ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭಾ ನಂದಕುಮಾರ್ ಕವಿತೆ: ಬೆಕ್ಕಿಗೆ ಗಂಟೆ ಕಟ್ಟಲಾಗದವರಿಗೇಕೆ ಹುಲಿಯ ಗೊಡವೆ?

Last Updated 30 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಒಂದು ದಿನ ಮುಂಜಾನೆ ಎದ್ದು ನೋಡಿದರೆ ದಿಢೀರನೇ ಘೋಷಣೆ

ಇನ್ನು ಮೇಲೆ ನೀನು ಹುಲಿಯಲ್ಲ, ನಿನ್ನನ್ನು ನೀನು ಹುಲಿಯೆಂದು ಕರೆದುಕೊಳ್ಳಲಾಗದು.

ಯಾರಾದರೂ ಹಾಗೆಂದು ಕರೆದರೂ ತಿರುಗಿ ನೋಡಬಾರದು

ನಿನ್ನ ಹುಲಿಸ್ಥಾನಕ್ಕೆ ಬಿತ್ತು ಮರ್ಮದೇಟು, ನಡೆ, ಇನ್ನು ನಿನ್ನ ಪಟ್ಟೆಗಳನ್ನು ಕಳಚಿಟ್ಟು.

ತಲೆಕೆರೆದುಕೊಂಡಿತು ಹುಲಿ, ಏಕಾಏಕಿ ಇದೇನಾಯಿತು ಇವರಿಗೆ, ಹಿಂದಿನ ರಾತ್ರಿ

ಏನು ಕುಡಿದಿದ್ದರು, ಇಳಿದಿಲ್ಲ ಅಮಲು ಇನ್ನೂ ಅಥವಾ ಹುಚ್ಚು ಹಿಡಿದಿದೆ ಖಾತ್ರಿ

ಅಥವಾ ತನಗೇ ತಿಳಿದಿಲ್ಲದ ಸತ್ಯವೊಂದನ್ನು ಕಂಡುಕೊಂಡರೇ ಇವರು ಎಂದುಕೊಂಡು

ನೋಡಿದರೆ ಛಾನಲ್ಲಿನಲ್ಲಿ ಪುಂಖಾನುಪುಖ ಪುಂಗುತ್ತಿದೆ ಒಂದು ಬಾಲ ಸುಟ್ಟ ನರಿ!

ಏನು ಪದಪುಂಜಗಳೂ, ವಾಕ್ಯಾವಳಿಗಳೂ, ಗತ್ತು ದೌಲತ್ತುಗಳೂ, ಏನು ಧೈರ್ಯಸ್ಥೈರ್ಯಗಳೂ!

ದಂಗಾಯಿತು ಹುಲಿ ಅದರ ವಾಕ್ಝರಿಗೆ. ಸತ್ಯವನ್ನು ಸುಳ್ಳಾಗಿಸುವ, ಸುಳ್ಳನ್ನೂ ಸತ್ಯವಾಗಿಸುವ ಪರಿಪಾಠಕ್ಕೆ.

ಕೇಳಿ ಸಾಕಾಯಿತು ಅದಕ್ಕೆ, ಉಗುರು ಹೊರಚಾಚಿ ತಲೆಕೆರೆದುಕೊಂಡು ಕ್ಷಣ ಯೋಚಿಸಿತು

ಮಾರ್ ದಿಯಾ ಜಾಯೆ ಯಾ ಛೋಡ್ ದಿಯಾ ಜಾಯೆ ಅಂತ ಪರಿಶೀಲಿಸಿ, ನಂತರ ತಡಿ ಸ್ವಲ್ಪ

ನೋಡೋಣಾ ಎದುರಾಳಿ ಸಮಬಲನೋ ಅಥವಾ ಗಠಾರದ ಇಲಿಯೋ, ಮಾತು ತಲೆಯಿಂದ

ಬರುತ್ತಿದೆಯೋ ಅಥವಾ ಬೇರೆ ಕಡೆಯಿಂದಲೋ ಎಂದು ಪರೀಕ್ಷಿಸಿತು. ಫಕ್ಕನೆ ನಕ್ಕುಬಿಟ್ಟಿತು

ಇವನು ಮೀರಸಾಧಕನ ವಂಶಸ್ಥ, ಸಮಯ ಸಾಧಕ, ಉಂಡ ಮನೆಯ ಗಳ ಹಿರಿವ ಭಂಡ

ನನ್ನ ಬಾಲದ ಪಟ್ಟೆ ಕೂದಲಿಗೂ ಸಮನಲ್ಲ, ತಿರಿದು ತಿನ್ನುವ ಇವನ ನಾಲಿಗೆಗೆ ಎಲುಬಿಲ್ಲ

ಎಂದು ಥುಕರಿಸಿ ಎದ್ದು ನಡೆಯಿತು ಹುಲಿ ಬೀದಿಯಲ್ಲಿ ಎಂದಿನ ರಾಜ ಗಾಂಭೀರ್ಯದಲ್ಲಿ.

ಎದುರಾಯಿತು ನರಿ ಅದೇ ತಾನೇ ಮಾನ ಸನ್ಮಾನಗಳ ಪೇಟ ಶಾಲು ಧರಿಸಿ, ಕಾಸು ಎಣಿಸಿ

ಮುಂದಿನ ತುಂಡಿಗಾಗಿ ಮೂಸುತ್ತ ನೆಲ ಕೆರೆಯುತ್ತ ಒಳಗೊಳಗೇ ಸಂಭ್ರಮಿಸುತ್ತ

ಕಾಣದೆ ಬಂದು ಡಿಕ್ಕಿ ಹೊಡಿಯಿತು ಹುಲಿಗೆ, ನೋಡಿ ಉಡುಗಿ ಜಂಘಾಬಲ ನಡುಗುತ್ತ

ಕ್ಷಮಿಸಿ ಖಾವಂದರೇ, ಮೈಸೂರು ಹುಲಿಗಳೇ, ಪರಕೀಯರ ಎದುರಿಸಿ ಹಿಮ್ಮೆಟ್ಟಿದ ವೀರಪ್ರತಾಪರೆ

ರಣದಲ್ಲಿ ಮರಣ ಹೊಂದಿದ ಅಲ್ಲ ಹೊಂದುವ ಸಮರವಿಕ್ರಮರೇ .. ತತತತ ತೊದಲಿತು ನರಿ

ಕೇಳುವಷ್ಟು ಕೇಳಿ ಕೊನೆಗೆ ಘರ್ಜಿಸಿತು ಹುಲಿ ಮುಚ್ಚು ಬಾಯಿ, ಹುಚ್ಚು ನರಿ, ನಡಿ ನನ್ನ ಜೊತೆಗೆ

ಒಂದು ಕದನಕ್ಕೆ, ಅಲ್ಲಿ ಮೈಕಿಲ್ಲ ಚಪ್ಪಾಳೆಯಿಲ್ಲ, ಬಡಿಯುತ್ತವೆ ಫಿರಂಗಿ ಗುಂಡು, ನಿಲ್ಲು ಎದೆ ಕೊಟ್ಟು.

ಗೋಗರೆಯಿತು ನರಿ ಅಯ್ಯೋ ಬಿಟ್ಟುಬಿಡಿ ನನ್ನ ಬಡವ ಬದುಕಿಕೊಳ್ಳುತ್ತೇನೆ ನಿಮ್ಮ ದಮ್ಮಯ್ಯ

ಅವರು ಕೊಟ್ಟ ಕಾಸಿಗೆ ಪುಂಗಿದ್ದೇನೆ ಇನ್ನು ಎಲ್ಲಾದರೂ ತಲೆಮರೆಸಿಕೊಳ್ಳುತ್ತೇನೆ ನಿಮಗೆ ಸಾಟಿಯೇ

ನಿಮ್ಮ ಪಟ್ಟೆಯ ಧೂಳಿಗೂ ಸಮರಿಲ್ಲ ನಾನೂ ನನ್ನ ನಾಯಕರೂ ಎಂದು ಅಂಜಿ ಅಂಗಲಾಚಿ

ಗೋಮೂತ್ರ ಸ್ವಮೂತ್ರ ಎಲ್ಲ ಪ್ರೋಕ್ಷಿಸಿಕೊಂಡು ಧರೆಗೊರಗಿತು, ಪಾಪ ಬದುಕಿದರೆ ಬೇಡಿ ತಿನ್ನುವ

ಒದರಿತು ಮೈ ಒಮ್ಮೆ ಹುಲಿ ಅದರ ಝಕ್ಕಿಗೆ ಉದುರಿದ ಪಟ್ಟೆಯ ರೋಮಗಳು ಹಾರಿ ಗಾಳಿಯಲ್ಲಿ

ಪರಪರನೆ ಸರಿದವು ಚರಿತ್ರೆಯ ಪುಟಗಳು, ಹುಲಿಗೆ ಸಾಟಿಯಿಲ್ಲ ಸತ್ಯ, ಅಷ್ಟೇ ಸತ್ಯ ಇಂದು ಮೆರೆಯುತ್ತಿದ್ದಾರೆ

ಸತ್ಯಕ್ಕೂ ಗುಂಡಿಟ್ಟ ವೀರೋಚಿತರು ಹುಳಿ ಮುಖದ ಪುಂಗಿದಾಸರು ಅಂದಿನಂತೆ ಇಂದೂ ಮೀರಸಾಧಕರು ಪಾತಕರು.

ಬೆಕ್ಕಿಗೆ ಗಂಟೆ ಕಟ್ಟಲಾಗದವರಿಗೇಕೆ ಹುಲಿಯ ಗೊಡವೆ, ಸುಮ್ಮನಿರಿ ನಿಮ್ಮ ಬಾಲ ಕಾಲನಡುವೆ ತೂರಿ.

ಕಲಿತಿಲ್ಲವೇ ಚರಿತ್ರೆಯ ಪಾಠ? ಕಾಲದ ಸೆಳವಿನಲ್ಲಿ

ಎಷ್ಟೇ ತಿದ್ದಿ ಬರೆದರೂ ಉಳಿಯುವುದು ವೀರರ ಹೆಸರು

ಎಷ್ಟೇ ತಿಣುಕಾಡಿದರೂ ಅಳಿಸಿಹೋಗುವುದು ನಿಮ್ಮ ಸುಳ್ಳುಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT