ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸುಂಧರಾ ಕದಲೂರು ಅವರ ಕವಿತೆ: ‘ನೇಪಥ್ಯದ ನಿಲುವುಗನ್ನಡಿ’

Last Updated 14 ಆಗಸ್ಟ್ 2022, 0:30 IST
ಅಕ್ಷರ ಗಾತ್ರ

ಏಕೋ ಏನೂ ಒಗ್ಗುತ್ತಿಲ್ಲವೆಂದು
ಹೊಸದರ ತಾಲೀಮು ಶುರು
ಮಾಡಿದೆ. ವಿಷಯ ತಿಳಿದು ಸಕಲ
ಗುರುವರ್ಯರು ಹುಟ್ಟಿಕೊಂಡರು

ನೇರ ನಡೆ ಬೇಡ ಇತ್ತ ಬಾ
ಬಲಕ್ಕೆ ಅದು ದುರ್ಮಾರ್ಗ ಬಾ
ಇತ್ತ ಎಡಕ್ಕೆ.. ಮಾರ್ಗದರ್ಶನ!

ಹಾದಿ ಹಾದಿಗೂ ನಕಾಶೆ
ಬೀಸುತಾರೆ
ನಾನರಿಯದ ಮಂದಿ
ಹೆಜ್ಜೆ ಹೆಜ್ಜೆಗೂ ತಾಳ ತಪ್ಪಿದೆನೇ
ಎಂದು ಕಣ್ಣ ಕೀಲಿಸಿ
ಹುಡುಕುತಾರೆ

ಸ್ತುತಿಪಾಠ ಭಾವಾಭಿನಯ
ಸಂಭಾಷಣೆ ಗಟ್ಟಿ ಮಾಡಲು
ಗುಟ್ಟಿನ ಸ್ಥಳಕೆ ಹೋದರಲ್ಲೂ
ಅತಿಕ್ರಮಣ; ಮೂಲಪಾಠ
ಬದಲಿಸಲು ಹುಕುಮು..

‘ಈ ತಾಲೀಮು ನನಗೆ ಬಿಡಿ; ನಾಳೆ
ರಂಗಮಂಚದ ಮೇಲೆ ಉಳಿದುದ
ನೀವೇ ನೋಡಿ..’ ನನ್ನ ಕಳಕಳಿ

ಬಿಟ್ಟಾರೇ…
ನನ್ನ ವೇದಿಕೆಯಲ್ಲೂ ಅವರ
ಪರಿಕರ ನನ್ನ ನೇಪಥ್ಯದಲೂ
ಅವರ ನಿಲುವುಗನ್ನಡಿ!

ಹಾರುಹಕ್ಕಿಗಳ ರೆಕ್ಕೆ ಮುರಿದು
ಪಂಜರಕೆ ಅಟ್ಟಿರುವ ಸುದ್ದಿ
ಚದುರಿದ ಪುಕ್ಕಗಳು
ವೇದಿಕೆಯ ಮೈತುಂಬಾ,
ಯವನಿಕೆಯಲಿ ಮೌನ
ಆಕ್ರಂದನ

ಕೇರಿ-ಏರಿಗಳ ಸೀಮೆ
ಉಲ್ಲಂಘಿಸಿ ದೂರಕೆ ಲಂಘಿಸಿ
ಹಾರುವುದಕೆ ನಾನೋ
ತಾಲೀಮು ನಡೆಸುತ್ತಿದ್ದೆ…

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT