ಶನಿವಾರ, ಮಾರ್ಚ್ 6, 2021
18 °C
ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆ: ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆ

ಬಂಧಮುಕ್ತ

ಶೈಲಜಾ ಗೊರ‍್ನಮನೆ Updated:

ಅಕ್ಷರ ಗಾತ್ರ : | |

ಆತ್ಮಶ್ರಾದ್ಧವನ್ನು ಮಾಡಿಕೊಂಡು, ‘ನಾ ಹಮ್ ಕಸ್ಯತ್’ ಪ್ರತಿಜ್ಞೆಯಡಿ ನಡೆದುಹೋದವ ಅವ. ಅಣ್ಣಯ್ಯ! ಹಾಗೆಂದು ಕರೆದರೆ ಅದು ಧರ್ಮನಿಶಿದ್ಧ. ಸನ್ಯಾಸಿಯಾಗಿ ಬಂಧನವನ್ನು ತೊರೆದವನನ್ನು ಸಂಬಂಧಗಳ ಬಂಧನದಲ್ಲಿ ಸಿಲುಕಿಸುವಂತಿಲ್ಲ. ಈಗ ನಮಗೆ ನೆನಪುಗಳ ಬಂಧವೇ ಅವನೊಂದಿಗಿನ ಸಂಬಂಧ. ಏನು ಮಾಡುವುದು. ನೆನಪೂ ಶುರುವಾಗುವುದು ಅಣ್ಣನಾಗಿಯೇ. ಕಥೆ ಹೇಳುವ, ಪಾಠ ಓದಿಸುವ, ಹಠ, ಜಗಳ ಏನೇ ಇರಲಿ ಅಮ್ಮನಂತೆಯೇ ನಮ್ಮನ್ನು ಸಂಭಾಳಿಸುತ್ತಿದ್ದ ಪ್ರೀತಿಯ ಅಣ್ಣಯ್ಯನವ. ಅವನನ್ನ ಅಟ್ಟಿಬಿಡುವುದಾದರೂ ಹೇಗೆ ಸಾಧ್ಯ? ಸುಕ್ಕಾದ ಹಣೆಯ ನೆರಿಗೆಗಳಲ್ಲಿ ಅವನನ್ನು ಬಚ್ಚಿಟ್ಟುಕೊಂಡಿದ್ದ ಅಮ್ಮನೂ ಹೊಕ್ಕಳ ಕುಡಿಯನ್ನ..? ಯಾವ ತಂತು ಕಡಿದರೂ ನೆನಪಿನ ತಂತು..? ಅದನ್ನು ಕಡಿದುಕೊಳ್ಳುವ ಸಾಧನವೊಂದಿದ್ದರೆ ಎಷ್ಟು ಸುಲಭವಿತ್ತು!

ಅಣ್ಣನಿಲ್ಲದ ಮನೆಯಲ್ಲಿ ಹಾಗನಿಸಿದ್ದ ಕ್ಷಣಗಳನ್ನು ಲೆಕ್ಕವಿಟ್ಟವರಾರು? ಸಂಬಂಧ, ನೆನಪುಗಳೆಲ್ಲ ಅವನೇ ಮಾಡಿಕೊಟ್ಟಿದ್ದ ಆ ಮರದ ಗೊಂಬೆಯಂತೆ ಕೀ ಕೊಟ್ಟಾಗ ಮಾತ್ರ ತಿರುಗುವ ಹಾಗಿದ್ದರೆ ಒಳಿತಿತ್ತು. ಗೋಡೆಗಳುದ್ದಕ್ಕೂ ಬಿಡಿಸಿಟ್ಟ ಚಿತ್ರಗಳಲ್ಲಿ. ತುದಿಕೋಣೆಯ ಮೂಲೆಗೆ ನಿಲ್ಲಿಸಿಟ್ಟ ತಂಬೂರಿಯಲ್ಲಿ ಎಲ್ಲಿಯೂ ಅವನಿಲ್ಲ ಎನ್ನುವುದಿಲ್ಲವಲ್ಲ!

‘ನನಗೆ ಮೊದಲೇ ಗೊತ್ತಿತ್ತು. ಅವ ಈ ಸಣ್ಣ ಪರಿವಾರದ ಸೊತ್ತಲ್ಲವೆಂದು. ಅದು ದೇವಯೋನಿ. ಧರ್ಮಸ್ವಾಯುಜ್ಯವನ್ನ ಮುನ್ನಡೆಸಲು ಬಂದವ ಅವ. ಅವನ ಜಾತಕದಲ್ಲೇ ಎಲ್ಲ ಹೇಳಿದೆ. ಅದು ವಿರಾಗಿ ಕುಂಡಲಿ. ಅದೆಲ್ಲ ನಿನ್ನ ತಲೆಗೆಲ್ಲಿ ಹೊಳೀಬೇಕು ಹೇಳು. ದೊಡ್ಡ ಗುರುಗಳೇ ಹೇಳಿಕಳ್ಸಿದಾರೆ. ಇಂತಯೋಗ ಸಾಮಾನ್ಯ ಸಂಸಾರಕ್ಕಲ್ಲ. ಕಣ್ಮುಚ್ಚಿ ಹೂಂ ಅಂದ್ಬುಡು. ನಮ್ಮ ಕುಟುಂಬಕ್ಕೆ ಹಿಂದಿನ ಏಳು ಮುಂದಿನ ಏಳು ತಲೆಮಾರಿಗೂ ಕೋಟಿ ಪುಣ್ಯ ಹರಿದುಬರುತ್ತದೆ. ಇಂಥ ಯೋಗ ಮತ್ತೆ ಮತ್ತೆ ಬರುವುದಿಲ್ಲ...’ ಅಮ್ಮನ ಎದುರು ಅಪ್ಪಯ್ಯ ಒಂದೇ ಸವನೆ ಹೇಳುತ್ತಿದ್ದರು.

ಕಳೆದ ಎರಡು ದಿನಗಳಿಂದ ಅಪ್ಪಯ್ಯನ ಬಾಯಲ್ಲಿ ಬೇರೆ ಮಾತು ಕೇಳಿದ್ದಿಲ್ಲ. ‘ಅದಿನ್ನೂ ಸಣ್ಕೂಸು. ಅದರ ತಲೆಗೆ ಇದೆಲ್ಲ ಬ್ಯಾಡ. ನಿಮ್ಮ ಪುಣ್ಯ ನಿಮಗಿರಲಿ. ನನಗೇನೂ ಹೇಳಬೇಡಿ’ ಒಂದೆರಡು ಬಾರಿ ಹೇಳಿದ್ದ ಅಮ್ಮ ಮುಂದೆ ಆ ಬಗ್ಗೆ ಮಾತಾಡುವುದನ್ನೇ ಬಿಟ್ಟಿದ್ದರು. ‘ಹೆಣ್ಣಂದ್ರೆ ಮಾಯೆ ಮೋಹ ಅನ್ತಾರೆ. ನಿಂಗೆ ನಿಂದೇ ಮೋಹ ಮೋಹ ’ ಎನ್ನುತ್ತಲೇ ಮತ್ತೆರಡು ದಿನ ಮಠಕ್ಕೆ ಹೋಗಿ ಬಂದಿದ್ದ ಅಪ್ಪಯ್ಯ ‘ಅವನನ್ನ ಹೊರೂರಿನಲ್ಲಿಟ್ಟು ಮಠದ ಖರ್ಚಿನಲ್ಲಿ ಓದಸ್ತಾರಂತೆ. ಹಾಗೇ ಇನ್ನೂ ನಾಲ್ಕು ಜನ ಆಯ್ಕೆಯಾಗಿದಾರೆ. ಓದಿ ಮುಗಿದ್ಮೇಲೆ ಬುದ್ಧಿ ಬಲಿತು ಅವನೇ ನಿರ್ಣಯ ತಗೊಂಡ್ರೆ ಸರೀನಾ?’ ಪಟ್ಟು ಹಿಡಿದಿದ್ರು. ಅಮ್ಮ ‘ಹೂಂ’ ಗುಟ್ಟಿದ ಧ್ವನಿ ನಮಗಂತೂ ಕೇಳಿರಲಿಲ್ಲ. ಅಪ್ಪಯ್ಯ ಸಂಭ್ರಮದಿಂದ ಓಡಿದ್ದರು.

ಅಂವ ಹೊರಡುವ ಹಿಂದಿನ ದಿನ ಹೊರಹೋದವ ಸಂಜೆ ಮುಗಿದು ಕತ್ತಲೆ ತುಂಬುವವರೆಗೂ ನಾಪತ್ತೆಯಾಗಿದ್ದ. ‘ಅವನಿಗೆ ನೀನೇ ಏನೋ ಹೇಳ್ಕೊಟ್ಟು ಓಡ್ಸಿದ್ದಿ... ಮೋಹ ನಿನ್ನ ಕಣ್ಕಟ್ಟಿದೆ.’ ತಾಳ್ಮೆ ಕಳೆದ ಅಪ್ಪಯ್ಯನ ರೇಗಾಟ. ಅಮ್ಮನ ಮೌನ.ಶೂನ್ಯವಾಗಿ ಕುಳಿತಿದ್ದ ಅಮ್ಮನ ಮೌನದಿಂದ ಮನೆಯಿಡೀ ತಳಮಳ. ಏರುರಾತ್ರಿಯ ಹೊತ್ತಿಗೆ ಅವ ತಿರುಗಿ ಬಂದಾಗ ಅವನ ಹೆಗಲ ಪಂಚೆಯ ತುಂಬ ಅಮ್ಮನ ಪ್ರೀತಿಯ ಸುರಗೀ ಹಣ್ಣಿತ್ತು. ಅದನ್ನು ಸೆರಗೊಡ್ಡಿ ತುಂಬಿಕೊಂಡು ಒಳಸರಿದ ಅಮ್ಮ ಮತ್ತೆಂದೂ ಆ ಹಣ್ಣನ್ನ ಕಚ್ಚಿದ್ದು ನೆನಪಿಲ್ಲ. ಗೋಡೆಯ ಮೇಲೂ ಅಷ್ಟೇ. ಎಷ್ಟೊಂದು ನೆನಪುಗಳು... ಮೂರೂ ಮಕ್ಕಳೂ ಅವಳ ಮಡಿಲಲ್ಲಿದ್ದೆವು. ನಮ್ಮೆಲ್ಲರ ಕೈಹಿಡಿದು ನಿಂತ ಅಪ್ಪ- ಅಮ್ಮ, ಎಲ್ಲರಿಗೂ ಕೈತುತ್ತಿಡುತ್ತಿದ್ದ ಅಮ್ಮನದ್ದು, ಎಲ್ಲವೂ ಥೇಟು ಕನ್ನಡಿ ಹಿಡಿದಂತಿತ್ತಲ್ಲ. ಅವ ಹೋದಮೇಲೆ ಅಮ್ಮ ಅವುಗಳನ್ನ ಹರಳುಕಟ್ಟಿಸಿ ಮನೆಯ ಎದುರು ಗೋಡೆಗೇ ತೂಗು ಹಾಕಿಕೊಂಡಿದ್ದರು. ಅಪ್ಪಯ್ಯ ಬಂದವರಿಗೆಲ್ಲ ಗತ್ತಿನಿಂದ ತೋರಿಸುತ್ತಿದ್ದರು. ‘ಪೂರ್ವಾಶ್ರಮದ್ದು’ ಹೇಳಲು ಮರೆಯುತ್ತಿರಲಿಲ್ಲ. ಅಮ್ಮನದ್ದು ಎಲ್ಲವನ್ನೂ ನುಂಗಿಕೊಳ್ಳುವ ಮೌನ.

ಆವತ್ತು ಅಪ್ಪಯ್ಯ ಆ ಚಿತ್ರಗಳನ್ನೆತ್ತಿ ಹೊರಗೆ ಬಿಸಾಡಿದಾಗಲೂ ಅಮ್ಮ ವಿಚಲಿತರಾಗಿದ್ದು ಕೆಲಕ್ಷಣ ಮಾತ್ರ. ನಂತರ ಏನೂ ನಡೆದೇ ಇಲ್ಲವೆನ್ನುವಂತೆ ಹೋಗಿ ಅಂಗಳದಲ್ಲಿ ಅನಾಥವಾಗಿ ಬಿದ್ದಿದ್ದ ಅವುಗಳನ್ನೆತ್ತಿಕೊಂಡು ಬಂದಿದ್ದರು. ಅಪ್ಪಯ್ಯ ‘ಥೂ, ಧರ್ಮಗ್ಲಾನಿ, ಧರ್ಮಗ್ಲಾನಿ’ ಎಂದು ಗೊಣಗುತ್ತಾ ಸರಿದಿದ್ದರು. ಎಲ್ಲವೂ ಮತ್ತೊಂದು ಚಿತ್ರಪಟದಂತಹದ್ದೇ ನೆನಪು. ನೆನಪು. ಅದು ಹಾಗೆಯೇ. ಕಡಿದುಕೊಳ್ಳಬೇಕೆಂದರೂ ತಂತು ಕಡಿಯುವುದಿಲ್ಲ. ಮೀಟುತ್ತಲೇ ಇರುತ್ತದೆ. ಮೀಟುತ್ತಿದ್ದುದು ಅಣ್ಣಯ್ಯನದೇ ನೆನಪಾದಾಗ ಆ ಜಾಗದಲ್ಲಿ ಅವನಲ್ಲದೇ ಇನ್ಯಾರನ್ನು ಇಡುವುದಕ್ಕೆ ಸಾಧ್ಯ?

ಕಲಿಯಲೆಂದು ನಮಸ್ಕರಿಸಿ ಹೊರಟವನನ್ನು ಕಳುಹಿಸಲು ಅಮ್ಮ ತಲೆಬಾಗಿಲಿಗೆ ಬರಲೇ ಇಲ್ಲ. ಹಿತ್ತಲಿಗೆ ಓಡಿದ್ದಳು. ಮೊದಲ ವರ್ಷದ ರಜೆಗೆಂದು ಬಂದವ ನನ್ನನ್ನ ಎತ್ತಿ ಮುದ್ದಾಡುತ್ತಿದ್ದುದನ್ನ ಕಂಡ ಅಪ್ಪ ಅವನನ್ನ ರೂಮಿಗೆ ಕರೆದು ಬಾಗಿಲಿಕ್ಕಿದ್ದರು. ನಂತರ ದಿನಚರಿ, ಚರ್ಯೆ ಎಲ್ಲವೂ ಬದಲಾಗಿತ್ತು. ಬೆಳಗೆದ್ದು ಮಠದ ದಾರಿ ಹಿಡಿದರೆ ಮನೆಗೆ ಮರಳುವುದಕ್ಕೆ ಹೊತ್ತುಗೊತ್ತು ಇರಲಿಲ್ಲ. ಅಪ್ಪಯ್ಯ ಮಾತ್ರ ದೊಡ್ಡ ಗುರುಗಳ ಕೃಪಾಕಟಾಕ್ಷಕ್ಕೆ ಭಾಜನನಾದ ಅವನನ್ನ ಹಾಡಿಹೊಗಳುತ್ತಿದ್ದ. ಮೂರನೆಯ ವರ್ಷ ಮನೆಗೆ ಬಂದವ ಅಮ್ಮನೆದುರು ಶಲ್ಯದ ಬೊಗಸೆ ಒಡ್ಡಿ ಸಂನ್ಯಾಸಕ್ಕೆ ಅಪ್ಪಣೆ ಬೇಡಿದ್ದ. ಅಮ್ಮ ರಾಕೆದ್ದು ಹೋಗಿದ್ದರು. ‘ಇನ್ನೂ ಒಂದು ವರ್ಷವಿದೆಯಲ್ಲ ಮಗಾ. ಈಗ್ಯಾಕೆ ಅವಸರ ಮಾಡ್ತಿ’ ಎಂದು ಬಿಕ್ಕುತ್ತ ನಿಂತವರೆದುರು ‘ನೀನು ಗರ್ಭದಿಂದಲೇ ನನ್ನನ್ನರಿತವಳು. ಸನ್ಯಾಸಕ್ಕೆ ಅನುವಾಗಲು ಒಂದು ವರ್ಷ ಸಾಕಾಗದು. ವಿರಾಗಿಯಾಗಿ ಶೋಧಿಸುವ, ಸಾಧಿಸುವ ಆಸೆಗೆ ಅಡ್ಡಿ ಬರಬೇಡ. ನಿನ್ನ ಕಣ್ಣೀರಿನಿಂದ ನನಗೆ ಶ್ರೇಯಸ್ಸಿಲ್ಲ. ಹರಸಿ ಕಳಿಸಿದರೆ ನಿಶ್ಚಿಂತೆಯಿಂದ ಹೋಗುತ್ತೇನೆ. ಅಳುತ್ತಲಿದ್ದರೆ ವಿಚಲಿತನಾಗುತ್ತೇನೆ. ಈ ಮಾರ್ಗ ನನ್ನದೇ ಆಯ್ಕೆ. ಹೋಗಲುಕೊಡು. ದೊಡ್ಡ ಗುರುಗಳು ನಿನ್ನ ಹಾಗೆಯೇ. ಆ ಮಾತೃಛಾಯೆಯಲ್ಲಿ ಮುಂದುವರೀತೇನೆ ಕಳ್ಸಿಕೊಡು’ ಅದೆಷ್ಟು ದೀನನಾಗಿದ್ದನೆಂದರೆ ಅಮ್ಮ ಒಪ್ಪದಿದ್ದರೆ ಕರ್ಪೂರದಂತೆ ಕರಗಿಹೋಗುವಷ್ಟು! ಅವನ ತಲೆ ನೇವರಿಸಿದ ಅಮ್ಮ ಹಿಂದೆ ಸರಿದಿದ್ದರು.

ಮುಂದೆ ಸಂನ್ಯಾಸ ಸ್ವೀಕರಿಸುವ ಮೊದಲು ಅಮ್ಮನಿಗೆ ಕೊನೆಯ ನಮಸ್ಕಾರವನ್ನು ಮಾಡಲು ಬಂದಿದ್ದವನ ಕಣ್ಣಿನಲ್ಲೊಂದು ಹೊಳಪಿತ್ತು. ಅಮ್ಮನ ಕಣ್ಣಲ್ಲಿ ನೀರಿರಲಿಲ್ಲ. ಬೆಳಕೂ..? ಕಾಣಲಿಲ್ಲ. ಸನ್ಯಾಸ ದೀಕ್ಷಾವಿಧಿಯಂದು ಅಮ್ಮ ದೂರವೇ ಇದ್ದರು. ನಾನು ಗುಂಪಿನಲ್ಲಿ ನಿಂತು ನೋಡುತ್ತಿದ್ದೆ. ದೀಕ್ಷೆಯ ನಂತರ ‘ವಿದ್ಯಾನಂದ ದಾಸನಾಗಿ ಮರುನಾಮಕರಣವಾಗಿತ್ತು. ನಿಂತಿದ್ದವರೆಲ್ಲ ‘ಆಹಾ ಇಷ್ಟು ಚಿಕ್ಕವಯಸ್ಸಿಗೇ ಎಂತಹ ನಿಶ್ಚಲಪ್ರವೃತ್ತಿ ನೋಡಿ. ಅಪರೂಪದ್ದಪ್ಪ. ಎಷ್ಟು ನಿಶ್ಚಲತೆಯಿಂದ ಪ್ರತಿಜ್ಞಾವಿಧಿಗಳನ್ನೂ ಸ್ವೀಕರಿಸ್ತಿದ್ದಾರೆ. ‘ನಾ ಹಮ್ ಕಶ್ಚತ್, ‘ನ ಮೇ ತಶ್ಚಿತ್’

‘...ಅಭಯಂ ಸರ್ವ ಭೂತೇಭ್ಯ’... ಕೇಳಸ್ತಿದ್ಯಾ? ಎಷ್ಟು ಕಠಿಣ ಪ್ರತಿಜ್ಞೆಗಳನ್ನೂ ನಿರ್ವಿಕಾರವಾಗಿ ಮಾಡ್ತಿದಾರೆ ನೋಡಿ. ಇಂತಹ ಪುಣ್ಯಕಾರ್ಯವನ್ನು ಕಂಡು ಜನ್ಮ ಸಾರ್ಥಕವಾಯ್ತು. ಇಂತವರು ನಮ್ಮ ಮಠಕ್ಕೆ ದೊರೆತಿದ್ದು ಪುಣ್ಯಭಾಗ್ಯ. ಪುಣ್ಯಭಾಗ್ಯ...’ ಉದ್ಘಾರವೋ ಉದ್ಘಾರ! ಅರ್ಥವಾಗದ ಮಾತು. ಮನಸಿಗೆ ನಾಟಿತ್ತು. ಕೈಮುಗಿದು ನಿಂತವರ ಜೈಕಾರದ ನಡುವೆ ಸಾಗಿ ಹೋಗುತ್ತಿದ್ದ ‘ವಿದ್ಯಾನಂದ ದಾಸ’ನಲ್ಲಿ ಅಪರಿಚಿತ ಚರ್ಯೆಯಿತ್ತು. ಮನೆಗೆ ಬಂದ ಅಪ್ಪಯ್ಯನನ್ನು ಪ್ರತಿಜ್ಞೆಯ ಅರ್ಥ ಕೇಳಿದ್ದೆ. ಅಪ್ಪಯ್ಯ ‘ನಾನು ಯಾರವನೂ ಅಲ್ಲ, ನನ್ನವರ‍್ಯಾರೂ ಇಲ್ಲ. ನನ್ನಿಂದ ಯಾರಿಗೂ ಭಯವಿಲ್ಲ’ ಪ್ರತಿಜ್ಞಾವಾಕ್ಯಗಳನ್ನು ವಿವರಿಸಿ ಹೇಳುತ್ತಿದ್ದರೆ ನನಗೆ ಭಯವಾಗಿ ಅಳುಬಂದಿತ್ತು. ಬಾಗಿಲಾಚೆಯಿಂದ ಅಮ್ಮನ ನಿಟ್ಟುಸಿರು ಕೇಳುತ್ತಿತ್ತು. ಅಪ್ಪಯ್ಯ ‘ಅಪಚಾರ. ಅಳುವುದು ಅಪಚಾರ’ ಅನ್ನುತ್ತಿದ್ದಾಗ ಅಳು ಇನ್ನಷ್ಟು ಹೆಚ್ಚಿತ್ತು. ಕಳೆದುಕೊಳ್ಳುವ ಅಥವಾ ಬಿಟ್ಟುಕೊಡುವ ಭಾವಕ್ಕಿಂತ ಕಳಚಿಕೊಳ್ಳುವ ಭಾವ ಇನ್ನಷ್ಟು ಕ್ರೂರ. ಅಪ್ಪಯ್ಯ ಆದೇಶಿಸಿದಂತೆ ವಿದ್ಯಾನಂದರೊಂದಿಗೆ ಕಾಯ್ದುಕೊಂಡ ಅಂತರದಿಂದಾಗಿ ಒಂದು ದೂರವಂತೂ ಬೆಳೆದಿತ್ತು.

ಮುಂದಿನದು... ಅದೊಂದು ಪರ್ವದಂತೆಯೇ. ಅಪ್ಪಯ್ಯ ಮಠದ ಪರಮಾಪ್ತ ಬಳಗವಾಗಿದ್ದ. ಹರಿಕೃಷ್ಣ ಭಟ್ಟರ ಬದಲು ಶರ್ಮನಾಗಿದ್ದ. ನಾವು ಕಿರಿಯರಿಂದ ಅಪಚಾರವಾಗಬಾರದೆಂಬ ಕಾರಣಕ್ಕೆ ಬಹಳಷ್ಟು ನಿಷೇಧಗಳಿದ್ದವು. ಕಿರಿಯ ಸ್ವಾಮೀಜಿಯವರ ತಪಶ್ಯಕ್ತಿ, ಪ್ರವಚನ, ಕಾವ್ಯಪ್ರಜ್ಞೆ, ಸಂಗೀತ, ಚಿತ್ರಕಲೆ ಎಲ್ಲ ಕ್ಷೇತ್ರಗಳಲ್ಲಿಯೂ ಅವರು ಸರಸ್ವತಿಯ ಔರಸಪುತ್ರನೆಂದೇ ಪ್ರಖ್ಯಾತರಾಗಿದ್ದರು. ಜೊತೆಗೆ ಹಿರಿಯ ಸ್ವಾಮಿಗಳ ಒತ್ತಾಸೆ. ಅಪ್ಪಯ್ಯನ ಗರಿಮುರಿಯಾದ ದೋತರ ಇನ್ನಷ್ಟು ಮಿಂಚುತ್ತಿತ್ತು. ದೇವರ ಮನೆಗೆ ಅಂಟಿಕೊಂಡಿದ್ದ ಅಮ್ಮ ಮತ್ತಷ್ಟು ಮೌನಿಯಾಗುತ್ತಾ ನಡೆದಿದ್ದರು. ಚಿತ್ರಗಳೂ ಅಲ್ಲಿಯೇ ಮೂಲೆಯಲ್ಲಿ ಕುಳಿತಿದ್ದವು.

ವಿದ್ಯಾನಂದರು ಬರೆದ ಭಕ್ತಿಪರಂಪರೆಯ ಭಾಗವತದ ಕೃಷ್ಣಲೀಲೆಗಳೆಲ್ಲ ಜೀವ ತಳೆದು ಕುಳಿತಂತಿತ್ತು. ‘ಸದ್ಯಕ್ಕೆ ಗೋವರ್ಧನ ಗಿರಿಯನೆತ್ತಿ ನಿಂತ ಕೃಷ್ಣ ಲೀಲೆಯವರೆಗಿನ ಸರಣಿ. ಇಡೀ ಭಾಗವತವನ್ನು ಇನ್ನೆರಡು ವರ್ಷದಲ್ಲಿ ಮುಗಿಸುತ್ತಾರಂತೆ’ ಶ್ರೀಮಠದ ಆಪ್ತರು ಮುಂದಿನದನ್ನ ಹೇಳಿಕೊಳ್ಳುತ್ತಿದ್ದರು. ಆದರೆ ಅದಕ್ಕಿಂತ ಮೊದಲೇ ವಿದ್ಯಾನಂದದಾಸರು ಪೀಠ ತ್ಯಜಿಸಿ ಎದ್ದು ನಡೆದಿದ್ದರು. ಅವರು ಹಾಗೆ ಎಬ್ಬಿಸಿದ್ದ ಆ ಬಿರುಗಾಳಿಗೆ ಎಲ್ಲವೂ ತತ್ತರಿಸಿ ಹೋಗಿತ್ತು.

ಆದಿನ ಅಪ್ಪಯ್ಯ ಹೊರಗಿನಿಂದ ಬಂದವರೇ ಸೀದಾಹೋಗಿ ಬಾವಿಯಿಂದ ತಣ್ಣೀರನ್ನೆತ್ತಿ ಬರಬರನೇ ಸುರಿದುಕೊಂಡಿದ್ದರು. ಹೊರಬಾಗಿಲ ಬಳಿ ಒಂದೇ ಸವನೆ ಗಲಾಟೆ. ಜನಸಾಗರವೇ ನೆರೆದಿತ್ತು. ಕೋಲಾಹಲವೆಂದರೂ ಸರಿಯೇ. ಬಾಗಿಲಿಗೆ ಬಂದುನಿಂತ ಅಪ್ಪಯ್ಯನನ್ನು ಕಂಡ ಇಡೀ ಸಮೂಹ ಪೂರ್ಣಸ್ತಬ್ಧವಾಯ್ತು. ‘ಸನ್ಯಾಸ ಸ್ವೀಕರಿಸಿದ ನಂತರ ಕುಟುಂಬದ ಜೊತೆಗೆ ಯಾವ ಸಂಬಂಧವೂ ಇರುವ ನಿಯಮವಿಲ್ಲ. ನಮ್ಮ ಭಾಗಕ್ಕೆ ಇದು ಸಂಬಂಧಿಸಿದ್ದಲ್ಲ.’ ಕೈಮುಗಿದು ತಿರುಗಿ ನೋಡದೇ ಮನೆಬಾಗಿಲಿಕ್ಕಿದ್ದರು. ಮುಂದೆಂದೂ ಅಪ್ಪಯ್ಯ ಅಪ್ಪಯ್ಯನಾಗಲೇ ಇಲ್ಲ. ಸಾರ್ವಜನಿಕ ಬದುಕಿಗೆ ಬಾಗಿಲನ್ನಿಕ್ಕಿದ್ದರು. ಇನ್ನುಮುಂದೆ ನಮ್ಮೊಂದಿಗೆ ಅಣ್ಣಯ್ಯನ ಸಂಬಂಧ ಏನೆಂಬುದು ನಮ್ಯಾರ ಲೆಕ್ಕಾಚಾರಕ್ಕೂ ಸಿಗದ ಮಾತಾಗಿತ್ತು. ವಿಶ್ಲೇಷಿಸಿ, ನಿರ್ಣಯಿಸಬೇಕಿದ್ದ ಅಪ್ಪಯ್ಯ ಅಂಗಳದಲ್ಲಿ ಶತಪಥ ತಿರುಗುತ್ತಾ ‘ಬದುಕೇ ಅಥೋಭ್ರಷ್ಟ. ತಥೋಭ್ರಷ್ಟವಾಯ್ತು... ನರಕ ನರಕವೇ ಗತಿ. ಶಂಭೋ ಶಂಕರಾ... ಪಾಪೋಹಂ ಪಾಪ ಕರ್ಮಾಹಂ...’ ಗೊಣಗುತ್ತಿದ್ದರು. ಅಮ್ಮನದು ಕಾಷ್ಠಮೌನ. ಬಾಗಿಲಾಚೆಯ ಮಾತು ಒಳಮನೆಗೆ ಇಳಿದು ಕಥೆಯಾಗಿ ಕಿವಿ ಕೊರೆಯುತ್ತಿತ್ತು. ನಮ್ಮೆಲ್ಲರ ಬದುಕೂ ಖಾಸಗಿತನವನ್ನು ಕಳೆದುಕೊಂಡು ಯಾರ‍್ಯಾರೋ ತೋರುವ ಬೆರಳಂಚಿನ ನೆರಳಾಗಿ ಹೋಗಿದ್ದೆವು. ಇಷ್ಟಾದರೂ ಮನದ ಮೂಲೆಯಲ್ಲೊಂದು ಮುಗಿಯದ ನಿರೀಕ್ಷೆ.

ಇದ್ದರೂ ಸತ್ತರೂ ಸರಿದುಹೋಗುವ ಕಾಲ ನಾಲ್ಕು ವರ್ಷಗಳನ್ನ ದಾಟಿಸಿತ್ತು. ಆಡುವವರ ದವಡೆಯಡಿ ಅರೆದುಹೋಗುವ ಅಭ್ಯಾಸವೂ ಮೈಗೂಡುತ್ತಿತ್ತು. ಆದರೂ ಬಂದು ಬೀಳುವ ಕಲ್ಲು ಸಣ್ಣದಿರಲಿ, ದೊಡ್ಡದಿರಲಿ ನೀರು ಶಾಂತವಾಗಿರಲು ಬಿಡದು. ಪಾಠ ಮುಗಿಸಿ ಶಿಕ್ಷಕರ ಕೊಠಡಿಗೆ ಕಾಲಿಡುತ್ತಿದ್ದಾಗ ‘ಅವಳಿ ಮಕ್ಕಳು ಕಣ್ರೀ. ಎಷ್ಟು ಚಂದಾಗಿದಾವೆ ಅಂತೀರಾ. ಸರಕಾರಿ ಆಸ್ಪತ್ರೆಗೆ ಇಂಜೆಕ್ಷನ್ ಹಾಕ್ಸೋಕೆ ಬಂದಾಗ ಕಂಡ್ರು. ಪೀಠ ಬಿಟ್ರೂ ದೇವರು ಕೈಬಿಡ್ಲಿಲ್ಲ ನೋಡಿ...’ ಇಂಗ್ಲಿಷ್ ಮೇಡಂ ವರ್ಣನೆ ನನ್ನನ್ನು ಕಾಣ್ತಿದ್ಹಾಗೇ ನಿಂತುಹೋಗಿತ್ತು. ನನ್ನೊಳಗೆ ಶುರುವಾಗಿತ್ತು. ಮನೆ ಸೇರಿ ಶ್ರೀಧರನನ್ನು ಕಾಣುತ್ತಿದ್ದಂತೆ ಒಡ್ಡೊಡೆದ ನದಿಯಾಗಿದ್ದೆ. ಅತ್ತು ಅತ್ತು ಸೋತ ನನ್ನ ತಲೆನೇವರಿಸುತ್ತಿದ್ದವ ‘ಕೇಳುವ ಹೇಳುವ ಕಥೆಗಳಿಗೆಲ್ಲ ಕಿವಿಯಾಗಿದ್ದು ಸಾಕು. ತಡೆಯುವುದು ಬೇಡ. ಏನಾದರೂ ನಾನಿದ್ದೇನೆ. ಅವನಿರುವಲ್ಲಿಗೆ ಈಗಲೇ ಹೊರಟುಬಿಡು. ಕಾಣದ ಕಲ್ಪನೆಗಿಂತ ಭೀಕರವಲ್ಲ ಕಾಣುವ ಬದುಕು...’ ಬೆನ್ನುತಟ್ಟಿದ್ದ.

ಬಾಗಿಲಿಗೆ ಬಂದವಳನ್ನ ಹೊರನಿಲ್ಸಿ ತೊರೆದುಬಂದ ಸಂಬಂಧವೆಂದು ಬಾಗ್ಲಹಾಕಿದ್ರೆ? ಈಗಾಗ್ಲೇ ಆಗಿದ್ದೇ ಬೇಕಾದಷ್ಟು. ಅದ್ರ ಜೊತೆಗೆ ಇನ್ನೊಂದು. ಅವನನ್ನು ಕಾಣದೇ ಯುಗವೇ ಕಳೆದಂತಿದೆ. ನೆನಪು ತಡೆಯೋಕಾಗ್ಲಿಲ್ಲ ಬಂದ್ಬುಟ್ಟೆ ಅಂತ ನೇರವಾಗಿ ಹೇಳಿದ್ರಾಯ್ತು. ಏನಾಗುತ್ತೋ ಆಗ್ಲಿ. ಹೊರಟೇಬಿಟ್ಟಿದ್ದೆ...

‘ಮುಕ್ತ’ದ ಗೇಟಿಗೆ ಬೀಗವೇ ಇರಲಿಲ್ಲ. ಹಸಿರನಡುವೆ ಹರಡಿದ ಆ ಸ್ಥಳ ಥೇಟು ನಂದಗೋಕುಲಕ್ಕೇ ಜೀವಬಂದಂತಿತ್ತು. ನನ್ನ ಕಾರಿನ ಸದ್ದೂ ಸಾಕು ಅನಿಸುವ ಹೊತ್ತಿಗೆ ಆ ಪುಟ್ಟಮನೆಯ ಅಂಗಳ ಎದುರಾಗಿತ್ತು. ಮಕ್ಕಳಿಬ್ಬರ ಕೈಗೆ ಕಿರುಬೆರಳನಿಟ್ಟು ನಡೆಸುತ್ತಾ ಸಂಭ್ರಮಿಸುತ್ತಿದ್ದವ ಎದುರಾಗಿದ್ದ. ಬಯಸಿ ಬಸವಳಿದದ್ದು ಅನಿರೀಕ್ಷಿತವಾಗಿ ಕೂಡಿತ್ತು! ಇಬ್ಬರನ್ನೂ ಆವರಿಸಿದ್ದ ವಿಸ್ಮೃತಿ ಸರಿದಾಗ ‘ಜ್ಯೋತಿರ್ಮಾ’ ಕರೆದಿದ್ದನೋ ಕೂಗಿದ್ದನೋ ನನಗೂ ಅರಿವಿರಲಿಲ್ಲ. ಮೈಕೈಗಳಿಗೆಲ್ಲ ಮಣ್ಣು ಮೆತ್ತಿದ್ದ ಮಹಿಳೆಯೊಬ್ಬರು ಓಡಿಬಂದಿದ್ದರು. ‘ಇವಳು...’ ತೊದಲುತ್ತಿದ್ದ. ನಡುಗುತ್ತಿದ್ದ. ಬಹುಶಃ ನನ್ನ ಸ್ಥಿತಿಯೂ ಹಾಗೆಯೇ ಇತ್ತು. ಜ್ಯೋತಿರ‍್ಮಾ ‘ನೀವು ಚಿನ್ಮಯಿಯಾಗಿರಬೇಕು ಅನ್ಕೋತೀನಿ. ಕೂತ್ಗೋ ಬನ್ನಿ’ ಶಾಂತಧ್ವನಿ. ಕೈ ಹಿಡಿದು ಕರೆದಿದ್ದರು. ಮಣ್ಣು ನನ್ನ ಕೈಗೂ ತಾಗಿತ್ತು.

ಮುಂದೆ... ಮರೆತ ಮಾತುಗಳಿಗೆಲ್ಲ ಜೀವಬಂದಿತ್ತು. ಕಳಚಿಕೊಂಡಿದ್ದನ್ನು ಕಟ್ಟಿಕೊಳ್ಳುತ್ತಿದ್ದ ಸಂಭ್ರಮದ ನಡುವೆಯೂ ಒಂದು ತೆಳು ಅಂತರ ಅನುಭವಕ್ಕೆ ಬರುತ್ತಿತ್ತು. ಯಾವ ಸಂಬಂಧವನ್ನು ಹೇಗೆ ಸಂಭೋದಿಸುವುದೆಂಬ ಸಂದಿಗ್ಧ! ‘ಅವ ಹರಿಪ್ರಸಾದ, ಇವಳು ಮಾಧವಿ’ ಮಕ್ಕಳ ಪರಿಚಯಿಸುತ್ತಾ ‘ಮನೆಯಲ್ಲಿ..?’ ಪ್ರಶ್ನೆ ತಡೆದಿತ್ತು. ಅವನ ನಿಂತ ಮಾತಿಗೆ ಉತ್ತರ ಕೊಡಲಾಗುವಷ್ಟು ಕೊಟ್ಟಿದ್ದೆ. ಎದ್ದು ಭುಜವನ್ನು ಬಳಸಲು ಮುಂದಾದವ ಹಿಂಜರಿದು ನಿಲ್ಲದೇ ಹೊರಟುಹೋಗಿದ್ದ. ನಾನು ಜ್ಯೋತಿರ‍್ಮಾ ಸ್ನಾನ ಮುಗಿಸಿ ಬರುವವರೆಗೂ ಕುಳಿತೇ ಇದ್ದೆ . ‘ಅವರೊಳಗೆ ತೋಡಿಕೊಳ್ಳುವ ತಾವಿಲ್ಲದ ತಬ್ಬಲಿತನವಿದೆ. ತಪ್ಪು ತಿಳಿಯಬೇಡಿ’ ಕೈ ಹಿಡಿದವರನ್ನು ತಬ್ಬಿ ಅತ್ತಿದ್ದೆ. ತಡೆದವರನ್ನು ಅನುನಯಿಸಿ ಹೊರಟುನಿಂತೆ. ಅವ ಹೊರಬರಲೇಇಲ್ಲ. ಅಂಗಳದ ತುದಿಯವರೆಗೂ ಬೀಳ್ಕೊಡಲು ಬಂದ ಜ್ಯೋತಿರ‍್ಮಾ ‘ಬಿಡುವಾದಾಗ ಓದಿ’ ಕೈಗೊಂದು ಡೈರಿಯನ್ನಿಟ್ಟಿದ್ದರು. ಮನೆಗೆ ಬಂದಿದ್ದೇ ರೂಮಿಗೆ ಹೋಗಿ ಡೈರಿ ತೆರೆದಿದ್ದೆ.

***

‘ಮನಸ್ಥಿತಿ’ ಆತ್ಮಸಾಕ್ಷಿಯನ್ನು ಮೀರಲಾರದ ಸ್ಥಿತಿ! ಪೀಠದಲ್ಲಿದ್ದು ಪ್ರಾಪಂಚಿಕವಾಗಿರಲಾರದ, ಪ್ರಾಪಂಚಿಕವಾಗಿದ್ದು ಸಂನ್ಯಾಸವನ್ನು ಹೊರಲಾರದ ಮನಸ್ಥಿತಿ. ಈ ಮನಸ್ಥಿತಿಯೆನ್ನುವುದು ಬುದ್ಧಿಮೂಲದ್ದೋ, ವಾಸನಾ ಮೂಲದ್ದೋ ಎನ್ನುವ ಗೊಂದಲ ಬೆನ್ನುಬಿಟ್ಟಿದ್ದಲ್ಲ. ಬುದ್ಧಿಯ ಮೂಲಕ ನಿಯಂತ್ರಿಸಬೇಕಾದ ಮನಸು ತಾನೇ ಬುದ್ಧಿಯನ್ನಾಳುವ ಆಕ್ರಮಣಶೀಲವಾದಾಗ ಅದನ್ನು ವೈಫಲ್ಯವೆಂದು ಒಪ್ಪದೇ ವಾಸನಾಮೂಲವೆಂದರೆ ಪಲಾಯನವಾಗದೆ? ಈ ಹೊಂದಾಣಿಕೆ ಯಾವ ವ್ಯಾಪ್ತಿಯದು? ಆತ್ಮಗ್ಲಾನಿ, ಧರ್ಮಲಂಡತನಗಳ ನಡುವೆ ನನ್ನ ಸ್ಥಾನ ಯಾವುದು? ನಿರ್ಣಯಿಸಿಕೊಳ್ಳಲಾರದ ಅಯೋಮಯ ಭಾವ.

‘ಸನ್ಯಾಸವನ್ನು ಯಾವಾಗ ಬೇಕಾದರೂ ಸ್ವೀಕರಿಸಬಹುದು. ಆದರೆ ಸ್ವೀಕರಿಸುವ ಮಟ್ಟದ ಸ್ಥಿರ ವಿರಕ್ತಿ ಬೇಕು. ಬಾಲಸನ್ಯಾಸ ಮಾರ್ಗ ಸುಲಭದ್ದಲ್ಲ. ಪ್ರಾಪಂಚಿಕವಾಗಿ ಪಡೆಯಬೇಕೆಂಬ ವಾಂಛೆ ಯಾವಾಗ ಬೇಕಾದರೂ ಜಾಗೃತವಾದೀತು. ಒಂದು ಸೂಕ್ಷ್ಮ ಅತೃಪ್ತಿಯಾಗಿ ಕಾಡೀತು. ಇಲ್ಲಿಂದ ತೊರೆದು ಮರಳುವ ಅವಕಾಶವಿಲ್ಲ. ಸಂನ್ಯಾಸವೊಂದು ವ್ರತ. ಸದ್ಗತಿಯತ್ತಲಿನ ಪಯಣ. ಈ ಪಯಣಕ್ಕೆ ಕೊನೆಯೆಂಬುದಿಲ್ಲ. ಗತಿ ಮಾತ್ರ...’ ಹಿರಿಯ ಶ್ರೀಗಳು ಎಷ್ಟು ಬಾರಿ ಹೇಳಿದ್ದರೋ ನೆನಪಿಲ್ಲ. ನನ್ನದು ಒಂದೇ ಹಠ. ‘ಇಲ್ಲ. ನಾನು ಸನ್ಯಾಸಿಯಾಗಬೇಕು.’ ಅಂತಹ ಒಂದು ಅಭೀಪ್ಸೆಯನ್ನ ಬೆನ್ನಿಗೇರಿಸಿಕೊಂಡಿದ್ದು ನಾನೇ. ಅಪ್ಪಯ್ಯ ಸೂಚಿಸುವುದಕ್ಕೆ ಮೊದಲೇ ಅಂತಹದ್ದೊಂದು ಆಸೆ ಊರಿತ್ತು

ಅಪ್ಪಯ್ಯ ನೀರೆರೆದಿದ್ದರು. ವಯಸ್ಸು ಹದಿನಾರು. ಅನಿಸಿದ್ದನ್ನ ಸಾಧಿಸುವ ಹಠ. ಕಾವಿಯಲ್ಲದೇ ಇನ್ನೇನೂ ಕಾಣದಾಗಿತ್ತು. ‘ಅನಂತ ಪಯಣದ ಮುಂದುವರಿಕೆಯಾಗಿ ಬಂದ ಆತ್ಮದ ಗತಿಯನ್ನು ಕಾಣುವಾಸೆಯನ್ನು ಬಿಟ್ಟರೆ ನನಗೆ ಇನ್ನೇನೂ ಬೇಕಿಲ್ಲ’ ದೃಢವಾಗಿ ಕಾಡಿದ್ದೆ. ಆದರೂ ಎರಡು ವರ್ಷವಿಡೀ ಯಮನಿಯಮಾದಿಗಳ ಬಿಗಿಯಲ್ಲಿ ನಿರೀಕ್ಷಿಸಿದವರು ಕೊನೆಗೊಮ್ಮೆ ಮತ್ತೆ ಕೇಳಿದ್ದರು. ‘ನಿನ್ನ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲಿಸಿ ನೋಡು. ವಾಸನಾಮುಕ್ತಿ ಅಷ್ಟು ಸುಲಭದ್ದಲ್ಲ. ಜನ್ಮಾಂತರದ ಕೋಶವಾಹಕದ ಯಾವುದೋ ಒಂದು ಸ್ಮೃತಿ ವಿಸ್ಮೃತಿಯನ್ನು ತರಬಹುದು. ಈಗಲೂ ನೀನು ನಿನ್ನ ಅವಸ್ಥೆ ಮತ್ತು ನಿರ್ಧಾರಕ್ಕೆ ಮುಕ್ತ. ಗ್ರಾಹಸ್ತ್ಯಾವಸ್ಥೆಯನ್ನು ಪಡೆದು, ವಾನಪ್ರಸ್ತದೊಂದಿಗೆ ಕ್ರಮಬದ್ಧ ಸನ್ಯಾಸ ಸ್ವೀಕಾರವೂ ಸಾಧ್ಯವಿದೆ. ಆತುರ ಬೇಡ’

‘ಇಲ್ಲ. ನನ್ನಿಂದ ಅಷ್ಟು ದೀರ್ಘವಾದ ನಿರೀಕ್ಷೆ ಅಸಾಧ್ಯ. ಜನ್ಮಾಂತರದ ಕರ್ಮಸರಣಿಯಿಂದ ಕಳಚಿಕೊಳ್ಳಬೇಕು. ಆತ್ಮಶೋಧನೆಯಲ್ಲಿ ತೊಡಗಿಕೊಳ್ಳಬೇಕು.’ ಅಂತೂ ಹಠ ಗೆದ್ದಿತ್ತು. ‘ನಾ ಹಂ ಕಸ್ಯತ್... ಯಾರ ಸ್ವತಃ ಈ ಜೀವಭಾವದ ಹಂಗನ್ನೂ ತೊರೆದು ಸಾಗಿದ್ದ ದಿವ್ಯಮಾರ್ಗವದು. ಧರ್ಮಾಪೇಕ್ಷವಾದ ಸೂತ್ರಗಳ ತಳಹದಿಯಲ್ಲಿ ತೊಡಗಿದ ಶೋಧನೆಯ ಪ್ರವೃತ್ತಿ ಮಾರ್ಗ ಒಂದು ರಾಜಮಾರ್ಗ. ಅಂತರ್ಮುಖಿಯಾಗಿ ಒಳಗಿಳಿಯುವ ತನ್ಮಯಭಾವ ಅತುಲ್ಯವಾದ ಪರಮಾನಂದವನ್ನು ಕೊಡುತ್ತಿತ್ತು. ಸನ್ಯಾಸದ ಕ್ರಮ ಶಿಕ್ಷಣದಲ್ಲಿ ಒಗ್ಗದ್ದೆಂದರೆ ಮಠದ ಆಡಳಿತಾತ್ಮಕ ಕಲಿಕೆ. ‘ಇದು ಅಧ್ಯಾತ್ಮವಲ್ಲ. ವ್ಯಾವಹಾರಿಕ ನನಗೆ ಬೇಡ.’ ಪಟ್ಟು ಹಿಡಿದಿದ್ದೆ.

‘ಎಲ್ಲವನ್ನೂ ತೊರೆಯುತ್ತೇನೆಂದರೂ ಕೆಲವು ನಮ್ಮನ್ನು ತೊರೆಯದು. ಅದರೊಂದಿಗೂ ಇದ್ದೂ ಇರದಂತಿರುವುದನ್ನ ಕಲಿಯಬೇಕು.’ ಹಿರಿಯ ಶ್ರೀಗಳು ನಸುನಕ್ಕು ಕಳುಹಿಸಿದ್ದರು. ನಡೆದಾಡುವ ಭಗವಂತನೆಂದೇ ಜನಮಾನಸದಲ್ಲಿದ್ದ ಹಿರಿಯ ಶ್ರೀಗಳ ಶಿಷ್ಯಪದವನ್ನು ಸ್ವೀಕರಿಸಿದ ಮೇಲೆ ನನ್ನ ಕ್ರಮಣ ಇನ್ನಷ್ಟು ಸಲೀಸಾಗಿತ್ತು. ಅವರ ವಾತ್ಸಲ್ಯ ನನ್ನೆಲ್ಲ ಕೊರತೆಗಳನ್ನೂ ನೀಗಿಸುತ್ತಿತ್ತು. ಮನೋಧಾರ್ಡ್ಯವನ್ನು ಬಲಪಡಿಸುತ್ತಿತ್ತು. ಆತ್ಮಚಿತ್ತ, ಮನೋಪ್ರವೃತ್ತಿ, ನಿವೃತ್ತಿಗಳ ಕುರಿತು ಗ್ರಂಥಗಳನ್ನೂ ರಚಿಸಿದ್ದರು. ಅವರಿಗೆ ನನ್ನ ಚಿತ್ರ, ಸಾಹಿತ್ಯ, ಸಂಗೀತಗಳ ಬಗ್ಗೆಯೂ ಗೌರವವಿತ್ತು. ಒಲವಿತ್ತು. ಚಿಕ್ಕ ಸಂಗತಿಗಳನ್ನೂ ಗಮನಿಸಿ ಮುನ್ನಡೆಸುವ ಸನ್ಯಾಸ ಜನ್ಮದ


ಶೈಲಜಾ ಗೊರ‍್ನಮನೆ

ತಾಯಿ ಅವರಾಗಿದ್ದರು. ಆಗೀಗ ನೆನಪಾಗುವ ಅಮ್ಮ, ಚಿನ್ನುವನ್ನು ಮೀರಲು ಬೇಕಾದಷ್ಟು ಅವಲಂಬನೆಗಳಿದ್ದವು. ಕಣ್ಣಿಗೆ ಕಾಣದ್ದು ಮನಸಿನಿಂದಲೂ ದೂರವಾಗುವ ಹಾಗೆ ಅವರ ನೆನಪೂ ಮಸುಕಾಗಿತ್ತು. ಎರಡು ಮನಸಿಲ್ಲದ ಏಕೋಭಾವದ ನಿಶ್ಚಿಂತ ನಡೆ. ಸಾಂಸಾರಿಕ ಜಂಜಡಗಳ ಪರಿಹಾರವನ್ನು ಕೇಳಿ ಶ್ರೀಗಳನ್ನು ಹುಡುಕಿ ಬರುವ ಸಂಸಾರಸ್ಥರನ್ನು ಕಂಡಾಗ ನಾನು ಆಯ್ದುಕೊಂಡ ಮಾರ್ಗದಲ್ಲಿ ಇನ್ನಷ್ಟು ನಂಬಿಕೆ ಹೆಚ್ಚುತ್ತಿತ್ತು. ಕಾಲ ಕಳೆದದ್ದೇ ತಿಳಿಯಲಿಲ್ಲ.

ಹದಿನಾಲ್ಕು ವರ್ಷದ ಕಠಿಣ ಪರಿಶ್ರಮದ ಮಧ್ಯೆ ಕಳ್ಳಹೆಜ್ಜೆಯನ್ನಿಟ್ಟು ಆವರಿಸಿದ ಆ ಸ್ಥಿತಿಯನ್ನು ವಿಸ್ಮರಣೆ ಅನ್ನುವುದಾ ಬಹಿರ್ಮುಖತೆಯಾ? ಇನ್ನೂ ಅರ್ಥವಾಗಿಲ್ಲ. ಏಕೋಭಾವ ವಿಮುಖವಾಗಿದ್ದಂತೂ ನಿಜವಾಗಿತ್ತು. ಕೃಷ್ಣ ಬಾಲಲೀಲೆಯ ಚಿತ್ರಸರಣಿಯಲ್ಲಿ ಮನಸು ಮಗ್ನವಾಗಿತ್ತು. ಚಂದ್ರಸಾಲೆಯ ತಿರುವಿನಲ್ಲಿ ಹೊರಳುವಾಗ ಬೆಣ್ಣೆ ಕದ್ದೋಡಿ ಬರುವ ಕೃಷ್ಣ ತಲೆಯಲ್ಲಿದ್ದ. ಹೊರಳಿನಲ್ಲಿ ಮುಂದಡಿ ಇಡಲು ತಿರುಗಿದ್ದೆ. ಅಂಬೆಗಾಲಿಕ್ಕಿ ಬಂದ ಮಗುವೊಂದು ಕಾಲನ್ನು ತಬ್ಬಿ ಕೇಕೆ ಹಾಕಿತ್ತು. ಆ ಸ್ಪರ್ಶ, ಧ್ವನಿ ಹುಟ್ಟಿಸಿದ ದಿವ್ಯಾನಂದ ಒಂದು ಮಾಂತ್ರಿಕ ಕ್ರಿಯೆಯಾಗಿ ಆವರಿಸಿಬಿಟ್ಟಿತು. ಆ ಭಾವವನ್ನು ಶಾಶ್ವತವಾಗಿ ದಕ್ಕಿಸಿಕೊಳ್ಳುವ ವಾಂಛೆಯೂ.. ಸುತ್ತಿನದೆಲ್ಲವೂ ಮರೆಯಾಗಿ ಮಗುವಿನ ಮೋಹದಲ್ಲಿ ತೇಲುತ್ತಿದ್ದೆ. ಅದನ್ನೆತ್ತಿ ಅಪ್ಪಿ ಅದೆಷ್ಟು ಹೊತ್ತು ಅದರ ಕಿಲಕಿಲ ನಗುವಿನ ನಾದಬ್ರಹ್ಮದ ಝೇಂಕಾರದಲ್ಲಿ ಮುಳುಗಿಹೋಗಿದ್ದೆನೋ ತಿಳಿಯದು. ಮಗುವೂ ತನ್ನ ಗಲ್ಲವನ್ನು ನನ್ನ ಗಲ್ಲಕ್ಕೆ ತಿಕ್ಕುತ್ತಾ ಮೂಗನ್ನು ಹಿಡಿದು ಎಳೆಯುತ್ತಾ ಮೂಗಿನೊಳಗಿನ ರೋಮವನ್ನು ಜಗ್ಗಿತ್ತು. ಬಂದ ಸೀನು ನನ್ನೆಲ್ಲ ಅಂತರ್ಮುಖತೆಯನ್ನೂ ಹೊರತಳ್ಳಿಬಿಟ್ಟಿತ್ತು. ಸುತ್ತಲೂ ನಿಂತ ಭಕ್ತಾದಿಗಳು ಮಗುವಿನ ಚೇಷ್ಟೆಯನ್ನು ಕಂಡು ನಗುತ್ತಿದ್ದರು. ಅದರ ತಂದೆ ನನ್ನ ಪ್ರೀತಿಯಂದ ಮಗುವು ಆಶಿರ್ವಾದ ಪಡೆಯಿತೆಂಬ ಧನ್ಯತೆಯಲ್ಲಿ ಕೈಚಾಚಿದ್ದರು.

ಅದು ಆರಂಭ. ಸನ್ಯಾಸಿಯ ಧ್ಯಾನದಲ್ಲಿ ಮಗು ಕುಳಿತುಬಿಟ್ಟಿತ್ತು! ಧ್ಯಾನವಿರಲಿ, ಕುಂಚವಿರಲಿ, ರಾಗದ ಶ್ರುತಿಯಿರಲಿ ಎಲ್ಲದಕ್ಕೂ ಮಗುವಿನ ಸ್ಪರ್ಶ ಅಂಟಿಬಿಟ್ಟಿತ್ತು. ಅದೊಂದು ತಪನೆ. ನಾನು ಮಗುವಿನ ಬಾಲಲೀಲೆಗೆ ಅನುಭವದ ಸಾಕ್ಷಿಯಾಗಬೇಕು. ಕಚ್ಚಿಕೊಂಡಿರುವ ವಾಂಛೆ ಹಿರಿಯ ಶ್ರೀಗಳ ಗಮನಕ್ಕೂ ಬಂದಿದ್ದೀತು. ಅವರಾಗಿ ಕೇಳಲಿಲ್ಲ. ಭಾರವನ್ನು ತಡೆಯಲಾರದೇ ನಾನೇ ಕಾಡುವ ವಾಂಛೆಯಿಂದ ಬಿಡುಗಡೆ ಕೊಡಿಸುವಂತೆ ಅತ್ತಿದ್ದೆ. ಇದಿರು ಕುಳ್ಳಿರಿಸಿಕೊಂಡವರು ಮುಖವನ್ನೇ ದಿಟ್ಟಿಸಿದ್ದರು. ‘ನಮ್ಮ ಮಸ್ತಿಷ್ಕದ ಪದರದಲ್ಲಿರುವುದು ಮಿಲಿಯಾಂತರ ಕೋಶವಾಹಕಗಳು. ಅವು ನಮ್ಮೆದುರು ತಂದಿಡುವ ಜನ್ಮಾಂತರದ ವಾಸನೆಗೆ ಯಾವುದೇ ರೂಪ, ಬಣ್ಣಗಳಿಲ್ಲ. ಸ್ವೀಕರಿಸಿದ ಸ್ವರೂಪದ ಬಲವೇ ಅದರ ಬಲ, ಆವರಿಸಿ ಆಳುವುದೇ ಅದರ ಸ್ವರೂಪ. ವಾಸನೆಯಿಂದ ಪ್ರೇರೇಪಣೆ ಪಡೆದು ಜಾಗೃತವಾಗುವುದು ಕರ್ಮಪ್ರವೃತ್ತಿ. ಅದರಿಂದ ಚಿತ್ತವೃತ್ತಿ ಪ್ರಭಾವಿತವಾಗಿ ಪ್ರವೃತ್ತಿಯನ್ನು ಕೂಡುತ್ತದೆ. ಯಾವುದೇ ಸಂಗತಿ ಅಥವಾ ಸಂಕಲ್ಪ ಮನೋಭಾವವಾಗಿ ನಮ್ಮನ್ನು ನಿರ್ದೇಶಿಸುತ್ತದೆ. ಭಾವ ಒಳಗಿರಲಿ, ಹೊರಗಿರಲಿ ಸಾಕುವವರ ಶ್ರದ್ಧೆಗನುಗುಣವಾಗಿ ಸ್ಥಾನ ಪಡೆಯುವುದು ಅದರ ಸ್ವಭಾವ. ಈ ಸ್ಥಿತಿಯ ಕರ್ಮಬಂಧವನ್ನು ಬಿಡಿಸಿಕೊಳ್ಳುವುದಕ್ಕಾಗಿಯೇ ಸನ್ಯಾಸ. ನಾವು ಸ್ವೀಕರಿಸಿದ ಮಾರ್ಗವಿದು.’ ಎಳೆಎಳೆಯಾಗಿ ಬಿಡಿಸಿಟ್ಟಿದ್ದರು.

ಮುಂದೆ ಅನಾರೋಗ್ಯದಿಂದ ನರಳುವ ಮಗುವೊಂದರ ಆರೈಕೆ ಮಾಡುವ ತಾಯಿಯಂತೆಯೇ ಜೊತೆಗೆ ನಿಂತರು. ಯೋಗ, ಧ್ಯಾನ, ಹಠಯೋಗ, ಅಧ್ಯಾತ್ಮ ಬೋಧನೆ, ಚಿಂತನೆ, ಅಧ್ಯಯನ, ಅಧ್ಯಾಪನ ಎಲ್ಲದರ ಮೂಲಕ ಚಿತ್ತವೃತ್ತಿಯ ನಿಯಂತ್ರಣದ ಪ್ರಯೋಗಕ್ಕೆ ಮುಂದಾದೆ. ಎಲ್ಲವೂ ತೊಡಗಿಕೊಂಡಷ್ಟು ಹೊತ್ತು ಮಾತ್ರ. ಹಂಬಲವನ್ನು ಮೀರಲು ಪ್ರಯತ್ನಿಸಿದಷ್ಟೂ ಸುಳಿಯಾಗಿ ಒಳಗೆಳೆದು ಹಾಕುತ್ತಿತ್ತು. ‘ನಿಮ್ಮನ್ನು ಯಾವುದೂ ಕಾಡಿದ್ದಿಲ್ಲವೇ?’ ಕೇಳಿದ್ದೆ. ‘ಮಾಯೆ ಮುತ್ತದ ಮನವಿಲ್ಲ. ಆದರೆ ನನ್ನ ಗುರುವಿನ ಮಾತೃಛಾಯೆ ಎಲ್ಲ ಬಂಧಗಳನ್ನೂ ಬಿಡಿಸಿ ಗತಿ ತೋರಿತು’ ನಾನೂ ಹಾಗೆಯೇ ಬಿಡುಗಡೆಯ ದಾರಿಗಾಗಿ ಪರಿತಪಿಸಿದ್ದೆ. ಹೆಣ್ಣು, ಹೊನ್ನು, ಮಣ್ಣು ಮಾಯೆಯೆಂಬುದು ಸರಿ. ಮಗುವೂ ಮೋಹವಾಗಿ ತುಂಬಿಕೊಳ್ಳುವುದೆಂದರೆ..?

ನಿದ್ದೆಯಲ್ಲಿಯೂ ಹಸುಗೂಸಿನ ಹಸ್ತಸ್ಪರ್ಶವನ್ನೇ ಕನವರಿಸುತ್ತಿದ್ದೆ. ಆಗತಾನೇ ತಾಯಗರ್ಭದಿಂದ ಹೊರಬಂದ ಮಗುವನ್ನು ಎತ್ತಿ ಅಪ್ಪಿಕೊಳ್ಳಬೇಕು. ಹಾಲೂಡಿಸುವ ತಾಯ ಸಂತೃಪ್ತ ನೋಟವನ್ನು ಕಂಡು ತಣಿಯಬೇಕು. ಶಿಶುವಿನ ತುಟಿಯಂಚಿನಿಂದ ಒಸರುವ ಹಾಲಹನಿಯ ಸೊಬಗ ನೋಡಬೇಕು. ಕವುಚಿ ಮುಂಜಾರುವ, ಅಂಬೆಗಾಲಿಕ್ಕುವ, ಕಿರುಬೆರಳ ಹಿಡಿದು ಹೆಜ್ಜೆಯೂರುವ ಎಲ್ಲ ಸಂಭ್ರಮವೂ ನನ್ನನ್ನು ತೊರೆದು ಹೋಗಿಬಿಡುವ ನಿರಾಸೆ ದಿನದಿನವೂ ಹೆಚ್ಚುತ್ತಲೇ ಸಾಗಿತ್ತು. ಬಿಡಿಸಿಕೊಂಡಷ್ಟೂ ಬಿಡಲಾರದ ಮೋಹ... ನನ್ನ ಸೋಲು ಅರಿವಿಗೆ ಬರುತ್ತಿತ್ತು. ಸ್ವೀಕರಿಸಿದ ಧರ್ಮದಿಂದಲೂ ಮನೋಧರ್ಮ ವಿಮುಖವಾಗುತ್ತಿತ್ತು.

ನಿರಂತರ ಎರಡು ವರ್ಷಗಳ ಪ್ರಯತ್ನದ ನಂತರ...ಮೀರಲಾರದ ಬಂಧ ಭವವನ್ನೇ ಬಯಸಿದೆ ಅನ್ನುವುದು ಸ್ಪಷ್ಟವಾಗತೊಡಗಿತ್ತು. ಇನ್ನೂ ಸನ್ಯಾಸದಲ್ಲಿ ಮುಂದುವರಿಯುವುದು ಅಪ್ರಾಮಾಣಿಕ ನಡೆಯೆಂದು ಒಳಮನಸು ಎಚ್ಚರಿಸಲು ತೊಡಗಿತ್ತು. ಮುಖವಾಡವನ್ನು ಧರಿಸಿ ಮುನ್ನಡೆಯಲು ಆತ್ಮಸಾಕ್ಷಿ ಒಪ್ಪಲಿಲ್ಲ. ಇಲ್ಲಿಯೇ ಮುಂದುವರಿದರೆ ಧರ್ಮಕ್ಕೂ, ಆತ್ಮಕ್ಕೂ ದ್ರೋಹವನ್ನು ಬಗೆವ ಭ್ರಷ್ಟತನ ಪಥನ ಮಾರ್ಗವೆನ್ನಿಸಿ ಸನ್ಯಾಸಪೀಠವನ್ನು ತೊರೆವ ನಿರ್ಧಾರವನ್ನು ಮುಟ್ಟಿದ್ದೆ. ಶ್ರೀಗಳೆದುರು ಎಲ್ಲವನ್ನೂ ಬಿಚ್ಚಿ ಬಯಲಾಗಿದ್ದೆ. ಅಂದು ಅವರ ನಿಶ್ಚಲ ಮುಖದಲ್ಲೂ ಮ್ಲಾನತೆ ಮೂಡಿತ್ತು. ಅದು ನನ್ನ ಸೋಲಿನ ನೆರಳೂ ಆಗಿತ್ತು.

‘ಸನ್ಯಾಸ ಸ್ವೀಕಾರಕ್ಕೆ ಮಾರ್ಗವಿದೆ. ಸನ್ಯಾಸ ವಿಸರ್ಜನೆಗೆ ಮಾರ್ಗವಿಲ್ಲ. ಎಲ್ಲವನ್ನೂ, ಎಲ್ಲರನ್ನೂ ತೊರೆದು ಆತ್ಮಶ್ರಾದ್ಧವನ್ನೂ ಪೂರೈಸಿದ ಜೀವಾತ್ಮಕ್ಕಿರುವ ಏಕಮಾರ್ಗವೆಂದರದು ನಿಷ್ಕ್ರಮಣದ ದಾರಿ. ಅದೊಂದೇ ನನಗೆ ಗೊತ್ತಿರುವ ಮಾರ್ಗ. ಗುರುವಾಗಿಯೂ ನಿನಗೆ ಮಾರ್ಗದರ್ಶನ ಮಾಡಲು ವಿಫಲನಾಗುತ್ತಿದ್ದೇನೆ. ಅದು ನನ್ನ ಸೋಲು. ಆದರೆ ಆತ್ಮವಂಚನೆ ಮಾಡಿಕೊಳ್ಳುತ್ತಾ ಸನ್ಯಾಸ ಪೀಠದಲ್ಲಿ ಕುಳಿತುಕೊಳ್ಳುವುದು ಇನ್ನೂ ಘೋರ ಅಪರಾಧ. ಮೋಸ. ಮೋಸದ ದಾರಿಯನ್ನು ತುಳಿಯದೇ ಆತ್ಮಸಾಕ್ಷಿಯ ಕೈಹಿಡಿದ ನಿನಗೆ ಮಾರ್ಗದರ್ಶನ ಮಾಡುವ ಶಕ್ತಿಯೂ ಈಗ ನನಗಿಲ್ಲ. ಮಾರ್ಗವನ್ನು ಆಯ್ದುಕೊಳ್ಳ ಬೇಕಾದವ ನೀನು. ಇಷ್ಟುಮಾತ್ರ ಹೇಳಬಲ್ಲೆ. ಸನ್ಮಾರ್ಗಿಯಾಗು.’ ಎಂದವರೇ ಎದ್ದುನಡೆದಿದ್ದರು. ರಾತ್ರಿ ಕವಿಯುತ್ತಿತ್ತು. ನಾನು ಹೊರಬಿದ್ದಿದ್ದೆ.

ಸೌಪರ್ಣಿಕೆಯ ದಡದ ಮೇಲಿರುವ ಮಂಟಪದ ಪೌಳಿಯಿಂದ ಹರಿಯುವ ನದಿ ಸ್ಪಷ್ಟವಾಗಿ ಕಾಣುತ್ತಿತ್ತು. ರಭಸವಾದ ಏಕಮುಖ ಪ್ರವಾಹ. ನನ್ನೊಳಗೆ ಭುಗಿಲೆದ್ದಿರುವ ಅನಾಥ- ಹತಾಶವಾದ ಅಯೋಮಯ ಭಾವವನ್ನು ಕಂಡು ‘ಪ್ರಪಂಚದ ಎಲ್ಲವನ್ನೂ ಒಡಲಲ್ಲಿ ತುಂಬಿಕೊಂಡು ಹೊರಟಿದ್ದೇನೆ. ಅದರಲ್ಲಿ ನಿನ್ನದೂ ಒಂದು ಬಿಡು’ ಎನ್ನುತ್ತಿರುವಂತಿತ್ತು. ಸೂರ್ಯ ಮೇಲೇರುತ್ತಿದ್ದ. ಸ್ನಾನಘಟ್ಟದಲ್ಲಿ ಸಂಚಾರ ಶುರುವಾಗಿತ್ತು. ಮೊದಲು ಯಾರೋ ಭೈರಾಗಿಯಿರಬೇಕೆಂದು ಭಾವಿಸಿದ್ದ ಜನ ಅದು ನಾನೆಂದು ತಿಳಿದಾಗ ಗುಂಪುಗಟ್ಟಿದ್ದರು. ಮುಂಬರುವ ಧೈರ್ಯವಾಗದೇ ನಿಂತಲ್ಲಿಯೇ ಗುಸುಗುಸು ಮಾಡುತ್ತಿದ್ದರು. ಅವರು ಕೇಳಬಹುದಾದ ಯಾವ ಪ್ರಶ್ನೆಗಾದರೂ ನನ್ನ ಬಳಿ ಉತ್ತರವಿದ್ದಿದ್ದರೆ ಮಾತನಾಡಬಹುದಿತ್ತು. ಮುಂದೇನು ಎಂಬುದು ನನಗೂ ಗೊತ್ತಿರಲಿಲ್ಲ. ಆರಿಸಿಕೊಂಡ ದಾರಿಯ ಸ್ಪಷ್ಟತೆಯಿಲ್ಲದ ಆತಂಕ ಜ್ವರವಾಗಿ ಸುಡುತ್ತಿತ್ತು. ಅಭ್ಯಾಸವಿಲ್ಲದ ದಿನಚರಿ ದೇಹಕ್ಕೂ ಇರುಸುಮುರುಸಾದ ಜಡತ್ವ. ಮಾತು ಬೇಡವಾಗಿತ್ತು. ಊರವರೆಲ್ಲ ಬಂದು ದೂರ ನಿಂತು ನೋಡಿಹೋಗುತ್ತಿದ್ದರು. ನನ್ನ ದರ್ಶನಕ್ಕಾಗಿ, ಪಾದಸ್ಪರ್ಶಕ್ಕಾಗಿ ಭಯಭಕ್ತಿಯಿಂದ ಕಾಯುತ್ತಿದ್ದ ಇದೇ ಹಿಂಡು ಇದೀಗ ಅಸ್ಪೃಶ್ಯನಂತೆ, ತಪ್ಪಿಸಿಕೊಂಡುಬಂದ ಪ್ರಾಣಿಯಂತೆ ನೋಡುತ್ತ ನಿಂತಿತ್ತು.’ ‘ಏಳಿ ಸ್ವಾಮಿ. ನಮ್ಮ ಮನೆಗೆ ಹೋಗೋಣ.’ ಜನರ ಬೀಡನ್ನು ಸರಿಸಿ ಎದುರುನಿಂತು ಕರೆದವಳು ಮಹಿಳೆಯಾಗಿದ್ದಳು. ಗುರುತು ಸಿಗಲಿಲ್ಲ. ಅಡ್ಡಮುಖ ಹಾಕಿದ್ದೆ. ‘ಚಿಂತೆ ಬೇಡ. ನಾನು ಸಂಸಾರಸ್ಥರ ಮನೆಯವಳೇ. ಚ್ಯುತಿ ಬಾರದು. ಬನ್ನಿ’ ಎಂದವಳನ್ನ ತತ್ತರಿಸುವ ಹೆಜ್ಜೆಗಳನ್ನಿಡುತ್ತಾ ಹಿಂಬಾಲಿಸಿದ್ದೆ. ಗುಂಪು ನಮ್ಮನ್ನು ಹಿಂಬಾಲಿಸಿತ್ತು. ಮುಂಬಾಗಿಲು ತೆರೆದೇ ಇತ್ತು. ಚಾಪೆ ಬಿಡಿಸಿದವಳು ಕುಳಿತುಕೊಳ್ಳಲು ಹೇಳಿ ಒಳಗಿನಿಂದ ನೀರಿನ ಚೊಂಬು ಹಿಡಿದು ಬಂದಿದ್ದಳು. ಕಾಲಿಗೋ ಕುಡಿಯಲೋ ಯೋಚಿಸಲೂ ಇಲ್ಲ. ಇಡೀ ತಂಬುಗೆಯನ್ನೆತ್ತಿ ಗಟಗಟನೇ ಕುಡಿದಿದ್ದೆ. ಅಷ್ಟುಹೊತ್ತಿಗೆ ಅವಳ ಅಪ್ಪ-ಅಮ್ಮ ಸಂಸಾರ ನಿಂತಿತ್ತು. ಅವಳ ತಂದೆ ಭೂತದರ್ಶನವಾದಂತೆ ಹಿಮ್ಮೆಟ್ಟಿದ್ದರು. ‘ಅಪ್ಪಯ್ಯ ಏನಾಗಿದೆಯೋ ನನಗೂ ಗೊತ್ತಿಲ್ಲ. ಏನಾದರೂ ಆಗಿರಲಿ. ಅನಾರೋಗ್ಯದಿಂದ ನರಳುತ್ತಿರುವಂತಿದೆ. ಮನೆಯ ಹಿಂದಿನ ಆ ಪುಟ್ಟ ಕೋಣೆಯಲ್ಲಿ ಒಂದಿಷ್ಟು ದಿನ ಉಳಿದುಕೊಳ್ಳಲು ಬಿಡು. ವಿಷಯ ತಿಳಿದಮೇಲೆ ಮುಂದೇನು ಎಂದು ನೋಡೋಣ’ ಎಂದವಳನ್ನು ಎಳೆದುಕೊಂಡು ಒಳಗೆ ಹೊಕ್ಕಿದ್ದರು.

ಅವರನ್ನು ಕಂಡತಕ್ಷಣ ಗುರುತು ಹತ್ತಿತ್ತು. ತಮ್ಮ ಮಗಳನ್ನು ಮದುವೆಯಾಗಲು ಒಪ್ಪಿಸುವಂತೆ ಮಗಳಿಗೆ ಬುದ್ಧಿಹೇಳಿಸಲು ಹಿರಿಯ ಶ್ರೀಗಳ ಬಳಿ ಬಂದಿದ್ದರು. ಆದರೆ, ಆ ಹೆಣ್ಣುಮಗಳು ‘ಸಂಬಂಧವು ಬಂಧನದಿಂದ ನಿರ್ಣಯವಾಗುವುದಾದರೆ ಅರ್ಥವಿಲ್ಲ. ನನಗೆ ನಂಬುಗೆಯಿಲ್ಲ. ಬದುಕಿಗೆ, ಭಾವಕ್ಕೆ ಪ್ರಾಮಾಣಿಕವಾಗಿ ನಡೆದುಕೊಳ್ಳುವವರು ಸಿಕ್ಕರೆ ಖಂಡಿತ ಮದುವೆಗೆ ಸಿದ್ಧಳಿದ್ದೇನೆ’ ಎಂದು ಖಚಿತವಾಗಿ ನುಡಿದಿದ್ದಳು. ಅವಳ ಮಾತಿನ ವೈಖರಿಗೆ ‘ಎಲ್ಲರಂತಲ್ಲ ಇವಳು’ ಅಂತ ಅನಿಸಿದ್ದರೂ ಮುಂದೆ ಮರೆತುಹೋಗಿತ್ತು. ಯೋಚಿಸುತ್ತಲೇ ಉರುಳಿಬಿದ್ದಿದ್ದೆ.

ಜ್ವರದಿಂದ ಚೇತರಿಸಿಕೊಂಡು ಏಳುವವರೆಗೂ ಏನು ಎತ್ತ ಕೇಳದೇ ಆರೈಕೆ ನಡೆಸಿದ್ದರು. ಬಹುಶಃ ಊರೆಲ್ಲ ಹರಡಿದ ಸುದ್ದಿ ಅವರನ್ನೂ ತಲುಪಿತ್ತೆನ್ನಿಸುತ್ತದೆ. ಚೇತರಿಸಿಕೊಂಡವನಿಗೆ ಮುಂದೇನೆಂಬ ಗೊತ್ತು ಗುರಿ ಇರಲಿಲ್ಲ. ಮತ್ತೆ ಮನೆಗೆ ಮರಳಿ ಅಮ್ಮನ ಮಡಿಲಲ್ಲಿ ಮಲಗಿಬಿಡಬೇಕೆನ್ನುವ ಆಸೆ. ಆದರೆ ಅಲ್ಲಿನ ಬಗ್ಗೆ ಅರೈಕೆ ಮಾಡಲು ಜೊತೆಗಿದ್ದ ಹುಡುಗ ಹೇಳಿದ್ದ. ಆ ಬಾಗಿಲೂ ಮುಚ್ಚಿತ್ತು.

ಮೈಯಲ್ಲಿ ಶಕ್ತಿ ತುಂಬಿತ್ತು. ಇನ್ನು ಹೊರಬಿದ್ದು ದಾರಿ ಹುಡುಕುವ ಯೋಚನೆಯಲ್ಲಿದ್ದೆ. ಆ ದಿನ ಕೋಣೆಗೆ ಬಂದಿದ್ದ ಯಜಮಾನರು ‘ಹೊರಗೆ ನೂರೆಂಟು ಮಾತು ಕೇಳಿಬರ‍್ತಿದೆ, ಆದದ್ದಾದರೂ ಏನೆಂದು ಕೇಳಬಹುದಾ?’ ನನಗೂ ಹೇಳುವ ಅಗತ್ಯವಿತ್ತು. ಮನದ ಊತವನ್ನಿಳಿಸಿಕೊಳ್ಳುವುದಿತ್ತು. ಸಾದ್ಯಂತವಾಗಿ ಬಿಚ್ಚಿಟ್ಟಿದ್ದೆ. ‘ಮುಂದೇನು’ ಎಂಬ ಪ್ರಶ್ನೆಗೆ ನನಗೆ ಗೊತ್ತಿದ್ದ ಒಂದೇ ಉತ್ತರ ‘ಗೊತ್ತಿಲ್ಲ’ ಎನ್ನುವುದಾಗಿತ್ತು. ಅವರು ಮಾತನಾಡದೇ ಹೊರಟುಹೋಗಿದ್ದರು. ನಾನೂ ಹೊರಡುವ ತಯಾರಿಯಲ್ಲಿದ್ದೆ. ತಯಾರಿಯೇನು ಬಂತು. ಉಟ್ಟ ಬಟ್ಟೆಯನ್ನು ಬಿಟ್ಟರೆ ಬೇರೇನೂ ಇಲ್ಲದವನ ತಯಾರಿ.

ಮರುದಿನ ಹೇಳಿಹೋಗಲು ಹೊರಬೀಳುತ್ತಿದ್ದಂತೆ ಅವಳು ಎದುರಾಗಿದ್ದಳು. ‘ನೀವು ನಮ್ಮ ತಂದೆಯವರ ಬಳಿ ನನ್ನನ್ನು ಮದುವೆ ಮಾಡಿಕೊಡುವಂತೆ ಕೇಳಬೇಕು. ಇಂದು ಹೊರಡಬೇಡಿ. ಯೋಚಿಸಿ ಅವಕಾಶವಿದೆ’ ಎಂದು ಸರಿದುಹೊಗಿದ್ದಳು. ಗಾಬರಿಬಿದ್ದಿದ್ದೆ. ಹಿಂದುಮುಂದಿಲ್ಲದ ಪ್ರಸ್ತಾಪ. ಹೆಜ್ಜೆ ತಡವರಿಸಿ. ಮಠವನ್ನು ಬಿಟ್ಟನಂತರ ಬಹುತೇಕ ಮರೆಯಾಗಿದ್ದ ಆ ಮೋಹಭಾವ ಮೂಲೆಯಲ್ಲೆಲ್ಲೋ ಏಳುವ ಸೂಚನೆ ಕೊಟ್ಟಿತ್ತು. ಏನೆಂದರೆ ಏನೂ ಹೊಳೆಯುತ್ತಿರಲಿಲ್ಲ. ಹೊರಡುವುದೇ ಬಿಡುಗಡೆಯೆಂಬ ನಿಶ್ಚಯಕ್ಕೆ ಬಂದಾಗ ಮತ್ತೆ ಬಂದಿದ್ದವಳು, ‘ನಿಶ್ಚಯವೇನು?’ ಕೇಳಿದ್ದಳು. ‘ನನ್ನ ದಾರಿಯೇ ನನಗೆ ನಿಶ್ಚಿತವಿಲ್ಲ’ ಎಂದಿದ್ದೆ. ‘ಮಕ್ಕಳ ಸಖ್ಯ ಬೇಕೆಂದರೆ ಮದುವೆಯೂ ಬೇಕಲ್ಲ?’ ಮರುತ್ತರಕ್ಕೆ ಕಾಯದವಳು ‘ಮದುವೆಯೆನ್ನುವುದು ಪ್ರಾಮಾಣಿಕತೆ ಕಳೆದ ಬಂಧನ ಮಾತ್ರವಾಗುತ್ತಿರುವುದರಿಂದ ಹಿಂದೆ ಸರಿದಿದ್ದೆ.

ಆತ್ಮಸಾಕ್ಷಿಗೆ ಕೊರಳೊಡ್ಡಿ ವ್ಯವಸ್ಥೆಯನ್ನೇ ಮೀರಿ ನಿಂತ ನಿಮ್ಮ ಬಗ್ಗೆ ನಂಬಿಕೆಯಿದೆ. ನಾನೂ ಓದಿ ಕೆಲಸದಲ್ಲಿರುವೆ. ಸದ್ಯಕ್ಕೆ ಬದುಕನ್ನು ಸಾಗಿಸಬಹುದು. ಮುಂದಿನದು ನಿಮಗೆ ಬಿಟ್ಟಿದ್ದು.’ ಒಂದರ ಹಿಂದೊಂದರಂತೆ ಘಟಿಸುತ್ತಿರುವ ಸಂಗತಿಗಳಿಂದ ಮನಸು ಯೋಚಿಸುವುದನ್ನೇ ನಿಲ್ಲಿಸಿತ್ತು. ಬಹುಶಃ ತನ್ನ ಅಪ್ಪನ ಬಳಿ ಮಾತನಾಡಿದ್ದಳೆನಿಸುತ್ತದೆ. ಅವರೇ ಕೇಳಿದ್ದರು. ಸಮಯವನ್ನೂ ಕೊಟ್ಟಿದ್ದರು. ಕಟ್ಟಿಕೊಳ್ಳಬೇಕೆಂದಿರುವ ಬದುಕು ಅರಸಿ ಬಂದಿತ್ತು.

ಆತ್ಮಸಾಕ್ಷಿಯೊಂದಿಗೆ ಬದುಕಬಯಸಿದ ನನಗೆ ತೊರೆದಿದ್ದರ ಬಗ್ಗೆ ಪಶ್ಚಾತ್ತಾಪವಿಲ್ಲ. ಅವ್ಯವಸ್ಥೆಯ ನಿರ್ಮಾಣಕ್ಕೆ ಕಾರಣವಾದ ಬಗ್ಗೆ ಬೇಸರವಿದೆ. ಅಪ್ಪ ಅಮ್ಮನನ್ನು ಒಂದೇ ಒಂದು ಬಾರಿ ಕಂಡು ಹೇಳಿಕೊಳ್ಳುವ ಅವಕಾಶಕ್ಕಾಗಿ ಕಾದಿದ್ದೇನೆ.’ ಡೈರಿ ಮುಗಿದಿತ್ತು. ಓದಿಸಬೇಕಾದವರು ಇನ್ನೂ ಇಬ್ಬರಿದ್ದರು. ಅಪ್ಪಯ್ಯನ ಕೈನಲ್ಲಿಟ್ಟು ‘ಅಪ್ಪಯ್ಯ ಆಪದ್ಧರ್ಮದಲ್ಲಿಯಾದರೂ ಒಂದೇ ಒಂದು ಅವಕಾಶವಿದ್ದರೆ ಅಮ್ಮನಿಗಾಗಿಯಾದರೂ ಅದನ್ನ ಕೊಡುತ್ತೀಯಾ’ ಕೇಳಿದ್ದೆ.

ಬೆಳಿಗ್ಗೆ ದೇವರೆದುರು ಅಮ್ಮನ ಕೈಹಿಡಿದ ಅಪ್ಪಯ್ಯ ‘ನಿನ್ನ ಮಗ ಭ್ರಷ್ಟನಾಗಲಿಲ್ಲ. ಮೋಸದ ಬದುಕ ಹೊದೆಯಲಿಲ್ಲ. ಹಿರಿಯ ಶ್ರೀಗಳು ಎಷ್ಟೇ ತಿಳಿಹೇಳಿದ್ದರೂ ನಾನೇ ಹಳವಂಡದಲ್ಲಿದ್ದೆ. ಆಪದ್ಧರ್ಮವಿದೆಯಲ್ಲ. ಅದನ್ನೂ ಮರೆತಿದ್ದೆ. ಹುಚ್ಚು ತೊಲಗ್ತು. ಕ್ಷಮಿಸ್ತೀಯಾ’ ಕೇಳುತ್ತಿದ್ದರು. ‘ಬರ‍್ತೀರಾ ಕರ್ಕೊಂಡ್‌ ಹೋಗ್ತೀನಿ’ ಅಂದವಳತ್ತ ನಕ್ಕ ಅಮ್ಮ ದೀಪವನ್ನು ಬೆಳಗಿದ್ದರು.

ಶೈಲಜಾ ಗೊರ‍್ನಮನೆ ಪರಿಚಯ:

ಹದಿನೆಂಟು ವರ್ಷಗಳಿಂದ ಶಿರಸಿಯಲ್ಲಿ ದೃಶ್ಯಮಾಧ್ಯಮದಲ್ಲಿ ಕೆಲಸ. ಇದೀಗ ‘ಟಿವಿಟುಡೇ’ ನೆಟ್‌ವರ್ಕ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಪತ್ರಿಕೋದ್ಯಮಕ್ಕಾಗಿ ‘ಡಿವಿಜಿ’ ರಾಜ್ಯ ಪ್ರಶಸ್ತಿ ಬಂದಿದೆ. ‘ತಾಳಮದ್ದಲೆಯಲ್ಲಿ ಪುರಾಣಗಳ ಪುನಾಸೃಷ್ಟಿ’ ಕುರಿತು ಸಂಶೋಧನಾ ಪ್ರಬಂಧ ಬರೆದಿದ್ದಾರೆ. ನದಿಮೂಲ ಅಧ್ಯಯನ, ದೇವರಕಾಡುಗಳ ಅಧ್ಯಯನಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಬುಡಕಟ್ಟು ಜನಾಂಗಗಳ ಕುರಿತು ಸಾಕ್ಷ್ಯಚಿತ್ರ ನಿರ್ಮಿಸಿದ್ದಾರೆ.

ಓದು, ಪ್ರವಾಸ, ಬರೆಯುವುದು ಅವರ ಆಸಕ್ತಿ.

‘ವನಸ್ತ್ರೀ’ ಎಂಬ ಮಹಿಳಾ ತಂಡದೊಂದಿಗೆ ಮಲೆನಾಡಿನ ಪರಂಪರೆಯ ಕೈತೋಟ, ಬೀಜ ಸಂರಕ್ಷಣೆಯಲ್ಲಿ ತೊಡಗಿಕೊಂಡಿದ್ದಾರೆ. ಇದಕ್ಕಾಗಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಂದ ‘ನಾರಿಸಮ್ಮಾನ್ ಪುರಸ್ಕಾರ್’ಗೆ ಭಾಜನರಾಗಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.