ಗುರುವಾರ , ಡಿಸೆಂಬರ್ 1, 2022
21 °C

ಸುಧಾಮೂರ್ತಿ ಬರೆದ ಕಥೆ | ರಾಜಕುಮಾರಿಯ ಪ್ರಶ್ನೆ

ಸುಧಾಮೂರ್ತಿ Updated:

ಅಕ್ಷರ ಗಾತ್ರ : | |

ಹಿಂದೆ ಕೋಸಲ ರಾಜ್ಯದಲ್ಲಿ ‘ರತ್ನಾವಳಿ’ ಎಂಬ ಬುದ್ಧಿವಂತ ಸುಂದರ ರಾಜಕುಮಾರಿ ಇದ್ದಳು. ಅವಳಿಗೆ ಬುದ್ಧಿವಂತ ರಾಜಕುಮಾರನನ್ನು ಮದುವೆಯಾಗುವ ಮನಸ್ಸಿತ್ತು. ಹೀಗಾಗಿ ಅವಳ ಪ್ರಶ್ನೆಗೆ ಉತ್ತರಿಸಿದವರನ್ನು ಮಾತ್ರ ಮದುವೆಯಾಗುತ್ತೇನೆಂದೂ ಉತ್ತರಿಸದಿದ್ದಲ್ಲಿ ಆ ರಾಜಕುಮಾರರು ತನ್ನ ಸೇವಕರಾಗಿರಬೇಕೆಂದೂ ಒಂದು ಷರತ್ತನ್ನು ಇಟ್ಟಿದ್ದಳು.

ಮೊದಮೊದಲು ಇದೇನು ರಾಜಕುಮಾರಿಯ ಪ್ರಶ್ನೆ ಎಂದು ಹೀಗಳೆದು ಅನೇಕ ರಾಜಕುಮಾರರು ಪಂದ್ಯಕ್ಕೆ ಬಂದರು. ಆದರೆ, ಅವಳ ಪ್ರಶ್ನೆಗಳಿಗೆ ಉತ್ತರಿಸಲಾರದೆ ಸೋತು ಅವಳ ಸೇವಕರಾದರು. ಇದನ್ನು ಅರಿತು ಮುಂದೆ ಬುದ್ಧಿವಂತರೂ ಅವಳ ಬಳಿ ಸುಳಿಯಲಿಲ್ಲ.

ಸಿಂಧೂರ ದೇಶದ ಮಹಾರಾಜನಿಗೆ ನಾಲ್ಕು ಜನ ಗಂಡು ಮಕ್ಕಳು. ಅವರೆಲ್ಲರೂ ಬುದ್ಧಿವಂತರೇ. ಮೊದಲನೆಯ ರಾಜಕುಮಾರ ‘ಅಮೃತೇಶ’ ರತ್ನಾವಳಿಯ ಪಂದ್ಯಕ್ಕೆ ಬಂದ. ರತ್ನಾವಳಿ ಅವನಿಗೆ ಎರಡು ಚಿತ್ರಗಳನ್ನು ತೋರಿಸಿದಳು. ಒಂದನೇ ಚಿತ್ರದಲ್ಲಿ ಸುಂದರವಾದ ಒಂದು ಹೂವಿನ ತೋಟ, ಅದಕ್ಕೆ ಸುತ್ತಲೂ ಕಟ್ಟಿಗೆಯ ಬೇಲಿಯಿದ್ದಿತು. ಇನ್ನೊಂದು ಚಿತ್ರದಲ್ಲಿ ಆ ಕಟ್ಟಿಗೆಯ ಬೇಲಿ ಕತ್ತರಿಯಾಗಿ ಹೂವಿನ ತೋಟವನ್ನು ಕತ್ತರಿಸಿತ್ತು. ರತ್ನಾವಳಿ ಅದರ ಅರ್ಥವನ್ನು ಕೇಳಿದಳು.

ರಾಜಕುಮಾರ ಅಮೃತೇಶನಿಗೆ ಅದರ ಅರ್ಥವೇ ಹೊಳೆಯಲಿಲ್ಲ.

‘ಸರಿ ಹಾಗಿದ್ದರೆ, ಇನ್ನುಮುಂದೆ ನೀನು ನನ್ನ ಸೇವಕ’ ಎಂದಳು ರತ್ನಾವಳಿ.

ಎಷ್ಟು ದಿನವಾದರೂ ರಾಜಕುಮಾರ ಅಮೃತೇಶ ಬಾರದಿರಲು, ಎರಡನೇ ರಾಜಕುಮಾರ ಲಕ್ಷ್ಮೀಶ ಅಣ್ಣನನ್ನು ಹುಡುಕುತ್ತಾ ಬಂದ. ದಾರಿಯಲ್ಲಿ ಒಬ್ಬ ಮುದುಕ ತನ್ನ ಬೆನ್ನಮೇಲೆ ಹೊರಲಾರದಷ್ಟು ಕಟ್ಟಿಗೆಯ ಹೊರೆಯನ್ನು ಹೊತ್ತಿದ್ದರೂ, ಇನ್ನೂ ಕಟ್ಟಿಗೆಯ ಚೂರು ಹೆಕ್ಕುತ್ತಿದ್ದುದನ್ನು ಲಕ್ಷ್ಮೀಶ ನೋಡಿದ.

‘ತಾತ, ನಿಮಗೆ ಸಹಾಯ ಮಾಡಲೇ’ ಎಂದು ಲಕ್ಷ್ಮೀಶ ಕೇಳಿದರೂ, ಆತ ಉತ್ತರಿಸದೇ ತನ್ನ ಕೆಲಸ ಮುಂದುವರೆಸಿದ.

ಲಕ್ಷ್ಮೀಶ ರತ್ನಾವಳಿಯನ್ನು ಭೇಟಿ ಮಾಡಿದ.

‘ರಾಜಕುಮಾರನೇ, ದಾರಿಯಲ್ಲಿ ನೀನೇನು ಕಂಡೆ?’

ಲಕ್ಷ್ಮೀಶ ವಿವರವಾಗಿ ತಾನು ಕಂಡಿದ್ದನ್ನು ಹೇಳಿದ.

‘ಇದರರ್ಥವೇನು’ ಎಂದು ಕೇಳಿದಳು ರತ್ನಾವಳಿ.

‘ನನಗೆ ಗೊತ್ತಿಲ್ಲ’

‘ಹಾಗಾದರೆ, ಇನ್ನು ನೀನು ನನ್ನ ಸೇವಕ’ ಎಂದಳು ರತ್ನಾವಳಿ.

ಬಹಳ ದಿನಗಳಾದರೂ ಇಬ್ಬರು ಅಣ್ಣಂದಿರೂ ಬಾರದಿರಲು ಮೂರನೆಯ ರಾಜಕುಮಾರ ವಜ್ರೇಶ ಹೊರಟ. ಬರುತ್ತ ದಾರಿಯಲ್ಲಿ ಆತ ಒಂದು ದೊಡ್ಡಕೆರೆಯಿಂದ ನೀರು ಉಕ್ಕಿ ಉಕ್ಕಿ ಹೊರಗೆ ಹರಿದು, ಕೆರೆ ಬರಿದಾಗುವುದನ್ನು ಆಶ್ಚರ್ಯದಿಂದ ನೋಡಿ, ರತ್ನಾವಳಿಯ ಬಳಿ ಬಂದು ತಲುಪಿದ. ರತ್ನಾವಳಿ ಆತನಿಗೆ ದಾರಿಯಲ್ಲಿ ಕಂಡಿದ್ದನ್ನು ವಿವರಿಸಲು ಕೇಳಿದಳು.

‘ನನಗೆ ಗೊತ್ತಿಲ್ಲ’ ಎಂದ ವಜ್ರೇಶ.

ಅವನನ್ನೂ ಸೇವಕನನ್ನಾಗಿ ಮಾಡಿಕೊಂಡಳು ರತ್ನಾವಳಿ.

ಮೂರೂ ಜನ ಅಣ್ಣಂದಿರನ್ನು ಹುಡುಕಿಕೊಂಡು ನಾಲ್ಕನೆಯ ರಾಜಕುಮಾರ ಭರತೇಶ ಅರಮನೆಗೆ ಒಂದು ರತ್ನಾವಳಿಯನ್ನು ಭೇಟಿಯಾಗಿ, ‘ನಾನು ಬಂದಿರುವುದು ನನ್ನ ಅಣ್ಣಂದಿರನ್ನು ಬಿಡಿಸಲು. ನೀನು ಯಾವ ಪ್ರಶ್ನೆಗಳನ್ನು ನನ್ನ ಅಣ್ಣಂದಿರಿಗೆ ಕೇಳಿದೆ? ಅದನ್ನು ನನಗೆ ಹೇಳು, ನಾನು ಉತ್ತರಿಸುತ್ತೇನೆ’ ಎಂದ.

ರತ್ನಾವಳಿ ಅಚ್ಚರಿಯಿಂದ ‘ಆಗಲಿ’ ಎಂದು ಪ್ರಶ್ನೆಗಳನ್ನು ಕೇಳಿದಳು.

ಭರತೇಶ ರತ್ನಾವಳಿಯ ಪ್ರಶ್ನೆಗೆ ಉತ್ತರಿಸಿದ.

‘ನಿನ್ನ ಮೊದಲನೆಯ ಪ್ರಶ್ನೆಯ ಉತ್ತರ-ಬೇಲಿ ಎಂಬುದು ಅರಸನ ಅಧಿಕಾರ, ಅರಸನೇ ಪ್ರಜೆಗಳಿಗೆ ತೊಂದರೆ ಕೊಟ್ಟರೆ ರಾಜ್ಯ ಉಳಿದೀತೆ?’

ನಿನ್ನ ಎರಡನೆಯ ಪ್ರಶ್ನೆಗೆ ಉತ್ತರ- ‘ಮನುಷ್ಯನ ದುರಾಸೆ. ತನಗೆ ಎಷ್ಟೇ ಇದ್ದರೂ, ಮನುಷ್ಯ ಅತಿಯಾಸೆಯಿಂದ ಮುಪ್ಪಿನಲ್ಲೂ ಅತೃಪ್ತಿಯಾಗೇ ಉಳಿಯುತ್ತಾನೆ, ಅಶಾಂತಿಯಿಂದ ಬದುಕುತ್ತಾನೆ’.

ಇನ್ನು ನಿನ್ನ ಮೂರನೇ ಪ್ರಶ್ನೆಗೆ ಉತ್ತರ- ಹೆಚ್ಚು ಬಳಸಿದಂತೆ ಹೇಗೆ ಕೆರೆಯ ನೀರು ಬರಿದಾಗುವುದೋ ಹಾಗೆಯೇ ಎಷ್ಟೇ ಹಣವಿದ್ದರೂ ದುಂದುವೆಚ್ಚದಿಂದ ಮನುಷ್ಯ ದಿವಾಳಿಯಾಗುತ್ತಾನೆ.

‘ರಾಜಕುಮಾರನೆ, ಇನ್ನೂ ಎರಡು ಚಿತ್ರಗಳನ್ನು ತೋರಿಸುತ್ತೇನೆ ಅದರ ಅರ್ಥವನ್ನು ವಿವರಿಸು’ ಎಂದು ಎರಡು ಚಿತ್ರಗಳನ್ನು ತೋರಿಸಿದಳು.

ಒಂದರಲ್ಲಿ ದೊಡ್ಡ ಅರಮನೆ ಕುಸಿಯುತ್ತಿರುವ ಚಿತ್ರವಿತ್ತು. ಎರಡನೆಯದರಲ್ಲಿ ಒಂದು ಬಲವಾದ ಹದ್ದು, ಹಣ್ಣು ತುಂಬಿದ ಗಿಡದಲ್ಲಿ ಕುಳಿತಿದ್ದರೂ, ಚಿಕ್ಕ ಚಿಕ್ಕ ಪಕ್ಷಿಗಳನ್ನು ತಿನ್ನುವ ಚಿತ್ರವಿತ್ತು.

‘ಎಷ್ಟೇ ದೊಡ್ಡ ಅರಮನೆಯಿದ್ದರೇನಾಯಿತು. ಅದರ ಬುನಾದಿ ಸರಿ ಇಲ್ಲದಿದ್ದರೆ ಅದು ಕುಸಿದು ಬಿದ್ದೀತು. ಅಂತೆಯೇ ಬಾಳಿನಲ್ಲಿ ಎಷ್ಟೇ ಹಣ ಗಳಿಸಿದರೂ ಸರಿಯಾದ ಮೌಲ್ಯವಿರದಿದ್ದರೆ ಬಾಳು ಹಾಳಾಗುವುದು. ಇದು ಮೊದಲನೆ ಚಿತ್ರದ ಅರ್ಥ. ಇನ್ನು ಎರಡನೆಯ ಚಿತ್ರ. ಕ್ರೂರವಾದ ಮನುಷ್ಯನಿಗೆ ಅಧಿಕಾರ ಬಂದರೆ ಆತ ಕಾರಣವಿಲ್ಲದೆಯೂ ಬಲಹೀನರನ್ನು ಹಿಂಸಿಸುತ್ತಾನೆ.’

ಭರತೇಶನ ಮಾತಿನಿಂದ ರತ್ನಾವಳಿ ನಿಬ್ಬೆರಗಾದಳು.

‘ರಾಜಕುಮಾರ, ನೀನೊಂದು ಪ್ರಶ್ನೆಯನ್ನು ಕೇಳು ನಾನು ಉತ್ತರಿಸುತ್ತೇನೆ. ನಾನು ಉತ್ತರಿಸದಿದ್ದರೆ ನಿನ್ನನ್ನು ಮದುವೆಯಾಗುತ್ತೇನೆ’. 

ಒಂದು ಕ್ಷಣ ಭರತೇಶ ವಿಚಾರ ಮಾಡಿ ಕೇಳಿದ, ‘ರತ್ನಾವಳಿ, ನನ್ನ ಯಾವ ಪ್ರಶ್ನೆಗೆ ನೀನು ಉತ್ತರಿಸಲಾರೆ ಹೇಳು?’

ರತ್ನಾವಳಿ ನಕ್ಕು ಭರತೇಶನನ್ನು ಮದುವೆಯಾದಳು.

(ತಮ್ಮ ‘ಮೆಚ್ಚಿನ ಕಥೆ’ಗಳಿಂದ ಸುಧಾಮೂರ್ತಿಯವರು ಪುಟಾಣಿಗಳಿಗೆ ಹೆಕ್ಕಿಕೊಟ್ಟಿದ್ದು)


ಸುಧಾಮೂರ್ತಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.