ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರನ್ ಎಂಬ ಕಳ್ಳ !

ಮಕ್ಕಳ ದಿನಾಚರಣೆ ವಿಶೇಷ
Last Updated 10 ನವೆಂಬರ್ 2018, 19:45 IST
ಅಕ್ಷರ ಗಾತ್ರ

ಅಬ್ಬ! ವಿಜಿ ಎಂದೂ ಅಷ್ಟು ಹೆದರಿರಲಿಲ್ಲ. ಹೆದರಿಕೆ ಎಂದರೆ ಹೇಗೆನ್ನುತ್ತೀರಿ? ಮೈಯೆಲ್ಲ ಥರಗುಟ್ಟಿ ಹಲ್ಲುಗಳು ‘ಕಟಕಟ’ ಶಬ್ದ ಮಾಡುತ್ತ ಚಳಿಚಳಿಯಾಗುವಷ್ಟು! ಇಂತಾ ಭಯಕ್ಕೆ ಕಾರಣ ಚಂದ್ರನ್ ಎಂಬ ಕಳ್ಳ ಮತ್ತು ಅವನ ಕುರಿತು ಹಳ್ಳಿಯ ಜನ ಆಡಿಕೊಳ್ಳುತ್ತಿದ್ದ ಭೀಕರ ವಿಷಯಗಳು. ಯಾರೋ ಒಬ್ಬರ ಮನೆಗೆ ನುಗ್ಗಿ ಮನೆಯವರನ್ನೆಲ್ಲ ಕೊಂದುಹಾಕುವುದರಲ್ಲಿದ್ದನಂತೆ! ಈಗ ಮುದೂರಿಯ ಸುತ್ತಮುತ್ತ ಕಾಡಿನಲ್ಲಿ ಬೀಡುಬಿಟ್ಟಿದ್ದಾನಂತೆ. ಅಯ್ಯಬ್ಬಾ, ಯಾರ ಮನೆಗೆ ದಾಳಿ ಮಾಡುತ್ತಾನೋ! ಇದಕ್ಕಿಂತ ಭಯಂಕರ ವಿಷಯವೆಂದರೆ ಅವನ ಕಾರ್ಯಾಚರಣೆ! ರೈತರ ಮನೆಯಲ್ಲೇ ಇರುತ್ತಿದ್ದ ಹಾರೆ, ಮಚ್ಚು, ಪಿಕಾಸಿ, ಕತ್ತಿ, ಗರಗಸಗಳಿಂದಲೇ ಬಡಿದು ಅವರನ್ನು ಕೊಲ್ಲುತ್ತಾನಂತೆ ಆಮೇಲೆ ಮನೆಯಲ್ಲಿರುವ ದುಡ್ಡು, ಚಿನ್ನ, ಅಕ್ಕಿ, ಬತ್ತವನ್ನು ಹೊತ್ತೊಯ್ಯುತ್ತಾನಂತೆ.

‘ಓ ದೇವರೇ, ಎಂತಾ ಕತೆಯಪ್ಪಾ ಇದು!’ ವಿಜಿಯ ಅಮ್ಮ, ಪಕ್ಕದಮನೆ ದೊಡ್ಡಮ್ಮ ಇಬ್ಬರೂ ತಲೆಗೆ ಕೈಹೊತ್ತು ಕುಳಿತರು.

ದೊಡ್ಡಮ್ಮ ಬಾಯಲ್ಲಿದ್ದ ಎಲೆ ಅಡಿಕೆ ರಸ ಉಗಿದು ಕೈಬಾಯಿ ಹಾರಿಸುತ್ತ ಮಾತಾಡಿದರು. ‘ಇಗಾ ರತ್ನ, ಹಾರೆ, ಪಿಕಾಸಿ ಎಲ್ಲ ಕೋಣೆಗೆ ಹಾಕಿ ಬೀಗ ಹಾಕ್ ಮರಾಯ್ತಿ. ಎಂತಾ ಕಲಿಗಾಲ ಬಂತಪ್ಪಾ.’ ಅಮ್ಮ ಹೆದರಿದರು! ಆದರೆ ಅಮ್ಮಮ್ಮ ‘ಎಂತದೂ ಆತಿಲ್ಲೆ. ಇದೆಲ್ಲ ಬರೀ ಕಟ್ಟುಕತೆ ಅಷ್ಟೇ’ ಎಂದು ಮುಖಕ್ಕೆ ಹೊಡೆದಂತೆ ಹೇಳಿ ಕೊಟ್ಟಿಗೆಗೆ ನಡೆದರು. ವಿಜಿ ಮತ್ತು ನೀಲಿ ಮಾತ್ರ ಮರಗಟ್ಟಿ ನಿಂತಿದ್ದರು.

ಆದರೆ ಕತ್ತಲೆ ಆಗುವ ಹೊತ್ತಿಗೆ ಸರಿಯಾಗಿ ರುಕ್ಮಿಣಿಬಾಯಿ ಮನೆಯಿಂದ ಒಂದು ಜನ ಓಡೋಡುತ್ತ ಬಂದು ಅಮ್ಮಮ್ಮನಲ್ಲಿ ಪಿಸಿಪಿಸಿ ಮಾತಾಡಿ ಬಂದಷ್ಟೇ ವೇಗವಾಗಿ ಹೊರಟುಹೋಯಿತು. ಕೂಡಲೇ ಅಮ್ಮ ಅಂಗಳದಲ್ಲಿ ಆಡುತ್ತಿದ್ದ ವಿಜಿ ಮತ್ತು ನೀಲಿಯನ್ನು ಒಳಕರೆದರು, ಬಾಗಿಲು ಭದ್ರಪಡಿಸಿ ಚಿಲಕ ಹಾಕಿದರು. ಅದೇ ಹೊತ್ತಿಗೆ ಸರಿಯಾಗಿ ದೂರದ ಕಗ್ಗತ್ತಲ ಕಾಡಿನಿಂದ ಜನರ ಗಲಾಟೆ ಕೇಳಿತು. ತಳಿಕಂಡಿಯಲ್ಲಿ ಬಗ್ಗಿನೋಡಿದ ಅಮ್ಮಮ್ಮ ‘ಯಾರದ್ದೋ ಮನಿಗೆ ಬಂದ ಕಳ್ಳ’ ಎಂದರು. ಅಲ್ಲಿದ್ದ ಬೀಚುಬೆಕ್ಕು ವಿಚಿತ್ರವಾಗಿ ಕೂಗಿತು. ವಿಜಿಗಂತೂ ಕೈಕಾಲು ನಡುಗತೊಡಗಿತು.

ಅವರ ಮನೆ ಪಡಸಾಲೆಯ ಗೋಡೆ ಸಂದಿಯಲ್ಲಿ ಒಂದು ಪುಟಾಣಿ ಕೋಣೆಯಿತ್ತು. ಅದರೊಳಗೆ ಯಾರೂ ಹೋಗಲು ಸಾಧ್ಯವಿರಲಿಲ್ಲ; ಅಷ್ಟು ಪುಟಾಣಿ! ಅಮ್ಮ ಪೆಟ್ಟಿಗೆಯಲ್ಲಿದ್ದ ಸ್ವಲ್ಪ ದುಡ್ಡು, ಚಿನ್ನವನ್ನು ಒಂದು ಬಟ್ಟೆಯಲ್ಲಿ ಕಟ್ಟಿ ಆ ಪುಟಾಣಿ ಕೋಣೆಯ ಪಾತ್ರೆಗಳ ಎಡೆಯಲ್ಲಿಟ್ಟು ಮರೆಮಾಡಿದರು! ಅಮ್ಮಮ್ಮ ಮನೆಯಲ್ಲಿದ್ದ ಹಾರೆ, ಪಿಕಾಸಿ ಮುಂತಾದ ಎಲ್ಲ ಹತಾರಗಳನ್ನು ‘ಆಚೆಒಳ’ ಎಂದು ಕರೆಯುತ್ತಿದ್ದ ಕೋಣೆಗೆ ಹಾಕಿ ಚಿಲಕ ಹಾಕಿದರು. ವಿಜಿ, ನೀಲಿ ತಳಿಕಂಡಿಯಲ್ಲಿ ಇಣುಕಿದರು. ಹೊರಗೆಲ್ಲ ಗವ್ವೆನ್ನುವ ಮಸಿಕತ್ತಲು. ದೂರದ ಕಾಡಲ್ಲಿ ಜನರ ಕೂಗು, ಹಾಹಾಕಾರ. ಆ ಕಳ್ಳ ನಮ್ಮನೆ ಬಾಗಿಲನ್ನೂ ಒಡೆದು. ನಮ್ಮನ್ನೆಲ್ಲ ಬಡಿದು... ಓಹ್! ವಿಜಿಯ ತಲೆಯಲ್ಲಿ ಚಿತ್ರವಿಚಿತ್ರ ಕಲ್ಪನೆಗಳು. ಎಷ್ಟು ಭಯವಾಯಿತೆಂದರೆ ಅವಳಿಗೆ ಚಳಿಯ ಅನುಭವವಾಯಿತು, ಹಲ್ಲುಗಳು ಕಟಕಟನೆ ಶಬ್ದ ಮಾಡುತ್ತ ಕಡಿಯತೊಡಗಿದವು! ನೋಡಿದರೆ ನೀಲಿ ಕೂಡ ಅದೇ ಸ್ಥಿತಿಯಲ್ಲಿದ್ದಳು.

ಅವರೆಲ್ಲ ಪಡಸಾಲೆಯಲ್ಲಿ ಹಚ್ಚಿಟ್ಟ ಚಿಮಣಿ ದೀಪದ ಬಳಿ ಕುಳಿತರು. ಅಮ್ಮ ಆ ಕೋಣೆಯ ಚಿಲಕವನ್ನೂ ಹಾಕಿಕೊಂಡರು. ಅವರ ಕಣ್ಣಲ್ಲಿ ನೀರು! ಅಮ್ಮಮ್ಮ ಮಾತ್ರ ಕೈಯ್ಯಲ್ಲೊಂದು ಬಡಿಗೆ ಹಿಡಿದು ತುದಿಗಾಲಲ್ಲಿ ಕಾತರದಿಂದ ಕೂತಿದ್ದರು. ವಿಜಿ, ನೀಲಿ ಕೈ ಕೈ ಹಿಡಿದುಕೊಂಡರು. ಇಬ್ಬರ ಕೈಗಳೂ ಥಂಡಿ ಥಂಡಿ! ಹೀಗೇ ಅದೆಷ್ಟು ಹೊತ್ತು ಕುಳಿತಿದ್ದರೋ ಗೊತ್ತಿಲ್ಲ. ನಡುರಾತ್ರಿ ಕಳೆದಿರಬೇಕು, ಮನೆಯ ದಕ್ಷಿಣ ದಿಕ್ಕಿನ ಕಾಡಿನಿಂದ ಗಲಾಟೆ, ಕೂಗಾಟ ಆಗಾಗ ಕೇಳುತ್ತಿತ್ತು. ವಿಜಿ ಅಮ್ಮನ ಮಡಿಲಲ್ಲಿ ಮುಖ ಹುದುಗಿಸಿದಳು. ಬೀಚು ಅವಳ ಕಾಲಿಗೆ ತಲೆಯಿಟ್ಟು ಮಲಗಿತು. ಅದರ ಕಣ್ಣುಗಳಲ್ಲೂ ಹೆದರಿಕೆಯಿತ್ತು. ಮತ್ತಷ್ಟು ಹೊತ್ತು ಕಳೆಯಿತು. ಆ ರಾತ್ರಿ ಅವರ್‍ಯಾರೂ ಊಟ ಮಾಡಿರಲಿಲ್ಲ. ಸ್ವಲ್ಪ ಹೊತ್ತಿಗೆ ಕೋಳಿ ಕೂಗಿತು. ಅಮ್ಮಮ್ಮ ಕಿಟಕಿ ಪಕ್ಕ ಹೋಗಿಬಂದು, ಹೊರಗೇನೂ ಗಲಾಟೆಯಿಲ್ಲ ಎಂದರು. ಚಿಮಣಿ ದೀಪ ಮಂಕಾಗಿ ಉರಿಯುತ್ತಲೇ ಇತ್ತು. ವಿಜಿ ಒಂದು ಕ್ಷಣ ಕಣ್ಮುಚ್ಚಿ ತೆರೆದಾಗ ‘ಮಕ್ಳೇ ಬೆಳಗಾಯ್ತ್ ಇನ್ನು ಹೆದರಿಕೆ ಇಲ್ಲ’ ಅಮ್ಮಮ್ಮ ಹೇಳುತ್ತಿದ್ದರು. ಸದ್ಯ! ಎಲ್ಲರಿಗೂ ಹೋದ ಜೀವ ಬಂದಂತಾಯಿತು! ನಂತರ ಬಂದ ಸುದ್ದಿಯೆಂದರೆ ಕಾಡಿನ ತುದಿಯಲ್ಲಿದ್ದ ಒಂದು ಮನೆ ಹತ್ತಿರ ಕಳ್ಳರ ತಂಡ ಬಂದಿತ್ತಂತೆ. ಅಕ್ಕಪಕ್ಕದ ಮನೆಯವರೆಲ್ಲ ದೊಣ್ಣೆ ಹಿಡಿದು ಅಟ್ಟಿಸಿಕೊಂಡು ಹೋದಾಗ ಓಡಿಹೋದರಂತೆ!

ಹೀಗೇ ಸುಮಾರು ಒಂದೆರಡು ತಿಂಗಳುಗಳ ಕಾಲ ಚಂದ್ರನ್ ಎಂಬ ಕಳ್ಳ ಹಳ್ಳಿಯ ಸುತ್ತ ಸುತ್ತುತ್ತಿದ್ದಾನೆ ಎಂಬ ಗಾಳಿ ಸುದ್ದಿ ಕೇಳಿಬರುತ್ತಿತ್ತು. ಆದರೆ ಎಲ್ಲವೂ ಅಲ್ಲಿ ಓಡಿದ, ಇಲ್ಲಿ ಓಡಿದ ಎಂಬ ಮಾತುಗಳಲ್ಲಿ, ಸಾಹಸದ ವರ್ಣನೆಗಳಲ್ಲಿ ಮುಗಿಯುತ್ತಿತ್ತು. ಅವನನ್ನು ನೇರವಾಗಿ ಕಂಡವರು ಅವರ ಹಳ್ಳಿಯಲ್ಲಿ ಯಾರೂ ಇರಲಿಲ್ಲ!!

***

ಟಿಪ್ಪಣಿ: ವಿಜಿಯ ಊರು ಎಂಬತ್ತರ ದಶಕದ ವಿದ್ಯುತ್ತಿಲ್ಲದ, ರಸ್ತೆಯಿಲ್ಲದ ಕಾಡು ಗದ್ದೆ ತೋಟಗಳಿಂದ ಸುತ್ತುವರೆದ ಅರೆಮಲೆನಾಡಿನ ಒಂದು ಹಳ್ಳಿ. ಅದರ ಹೆಸರು ‘ಮುದೂರಿ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT