ಚಿನ್ನದ ನಾಣ್ಯ ನೀಡುವ ಶಂಖ

7

ಚಿನ್ನದ ನಾಣ್ಯ ನೀಡುವ ಶಂಖ

Published:
Updated:
Deccan Herald

ಬಹಳ ವರ್ಷಗಳ ಹಿಂದೆ ಕಾಶಿ ಸಮೀಪದ ಚಿಕ್ಕ ಗ್ರಾಮದಲ್ಲಿ ರಾಮು ಎಂಬ ವ್ಯಕ್ತಿ ವಾಸಿಸುತ್ತಿದ್ದ.ಅವನು ತುಂಬಾ ಬಡತನದ ಜೀವನವನ್ನು ನಡೆಸುತ್ತಿದ್ದ. ಅವನಿಗೆ ಮದುವೆಯೂ ಆಗಿತ್ತು. ಕೆಲಸವೂ ಇಲ್ಲದೆ ತನ್ನ ಸಂಸಾರವನ್ನು ನಡೆಸಲು ಭಿಕ್ಷೆಯನ್ನು ಬೇಡಿ ಅದರಿಂದ ಜೀವನ ನಡೆಸುತ್ತಿದ್ದ.

ಆದರೆ ಕೆಲವೊಮ್ಮೆ ಭಿಕ್ಷೆ ಬೇಡಿದರೂ ಹೊಟ್ಟೆಗೆ ಸಾಕಾಗದೆ ಉಪವಾಸವಿರಬೇಕಾಗುತ್ತಿತ್ತು. ಇದರಿಂದ ತುಂಬಾ ನೊಂದುಹೋಗಿದ್ದ. ಗಂಡನ ಪರಿಸ್ಥಿತಿಯನ್ನು ಅರಿತ ಹೆಂಡತಿ ಏನಾದರೂ ಪರಿಹಾರ ಕಂಡು ಹಿಡಿದು ಈ ಭಿಕ್ಷೆ ಬೇಡುವುದನ್ನು ನಿಲ್ಲಿಸಿ ಜೀವನ ಸಾಗಿಸಬೇಕೆಂದು ಕೊಂಡಳು.

ಒಂದು ದಿನ ರಾಮುವಿನ ಹೆಂಡತಿ ‘ನಾವು ಭಿಕ್ಷೆ ಬೇಡಿದರೂ ದಿನಕ್ಕಾಗುವಷ್ಟು ಊಟ ಸಿಗುತ್ತಿಲ್ಲ. ಕಾಶಿ ವಿಶ್ವನಾಥನ ಬಳಿ ಒಮ್ಮೆ ದರ್ಶನ ಪಡೆದು ಬನ್ನಿ. ವಿಶ್ವನಾಥನ ಕೃಪೆಯಿಂದ ಮುಂದೆ ನಮ್ಮ ಜೀವನ ಒಳ್ಳೆಯದಾಗಬಹುದು’ ಎಂದಳು.ಹೆಂಡತಿಯ ಮಾತಿಗೆ ಒಪ್ಪಿಗೆ ಸೂಚಿಸಿ ವಿಶ್ವನಾಥನ ದರ್ಶನ ಪಡೆಯಲು ಹೋರಾಟ ರಾಮು.

ವಿಶ್ವನಾಥನ ದರ್ಶನ ಪಡೆದು ತನ್ನ ಗ್ರಾಮಕ್ಕೆ ವಾಪಸ್ಸು ಬರುವಾಗ ಅವನಿಗೊಬ್ಬ ಸನ್ಯಾಸಿ ದಾರಿಯಲ್ಲಿ ಸಿಕ್ಕಿದನು. ಇಬ್ಬರೂ ತಮ್ಮತಮ್ಮ ಪರಿಚಯ ಮಾಡಿಕೊಂಡರು.ರಾಮು ತನ್ನ ಕಷ್ಟವನ್ನು ಸನ್ಯಾಸಿಯಲ್ಲಿ ಹೇಳಿ ಕೊಂಡ. ಅವನ ಕಷ್ಟವನ್ನು ಕೇಳಿಸಿಕೊಂಡ ಸನ್ಯಾಸಿ ಶಂಖವೊಂದನ್ನು ರಾಮುವಿಗೆ ಕೊಟ್ಟನು. ಶಂಖವನ್ನು ತೆಗೆದುಕೊಂಡ ರಾಮು ‘ಇದರಿಂದ ನನಗೇನು ಲಾಭವಿದೆ’ ಎಂದು ಸನ್ಯಾಸಿಯಲ್ಲಿ ಕೇಳಿದನು.

ಅದಕ್ಕೆ ಉತ್ತರವಾಗಿ ಸನ್ಯಾಸಿ ‘ನೋಡು ರಾಮು, ಇದು ಸಾಮಾನ್ಯವಾದ ಶಂಖವಲ್ಲ. ಈ ಶಂಖವು ನಿನ್ನ ಕಷ್ಟವನ್ನು ದೂರ ಮಾಡುತ್ತದೆ. ದಿನಕ್ಕೊಂದು ಚಿನ್ನದ ನಾಣ್ಯವನ್ನು ಆ ಶಂಖ ನಿನಗೆ ಕೊಡುತ್ತದೆ. ಇದರಿಂದ ಜೀವನ ಪೂರ್ತಿ ಸುಖವಾಗಿರಬಹುದು’ ಎಂದನು.
ಸನ್ಯಾಸಿಯ ಮಾತುಗಳಿಂದ ರಾಮುವಿಗೆ ತುಂಬಾ ಸಂತೋಷವಾಯಿತು. ಹೆಂಡತಿಯ ಮಾತುಗಳನ್ನು ಕೇಳಿ ವಿಶ್ವನಾಥನ ದರ್ಶನ ಪಡೆಯಲು ಕಾಶಿಗೆ ಬಂದಿದ್ದು ಒಳ್ಳೆಯದಾಯಿತೆಂದುಕೊಂಡು ಊರಿನ ಕಡೆಗೆ ಹೆಜ್ಜೆ ಹಾಕಿದನು.

ದಾರಿಯಲ್ಲಿ ಬರುವಾಗ ಕತ್ತಲಾಗುತ್ತಾ ಬಂದಿತು. ಆ ಊರಿನ ಮಧ್ಯದಲ್ಲಿ ಬರುವ ಕಾಡನ್ನು ದಾಟಿ ತನ್ನ ಊರಿಗೆ ಪಯಣ ಬೆಳಸಬೇಕಾಗಿತ್ತು. ಹೀಗಾಗಿ ರಾಮುವಿಗೆ ಬೇರೆ ದಾರಿ ತೋಚದೆ ಅಲ್ಲಿಯೇ ಇದ್ದ ವ್ಯಾಪಾರಿಯ ಮನೆಯಲ್ಲಿ ರಾತ್ರಿಯನ್ನು ಕಳೆಯಲು ತೀರ್ಮಾನ ಮಾಡಿದನು. ವ್ಯಾಪಾರಿಯೂ ರಾಮುವಿನ ಬಗ್ಗೆ ವಿಚಾರಿಸಿ ಅವನಿಗೆ ತನ್ನ ಮನೆಯಲ್ಲಿ ಊಟದ ವ್ಯವಸ್ಥೆ ಮಾಡಿ,ಹಾಲು-ಹಣ್ಣು ಕೊಟ್ಟು ಅತಿಥಿ ಸತ್ಕಾರ ಮಾಡಿದನು. ವ್ಯಾಪಾರಿಯು ರಾಮು ಕಾಶಿಗೆ ಬಂದ ವಿಚಾರದ ಬಗ್ಗೆ ಮತ್ತು ಅವನಲ್ಲಿರುವ ಶಂಖದ ಬಗ್ಗೆ ಎಲ್ಲವನ್ನೂ ತಿಳಿದುಕೊಂಡನು.

ವ್ಯಾಪಾರಿಗೆ ರಾಮುವಿನ ಬಳಿಯಿದ್ದ ಶಂಖದ ಬಗ್ಗೆ ವ್ಯಾಮೋಹ ಉಂಟಾಯಿತು. ಹೇಗಾದರೂ ಮಾಡಿ ಆ ಶಂಖವನ್ನು ತಾನು ಪಡೆದುಕೊಳ್ಳಬೇಕೆಂದು ಕೊಂಡನು. ಆ ಸಂದರ್ಭಕ್ಕಾಗಿ ಕಾಯುತ್ತಾ ಕುಳಿತನು.

ರಾಮು ದಿನವೆಲ್ಲಾ ಸುತ್ತಾಡಿದ ಪರಿಣಾಮ ಕೂಡಲೇ ನಿದ್ದೆಗೆ ಜಾರಿದ. ಇದೇ ಸಂದರ್ಭಕ್ಕೆ ಕಾಯುತ್ತಿದ್ದ ವ್ಯಾಪಾರಿ ರಾಮುವಿನ ಬಳಿಯಿದ್ದ ಶಂಖವನ್ನು ತೆಗೆದುಕೊಂಡು ಆ ಜಾಗದಲ್ಲಿ ಸಾಮಾನ್ಯವಾದ ಶಂಖವನ್ನು ಇಟ್ಟು ತಾನು ನಿದ್ದೆ ಹೋದನು‌.

ರಾಮು ಬೆಳಿಗ್ಗೆ ಎದ್ದು ವ್ಯಾಪಾರಿಗೆ ವಂದನೆಗಳನ್ನು ಸಲ್ಲಿಸಿ, ತನ್ನ ಊರಿಗೆ ಹೊರಟನು. ಮನೆಗೆ ಬಂದು ನಡೆದ ವಿಷಯವನ್ನೆಲ್ಲ ತನ್ನ ಹೆಂಡತಿಗೆ ಹೇಳಿದನು. ಶಂಖದ ಬಗ್ಗೆ ವಿಷಯ ತಿಳಿದ ರಾಮುವಿನ ಹೆಂಡತಿಗೆ ತುಂಬಾ ಸಂತೋಷವಾಯಿತು. ತಾನು ಶಂಖವನ್ನು ಪರೀಕ್ಷೆ ಮಾಡುತ್ತೇನೆಂದು ರಾಮುವಿನ ಕೈಯಲ್ಲಿದ್ದ ಶಂಖವನ್ನು ತೆಗೆದುಕೊಂಡಳು. ಶಂಖವನ್ನು ಬಗ್ಗಿಸಿದಳು. ಆದರೆ ಶಂಖದಿಂದ ಯಾವ ನಾಣ್ಯವೂ ಹೊರಬೀಳಲಿಲ್ಲ. ರಾಮುವಿಗೆ ಇದು ಆ ವ್ಯಾಪಾರಿಯ ಕೆಲಸ. ಅವನು ನಾನು ನಿದ್ದೆ ಹೋದ ಸಂದರ್ಭದಲ್ಲಿ ಶಂಖವನ್ನು ಬದಲಾವಣೆ ಮಾಡಿದ್ದಾನೆಂದು ತನ್ನ ಹೆಂಡತಿಯಲ್ಲಿ ‘ವ್ಯಾಪಾರಿಯ ಬಳಿ ಹೋಗಿ ಆ ಶಂಖವನ್ನು ತೆಗೆದುಕೊಂಡು ಬರಲೇ’ ಎಂದನು.

ರಾಮುವಿನ ಹೆಂಡತಿ ತುಂಬಾ ಬುದ್ದಿವಂತ ಹೆಂಗಸು. ಅವಳು ರಾಮುವಿಗೆ ‘ಈಗಲೇ ಹೋಗಬೇಡಿ, ಇನ್ನೆರಡು ದಿನ ಬಿಟ್ಟು ವ್ಯಾಪಾರಿ ಬಳಿಗೆ ಹೋಗಿ. ಈ ಶಂಖವನ್ನು ಜೊತೆಗೆ ತೆಗೆದುಕೊಂಡು ಹೋಗಿ. ಶಂಖವನ್ನು ತೋರಿಸಿ ವ್ಯಾಪಾರಿಗೆ ಹೇಳಿ, ಪುನಃ ಈ ಶಂಖವನ್ನು ಕೊಟ್ಟ ಸನ್ಯಾಸಿ ನನಗೆ ಸಿಕ್ಕಿದ, ಇದು ಮೊದಲು ಕೊಟ್ಟ ಶಂಖಕ್ಕಿಂತ ಜಾಸ್ತಿ ನಾಣ್ಯಗಳನ್ನು ಕೊಡುತ್ತದೆ. ಈಗ ಸನ್ಯಾಸಿ ಕೊಟ್ಟ ಶಂಖ ದಿನಕ್ಕೆ ಎರಡು ನಾಣ್ಯಗಳನ್ನು ಕೊಡುತ್ತದೆ ಎಂದು ಹೇಳಿ. ಆಗ ವ್ಯಾಪಾರಿ ಈ ಶಂಖವನ್ನು ತನಗೆ ಕೊಡು ಎಂದು ಕೇಳುತ್ತಾನೆ. ಆಗ ನೀವು ಅವನು ತೆಗೆದುಕೊಂಡ ಶಂಖವನ್ನು ಕೇಳಿ ಪಡೆದುಕೊಳ್ಳಿ’ ಎಂದು ಗಂಡನಿಗೆ ಉಪಾಯ ಹೇಳಿ ಕೊಟ್ಟಳು. ಹೆಂಡತಿಯ ಮಾತಿನಂತೆ ಎರಡು ದಿನಗಳ ನಂತರ ವ್ಯಾಪಾರಿಯ ಮನೆಗೆ ರಾಮು ಹೋದನು. ಹೆಂಡತಿ ಹೇಳಿ ಕೊಟ್ಟ ಮಾತುಗಳನ್ನು ವ್ಯಾಪಾರಿ ಮುಂದೆ ಹೇಳಿದನು.

ವ್ಯಾಪಾರಿಯು ರಾಮುವಿನ ಕೈಯಲ್ಲಿದ್ದ ಶಂಖವನ್ನು ತೆಗೆದುಕೊಂಡ. ಮೊದಲು ಮೋಸದಿಂದ ತೆಗೆದುಕೊಂಡ ಶಂಖ ರಾಮುವಿನ ಬಳಿಯಿದ್ದ ಶಂಖ ಎರಡನ್ನೂ ರಾಮುವಿಗೆ ತಿಳಿದ ಹಾಗೆ ಅದಲು ಬದಲು ಮಾಡಿದನು. ಅದರೆ ವ್ಯಾಪಾರಿಯ ಗುಣ ಗೊತ್ತಿದ್ದ ರಾಮು ಸನ್ಯಾಸಿ ತನಗೆ ಕೊಟ್ಟ ಶಂಖವನ್ನು ಮರಳಿ ಪಡೆದುಕೊಂಡ.

ರಾಮು ಶಂಖವನ್ನು ತೆಗೆದುಕೊಂಡು ತನ್ನ ಮನೆಗೆ ವಾಪಸ್ಸಾದನು. ವ್ಯಾಪಾರಿಯು ಶಂಖವನ್ನು ಮೇಲೆ-ಕೆಳಗೆ ಮಾಡಿದನು. ಆದರೆ ಶಂಖದಿಂದ ಯಾವ ನಾಣ್ಯಗಳು ಹೊರ ಬೀಳಲಿಲ್ಲ. ಶಂಖವನ್ನು ಚೆನ್ನಾಗಿ ಪರೀಕ್ಷೆ ಮಾಡಿ ನೋಡಿದ ವ್ಯಾಪಾರಿ ಅಂದು ನಾನು ರಾಮುವಿನ ಬಳಿ ಈ ಶಂಖವನ್ನೇ ಇರಿಸಿದ್ದೆಂದು ತಿಳಿಯಿತು.ಈ ಶಂಖ ಸಾಮಾನ್ಯ ಶಂಖವೆಂದು ತಿಳಿದ ವ್ಯಾಪಾರಿ ‘ಮುಂದೆಂದೂ ಪರರ ಸೊತ್ತುಗಳನ್ನು ಅಪಹರಿಸಬಾರದೆಂದು’ ಅಂದುಕೊಂಡನು. ಸನ್ಯಾಸಿ ಕೊಟ್ಟ ಶಂಖದಿಂದ ರಾಮು ದಿನಕ್ಕೊಂದು ಚಿನ್ನದ ನಾಣ್ಯವನ್ನು ಪಡೆದು ಸಂತೋಷದಿಂದ ಹೆಂಡತಿ ಜೊತೆಗೆ ಸುಖವಾಗಿದ್ದನು.

ಬರಹ ಇಷ್ಟವಾಯಿತೆ?

 • 13

  Happy
 • 0

  Amused
 • 0

  Sad
 • 2

  Frustrated
 • 0

  Angry

Comments:

0 comments

Write the first review for this !