ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥೆ | ಬಾಡೂಟ

Last Updated 4 ಜೂನ್ 2022, 20:15 IST
ಅಕ್ಷರ ಗಾತ್ರ

ಆಫೀಸಿನಿಂದ ಬಂದವಳೇ ಕಾಫಿ ಮಾಡಿಕೊಂಡು ಸೋಫಾದ ಮೇಲೆ ಕುಸಿದಳು ಶಾಂತ. ಎದೆಯೊಳಗೆ ಹಿಂಡುವಂತ ನೋವು. ಕಣ್ಣಲ್ಲಿ ನೀರು ಬಳ ಬಳನೆ ಹರಿಯುತ್ತಿತ್ತು. ಏನಾಗುತ್ತಿದೆ ನನ್ನ ಜೀವನದಲ್ಲಿ? ಈಗ ನಾನು ಏನು ನಿರ್ಧಾರ ತೆಗೆದು ಕೊಳ್ಳಬೇಕು? ಎಷ್ಟು ಯೋಚಿಸಿದರೂ ಉತ್ತರ ಸಿಗುತ್ತಿಲ್ಲ. ಮನಸ್ಸು ತೂಗುಗುಂಡಿನಂತೆ ಆಚೆಯೊಮ್ಮೆ, ಈಚೆಯೊಮ್ಮೆ ಓಲಾಡುತ್ತಿತ್ತು. ಆಫೀಸಿನಲ್ಲಿ ಸ್ವಲ್ಪ ಮೈಮರೆತಿದ್ದಕ್ಕೆ ಈಗ ಎಂತಹ ಅಪರೂಪದ ತೊಂದರೆಗೆ ಸಿಕ್ಕಿಕೊಂಡಿದ್ದೇನೆ, ಇನ್ನು ಇದರಿಂದ ಹೇಗೆ ಹೊರಬರಲಿ? ಎಂದೆಲ್ಲ ಮನಸ್ಸು ಹಪಹಪಿಸುತ್ತಿತ್ತು. ಯಾಚಿಸಿದರೆ ಸಿಗದು, ಬೇಡವೆಂದರೆ ಬಿಟ್ಟೂ ಹೋಗದು, ಮರೆಯಬೇಕೆಂದರೆ ಕಣ್ಣ ಮುಂದೆಯೇ ಬಂದು ನಿಲ್ಲುವುದು, ಕೆಲಸಕ್ಕೆ ರಾಜೀನಾಮೆ ಕೊಟ್ಟು ಹೋಗಿಬಿಡೋಣ ಎಂದರೆ ಮತ್ತೆ ರೆಫರೆನ್ಸ್ ಚೆಕ್ ಅಂತ ಈ ಕಂಪನಿಯ ಮ್ಯಾನೇಜರ್ ಬಳಿಯೇ ಬರಬೇಕು. ಇಷ್ಟು ವಿಚಿತ್ರವಾದ ತೊಂದರೆ ಬೇರೆ ಯಾವ ಹೆಣ್ಣಿಗೂ ಕೊಟ್ಟಿರಲಿಕ್ಕಿಲ್ಲ ಆ ಭಗವಂತ ಎಂದು ದೇವರನ್ನೂ ನಿಂದಿಸಿದ್ದಾಯಿತು. ಸಮಸ್ಯೆಯನ್ನು ಮತ್ತೆ ಮತ್ತೆ ಮೆಲುಕು ಹಾಕಿ ಯೋಚಿಸಿದರೆ ಎಲ್ಲಾದರೂ ಅದಕ್ಕೆ ಪರಿಹಾರ ಸಿಗುವುದೋ ಎಂದು ಇನ್ನೊಮ್ಮೆ ಆಲೋಚಿಸಿದಳು.

ಮಂಗಳೂರಿನ ಪಕ್ಕ ಒಂದು ಕುಗ್ರಾಮದಲ್ಲಿ ಹುಟ್ಟಿ, ಬೆಳೆದ ಶಾಂತ ಕಣ್ಣುಗಳಲ್ಲಿ ಸಾವಿರ ಕನಸನ್ನು ತುಂಬಿಕೊಂಡು ಬೆಂಗಳೂರಿಗೆ ಬಂದಿದ್ದಳು. ಈ ಪ್ರತಿಷ್ಠಿತ ಕಂಪನಿಯಲ್ಲಿ ಸೆಕ್ರೆಟರಿ ಕೆಲಸ ಸಿಕ್ಕಿದಾಗ ಎಷ್ಟೊಂದು ಖುಷಿ ಪಟ್ಟಿದ್ದಳು. ಇವಳ ಕೆಲಸ ಮ್ಯಾನೇಜರೊಂದಿಗಾದರೂ, ಒಂದೆರಡು ಬಾರಿ ಆ ಕಂಪನಿಯ ಸಿಇಓ, ಗಣೇಶ್ ರಾವ್ ಅವರೊಂದಿಗೆ ಕೆಲಸ ಮಾಡುವ ಅವಕಾಶ ದೊರಕಿತ್ತು. ಇವಳ ಕೆಲಸ ಇಷ್ಟವಾಗಿಯೋ, ಅಥವಾ ಇವಳ ಗುಣಕ್ಕೆ ಮಾರುಹೋಗಿಯೋ ಏನೋ, ಗಣೇಶ್ ರಾವ್ ಇವಳೊಂದಿಗೆ ಯಾವಾಗಲೂ ಶಾಂತವಾಗಿಯೇ ಪ್ರವರ್ತಿಸುತ್ತಿದ್ದರು. ಇಷ್ಟು ದೊಡ್ಡ ಹುದ್ದೆಯಲ್ಲಿ ಇದ್ದರೂ ಒಬ್ಬ ಸಾಧಾರಣ ಸೆಕ್ರೆಟರಿಯೊಂದಿಗೆ ಸ್ವಲ್ಪ ಕೂಡ ಅಹಂಕಾರವಿಲ್ಲದೇ ಎಷ್ಟು ಗೌರವದಿಂದ ಮಾತಾಡುತ್ತಾರೆ. ಹೋಗಿ ಹೋಗಿ ಇವರನ್ನು ಕಟ್ಟುನಿಟ್ಟಿನ ಮನುಷ್ಯ, ಮಹಾ ಮುಂಗೋಪಿ ಅಂತ ಕರೆಯುತ್ತಾರಲ್ಲ ಇಲ್ಲಿನ ಸಿಬ್ಬಂದಿಗಳು ಅಂತ ಒಳಗೊಳಗೇ ನಕ್ಕಳು ಶಾಂತ. ಎಲ್ಲಾದರೂ ಸಿಕ್ಕಿದರೆ ಒಮ್ಮೊಮ್ಮೆ ಇವಳ ಉಡುಗೆ ತೊಡುಗೆಗಳ ಬಗ್ಗೆ ಹೊಗಳುವುದೂ ಇತ್ತು. ಇದನ್ನು ಕೇಳುವಾಗ ಶಾಂತಾಳ ಮನಸಿನೊಳಗೆ ಕಚಗುಳಿ ಇಟ್ಟಂತಾಗುತ್ತಿತ್ತು. ಬರುಬರುತ್ತಾ ಅವರ ಮೇಲೆ ಅವಳಿಗೆ ಆಕರ್ಷಣೆ ಮೂಡಲಾರಂಭಿಸಿತು. ಆದರೆ ಅಷ್ಟು ದೊಡ್ಡ ಕಂಪನಿಯ ಸಿಇಓ ನನ್ನಂಥ ಸಾಧಾರಣ ಸೆಕ್ರೆಟರಿಯನ್ನು ಪ್ರೇಮಿಸುವರೇ ಎಂದು ಮನಸ್ಸು ಆಗಾಗ ಎಚ್ಚರಿಸುತ್ತಿತ್ತು. ಹಾಗೆಯೇ, ಬೇಕು, ಬೇಡದ ನಡುವೆ ಮನಸ್ಸು ತೂಗುತ್ತಿದ್ದಾಗಲೇ ಒಂದು ದಿನ ಗಣೇಶ್ ಸರ್ ಅವಳನ್ನು ಬೇಕೆಂದೇ, ಇಲ್ಲದ ನೆಪ ಒಡ್ಡಿ ಕರೆಸುತಿದ್ದುದು ಅವಳ ಗಮನಕ್ಕೆ ಬಂತು. ಸರಿಯಾಗಿ ಗಮನಿಸುತ್ತಿದ್ದಂತೆ ಅವಳಿಗೆ ಗಣೇಶ್ ಸರ್ ಅವಳಿಗೆ ಮಾರುಹೋಗಿರುವುದು ಖಾತ್ರಿಯಾಯಿತು. ಆದರೆ ಅವರು ಬಾಯಿಬಿಟ್ಟು ಎಂದೂ ಹೇಳಿರಲಿಲ್ಲ. ಒಂದು ಕಡೆ, ಇದೆಲ್ಲ ಎಲ್ಲಿ ಹೋಗಿ ನಿಲ್ಲುತ್ತದೆಯೋ ಎಂದು ಭಯವಾದರೆ, ಇನ್ನೊಂದೆಡೆ ಇಂಥ ಒಳ್ಳೆಯ ಮನುಷ್ಯನನ್ನು ಪಡೆಯಲೇಬೇಕು ಎಂಬ ಸೆಳೆತ.

ಒಂದು ವಾರದ ರಜೆಯ ಮೇಲೆ ಡೆಲ್ಲಿಗೆ ಹೋಗುವ ಮುನ್ನ, ಬಾಡಿದ ಶಾಂತಾಳ ಮುಖವನ್ನು ನೋಡಿ ಗಣೇಶ್ ಸರ್ ಒಂದು ವಾರ ನಾನು ನೋಡಲು ಸಿಗುವುದಿಲ್ಲ ಅಂತ ಬೇಜಾರು ಮಾಡಬೇಡ. ನಾನು ಅದಕ್ಕೆ ಏನಾದರೂ ವ್ಯವಸ್ಥೆ ಮಾಡುತ್ತೇನೆ ಎಂದು ಕಣ್ಣು ಮಿಟುಕಿಸಿ ಮುಗುಳ್ನಕ್ಕಾಗ ಶಾಂತಾಳಿಗೆ ಸ್ವರ್ಗಕ್ಕೆ ಮೂರೇ ಗೇಣು. ಹೇಳಿದಂತೆಯೇ, ಡೆಲ್ಲಿಗೆ ಹೋದಾಗ ಒಂದೆರಡು ಬಾರಿ ಏನೋ ಆಫೀಸ್ ಕೆಲಸದ ನಿಮಿತ್ತ ಇವಳನ್ನು ಸಂಪರ್ಕಿಸಿದ್ದರು. ಅವರನ್ನು ನೋಡದೆ ಹುಚ್ಚಿಯಾಗಿದ್ದ ಶಾಂತಾಳಿಗೆ ಫೋನಿನಲ್ಲಿ ಅವರ ಧ್ವನಿ ಕೇಳಿದ್ದೇ, ಬಿಸಿಲಿಗೆ ಒಣಗಿದ ಗಂಟಲೊಳಗೆ ನೀರಿನ ಪಸೆ ಇಳಿದಂತಾಗಿತ್ತು. ಅಂದಿನಿಂದ ಅವರ ಪ್ರೀತಿ ಕಣ್ಣಲ್ಲೇ ಸಾಗುತ್ತಿತ್ತು. ಗಣೇಶ್ ಸರಿಗೆ ಶಾಂತಾಳನ್ನು ನೋಡಬೇಕೆಂದೆನಿಸಿದಾಗೆಲ್ಲ ಏನಾದರೂ ಕೆಲಸದ ನೆಪ ಒಡ್ಡಿ ನೋಡಲು ಬರುತ್ತಿದ್ದರು. ಆದರೆ ಎಂದೂ ಪ್ರೀತಿಯ ಬಗ್ಗೆ ಅವರು ಬಾಯಿ ಬಿಟ್ಟು ಶಾಂತಾಳೊಂದಿಗೆ ಮಾತಾಡಿಲ್ಲ. ಹಾಗಾಗಿ ಗಣೇಶ್ ಸರಿಗೆ ತನ್ನ ಮೇಲೆ ಯಾವ ರೀತಿಯ ಭಾವನೆ ಇದೆ, ಅವರು ಆಸೆ ಪಟ್ಟರೆ ಎಂಥಾ ದೊಡ್ಡ ಹುದ್ದೆಯ, ಪಟ್ಟಣದ ಶ್ರೀಮಂತ ಹುಡುಗಿ ಸಿಗುತ್ತಾಳೆ. ಹಾಗಿರುವಾಗ ನನ್ನಲ್ಲಿ ಏನು ಕಂಡರು? ಇದು ಶುದ್ಧವಾದ ಪ್ರೇಮವೇ ಅಥವಾ ಬರೀ ಕಾಮವೇ ಎಂದೆಲ್ಲ ಮನಸ್ಸು ತರ್ಕಿಸುತ್ತಿತ್ತು. ಆದರೆ ಗಣೇಶ್ ಸರ್ ಯಾವತ್ತೂ ಅವಳನ್ನು ಕಾಮುಕ ದೃಷ್ಟಿಯಿಂದ ನೋಡಿಯೇ ಇರಲಿಲ್ಲ. ಎಂದೂ, ಶಾಂತಾಳ ಕಣ್ಣಲ್ಲಿ ಒಂದು ಕ್ಷಣ ಕಣ್ಣಿಟ್ಟು ಅವಳೊಳಗಿನ ಜೀವರಸವನ್ನು ಹೀರುವಂತೆ ನೋಡಿ ಮರುಕ್ಷಣವೇ ಏನೂ ನಡೆದಿಲ್ಲವೆಂಬಂತೆ ಹೋಗುತ್ತಿದ್ದರು. ಹಾಗಾಗಿ ಶಾಂತಾಳ ಸಂದೇಹ, ಭಯ ದಿನೇ ದಿನೇ ಕಡಿಮೆಯಾಗತೊಡಗಿತು. ಎಲ್ಲರ ಮುಂದೆ ಅವರು ಇವಳೊಂದಿಗೆ ಯಾರಿಗೂ ಸಂದೇಹ ಬರದಂತೆ ವರ್ತಿಸುತ್ತಿದ್ದರು. ಅವರು ತನ್ನ ಪ್ರೀತಿಯನ್ನು ಬಯಲುಪಡಿಸಲು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದಾರೆ. ತಾನು ಅದನ್ನು ಕೆಡಿಸದೇ, ಆಫೀಸಿನಲ್ಲಿ ಅವರ ಮರ್ಯಾದೆಗೆ ಧಕ್ಕೆ ಬರದಂತೆ ನಡೆದುಕೊಂಡು, ಅವರಾಗೇ ಮಾತಾಡುವ ತನಕ ತಾನು ಏನೂ ಕೇಳುವುದಿಲ್ಲ ಎಂದು ನಿರ್ಧಾರ ಮಾಡಿಕೊಂಡಿದ್ದಳು ಶಾಂತ.

ಆದರೆ ಯಾಕೋ, ತಿಂಗಳುಗಟ್ಟಲೆ ಕಳೆದರೂ ಗಣೇಶ್ ಸರ್ ಇವಳೊಂದಿಗೆ ಈ ಬಗ್ಗೆ ಯಾವ ಪ್ರಸ್ತಾಪವೂ ಎತ್ತಲಿಲ್ಲ. ಎಲ್ಲರೆದುರಿಗೆ ಅವರಿಬ್ಬರ ಸೆಕ್ರೆಟರಿ-ಸಿಇಓ ಸಂಬಂಧ, ಹಾಗೂ ಯಾರಿಗೂ ಗೊತ್ತಾಗದಂತೆ ಕಣ್ ಸನ್ನೆಯ ಮೂಲಕ ಪ್ರೀತಿಯ ಸಂಬಂಧ ಹಾಗೇ ಮುಂದುವರಿದಿತ್ತು. ಈಚೀಚೆಗೆ, ಶಾಂತಾಳಿಗೂ ಕಾದು ಕಾದು ಸಾಕಾಗತೊಡಗಿತು. ಸದಾ ಅವರ ಬಗ್ಗೆಯೇ ಆಲೋಚಿಸುತ್ತಾ, ಅವರ ಕನಸನ್ನೇ ಕಾಣುತ್ತಿದ್ದ ಅವಳಿಗೆ ಅವರ ತೋಳ ತೆಕ್ಕೆಯಲ್ಲಿ ಬಂಧಿಯಾಗುವ ಹಂಬಲ ದಿನೇ ದಿನೇ ಹೆಚ್ಚಾಗತೊಡಗಿತು. ಹೀಗೇ ಗಮನವಿಲ್ಲದೆ ಕೆಲಸ ಮಾಡಿದ್ದರಿಂದೇನೊ, ಅವಳ ಕೆಲಸದಲ್ಲಿ ಒಂದು ತಪ್ಪಾಯಿತು. ಕೋಪಗೊಂಡ ಗಣೇಶ್ ಸರ್ ಮ್ಯಾನೇಜರ್ ಬಳಿ ಬಂದು ಇದು ಯಾರ ಕೆಲಸ ಎಂದು ಕೇಳಿದಾಗ ಮ್ಯಾನೇಜರ್ ಇವಳೆಡೆಗೆ ಬೆರಳು ತೋರಿಸಿದ್ದರು. ತನ್ನ ಒಂದು ಸಣ್ಣ ತಪ್ಪಿಗೆ ಗಣೇಶ್ ಸರ್ ಬಯ್ಯುವರೇ ಎಂದುಕೊಂಡು ಶಾಂತ ಅವರನ್ನು ನೋಡಿ ಮುಗುಳ್ನಗುವುದರೊಳಗೆ ಅವರು ಕೋಪದಿಂದ ಕೆಂಡಾಮಂಡಲವಾಗಿ ಬೈದರು. ಶಾಂತಾಳಿಗೆ ಒಂದು ಕಡೆ ಎಲ್ಲರ ಮುಂದೆ ಬೈಸಿಕೊಂಡದ್ದು ಒಂದು ಬಗೆಯ ಅವಮಾನವಾದರೆ, ಇನ್ನೊಂದೆಡೆ ಗಣೇಶ್ ಸರ್ ಒಂದು ಸಣ್ಣ ತಪ್ಪಿಗೆ ಹೀಗೇ ಅವಮಾನಿಸಿದ್ದು ಗಾಯದ ಮೇಲೆ ಉಪ್ಪು ಸವರಿದಂತಾಗಿತ್ತು.

ನೀವು ಯಾಕೆ ಹೀಗೇ ಮಾಡಿದಿರಿ ಅಂತ ಕೇಳಬೇಕೆನಿಸಿತು. ಯಾವಾಗಲೂ ಏನಾದರೂ ಕೆಲಸದ ಮೇಲೆ ಬ್ಯುಸಿಯಾಗಿರುತ್ತಿದ್ದ ಅವರೊಂದಿಗೆ ವೈಯಕ್ತಿಕವಾಗಿ ಮಾತನಾಡಲೂ ಅವಕಾಶವಿರಲಿಲ್ಲ. ಹೇಗೋ ಸಮಯ ಸಾಧಿಸಿ ಒಳ ಹೋದರೆ, ಹಿಂದೆಯೇ ಬಂದ ಮ್ಯಾನೇಜರ್ ಇವಳನ್ನು ಗದರಿ ಇಲ್ಲಿ ಸಿಇಓ ಆಫೀಸ್ ನಲ್ಲಿ ನಿನಗೇನು ಕೆಲಸ? ಎಂದು ಕೇಳಿದರು. ನಾನೇ ಅವಳನ್ನು ಬರಹೇಳಿದ್ದೆ ಅಂತ ಹೇಳಿ ನನ್ನನ್ನು ಬಚಾವ್ ಮಾಡುತ್ತಾರೆ ಎಂಬ ನಂಬಿಕೆಯಿಂದ ಶಾಂತ ಗಣೇಶ್ ಸರ್ ಮುಖ ನೋಡಿದಳು. ಅವರು ತುಟಿಯೆತ್ತಲಿಲ್ಲ, ಬದಲಿಗೆ ಅವಳ ಉತ್ತರಕ್ಕಾಗಿ ಕಾಯುತ್ತಿದ್ದರು. ಇದನ್ನು ನಿರೀಕ್ಷಿಸದ ಶಾಂತ ಏನು ಕಾರಣ ಹೇಳುವುದೆಂದು ತಡವರಿಸುತ್ತಿದ್ದಾಗಲೇ ಮ್ಯಾನೇಜರ್ ಇವಳನ್ನು ಕ್ಷುಲ್ಲಕ ದೃಷ್ಟಿಯಿಂದೊಮ್ಮೆ ನೋಡಿ,
‘ಇನ್ನೊಮ್ಮೆ ನೀನು ಇಲ್ಲಿ ಕಾರಣ ಇಲ್ಲದೇ ಬಂದರೆ ನಿನ್ನ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ’ ಅಂದರು.

ಈಗಲಾದರೂ ಗಣೇಶ್ ಸರ್ ಮಧ್ಯೆ ಬಾಯಿ ಹಾಕಿ ತನ್ನ ಬೆಂಬಲಕ್ಕೆ ನಿಲ್ಲುತ್ತಾರೆ ಅಂದುಕೊಂಡ ಶಾಂತಾಗೆ ನಿರಾಶೆ ಕಾದಿತ್ತು. ಅವರ ಭಂಗಿ ಮ್ಯಾನೇಜರ್ ಹೇಳಿದ್ದನ್ನು ಅನುಮೋದಿಸುವಂತಿತ್ತು. ಅಂದಿನಿಂದ ಇವರ ಸಹವಾಸವೇ ಬೇಡ ಎಂದು ತಾನುಂಟು, ತನ್ನ ಕೆಲಸವುಂಟು ಎಂದು ಇರಲಾರಂಭಿಸಿದಳು. ಆದರೆ ಎಂದಿನಂತೆ ಸಿಇಓ ಏನೋ ಕಾರಣ ಹುಡುಕಿ ಎಲ್ಲರೆದುರು ಇವಳನ್ನು ನೋಡುವುದು, ಮಾತಾಡುವುದು ಎಂದಿನಂತೆ ಸಾಗಿತ್ತು. ಒಂದೆರಡು ದಿನ ಮುನಿಸಿಕೊಂಡಿದ್ದರೂ, ಬೆನ್ನು ಬಿಡದ ಬೇತಾಳನಂತೆ ಇವಳ ಹಿಂದೆ ಹಿಂದೆಯೇ ಅವರು ಸುತ್ತುವುದು ನೋಡಿ ಇವಳಿಗೆ ಕನಿಕರ ಹುಟ್ಟಿ, ಅವರನ್ನು ನೋಡಿ ಮುಗುಳ್ನಕ್ಕಳು. ಪುನಃ ಅವರ ಪ್ರೇಮದ ಬಂಡಿ ಚಲಿಸಲಾರಂಭಿಸಿತು. ಹೀಗೆ ಹಲವು ಸಲ ನಡೆದಾಗ ಶಾಂತಾಳಿಗೆ ಗೊಂದಲವಾಗುತ್ತಿತ್ತು. ಅವರೊಂದಿಗೆ ವೈಯಕ್ತಿಕವಾಗಿ ಮಾತನಾಡುವ ಸಂಧರ್ಭವೂ ಇರಲಿಲ್ಲ, ಅವರು ಆಫೀಸಿನ ಹೊರಗಡೆ ಇವಳನ್ನು ಭೇಟಿಯೂ ಮಾಡುತ್ತಿರಲಿಲ್ಲ. ಆದರೆ ಕಣ್ಣಿನಾಟ ಮಾತ್ರ ಮುಂದುವರಿಸಿದ್ದರು. ಅವರು ಎಷ್ಟೇ ಬಾರಿ ಬೇಡವೆನಿಸಿದರೂ, ಅವರು ಮುಗ್ಧತನದಿಂದ ತನ್ನನ್ನು ನೋಡಲು ಇಲ್ಲದ ಕಾರಣ ಹುಡುಕಿ ಮತ್ತೆ ಮತ್ತೆ ಬರುವಾಗ ಶಾಂತಾಳ ಮನಸ್ಸು ಸೋಲುತ್ತಿತ್ತು. ಅವರು ಯಾವುದೋ ಇಬ್ಬಂದಿಗೆ ಸಿಕ್ಕಿ ಹೀಗೇ ಮಾಡುತ್ತಿದ್ದಾರೆ, ಇಂದಲ್ಲ, ನಾಳೆ ಅವರು ಖಂಡಿತಾ ನನ್ನನ್ನು ಸಂಧಿಸುತ್ತಾರೆ ಎಂದು ಕಾಯುತ್ತಿದ್ದಳು.

ಅಂದೊಂದು ದಿನ, ಸಿಇಓ ಅವರ ಆಫೀಸಿನಲ್ಲಿ ಒಬ್ಬರೇ ಕುಳಿತಿದ್ದರು. ಮ್ಯಾನೇಜರ್ ಕೂಡ ಇರಲಿಲ್ಲ. ಇದೇ ಸರಿಯಾದ ಸಂದರ್ಭ ಎಂದುಕೊಂಡು ಶಾಂತ ಗಣೇಶ್ ಸರ್ ಆಫೀಸಿಗೆ ಹೋದಳು. ಇವಳನ್ನು ಕಂಡು ಅವರು ಸಂತೋಷಪಡುವರು ಎಂದುಕೊಂಡ ಶಾಂತಾಗೆ ಆಶ್ಚರ್ಯ ಕಾದಿತ್ತು. ಗಂಭೀರವಾಗಿ, ಏನು? ಎಂದು ಕೇಳಿದರು. ಅವರು ಮುಖದ ಚರ್ಯೆ ನೋಡಿ ಶಾಂತಾಳಿಗೆ ಮಾತೇ ಹೊರಡಲಿಲ್ಲ. ಅದೂ... ಅದೂ ಅಂತ ತಡವರಿಸುತ್ತಿದ್ದಾಗಲೇ, ‘ಇದು ಕೆಲಸಕ್ಕೆ ಸಂಬಂಧಿಸಿದ ವಿಷಯವೇ?’ ಗಣೇಶ್ ಸರ್ ಕೋಪದಿಂದ ಗದರಿದರು.
ಭಯದಿಂದ ಬೆವತು, ಇಲ್ಲ ಎಂಬಂತೆ ತಲೆಯಾಡಿಸಿದಳು. ಅವರು ಏನೂ ಉತ್ತರಿಸದೆ ಎದ್ದು ಹೋದರು. ಇನ್ನೇನು ಬೇರೆಯವರು ನೋಡುವುದರೊಳಗೆ ಅವರ ಕೋಣೆ ಬಿಟ್ಟು ಹೊರಬಂದು ಮರ್ಯಾದೆ ಉಳಿಸಿಕೊಳ್ಳಬೇಕು ಎಂದುಕೊಳ್ಳುವಾಗಲೇ ಎಲ್ಲಿದ್ದರೋ ಈ ಮ್ಯಾನೇಜರ್, ಈಗ ಇವಳ ಹಿಂದೆ ನಿಂತಿದ್ದರು. ಮತ್ತೆ ಅವಳನ್ನು ತುಂಬಾ ಕೆಟ್ಟದಾಗಿ ಬೈದರು. ಈಗಾಗಲೇ, ಮ್ಯಾನೇಜರ್ ಸಮೇತ ಅಲ್ಲಿದ್ದ ಉಳಿದ ಸಿಬ್ಬಂದಿಗಳೂ ಇವಳನ್ನು ಅಣಕಿಸುವಂತೆ ನೋಡುತ್ತಿದ್ದರು. ಈಗಲಾದರೂ ಏನಾದರೂ ಹೇಳಿ ತನ್ನ ಮರ್ಯಾದೆ ಉಳಿಸಿಯಾರೇ ಎಂದು ದೈನ್ಯವಾಗಿ ಗಣೇಶ್ ಸರ್ ಕಡೆಗೆ ನೋಡಿದಳು. ಅಲ್ಲಿ ಸ್ವಲ್ಪವೂ ಕರುಣೆಯ ಪಸೆಯೇ ಇರಲಿಲ್ಲ. ಮನೆಗೆ ಬಂದ ಮೇಲೆ ಎಷ್ಟು ಆಲೋಚಿಸಿದರೂ ಯಾವ ಪರಿಹಾರ ಮಾರ್ಗವೂ ಕಾಣಲಿಲ್ಲ. ಇಷ್ಟಾದ ಮೇಲೂ ಅವರು ನಾಳೆ ಎಂದಿನಂತೆಯೇ ಪ್ರೀತಿಯಿಂದ ತನ್ನನ್ನು ನೋಡಲು ಬರುತ್ತಾರೆ, ಯಾರಿಗೂ ತಿಳಿಯದಂತೆ ಕಣ್ಣಲ್ಲೇ ಕಚಗುಳಿಯಿಡುತ್ತಾರೆ ಮತ್ತು ಅದಕ್ಕೆ ತಾನು ಸ್ಪಂದಿಸುತ್ತೇನೆ ಎಂದೂ ಶಾಂತಾಳಿಗೆ ಗೊತ್ತು. ಅವರನ್ನು ಬೇಡ ಎಂದು ಧಿಕ್ಕರಿಸಲು ಇನ್ನೂ ಅವಳ ಮನಸ್ಸು ಒಪ್ಪುತ್ತಿರಲಿಲ್ಲ. ಅವರು ತನ್ನೊಂದಿಗೆ ಹೀಗೇ ಮಾಡುತ್ತಿದ್ದಾರೆ ಎಂದು ಹೊರಗೆ ಹೇಳಿ ಅವರ ಮಾನ ಕಳೆಯಲೂ ಅವಳಿಂದ ಆಗುತ್ತಿಲ್ಲ. ಹಾಗೆ ಒಂದು ವೇಳೆ ಹೇಳಿದರೂ ಅದರ ಪರಿಣಾಮ ತನಗೇ ಮಾರಕವಾದೀತಲ್ಲವೇ?

ಅತ್ತೂ ಅತ್ತೂ ಸಾಕಾಗಿ, ಟಿವಿ ಆನ್ ಮಾಡಿದಳು. ಯಾವುದೋ ಸಿನಿಮಾ ಓಡುತ್ತಿತ್ತು. ಅರೆಮನಸ್ಸಿನಲ್ಲಿ ನೋಡಲಾರಂಭಿಸಿದಳು. ಅದರಲ್ಲಿ ಒಂದು ಅಬಲೆ ಗರ್ಭಿಣಿ ಹೆಣ್ಣಿನ ಶೋಷಣೆಯ ದೃಶ್ಯ ಬರುತ್ತಿತ್ತು. ಮದುವೆಯಾಗದೇ ಗರ್ಭಿಣಿಯಾದ ಕೀಳು ಜಾತಿಯ ಹೆಣ್ಣವಳು. ಅದನ್ನು ನೋಡುವಾಗ ಶಾಂತಾಳಿಗೆ ಚಿಕ್ಕವಳಿದ್ದಾಗ ನಡೆದ ಒಂದು ಘಟನೆ ನೆನಪಾಗಿ ಮನಸ್ಸು ಅವಳ ಹಳ್ಳಿಯ ಕಡೆಗೋಡಿತು.

ಅದು ಮುಸಲ್ಮಾನರು, ಕ್ರಿಶ್ಚಿಯನ್ನರು ಇಲ್ಲದೆ ಬರೀ ಹಿಂದೂಗಳು ಮಾತ್ರ ಇದ್ದ ಊರು. ಹಾಗೆಂದು ಬೇಧಭಾವವಿಲ್ಲದ ಊರೆಂದೇನೂ ಅಲ್ಲ. ಅಲ್ಲಿ ಬ್ರಾಹ್ಮಣ, ಕ್ಷತ್ರಿಯ,ವೈಶ್ಯ, ಶೂದ್ರ ಎಂಬ ನಾಲ್ಕು ವರ್ಣದ ಜನರೂ ಇದ್ದರು. ಬ್ರಾಹ್ಮಣರಿಗೆ ಅತೀ ಮರ್ಯಾದೆ ಇತ್ತಾದರೂ, ಕ್ಷತ್ರಿಯರೂ ಮತ್ತು ವೈಶ್ಯ ವರ್ಣೀಯರೂ ಸಾಧಾರಣವಾಗಿ ಎಲ್ಲ ಸವಲತ್ತುಗಳೊಂದಿಗೆ ಬದುಕುವ ಹಕ್ಕನ್ನು ಹೊಂದಿದ್ದರು. ಆದರೆ, ಈ ಶೂದ್ರರಿಗೆ ಮಾತ್ರ ಯಾವ ಹಕ್ಕೂ ಇರಲಿಲ್ಲ. ದೇವಸ್ಥಾನದೊಳಗೆ ಪ್ರವೇಶವಿಲ್ಲ, ಯಾರನ್ನೂ ಮುಟ್ಟುವಂತಿಲ್ಲ. ಹಾಗಾಗಿ, ಆವರಿಗೆ ಶಾಲೆಗೂ ಹೋಗುವಂತಿಲ್ಲ, ಗದ್ದೆಯಲ್ಲಿ, ಬೇರೆಯವರ ಮನೆಯಲ್ಲಿ ಕೆಲಸವೂ ಮಾಡುವಂತಿಲ್ಲ. ಊರಿನ ಹೊರಗೆ ಗುಡಿಸಲು ಕಟ್ಟಿಕೊಂಡು ಅವರ ವಾಸ. ಕಟ್ಟಿಗೆ ಆರಿಸಿ, ತೆಂಗಿನ ಗರಿಯ ಪೊರಕೆ, ಅಡಿಕೆ ಹಾಳೆಯ ಟೊಪ್ಪಿ ಮಾಡಿ ಅದನ್ನು ಮಾರಿ ಜೀವನ ಸಾಗಿಸಬೇಕಿತ್ತು. ಬೇರೆಯವರ ಮನೆಯಲ್ಲಿ ಅಥವಾ ಹೋಟೆಲಿನಲ್ಲಿ ನೀರು ಅಥವಾ ಕಾಫಿ ಕುಡಿಯಬೇಕೆಂದರೂ ತೆಂಗಿನ ಚಿಪ್ಪಿನಲ್ಲಿ ಕೊಡಲಾಗುತ್ತಿತ್ತು. ಈ ಕೊರವರನ್ನು ಹೇಳಿ ಕರೆಸುತ್ತಿದ್ದದ್ದು ಒಮ್ಮೆ ಮಾತ್ರ. ಅದೂ ಯಾರ ಮನೆಯಲ್ಲಿಯಾದರು ಹಸು, ಎಮ್ಮೆ, ಕೋಣಗಳು ಸತ್ತರೆ ಅದನ್ನು ತೆಗೆದುಕೊಂಡು ಹೋಗಲು. ಅದನ್ನೂ ಅವರು ಸಂತೋಷವಾಗೇ ಬಂದು ತೆಗೆದುಕೊಂಡು ಹೋಗಿ ಬಾಡೂಟ ಸವಿಯುತ್ತಿದ್ದರು. ಊರಲ್ಲಿ ಹಬ್ಬ, ಮದುವೆ, ಮುಂಜಿಯಂತಹ ವಿಶೇಷಗಳು ನಡೆದರೆ ಅವರೆಲ್ಲ ಕುಟುಂಬ ಸಮೇತರಾಗಿ ಬಂದು ಉಳಿದವರು ಉಂಡು ಎಸೆದ ಎಂಜಲೆಲೆಯಲ್ಲಿ ಬಿಟ್ಟ ಊಟವನ್ನು ಆರಿಸಿಕೊಂಡು ಹೋಗುತ್ತಿದ್ದರು. ಇದು ಅಂದಿನ ಕಾಲದಲ್ಲಿ ಎಷ್ಟು ಸಾಮಾನ್ಯವಾಗಿತ್ತೆಂದರೆ, ಅದನ್ನು ನೋಡುವ ಅನ್ಯಜಾತೀಯರಿಗೂ ಏನೂ ಅನಿಸುತ್ತಿರಲಿಲ್ಲ, ಕೊರಗರಿಗೂ ಅದು ಶೋಷಣೆಯೆನಿಸುತ್ತಿರಲಿಲ್ಲ. ಅಂತೆಯೇ, ಮೇಲ್ಜಾತಿಯಲ್ಲಿ ಹುಟ್ಟಿದ ಶಾಂತ ಕೂಡ ಇದರ ಬಗ್ಗೆ ಒಮ್ಮೆಯೂ ತಲೆಕೆಡಿಸಿಕೊಂಡಿರಲಿಲ್ಲ. ಅಜ್ಜಿ ಹೇಳಿಕೊಟ್ಟಂತೆ ಕೊರಗ ಮಕ್ಕಳನ್ನೂ ಅವಳು ಹತ್ತಿರ ಸೇರಿಸುತ್ತಿರಲಿಲ್ಲ.

ಈ ಕೊರವ ಕುಟುಂಬದಲ್ಲಿ ಮಂಜಿ ಅಂತ ಹೆಂಗಸಿದ್ದಳು. ಅವಳಿಗೆ ಆಗ ವಯಸ್ಸೆಷ್ಟೋ ನೆನಪಿಲ್ಲ. ಆದರೆ ಬೇರೆ ಕೊರಗ ಹೆಣ್ಣುಮಕ್ಕಳಿಗಿಂತ ನೋಡಲು ಚೆನ್ನಾಗಿದ್ದಳು. ಅವಳಿಗೆ ಇದ್ದ ಸೌಕರ್ಯಕ್ಕಿಂತ ಹೆಚ್ಚಿಗೆ ಅಲಂಕಾರಕ್ಕೆ ಪ್ರಾಮುಖ್ಯತೆ ಕೊಡುತ್ತಿದ್ದಳು. ಇವಳೂ ಅವಳ ಸಂಬಂಧಿಕರಂತೆ ಇದ್ದಿಲು ಮೈಬಣ್ಣ, ಕೆಂಚು ಕೂದಲು ಮತ್ತು ಕಂದು ಬಣ್ಣದ ಹಲ್ಲು ಹೊಂದಿದ್ದರೂ, ಚಂದದ ಬಣ್ಣದ ಸೀರೆ ಉಟ್ಟು, ಎಣ್ಣೆ ಹಚ್ಚಿ, ಬಾಚಿ, ಹೆಣೆದ ಜಡೆಗೆ ತನ್ನ ತೋಟದಲ್ಲೇ ಅರಳಿದ ಅಬ್ಬಲಿಗೆ ಹೂವಿನ ಮಾಲೆ ಮುಡಿದು ಸದಾ ನಗುನಗುತ್ತಾ ನಡೆದಾಡುತ್ತಿದ್ದಳು.

ಅಂದು ಸಂಜೆ ದೇವಸ್ಥಾನದಲ್ಲಿ ಪೂಜೆ ನಡೆಯುತ್ತಿತ್ತು. ಅಪ್ಪನ ಪಕ್ಕದಲ್ಲಿ ನಿಂತು ಪುಟ್ಟ ಶಾಂತ ದೇವರಿಗೆ ನಡೆಯುವ ಆರತಿ, ಆರಾಧನೆಯನ್ನು ಭಕ್ತಿಯಿಂದ ನೋಡುತ್ತಿದ್ದಳು. ‘ಆ.... ಚ್ಚಿ’ ಅನಿರೀಕ್ಷಿತವಾಗಿ ಬಂತೊಂದು ಸೀನು.

ಆರತಿ ಕೊಡಲು ಪಕ್ಕ ಬಂದ ರಾಮಕೃಷ್ಣ ಭಟ್ಟರಿಗೆ ಒಮ್ಮೆಗೆ ಕೋಪ ಬಂತು. ಅಲ್ಲೇ ಪಂಚಪಾತ್ರೆಯಲ್ಲಿದ್ದ ತೀರ್ಥವನ್ನು ಶಾಂತಾಳ ಮೇಲೆ ರಭಸದಿಂದ ಪ್ರೋಕ್ಷಿಸಿದರು. ಒಮ್ಮೆಲೆ ಬೆಚ್ಚಿಬಿದ್ದಿತು ಕೂಸು. ಅವಳ ಅಪ್ಪ ಮುಗುಳ್ನಕ್ಕು ಮಗಳ ತಲೆ ನೇವರಿಸಿ ಆರತಿ ತೆಗೆದುಕೊಳ್ಳಲು ಕೈ ಚಾಚಿದರು. ನಂತರ, ತೀರ್ಥ ಕೊಡುವಾಗ ಕೈ ತಾಗಿ ಅವರ ಮಡಿ ಹಾಳಾಯಿತು ಎಂದು ಭಟ್ಟರು ಎದುರಿಗಿದ್ದ ಹುಡುಗನಿಗೂ ಜೋರಾಗಿ ಬೈದರು. ಅವನ ತಂದೆಯೂ ಅದಕ್ಕೆ ಏನೂ ಆಕ್ಷೇಪಣೆ ಒಡ್ಡಲಿಲ್ಲ. ಹೌದು, ಈ ಹಳ್ಳಿಯಲ್ಲಿ ರಾಮಕೃಷ್ಣ ಭಟ್ಟರ ಕೋಪ ಅರಿಯದವರು ಯಾರಾದರೂ ಇದ್ದಾರೆಯೇ? ಹೆಚ್ಚಾಗಿ ಅನಕ್ಷರಸ್ಥರೇ ತುಂಬಿರುವ ಕುಗ್ರಾಮ ಅದು. ಅಲ್ಲಿ ಸಾಧಾರಣವಾಗೇ ಬ್ರಾಹ್ಮಣರೆಂದರೆ ಮೇಲ್ದರ್ಜೆಯವರು ಎಂದು ತಿಳಿದಿದ್ದ ಕಾಲ ಅದು. ಅದರಲ್ಲೂ, ರಾಮಕೃಷ್ಣ ಭಟ್ಟರೆಂದರೆ ಮಹಾ ಕಟ್ಟುನಿಟ್ಟಿನ ಪೂಜಾರಿ. ಎಲ್ಲಾ ಶಾಸ್ತ್ರಗಳನ್ನೂ ಭಕ್ತಿಯಿಂದ ಚಾಚೂ ತಪ್ಪದೇ ಪಾಲಿಸುತ್ತಿದ್ದರು. ಅವರು ಪೂಜೆ ಮಾಡುವ ಪರಿಗೆ ಇನ್ನೇನು ದೇವರೇ ಪ್ರತ್ಯಕ್ಷವಾಗುವನೇನೋ ಅನಿಸುತ್ತಿತ್ತು. ಹಾಗಾಗಿ ಅವರ ಮುಂಗೋಪದ ಬಗ್ಗೆ ಯಾರೂ ತುಟಿಯೆತ್ತುತ್ತಿರಲಿಲ್ಲ. ಎಷ್ಟೋ ಹುಡುಗರು ಅವರ ಕೈಯಲ್ಲಿ ಕಪಾಳಮೋಕ್ಷ ಮಾಡಿಸಿಕೊಂಡಿದ್ದೂ ಉಂಟು. ಮಕ್ಕಳು ಹೆತ್ತವರ ಬಳಿ ದೂರು ಹೇಳಿದರೂ, ನೀನೇ ಏನೋ ತಪ್ಪು ಮಾಡಿರಬೇಕು ಅಂತ ಆವರಿಗೆ ಮನೆಯಲ್ಲೂ ಇನ್ನೆರಡು ಏಟು ಬೀಳುತ್ತಿತ್ತು.

ಜಾತ್ರೆ ಸಮಯದಲ್ಲಿ ಅಥವಾ ದೇವಸ್ಥಾನದಲ್ಲಿ ವಿಶೇಷ ಪೂಜೆಯಾಗುವಾಗ ಈ ಕೊರವರು ಹೊರಗೆ ದೂರದಲ್ಲಿ ನಿಂತು ಡೋಲು ಬಾರಿಸಿ, ನಂತರ ದೂರದಿಂದಲೇ ನಮಸ್ಕರಿಸಿ ಹೋಗುತ್ತಿದ್ದರು. ಅವರನ್ನು ನೋಡುವಾಗ, ಮಾತನಾಡಿಸುವಾಗ, ರಾಮಕೃಷ್ಣ ಭಟ್ಟರು ಯಾವಾಗಲೂ ಸಿಡುಕುತ್ತಿದ್ದರು. ಅದರಲ್ಲೂ, ಮಂಜಿಯ ಕಂಡರೆ ಅವರ ಮುಖ ಇನ್ನೂ ಗಂಟಿಕ್ಕುತ್ತಿತ್ತು. ಭಟ್ಟರನ್ನು ನೋಡಿ ಸಲುಗೆಯಿಂದ ಮಾತಾಡಿದ್ದಕ್ಕೆ ಅವರು ಕೆಲವೊಮ್ಮೆ ಅವಳಿಗೆ ಎಲ್ಲರ ಮುಂದೆ ಬೈದಿದ್ದೂ, ಅದಕ್ಕೆ ಅವಳ ಮುಖ ಅವಮಾನದಿಂದ ಬಾಡಿ ನಂತರ ಕೂಡಲೇ ಸುಧಾರಿಸಿಕೊಂಡು ನಕ್ಕಿದ್ದೂ ಶಾಂತ ಗಮನಿಸಿದ್ದಳು. ಭಟ್ಟರ ಕೋಪಕ್ಕೆ ಬೆದರಿ ಎಲ್ಲರೂ ದೂರಸರಿಯುವಾಗ ಇವಳಿಗ್ಯಾಕೆ ಅವರ ಉಸಾಬರಿ ಅಂತಲೂ ಅಂದುಕೊಂಡಿದ್ದಳು. ಮಂಜಿಯ ಈ ಗುಣದಿಂದಾಗೇ ಊರಿನವರಿಗೆ ಅವಳ ನಡತೆಯ ಬಗ್ಗೆ ಸಂಶಯವೂ ಉಂಟಾಗುತ್ತಿತ್ತು. ಆದರೆ ಅದರ ಬಗ್ಗೆ ಮಂಜಿ ಎಂದೂ ತಲೆಕೆಡಿಸಿಕೊಂಡಂತಿರಲಿಲ್ಲ.

ಹೀಗಿರುವಾಗ ಒಮ್ಮೆ ಮಂಜಿ ಗರ್ಭಿಣಿಯೆನ್ನೋ ಸುದ್ದಿ ಬಂತು. ಇನ್ನೂ ಮದುವೆಯಾಗದ ಇವಳು ಯಾರಿಂದ ಗರ್ಭವತಿಯಾದಳು ಎನ್ನುವುದೇ ಎಲ್ಲರಿಗೂ ಕುತೂಹಲವಾಗಿತ್ತು. ಆದರೆ ಮಂಜಿ ನಾನು ಹಲವು ಗಂಡಸರೊಂದಿಗೆ ಸಂಬಂಧ ಇಟ್ಟುಕೊಂಡಿದ್ದೆ ಹಾಗಾಗಿ ಈ ಮಗುವಿನ ತಂದೆ ಯಾರು ಎಂದು ನನಗೆ ಗೊತ್ತಿಲ್ಲ ಅಂದುಬಿಟ್ಟಳು. ಇನ್ನು, ಅವರ ಹೆಸರೆಲ್ಲ ಹೇಳಿಸಿ, ಅವರ ಬಂಡವಾಳ ಯಾಕೆ ಹೊರತೆಗೆಯುವುದು ಎಂದು ಯಾರೂ ಅದರ ಗೋಜಿಗೇ ಹೋಗಲಿಲ್ಲ. ವಿಷಯ ತಿಳಿಯುವಾಗ ತಡವಾದದ್ದರಿಂದ ಗರ್ಭಪಾತ ಮಾಡುವ ಗಡುವೂ ದಾಟಿತ್ತು. ಇದಾದ ನಂತರ ಮಂಜಿ ಸುಮ್ಮನೆ ಬೀದಿಗೆ ಬರುವುದು ಕಡಿಮೆಯಾಯಿತು. ಅವಳ ಮುಖದ ಮೇಲಿನ ನಗುವೂ ಮಾಸತೊಡಗಿತು. ದೇವಸ್ಥಾನದ ಪೂಜೆ ವೇಳೆಗೆ ಯಾವತ್ತಾದರು ಒಮ್ಮೆ ಅವಳು ಊರೊಳಗೆ ಬಂದಿದ್ದುಂಟು. ಮೊದಲೇ ಅವಳನ್ನು ಕಂಡರೆ ಆಗದ ಭಟ್ಟರಿಗೆ, ಈಗಂತೂ ಅವಳನ್ನು ಕಂಡರೆ ಮೈಯೆಲ್ಲಾ ಉರಿದುಹೋಗುತ್ತಿತ್ತು. ಶಾಂತಾಳ ಮನೆಯವರೂ ಸೇರಿ, ಊರಿನವರೆಲ್ಲ ಅವಳನ್ನು ಕಂಡರೆ ಹಿಡಿಶಾಪ ಹಾಕುತ್ತಿದ್ದರು. ಯಾರಾದರೂ ಸ್ವಲ್ಪ ಹೆಚ್ಚಿಗೆ ಪೌಡರ್, ಕಾಡಿಗೆ ಹಚ್ಚಿ, ಹೂ ಮುಡಿದುಕೊಂಡರೆ "ಮಂಜಿ ಥರ ತಯಾರಿಗಿದ್ದಿಯ" ಅಂತ ಅಣಕವಾಡುತ್ತಿದ್ದರು. ಇದೆಲ್ಲ ಗಮನಿಸುತ್ತಿದ್ದ ಶಾಂತಾಳಿಗೆ ಮಂಜಿ ಇಷ್ಟು ನಡತೆಗೆಟ್ಟವಳೇ ಎಂದನಿಸಿ ಅಸಹ್ಯವೆನಿಸಿತು. ಒಮ್ಮೆ ಅವಳು ಹೊಟ್ಟೆ ತಳ್ಳಿಕೊಂಡು ಬಿಸಿಲಲ್ಲಿ ಬಸವಳಿದು ಶಾಂತಾಳ ಮನೆ ಮುಂದೆ ಹೋಗುತ್ತಿದ್ದಾಗ ಸ್ವಲ್ಪ ನೀರು ಕೊಡಿ ಸಣ್ಣಮ್ಮ ಅಂತ ಕೇಳಿದಾಗ ಇವಳು ಕೋಪದಲ್ಲಿ ಬಾಗಿಲು ಹಾಕಿದ್ದೂ ಇದೆ, ಬೇರೆ ಮಕ್ಕಳೊಂದಿಗೆ ಸೇರಿ ಗೇಲಿ ಮಾಡಿದ್ದೂ ಇದೆ.

ಕೆಲ ತಿಂಗಳಾದ ಮೇಲೆ ಮಂಜಿಗೆ ಗಂಡು ಮಗುವಾಯಿತು. ನಂತರ ಬಹಳ ಕಾಲ ಅವಳು ಊರೊಳಗೆ ಬರಲೇ ಇಲ್ಲ. ಅವಳ ಮನೆಯಾಯಿತು, ಅವಳ ಮಗುವಾಯಿತು ಅನ್ನುವಂತಿದ್ದಳು. ಎಲ್ಲರೂ ಅವಳ ಕಥೆಯನ್ನೂ ಮರೆತುಬಿಟ್ಟರು. ನಂತರ ಮುಂದಿನ ವಿದ್ಯಾಭ್ಯಾಸಕ್ಕಾಗಿ ಶಾಂತ ತನ್ನ ಹಳ್ಳಿ ಬಿಟ್ಟು ಪಟ್ಟಣಕ್ಕೆ ಹೋದಳು. ಮತ್ತೆ ಕಾಲೇಜು ಮುಗಿಸಿ ಬೆಂಗಳೂರಿನಲ್ಲಿ ಕೆಲಸ ಸಿಕ್ಕಿದ ಮೇಲಂತೂ ಮಂಜಿಯ ಕಥೆ ಸಂಪೂರ್ಣವಾಗಿ ಮರೆತೇ ಹೋಯಿತು.

ಟಿ.ವಿ.ಯಲ್ಲಿನ ಏನೋ ಶಬ್ದ ಶಾಂತಾಳನ್ನು ಮತ್ತೆ ವರ್ತಮಾನಕ್ಕೆ ತಂದಿತು. ಕತ್ತಲಾಯಿತಲ್ಲ, ಲೈಟ್ ಹಾಕೋಣ ಅಂತ ಎದ್ದಳು. ಲೈಟ್ ಆನ್ ಮಾಡುತ್ತಿದ್ದಂತೆಯೇ ಅವಳಿಗೆ ತಕ್ಷಣ ಏನೋ ಹೊಳೆಯಿತು. ಶಾಕ್ ಬಡಿದಂತೆ ಫೋನಿನೆಡೆಗೆ ಓಡಿದಳು. ಕೂಡಲೇ ಅಮ್ಮನಿಗೆ ಫೋನಾಯಿಸಿದಳು.

‘ಅಮ್ಮ, ಮಂಜಿ ಅಂತ ಒಬ್ಬಳು ಕೊರತಿ ಇದ್ದಳಲ್ಲ, ಅವಳು ಈಗ ಹ್ಯಾಗಿದ್ದಾಳೆ?’

ಇದ್ದಕ್ಕಿದ್ದಂತೆ ಎಲ್ಲ ಬಿಟ್ಟು ಮಗಳು ಮಂಜಿಯ ಬಗ್ಗೆ ಕೇಳಿದ್ದು ಅವಳ ಅಮ್ಮನಿಗೆ ಸೋಜಿಗವೆನಿಸಿತು.

‘ಅಯ್ಯೋ, ಅವಳ ನೆನಪು ಈಗ ಯಾಕ್ ಬಂತೇ ನಿನಗೆ? ಅವಳು ನೇಣು ಹಾಕ್ಕೊಂಡು ಎಷ್ಟು ವರ್ಷ ಆಯ್ತು!’

‘ಹೌದಾ? ಮತ್ತೆ ನನಗ್ಯಾಕೆ ಹೇಳ್ಲಿಲ್ಲ?’ ತನಗರಿಯದೇ ಚೀರಿದಳು ಶಾಂತ.

‘ಹೌದು ಮಾರಾಯ್ತಿ, ನಂಗೆ ಬೇರೆ ಕೆಲಸ ಇಲ್ಲ ನೋಡು. ಅವಳು ಯಾವ ಸೀಮೆ ಗೌಡ್ತಿ ಅಂತ ಅವ್ಳ ಕಥೆ ಬೇಕು ನಿಂಗೆ?’ ಅಮ್ಮ ನಗುತ್ತಾ ಕೇಳಿದರು.

‘ಮತ್ತೆ ಅವಳಿಗೊಬ್ಬ ಮಗ ಇದ್ನಲ್ಲ? ಅವನೀಗ ಎಲ್ಲಿದ್ದ? ಆ ಮಗುವಿನ ತಂದೆ ಯಾರು? ರಾಮಕೃಷ್ಣ ಭಟ್ಟರೇ?’ ಒಂದೊಂದು ಪ್ರಶ್ನೆ ಕೇಳುವಾಗಲೂ ಶಾಂತಾಳ ಎದೆ ಬಡಿತ ರಭಸಗೊಳ್ಳುತ್ತಲೇ ಇತ್ತು.

ಅಮ್ಮನಿಗೆ ಕಾಡು ಹರಟೆ ಹೊಡೆಯುವುದಕ್ಕೆ ಒಳ್ಳೆ ಸಮಾಚಾರ ಸಿಕ್ಕಿದ ಉತ್ಸಾಹದಲ್ಲಿ, ಶಾಂತಾಳ ಕೊನೆಯ ಪ್ರಶ್ನೆ ಅವರ ಕಿವಿಗೆ ಬೀಳಲೇ ಇಲ್ಲ.

‘ಅವಳ ಮಗ ಇಲ್ಲೇ ಇದ್ದ. ಆದ್ರೆ, ನಿಂಗೆ ಒಂದು ವಿಷಯ ಗೊತ್ತಾ? ಮಂಜಿ ಸಾಯು ಮುಂಚೆ ಅವ್ರ್ ಅಮ್ಮಂಗೆ ಆ ಮಗುವಿನ ಅಪ್ಪ ನಮ್ಮ ರಾಮಕೃಷ್ಣ ಭಟ್ಟರು ಅಂತ ಹೇಳಿದ್ಳಂತೆ. ಅದನ್ನ ಭಟ್ಟರಿಗೆ ಹೆದ್ರುಕೊಂಡು ಅವರ ಮನೆಯವರೆಲ್ಲ ಗುಟ್ಟು ಮಾಡಿದ್ರು. ಭಟ್ಟರು ತೀರಿ ಹೋದ್ ಮೇಲೆ ಈ ವಿಷಯ ಮೆಲ್ಲ ಹೊರಗ್ ಬಂತು. ಆದ್ರೂ, ಫಸ್ಟ್ ಯಾರೂ ನಂಬಲಿಲ್ಲ. ಈಗ್ ನೋಡಿದ್ರೆ ಆ ಹುಡುಗ ಥೇಟ್ ಅವ್ರ್ ಹಾಗೇ ಇದ್ದ ಮಾರಾಯ್ತಿ’.

‘ಅಯ್ಯೋ ಪಾಪ. ಭಟ್ಟರ ಮರ್ಯಾದೆ ಉಳ್ಸೋದಕ್ಕೆ ಹೋಗಿ ಮಂಜಿ ತನ್ನ ಮಾನ, ಪ್ರಾಣ ಎರಡೂ ಕಳ್ಕೊಂಡಳು’ ಉಕ್ಕಿ ಬರುತ್ತಿದ್ದ ದುಃಖವನ್ನು ಅಮ್ಮನಿಂದ ಮರೆಸಲು ಹರಸಾಹಸ ಮಾಡುತ್ತಿದ್ದಳು ಶಾಂತ.

ಅದನ್ನು ಕೇಳಿ ಗಲಿಬಿಲಿಗೊಂಡ ಅಮ್ಮ ಮಗಳಿಗೆ ಸಮಾಧಾನ ಮಾಡುವಂತೆ ಹೇಳಿದರು. ‘ಅವಳು ತ್ಯಾಗ ಏನೂ ಮಾಡ್ಲಿಲ್ಲ ಮಾರಾಯ್ತಿ. ಅವ್ಳು ಬೇರೆ ಗಂಡಸರು ಒಟ್ಟಿಗೆ ಇದ್ಲು ಅಂತ ಅವಳೇ ಒಪ್ಪಿಕೊಂಡಿದ್ಲು ಗೊತ್ತಾ? ಮತ್ತೆ ಈ ಕೂಸಾಳು ಹೆಂಗಸ್ರು ಅಂದ್ರೆ ಮತ್ತೆಂತ ಅಂದ್ಕೊಂಡೆ ನೀನು?’.

‘ಅದು ಸುಳ್ಳು ಅಮ್ಮ. ಅವಳ ಸಂಬಂಧ ಭಟ್ಟರ ಒಟ್ಟಿಗೆ ಮಾತ್ರ ಇದ್ದಿದ್ದು’.

‘ಅದು ಹ್ಯಾಗೆ ಅಷ್ಟು ಖಂಡಿತವಾಗಿ ಹೇಳ್ತಿಯ?’ ಅಮ್ಮ ಸವಾಲೆಸೆದರು.

‘ನನಗೆ ಗೊತ್ತು. ನಿಜವಾಗಿಯೂ ಬೇರೆ ಗಂಡಸರ ಜೊತೆ ಮಲಗುವವಳು ಅವಳಾಗಿದ್ದರೆ ಇವತ್ತು ಅವಳು ಬದುಕಿರುತ್ತಿದ್ದಳು’. ಇದಕ್ಕೆ ಮೇಲೆ ಅವಳಿಂದ ಮಾತಾಡಲಾಗಲಿಲ್ಲ. ಅಮ್ಮನಿಗೆ ಏನೋ ಕಾರಣ ಹೇಳಿ ಫೋನ್ ಕಟ್ ಮಾಡಿದಳು.

‘ಅಂದು ಗರ್ಭಿಣಿ ಮಂಜಿಗೆ ನಾನು ನೀರು ಸಹ ಕೊಡಲಿಲ್ಲ. ಆದರೆ ಅವಳು ಸತ್ತು ಇಂದು ನನ್ನ ಮಾನ ಕಾಪಾಡಿದ್ದಾಳೆ’ ಆಲೋಚಿಸುತ್ತಾ ತನ್ನ ಮಲಗುವ ಕೋಣೆಗೆ ಹೋದಳು. ಅಲ್ಲಿಯೇ ಇದ್ದ ನಿಲುಗನ್ನಡಿಯಲ್ಲಿ ಕಾಣುತ್ತಿದ್ದ ಅವಳ ಬಿಂಬದೆಡೆಗೆ ಅವಳ ಗಮನ ಹರಿಯಿತು. ಅವಳ ಮುಖ ಮಂಜಿಯ ಮುಖದಂತೆ ಕಪ್ಪಾಗಿ, ಇದ್ದಿಲ ಬಣ್ಣವಾಗಿತ್ತು. ಅದನ್ನು ನೋಡುತ್ತಾ ವ್ಯಂಗವಾಗಿ ನಕ್ಕಳು. ಅವಳ ಹಲ್ಲುಗಳು ಕಂದು ಬಣ್ಣವಾಗಿತ್ತು, ಮಂಜಿಯ ಹಲ್ಲಿನಂತೆ. ಭಾರವಾದ ಕಾಲುಗಳನ್ನು ಕಷ್ಟಪಟ್ಟು ಎತ್ತಿ ಹಾಕುತ್ತಾ ಲ್ಯಾಪ್ಟಾಪ್ ಕಡೆಗೆ ನಡೆದಳು, ರಾಜೀನಾಮೆ ಪತ್ರ ಬರೆಯಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT