ಶುಕ್ರವಾರ, ಆಗಸ್ಟ್ 12, 2022
22 °C

ವೈ.ಕೆ. ಸಂಧ್ಯಾ ಶರ್ಮಾ ಬರೆದ ಕಥೆ: ಮಾಚಕ್ಕ ಮತ್ತು ಕೊರೊನಾ

ವೈ.ಕೆ.ಸಂಧ್ಯಾ ಶರ್ಮ Updated:

ಅಕ್ಷರ ಗಾತ್ರ : | |

Prajavani

‘ಏನೇ ಅದು, ಅಡುಗೆಮನೆಯಿಂದ ಘಮ ಘಮ ವಾಸನೆ ಬರ್ತಿದೆ?! ‘

ಮಾಚಕ್ಕನ ದಪ್ಪ ಹಂಪರು ಮೂಗು ಮತ್ತಷ್ಟು ಅರಳಿಕೊಂಡಿತು.

‘ನಿನ್ನೆ ಕೇಳ್ತಿರೋದು ಸೀತಾ ’ -ಸಿಟ್ಟಿನಿಂದ ಧ್ವನಿ ಜೋರಾಗಿತ್ತು.

ಸೀತಳಿಗೆ ಉತ್ತರಿಸದೆ ವಿಧಿಯಿರಲಿಲ್ಲ. ಹಣೆಯ ಇಕ್ಕೆಲದಿಂದ ಇಳಿಯುತ್ತಿದ್ದ ಬೆವರ ಹನಿಯನ್ನು ಮುಂಗೈನಿಂದ ತೊಡೆದುಕೊಳ್ಳುತ್ತ, ‘ಅದೇ ನೀವು ನಿನ್ನೆ ಹೇಳಿದಿರಲ್ಲ, ಊಟಕ್ಕೆ ಬಾಡಿಸಿಕೊಳ್ಳಲು ಸ್ವಲ್ಪ ನಿಪ್ಪಟ್ಟು ಮಾಡಿಡು ಅಂತ’-ಸೋತ ಮುಖದಲ್ಲಿ ಅಸಹನೆ ತುಳುಕಿಸುತ್ತ, ಪಕ್ಕದ ಸಿಂಕಿನಲ್ಲಿ ಪಾತ್ರೆಗಳನ್ನು ಗಲಬರಿಸುತ್ತ ನಿಂತಿದ್ದ ಗಂಡನತ್ತ ನೋಡಿದಳು.

ಶ್ರೀಹರಿ, ಅಕ್ಕನ ಪ್ರತಿನಿತ್ಯದ ವರಾತ ಗೊತ್ತಿದ್ದರಿಂದ ತುಟಿಕ್ ಪಿಟಿಕ್ ಎನ್ನಲಿಲ್ಲ.

ಮತ್ತೆ ಮಾಚಕ್ಕನ ದನಿ- ‘ ಮಾಡಿದ್ದೆಲ್ಲ ನಿನ್ನ ಮಕ್ಕಳಿಗೆ ತಿನ್ನಿಸಿ ಖರ್ಚು ಮಾಡಿಬಿಡಬೇಡ...ಸಂಜೆ ವಿನೂ ಮಗ ರವಿ ಬರ್ತಾನೆ, ಅವನ ಕೈಲಿ ಸ್ವಲ್ಪ ಕೊಟ್ಟು ಕಳಿಸಬೇಕು’

ಸೀತಾ ಉಭಾ ಶುಭಾ ಎನ್ನಲಿಲ್ಲ.

‘ಏನೂ ಅರ್ಥವಾಯ್ತಾ?’

ಸೀತಾ ತಲೆ ಅಲ್ಲಾಡಿಸಿದರೂ ಅದು ಮಾಚಕ್ಕನಿಗೆ ಕಾಣುವಂತಿರಲಿಲ್ಲ. ವಾಸನೆಯಲ್ಲೇ ಎಲ್ಲ ಗ್ರಹಿಸಿಬಿಡುವ ಚಾಲಾಕಿ ಶಕ್ತಿ ಆಕೆಯದು. ಅವರ ಚಲನವಲನವನ್ನು ಹೆಜ್ಜೆ ಸದ್ದಿನಲ್ಲೇ ಅಳೆದುಬಿಡುವ ಚಾಲಾಕಿ.

ಶ್ರೀಹರಿ ತೊಳೆದ ಪಾತ್ರೆಗಳನ್ನು ಸದ್ದುಮಾಡದಂತೆ ಮೆಲ್ಲನೆ ಪಕ್ಕದಲ್ಲಿದ್ದ ಪ್ಲಾಸ್ಟಿಕ್ ತೂತು ಬುಟ್ಟಿಯಲ್ಲಿಡುತ್ತಿದ್ದ. ಹಾಗೂ ಒಂದು ಲೋಟ ಅವನ ಕಳ್ಳತನವನ್ನು ಸಾರುವಂತೆ ‘ಟಣ್’ ಎಂದು ಕೈಜಾರಿ ಕೆಳಗೆ ಬಿದ್ದೇ ಬಿಟ್ಟಿತು.

‘ಹೆಣ್ಣಿಗ...ಹೆಂಡ್ತೀಗೆ ಕಷ್ಟಾಂತ ಸದಾ ಅವಳ ಹಿಂದೆ ಮುಂದೆ ಸುಳೀತಾ ಎಲ್ಲಾ ಕೆಲಸಕ್ಕೂ ಕೈ ಹಾಕ್ತಾನೆ, ನಾಚಿಕೆಗೇಡು...’

ಗಂಡ-ಹೆಂಡತಿ ಮಿಕ ಮಿಕ ನೋಡಿಕೊಂಡರು. ತುಟಿಗಳು ಭದ್ರವಾಗಿ ಹೊಲಿದುಕೊಂಡಿದ್ದವು.

ಗೋಡೆ ಗಡಿಯಾರ ಒಂದು ಗಂಟೆ ಬಾರಿಸಿತು. ‘ ಗಂಟೆ ಒಂದಾದರೂ ಊಟ ಕಾಣಿಸೋ ಲಕ್ಷಣವಿಲ್ಲ...ಅದೇನು ಜನಗಳೋ ...’

ಸೀತಾ , ಗಡಿಬಿಡಿಯಿಂದ ಹಿಟ್ಟಿನ ಕೈಯನ್ನು ತೊಳೆದುಕೊಂಡು, ಕೈಯಲ್ಲಿದ್ದ ಜಾರೀ ಸೌಟನ್ನು ಗಂಡನ ಕೈಗಿತ್ತು, ಬಂಗಾರದ ಬಣ್ಣಕ್ಕೆ ತಿರುಗುತ್ತಿದ್ದ ನಿಪ್ಪಟ್ಟಿನ ಕಡೆಯ ಒಬ್ಬೆಯನ್ನು ತೆಗೆಯಲು ಗಂಡನಿಗೆ ಕಣ್ಣಲ್ಲೇ ಸೂಚಿಸಿ, ಅತ್ತಿಗೆಯ ಊಟಕ್ಕೆ ಅಣಿಗೊಳಿಸತೊಡಗಿದಳು.

ಇಷ್ಟರಲ್ಲೇ ಮಾಚಕ್ಕನ ಸಹನೆ ಸೋರತೊಡಗಿ ಮುಖವನ್ನು ದುಮ್ಮಿಸಿಕೊಂಡು, ಕಣ್ಣುಗುಡ್ಡೆಗಳನ್ನು ಗರಗರನೆ ತಿರುಗಿಸಿದಳು. ಆಕೆಯ ಮುಖಭಾವವೇ ಅವಳ ಅಂತರಂಗದ ಧಿಮಿಕಿಟವನ್ನು ಹೊರ ಕಾರುತ್ತಿತ್ತು.

ವಿನಯದಿಂದಲೋ ಅಥವಾ ಅಂಜಿಕೆಯ ಗದಗುಡುವಿಕೆಯಿಂದಲೋ ಸೀತಾ, ಕಮಕ್ ಕಿಮಕ್ ಎನ್ನದೆ ದೊಡ್ಡ ತಟ್ಟೆಯಲ್ಲಿ, ಹಬೆಯಾಡುವ ಅನ್ನ, ಘಮ್ಮೆನ್ನುವ ಬೂದುಗುಂಬಳ-ಹುರುಳಿಕಾಯಿ ಹುಳಿ, ಒಂದಂಚಿನಲ್ಲಿ ಮಾವಿನಕಾಯಿ ತೊಕ್ಕನ್ನು ಹಾಕಿಕೊಂಡು ಬಂದು ಆಕೆಯ ಮುಂದಿನ ಮೇಜಿನ ಮೇಲೆ ನಿಶ್ಶಬ್ದವಾಗಿ ತಂದಿರಿಸಿದಳು.
ಊಟದ ಘಮಲು ಮೂಗಿಗೆ ಬಡಿದರೂ ಮಾಚಕ್ಕ ಬಿಂಕದಿಂದ ಬಿಮ್ಮನೆ ಹಾಗೇ ಕೂತಿದ್ದಳು. ‘ಊಟ ಮಾಡಕ್ಕ’ ಎಂಬ ತಮ್ಮನ ಉಪಚಾರಕ್ಕಾಗಿ ಕಾಯುತ್ತ.

ಸೀತಾ, ಗಂಡನ ತೋಳನ್ನು ತಟ್ಟಿ ಅತ್ತ ಅವನ ಗಮನ ಸೆಳೆದ ಮೇಲೆ, ಶ್ರೀಹರಿ ಮುಖ ಸಿಂಡರಿಸಿಕೊಂಡರೂ ಬೆಣ್ಣೆ ದನಿಯಲ್ಲಿ ‘ಅಕ್ಕಾ..ಬಿಸಿ ಆರಿಹೋಗುತ್ತೆ..ಊಟ ಮಾಡಕ್ಕ’ ಎಂದ ಶಾಸ್ತ್ರ ಮಾಡಿದ.

ಅನ್ನ ಕಲೆಸಿ ಮೊದಲ ತುತ್ತು ಏರಿಸುತ್ತಿದ್ದವಳೇ ಮಾಚಕ್ಕ-‘ ತುಪ್ಪ ತಂದು ಬಡಿ, ನಿಮ್ಮಪ್ಪನ ಮನೆ ಗಂಟೇನು ಹೋಗಬೇಕು...ನಮ್ಮಪ್ಪನ ಮನೆಯದು ತಾನೇ?’ -ಘರ್ಜಿಸಿದಳು. ಧಡ ಧಡ ತುಪ್ಪದ ಬಾಟಲೇ ಅವಳು ಕಟ್ಟಿದ್ದ ಹುಳಿಯನ್ನದ ಬಾವಿಯೊಳಗೆ ಧುಮುಕಿತು. ಆದರೂ ‘ಈ ಹುಳಿಗೆ ಅಪ್ಪಿಲ್ಲ-ಅಮ್ಮಿಲ್ಲ, ಅದೇನು ಮಾಡ್ತೀಯೋ ಅಡಿಗೆ, ಬಡ್ಕೋಬೇಕು..’ ಎನ್ನುತ್ತಲೇ ಕಂಠಮಟ್ಟ ಗಡದ್ದು ಉಂಡೆದ್ದು ಢರ್ರೆಂದು ತೇಗಿದಳಾಕೆ. ಆದರೂ ಮುಖದಲ್ಲಿ ಸಂತೃಪ್ತಭಾವದ ಜಿನುಗಿಲ್ಲ. ಬಾಯಲ್ಲಿ ಸಣ್ಣ ಮೆಚ್ಚುಗೆಯ ಮಾತಂತೂ ಅವಳ ಜನ್ಮೇಪಿ ಇಲ್ಲವೇ ಇಲ್ಲ.
ಬೆಳಗ್ಗೆ ಒಂದು ಲೋಟ ಕಾಫಿ ಕುಡಿದಿದ್ದು ಬಿಟ್ಟರೆಸೀತಾ, ಈಕೆಯ ಅವಾಂತರದಲ್ಲಿ ಸರಿಯಾಗಿ ತಿಂಡಿಯನ್ನೂ ತಿಂದಿರಲಿಲ್ಲ. ಹಿಂದಿನ ದಿನವೇ ಆಕೆ, ನಾಳಿನ ತಿಂಡಿ-ಅಡಿಗೆಯ ಮೆನುವಿನ ಫರ್ಮಾನು ಹೊರಡಿಸುತ್ತಿದ್ದುದನ್ನು ಕಿಂಚಿತ್ತೂ ಮೀರುವಂತಿರಲಿಲ್ಲ. ಅದೂ ಸೀತಾ ಕಣ್ಣಲ್ಲಿ ಕಣ್ಣಿಟ್ಟು, ಶ್ರದ್ಧೆಯಿಂದ ತಿಂಡಿ ಮಾಡಿದ್ದರೂ ಅದರಲ್ಲಿ ನೂರೆಂಟು ಕೊಂಕು.

‘ಚಪಾತಿ ಯಾಕೋ ಮೆತ್ತಗಾಗಿಲ್ಲ, ತರಕಾರಿಗಳು ಸರಿಯಾಗಿ ಬೆಂದೇ ಇಲ್ಲ...ಅಕ್ಕಿ ರೊಟ್ಟಿ ಇಷ್ಟು ಗಟ್ಟಿಯಾಗಿ ಮಾಡಿದರೆ ಹೇಗೆ ತಿನ್ನೋದು, ಬೇಕಂತಲೇ ಹೀಗೆ ಮಾಡ್ತೀಯೋ ಏನೋ...ಉಪ್ಪಿಟ್ಟು ರುಚಿಯಾಗಲಿ ಅಂತ ಇದ್ದ ಬದ್ದ ಎಣ್ಣೆಯೆಲ್ಲ ಹುಯ್ದುಬಿಟ್ಟರೆ ನನ್ನ ಆರೋಗ್ಯದ ಗತಿ ಏನಾಗಬೇಕು?...ಏಯ್ ಹರೀ, ನೀನಾದ್ರೂ ಹೇಳಬಾರದೇನೋ ...ಹೆಣ್ಣಪ್ಪಿ ’ ಎಂದು ಮೂದಲಿಸುವುದು ಮಾಮೂಲು.

ಅಕ್ಕನ ಚುಚ್ಚು ಮಾತುಗಳನ್ನು ಕೇಳಿ ಶ್ರೀಹರಿಯ ಹೊಟ್ಟೆಯಲ್ಲಿ ಸಂಕಟ ಕಡೆಯುತ್ತಿತ್ತು. ಆದಲಾರದೆ, ಅನುಭವಿಸಲಾರದೆ ತುಟಿ ಕಚ್ಚಿಕೊಂಡು, ನಿಟ್ಟುಸಿರಿಕ್ಕುತ್ತ, ಅಸಹಾಯಕ ಹೆಂಡತಿಯತ್ತ ಸಹಾನುಭೂತಿಯಿಂದ ದಿಟ್ಟಿಸಿದ. ಅಲ್ಲೂ ಅದೇ ಭಾವ.

ಕೆನ್ನೆಯ ಮೇಲೆ ಜಾರಿದ ಹನಿಗಳನ್ನು ಸೆರಗಿನಿಂದ ಒತ್ತಿಕೊಳ್ಳುತ್ತ, ಉಂಡ ಬಾಯಿಗೆ ಒಗ್ಗರಣೆ ರೂಢಿ ಮಾಡಿಕೊಂಡಿದ್ದ ಅತ್ತಿಗೆ ಗುಡುಗುವ ಮುನ್ನ, ಬೇಗ ಕಂಚಿನ ಕುಟ್ಟಾಣಿಯಲ್ಲಿ ನಿಪ್ಪಟ್ಟನ್ನು ಮುರಿದು ಹಾಕಿ ನುಣ್ಣಗೆ ಕುಟ್ಟಿ ಅದನ್ನು ಸಣ್ಣ ಬಟ್ಟಲಿಗೆ ಹಾಕಿಕೊಂಡು ಹೋಗಿ ಅತ್ತಿಗೆಯ ಮುಂದಿರಿಸಿದಳು ಭಯ-ಭಕ್ತಿಯಿಂದ. ಅಲ್ಲಿಗೆ ಮಧ್ಯಾಹ್ನದ ಸೇವೆಯ ಅಧ್ಯಾಯ ತಾತ್ಕಾಲಿಕವಾಗಿ ಮುಗಿದಂತಾಯಿತು.

ಈ ಮನೆಯಲ್ಲಿ ಸರ್ವಾಧಿಕಾರಿ ಮಾಚಕ್ಕನದೇ ಎಲ್ಲ ದರ್ಬಾರು. ಆಕೆಯ ಮಾತೇ ಅಂತಿಮ. ಸದಾ ಕೂತಲ್ಲೇ ಕೂತಿರುವ, ಮನೆಯ ಇಡೀ ವಹಿವಾಟನ್ನು ನಿಯಂತ್ರಿಸುವ ಮಾಚಕ್ಕ ಅರ್ಥಾತ್ ‘ಮಹಾಲಕ್ಷ್ಮೀ’ ಈ ಮನೆಯ ಹಿರಿಯ ಮಗಳು. ಅವಳ ಹಿಂದೆ ಸಾಲಾಗಿ ಏಳುಜನ ಹೆಣ್ಣುಮಕ್ಕಳು. ಕಡೆಯಲ್ಲಿ ಹುಟ್ಟಿದವನು ಈ ಶ್ರೀಹರಿ. ಏಕಮಾತ್ರ ಪುತ್ರ ಸಂತಾನ. ಕಡೆಗೂ ಆ ಶ್ರೀಹರಿ ವಂಶೋದ್ಧಾರಕನನ್ನು ಕರುಣಿಸಿದ ಕೃತಜ್ಞತೆಗೆ ಮುಕುಂದರಾಯರು ಅವನಿಗೆ ಶ್ರೀಹರಿ ಎಂದೇ ನಾಮಕರಣ ಮಾಡಿದ್ದರು.

ಅವರದೇನು ಅಂಥಾ ಘನಂದಾರಿ ಸಿರಿವಂತಿಕೆಯ ರಾಜವಂಶವಲ್ಲ, ವಂಶ ನಿಂತು ಹೋದರೆ ಇನ್ನೇನು ಗತಿ ಎಂದು ಎದೆ ಒಡೆದುಕೊಳ್ಳಲು. ಉಂಡುಟ್ಟು ಮಾಡಲು ಅಲ್ಲಿಗಲ್ಲಿಗೆ ಎಂಬಂಥ ಅನುಕೂಲತೆ ಅಷ್ಟೇ. ಇಡೀ ಸರ್ವಿಸ್ ಒಂದು ಕಚೇರಿಯಲ್ಲಿ ದುಡಿದು, ಕಷ್ಟಪಟ್ಟು ಮಾಡಿದ ರಾಯರ ಮಹತ್ಸಾಧನೆ ಎಂದರೆ ನಿರಮ್ಮಳವಾಗಿ ಕಾಲು ಚಾಚಿ ಮಲಗಲು ದಿವಿನಾದ ಈ ಹತ್ತಂಕಣದ ಮನೆಯೊಂದಷ್ಟೇ. ಹೆಣ್ಣುಮಕ್ಕಳು ಬುದ್ಧಿವಂತರಾದ್ದರಿಂದ, ನೋಡಲು ಲಕ್ಷಣವಾಗಿದ್ದುದರಿಂದ ಅವರ ಬದುಕು ಹೊರೆಯಾಗಲಿಲ್ಲ, ಮಾಚಕ್ಕಳೊಬ್ಬಳ ಹೊರತಾಗಿ. ಆ ದೇವಿ ಮಹಾಲಕ್ಷ್ಮಿಯ ಅಪರಾವತಾರ ಇವಳು ಎಂದವಳನ್ನು ಬಾಯ್ತುಂಬ ‘ಮಹಾಲಕ್ಷ್ಮೀ’ ಎಂದು ಕರೆದರು. ಆದರೆ ಬೆನ್ನು ಬಿದ್ದವರ ಬಾಯಲ್ಲಿ ಇವಳು, ‘ಮಾಚಕ್ಕ’ಳಾದಳು. ಅವಳ ಕಣ್ಣ ಐಬು ಪತ್ತೆಯಾದದ್ದೇ ಅವಳಿಗೆ ಎರಡು ತುಂಬಿದ ನಂತರ. ಹೆಸರು ಹಿಡಿದು ಕರೆದರೆ ಎತ್ತೆತ್ತಲೋ ನೋಡುತ್ತಿದ್ದ ವರ್ಷದ ಮಗುವಿನಲ್ಲೇ ಅನುಮಾನ ಬಂದಿತ್ತು. ಬಟ್ಟಲುಗಂಗಳು ನೋಡಲು ಲಕ್ಷಣವಾಗೇ ಇತ್ತು. ಅರಳು ಹುರಿದಂತೆ ಮಾತು. ಎದ್ದು ಹೆಜ್ಜೆ ಇಟ್ಟರೆ ತತ್ತರ ಪತ್ತರ... ಹಿಂದೆ ಸಾಲಾಗಿ ಮಕ್ಕಳಾದ ಭರಾಟೆಯಲ್ಲಿ ಸರೋಜಮ್ಮನಿಗೆ ಅವಳ ಐಬು ಅಂಥ ದಿಗಿಲು ಹುಟ್ಟಿಸಲಿಲ್ಲ... ಬದುಕು ಭಾರವೆನಿಸಲಿಲ್ಲ, ಅವಳ ಭವಿಷ್ಯದ ಚಿಂತೆಯೂ ಕಾಡಲಿಲ್ಲ. ಹುಟ್ಟಿಸಿದ ದೇವರು ಹುಲ್ಲು ಮೇಯಿಸದೇ ಇರುತ್ತಾನೆಯೇ ಎಂಬ ಉಡಾಫೆ. ಎಲ್ಲರ ಜೊತೆ ಬಾಳೆಯ ಗೊನೆಯಂತೆ ಬೆಳೆದಳು ಮಾಚಕ್ಕ. ಇವಳು ಅಕ್ಷರ ತಿದ್ದದಿದ್ದರೂ, ತಂಗಿಯರ ಶಾಲಾ-ಕಾಲೇಜಿನ ವಿದ್ಯಾಭ್ಯಾಸಗಳ ಅನುಭವದಿಂದ ಇವಳ ತಿಳುವಳಿಕೆಯ ಪರಿಧಿ ವಿಸ್ತಾರವಾಗಿತ್ತು. ರೇಡಿಯೋ-ಟಿವಿಗಳಿಂದ ಸಾಕಷ್ಟು ಸಂಗತಿಗಳನ್ನು ಹೆಕ್ಕಿಕೊಳ್ಳುತ್ತಿದ್ದಳು. ಹಿರಿಯಕ್ಕನ ಪಟ್ಟ ದಕ್ಕಿದ್ದರಿಂದ, ಜೊತೆಗೆ ದೊಡ್ಡ ಗಂಟಲು ಇದ್ದುದರಿಂದ ಎಲ್ಲರನ್ನೂ ನಿಯಂತ್ರಿಸುವ ಜೋರು-ದರ್ಪ ಅವಳರಿವಿಲ್ಲದಂತೆ ಅವಳನ್ನಾವರಿಸಿತ್ತು.

ಮುಕುಂದರಾಯರು ರಿಟೈರ್ ಆಗುವಷ್ಟರಲ್ಲಿ ಅವರ ನಾಲ್ಕುಜನ ಹೆಣ್ಣುಮಕ್ಕಳು ಓದಿ ಕೆಲಸಕ್ಕೆ ಸೇರಿದ್ದರು. ಅವರ ಅದೃಷ್ಟವೋ ಅಥವಾ ಹಿರಿಯರ ಆಶೀರ್ವಾದವೋ ಎಂಬಂತೆ ಅವರನ್ನು ಕೇಳಿಕೊಂಡು ಬಂದು ಹುಡುಗರು ಮದುವೆಯಾಗಿ ಎಲ್ಲರೂ ಗಂಡನ ಮನೆಗೆ ವರ್ಗವಾಗಿದ್ದರು. ಅದೂ ರಾಯರ ಜೋಬು ತೀರಾ ಕಚ್ಚದಂತೆ. ಉಳಿದವರಿಗೂ ಅದೇ ಭಾಗ್ಯ. ಹೇಗೋ ಸಂಬಂಧಗಳು ಕುದುರಿ, ಹಿರಿಯ ಹೆಣ್ಣುಮಕ್ಕಳು-ಅಳಿಯಂದಿರ ಸಹಕಾರದಿಂದ ಉಳಿದವರ ಕನ್ಯಾಸೆರೆಯೂ ಬಿಡುಗಡೆಗೊಂಡಿತ್ತು. ಕೊನೆಗೆ ಆ ಮನೆಯಲ್ಲಿ ಉಳಿದವರೆಂದರೆ ಮಾಚಕ್ಕ ಮತ್ತು ಶ್ರೀಹರಿ ಮಾತ್ರ. ಅವನದೂ ಓದು ಮುಗಿದಿತ್ತು. ಬೇರೆ ಊರಿನಲ್ಲಿ ಕೆಲಸ ಸಿಕ್ಕಾಗ ಮಾಚಕ್ಕ ಬಿಲ್ ಕುಲ್ ಆಗಲ್ಲ ಎಂದು ತಡೆ ಹಾಕಿದ್ದಳು.

‘ವಯಸ್ಸಾದ ತಂದೆ-ತಾಯಿ, ಮತ್ತೆ ಒಂಟಿಯಾದ ನನ್ನನ್ನ ಬಿಟ್ಟು ನೀನು ಎಲ್ಲೂ ಹೋಗೋದು ಬೇಡ, ಸಣ್ಣ ಕೆಲಸವಾದರೂ ನೀನು ಇಲ್ಲೇ ನಮಗೆ ನೆರವಾಕ್ಕೊಂಡು ಇರಬೇಕು ಕಣೋ ’-ಎಂದು ಕಟ್ಟಪ್ಪಣೆ ಹೊರಡಿಸಿದ್ದಳು. ಜೊತೆಗೆ, ಉಳಿದ ಅಕ್ಕಂದಿರ ವಿಧಿಯೂ ಅದೇ ಆಗಿದ್ದರಿಂದ, ವಿಧೇಯ ತಮ್ಮ ಶ್ರೀಹರಿಯ ಬಾಯಿ ಕಟ್ಟಿಹೋಗಿತ್ತು. ಪ್ರತಿದಿನ ತಪ್ಪದೆ ತೌರುಮನೆಗೆ ಬರುತ್ತಿದ್ದ ಒಬ್ಬರಲ್ಲ ಒಬ್ಬರು ಅಕ್ಕಂದಿರ ಮೀಟಿಂಗಿನ ಅಧ್ಯಕ್ಷತೆ ವಹಿಸುತ್ತಿದ್ದ ಮಾಚಕ್ಕ ದಿನಕ್ಕೊಂದು ಆರ್ಡರ್ ಹೊರಡಿಸುತ್ತಿದ್ದಳು. ಅಕ್ಕ-ತಂಗಿಯರು ಗಂಟಗಟ್ಟಲೆ ಹರಟೆ ಹೊಡೆಯುತ್ತಿದ್ದರು. ಹೆಂಡತಿ ಹೋದ ಮೇಲೆ ರಾಯರು ಮಾಚಕ್ಕ ಹೇಳಿದಂತೆ ಕೇಳುವ ಕೈಗೊಂಬೆಯಂತಾಗಿದ್ದರು. ಬಂದ ಸಂಬಳವನ್ನೆಲ್ಲ ಅಕ್ಕನ ಕೈಗಿಟ್ಟು, ಅವಳು ಹೇಳಿದಂತೆ ಚಾಚೂತಪ್ಪದೆ ಕೇಳಿಕೊಂಡಿದ್ದ ಶ್ರೀಹರಿಗೆ ತನ್ನ ಮದುವೆಯ ವಿಚಾರದಲ್ಲೂ ಸ್ವಾತಂತ್ರ್ಯವಿರಲಿಲ್ಲ.

ಅಕ್ಕಂದಿರೆಲ್ಲ ಸಭೆ ಸೇರಿದ್ದರು- ‘ ಈ ಮನೆಗೆ ಹೊಂದುವಂಥ, ಮೆದುವಾದ ಹುಡುಗಿಯನ್ನೇ ಹುಡುಕೋಣ...ಅವಳಿಗೆ ತಾಯಿ ಇಲ್ಲದಿದ್ದರೆ ವಾಸಿ, ತೌರುಮನೆ ಸಪೋರ್ಟ್ ಇರಕೂಡದು...’ -ಎಂದು ತೀರ್ಮಾನವಾಯಿತು.

‘ಸ್ವಲ್ಪ ಬಡತನವಿದ್ದರೆ ಇನ್ನೂ ಅನುಕೂಲ, ಬಾಯ್ಮುಚ್ಚಿಕೊಂಡು ದುಡ್ಕೊಂಡು ಇರ್ತಾಳೆ...ಅಣ್ಣ-ತಮ್ಮಂದಿರು ಇರದಿದ್ದರೆ ಇನ್ನೂ ಬೆಸ್ಟು..’ ಎಂಬ ಅಭಿಪ್ರಾಯಗಳು ವಿನಿಮಯವಾದವು.

ಶ್ರೀಹರಿಯ ಇಷ್ಟಾನಿಷ್ಟಗಳಿಗೆ ಆ ಹೆಣ್ಮಕ್ಕಳ ಮೆಜಾರಿಟಿಯಲ್ಲಿ ಕವಡೆ ಕಿಮ್ಮತ್ತಿರಲಿಲ್ಲ. ಅವರ ಕಕ್ಷೆಯಲ್ಲೇ ಬೆಳೆದವನಿಗೆ ಬಾಯಿ ಎಂದೋ ಸತ್ತುಹೋಗಿತ್ತು. ತಂದೆಯ ಬಗ್ಗೆ ಗೌರವ. ಅವರೂ ಅವನ ಪರ ವಹಿಸಲಿಲ್ಲ. ಅವನು ಕೆಲಸಕ್ಕೆ ಹೋದ ಹೊತ್ತಿನಲ್ಲಿ ಅವರ ನಡುವೆ ಏನೇನು ಮಾತುಕತೆಗಳು ನಡೆಯುತ್ತಿದ್ದುವೆಂಬುದು ಅವನಿಗೆ ಗೊತ್ತಾಗುತ್ತಿರಲಿಲ್ಲ. ಹೀಗಾಗಿ ಅವರು ಗೊತ್ತುಪಡಿಸಿದ ಮೆದು ಸ್ವಭಾವದ, ತಾಯ್ತಂದೆಯರಿರದ ತಬ್ಬಲಿ ಸೀತಾ ಅವನಿಗೆ ಮಡದಿಯಾಗಿ ಬಂದಿದ್ದಳು. ಮಾಚಕ್ಕ ಅವಳಿಗೆ ಅತ್ತೆಯಾಗಿದ್ದಳು.

ತಂದೆ ತೀರಿಕೊಂಡ ನಂತರವೇ ಅವನಿಗೆ ತಿಳಿದದ್ದು, ಈ ಮನೆಯ ನಿಜವಾದ ಮಾಲಕಿ ಮಾಚಕ್ಕನೆಂದು. ಗಂಡಸು ಮಗನಿದ್ದರೂ ರಾಯರು, ಹೆಣ್ಣುಮಕ್ಕಳ ಪುಸಲಾವಣೆಯಂತೆ ತಮ್ಮ ಸ್ವಯಾರ್ಜಿತ ಮನೆ, ಅವಿವಾಹಿತ, ಕಣ್ಣು ಕಾಣದ ಮಾಚಕ್ಕಳಿಗೇ ಸೇರಬೇಕೆಂದು ‘ವಿಲ್’ ಮಾಡಿದ್ದರು. ಹಾಗಾಗಿ ಉಳಿದ ಹೆಣ್ಣುಮಕ್ಕಳಿಗೆಲ್ಲ ಇದು ತೌರುಮನೆಯಾಗಿಯೇ ಉಳಿದು ಮನಸ್ಸು ಬಂದಾಗ ಬಂದು ಹೋಗಿ ಮಾಡುವ ಸದರ-ಸರಾಗ ಧಾರಾಳವಾಗಿ ಒದಗಿಬಂದಿತ್ತು. ಈ ಬಗ್ಗೆ ಯಾರೂ ಶ್ರೀಹರಿಯ ಅಭಿಪ್ರಾಯ-ಒಳದನಿಗಳನ್ನು ಆಲಿಸುವ ಔದಾರ್ಯ ತೋರಲಿಲ್ಲ. ಅವನ ದಾಕ್ಷಿಣ್ಯವಂತೂ ಮೊದಲೇ ಇರಲಿಲ್ಲ. ಮೊದಲಿನಂತೆಯೇ ಅವನ ದುಡಿತದ ಸಂಬಳ ಪೂರ್ತಿ ಅಕ್ಕನ ಕೈ ಸೇರುತ್ತಿತ್ತು. ಅವಳಿಗೆ ಕಣ್ಣು ಕಾಣದಿದ್ದರೂ ವೈನಾಗಿ ಸಂಸಾರದ ನಿಭಾವಣೆ ಮಾಡುವ ಛಾತಿ ಇತ್ತು. ಬೇಕೆಂದಾಗ ಸಲಹೆ ಕೊಡಲು ಧಂಡಿಯಾಗಿ ತಂಗಿಯರ ಬೆಂಬಲವಿತ್ತು. ಪ್ರತಿದಿನ ಈ ಮನೆಯ ವ್ಯವಹಾರವನ್ನೆಲ್ಲ ಗಂಟೆಗಟ್ಟಲೆ ಅವರುಗಳು ಫೋನುಗಳಲ್ಲಿ ಚರ್ಚಿಸುತ್ತಿದ್ದರು.

ಒಮ್ಮೊಮ್ಮೆ ಶ್ರೀಹರಿಗೆ ರೋಸಿಹೋಗುತ್ತಿತ್ತು. ಹೆಂಡತಿ ಮಕ್ಕಳನ್ನು ಕಟ್ಟಿಕೊಂಡು ಎಲ್ಲಾದರೂ ದೂರದೂರಿಗೆ ವರ್ಗ ಮಾಡಿಸಿಕೊಂಡು ಹೊರಟು ಹೋಗಬೇಕೆನಿಸಿದರೂ ಹೆಂಗರುಳಿನ ಅವನ ಮನಸ್ಸು ಅಳ್ಳಕವಾಗುತ್ತಿತ್ತು. ಕಣ್ಣು ಕಾಣದ ವಯಸ್ಸಾದ ಅಕ್ಕನನ್ನು ಒಂಟಿಯಾಗಿ ಬಿಟ್ಟು ಹೇಗೆ ಹೋಗುವುದು ಎಂಬ ಚಿಂತೆ ಮುತ್ತಿ ಮೆತ್ತಗಾಗುತ್ತಿದ್ದ. ಹಗಲೂ ರಾತ್ರಿ ಈ ಅಕ್ಕಂದಿರ ಹಾವಳಿಯಲ್ಲಿ, ಕೊನೆಯಿರದ ದುಡಿತದಿಂದ ನವೆಯುತ್ತಿದ್ದ ಹೆಂಡತಿಯ ಮನಸ್ಥಿತಿ ನೆನೆದು ಕೋಪವುಕ್ಕಿ ಬಂದರೂ ಸೀತಳ ಸಹನೆಯ ಮಾತುಗಳಿಗೆ ತಲೆಬಾಗುತ್ತಿದ್ದ.

ಬೆಳಗ್ಗೆದ್ದರೆ ಪ್ರತಿಯೊಂದಕ್ಕೂ ರಾದ್ಧಾಂತ. ಸಣ್ಣ ಸಣ್ಣ ವಿಷಯಕ್ಕೂ ಕಿರಿಕ್ಕು. ಅತ್ತಿಗೆಯ ಚಾವಟಿಯ ಚುಬುಕು ಚುರ್ರನೆ ಸೀತಳ ಮನಸ್ಸಿಗೆ ಬರೆ ಹಾಕುತ್ತಿತ್ತು. ನಿಂತರೂ ಕೂತರೂ ತಪ್ಪು...ಏನು ಮಾಡಿದರೂ ಆಕ್ಷೇಪಣೆ. ‘ ನಿನ್ನ ಗಂಡ-ಮಕ್ಕಳಿಗೆ ಏನು ಇಷ್ಟವೋ ಅದೇ ತಾನೇ ನೀನು ಮಾಡಿ ಹಾಕೋದು, ಈ ಮುದಿಗೂಬೆ-ಕುರುಡಿಯನ್ನು ಯಾರು ಕೇಳೋರು....ನೀವುಗಳು ತಿನ್ನೋ ಅನ್ನದಲ್ಲಿ ನಾಲ್ಕು ಅಗುಳು, ನಂಗೆಂತ ಏನು ಸ್ಪೆಷಲ್ ಮಾಡ್ತೀ...ನನ್ನ ಕಂಡ್ರೆ ಭಾರೀ ಅಲಕ್ಷ್ಯ...ಕರೆದ ತತಕ್ಷಣ ಬರಕ್ಕೇನು ಕೇಡು ನಿಂಗೆ?’

-ಮಾಚಕ್ಕನ ಒಂದೊಂದು ಮಾತೂ ಸೀತಳ ಹೃದಯವನ್ನು ಇರಿದು ಹಿಡಿಯಾಗಿ ಹೋಗುತ್ತಿದ್ದಳು.
ಗಂಟೆಯೊಳಗೆ ಈ ದೂರು ಫೋನಿನಲ್ಲಿ ಎಲ್ಲ ತಂಗಿಯರ ಮನೆಯ ಬಾಗಿಲನ್ನೂ ತಟ್ಟಿ, ಅವರೆಲ್ಲ ಕೂಡಲೇ ಫೋನಾಯಿಸಿ ಸೀತಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು:

’ ತಂಪಾಗಿ ನಮ್ಮಪ್ಪನ ಮನೆಯಲ್ಲಿ ಹಾಯಾಗಿದ್ದಿರಾ, ಅದರ ಋಣ ತೀರಿಸಲಾದರೂ ಅಕ್ಕನನ್ನು ಸ್ವಲ್ಪ ಪ್ರೀತಿಯಿಂದ ನೋಡ್ಕೊಬಾರ್ದಾ, ಎಂಥಾ ಕೃತಘ್ನ ಜನಗಳೋ ನೀವು, ಅವಳಿಂದ ತಾನೇ ನಿಮಗೊಂದು ನೆಲೆ-ನೆಮ್ಮದಿ’ -ಎಂದು ಕುಟುಕುತ್ತಿದ್ದರು.

ಅವರ ವ್ಯಂಗ್ಯದ ಮರ್ಮಾಘಾತ ಮಾತುಗಳನ್ನು ಕೇಳಿ ಸೀತಳ ಜೊತೆ ಶ್ರೀಹರಿಯೂ ಒಳಗೇ ಬೆಂದು ಹೋಗುತ್ತಿದ್ದ. ಈ ಹಂಗಿನರಮನೆ ಅವನು ಬಯಸಿದ್ದಲ್ಲ. ಅವನದೇ ಆದ, ಇದ್ದ ಒಂದು ಸೈಟನ್ನು ಎಲ್ಲರೂ ಸೇರಿ ಮಾರಿಸಿ, ತಂದೆ-ತಾಯಿಯರ ಅಂತ್ಯಕರ್ಮ, ಪಾಂಗಿತ ಶ್ರಾದ್ಧ, ವೈಕುಂಠ ಸಮಾರಾಧನೆ, ದಾನ-ಧರ್ಮಾದಿಗಳಿಗೆ ಧಾರಾಳವಾಗಿ ಖರ್ಚು ಮಾಡಿಸಿದ್ದರು. ಪ್ರತಿವರ್ಷ ಇದು ತಪ್ಪದೆ ಪಾಲಿಸಬೇಕಾದ ಕರ್ತವ್ಯವಾಗಿದ್ದುದರಿಂದ ಹಲವು ಸಾವಿರ ಅವನ ಕೈ ಬಿಡುತ್ತಿತ್ತು. ಸಾಲದ್ದಕ್ಕೆ, ಗೌರೀ ಹಬ್ಬಕ್ಕೆ ತೌರುಮನೆಯಿಂದ ಹೆಣ್ಣು ಮಕ್ಕಳಿಗೆ ಅರಿಶಿನ-ಕುಂಕುಮ, ಉಡುಗೊರೆ ಉತ್ಸವಗಳನ್ನು ಮಾಚಕ್ಕ ತಾನೇ ಖುದ್ದು ನಿಂತು ತಮ್ಮ-ತಮ್ಮನ ಹೆಂಡತಿಯ ಕೈಯಲ್ಲಿ ಚಾಚೂತಪ್ಪದೆ ಮಾಡಿಸುತ್ತಿದ್ದಳು. ಹಬ್ಬ-ಹರಿದಿನಗಳಲ್ಲಿ ಅವರ ದಂಡನ್ನು ನಿಭಾಯಿಸುವಷ್ಟರಲ್ಲಿ ಆ ದಂಪತಿಗೆ ಸಾಕು ಸಾಕಾಗುತ್ತಿತ್ತು. ಅವರೊಡನೆ ಅವರ ಗಂಡಂದಿರು-ಮಕ್ಕಳುಗಳಿಗೆ ಇಳಿಯಾ ಜಳಿಯಾ ಊಟ-ಉಪಚಾರ ನಡೆಸುವಷ್ಟರಲ್ಲಿ ಹೈರಾಣಾಗುತ್ತಿದ್ದರು. ಇಷ್ಟಾದರೂ ಕೊಂಕು-ಆಕ್ಷೇಪಣೆ ತಪ್ಪುತ್ತಿರಲಿಲ್ಲ.

‘ಅಂತೂ ನೀವು ತುಂಬಾ ಪುಣ್ಯ ಮಾಡಿದ್ರಿ ಬಿಡಿ...ಬೆಂಗಳೂರು ಪೇಟೆಯಲ್ಲಿ, ಅದೂ ಇಂಥ ಮುಖ್ಯ ಬಡಾವಣೆಯಲ್ಲಿ ಇಷ್ಟು ದೊಡ್ಡಮನೆ ಸಿಗೋದೂಂದ್ರೆ ಸುಮ್ನೇನಾ...ಇದು ನಮ್ಮ ಮನೆ, ನಾವು ಹುಟ್ಟಿ ಬೆಳೆದ ಮನೆ, ಆದರೆ ನಮ್ಮನ್ನ ಆಚೆ ಕಳಿಸಿದರು, ನೀವು ದಕ್ಕಿಸಿಕೊಂಡ್ರೀ, ನೀವು ಸುಖಪಡ್ತಾ ಇದೀರಿ, ಲಭ್ಯ ನಿಮಗಿತ್ತು’ ಎಂದವರುಗಳು ಹುಳಿಯಾಗಿ ನಿಟ್ಟುಸಿರು ಕಕ್ಕಿದಾಗ, ಸೀತಳ ಹೃದಯ ಬಿರಿದು ಹೋಳಾಗುತ್ತಿತ್ತು. ಶ್ರೀಹರಿ ಉಸಿರೆತ್ತಲಾರದೆ ಜಾಗ ಖಾಲಿ ಮಾಡುತ್ತಿದ್ದ.

‘ಊರಾಚೆ ಒಂದು ಸಣ್ಣ ಗುಡಿಸಿಲಿನಲ್ಲಿ, ಅಂಬಲಿ-ಗಂಜಿ ಕುಡಿದುಕೊಂಡು ಇದ್ದಿದ್ರೂ ಪಾಡಿತ್ತು ‘ -ಎಂದು ರಾತ್ರಿ ಗಂಡನಲ್ಲಿ ಅವಳು ಅಲವತ್ತುಕೊಂಡಾಗ, ಶ್ರೀಹರಿ ಹೆಂಡತಿಗೇನು ಜವಾಬು ಕೊಡುವುದೆಂದರಿಯದೆ ಪೇರುಸಿರಿಕ್ಕಿ - ‘ನಮ್ಮ ಕರ್ಮ, ಸುಮ್ನೆ ಬಿದ್ಕೋ’ ಎಂದುಸುರಿ ಅವಳಿಗೆ ಬೆನ್ನು ಹಾಕಿ ಮಲಗಿದವನ ಕರುಳೊಳಗೆ ಕುಡುಗೋಲು ಆಡಿಸಿದಂತಾಗುತ್ತಿತ್ತು. ಕೋಪ ಪುಟಿದೆದ್ದರೂ ‘ಇತ್ತ ದಾರಿ, ಅತ್ತ ಪುಲಿ’ ಎಂಬಂತಾಗಿತ್ತು ಅವನ ಅಸಹಾಯಕ ಸ್ಥಿತಿ. ಎಲ್ಲರ ಮುಂದೆ ತನ್ನೆದೆಯ ಹಿಂಸೆ-ನೋವು, ಅದುಮಿಟ್ಟ ಭಾವನೆಗಳನ್ನೆಲ್ಲ ಗಟ್ಟಿಯಾಗಿ ಒದರಿ, ತನಗೆ ಇಲ್ಲಿಂದ ಬಿಡುಗಡೆ ಬೇಕಿದೆ ಎಂದು ಘೋಷಿಸೋಣವೆಂದರೆ ಇನ್ನೂ ಕೈಗೆ ಬರದ ಮಕ್ಕಳು, ಹೆಂಡತಿಯೊಂದಿಗೆ ಧಿಡೀರನೆ ಎಲ್ಲಿಗೆ ಹೋಗುವುದು ಎಂಬ ಹಿಂಜರಿಕೆ-ದಿಗಿಲೂ ಬೇರೆ. ಎಲ್ಲಕ್ಕಿಂತ ಮುಖ್ಯವಾಗಿ, ಮಾಚಕ್ಕನನ್ನು ಸೀತಳಷ್ಟು ಜೋಪಾನವಾಗಿ ಉಳಿದ ಅಕ್ಕಂದಿರು ಮುಚ್ಚಟೆಯಿಂದ ನೋಡಿಕೊಳ್ಳುವರೆಂಬ ಭರವಸೆಯಿರಲಿಲ್ಲ. ಸುಮ್ಮನೆ ಬಾಯಲ್ಲಿ ಭಾಷಣ ಬಿಗಿವ ಇವರೆಲ್ಲ, ತಂತಮ್ಮ ಸಂಸಾರಗಳಲ್ಲಿ ಮುಳುಗಿಹೋದವರು. ಇದುವರೆಗೂ ಒಂದೊಪ್ಪತ್ತೂ ಅಕ್ಕನನ್ನು ತಮ್ಮ ಮನೆಗಳಿಗೆ ಕರೆದೊಯ್ದು ಊಟ ಹಾಕಿದ ಉದಾಹರಣೆಗಳೇ ಇರಲಿಲ್ಲ. ವಯಸ್ಸಾದ, ಕಣ್ಣು ಕಾಣದ ಅವಳನ್ನೆಂದೂ ಕೈಹಿಡಿದು, ನಡೆಸಿಕೊಂಡು ಹೋಗುವ, ಅವಳನ್ನು ಸುಧಾರಿಸುವ ಸಹನೆಯನ್ನೇ ತೋರಿರದ ಅವರ ಮನೆಗಳನ್ನೇ ಕಾಣಳು ಈ ಮಾಚಕ್ಕ. ಏನಿದ್ದರೂ ಅವರದೇ ಹಾಜರಾತಿ ಇಲ್ಲಿ. ಹಬ್ಬ-ಹರಿದಿನ, ವಿಶೇಷದ ದಿನಗಳಲ್ಲೂ ಆಹ್ವಾನವಿಲ್ಲ. ಅದನ್ನೆಂದೂ ಈ ಮಾಚಕ್ಕ ಎತ್ತಿ ಆಡುವುದಿಲ್ಲ. ನಿರೀಕ್ಷಿಸುವುದೂ ಇಲ್ಲ. ಎಲ್ಲವೂ ಈ ಮನೆಯಲ್ಲಿರುವ ತಮ್ಮನದೇ ಜವಾಬ್ದಾರಿ ಎಂಬುದು ಅವರ ಒಗ್ಗಟ್ಟಿನ ತೀರ್ಮಾನ.

‘ನಿನಗೂ ಒಂದೇ ಕಡೆ ಇದ್ದೂ ಇದ್ದು ಬೇಸರವಾದರೆ, ಅಕ್ಕಂದಿರ ಮನೆಗೆ ಬಿಟ್ಟು ಬರ್ಲಾ?’ ಎಂದವನು ಅಪ್ಪಿ ತಪ್ಪಿ ಕೇಳಿದ ದಿನ ಅವನ ಜನ್ಮ ಜಾಲಾಡಿ ಬಿಡುತ್ತಿದ್ದಳು ಮಾಚಕ್ಕ.

‘ಅವರ ಮನೆಗಳಿಗೆ ನನ್ಯಾಕೋ ಹೋಗ್ಬೇಕೋ? ಮನೆ ತೊಗೊಳ್ಳೋದು ನೀನು, ಅವರಿಗೇನು ಗ್ರಾಚಾರ ನನ್ನ ಕರೆದುಕೊಂಡು ಹೋಗಕ್ಕೆ...ಕೈ ತುಂಬಾ ಹೊರೆಸಿ ಕಳಿಸ್ತೀಯಾ ಅವರ ಮನೆಗೆ, ಎಷ್ಟು ಕೊಡ್ತೀಯಾ ಹೇಳು’-ಎಂದು ಹೆಬ್ಬೆಟ್ಟನ್ನು ತೋರುಬೆರಳಿನತ್ತ ಮಿಡಿದು ಸವಾಲೆಸೆಯುತ್ತಿದ್ದಳು. ಆಗ ಗರಬಡಿದು ನಿಲ್ಲುವ ಸರದಿ ಶ್ರೀಹರಿಯದು.

‘ಹೌದೌಹ್ದು...ಇವಳಷ್ಟು ಅಚ್ಚುಕಟ್ಟಾಗಿ ರುಚಿರುಚಿಯಾಗಿ ಯಾರು ಮಾಡಿ ಹಾಕ್ತಾರೆ ನಿಂಗೆ ... ಎರಡು ಹೊತ್ತೂ ನರ್ಸಿಗಿಂತ ಹೆಚ್ಚಾಗಿ ಮಾತ್ರೆ-ಇಂಜೆಕ್ಷನ್ ಕೊಟ್ಟು ಹೆದರಿಕೊಂಡು ಸೇವೆ ಮಾಡ್ತಾರೆ ಹೇಳು’-ಎಂದು ಜೋರಾಗಿ ಅನ್ನುವ ಧೈರ್ಯವಿರದೆ, ನಾಲಗೆಯ ತುದಿಯವರೆಗೂ ಚಿಮ್ಮಿದ ಮಾತುಗಳನ್ನು ಅವನು ಮನದೊಳಗೇ ಅಗೆದುಬಿಡುತ್ತಿದ್ದ.

‘ಇಡೀ ಜೀವನ ಇವರ ಸೇವೆಯಲ್ಲೇ ಕಳೆದು ಹೋಯ್ತು...ಒಂದು ಊರು ನೋಡಲಿಲ್ಲ, ಪ್ರವಾಸ, ದೇವಸ್ಥಾನ ಅಂತೂ ಕನಸಿನ ಮಾತೇ...ನಮ್ಮದೂ ಒಂದು ಬದುಕಾ...’ ಎಂದು ದಿಂಬಿಗೆ ಮುಖ ತೀಡಿ ಮೂಕವಾಗಿ ಬಿಕ್ಕಳಿಸುವ ಹೆಂಡತಿಯನ್ನು ಸಂತೈಸಲಾರದ ಶ್ರೀಹರಿ ಮೌನವಾಗಿ ಸಂಕಟದಿಂದ ಗುಬ್ಬಳಿಸುತ್ತಾನೆ.

‘ನನ್ನ ಫ್ರೆಂಡ್ಸ್ ಎಲ್ಲರೂ, ನಿನ್ನ ಇಡೀ ಸರ್ವಿಸ್ ನಲ್ಲಿ ಒಂದು ಎಲ್.ಟಿ.ಸಿ. ಬಳಸಿಕೊಳ್ಳಲಿಲ್ಲವಲ್ಲೋ, ನೀನೂ ಎಂಜಾಯ್ ಮಾಡಲಿಲ್ಲ, ನಿನ್ನ ಕಟ್ಟಿಕೊಂಡ ಹೆಂಡತಿ-ಮಕ್ಳೂ ಪಾಪ ಬಡಪಾಯಿಗಳು ಎಂದು ಹಂಗಿಸ್ತಾರೆ... ಏನು ಮಾಡೋಣ ಹೇಳು... ಉಳಿದವರ್ಯಾರು ಒಂದೊಪ್ಪತ್ತು ನೋಡ್ಕೊಳಲ್ಲ ಅಂತ ಖಡಾಖಂಡಿತವಾಗಿ ಹೇಳಿಬಿಟ್ಟಿದ್ದಾರಲ್ಲ, ಅಕ್ಕನ್ನ ಎಲ್ಲಿ ಬಿಟ್ಟು ಹೋಗೋದು?’ ಎಂದು ನೋವಿನ ನಿಟ್ಟುಸಿರಿಕ್ಕಿ ಮಗ್ಗುಲಾಗುತ್ತಾನೆ.

ಮನಸ್ಸಿನ ಕಿಚ್ಚು ಇಡೀ ಶರೀರವನ್ನು ವ್ಯಾಪಿಸಿದಂತೆ ಅನುಭವವಾಗಿ ಬೆಳಗಿನತನಕ ಹಾಸಿಗೆಯಲ್ಲಿ ಬರೀ ಹೊರಳಾಟ. ಯಾವ ಜನ್ಮದ ಶಾಪ ತನಗೆ ಈ ಬಂಧನ ಎಂಬ ಯೋಚನೆ ಕುಕ್ಕತೊಡಗಿದಂತೆ... ‘ ನೀನು ಮನೆ ತೊಗೊಳಲ್ವಾ...’ ಎಂಬ ವ್ಯಂಗ್ಯದ, ಕರ್ಕಶ ಕಂಠಗಳು ಕೋಣೆಯ ನಾಲ್ಕೂಗೋಡೆಗಳಿಗೆ ಢಿಕ್ಕಿ ಕೊಟ್ಟು ಅರಚಲಾರಂಭಿಸಿದಂತೆ ಭಾಸವಾಗಿ ಅವನು ಬೆಚ್ಚಿಬಿದ್ದು ಎದ್ದು ಕಿವಿಯಲ್ಲಿ ಬೆರಳದ್ದಿ ಕುಳಿತುಕೊಳ್ಳುತ್ತಾನೆ.

ತಲೆ ಜೇನುಗೂಡಾಗಿ, ಬಿಡಿಸಲಾರದ ಒಗಟು ಸದಾ ತಲೆ ತಿನ್ನುತ್ತದೆ.

ಈ ಚಿಂತೆಯಲ್ಲಿ ಸೀತಳಿಗೆ ಈಚೆಗೆ ಸಕ್ಕರೆ ಖಾಯಿಲೆ ಕಾಣಿಸಿಕೊಂಡಿತ್ತು. ಜೊತೆಗೆ ಬ್ಲಡ್ ಪ್ರೆಷರ್ ಬಾಧೆ ಬೇರೆ. ಡಾಕ್ಟರ್ ಕಡ್ಡಾಯವಾಗಿ ಅವಳು ವಾಕ್ ಹೋಗಲೇಬೇಕೆಂದು ಹೇಳಿದಾಗ, ಬೆಳಗಿನ ಝಾವ ಐದಕ್ಕೆಲ್ಲ ಎದ್ದು ಅವಳು, ಪಕ್ಕದ ಪಾರ್ಕಿಗೆ ವಾಕಿಂಗ್ ಹೋಗುವ ಪರಿಪಾಠ ಆರಂಭಿಸಿದ್ದಳು.

‘ಇದ್ಯಾವ ಸೀಮೆ ವಾಕ್ಕಿಂಗೋ...ನಂಗೂ ಇಪ್ಪತ್ವರ್ಷದಿಂದ ಶುಗರ್ ಇಲ್ವಾ...ನನ್ನ ಯಾವತ್ತಾದರೂ ವಾಕಿಂಗ್ ಕರ್ಕೊಂಡು ಹೋಗಿದ್ದೀರಾ ನೀವು?’ ಎಂಬ ರೆಡಿಮೇಡ್ ಆಕ್ಷೇಪಣೆಯ ಬಾಣ ಸಿರ್ರನೆ ಸಿಡಿದು ಬಂತು ಮಾಚಕ್ಕಳಿಂದ.

‘ಹೋಗಲಿ ಬಿಡಕ್ಕ...ನೀನು ಮಾತ್ರೆ ದಾಟಿ ಇನ್ಸುಲಿನ್ ಗೆ ಬಂದ ಹಾಗೆ ಅವಳೂ ಬರಬೇಕಾ ಹೇಳು, ಅವಳು ಮಲಗಿದರೆ ನಮಗ್ಯಾರು ದಿಕ್ಕು ’-ಎಂದವನು ತನಗೆ ಮಾತ್ರ ಕೇಳುವ ಹಾಗೆ ಗೊಣಗಿಕೊಂಡು ಹೆಂಡತಿಯನ್ನು ವಾಕಿಂಗ್ ಹೋಗು ಎನ್ನುವಂತೆ ಸನ್ನೆ ಮಾಡಿ ಅವಳನ್ನು ಕಳಿಸಿ ಒಳಗೆ ಬರುತ್ತಿದ್ದ.

ಹೀಗೆ ನಡೆದದ್ದು ನಾಲ್ಕಾರು ತಿಂಗಳು ಮಾತ್ರ. ಅಸಮಾಧಾನದಿಂದ ಗೊಣಗಾಡುತ್ತಿದ್ದ ಮಾಚಕ್ಕನಿಗೆ ಈಗ ಅಯಾಚಿತವಾಗಿ ಹಿತವಾದ ಸನ್ನಿವೇಶ ವರ ಪ್ರಾಪ್ತಿಯಾದಂತೆ ನಿರ್ಮಾಣವಾಗಿತ್ತು. ಯಾರ್ಯಾರೂ ಕಲ್ಪಿಸಿರದ, ನಿರೀಕ್ಷಿಸಿರದ ಕರೋನಾ ಪಿಡುಗು ಇಡೀ ವಿಶ್ವವನ್ನು ವ್ಯಾಪಿಸಿಬಿಟ್ಟಿತ್ತು. ಎಲ್ಲೋ ಕೋಟಿ ಮೈಲುಗಳಾಚೆ ಕಿವಿಯ ಮೇಲೆ ಬಿದ್ದೂ ಬೀಳದ ಹಾಗೇ ಕ್ಷೀಣವಾಗಿ ಹರಡಿದ ಸುದ್ದಿ ನೇರ ಬಂದು ಮನೆಬಾಗಿಲನ್ನೇ ತಟ್ಟಿದಾಗ ಹಬೆ ಗುದ್ದಿ, ಬೆಂಕಿಯ ಝಳ ತಾಗಿತ್ತು...ಧುತ್ತನೆ ಗುಮ್ಮ ಬಂತು ಗುಮ್ಮನ ಕಥೆ ನಿಜವಾಗಿತ್ತು.

ಧಿಡೀರನೆ ಸೀತಳ ವಾಕಿಂಗ್ ರದ್ದಾಯಿತು. ಮಾಚಕ್ಕನಿಗೋ ಪರಮ ಸಂತೋಷ. ಸದ್ಯ ಅವಳು, ಸದಾ ಮನೆಯಲ್ಲಿ ಬಿದ್ದಿದ್ದು ತನ್ನ ಬೇಕು ಬೇಡಗಳಿಗೆ ಕಿವಿಗೊಡುತ್ತಾಳಲ್ಲ ಎಂದು. ದಿನಾ ಮಧ್ಯಾಹ್ನ ಮಾಚಕ್ಕ ಮಲಗಿದ ಮೇಲೆ ಸೀತಾ, ಮಹಿಳಾ ಸಮಾಜಕ್ಕೆ ಹೋಗಿ ಅಲ್ಲಿಗೆ ಬರುವ ಹೆಂಗಸರಿಗೆ ಹೊಲಿಗೆ ಮತ್ತು ನಿಟ್ಟಿಂಗ್ ಕ್ಲಾಸ್ ಮಾಡಿ ಬರುತ್ತಿದ್ದುದರಿಂದ ಅವಳಿಗೂ ಒಂದು ಬದಲಾವಣೆ, ಕೈ ಖರ್ಚಿಗೊಂದಷ್ಟು ಕಾಸೂ ಸಿಗುತ್ತಿತ್ತು. ಅದರ ಮೇಲೆಯೂ ಮಾಚಕ್ಕನ ಕಣ್ಣು ಬಿದ್ದು, ಒಂದೇ ಸಮನೆ ರೇಗಾಡುತ್ತಿದ್ದಳು.

‘ಹೀಗೇ ನೀನು ಸಲುಗೆ ಕೊಟ್ಟರೆ, ಆಯ್ತು..ಇನ್ನೂ ನಾಲ್ಕು ಲೇಡಿಸ್ ಕ್ಲಬ್ ಗಳಿಗೆ ಹೋಗಿ ಕುಕ್ಕಿಂಗು, ಕಸೂತಿ ಅಂತ ನೂರೆಂಟು ಕ್ಲಾಸ್ ಮಾಡಿ ಬರ್ತಾಳೆ...ಆಮೇಲೆ ಇವಳು ಮನೆ ಸೇರಿದ ಹಾಗೇ ಕಣೋ ಹರಿ...ಅವಳೆಲ್ಲೂ ಹೊರಗೆ ಹೋಗೋದು ಬೇಡ’ ಎಂದರೂ ಸೀತಾ ಗಂಡನ ಒತ್ತಾಸೆಯಿಂದ ಸ್ವಲ್ಪ ಹೊರಗಿನ ಹವೆ ಮತ್ತು ಗೆಳತಿಯರನ್ನು ಕಾಣುವುದನ್ನು ತಪ್ಪಿಸಿಕೊಂಡಿರಲಿಲ್ಲ.

ಈಚೆಗೆ ಟಿವಿಗಳಲ್ಲಿ ಬೆಳಗಿನಿಂದ ರಾತ್ರಿಯವರೆಗೂ ಚೀನಾ ಕಿಚಾಯಿಸಿದ ಸೋಂಕು. ಸಾಂಕ್ರಾಮಿಕದ ಉಲ್ಭಣದ ಮೊರೆತ. ಮರಣ ಮೃದಂಗದ ಬಡಿತ ಇತ್ಯಾದಿ ಮಾಧ್ಯಮದ ತಮಟೆ ದನಿ ಹಗಲಿರುಳೂ ಕಿವಿಗೆ ಕಾದಸೀಸದಂತೆ ಎರಗಿದಾಗ ಮಾಚಕ್ಕನಿಗೂ ಪ್ರಪಂಚದ ವಿದ್ಯಮಾನ ಗೊತ್ತಾಯಿತು. ಯಾರೂ ಹೊರಗೆ ಹೋಗಕೂಡದು...ಲಾಕ್ ಡೌನ್ ಎಂಬ ನೆತ್ತಿಗೆ ಹೊಡೆದ ಮೊಳೆ ಇತ್ಯಾದಿ ಬಗ್ಗೆ ಕೇಳಿದಾಗ ಅಚ್ಚರಿಯಿಂದ ಅವಳ ಹುಬ್ಬುಗಳು ಹಾರಿತ್ತಾದರೂ, ‘ಎಲ್ಲರೂ ಮನೆಯಲ್ಲೇ ಇರಬೇಕು’ ಎಂಬ ನಿಷೇಧಾಜ್ಞೆ ಅವಳ ಕಿವಿಗೆ ಅತ್ಯಂತ ಆಪ್ಯಾಯಮಾನವಾಯಿತು.

‘ಆಹಾ ಕರೋನವೇ..’- ಎಂದು ಗುನುಗಿದಳು. ಮುಖ್ಯ ಸೀತಾ ಮನೆಯಿಂದ ಕದಲದೇ ಇರುವ ಹಾಗಾಯ್ತಲ್ಲ ಎಂಬ ಸಂತಸ ಉಬ್ಬುಬ್ಬಿ ಹೊನಲಾಯಿತು. ‘ಮನುಕುಲಕ್ಕೆ ಇದೊಂದು ಶಾಪ’ ಎಂಬ ಆಕಾಶವಾಣಿಯ ವಿಷಾದದ ದನಿಯ ಅಂಬೋಣಕ್ಕೆ ಮನದೊಳಗೇ ನಕ್ಕವಳು, ಸದಾ ಮನೆಯಲ್ಲೇ ಕುಕ್ಕರಿಸಿರುವ ನನಗ್ಯಾವುದೂ ಇಲ್ಲ, ವರವೇ ಎಂದು ಏನೋ ನೆನೆದು ಸಂಭ್ರಮಿಸಿದಳು.

ಮನೆಯಲ್ಲಿ ಸೂತಕದ ವಾತಾವರಣ. ಎಲ್ಲರ ಮೊಗಗಳಲ್ಲಿ ಆತಂಕ- ಭಯದ ನೆರಳು. ‘ಯಾರೂ ಹೊರಗೆ ಹೋಗಬೇಡಿ’ -ಎಂದು ಶ್ರೀಹರಿ ಮನೆಯವರನ್ನೆಲ್ಲ ನಿಯಂತ್ರಿಸಿದ. ಎಲ್ಲರ ಓಡಾಟ ಬಂದಾಯಿತು. ಮುಖ್ಯ ಸೀತಾ ಅಡುಗೆಮನೆಯಲ್ಲೇ ಠಿಕಾಣಿ ಹೂಡಿದ್ದು ಮಾಚಕ್ಕನ ಎದೆಯ ತುಂಬಾ ಖುಷಿಯ ಊಟೆಯನ್ನು ತುಂಬಿತು. ಶ್ರೀಹರಿಯೂ ಅನಿವಾರ್ಯವಾಗಿ ಮನೆಯಿಂದಲೇ ಕೆಲಸ ಮಾಡಲಾರಂಭಿಸಿದ. ಕಾಲೇಜಿಲ್ಲದ ಮಕ್ಕಳು ಮನೆಯಲ್ಲಿ ಬೇಸರ ಕೊಲ್ಲಲು ಪ್ರತಿದಿನ ತಾಯಿಗೆ ಏನಾದರೂ ಕರಿದ ತಿಂಡಿ ಮಾಡು ಎಂದು ದುಂಬಾಲು. ಇದು ಮಾಚಕ್ಕನಿಗೆ ಪರಮ ಖುಷಿಯ ಸಂಗತಿಯೇ. ಕುರುಕಲು ತಿಂಡಿ ಎಂದರೆ ಆಕೆಗೆ ಮೊದಲೇ ಪಂಚಪ್ರಾಣ. ಈಗ ತಮ್ಮನ ಮಕ್ಕಳ ನೆಪದಿಂದಲಾದರೂ ಮನೆಯಲ್ಲಿ ದಿನಕ್ಕೊಂದು ತಿಂಡಿ...ಚಕ್ಕುಲಿ, ಕೋಡುಬಳೆ, ನಿಪ್ಪಟ್ಟು-ರವೇ ಉಂಡೆ.

ಸಂಪೂರ್ಣವಾಗಿ ಮನೆಯಲ್ಲೇ ಬಂದಿಯಾದ ಸೀತಾ ಒಳಗೊಳಗೇ ಚಡಪಡಿಸುತ್ತಿದ್ದರೆ ಮಾಚಕ್ಕನಿಗೋ ಹಿರಿ ಹಿರಿ ಹಿಗ್ಗು. ಅಂಗಳದಲ್ಲಿ ಕುಳಿತು, ಮಲ್ಲಿಗೆಯ ಸುವಾಸನೆಯನ್ನು ಆಘ್ರಾಣಿಸುತ್ತ ನಲಿವಿಂದ ಹಾಡು ಗುನುಗುನಿಸುತ್ತಿದ್ದ ಮಾಚಕ್ಕನ ಮನದೊಳಗೆ ಅವಳದೇ ಆದ ಏನೇನೋ ಲೆಕ್ಕಾಚಾರದ ಭಾವಸ್ರೋತ.

ವಿಶ್ವವೇ ಕರೋನಾ ಪಿಶಾಚಿಯನ್ನು, ಅದು ತಂದಿತ್ತ ಪರಿಣಾಮವನ್ನು ಶಪಿಸುತ್ತಿದ್ದರೆ ಈಕೆಗೆ ಮಾತ್ರ ಅದ್ಯಾವುದರ ಪರಿವೆಯೇ ಇಲ್ಲ.

‘ಹಾಗೆ ನೋಡಿದರೆ ಇದು ಬಂದದ್ದು ಒಂಥರಾ ಒಳ್ಳೆದೇ ಆಯ್ತು ಅನ್ನಿಸತ್ತೆ. ನನ್ನ ದಿನಚರಿಯಲ್ಲಿ ಯಾವ ಬದಲಾವಣೆಗಳೂ ಇಲ್ಲದಿದ್ರೂ ಮನೆಯಲ್ಲಿ ಮಾತ್ರ ಏನೋ ಒಂದು ಬಗೆಯ ಸೊಗಸು ಗೋಚರಿಸ್ತಿದೆ. ಕರೆದ ತತಕ್ಷಣ ಓ ಎಂದು ತನ್ನ ಬಳಿ ಬರುವ ಮನೆಮಂದಿ... ಅಡುಗೆಮನೆಯಿಂದ ಘಮಘಮ ತೂರಿಬರುವ ಸುವಾಸನೆ. ಚಟುವಟಿಕೆಯ ಸದ್ದುಗಳು. ಎಲ್ಲವೂ ಹೊತ್ತು ಹೊತ್ತಿಗೆ, ಬಗೆ ಬಗೆಯಾಗಿ ತಯಾರಾಗ್ತಿವೆ. ಸಮಯದ ಪಾಲನೆಯಲ್ಲಿ ಶಿಸ್ತು. ಹುಡುಗರು ಸದಾ ಕಾಲ ಟಿವಿಯಲ್ಲಿ ಏನಾದರೊಂದು ಕಾರ್ಯಕ್ರಮಗಳನ್ನು ಹಾಕ್ತಿರ್ತಾರೆ. ಯುಟ್ಯೂಬ್‌ನಲ್ಲಿ ದಿನಕ್ಕೆರಡು ಪಿಕ್ಚರ್‌ಗಳು..ನೋಡಕ್ಕಾಗದಿದ್ರೂ ಕೇಳ್ತಾ ಮನರಂಜನೆಯಾದರೂ ಪಡೆಯಬಹುದಲ್ಲ, ಪರವಾಗಿಲ್ಲ’- ಎಂಬ ಮೆಲುಕು..ಅದನ್ನು ಹಿಂಬಾಲಿಸಿ ಬರುವ ಕನವರಿಕೆ, ಕನಸುಗಳು. ಹೊಟ್ಟೆ ತುಂಬಾ ರುಚಿರುಚಿಯಾದ ಊಟ-ತಿಂಡಿಗಳು, ಕಿವಿಯ ಮೇಲೆ ಬೀಳುವ ಆಚೀಚೆಯವರ ಕಥೆಗಳು, ಹೊರಗಿನ ಸುದ್ದಿಗಳು. ಇಷ್ಟೇ ಅವಳ ಜಗತ್ತು.
‘ ಏಯ್ ಹುಡುಗ್ರಾ...ಕನ್ನಡ ಸಿನಿಮಾ ಮಾತ್ರ ಹಾಕಬೇಕು. ಇಲ್ಲಾ, ಭಾವಗೀತೆ-ಚಿತ್ರಗೀತೆಗಳು ಇಲ್ಲ ಭಕ್ತಿಗೀತೆಗಳು ’-ಎಂಬ ಸುಗ್ರೀವಾಜ್ಞೆ.

ಈ ವಿಚಿತ್ರ ರೋಗಕ್ಕೆ ಖುಷಿಯಿಂದ ಸ್ವಾಗತ ಕೋರಿದ್ದ ಆಕೆ ಭಿನ್ನ ಭಾವಗಳ ಮೆರವಣಿಗೆಯಲ್ಲಿ ಹೊರಟಿದ್ದಳು!!
ಹಿತ್ತಿಲ ಜಾಜೀ ಬಳ್ಳಿಯ ಚಪ್ಪರದ ಕೆಳಗೆ ನಿಂತು ಹಕ್ಕಿಯ ಇಂಚರ ಆಲಿಸುತ್ತ -’ಆಹಾಹಾ..ಈ ಹಕ್ಕಿಗಳೆಲ್ಲ ಎಲ್ಲಿ ಬಚ್ಚಿಟ್ಟು ಕೊಂಡಿದ್ವು ಇಷ್ಟುದಿನ..!!..ಹೊರಗೆಲ್ಲ ಎಂಥ ಇಂಪಾದ ನಿಶ್ಶಬ್ದ...ಧೂಳಿನ ವಾಸನೆಯೇ ಇಲ್ಲ..ಕಿವಿಗಡಚಿಕ್ಕುವ ದರಿದ್ರ ವಾಹನಗಳ ಸದ್ದಿಲ್ಲ...ಮನಸ್ಸಿಗೆ ಹಾಯೆನ್ನಿಸ್ತಿದೆ...ಮುಖ್ಯವಾಗಿ ಕಾಲಿಂಗ್ ಬೆಲ್ ಕಾಟವಿಲ್ಲ...’ ಎಂದು ಮಾಚಕ್ಕ ಆನಂದಿಸುತ್ತಿದ್ದರೆ, ಅವಳಿಗೆ ಹಿತವೆನಿಸುವ ಫೋನಿನ ರಿಂಗಣಗಳು ಮಾತ್ರ ಈ ನಡುವೆ ಹೆಚ್ಚಾಗಿದ್ದವು. ತಂಗಿಯರ ಜೊತೆ ಹರಟಿದ್ದೇ ಹರಟಿದ್ದು.ಅವರಿವರ ಮನೆಗಳ ಸುದ್ದಿಗಳಿಂದ ಅವಳ ಕರ್ಣಪಟಲಗಳು ಗಾಳಿಪಟದಂತಾಗಿತ್ತು

‘ಸರ್ಯಾಗಿ ಟೈಮ್ ಟೈಮಿಗೆ ಊಟ-ತಿಂಡಿ ಎಲ್ಲ ಆಗ್ತಿದೆ ತಾನೇ’ ಎಂಬ ಪ್ರೀತಿ ಉಕ್ಕುವ ವಿಚಾರಣೆಗಳು ಬೇರೆ. ‘ನೀನು ಸಂತೋಷವಾಗಿ, ಸುಖವಾಗಿರಬೇಕು ಅಕ್ಕಾ’ ಎಂಬ ಅಕ್ಕರೆಯ ಹಾರೈಕೆಗಳು. ಮಾಚಕ್ಕನಿಗೆ ಸ್ವರ್ಗಕ್ಕೆರಡೇ ಗೇಣು...!!

ಇಂತಿಪ್ಪ ಸುಖದ ಕಡಲಲ್ಲಿ ಇದ್ದಕ್ಕಿದ್ದ ಹಾಗೆ ಒಂದು ತುಫಾನು ಎದ್ದಿತ್ತು. ಅದ್ಯಾವ ದಿಕ್ಕಿನಿಂದ ಬೀಸಿ ಬಂತೋ ಗೊತ್ತಿಲ್ಲ. ಫೋನ್ ಗಳು ಒಂದೇ ಸಮನೆ ರಿಂಗಣಗುಣಿಸಿದವು. ಮಾತುಗಳ ಅಲೆಯ ಉಬ್ಬರವಿಳಿತ...ಅತ್ತಿಂದಿತ್ತ, ಇತ್ತಿಂದತ್ತ...ಹೆಚ್ಚೂ ಕಡಿಮೆ ಚಾಡಿನುಡಿಗಳು....ಪಿಸು ಪಿಸು..

ಒಂದುದಿನ- ಬಾಯಿ ಮೂಗಿಗೆ ಬಿಗಿದಿದ್ದ ಮಾಸ್ಕ್ ಗಳನ್ನು ಕಳಚಿ ದುಬುದುಬನೆ ಮಾಚಕ್ಕನ ಮನೆಯ ಬಾಗಿಲನ್ನು ತಟ್ಟಿ ಒಳಗೆ ಬಂದೇ ಬಿಟ್ಟರು ಅವಳ ನಾಲ್ವರು ತಂಗಿಯರು. ಮಾಚಕ್ಕನ ರೂಮಿನ ಬಾಗಿಲು ಹಾಕಿಕೊಂಡು ಗಂಟೆಗಟ್ಟಲೆ ಅಕ್ಕ-ತಂಗಿಯರು ಗಹನವಾಗಿ ಚರ್ಚಿಸಿ ಬಹಳ ಹೊತ್ತು ಮಾತೂಕಥೆ ನಡೆಸಿ, ಯಾವುದೋ ಒಂದು ನಿರ್ಧಾರದ ದಡ ತಲುಪಿದ್ದರು.

ಸೀತಳಿಗೆ ಅವರ ಅನಿರೀಕ್ಷಿತ ಆಗಮನ, ಅದೂ ಈ ಕೋವಿಡ್ ಸಮಯದಲ್ಲಿ ಅಚ್ಚರಿ ತಂದರೂ ತುಟಿ ಬಿಚ್ಚದೆ ಕಾಫಿ-ತಿಂಡಿ ಸಮಾರಾಧನೆ ನಡೆಸಿದಳು ಎಂದಿನಂತೆ. ಮತ್ತೆ ಬಾಗಿಲು ಮುಚ್ಚಿಕೊಂಡಿತು.

ಗಂಡ-ಹೆಂಡತಿ ಇಬ್ಬರೂ ವಿಸ್ಮಯಭಾವದ ಮುಖಗಳಲ್ಲಿ ಪ್ರಶ್ನೆಗಳನ್ನು ಒತ್ತಿಕೊಂಡರು. ಕೋಣೆಯೊಳಗೆ ನಡೆಯುತ್ತಿರುವುದೇನೆಂಬುದು ಅವರ ಪಾಲಿಗೆ ನಿಗೂಢ.

ಒಳಗೆ ಜೋರಾಗಿ ಮಾತೂಕತೆ ನಡೆಯುತ್ತಿತ್ತು.

‘ಅಕ್ಕಾ, ಕಷ್ಟ ಸಮಯದಲ್ಲಿ ರಕ್ತ ಹಂಚಿಕೊಂಡು ಹುಟ್ಟಿದ ನೀನಲ್ಲದೆ ನಮಗ್ಯಾರು ಆಗಬೇಕು ಹೇಳು’- ತಂಗಿಯರು ಅಲವತ್ತುಕೊಳ್ಳುತ್ತಿದ್ದರು ಕಣ್ಣಲ್ಲಿ ನೀರು ಹನಿಸಿ, ದನಿ ಗದ್ಗದಿಸಿ.

‘ನನ್ನ ಹತ್ತಿರ ಏನಿದೆಯಮ್ಮ...ಅವನಿಗೆ ಬರೋ ಸಂಬಳದಲ್ಲಿ ಮನೆ ನಡೆಸೋದೇ ಕಷ್ಟವಾಗತ್ತೆ...ನಿಮಗೆ ದುಡ್ಡು ಎಲ್ಲಿಂದ ತಂದುಕೊಡಲಿ?’

‘ನೀನು ಕೈಯಿಂದೇನೂ ಕೊಡೋದು ಬೇಡಕ್ಕ...ಮನೆ ನಿನ್ನ ಹೆಸರಿನಲ್ಲೇ ಇದೆಯಲ್ಲ’

‘ ಹೌದು, ಅರವತ್ತು-ಎಪ್ಪತ್ತು ವರ್ಷದ ಈ ಗಾರೇಲಿ ಕಟ್ಟಿದ ರೆಡ್ ಆಕ್ಸೈಡ್ ಮನೆ, ತಲೆಯ ಮೇಲೆ ಒಂದು ಸೂರು ಕೊಟ್ಟಿದೆಯೇ ಹೊರತು... ಇದರಿಂದ ಏನು ಹುಟ್ಟತ್ತೆ ?’

‘ಹಾಗಲ್ಲಕ್ಕ’

‘ಇದನ್ನು ಮಾರಿ ಕೊಡು ಅಂತೀರಾ...ಆಮೇಲೆ ನಾವೆಲ್ಲಿ ಹೋಗೋದು..?’

‘ಅಷ್ಟೂ ನಮಗ್ಗೊತ್ತಿಲ್ವಾ...’

‘ಮತ್ತೇ...?

‘ ಈ ಮನೆಯ ಮೇಲೆ ಸಾಲ ಕೊಡ್ತಾರೆ ಬ್ಯಾಂಕಿನೋರು...ಅದನ್ನ ಮಾರ್ಟಿಗೇಜ್ ಅಂತಾರಕ್ಕ ....ಇದು ಏನಿಲ್ಲ ಅಂದ್ರೂ ಈ ಕಾಲದಲ್ಲಿ ಕೋಟಿ ರೂಪಾಯಿಗಳಿಗೂ ಹೆಚ್ಚು ಬಾಳತ್ತೆ...ಇದರ ಮೇಲೆ ನೀನು ಕೇಳಿದಷ್ಟು ಹಣ ಕೊಡ್ತಾರೆ...ಅದನ್ನು ನೀನು ನಮಗೆ ಹಂಚಿದರೆ, ನಮ್ಮ ತಾಪತ್ರಯಗಳೆಲ್ಲ ನೀಗತ್ವೆ...’

‘ಅಯ್ಯೋ ನಾನು ಆ ಸಾಲಾನಾ ತೀರಿಸೋ ಬಗೆ?’
‘ನೀನೇನು ತೀರಿಸಬೇಕಿಲ್ಲಕ್ಕ....ಇದನ್ನು ರಿವರ್ಸ್ ಮಾರ್ಟಿಗೆಜ್ ಅಂತಾರೆ...ಕಡಮೆ ಅಂದ್ರೂ ಕೋಟಿ ರೂಪಾಯಿ ಕೇಳಬಹುದು...ಕೊಡ್ತಾರೆ...ಈ ಮನೆಯನ್ನು ಅವರಿಗೆ ಅಡವು ಇಡಬೇಕಷ್ಟೆ, ಅದನ್ನು ನಿನ್ನ ಕಾಲಾನಂತರ ಅಷ್ಟು ಹಣ ಕೊಟ್ಟು ಬಿಡಿಸಿಕೊಳ್ಳಬಹುದು, ನೀನೇನು ಯೋಚನೆ ಮಾಡಬೇಡ ಅಕ್ಕಾ, ಬೇಕಾದ್ರೆ ನಾವೇ ಕೊಟ್ಟು ಮತ್ತೆ ತೊಗೋತೀವಿ..’

‘ನೀವೂ? ನನ್ನ ಕಡೆಯವರೆಗೂ ಯಾರು ನೋಡಿಕೊಳ್ತಾರೋ ಅವರಿಗೆ ಈ ಮನೆ ಅಂತ ಅಪ್ಪನ ಉದ್ದೇಶ, ನನ್ನ ಹತ್ರಾನೂ ಹಾಗಂತ ಹೇಳಿದ್ದಾರೆ’

‘ಸರಿ, ನಾವು ನಿನ್ನ ಕರ್ಕೊಂಡು ಹೋಗ್ತೀವಿ ಬಿಡು, ಸರದಿಯ ಮೇಲೆ ಏಳುಜನವೂ ನಿನ್ನ ನೋಡಿಕೊಳ್ತೀವಿ...ಈ ಮನೆಯ ಕಾಗದ-ಪತ್ರಗಳನ್ನೆಲ್ಲ ತೆಗೆದಿಡು...ಈಗ ಕರೋನಾ ಇರೋದರಿಂದ ನೀನೇನು ಬ್ಯಾಂಕಿಗೆ ಬರಬೇಕಿಲ್ಲಕ್ಕ...ಅವರೇ ಪೇಪರ್ಸ್ ಎಲ್ಲ ರೆಡಿ ಮಾಡ್ಕೊಂಡು ಮನೆಗೇ ಬರ್ತಾರೆ...ನೀನು ಅವುಗಳಿಗೆ ಸಹಿ ಹಾಕಿ ಕೊಟ್ಟರೆ ಸಾಕು ಅಷ್ಟೇ, ಬೇಕಾದ್ರೆ ನಿನಗೂ ಸ್ವಲ್ಪ ದುಡ್ಡು ಕೊಡೋಣಂತೆ ’

ಮಾಚಕ್ಕ ಕಣ್ಣಗುಡ್ಡೆಯನ್ನು ಗರಗರ ತಿರುಗಿಸಿ ಏನೋ ಯೋಚಿಸುವಂತೆ ಮುಖದ ಗೆರೆಗಳನ್ನು ಬಳುಕಾಡಿಸಿದಳು.
‘ ಈ ವಿಷ್ಯ ಹರೀಗೆ ತಿಳಿಯಬಾರದು, ಗುಟ್ಟಾಗಿರಬೇಕು, ನಾವು ಮುಂದಿನ ವಾರ ಬರ್ತೀವಕ್ಕ...’- ಎಂದು ಮೇಲೇಳ ಹೊರಟವರನ್ನು ತಡೆಯುತ್ತಾ ಮಾಚಕ್ಕ, ‘ಈಗ ಬ್ಯಾಂಕ್ನೋರು ಕೊಡೋ ಅಷ್ಟು ಹಣವನ್ನು ಕೊಟ್ಟು ಆಮೇಲೆ ಹರಿ ಬೇಕಾದ್ರೆ, ಈ ಮನೆ ಬಿಡಿಸಿಕೋಬಹುದಾ?’ ಎಂದು ಆತಂಕದಿಂದ ಕೇಳಿದಳು.

‘ ಹೂಂನಕ್ಕ...ನಿನ್ನ ಕಡೆಯವರೆಗೂ ಅವನು ಚೆನ್ನಾಗಿ ನೋಡಿಕೊಂಡರೆ ಆಮೇಲಿನ ಕಥೆ ನೋಡ್ಕೊಳ್ಳೋಣ, ಅವನಿಗಾಗದಿದ್ರೆ ನಾವು ಬಿಡಿಸಿಕೊಳ್ತೀವಿ, ನಿಶ್ಚಿಂತೆಯಾಗಿರು’-ಎಂದು ಭರವಸೆಯಿತ್ತರು.

ಮಾಚಕ್ಕ ಸಮ್ಮತಿಯಿಂದ ತಲೆ ಹಾಕಿದಳು. ಎಲ್ಲರ ಮೊಗಗಳ ಮೇಲೂ ಸಂತಸದ ಬೆಳದಿಂಗಳು ಹರಡಿತು. ಮಾಚಕ್ಕನಿಗೂ ತಂಗಿಯರಿಗೆ ನೆರವಾದ ಸಂತೃಪ್ತ ಭಾವ.

‘ಸರಿನಕ್ಕ, ಮುಂದಿನವಾರ ಫೋನ್ ಮಾಡಿ, ಬ್ಯಾಂಕಿನವರನ್ನು ಕರೆದುಕೊಂಡು ಬರ್ತೀವಿ...ಮನೆ ಕಾಗದ-ಪತ್ರಗಳನ್ನೆಲ್ಲ ತೆಗೆದಿಟ್ಟಿರು..ಹರಿ ಹತ್ರ ಬಾಯಿ ಗೀಯಿ ಬಿಟ್ಟೀಯಾ...’

ಮಾಚಕ್ಕ ತಲೆಯಾಡಿಸಿದಳು.

ರಾತ್ರಿ ಮಾಚಕ್ಕನಿಗೆ ನೆಮ್ಮದಿಯ ನಿದ್ರೆ. ಒಡಹುಟ್ಟಿದವರ, ಪ್ರೀತಿಪಾತ್ರರಿಗೆ ನೆರವಾದ ಧನ್ಯತೆಯ ಗುನುಗು. ತಂಗಿಯರು ಹೇಳಿದಂತೆ ಜೋಪಾನವಾಗಿ ಪೆಟ್ಟಿಗೆಯಲ್ಲಿಟ್ಟಿದ್ದ ಆಸ್ತಿಪತ್ರವನ್ನು ತೆಗೆದು, ಬೀರುವಿನಲ್ಲಿಟ್ಟುಕೊಂಡಳು.
ಮಾಚಕ್ಕ ಮನೆಯಲ್ಲಿ ಈ ಗುಟ್ಟು ಸೋರದಂತೆ ಬಲು ನಾಜೂಕಾಗಿ ನಿಭಾಯಿಸಿದಳು. ಈ ನಡುವೆ ಮನೆಯವರೊಂದಿಗೆ ಸಂಪರ್ಕ ಕಡಿದುಕೊಂಡವಳಂತೆ ತಾನಾಯಿತು, ತನ್ನ ರೇಡಿಯೋ ಆಯಿತು. ಒಬ್ಬಳೇ ಕೋಣೆಯಲ್ಲಿ ಕುಳಿತು ಹಾಡು ಕೇಳುತ್ತ ತಲೆಯಾಡಿಸುತ್ತಿದ್ದಂತೆ ಕಂಡರೂ ಏನೋ ಗಾಢವಾಗಿ ಆಲೋಚಿಸುತ್ತಿದ್ದಳು.

ಸೀತಾ ಯಾಂತ್ರಿಕವಾಗಿ, ಎಂದಿನಂತೆ ತಿಂಡಿಯ ನಂತರ ಮರೆಯದೆ ಅತ್ತಿಗೆಗೆ ಇನ್ಸುಲಿನ್ ಇಂಜೆಕ್ಷನ್ ಕೊಟ್ಟು, ಪಕ್ಕದಲ್ಲಿ ನೀರಿನ ತಂಬಿಗೆ ಇರಿಸಿ, ‘ಏನಾದರೂ ಬೇಕಾದ್ರೆ ಕರೀರಿ ಅತ್ತಿಗೆ...ಬಾಗಿಲಲ್ಲೇ ಮಕ್ಕಳು ಓದ್ತಾ ಕೂತಿರ್ತಾರೆ..ನಿಮಗೆ ಇಷ್ಟ ಅಂತ ಇವತ್ತು ಕಾಯಿ-ಸಾಸಿವೆ ಅನ್ನ ಕಲೆಸಿದ್ದೇನೆ, ಜೊತೆಗೆ ನೆಂಚಿಕೊಳ್ಳಲು ಅಂಬೋಡೆ ಕರೀತೀನಿ, ಇನ್ನೇನಾದ್ರೂ ಮಾಡಬೇಕಾ?’- ಎಂದು ನಯವಾಗಿ ನುಡಿದಾಗ ಮಾಚಕ್ಕನಿಗೆ ಮಾತು ಗಂಟಲಲ್ಲಿ ಸಿಕ್ಕಿಹಾಕಿಕೊಂಡಿತು. ಕೈ ಬೆರಳುಗಳು ಒಂದರೊಡನೊಂದು ಹೊಸೆದುಕೊಂಡಿದ್ದವು. ಮ್ಲಾನದನಿಯಲ್ಲಿ ‘ಏನೂ ಬೇಡ, ನಿನ್ನ ಕೆಲಸ ನೋಡಿಕೋ ಹೋಗು’ ಎಂದಳು. ಅವಳ ದನಿಯಲ್ಲಿ ಎಂದಿನ ಕಟುತ್ವ ಇರಲಿಲ್ಲ.

ಮೆತ್ತನೆಯ ಹಾಸಿಗೆಯ ಮೇಲೆ ಮಲಗಿದ್ದರೂ ಮಾಚಕ್ಕನಿಗೆ ಮುಳ್ಳು ಒತ್ತಿದಂತೆ ಭಾಸವಾಗುತ್ತಿತ್ತು. ಕಣ್ಮುಚ್ಚಲಾರದೆ ಒಂದೇಸಮನೆ ಹೊರಳಾಡುತ್ತಿದ್ದಳು. ತಮ್ಮ ಬಂದು ಊಟಕ್ಕೆ ಕರೆದಾಗಲೂ ಮನಸ್ಸು ಅಸ್ತವ್ಯಸ್ತ. ಬಿಸಿ ಬಿಸಿಯಾಗಿದ್ದ ಅಂಬೋಡೆ ಗರಿಗರಿಯಾಗಿದ್ದರೂ ಗಂಟಲಲ್ಲಿ ಇಳಿಯಲಿಲ್ಲ. ಟಿವಿ ಒಂದೇ ಸಮನೆ ಅರಚುತ್ತಿತ್ತು... ಸೋಂಕಿತರ ಸಂಖ್ಯೆ... ಸತ್ತವರ ಸಂಖ್ಯೆ...

ತಟ್ಟೆಯಲ್ಲೇ ಕೈತೊಳೆದು ಮೇಲೆದ್ದುಬಿಟ್ಟಳು ಮಾಚಕ್ಕ...ತಪ್ಪದೆ ಆವಾಹನೆಯಾಗುತ್ತಿದ್ದ ಮಧ್ಯಾಹ್ನದ ನಿದ್ದೆ-ಗೊರಕೆ ಅಂದು ನಾಪತ್ತೆಯಾಗಿತ್ತು. ತಂಗಿಯರು ಹೆಪ್ಪು ಹಾಕಿ ಹೋಗಿದ್ದ ವಿಚಾರಗಳ ಸುತ್ತ ಲೆಕ್ಕಾಚಾರ-ಗುಣಾಕಾರ, ಆಲೋಚನೆಗಳು ಮನದೊಳಗೆ ಬುಳಬುಳನೆ ಹರಿದಾಡುತ್ತಿದ್ದವು.

ಅವರು ಹೇಳಿದ್ದ ವಾರದ ದಿನ ಬಂದೇ ಬಿಟ್ಟಿತ್ತು.

ಅಂದು- ಬೆಳಬೆಳಗ್ಗೆಯೇ ತಂಗಿಯರೆಲ್ಲ ಬಂದು ಮಾಚಕ್ಕನ ಕೋಣೆಯೊಳಗೆ ಜಮಾಯಿಸಿದರು. ಜೊತೆಯಲ್ಲಿ ಯಾರೋ ಒಬ್ಬ ಅಪರಿಚಿತ. ಅವನ ಕೈಯಲ್ಲಿ ಕಂತೆ ಕಾಗದಗಳು. ಸೀತಾ, ಗೊಂದಲದಿಂದ ಕಣ್ಣು ಪಿಳುಕಿಸುತ್ತ ಬಚ್ಚಲುಮನೆಯಲ್ಲಿದ್ದ ಗಂಡನಿಗೆ ಹೋಗಿ ಸುದ್ದಿ ಮುಟ್ಟಿಸಿದಳು.

ಮುಂದೆ ನಡೆದದ್ದೆಲ್ಲ ನಾಟಕದ ಅಂಕದಂತೆ ತೆರೆದುಕೊಂಡಿತು..ಜೋರು ಜೋರು ಮಾತುಗಳು... ಹತ್ತೇ ನಿಮಿಷದಲ್ಲಿ ಕೋಣೆಯ ಬಾಗಿಲು ಧಡೆಂದು ತೆರೆಯಿತು. ಮಾಚಕ್ಕ ಗರಂ ಆಗಿದ್ದಳು. ಬ್ಯಾಂಕಿನಿಂದ ಬಂದಾತ ಗಾಬರಿಯಿಂದ ಕೈಯಲ್ಲಿದ್ದ ಸ್ಟ್ಯಾಂಪ್ ಪೇಪರ್ ಗಳನ್ನು ಬ್ರೀಫ್ ಕೇಸಿನಲ್ಲಿ ತುರುಕಿಕೊಳ್ಳುತ್ತ, ತನ್ನನ್ನು ಕರೆತಂದ ಹೆಂಗಸರತ್ತ ಕೋಪದಿಂದ ಉರಿನೋಟ ಕಾರುತ್ತ ‘ಮೊದಲೇ ಸರ್ಯಾಗಿ ತೀರ್ಮಾನ ಮಾಡಿಕೊಂಡು, ಅವರನ್ನು ಒಪ್ಪಿಸಿ ತಾನೇ ನಮ್ಮವರೆಗೂ ಬರಬೇಕು, ನಮ್ಮನ್ನ ಏನಂಥ ತಿಳ್ಕೊಂಡಿರಿ ... ನಾನ್ಸೆನ್ಸ್’ ಎಂದು ಕ್ರುದ್ಧನಾಗಿ ಧಡಾರನೆ ಬಾಗಿಲನ್ನು ತೆರೆದು ಮನೆಯಿಂದಾಚೆ ಬಿರಬಿರನೆ ಹೊರನಡೆದ.

ತಂಗಿಯರ ಮುಖಗಳು, ತಮ್ಮಾಸೆ ಈಡೇರದ ಅವಮಾನದಿಂದ ಕಪ್ಪಾಗಿದ್ದವು. ಮಾಚಕ್ಕನ ಬದಲಾದ ನಿರ್ಧಾರ ಕಂಡು ಅವರ ಮೋರೆಗಳು ಇಂಗು ತಿಂದ ಮಂಗಗಳಂತಾಗಿದ್ದವು.

ಮಾಚಕ್ಕ ಕ್ರೋಧದಿಂದ ಸಿಡಿಯುತ್ತಿದ್ದಳು.

‘ಛೀ ಮನೆಹಾಳಿಯರಾ...ನಿಮ್ಮ ಸ್ವಾರ್ಥಕ್ಕೆ ನಮ್ಮನೆ ನೆಮ್ಮದಿ ಕದಡೋ ಪಿತೂರಿ ಮಾಡ್ತೀರ...ನೀವುಗಳು ಕಣ್ರೆ ಕೊರೊನಾ...ಮನಸ್ಸಿನ ತುಂಬಾ ಸೋಂಕು ತುಂಬುವ ಕೊರೊನಾಗಳು ನೀವು...ಹೊರಡ್ರೆ ಇಲ್ಲಿಂದ .’ ಎಂದು ಚೀತ್ಕರಿಸಿ, ರಪ್ಪನೆ ತನ್ನ ಕೋಣೆಯ ಬಾಗಿಲನ್ನು ಹಾಕಿಕೊಂಡಳು ಮಾಚಕ್ಕ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು