ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಳಿಸುದ್ದಿಗಳಿಗೆ ಬೆಚ್ಚಿದ ಸಸಿವಾಳ

Last Updated 15 ಡಿಸೆಂಬರ್ 2018, 20:00 IST
ಅಕ್ಷರ ಗಾತ್ರ

ಸಸಿವಾಳವೆಂಬುದು ಹಾಸನ ಜಿಲ್ಲೆಯ, ಅರಸೀಕೆರೆ ತಾಲ್ಲೂಕಿಗೆ ಸೇರಿದ ಗ್ರಾಮ. ಬಯಲುಸೀಮೆಗೆ ಸೇರಿದ್ದರೂ, ಕಣಿವೆ ಪ್ರದೇಶವಾದ್ದರಿಂದ ತೆಂಗು ಕಂಗುಗಳಿಂದ ಕಂಗೊಳಿಸುವ ಈ ಊರು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಇತ್ತೀಚೆಗೆ ಹಬ್ಬಿರುವ ಗಾಳಿ ಸುದ್ದಿಯೊಂದು ಜನರ ನಿದ್ದೆಗೆಡಿಸಿದೆ.

ಸುಮಾರು ಮೂರು ತಿಂಗಳುಗಳಿಂದ ಕೇಂದ್ರ ಸರ್ಕಾರದ ಭೂಸರ್ವೇಕ್ಷಣಾ ಇಲಾಖೆಯವರು ಇಲ್ಲಿ ನಡೆಸುತ್ತಿರುವ ಕ್ಷೇತ್ರ ಅಧ್ಯಯನ ಕೆಲಸ ಗಮನಿಸಿದ ಜನ ತರಹೇವಾರಿ ಗಾಳಿಸುದ್ದಿ ಹಬ್ಬಿಸತೊಡಗಿದರು. ಇಲ್ಲಿ ಗಣಿಗಾರಿಕೆ ನಡೆಯುತ್ತದೆಂದೂ, ಸುತ್ತಮುತ್ತಲಿನ ಗ್ರಾಮಗಳನ್ನು ಖಾಲಿ ಮಾಡಿಸುತ್ತಾರೆಂದೂ, ಮನೆ–ಮಠ ಕಳೆದುಕೊಂಡರೆ ಮುಂದೇನು ಗತಿ ಎಂದೂ ಪುಕಾರುಗಳು ರೆಕ್ಕೆ ಪುಕ್ಕ ಕಟ್ಟಿಕೊಂಡು ವ್ಯಾಪಕವಾಗಿ ಹಬ್ಬಿದವು. ಪ್ರತಿಭಟನೆಗಳೂ ನಡೆದು, ಕೊನೆಗೆ ಭೂಸರ್ವೇಕ್ಷಣಾ ಇಲಾಖೆಯವರ ಕೆಲಸವನ್ನೇ ಸ್ಥಗಿತಗೊಳಿಸುವಷ್ಟು ಮಟ್ಟಿಗೆ ತೀವ್ರತೆ ಪಡೆದವು.

ಈ ವಿಷಯವನ್ನು ಒಂದು ಟಿ.ವಿ. ವಾಹಿನಿಯವರು ರಂಜನೀಯವಾಗಿ ಬಿತ್ತರಿಸಿ ಗಾಳಿಸುದ್ದಿಗಳಿಗೆ ಮತ್ತಷ್ಟು ಹೂರಣ ತುಂಬಿದರು. ಸಸಿವಾಳದ ಸುತ್ತಮುತ್ತ ಯುರೇನಿಯಂ ಮತ್ತು ಪ್ಲುಟೋನಿಯಂ ನಿಕ್ಷೇಪಗಳಿವೆ, ಅವು ಭಾರಿ ಹಾನಿಕಾರಕ, ಅವುಗಳ ಗಣಿಗಾರಿಕೆ ಅಲ್ಲಿ ನಡೆಯುತ್ತದೆ, ಇದರಿಂದ ಘೋರ ಪರಿಣಾಮ ಉಂಟಾಗಬಹುದು ಎಂದು ಪ್ರಾರಂಭಿಸಿದ ಟಿ.ವಿ. ವರದಿಗಾರರು, ಅದೇ ಕಾರ್ಯಕ್ರಮದ ಕೊನೆಯಲ್ಲಿ ಅದು ಯುರೇನಿಯಂ ಅಥವಾ ಪ್ಲುಟೋನಿಯಂ ಅಲ್ಲ, ಅದು ಪ್ಲಾಟಿನಂ ಎಂದು ಹೇಳಿ ಗೊಂದಲ ಸೃಷ್ಟಿಸಿದರು. ಅಲ್ಲಿ ಗಣಿಗಾರಿಕೆ ನಡೆಸಲು ಎಲ್ಲಾ ಸಜ್ಜಾಗಿದ್ದು, ಸಸಿವಾಳ ಗ್ರಾಮಸ್ಥರನ್ನು ಒಕ್ಕಲೆಬ್ಬಿಸುವ ಕಾರ್ಯ ಆರಂಭವಾಗಲಿದೆ ಎಂಬ ಸುದ್ದಿ ಹರಿಬಿಟ್ಟರು.

ಅಲ್ಲಿನ ಗ್ರಾಮಸ್ಥರು ಈ ಸುದ್ದಿಗಳಿಗೆ ತಮ್ಮದೇ ವ್ಯಾಖ್ಯಾನ ಕೊಟ್ಟು, ಇನ್ನು ತಮ್ಮ ಹೊಲ–ಮನೆ ಹೋಗುತ್ತದೆ ಎಂಬ ಭಯ ಹರಡತೊಡಗಿದರು. ಭೂಸರ್ವೇಕ್ಷಣಾ ಇಲಾಖೆಯ ಅಧಿಕಾರಿಗಳು ತಿಳಿಸಿದ ವಾಸ್ತವಾಂಶ, ಸರ್ಕಾರದ ಸ್ಥಳೀಯ ಅಧಿಕಾರಿಗಳು ಹೇಳಿದ ಮಾತುಗಳು ಗ್ರಾಮಸ್ಥರ ಆತಂಕ ದೂರ ಮಾಡಲಿಲ್ಲ. ಗಾಳಿಸುದ್ದಿಗಳು ಮೂಡಿಸಿರುವ ಆತಂಕದ ತೀವ್ರತೆ ಆಶ್ಚರ್ಯವಾಗುವಂತೆ ಇದೆ.

ವಾಸ್ತವವೇನು?
ಸಸಿವಾಳ ಮತ್ತು ಅದರ ಸುತ್ತಮುತ್ತಲಿನ ರಾಂಪುರ, ಕಾಮಸಮುದ್ರ, ತುಂಬಾಪುರ, ಜೆ.ಸಿ.ಪುರ, ಮಲ್ಲೇನಹಳ್ಳಿ, ಗೊಲ್ಲರಹಟ್ಟಿ ಮುಂತಾದ ಊರುಗಳಿರುವ ಭಾಗ ರಾಜ್ಯದಲ್ಲಿ ಪುರಾತನ ಕಲ್ಲುಗಳಿಂದ ಆವೃತವಾದ ಪ್ರದೇಶ. ಇಲ್ಲಿನ ಶಿಲೆಗಳು ಸುಮಾರು 330 ಕೋಟಿ ವರ್ಷಗಳ ಹಿಂದೆ ಉಂಟಾಗಿದ್ದು, ಅವುಗಳನ್ನು ಹಸಿರು ಕಲ್ಲುಗಳ ಶ್ರೇಣಿ (Green stone belt) ಎಂದು ಭೂವಿಜ್ಞಾನ ಪರಿಭಾಷೆಯಲ್ಲಿ ಕರೆಯುತ್ತಾರೆ. ಮೇಲೆ ಹೇಳಿದ ಊರುಗಳಲ್ಲಿ ಪ್ರಮುಖವಾದ ಜೆ.ಸಿ.ಪುರದ ಹೆಸರನ್ನು ಈ ಶ್ರೇಣಿಗೆ ಇಟ್ಟಿದ್ದು, ಭೂವಿಜ್ಞಾನ ಸಾಹಿತ್ಯದಲ್ಲಿ, ‘ಜೆ.ಸಿ.ಪುರ ಗ್ರೀನ್ ಸ್ಟೋನ್ ಬೆಲ್ಟ್’ ಎಂದೇ ಕರೆದಿದ್ದಾರೆ.

ಒಂದು ಕಾಲದಲ್ಲಿ ಇದು ಸಮುದ್ರದಿಂದ ಆವೃತವಾಗಿತ್ತು. ಆ ಸಮುದ್ರದ ತಳದಲ್ಲಿ ಹೊರಚಿಮ್ಮಿದ ಅತ್ಯಂತ ಹೆಚ್ಚು ಉಷ್ಣತೆಯ ಲಾವಾರಸದಿಂದ ಕೊಮಾಟಿಯೈಟ್ ಮತ್ತು ಬೆಸಾಲ್ಟ್ ಶಿಲೆಗಳು ಉಂಟಾದವು. ಕಾಲಾನುಕ್ರಮದಲ್ಲಿ ನೂರಾರು ಮಾರ್ಪಾಡುಗಳಾಗಿ ಸಮುದ್ರದ ಅಡಿಯಲ್ಲಿದ್ದ ಕಲ್ಲುಗಳು ಇಂದು ಬೆಟ್ಟ ಶ್ರೇಣಿಗಳ ಸ್ಥಿತಿ ತಲುಪಿವೆ. ಸುಮಾರು 25 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಹರಡಿರುವ ಈ ಕಲ್ಲುಗಳಲ್ಲಿ ಕೆಲವೊಮ್ಮೆ ನಿಕಲ್ ಮತ್ತು ತಾಮ್ರ ಸಿಗುವ ಸಾಧ್ಯತೆ ಇರುತ್ತದೆ. ಅಪರೂಪಕ್ಕೆ ಪ್ಲಾಟಿನಂ ಗುಂಪಿನ– ಅಂದರೆ ಪ್ಲಾಟಿನಂ, ಪಲಾಡಿಯಂ, ರೋಡಿಯಂ, ರುದೇನಿಯಂ, ಆಸ್ಮಿಯಂ ಮತ್ತು ಇರಿಡಿಯಂ– ಅಂಶಗಳು ಸಿಗುವ ಸಾಧ್ಯತೆ ಇರುತ್ತದೆ.

ಅತ್ಯಮೂಲ್ಯ ಲೋಹವಾಗಿ ಮತ್ತು ಹೆಚ್ಚಿನ ಉಷ್ಣತೆ ತಡೆಯುವ ಲೋಹವಾಗಿ ಪ್ಲಾಟಿನಂ ಅನೇಕ ಲೋಹಸಂಬಂಧಿ ಕೈಗಾರಿಕೆಗಳಲ್ಲಿ ಬಳಕೆಯಲ್ಲಿದ್ದು, ಹೆಚ್ಚು ಬೆಲೆಬಾಳುತ್ತದೆ. ಆದರೆ ಅದರ ನಿಕ್ಷೇಪಗಳು ಬಹಳ ಕಡಿಮೆ. ಅದರ ಗಣಿಗಾರಿಕೆ ದಕ್ಷಿಣ ಆಫ್ರಿಕಾದ ಟ್ರಾನ್ಸ್ ವಾಲ್ ಎಂಬಲ್ಲಿ ಮಾತ್ರ ನಡೆಯುತ್ತಿದ್ದು, ಈ ಲೋಹದ ಅದಿರಿನ ನಿಕ್ಷೇಪಗಳಿಗಾಗಿ ಪ್ರಪಂಚದಾದ್ಯಂತ ಹೆಚ್ಚಿನ ಅನ್ವೇಷಣೆ, ಸಂಶೋಧನೆಗಳು ನಡೆಯುತ್ತಿವೆ. ದಕ್ಷಿಣ ಆಫ್ರಿಕಾದ ಬುಷ್ವೆಲ್ಡ್ ಕಾಂಪ್ಲೆಕ್ಸ್, ಆಸ್ಟ್ರೇಲಿಯಾದ ಕಂಬಾಲ್ಡ ಪ್ರದೇಶ, ಕೆನಡಾದ ಸಡ್ ಬರಿ, ರಷ್ಯಾದ ನೊರೆಲ್ಸಿಕ್ ಮುಂತಾದ ಕಡೆ ಹಸಿರು ಕಲ್ಲುಗಳ ಶ್ರೇಣಿಗಳಿದ್ದು (ಜೆ.ಸಿ.ಪುರ ಶ್ರೇಣಿಯ ಹಸಿರು ಕಲ್ಲಿನಂತಹವು), ಅಲ್ಲೆಲ್ಲಾ ತಾಮ್ರ, ನಿಕಲ್, ಚಿನ್ನ, ಪ್ಲಾಟಿನಂ ಲೋಹಗಳಿಗಾಗಿ ವ್ಯಾಪಕ ಅನ್ವೇಷಣೆ ನಡೆದಿದೆ.

ಭಾರತದಲ್ಲೂ ಇಂತಹ ಕಲ್ಲುಗಳಿರುವ ಪ್ರದೇಶಗಳ ವಿವರವಾದ ನಕ್ಷೆ ತಯಾರಿಸಿ, ಅಲ್ಲಿರಬಹುದಾದ ನಿಕ್ಷೇಪಗಳ ಪತ್ತೆಗೆ ಕೆಲಸ ಮಾಡುವುದು ಭೂಸರ್ವೇಕ್ಷಣಾ ಇಲಾಖೆಯ ಜವಾಬ್ದಾರಿ. ಅಂತಹ ಒಂದು ಪ್ರಯತ್ನವಾಗಿ ಭೂವಿಜ್ಞಾನಿಗಳ ತಂಡ ಸಸಿವಾಳ ಹಾಗೂ ಸುತ್ತಮುತ್ತಲ ಬೆಟ್ಟ ಶ್ರೇಣಿಗಳಲ್ಲಿ ಅಧ್ಯಯನ ಕೈಗೊಂಡಿದೆ. ಕಲ್ಲಿನ ಮಾದರಿಗಳನ್ನು ಸಂಗ್ರಹಿಸುವುದು, ವಿವರವಾದ ನಕ್ಷೆ ತಯಾರಿಸುವುದು, ಸಂಗ್ರಹಿಸಿದ ಕಲ್ಲಿನ ಮಾದರಿಗಳನ್ನು ರಾಸಾಯನಿಕ ವಿಶ್ಲೇಷಣೆಗೆ ಒಳಪಡಿಸುವುದು ಮತ್ತು ಇದೆಲ್ಲದರ ಸಂಪೂರ್ಣ ಮಾಹಿತಿ ವ್ಯಾಖ್ಯಾನಿಸಿ, ಅನ್ವೇಷಿಸಿದ ಜಾಗ ಯಾವುದೇ ಖನಿಜದ ದೃಷ್ಟಿಯಿಂದ ಉಪಯುಕ್ತವೋ ಅಲ್ಲವೋ ಎಂಬ ವರದಿ ಸಿದ್ಧಪಡಿಸುವುದೇ ಅವರ ಉದ್ದೇಶ. ಕೆಲವೊಮ್ಮೆ ಇನ್ನೂ ಹೆಚ್ಚಿನ ನಿಖರತೆಗಾಗಿ ಭೂಮಿಯ ಒಳಗೂ (subsurface) ಶೋಧಿಸಬೇಕಾಗುತ್ತದೆ. ಆಗ ಭೂಭೌತ (geophysical) ಅನ್ವೇಷಣೆಯನ್ನೂ ಮಾಡಬೇಕಾಗುತ್ತದೆ. ಈ ಎಲ್ಲಾ ಚಟುವಟಿಕೆಗಳು ಭೂಸರ್ವೇಕ್ಷಣಾ ಇಲಾಖೆಯವರಿಂದ ಮೂರು ತಿಂಗಳ ಹಿಂದೆ ಪ್ರಾರಂಭವಾದವು. ಕುತೂಹಲದಿಂದ ಗಮನಿಸುತ್ತಿದ್ದ ಸ್ಥಳೀಯರು, ಇದು ಗಣಿಗಾರಿಕೆ ಮಾಡಲು ಸಿದ್ಧತೆ ಎಂದು ವ್ಯಾಖ್ಯಾನಿಸಿ ಊಹಾಪೋಹ ಹಬ್ಬಿಸಿದರು.

ಯಾವುದೇ ಪ್ರದೇಶದಲ್ಲಿ ಗಣಿಗಾರಿಕೆ ಪ್ರಾರಂಭಿಸಲು ಅನೇಕ ಹಂತದ ಪರೀಕ್ಷೆಗಳನ್ನು ಮಾಡಬೇಕಾಗುತ್ತದೆ. ಮುಖ್ಯವಾಗಿ ಯಾವುದೇ ಶಿಲೆಯ ಖನಿಜದಲ್ಲಿ ಲೋಹದ ಅಂಶ ಉತ್ತೇಜನಕಾರಿಯೇ ಎಂಬುದನ್ನು ನೋಡಬೇಕು. ನಂತರ ಆ ಖನಿಜದ ನಿಕ್ಷೇಪ ಗಣಿಗಾರಿಕೆ ಮಾಡುವಷ್ಟು ದೊಡ್ಡದಾಗಿದೆಯೇ ಎಂಬುದನ್ನು ಪರಿಗಣಿಸಬೇಕು. ನಂತರ ಪರಿಸರ ಸಂಬಂಧಿತ ಅನುಮೋದನೆಗಳು, ಸ್ಥಳೀಯ ಸ್ಥಿತಿಗತಿ ಹೀಗೆ ಹಲವಾರು ಕೋನಗಳಿಂದ ವಿಶ್ಲೇಷಿಸಿ, ಗಣಿಗಾರಿಕೆಗೆ ಸೂಕ್ತವೇ ಎಂಬುದನ್ನು ಪರಾಮರ್ಶಿಸಿದ ಮೇಲಷ್ಟೇ ಗಣಿಗಾರಿಕೆಯ ಪ್ರಸ್ತಾಪ ಬರುತ್ತದೆ.

ಸಸಿವಾಳ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಭೂಸರ್ವೇಕ್ಷಣಾ ಇಲಾಖೆಯ ವಿಜ್ಞಾನಿಗಳಷ್ಟೇ ಅಲ್ಲದೆ ಇತರೆ ಸಂಶೋಧಕರ ತಂಡಗಳೂ ಅನ್ವೇಷಣೆ ನಡೆಸಿವೆ. ವಿಶ್ವವಿದ್ಯಾಲಯ ಅನುದಾನ ಆಯೋಗದ ಆರ್ಥಿಕ ನೆರವಿನಿಂದ ನಮ್ಮ ತಂಡ ಕೂಡ ಈ ಭಾಗದಲ್ಲಿ ಅಧ್ಯಯನ ನಡೆಸಿದೆ. ಈ ಸಂಶೋಧನೆಗಳ ಪ್ರಕಾರ ಅಲ್ಲಿ ಗಣಿಗಾರಿಕೆ ನಡೆಸಬಹುದಾದಷ್ಟು ಲೋಹ ಪತ್ತೆಯಾಗಿಲ್ಲ.

ಅನೇಕ ವರ್ಷಗಳ ಹಿಂದೆ ಕಂಡುಬಂದ ಲೋಹೇತರ ಖನಿಜವಾದ ಕಲ್ನಾರು (asbestos) ಮತ್ತು ಮ್ಯಾಗ್ನಸೈಟ್ ಅದಿರುಗಳು ಇದ್ದರೂ, ಕಲ್ನಾರನ್ನು ಮಾತ್ರವೇ ಸ್ವಲ್ಪ ವರ್ಷಗಳವರೆಗೆ ಗಣಿಗಾರಿಕೆ ಮಾಡಿದ್ದು, ಅದೂ ಈಗ ಸ್ಥಗಿತಗೊಂಡಿದೆ.

ನಾವು ನಡೆಸಿದ ಸ್ಥೂಲ ಕಲ್ಲಿನ ಮಾದರಿ ವಿಶ್ಲೇಷಣೆಯಿಂದ (Random sampling) ಇಲ್ಲಿನ ಕೊಮಾಟಿಯೈಟ್ ಕಲ್ಲುಗಳಲ್ಲಿ ಸ್ವಲ್ಪ ಪ್ರಮಾಣದ ನಿಕಲ್ (ಶೇ 0.2 ರಿಂದ 0.5 ವರೆಗೆ) ಮತ್ತು ಕೊಬಾಲ್ಟ್ (ಶೇ 0.02-0.05ವರೆಗೆ) ಅಂಶ ಇರುವುದು ಗೊತ್ತಾಗಿದೆ. ಅದನ್ನು ಹೊರತುಪಡಿಸಿದರೆ ಪ್ಲಾಟಿನಂ ಅಂಶ ಅತ್ಯಲ್ಪವಿದೆ. ಅದರ ಅಂಶ ಕನಿಷ್ಠ ಪ್ರತಿ ಟನ್‌ಗೆ 2 ಗ್ರಾಂನಷ್ಟಾದರೂ ಇರಬೇಕು. ಅಂದರೆ ಒಂದು ಟನ್ ಕಲ್ಲನ್ನು ಪುಡಿ ಮಾಡಿ ಸಂಸ್ಕರಿಸಿದರೆ 2 ಗ್ರಾಂನಷ್ಟಾದರೂ ಪ್ಲಾಟಿನಂ ಲೋಹ ದೊರೆಯುವಂತಿದ್ದರೆ ಅದನ್ನು ಗಣಿಗಾರಿಕೆಗೆ ಯೋಗ್ಯ ಎಂದು ಪರಿಗಣಿಸಲಾಗುತ್ತದೆ.

ಬರೀ ಲೋಹದ ಅಂಶವಷ್ಟೇ ಅಲ್ಲದೆ, ಲೋಹದ ನಿಕ್ಷೇಪ ಕೂಡ ಸಾಕಷ್ಟು ದೊಡ್ಡದಿರಬೇಕು. ಅಂದರೆ ಈಗಿನ ಯಾಂತ್ರೀಕೃತ ಗಣಿಗಾರಿಕೆ ಯುಗದಲ್ಲಿ ಕನಿಷ್ಠ ಹತ್ತು ವರ್ಷವಾದರೂ ಗಣಿಗಾರಿಕೆ ಮಾಡುವಷ್ಟು ದೊಡ್ಡದಿರಬೇಕು. ಅದರಿಂದ ಲಾಭ ಬರುವಂತಿರಬೇಕು. ಈ ದೃಷ್ಟಿಯಿಂದ ಅಲ್ಲಿ ಗಣಿಗಾರಿಕೆ ಅಸಂಭವವೆಂದೇ ಹೇಳಬಹುದು. ಅಷ್ಟೇ ಅಲ್ಲದೆ, ಯಾವುದೇ ಪ್ರದೇಶದಲ್ಲಿ ಗಣಿಗಾರಿಕೆ ಪ್ರಾರಂಭಿಸುವ ಮುನ್ನ ಸ್ಥಳೀಯರ ಸಮ್ಮತಿ ಮುಖ್ಯವಾಗುತ್ತದೆ. ಯಾದಗಿರಿ ಜಿಲ್ಲೆಯ ಗೋಗಿ ಎಂಬಲ್ಲಿ ದೊಡ್ಡ ಯುರೇನಿಯಂ ನಿಕ್ಷೇಪ ಪತ್ತೆ ಮಾಡಿ, ನಿಖರವಾದ ಸಾಧ್ಯತಾ ವರದಿಯನ್ನು ಸಿದ್ಧಪಡಿಸಿ, ಅದರಂತೆ ಸಾಕಷ್ಟು ಗಣಿಗಾರಿಕೆ ಪೂರ್ವದ ಕೆಲಸಗಳನ್ನು ನಡೆಸಿ ಗಣಿಗಾರಿಕೆಗೆ ಸರ್ಕಾರ ಸಿದ್ಧವಾದರೂ, ಸ್ಥಳೀಯರ ವಿರೋಧ ಹಾಗೂ ಪರಿಸರ ಹಾನಿಗೆ ಸಂಬಂಧಿಸಿದಂತೆ ಬಂದ ದೂರುಗಳ ಹಿನ್ನಲೆಯಲ್ಲಿ ಅಲ್ಲಿ ಗಣಿಗಾರಿಕೆ ಸಾಧ್ಯವಾಗಿಲ್ಲ. ಕುದುರೆಮುಖ ಶ್ರೇಣಿಗಳಲ್ಲಿ ಅಗಾಧ ಪ್ರಮಾಣದಲ್ಲಿ ಕಬ್ಬಿಣದ ಅದಿರು ಇದ್ದರೂ ಪರಿಸರಕ್ಕೆ ಹಾನಿಯಾಗಬಾರದೆಂಬ ಕಾರಣಕ್ಕೆ ಅಲ್ಲಿ ಗಣಿಗಾರಿಕೆ ಸ್ಥಗಿತಗೊಂಡಿರುವುದು ಎಲ್ಲರಿಗೂ ತಿಳಿದ ವಿಷಯ. ಈ ಎಲ್ಲಾ ಹಿನ್ನೆಲೆಯಲ್ಲಿ ಅವಲೋಕಿಸಿದಾಗ ಸಸಿವಾಳ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಯಾವುದೇ ಉತ್ತೇಜಕ ಪರಿಸರವಿಲ್ಲ.

ಹಾಗಾದರೆ ಭೂಸರ್ವೇಕ್ಷಣಾ ಇಲಾಖೆಯವರು ಇಲ್ಲೇಕೆ ಅನ್ವೇಷಣೆ ಮಾಡುತ್ತಿದ್ದಾರೆ? ಇಡೀ ದೇಶದ ಭೂಭಾಗವನ್ನು ಮತ್ತು ಕೆಲವೊಮ್ಮೆ ಸಮುದ್ರ ತಳವನ್ನು ಅನ್ವೇಷಣೆ ಮಾಡಿ ಇರಬಹುದಾದ ಖನಿಜಗಳ ಪ್ರಮಾಣದ ಅಂದಾಜು ಮಾಡುವುದು ಅವರ ಕೆಲಸವೇ ಹೊರತು, ಗಣಿಗಾರಿಕೆ ಮಾಡುವುದು ಅವರ ಕೆಲಸವಲ್ಲ. ಇಷ್ಟಕ್ಕೂ ದೇಶದ ವಿವಿಧೆಡೆ ದೊರೆಯುವ ಅನೇಕ ಖನಿಜ ಸಂಪನ್ಮೂಲಗಳ ಮಾಹಿತಿ ನಮಗೆ ಇರಲೇಬೇಕು. ನಮ್ಮ ಆಂತರಿಕ ಉಪಯೋಗಕ್ಕಾಗಲಿ, ದೇಶದ ರಕ್ಷಣೆಗೆ ಬೇಕಾಗುವ ನೂರಾರು ತರಹದ ಮಿಲಿಟರಿ ಸಲಕರಣೆ ತಯಾರಿಕೆಗಾಗಲಿ, ಖನಿಜಗಳು ಬೇಕೇಬೇಕು. ನಮ್ಮಲ್ಲಿರುವ ಸಂಪನ್ಮೂಲಗಳ ಅಭಿವೃದ್ಧಿಯಲ್ಲಿ ಭೂಸರ್ವೇಕ್ಷಣಾ ಇಲಾಖೆಯದ್ದು ಮಹತ್ತರ ಪಾತ್ರ. ಅದರರ್ಥ ಅವರು ಕೆಲಸ ಮಾಡುವ ಕಡೆ ಗಣಿಗಾರಿಕೆ ಪ್ರಾರಂಭವಾಗೇಬಿಡುತ್ತದೆಂದು ತಿಳಿಯಬೇಕಿಲ್ಲ. ಅನ್ವೇಷಣೆಯ ಪ್ರಯತ್ನದಿಂದ ನಮ್ಮ ದೇಶದ ಮತ್ತು ರಾಜ್ಯದ ನಿಕ್ಷೇಪಗಳ ವಿವರವಾದ ಮಾಹಿತಿ ನಮಗೆ ಲಭ್ಯವಿರುತ್ತದೆ. ಅಗತ್ಯವಿದ್ದಾಗ ಮತ್ತು ತುರ್ತು ಸ್ಥಿತಿಯ ಸನ್ನಿವೇಶದಲ್ಲಿ ಅವುಗಳನ್ನು ಹೊರತೆಗೆದು, ಸಂಸ್ಕರಿಸಿ ಉಪಯೋಗಕ್ಕೆ ಲಭ್ಯಗೊಳಿಸಬಹುದು.

ಇಷ್ಟಕ್ಕೂ ಸಸಿವಾಳದ ಆಸುಪಾಸಿನ ಗ್ರಾಮಸ್ಥರ ಆತಂಕ ಈಗಿನದಷ್ಟೇ ಅಲ್ಲ. ಅದಕ್ಕೆ ಒಂದು ದಶಕದ ಇತಿಹಾಸವಿದೆ. ಸುಮಾರು 10 ವರ್ಷಗಳ ಹಿಂದೆ ಇಂತಹ ಗಾಳಿಸುದ್ದಿಯೊಂದು ಹಬ್ಬಿತ್ತು. ಅಲ್ಲಿನ ಬೆಟ್ಟ ಶ್ರೇಣಿಗಳಲ್ಲಿ ಪೈರಾಕ್ಸಿನೈಟ್ ಎಂಬ ಅದಿರನ್ನು ಗಣಿಗಾರಿಕೆ ಮಾಡಿ ತೆಗೆಯುತ್ತಾರೆಂತಲೂ, ಅಲ್ಲಿನ ಜನರನ್ನು ಒಕ್ಕಲೆಬ್ಬಿಸುತ್ತಾರೆಂತಲೂ ವಿಷಯ ಹರಡಿ, ಆ ಊರಿಗೆ ಅಪರಿಚಿತರು ಯಾರೇ ಹೋದರೂ ಅವರನ್ನು ಜನ ಗುಮಾನಿಯಿಂದ ನೋಡುವ ಪರಿಸ್ಥಿತಿ ಉಂಟಾಗಿತ್ತು. ಈಗಲೂ ಅವರ ಆತಂಕ ಮುಂದುವರಿದಿರುವುದನ್ನು ನೋಡಿದರೆ ಗಾಳಿಸುದ್ದಿಗಳು ಏನೆಲ್ಲಾ ಗೊಂದಲ, ಭಯ ಉಂಟುಮಾಡಬಹುದೆಂದು ವಿಸ್ಮಯವಾಗುತ್ತದೆ.

(ಲೇಖಕರು ಬೆಂಗಳೂರು ವಿವಿಯ ಭೂಗರ್ಭಶಾಸ್ತ್ರ ವಿಭಾಗದಲ್ಲಿ ಸಂಶೋಧಕರಾಗಿದ್ದು ಡಾ. ಕೆ.ಎನ್.ರಾಧಿಕಾ, ಡಾ. ಬಿ.ಎನ್.ರಶ್ಮಿ, ಬಿ.ಜಿ.ದಯಾನಂದ್ ಮತ್ತು ಎಸ್.ಸಂತೋಷ್ ಅವರ ತಂಡದಲ್ಲಿದ್ದವರು.)

ಕಾಮಸಮುದ್ರ ಸಮೀಪ ಇರುವ, 330 ಕೋಟಿ ವರ್ಷಗಳ ಹಿಂದೆ ಸಮುದ್ರ ತಳದಲ್ಲಿ ಉಂಟಾದ ಕೊಮಾಟಿಯೈಟ್ ಕಲ್ಲು
ಕಾಮಸಮುದ್ರ ಸಮೀಪ ಇರುವ, 330 ಕೋಟಿ ವರ್ಷಗಳ ಹಿಂದೆ ಸಮುದ್ರ ತಳದಲ್ಲಿ ಉಂಟಾದ ಕೊಮಾಟಿಯೈಟ್ ಕಲ್ಲು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT