದು
ಯಾಕೆ?
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.