ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರ್ ಕೇರಿಯಲ್ಲಿ ಮಗುವಾದ ಮಹಾತ್ಮ

Last Updated 28 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ಆದಿ ಅಸ್ಪೃಶ್ಯ ಲೋಕದ ಅನಾದಿ ಪುಟ್ಟ ಸಂಸಾರವೊಂದು
ಮಹಾನಗರಿ ಮುಂಬೈನಿಂದ ಆಶ್ರಮಕ್ಕೆ ಆಗಮಿಸಿತ್ತು
ಅಲ್ಲಿದ್ದ ಪರಿವಾರವೆಲ್ಲ ಮೈಚರ್ಮವನ್ನೇ ಸುಲಿದುಕೊಳ್ಳಲು
ಬೇಕಾದರೆ ಉಸಿರಾಟವನ್ನು ನಿಲ್ಲಿಸಿಕೊಳ್ಳಲು ತಯಾರಿತ್ತು

ದೂಧಾಭಾಯಿ ದೀನಾಬೆನ್ ಬೆಸೆದ ಬಂಧನಕ್ಕೆ
ಕರುಳಕುಡಿಯ ಹಣತೆಯಂತೆ ಬೆಳಕು
‘ಲಕ್ಷ್ಮೀ’ ಎಂಥ ಹೆಸರು!
ಗಾಂಧಿ ಮುಗುಳ್ನಕ್ಕರು, ಕರೆದು ಮೈದಡವಿದರು

ಕಸ್ತೂರಬಾ ಭಾವನೆಗಳ
ಕತ್ತರಿಸಿದ ಕುಹಕಿ | ಪತ್ನಿಯೇ ಇವಳು
ಆಫ್ರಿಕಾಕ್ಕೆ ಹೋಗಿಬಂದರೂ ಕಳಂಕ ಕಲ್ಮಶದ
ಮಹಾನ್ ಧರ್ಮಿಷ್ಠೆ | ಯಾವ ದೇವರ ಹಾವು
ಕುಟುಕಿದೆ | ನಾನು ಕೈಹಿಡಿದೇನೇ ಇವಳನ್ನ
ಕೈಕೈ ಹಿಸುಕಿಕೊಳ್ಳುತ್ತಾರೆ, ಕರಮಚಂದರು

ದಂಡಿಸಿಕೊಳ್ಳಲು ನಡೆಯುತ್ತಾರೆ
ಮನಸು ದೇಹ ದಣಿಯುವವರೆಗೆ
ಹಸಿವು, ನಿತ್ರಾಣ ಕತ್ತಲೆ ದಾಟಿ
ಮೂರನೆಯ ಬೆಳಕಿಗೆ ಬರುತ್ತಾರೆ
ಪ್ರಾರ್ಥಿಸುತ್ತ, ನೆರುಪಾಗಿರಲಿ
ಆಶ್ರಮವಾಸಿಗಳ ತನ್ಮನಗಳು

ನೆನಪಿನಾಳದ ಗಾಯದ ನೆನ್ನೆಗಳು
ಗರ ಬಡಿದಂತೆ ಕಾಣುತ್ತಿದೆ ಆಶ್ರಮ
ನನ್ನುಸಿರಿನ ಗಾಳಿಯೇ ನಿನಗೆ ಅಸ್ಪೃಶ್ಯತೆಯ ಸೋಂಕೇ
ಸೋಂಕಿದ್ದರೆ ನನ್ನುಸಿರ ನಿಲ್ಲಿಸು
ಎಂದೆನ್ನುತ್ತಲೇ ಬಂದ ಗಾಂಧೀ
ಮೊದಲು ಹುಡುಕುತ್ತದೆ ಕಣ್ಣು
ನಿನ್ನೆ ಬಂದ ದೂಧಾಭಾಯಿ ದಂಪತಿಗಳ
ಪುಟ್ಟ ಹಣತೆ ಲಕ್ಷ್ಮೀ ಬೆಳಕನ್ನು
ನಿಟ್ಟುಸಿರು ಬಿಟ್ಟ ಗಾಂಧೀ,
ಕಾಣುತ್ತಿಲ್ಲ ಬಾ ತಲ್ಲಣಿಸಿತು ಮನ

ಈ ಕಡೆ ಹರಿದುಹೋದರೂ ನೀರಿನಂತೆ
ಅಗೋ ಅಲ್ಲಿ ಕೆಳಗಿನ ಮನೆಯ ಕಡೆಗೆ
ಹೊರಟಿತ್ತು ಊರುಗೋಲು ಹಿಡಿದುಕೊಂಡ ಕನ್ನಡಕ
ಸತ್ಯ, ಅಹಿಂಸೆ, ಸಹಿಷ್ಣುತೆಗೆ, ಸುತ್ತಿದ್ದ ತುಂಡು ಬಟ್ಟೆಯ
ಜೀವ ನಡೆದುಬರುತ್ತಿತ್ತು | ರಮಾ ಭೀಮಾಬಾಯಿಯ

ಮನೆಯ ಕಡೆಗೆ, ನೆಲನೊಂದುಕೊಳ್ಳದೇ
ಸರಳ ನೆರಳೊಂದು ನನ್ನ ಮೇಲೆ ನಡೆದರೆ
ನನ್ನ ಮೈ ಹಗುರವಾದಂತೆ ಎಂದು ನುಡಿದಿತ್ತು
ಅನ್ನಿಸಿತ್ತು ಬಹಳ ದಿನಗಳಿಂದ
ಭೀಮಸಾಹೇಬರ ಮನೆಗೆ ಬರಬೇಕೆಂದು
ನಡುಮನೆಯಲ್ಲಿ ಅಕ್ಕ ತಂಗಿಯರು
ಹಂಚಿಕೊಳ್ಳುತ್ತಿದ್ದಾರೆ ಸುಖದುಃಖಗಳನ್ನು

ಹಡೆದ ಮಕ್ಕಳು ನಾಲ್ಕು ಕೈಜಾರಿ ಉಸಿರುಬಿದ್ದು
ಹೊಟ್ಟೆಯ ಗುಂಡಿಯಲ್ಲಿ ಮಣ್ಣು ಮಾಡಿದ ಮಕ್ಕಳ
ಮುಖದ ಸೆರಗುಹೊದ್ದು ಕಣ್ಣಿಗೆ ಅಂಟಿದ ದುಃಖದ
ತಲೆಯಮೇಲೆ ನೋವ ಕವುಚಿಕೊಂಡು
ನಿಂತ ರಮಾಬಾಯಿ | ಸಂತೈಸುವ
ಮಹಾತಾಯಿ ಕಸ್ತೂರಬಾ ಭಾವನೆಗಳು
ಮೈಯುಂಡ ಮಾತಾಗಿ ನಾ ಹೊತ್ತ
ಮಕ್ಕಳು ನನ್ನ ಕಣ್ಣ ಗುಂಡಿಯಲ್ಲಿ
ಅಳುತ್ತಿರುವುದನ್ನು ನಿಲ್ಲಿಸಲಾಗದೇ ನನ್ನ
ಕೆನ್ನೆಗಳು ಕಾಲುವೆಗಳು ಆಗಿವೆ ರಮಾ
ಲೋಕಮಾತೆಯರು ಪರ್ವತಗಳಾಗಿ ಮಾತನಾಡುತ್ತಿವೆ
ಈ ಘಳಿಗೆಯಲ್ಲಿ

ಮಹಾತ್ಮರ ಅನಿರೀಕ್ಷಿತ ಆಗಮನ
ನಂಬಲಾಗುತ್ತಿಲ್ಲ
ಎದ್ದುನಿಂತರು ಇಬ್ಬರು
ಸೆರಗೊಡ್ಡಿ ರಮಾಬಾಯಿ, ಬಾಪೂಜಿಗೆ ಕೈಮುಗಿದು
ಬರಮಾಡಿಕೊಂಡರು
ಬಾ, ಆತಂಕದಿಂದಲೇ ಉಗುಳು ನುಂಗಿಕೊಂಡು
ನುಡಿದರು
ದೂಧಾಭಾಯಿ ಮಗಳು ನನ್ನ ಮೊಮ್ಮಗಳೆಂದು
ರಮಾಗೆ ಹೇಳಿದೆ ಅಂದರು
ಗಾಂಧಿಗೆ ಬೆಟ್ಟ ಇಳಿಸಿದಂತಾಯಿತು
ಕೈ ಮುಗಿದರು ರಮಾಗೆ
ಭೂಮಿಗೆ ಇಳಿದಂತಾಗಿ ರಮಾಬಾಯಿಗೆ
ತುಂಬ ಚಿಕ್ಕವಳು ನಾನು...
ಕುಡಿಯಲು ನೀರು ಕೊಟ್ಟರು
ನೀರು ಕುಡಿದ ಗಾಂಧಿ ನೀರಾದರು
ಎಷ್ಟೋ ವರ್ಷಗಳ ಆಯಾಸವೆಲ್ಲಾ
ನಿವಾರಿಸಿದಂತಾಯಿತು
ಜೀವಕ್ಕೆ ಇನ್ನೊಂದು ಜೀವ ಸೇರಿಕೊಂಡಂತಾಗಿ
ಕಣ್ಣಾಡಿಸಿದರು ಕೋಣೆಯನ್ನೆಲ್ಲಾ, ಬುದ್ಧ, ಫುಲೆದಂಪತಿಗಳ
ಪುಸ್ತಕ, ಭಾವಚಿತ್ರ, ಇಳಿಸಿಕೊಂಡು ಮನಸ್ಸಿಗೆ
ಹೊರಡಲನುವಾದರು ದಂಪತಿಗಳು

ಹೊರಟು ನಿಂತಾಗ ಕಸ್ತೂರಿ ಬಾಪೂಜಿಯವರು
ಅಂಗಳದಲ್ಲಿ ಮೂರೇ ಮೂರು ಜೀವಗಳು
ಸತ್ಯ ಪ್ರೇಮ ಭ್ರಾತೃತ್ವಗಳು
ಕಳುಹಿಸಿಕೊಡಲಾಗದ ಮಹಾ ಚೇತನಗಳು

ಎರಡು ಕೈಗಳ ಜೋಡಿಸಿ ಮುಗಿದ ರಮಾಬಾಯಿಯವರ
ಮನಸ್ಸು ಹೇಳುತ್ತಿತ್ತು ಕಾಯಿರಿ ಇನ್ನು ಸ್ವಲ್ಪ ಹೊತ್ತು
ಬಾಬಾಸಾಹೇಬರು ಬರುತ್ತಾರೆ ಅಲ್ಲಿಯವರೆಗೆ
ಹೊರಟು ನಿಂತ ಚೇತನಗಳ ಜೀವ ತುಡಿಯುತ್ತಿತ್ತು
ಬಾಬಾಸಾಹೇಬರ ನೋಡಿ ಹೋಗಬಹುದಿತ್ತು ಅಂತ
ಆಕಾಶದ ತುಂಬೆಲ್ಲಾ ಹಕ್ಕಿಗಳ ಗುಂಪು ಗುಂಪಾಗಿ
ಗೂಡಕಡೆಗೆ ಹಾರುತ್ತಿದ್ದವು ಗೋಧೂಳಿ ಸಮಯದಲ್ಲಿ

ತಂಗಾಳಿ ಬೀಸಿ ಮುಖದ ತುಂಬ ಸೆರಗುಹೊದ್ದ ಸೀರೆ
ಅಂಚು ಹರಿದಿದ್ದನ್ನು ತೋರಿಸುತ್ತಿತ್ತು
ಹಿಂದಿರುಗಿ ಬಂದ ಕಸ್ತೂರಬಾ
ರಮಾಬಾಯಿ ಕಿವಿಯಲ್ಲಿ ಏನೋ ಹೇಳಿದರು
ಇನ್ನೊಮ್ಮೆ ಬಂದಾಗ ನಾನೇ ಚರಕದಲ್ಲಿ
ನೂಲಿದ ಸೀರೆಯನ್ನು ತಂದುಕೊಡುವೆ ಎಂದರು
ಇವರ ಕೈ ಇನ್ನಷ್ಟು ಬಿಗಿಹಿಡಿದು
ಬೇಡ, ಸಾಹೇಬರು ನನಗೆ ಸೀರೆ ತರಲೇ ಹೋಗಿದ್ದಾರೆ ಅಂದರು

ಅರ್ಥವಾದಂತೆ ಎಲ್ಲವೂ ಗಾಂಧಿಗೆ
ಘನತೆ ಎಂದರೆ ಹೆಣ್ಣುಮಕ್ಕಳ ಘನತೆಯೇ ಮೇಲು
ಮನಸ್ಸು ನೂಲುದಾರವ ಲೋಕ ಸುತ್ತುತ್ತ ಕರುಳು-
ಬಳ್ಳಿಯ ನೆನೆಯುತ್ತ | ಮಹಾತ್ಮನಾಗುವುದು ಸುಲಭ
ಹೆಣ್ಣು ಹೆಣ್ಣಾಗುವುದು...
ಇದು ನಾನು ಮೊದಲು ನೋಡಿದ
ಕ್ಷಣವೆಂದು ಮುನ್ನಡೆದರೂ, ಮತ್ತೆ ಹಿಂದಿರುಗಿ
ನೋಡಿದ್ದಾರೆ, ರಮಾಬಾಯಿ ಕಸ್ತೂರಬಾ, ಕಸ್ತೂರಿಬಾ ರಮಾಬಾಯಿ
ದೂರದಿಂದ ಭೀಮಸಾಹೇಬರು ನಿಂತಂತೆ ಕಾಣುತ್ತಿತ್ತು

ಕನ್ನಡಕ ಕಳಚಿಬಿತ್ತು
ಮೈಮೇಲಿನ ತುಂಡುಬಟ್ಟೆ ಹಾರಿಹೋಯಿತು
ಊರುಗೋಲು ಜಿಲಕಿ ಆಗಿತ್ತು
ನಾನು ಇನ್ನಷ್ಟು ಸಣ್ಣವನಾದಂತೆ ಅನ್ನಿಸಿತು
ಬರೀ ಬೆತ್ತಲೆಯಾದೆ ಬೆತ್ತಲೆಯಾದೆ
ಮಹರ್ ಕೇರಿಯ ಪುಟ್ಟ ಮಗುವಾದೆ
ಅಳುತ್ತ ನಗುತ್ತಾ ಹಗುರಾದೇ ಹೂವಾದೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT