ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನಪ್ಪನ ZOO

Last Updated 13 ನವೆಂಬರ್ 2019, 9:10 IST
ಅಕ್ಷರ ಗಾತ್ರ

ಟೈರ್‌ಗೆ ನಾನು ಗಾಳಿ ತುಂಬಿಸುವಾಗ ಜೀಪಿನ ಅಡಿಯಲ್ಲಿ ಯಾವುದೋ ಪ್ರಾಣಿ ಇದೆ ಎಂಬ ಸಂಶಯ ಬಂತು. ಸೋಮು ಅಡಿಯಲ್ಲಿ ತೂರಿ ಅದನ್ನು ಎಳೆದು ತಂದ. ಅದೊಂದು ವಿಚಿತ್ರ ಪ್ರಾಣಿಯಾಗಿತ್ತು. ಅದರ ಕಾಲುಗಳು ನಮ್ಮನ್ನು ಇನ್ನಷ್ಟು ಸೋಜಿಗಗೊಳಿಸಿದವು. ಸಮತಟ್ಟಾದ ನೆಲದ ಮೇಲೆ ನಿಲ್ಲಲಾಗದಂತೆ ಅದರ ಕಾಲುಗಳು ಒಂದು ಬದಿಯಲ್ಲಿ ತೀರಾ ಉದ್ದವೂ ಮತ್ತೊಂದು ಬದಿಯಲ್ಲಿ ಅಷ್ಟೇ ಗಿಡ್ಡವೂ ಆಗಿದ್ದವು.

ನಮ್ಮ ಹುಲ್ಲುಗಾವಲು ಪ್ರದೇಶದಲ್ಲಿ ಕೆಲವು ಚಿತ್ರ–ವಿಚಿತ್ರ ಪ್ರಾಣಿಗಳಿವೆ ಎಂಬ ವದಂತಿ ಹಲವು ಸಲ ನನ್ನ ಕಿವಿಯ ಮೇಲೆ ಬಿದ್ದಿದ್ದಿದೆ. ಅಷ್ಟೇ ಏಕೆ? ಮೊನ್ನೆಯಷ್ಟೆ ವ್ಯಕ್ತಿಯೊಬ್ಬ ತಾನು ಮಾತನಾಡುವ ಹಾವನ್ನು ಕಂಡಿರುವುದಾಗಿಯೂ ಹೇಳಿದ! ಮಾತನಾಡುವುದೆಂದರೆ ಅದು ಅಕ್ಷರಶಃ ಮಾತಾಡುತ್ತಿರಲಿಲ್ಲ. ಮೋರ್ಸ್‌ ಕೋಡ್‌ನಲ್ಲಿ (ಸಂಕೇತ ರೂಪದಲ್ಲಿ ಮಾಹಿತಿಯನ್ನು ರವಾನಿಸುವ ಯಂತ್ರ) ಅದು ಸದ್ದು ಮಾಡುತ್ತಿತ್ತು ಎಂದೂ ಆತ ವಿವರಿಸಿದ. ಆತ ಸುಳ್ಳು ಹೇಳುತ್ತಾನೆ ಎನ್ನುವುದು ಎಲ್ಲರಿಗೂ ಗೊತ್ತಾಗಿತ್ತು.

ಆದರೆ, ನಮ್ಮ ಒಂದು ಎಕರೆ ಹೊಲದಲ್ಲಿ ನಾವು ನಿಜವಾಗಿಯೂ ಕೆಲವು ವಿಚಿತ್ರವಾದ ಪ್ರಾಣಿಗಳನ್ನು ಸಂಗ್ರಹಿಸಿದ್ದೆವು. ಅದರ ಹಿಂದಿನ ಕಥೆಯನ್ನು ನಾನೀಗ ನಿಮಗೆ ಹೇಳುತ್ತೇನೆ. ನನ್ನ ಹೆಸರು ಚಿನ್ನಪ್ಪ ಎಂದು. ನಾನು ಯಾವಾಗಲೂ ಸತ್ಯವನ್ನೇ ಹೇಳುವವ. ಸುಳ್ಳಿನ ಮುಳ್ಳುಹಂದಿಯ ಮೇಲೆ ಕುಳಿತು ನಾನೇಕೆ ಬುರುಡೆ ದಾಸಪ್ಪನಾಗಿ ಬುರುಡೆ ಬಿಡಬೇಕು ನೀವೇ ಹೇಳಿ?

ಋತುಮಾನಕ್ಕೆ ತಕ್ಕಂತೆ ನಮ್ಮ ಪರಿಸರದಲ್ಲೂ ಪ್ರಾಣಿಗಳು, ಪಕ್ಷಿಗಳು ಬಂದು ಹೋಗುತ್ತಿದ್ದವು. ದರ್ಶನವನ್ನೂ ನೀಡುತ್ತಿದ್ದವು. ಆದರೆ, ನಾನೀಗ ಹೇಳಹೊರಟಿರುವುದು ವಿಚಿತ್ರ ಪ್ರಾಣಿಗಳ ಕುರಿತು. ವಸಂತ ಋತುವಿನ ಒಂದು ಕೆಟ್ಟ ಮುಂಜಾವಿನ ಘಟನೆಯೊಂದಿಗೆ ನಾನು ಈ ಕಥೆಯನ್ನು ಆರಂಭಿಸುತ್ತೇನೆ. ಆಕಾಶದಲ್ಲಿ ಕಪ್ಪು ಮೋಡಗಳು ದಟ್ಟೈಸಿದ್ದವು. ಗಾಳಿಯ ಸುಳಿವೇ ಇರಲಿಲ್ಲ. ಪಕ್ಷಿಗಳ ಸದ್ದು ಕೂಡ ಅಡಗಿಹೋಗಿತ್ತು. ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಹೊಲದಲ್ಲಿ ನೆಟ್ಟಿದ್ದ ಟೊಮ್ಯಾಟೊ ಗಿಡಗಳನ್ನು ನಾನು ಮಕ್ಕಳ ಜತೆಗೂಡಿ ನೋಡುತ್ತಿದ್ದೆ.

ನಮ್ಮ ಹೊಲದ ಮೇಲಿನ ಮಣ್ಣಾದರೂ ಎಂಥದ್ದು ಅಂತೀರಿ? ಅದರಲ್ಲಿ ಬಂಗಾರ ಬಿತ್ತಿದರೂ ಬೆಳೆಯುತ್ತಿತ್ತು. ಟೊಮ್ಯಾಟೊ ಗಿಡಗಳಲ್ಲಿ ಹಣ್ಣುಗಳು ತುಂಬಿಕೊಂಡಿದ್ದವು. ಇಡೀ ಹೊಲ ಕೆಂಪು ಕೆಂಪಾಗಿ ಕಾಣುತ್ತಿತ್ತು. ಮೂವತ್ತು ಟನ್‌ಗಳಷ್ಟು ಇಳುವರಿ ಬರುತ್ತದೆ ಎಂಬ ಅಂದಾಜು ಮಾಡಲಾಗಿತ್ತು.

‘ಅಲ್ಲಿ ನೋಡು ಅಪ್ಪ, ಏನೋ ಬರುತ್ತಿದೆ’ ಎಂದು ನನ್ನ ಮಗ ಸೋಮು ಕೂಗಿದ. ತಿರುಗಿ ನೋಡಿದರೆ ದೈತ್ಯಾಕಾರದ ಸುಂಟರಗಾಳಿ. ‘ಎಲ್ಲರೂ ಮನೆಯ ಕಡೆಗೆ ಓಡಿ ಬೇಗ’ ಎಂದು ಅರಚಿದೆ. ಮನೆಯೊಳಗೆ ಹೊಕ್ಕು ಬಾಗಿಲು ಹಾಕಿಕೊಂಡೆವು. ಸುಂಟರಗಾಳಿ ನಮಗೆ ಹತ್ತಿರದಲ್ಲೇ ಇದೆ ಎಂಬುದು ಅದರ ಸಪ್ಪಳದಿಂದಲೇ ಗೊತ್ತಾಗುತ್ತಿತ್ತು. ಮನೆಯ ಅಡಿಯಲ್ಲಿದ್ದ ಕಗ್ಗತ್ತಲಿನ ಸುರಂಗದಲ್ಲಿ ಕಾಲ ಕಳೆಯುವುದನ್ನು ಬಿಟ್ಟು ನಮಗೆ ಬೇರೆದಾರಿ ಉಳಿದಿರಲಿಲ್ಲ.

ಬೆಳಿಗ್ಗೆ ಎದ್ದು ಹೊರಬಂದು ನೋಡುತ್ತೇವೆ. ಹೊಲದಲ್ಲಿದ್ದ ಗಿಡಗಳೆಲ್ಲ ಮಟಾಮಾಯ! ಹೊಲಕ್ಕಾದ ಗತಿಯನ್ನು ಕಂಡು ನನ್ನ ಹೆಂಡತಿ ಕಣ್ಣೀರು ಸುರಿಸಿದಳು. ಸುಂಟರಗಾಳಿ ನಮ್ಮ ಹೊಲದಲ್ಲಿದ್ದ ಫಸಲನ್ನು ಎತ್ತಿಕೊಂಡು ಎಲ್ಲಿಯೋ ಎಸೆದು ಹೋಗಿತ್ತು. ನಾನು ಹುಡುಕುತ್ತೇನೆ, ಏಕೆ ಚಿಂತಿಸುತ್ತಿ ಎಂದು ಹೆಂಡತಿಗೆ ಹೇಳಿದೆ. ಹೊರಗೆ ನಿಲ್ಲಿಸಿದ್ದ ಜೀಪಿನ ಬಳಿ ಹೋಗಿ ನೋಡಿದರೆ ಅದರ ಒಂದು ಗಾಲಿಯಲ್ಲಿ ಗಾಳಿ ಇರದೆ ಅಪ್ಪಚ್ಚಿಯಾಗಿತ್ತು. ಟೈರ್‌ಗೆ ನಾನು ಗಾಳಿ ತುಂಬಿಸುವಾಗ ಜೀಪಿನ ಅಡಿಯಲ್ಲಿ ಯಾವುದೋ ಪ್ರಾಣಿ ಇದೆ ಎಂಬ ಸಂಶಯ ಬಂತು. ಸೋಮು ಅಡಿಯಲ್ಲಿ ತೂರಿ ಅದನ್ನು ಎಳೆದು ತಂದ. ನೋಡಿದರೆ ಅದೊಂದು ವಿಚಿತ್ರ ಪ್ರಾಣಿಯಾಗಿತ್ತು.

ಮೇಕೆಯಂತೆ ಕಾಣಿಸುತ್ತಿತ್ತು ಆ ಪ್ರಾಣಿ. ಆದರೆ, ಅದರ ಬಾಲ ಮತ್ತು ಕಿವಿಗಳು ಮೊಲದ ಬಾಲ ಮತ್ತು ಕಿವಿಗಳಂತೆಯೇ ಇದ್ದವು. ಅದರ ಕಾಲುಗಳು ನಮ್ಮನ್ನು ಇನ್ನಷ್ಟು ಸೋಜಿಗಗೊಳಿಸಿದವು. ಸಮತಟ್ಟಾದ ನೆಲದ ಮೇಲೆ ನಿಲ್ಲಲಾಗದಂತೆ ಅದರ ಕಾಲುಗಳು ಒಂದು ಬದಿಯಲ್ಲಿ ತೀರಾ ಉದ್ದವೂ ಮತ್ತೊಂದು ಬದಿಯಲ್ಲಿ ಅಷ್ಟೇ ಗಿಡ್ಡವೂ ಆಗಿದ್ದವು. ಪರ್ವತದ ಕಡೆಯಿಂದ ಸುಂಟರಗಾಳಿ ಹೊತ್ತು ತಂದು ಹಾಕಿದ ಪ್ರಾಣಿ ಅದಾಗಿರಬೇಕು ಎಂದುಕೊಂಡೆ.

ನನ್ನ ಇನ್ನೊಬ್ಬ ಮಗ ರಾಮು ಮನೆಗೆ ಓಡಿಹೋಗಿ ನ್ಯಾಚುರಲ್‌ ಹಿಸ್ಟರಿ ಪುಸ್ತಕ ತಂದ. ಅದರಲ್ಲಿ ಈ ಪ್ರಾಣಿಯಂಥದ್ದೇ ಚಿತ್ರದ ಜತೆಗಿದ್ದ ಮಾಹಿತಿಯನ್ನು ಓದಿ ಹೇಳಿದ. ಇದರ ಹೆಸರು ಸೈಡ್‌ಹಿಲ್‌ ಗೌಗರ್‌. ಪರ್ವತದ ಇಳಿಜಾರಿನಲ್ಲಿ ಅದರ ವಾಸ. ಪರ್ವತವನ್ನು ಅದು ಒಂದೇ ಬದಿಯಿಂದ ಸುತ್ತು ಹಾಕುವುದರಿಂದ ಅದರ ಕಾಲುಗಳು ಎಡಬದಿಯಲ್ಲಿ ದೊಡ್ಡವು, ಬಲಬದಿಯಲ್ಲಿ ಚಿಕ್ಕವೂ ಆಗಿರುತ್ತವೆ ಎಂದು ವಿವರಿಸಿದ. ಸೋಮು ಅದನ್ನು ಹೊತ್ತು ತಂದು ಜೀಪಿನೊಳಗೆ ಹಾಕಿದ. ನಮ್ಮ ಜೀಪು ಮುಂದೆ ಹೊರಟಿತು. ದಾರಿಯಲ್ಲಿ ನಮ್ಮ ಟೊಮ್ಯಾಟೊ ಹಣ್ಣುಗಳು ಕೆಚಪ್‌ ಆಗಿ ಬಿದ್ದಿದ್ದವು.

ರಸ್ತೆಯ ಮಧ್ಯೆ ಹಾಗೆಯೇ ನಿಂತು ನೋಡುತ್ತಿದ್ದೆವು. ಥೇಟ್‌ ಒಲೆಯ ಮೇಲಿನ ಚಹಾದ ಕಿತ್ತಲಿಯಿಂದ ಬರುವಂತಹ ಕುದಿಯುವ ನೀರಿನ ಸದ್ದು! ನೋಡಿದರೆ ಅಲ್ಲೊಂದು ವಿಚಿತ್ರವಾದ ಪಕ್ಷಿಯಿತ್ತು. ಟರ್ಕಿ ಕೋಳಿಯಷ್ಟು ಗಾತ್ರದ ಆ ಪಕ್ಷಿಯ ಕೊಕ್ಕು ಕಿತ್ತಲಿಯ ಮೂತಿಯಂತೆಯೇ ಇತ್ತು. ಅದು ಆಗಾಗ ಕಿತ್ತಲಿಯಿಂದ ಹೊರಡುವಂತಹ ಸದ್ದನ್ನೇ ಹೊರಡಿಸುತ್ತಿತ್ತು. ಆಗ ಅದರ ಕೊಕ್ಕಿನಿಂದ ಹೊಗೆ ಬರುತ್ತಿತ್ತು! ಮಕ್ಕಳು ಅದನ್ನೂ ಹೊತ್ತುಕೊಂಡು ಬಂದರು. ಮುಂದೆ ಅದು ಸಿಲ್ವರ್‌ ಟೇಲ್ಡ್‌ ಟೀಕೆಟ್ಲರ್‌ ಎಂದು ಪತ್ತೆ ಹಚ್ಚಿದರು. ಇನ್ನೊಂದು ವಿಚಿತ್ರವೆಂದರೆ ಅದರ ಪಾದಗಳು ಉಲ್ಟಾ ಇದ್ದವು.

ಮನೆಗೆ ವಾಪಸ್‌ ಬರುವಾಗ ನಾವು ಮತ್ತೊಂದು ವಿಚಿತ್ರ ಜೀವಿಯನ್ನು ಕಂಡೆವು. ನೆಲದ ಮೇಲೆ ಮೀನೊಂದು ತನ್ನ ಬಾಲದಿಂದ ದೂಳೆಬ್ಬಿಸಿ, ಹಿಮ್ಮುಖವಾಗಿ ಚಲಿಸುತ್ತಿತ್ತು. ನೀರಿಲ್ಲದೆಯೂ ಈ ಮೀನು ಇನ್ನೂ ಜೀವಿಸಿದೆಯಲ್ಲ ಎಂದು ಮಕ್ಕಳು ಅದನ್ನು ಆತುರಾತುರವಾಗಿ ತಂದು, ಮನೆಗೆ ಹೋದೊಡೆನೆ ನೀರಿನ ಟಬ್‌ನಲ್ಲಿ ಹಾಕಿದರು. ಆಗ ಮಕ್ಕಳು ವಿಚಿತ್ರ ಘಟನೆಗೆ ಸಾಕ್ಷಿಯಾದರು. ಮೀನು ನೀರಿನಿಂದ ಚಂಗನೆ ಜಿಗಿದು, ಮಣ್ಣಿನಲ್ಲೇ ಬಾಲ ಆಡಿಸುತ್ತಾ ಹಿಮ್ಮುಖವಾಗಿ ಹೊರಡತೊಡಗಿತು. ಓಹ್‌, ಇದು ಮರುಭೂಮಿ ಮೀನು ಎಂದು ನಾನು ಉದ್ಗಾರ ತೆಗೆದೆ.

ನಮಗೆ ಒಂದು ವಿಶೇಷ ಬೆಕ್ಕು ಬೇರೆ ಸಿಕ್ಕಿತು. ಅದಕ್ಕೆ ಕಂಪಾಸ್‌ ಕ್ಯಾಟ್‌ ಎಂದು ಹೆಸರು. ಅದು ಯಾವ ದಿಕ್ಕಿನಲ್ಲೇ ಮುಖಮಾಡಿ ನಿಂತರೂ ಅದರ ಬಾಲ ಯಾವಾಗಲೂ ಉತ್ತರ ದಿಕ್ಕಿನ ಕಡೆಗೆ ಹೊರಳಿ ನಿಲ್ಲುತ್ತಿತ್ತು. ಹುಲ್ಲುಗಾವಲಿನಲ್ಲಿ ಇನ್ನೊಂದು ವಿಚಿತ್ರ ಪ್ರಾಣಿಯೂ ಪತ್ತೆಯಾಯಿತು. ಸಿಂಹದ ದೇಹ ಮತ್ತು ಕಡವೆ ಮುಖವನ್ನು ಅದು ಹೊಂದಿತ್ತು. ಎಲ್ಲ ಪ್ರಾಣಿ ಮತ್ತು ಪಕ್ಷಿಗಳನ್ನು ಸೇರಿಸಿ ನಾವೊಂದು ಪ್ರಾಣಿ ಸಂಗ್ರಹಾಲಯ ಮಾಡಿದೆವು. ದೇಶದ ಉಳಿದ ಪ್ರಾಣಿ ಸಂಗ್ರಹಾಲಯಗಳಿಗಿಂತ ನಮ್ಮದು ಮಕ್ಕಳನ್ನು ಸೂಜಿಗಲ್ಲಿನಂತೆ ಸೆಳೆಯಿತು.

(ಅಮೆರಿಕದ ವೀಕ್ಲಿ ರೀಡರ್‌ ಚಿಲ್ಡ್ರನ್ಸ್‌ ಬುಕ್‌ ಕ್ಲಬ್‌ನ ‘ಮೆಕ್‌ಬ್ರೂಮ್ಸ್‌ ಝೂ’ ಕಿರು ಕಾದಂಬರಿಯಿಂದ ಪ್ರೇರಿತ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT