ಸೋಮವಾರ, ಮೇ 17, 2021
23 °C
ಇಂದು ಬುದ್ಧಪೂರ್ಣಿಮೆ

ಬುದ್ಧ: ವೈಶಾಖದ ಬೆಳದಿಂಗಳು

ಭಾನುಶ್ರೀ Updated:

ಅಕ್ಷರ ಗಾತ್ರ : | |

Prajavani

ಮನುಷ್ಯನಿಗಿರುವ ದೊಡ್ಡ ಸಮಸ್ಯೆ ಎಂದರೆ ದುಃಖ. ಅದನ್ನು ಹೋಗಲಾಡಿಸಿಕೊಳ್ಳುವುದು ಹೇಗೆ? ದುಃಖವನ್ನು ನಿವಾರಿಸಿಕೊಳ್ಳುವ ಮಾರ್ಗವನ್ನು ಹೇಳಿದವನೇ ಬುದ್ಧ.

‘ಬುದ್ಧ’ ಎಂದರೆ ಅರಿವನ್ನು ಸಂಪಾದಿಸಿದವನು ಎಂದು ಅರ್ಥ. ಬುದ್ಧನ ಮೊದಲ ಹೆಸರು ಸಿದ್ಧಾರ್ಥ; ಗೌತಮ ಸಿದ್ಧಾರ್ಥ ಎಂದೂ ಕರೆಯುವುದುಂಟು. ಇವನ ತಂದೆ ಶುದ್ಧೋದನ; ತಾಯಿ ಮಾಯಾದೇವಿ. ಅವನು ಹುಟ್ಟಿದ ಕೂಡಲೇ ಮಹಾಪುರುಷಲಕ್ಷಣಗಳಿಂದ ಕಂಗೊಳಿಸಿದ; ತಾವರೆಯ ಹೂವಿನ ಮೇಲೆ ಏಳು ಹೆಜ್ಜೆಗಳನ್ನಿಟ್ಟು ನಡೆದನಂತೆ. ಸಿದ್ಧಾರ್ಥನು ಲೋಕೋತ್ತರ ಮಹಾಪುರುಷನಾಗುತ್ತಾನೆ; ವೈರಾಗ್ಯಸಂಪನ್ನನಾಗುತ್ತಾನೆ – ಎಂದು ಜ್ಯೋತಿಷಿಗಳು ಭವಿಷ್ಯ ನುಡಿದರು. ಲೋಕದಲ್ಲಿರುವ ಸಂಕಟಗಳನ್ನು ನೋಡಿದರೆ ತಾನೆ ಜೀವನದಲ್ಲಿ ಜುಗುಪ್ಸೆ ಉಂಟಾಗುವುದು? ವೈರಾಗ್ಯ ಮೂಡುವುದು? ಲೋಕದ ಸಂಪರ್ಕವೇ ಇಲ್ಲದೆ, ಅರಮನೆಯ ಸುಖದಲ್ಲಿಯೇ ಮಗನನ್ನು ಬೆಳೆಸಿದರೆ ಹೇಗೆ? – ಹೀಗೆಂದು ಯೋಚಿಸಿದ ಶುದ್ಧೋದನ ಸಿದ್ದಾರ್ಥನನ್ನು ಅಂತಃಪುರದಿಂದ ಹೊರಗೇ ಕಳುಹಿಸಲಿಲ್ಲ. ಚಿಕ್ಕ ವಯಸ್ಸಿಗೆ ಅವನಿಗೆ ಮದುವೆಯನ್ನೂ ಮಾಡಿದ.

ಆದರೆ ಸಿದ್ಧಾರ್ಥನಿಗೆ ಲೋಕದ ಪರಿಚಯವಾಯಿತು; ಅದರ ಪರಿಣಾಮವಾಗಿ ಅವನು ಮುಂದೆ ಲೋಕೋತ್ತರನಾದ. ಅವನಿಗೆ ಇಪ್ಪತ್ತೊಂಬತ್ತನೆಯ ವರ್ಷ ನಡೆಯುತ್ತಿದ್ದಾಗ ಲೋಕದ ರೋಗ–ರುಜಿನಗಳು, ಮುಪ್ಪು–ಸಾವುಗಳು, ಅಡ್ಡಿ–ಆತಂಕಗಳು ಪರಿಚಯವಾದವು; ಅವುಗಳ ಮೂಲವನ್ನು ಕುರಿತು ಆಲೋಚಿಸತೊಡಗಿದೆ. ಜೀವನದ ಅರ್ಥವನ್ನು ತಿಳಿದುಕೊಳ್ಳಲು ಮನೆಯಿಂದ ಹೊರಗಾಗಿ ‘ಮನೆಯಿಲ್ಲದವ’ನಾದ. ‘ಮನೆಯಲ್ಲಿರುವುದು ಅಡ್ಡಿ–ಆತಂಕ; ಕೊಳೆಯ ಬೀಡು ಮನೆ; ಹೊರಗಾಗುವುದು ಬಿಡುಗಡೆ – ಹೀಗೆಂದುಕೊಂಡು – ಹೊರಗಾದೆ’ ಎಂದು ಅವನೇ ಹೇಳಿಕೊಂಡನಂತೆ.

ಮುಂದಿನ ವಿವರಗಳನ್ನು ಸಾ. ಕೃ. ರಾಮಚಂದ್ರರಾವ್‌ ಅವರು ಸೊಗಸಾಗಿ ನಿರೂಪಿಸಿದ್ದಾರೆ, ಹೀಗೆ:

‘ಹೀಗೆ ಹೊರಟವನು ಆರಾಢ–ಕಲಾಮ ಮತ್ತು ರುದ್ರಕ–ರಾಮಪುತ್ರ ಎಂಬ ಗುರುಗಳ ಬಳಿ ಯೋಗವನ್ನು ಅಭ್ಯಾಸಮಾಡಿ, ನೆಮ್ಮದಿ ಕಾಣದೆ, ಉರುವಿಲ್ವವೆಂಬ ಕಾಡಿಗೆ ನಡೆದು ಅಲ್ಲಿ ನೈರಂಜನಾನದಿಯ ದಡದ ಮೇಲೆ ಆರುವರ್ಷಗಳ ಕಾಲ ಕಠಿಣತಪಸ್ಸನ್ನು ಮಾಡಿದ. ಇದೂ ದಾರಿಗಾಣಿಸಲಿಲ್ಲ. ಕಡೆಗೆ ಧ್ಯಾನಮಾರ್ಗವನ್ನು ಹಿಡಿದ. ಅರಳಿಮರವೊಂದರ ಕೆಳಗೆ ಕುಳಿತು, ‘ಸಂಬೋಧಿಯನ್ನು ಪಡೆಯದೆ ಈ ಜಾಗದಿಂದ ಮೇಲೇಳುವುದಿಲ್ಲ. ನನ್ನ ಮಾಂಸವೆಲ್ಲ ಕರಗಿ, ಮೂಳೆಗಳು ಕೆಳಗುರುಳಿ, ನರಗಳು ಒಣಗಿ, ಚರ್ಮ ಒಣಸಿಪ್ಪೆಯಂತೆ ಮುದುಡಿಕೊಂಡರೂ ಚಿಂತೆಯಿಲ್ಲ. ನನ್ನ ಪ್ರಯತ್ನವನ್ನು ಬಿಡುವುದಿಲ್ಲ’ ಎಂದು ದೃಢ ಸಂಕಲ್ಪ ಮಾಡಿದ.

‘ಸಂಕಲ್ಪದ ದಾರ್ಢ್ಯ ಮತ್ತು ಧ್ಯಾನದ ಸಮರ್ಥ್ಯ – ಎರಡರ ಫಲವಾಗಿ ಅಂತಃಕರಣದ ಗೋಜು–ಗೊಂದಲಗಳೆಲ್ಲವೂ ಹರಿದು ಸಂಬೋಧಿ ಒದಗಿತು. ಸಿದ್ಧಾರ್ಥನಾಗಿದ್ದವನು ಬುದ್ಧನಾದ. ಅಲ್ಲಿಂದ ಮುಂದೆ ಅವನನ್ನು ‘ಸಮ್ಯಕ್‌ ಸಂಬುದ್ಧ’ನೆಂದು ಕರೆಯತೊಡಗಿದರು. ಆಗ ಅವನಿಗೆ ಮೂವತ್ತೈದರ ಪ್ರಾಯ.’

ಬುದ್ಧ ತಾನು ಪಡೆದ ಅರಿವನ್ನು ಲೋಕಕ್ಕೆ ಹಂಚಿದ. ಅವನ ಎಂಬತ್ತನೆಯ ವಯಸ್ಸಿನಲ್ಲಿ ಶರೀರವನ್ನು ತ್ಯಜಿಸಿದ. ಅವನು ಸುಮಾತು ನಲವತ್ತೈದು ವರ್ಷಗಳು ಧರ್ಮವನ್ನು ಬೋಧಿಸುತ್ತ, ಅರಿವಿನ ಬೆಳಕಾದ.

ಬುದ್ಧ ಕಂಡುಕೊಂಡ ಅರಿವನ್ನು ‘ಆರ್ಯಸತ್ಯ’ಗಳು, ‘ಆರ್ಯಮಾರ್ಗ’ ಎಂದು ಕರೆಯುವುದುಂಟು; ಇವು ನಾಲ್ಕು ಎಂದು ಎಣಿಕೆ. ಲೋಕದಲ್ಲಿ ದುಃಖವಿದೆ; ಇದು ಮೊದಲನೆಯ ಸತ್ಯ. ಕಳೆದುಕೊಳ್ಳಬೇಕಾದ ದುಃಖಗಳ ಸಮೂಹವೇ ಇದೆ – ಆಸೆ, ಅಭಿಮಾನ, ಮೋಹ ಮುಂತಾದವು; ಇದು ಎರಡನೆಯ ಸತ್ಯ. ಈ ದುಃಖಗಳನ್ನು ಕಳೆದುಕೊಳ್ಳುವ ಉಪಾಯವೂ ಇದೆ; ಇದೇ ಮೂರನೆಯ ಸತ್ಯ. ದುಃಖದಿಂದ ಪಾರಾಗುವ ದಾರಿಯೇ ನಾಲ್ಕನೆಯ ಸತ್ಯ. 

ಮನುಷ್ಯನು ದುಃಖದಿಂದ ಪಾರಾಗಲು ದಾರಿಗೆ ಎಂಟು ಪಥಗಳು. ಇದೇ ಆರ್ಯಅಷ್ಟಾಂಗಿಕಾಮಾರ್ಗ.

ಬುದ್ಧನ ಜನನವಾದದ್ದು ವೈಶಾಖ ಶುಕ್ಲ ಹುಣ್ಣಿಮೆಯಂದು; ಅವನಿಗೆ ಅರಿವು, ಎಂದರೆ ಬುದ್ಧತ್ವ – ಬೋಧಿ – ಒದಗಿದ್ದು ವೈಶಾಖ ಶುಕ್ಲ ಹುಣ್ಣಿಮೆಯಂದು; ಅವನ ಪರಿನಿರ್ವಾಣ, ಎಂದರೆ ಶರೀರತ್ಯಾಗವಾದದ್ದು ವೈಶಾಖ ಶುಕ್ಲ ಹುಣ್ಣಿಮೆಯಂದು. ಹೀಗಾಗಿ ವೈಶಾಖದ ಹುಣ್ಣಿಮೆಗೆ ವಿಶೇಷ ಮಹತ್ವವಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.