ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯರಾಮಾಚಾರಿ ಬರೆದ ಕಥೆ: ಮ್ಯಾಜಿಕ್ ಮಶ್ರೂಮ್

Last Updated 18 ಜೂನ್ 2022, 19:30 IST
ಅಕ್ಷರ ಗಾತ್ರ

‘Two possibilities exist: either we are alone in the Universe or we are not. Both are equally terrifying.’

― Arthur C. Clarke

‘ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಮಾದಪ್ಪನ ಕಾಡಿನಲ್ಲಿ ಯು.ಎಫ್.ಓ ಪತ್ತೆ ಶಂಕೆ, ಓರ್ವ ಯುವಕ ನಾಪತ್ತೆ.’

**

ರಾಜೀವ ಕಣ್ಬಿಟ್ಟಾಗ ಎದುರಿಗೆ ರಜನೀಶರು ಇದ್ದರು. ಸುಮಾರು ಐವತ್ತರ ಪ್ರಾಯದ, ತೆಳ್ಳಗಿನ, ಬಿಳಿ ಮುಖದ ಅವರು ಒಂದು ಬಿಳಿ ಅಂಗಿಯ ಮೇಲೆ ಕರಿ ಬ್ಲೇಜರ್ ಧರಿಸಿದ್ದರು. ರಾಜೀವ ಮತ್ತು ರಜನೀಶರ ಮಧ್ಯ ನಾಲ್ಕು ಅಡಿಯ ದೊಡ್ಡ ಟೇಬಲ್ ಒಂದು ಇತ್ತು. ಅದರ ಮೇಲೆ ಹೊಳೆಯುತ್ತಿರುವ ಎರಡು ಅಡಿಯ ಬಿಳಿಯ ಬಾಳೆಕಾಯಿ ದಿಂಡು ತರದ ರಾಡೊಂದು ಇತ್ತು. ಅದರ ಮೇಲ್ಮೈ ನುಣುಪಾಗಿ, ಆ ನುಣುಪಿಗೆ ಟೇಬಲ್ ಮೇಲಿದ್ದ ಟ್ಯೂಬ್ ಲೈಟ್ ಬೆಳಕಿಗೆ ಹೂಳೆಯುತ್ತಿತ್ತು. ಅದನ್ನೇ ನೋಡುತ್ತಾ ರಜನೀಶರು ಅಲ್ಲಿಯೇ ಜನ್ಮಗಳಿಂದ ನೋಡುತ್ತಾ ಕೂತವರಂತೆ ಕೂತಿದ್ದರು. ರಾಜೀವ ಎದ್ದು ನೋಡುವಾಗ ಅವನ ಕಡೆ ತಿರುಗಿ ಮುಗುಳ್ನಕ್ಕು 'ಎದ್ಯಾ’ ಎಂದರು. ರಾಜೀವ ಆ ಬಿಳಿಯ ರಾಡನ್ನೇ ನೋಡುತ್ತಿದ್ದನ್ನು ನೋಡಿ

‘ಇದು ಏನು ಎಂತ ನೋಡ್ತಾ ಇದ್ದೀಯ? ಬ್ರಹ್ಮಾಸ್ತ್ರ?’

‘ಹಹ ಬ್ರಹ್ಮಾಸ್ತ್ರ? ಅರ್ಜುನ ಕೊಟ್ಟಿದ್ದ ಇಲ್ಲ ಅಶ್ವತ್ಥಾಮ ಕೊಟ್ಟಿದ್ದ ನಿಮಗೆ?’

‘ಒಹೋ ಪರವಾಗಿಲ್ಲ ನೀನು ಸ್ವಲ್ಪ ಮಟ್ಟಿಗೆ ಅಸ್ತ್ರಗಳ ಬಗ್ಗೆ ತಿಳ್ಕೊಂಡಿದ್ದೀಯ ಅನ್ನು, ಇಂಟರೆಸ್ಟಿಂಗ್’

‘ಮಿಥೋಲೊಜಿ ಆ್ಯಂಡ್‌ ಫಿಸಿಕ್ಸ್ ಆರ್ ಮೈ ಫೇವರಿಟ್ ಸಬ್ಜೆಕ್ಟ್ಸ್‌’

‘ಓ, ಇದು ಇನ್ನೂ ಇಂಟರೆಸ್ಟಿಂಗ್. ಇರಲಿ ನೀನು ಇಲ್ಲಿ ಬರೋ ಮುಂಚೆ ಹೋದ ಸಲ ಹುಣ್ಣಿಮೆ ದಿನ ಸುಬ್ರಹ್ಮಣ್ಯ ಹತ್ರ ಇದ್ಯಲ್ಲ ಮಾದಪ್ಪ ಕಾಡು ಅಲ್ಲಿ ದೊಡ್ಡ ಸದ್ದು, ಮಧ್ಯರಾತ್ರಿ ಬೆಚ್ಚಿ ಬಿದ್ದೆ, ಹೋಗಿ ನೋಡುದ್ರೆ ಬೆಟ್ಟದ ತುದಿಯಿಂದ ಆಕಾಶಕ್ಕೆ ಯಾವುದೋ ಹಸಿರು ಬಣ್ಣದ್ದು ಹೊರಟ ಹಾಗೆ ಕಾಣಿಸ್ತು. ಕಾಡೆಲ್ಲಾ ಒಮ್ಮೆಗೆ ಆ ರಾತ್ರಿಯಲ್ಲೂ ಹಸಿರಾದಂತೆ ಕಾಣಿಸ್ತು. ಬೆಳಗ್ಗೆ ಎದ್ದು ಬೇರೆ ಯಾರಾದ್ರೂ ನೋಡಿದ್ದಾರಾ ಅಂತ ಕೇಳುದ್ರೆ ಉಹೂ ಯಾರು ಎದ್ದಿಲ್ಲ, ಒಂದಿಬ್ರು ಎದ್ದೀವಿ ಆದ್ರೆ ಅಂತದ್ದೇನ್ ನೋಡ್ಲಿಲ್ಲ ಅಂದ್ರು. ಆರ್.ಎಫ್.ಓ ನಂಗೆ ಗೊತ್ತೇ ಇಲ್ಲ ಅಂದ. ಸರಿ ಆಗಿದ್ ಆಗಲಿ ಅಂತ ಮಾದಪ್ಪ ಕಾಡಿಗೆ ಹೋಗಿ ಹುಡುಕಾಡುವಾಗ ಇದು ಸಿಗ್ತು. ಹೊಳಿತಾ ಇತ್ತು. ಇದ್ರ ತುದಿ ನೋಡು ಏನೋ ಯಾರೋ ಕೂತ ಭಂಗಿಯಲ್ಲಿದೆ, ಬ್ರಹ್ಮಾಸ್ತ್ರಕ್ಕೆ ಬ್ರಹ್ಮನ ಮುಖ ಇತ್ತಂತೆ’

ರಾಜೀವ ಅದನ್ನು ಕೈಲಿ ಇಟ್ಟುಕೊಂಡು ನೋಡಿ, ನಕ್ಕು

‘ಯಾವುದೋ ಜಾತ್ರೇಲಿ ಮಾರೋ ಆಟದ್ ಸಾಮಾನ್ ತರ ಇದೆ, ಬ್ರಹ್ಮಾಸ್ತ್ರ ಅಂತೆ ಬ್ರಹ್ಮಾಸ್ತ್ರ’

‘ನಗು, ನಗು, ನೆನ್ನೆ ನೀನು ಏನಾದ್ರೂ ಇದು ಹೊಳೆಯದನ್ನ ನೋಡಿದ್ರೆ ಈ ತರ ನಗ್ತಾ ಇರ್ಲಿಲ್ಲ. ಇದರ ಮಿಕ್ಕಿದ್ದ ಭಾಗ ಇನ್ನೂ ಅಲ್ಲೇ ಎಲ್ಲೋ ಬಿದ್ದಿರುತ್ತೆ, ಬಿಡೋಲ್ಲ ಹುಡುಕ್ತೀನಿ. ಇದು ಒಂದೋ ಬ್ರಹ್ಮಾಸ್ತ್ರ ಇಲ್ಲ ಯಾವುದೋ ಏಲಿಯನ್ ಬಿಟ್ಟು ಹೋಗಿರೋ ವೆಪನ್ ಅನ್ಸುತ್ತೆ’. ರಾಜೀವ ನಗತೊಡಗುತ್ತಾನೆ. ರಜನೀಶರು ಅದನ್ನು ಗಮನಿಸಿ

‘ಯಾಕೆ ನಗ್ತಾ ಇದ್ದೀಯ?’

‘ಏನಿಲ್ಲ ಈ ಏಲಿಯನ್ಸ್ ಬಂದ್ರೆ ನೇಕೆಡ್ ಆಗಿ ಎತ್ತಾಕೊಂಡು ಹೋಗ್ತಾವೆ ಅಂತ ನಿಜಾನ? ಹಹ ಕಮಾನ್, ಡೂ ಯು ಬಿಲೀವ್ ಇನ್ ಏಲಿಯನ್?’ ಎಂದು ಹೇಳಿ ಮತ್ತೆ ನಗುತ್ತಾನೆ

‘ಓ ವೈ ನಾಟ್, ಈ ಬ್ರಹ್ಮಾಂಡದಲ್ಲಿ ಬೇರೆ ಜಗತ್ತೇ ಇಲ್ವಾ? ಬೇರೆ ಗ್ರಹಗಳೇ ಇಲ್ವಾ? ಬೇರೆ ಗ್ರಹದಲ್ಲಿ ಜೀವವಿಲ್ವಾ?’

‘ನೋ ವೇ, ಇದ್ದಿದ್ರೆ ಇಷ್ಟೊತ್ತಿಗೆಲ್ಲ ಗೊತ್ತಾಗಬೇಕಿತ್ತಲ್ಲ’

‘ಕಾರ್ಲ್ಸ್ ಅಂತ ಅಮೆರಿಕಾದವ ಹೇಳ್ತಾನೆ ಈ ಭೂಮಿ ಮೇಲಿರೋ ಅಷ್ಟು ಸಮುದ್ರದ ದಂಡೆಯಲ್ಲಿನ ಮರಳನ್ನ ಒಂದೇ ಕಡೆ ಸುರಿದರೆ, ಅಲ್ಲಿನ ಅಷ್ಟು ಮರಳಿನ ಕಣಗಳನ್ನು ಎಣಿಸಿದರೆ ಎಷ್ಟು ಕಣಗಳಿವೆಯೋ ಅಷ್ಟು ಕಣಗಳಷ್ಟು ನಕ್ಷತ್ರಗಳಿವೆ ಅಂತ, ಅಂದರೆ ಜಸ್ಟ್ ಇಮಾಜಿನ್ ಈ ಬ್ರಹ್ಮಾಂಡದಲ್ಲಿ ಅದೆಷ್ಟು ಸೂರ್ಯರು ಇರಬಹುದು, ಅದೆಷ್ಟು ಭೂಮಿ ತರದ ಗ್ರಹಗಳಿರಬಹುದು, ಬ್ರಹ್ಮಾಂಡದಲ್ಲಿ ಭೂಮಿ ಒಂಟಿ ಪಿಶಾಚಿಯ?’

‘ನಾನು ಸೈನ್ಸ್ ವಿದ್ಯಾರ್ಥಿ ಲಾಜಿಕ್ ಇಲ್ದೆ ಯಾವುದು ನಂಬೋಲ್ಲ. ನಿಮಗೆ ಫರ್ಮಿ ಪ್ಯಾರಡಾಕ್ಸ್ ಗೊತ್ತಿರಬಹುದು, ಈ ಬ್ರಹ್ಮಾಂಡದಲ್ಲಿ ಅನ್ಯಗ್ರಹ ಜೀವಿಗಳಿದ್ದರೆ ಯಾಕೆ ಕಾಣಿಸಿಕೊಂಡಿಲ್ಲ ಎನ್ನುವ ವಾದ ಅದು’

‘ಐ ನೋ, ಐ ನೋ’

**

ಮೂಡುಬಿದರೆ ಪೊಲೀಸ್ ಠಾಣೆಯಿಂದ ರಾತ್ರೋ ರಾತ್ರಿ ತಪ್ಪಿಸಿಕೊಂಡವನನ್ನ ಎರಡು ರಾತ್ರಿ ಸಿಕ್ಕಾಪಟ್ಟೆ ಹುಡುಕಿ, ಮೂರನೇ ರಾತ್ರಿ ಇನ್ನೇನು ಕುಕ್ಕೆಯ ಬಳಿ ಸಿಗಬೇಕು ಅಷ್ಟ್ರಲ್ಲಿ ಕುಮಾರಪರ್ವತದ ಕಾಡಿಗೆ ನುಗ್ಗಿ ಕಳ್ಳ ತಪ್ಪಿಸಿಕೊಂಡಿದ್ದ. ಹಾಗೆ ತಪ್ಪಿಸಿಕೊಂಡ ವೇಳೆ ಅವನು ಕದ್ದಿದ್ದ ದೇವರ ವಿಗ್ರಹ ಕೂಡ ಹೊತ್ತು ಒಯ್ದಿದ್ದ. ಪೊಲೀಸರು ಇನ್ನಷ್ಟು ಚುರುಕಾಗಿ ಕಳ್ಳನನ್ನು ಹುಡುಕಾಡತೊಡಗಿದರು.

**

ಒಂದು ಗ್ಲಾಸಿಗೆ ವೈನು ಸುರಿದು, ರಾಜೀವನಿಗೂ ಒಂದು ಗ್ಲಾಸ್ ಕೊಟ್ಟು, ಕೈಯಲ್ಲಿ ಮ್ಯಾಜಿಕ್ ಮಶ್ರೂಮ್ ಹಿಡಿದು ‘ಬೇಕಾ’ ಎಂದರು. ಹೋದ ಸಲ ಕೊಡೈಕೆನ್ನಾಲಿನಲ್ಲಿ ಮ್ಯಾಜಿಕ್ ಮಶ್ರೂಮ್ ತಿಂದು ಅನುಭವಿಸಿದ ಭ್ರಮೆ ನೆನಪಾಗಿ ‘ಬೇಡ’ ಎಂದು ಕೈ ಮುಗಿದೆ. ‘ರಾತ್ರಿ ಇಲ್ಲಿ ಸೊಳ್ಳೆಗಳ ಕಾಟ, ಜೊತೆಗೆ ದೆವ್ವಗಳ ಕಾಟ, ಕಾಡಲ್ಲಿ ಅಷ್ಟು ಸುಲಭವಲ್ಲ ನಿದ್ದೆ, ಡ್ರಗ್ಸ್ ನಶೆಯಿಲ್ಲದೆ’ ಎಂದ ಮೇಲೆ ತೆಗೆದುಕೊಂಡು ಬಾಯಿಗೆ ಹಾಕಿಕೊಂಡ, ರಜನೀಶರು ವಿರಾಮ ಕೊಟ್ಟಿದ್ದ ವಾದವನ್ನ ಮುಂದುವರೆಸಿದರು.

‘ನೋಡಿ ರಾಜೀವ್, ಒಂದು ವಾದದ ಪ್ರಕಾರ ಬ್ರಹ್ಮಾಂಡದಲ್ಲಿ 10 ಆಯಾಮದ ಅಂದರೆ ಹತ್ತು ಡೈಮೆನ್ಶನ್‌ನ ಜೀವಿಗಳಿಂದ ಶುರು ಇದೆ ಅಂತೇ. ನೀವು ಫಿಸಿಕ್ಸ್ ವಿದ್ಯಾರ್ಥಿ ನಿಮಗೆ ಗೊತ್ತು ಮನುಷ್ಯ ಮೂರು ಆಯಾಮದ ಜೀವಿ ಅಂತ. ಯಾವಾಗ್ಲೂ ನಮಗಿಂತ ಹೆಚ್ಚು ಆಯಾಮದವರು ನಮ್ಮನ್ನ ಹೊಸಕಿ ಹಾಕಲು ಹೊಂಚು ಹಾಕಿ ನಮ್ಮ ಆಯಾಮದಲ್ಲಿ ಭೇದಿಸಲಾಗದ ಪವರ್ ಫುಲ್ ಟೆಕ್ನಿಕ್ ಇಂದ, ವೆಪನ್ ಇಂದ ನಮ್ಮನ್ನ ನಾಶ ಮಾಡಿ ಹಾಕ್ತಾರಂತೆ. ಅವರಿಂದ ತಪ್ಪಿಸಿಕೊಳ್ಳಲು ಇರುವ ಏಕೈಕ ಮಾರ್ಗ ನಾವು ನಮಗಿಂತ ಮೇಲಿರುವ ಆಯಾಮದವರ ತಂತ್ರಗಳನ್ನು ಕಂಡು ಹಿಡಿಯುವುದು, ನನಗೇಕೋ ಈ ಬಿಳಿಯ ರಾಡು ಅಂತದೇ ಒಂದು ವೆಪನ್ ಇರಬಹುದಾ ಅಂತ ಅನುಮಾನ’

‘ನೀವೊಳ್ಳೆ ಸರ್, ನೀವು ಹೇಳ್ತಾ ಇರೋದು ನೋಡುದ್ರೆ ನಮ್ಮನ್ನ, ಈ ಬಿಳಿಯ ರಾಡು ಈ ಭೂಮಿಯನ್ನ ಎಂಡ್ ಮಾಡಲಿಕ್ಕೆ ಬಳಸುವ ವೆಪನ್ ಇದು ಅಂತೀರಾ, ಅದು ನೋಡಿ ಒಳ್ಳೆ ಜಾತ್ರೆ ಐಟಂ ತರ ಇದೆ, ಒಂದು ಬಟನ್ ಇಲ್ಲ, ಏನಿಲ್ಲ’

‘ಅದಕ್ಕೆ ನನಗೆ ಅನುಮಾನ, ನಮಗಿಂತ ಹೆಚ್ಚಿನ ಆಯಾಮದ ಜೀವಿಗಳು ನಮಗಿಂತ ಬುದ್ದಿವಂತರು, ಅವರನ್ನು ಅವರ ಆಯುಧಗಳನ್ನ ಡಿಕೋಡ್ ಮಾಡೋದು ಅಷ್ಟು ಸುಲಭವಲ್ಲ, ಆಟಂನ ಕಣಗಳನ್ನು ಭೇದಿಸಲಾಗದಷ್ಟು ಬಂಧಿಸಿದರೆ, ಅದು ಅತ್ಯಂತ ಪವರ್‌ಫುಲ್ ವೆಪನ್ ಅಂತಾನೆ ಐನ್ಸ್ಟೈನ್’

‘ಏನೇ ಹೇಳಿ ಸರ್ ನೀವು, ನನ್ ಪ್ರಶ್ನೆ ಒಂದೇ ಅನ್ಯಗ್ರಹ ಜೀವಿಗಳಿದ್ರೆ ಅವು ಕಾಣಿಸಿಕೊಬೇಕು ಅಷ್ಟೇ’

‘ಅವರು ಯಾಕೆ ಕಾಣಿಸೋಲ್ಲ ಅಂತಾನೂ ಹೇಳ್ತಿನಿ, ನೀನು ವಿಗ್ರಹಗಳನ್ನ ಕದ್ದು, ಪೊಲೀಸ್‌ಗೆ ಮಣ್ಣು ಎರಚಿ ತಪ್ಪಿಸಿಕೊಂಡು ಇದೇ ಕಾಡಿಗೆ ಯಾಕೆ ಬಂದೆ? ಇಲ್ಲಿದ್ರೆ ಅವರು ಕಂಡು ಹಿಡಿಯಾಕ್ ಚಾನ್ಸ್ ಇಲ್ಲ ಅಂತ ತಾನೇ, ಇಲ್ಲಿಂದ ಯಾವ ಸಿಗ್ನಲ್ ಅವರಿಗೆ ಹೋಗೋಲ್ಲ ಅಂತ ತಾನೇ’

‘ಹೌದು’

‘ಎಕ್ಸಾಕ್ಟ್ಲಿ ಏಲಿಯೆನ್ಸ್ ಇರೋದು ಹಾಗೆ, ಅದಕ್ಕೆ ಡಾರ್ಕ್ ಫಾರೆಸ್ಟ್ ಥಿಯರಿ ಅಂತಾರೆ, ಇನ್ನೂ ಸುಲಭವಾಗಿ ಹೇಳ್ತಿನಿ ಕೇಳು, ಈ ಬಿಗ್ ಬ್ಯಾಂಗ್ ಥಿಯರಿ ಗೊತ್ತು ತಾನೇ?’

‘ಯಸ್, ಈ ಯೂನಿವರ್ಸ್ ಹೇಗೆ ಸೃಷ್ಟಿಯಾಯ್ತು ಅಂತ ಅಲ್ವ?’

‘ಯಸ್ ಅದೇ, ಸೀ ಬಿಗ್ ಬ್ಯಾಂಗ್ ಆದಾಗ ಎನರ್ಜಿ, ಟೈಮ್, ಸ್ಪೇಸ್, ಮ್ಯಾಟರ್ ಎಲ್ಲ ಬಂತಲ್ಲ. ಅದು ಶುರುವಾದ ಪಾಯಿಂಟ್ ಇಂದ ನಾವು ಅದೆಷ್ಟೋ ಬಿಲಿಯನ್ ದೂರ ಇದ್ದಿವಿ ಇಲ್ಲಿ. ನಮಗಿಂತ ಮುಂಚೆ ಇರೋ ಗ್ರಹಗಳಲ್ಲಿ ಅಕಸ್ಮಾತ್ ಜೀವಿಗಳಿದ್ರೆ ಅವರು ಸಮಯದಲ್ಲಿ ನಮಗಿಂತ ಮುಂದೆ ಇದ್ದಾರೆ ಅಂತ ತಾನೇ, ದೇ ಆರ್ ಅಡ್ವಾನ್ಸ್ಡ್‌’

‘ಇರಬಹುದು ಆದರೂ ಕಾಣಿಸಿಕೊಬೇಕು ಅಲ್ವ ಸರ್’

‘ಅಲ್ಲಿಗೆನೇ ಬರ್ತಾ ಇದ್ದೀನಿ. ಈ ಡಾರ್ಕ್ ಫಾರೆಸ್ಟ್ ಥಿಯರಿ ಅಥವಾ ಕತ್ತಲ ಕಾಡು ಥಿಯರಿ ಪ್ರಕಾರ ನಮ್ಮ ಇರುವಿಕೆ ಆದಷ್ಟು ಗೌಪ್ಯವಾಗಿರಬೇಕು. ಆಗ ನಾವು ಸುರಕ್ಷಿತ. ಇವಾಗ ನೋಡಿ ಒಂದು ಕಾಲದಲ್ಲಿ ಭೂಮಿ ದುಂಡಗಿಲ್ಲ ಅಂದುಕೊಂಡು ಎಷ್ಟೋ ಜನ ತಮ್ಮ ಪ್ರದೇಶದ ಬಾರ್ಡರ್ ಕೂಡ ದಾಟಲು ಭಯ ಪಡ್ತಾ ಇದ್ರೂ. ಸಮುದ್ರದ ಅಂಚಿಗೆ ಜಲಪಾತ ಇದೆ, ಅಲ್ಲಿ ಹೋದರೆ ಅಷ್ಟೇ ಖತಂ ಎಂದು ಎಲ್ಲೂ ಹೋಗಿರಲಿಲ್ಲ. ಯಾವಾಗ ಸ್ವಲ್ಪ ತಂತ್ರಜ್ಞಾನ ಮಣ್ಣು ಮಸಿ ಬಂತೋ ಆಗ ಅಲ್ಲಿವರೆಗೂ ಜಗತ್ತಿಗೆ ಕಾಣದ ತಾವಾಯ್ತು ತಮ್ಮ ಪಾಡಾಯ್ತು ಅನ್ನುವ ಬೇರೆ ಬೇರೆ ದೇಶಗಳು, ನಾಗರಿಕತೆಗಳು ಬೇರೆಯವರಿಗೆ ಗೊತ್ತಾಯ್ತು. ಆಗ ಬಲಿಷ್ಠರು, ತಂತ್ರಜ್ಞಾನದಲ್ಲಿ ಮುಂದುವರಿದವರು ತಮಗಿಂತ ಕೆಳಗಿನವರನ್ನು ದುರ್ಬಲರನ್ನು ತುಳಿದು ಹೊಸಕಿ ಹಾಕಿದರು. ಈ ಒಂದೇ ಕಾರಣದಿಂದಾಗಿ ಬೇರೆ ಗ್ರಹದ ಜೀವಿಗಳು ತಾವು ಎಲ್ಲಿಯೂ ತೋರ್ಪಡಿಸಕೊಳ್ಳದೆ, ಕಾಣಿಸಿಕೊಳ್ಳದೆ, ತಮ್ಮ ಪಾಡಿಗೆ ತಾವು ಇವೆ. ಯಾವಾಗ ಅವು ಬೇರೆ ಗ್ರಹದವರ ಕಣ್ಣಿಗೆ ಬೀಳುತ್ತವೋ ಅಲ್ಲಿಗೆ ಅವುಗಳ ಪತನ ಶುರು. ಹಾಗಾಗಿ ಅವು ಯಾರಿಗೂ ಕಾಣದಂತೆ ತಮ್ಮ ನೆಲೆ ತಮ್ಮ ಪ್ರದೇಶ ತಮ್ಮ ಜೀವಿಗಳನ್ನು ಕಾಪಾಡಿಕೊಳ್ಳಲು ಕಾಣಿಸ್ಕೊಂಡಿಲ್ಲ. ಅವರಿಗೆ ನಮ್ಮ ಇರುವು ಗೊತ್ತಿರಬಹುದು, ಆದರೆ ನಮಗೆಂದೂ ಅವರು ಕಾಣುವುದಿಲ್ಲ. ಯಾರಿಗೆ ಗೊತ್ತು ಅವರಿಗೆ ನಾವು ಕಂಡ ದಿನ ಅದು ನಮ್ಮ ಕೊನೆಯೂ ಹೌದು, ಬುದ್ದಿವಂತಿಕೆ ನಮ್ಮ ನಾಶದ ಗುರುತು’

‘ನಾವು ಅವರಿಗೆ ಹೇಗೆ ಕಾಣಿಸಿಕೊಳ್ಳದಕ್ಕೆ ಸಾಧ್ಯ?’

‘ನೋಡಪ್ಪ ನೀನು ಈಗ ಕಪ್ಪು ಕಾಡಿನಲ್ಲಿ ಇದ್ದೀಯ, ಇಲ್ಲಿಂದ ಒಂದು ಬೆಳಕನ್ನು ಮೇಲೆ ಬಿಟ್ಟರೆ ಇನ್ನೆಲ್ಲೋ ಇರುವವರಿಗೆ ಅದು ಕಾಣಿಸುತ್ತದೆ, ಹಾಗೆ ಮನುಷ್ಯ ಬುದ್ದಿವಂತ ಆದ ಮೇಲೆ ಈ ತರ ಜಗತ್ತಿಗೆ ತಮ್ಮ ಇರುವನ್ನು ತೋರಿಸಿಕೊಳ್ಳುತಿದ್ದಾನೆ. ಅಮೆರಿಕ ಬೇರೆ ಗ್ರಹ ಮತ್ತು ಗ್ರಹ ಜೀವಿ ಪತ್ತೆ ಮಾಡಲು ಪ್ರತಿ ಕ್ಷಣ ಎಲೆಕ್ಟ್ರಿಕಲ್ ಸಿಗ್ನಲ್ ಅನ್ನು ಈ ಬ್ರಹ್ಮಾಂಡದಲ್ಲಿ ಕಳಿಸ್ತಾನೆ ಇದ್ದಾರೆ. ನಮ್ಮ ಭೂಮಿಯನ್ನ ಎಷ್ಟೋ ಮನುಷ್ಯ ನಿರ್ಮಿಸಿದ ಉಪಗ್ರಹಗಳು ಸುತ್ತುವರಿದ್ದಿದ್ದು, ಸದಾ ಕಾಲ ಸಿಗ್ನಲ್ ಅನ್ನು ಭೂಮಿಗೆ ಕಳಿಸುತ್ತಲೇ ಇರ್ತಾವೆ. ಯಾರಿಗೊತ್ತು ಒಂದ್ ದಿನ ಅವು ನಮಗಿಂತ ಬಲಿಷ್ಠರಾದ ತಂತ್ರಜ್ಞದಲ್ಲಿ ನಿಪುಣರಾದ ಅನ್ಯಗ್ರಹ ಜೀವಿಗಳಿಗೆ ತಿಳಿದು ಬಂದು ನಮಗೆ ಮಂಗಳಾರತಿ ಎತ್ತಿದರು ಆಶ್ಚರ್ಯವಿಲ್ಲ. ನನಗೆ ಒಂದೊಂದ್ ಸಲ ಅನಿಸುತ್ತೆ ನಾವೆಲ್ಲಾ ಯಾವುದೋ ಏಲಿಯನ್ಸ್‌ಗಳು ಪ್ರೋಗ್ರಾಮ್ ಮಾಡಿದ ಪ್ರಯೋಗದ ಜೀವಿಗಳು ಏನೋ ಎಂದು, ನಮ್ಮ ಪ್ರತಿ ಚಲನೆಯನ್ನು ಅದೆಲ್ಲೋ ಕೂತು ನಮ್ಮನ್ನು ನಿಯಂತ್ರಿಸುತ್ತಿರಬಹುದು’

‘ಕೊನೆ ಸಾಲು ನಂಬಬಹುದು ನೋಡಿ, ಇನ್ನೇನೋ ಜೀವನದಲ್ಲಿ ಎಲ್ಲ ಸರಿ ಆಯ್ತು ಅಂದ್ಕೊಂಡ್ರೆ ಮತ್ತೇನೋ ಬರುತ್ತೆ. ಬಹುಶಃ ನೀವು ಹೇಳಿದ ಹಾಗೆ ನಾವು ಯಾವುದರದೋ ಕೈಗೊಂಬೆಗಳೇನೋ..ಗೊಂಬೆ ಆಡ್ಸೋನು ಮೇಲೆ ಕುಂತವನೋ, ನಂಗೆ ನಿಂಗೆ ಯಾಕೆ ಟೆನ್ಸನ್’ ಎಂದು ಹಾಡುತ್ತ ನಗತೊಡಗಿದ, ಅವನಿಗೆ ಮ್ಯಾಜಿಕ್ ಮಶ್ರೂಮ್‌ನ ನಶೆ ಹತ್ತಿದಂತಿತ್ತು, ಅದಕ್ಕಾಗಿಯೇ ಕಾದು ಕೂತವರಂತೆ ರಜನೀಶರು ತಮ್ಮ ಮೊಬೈಲ್ ತೆಗೆದು ಏನೋ ಮೆಸೇಜ್ ಮಾಡಿದರು, ಅದನ್ನು ರಾಜೀವ ಗಮನಿಸಲೇ ಇಲ್ಲ.

‘ಸರಿ ನಡಿ ಕಾಡಿಗೋಗೋಣ ನಿಂಗೆ ಏಲಿಯನ್ಸ್ ತೋರುಸ್ತೀನಿ ಇಲ್ಲ, ಅಟ್ ಲಿಸ್ಟ್ ಮಿಕ್ಕಿದ ವೆಪನ್ ಭಾಗ ಆದ್ರೂ ಹುಡುಕೋಣ’ ಎಂದು ಎದ್ದೇಳಿಸಿದರು

‘ಈ ಟೈಮಲ್ಲ?’

‘ಇವತ್ತು ಕೂಡ ಹುಣ್ಣಿಮೇನೇ? ಕೊನೆ ಸಲ ಕಾಣಿಸಿಕೊಂಡಿದ್ ಮೇಲೆ ಈ ಸಲನೂ ಕಾಣಿಸ್ಕೊಬೌದು, ಇಲ್ಲ ಅಟ್ ಲಿಸ್ಟ್ ಬಿಟ್ ಹೋಗಿರೋ ಈ ವೆಪನ್ ಆದರೂ ಹುಡುಕೊಂಡು ಬರ್ತವೆ? ಇಷ್ಟೊತ್ತು ಏಲಿಯನ್ಸ್ ನೊಡುದ್ರೆನೇ ಒಪ್ಪೋದು ಅಂತ ಇದ್ದೀಯಲ್ಲ ಬಾ ಬಾ’ ಎಂದು ಅವನ ಕೈ ಹಿಡಿದರು, ರಾಜೀವ ಮಾತನಾಡದೆ ಅಮ್ಮನ ಕೈ ಹಿಡಿದು ನಡೆವ ಮಗುವಂತೆ ರಜನೀಶರ ಹಿಂದೆ ಹಿಂದೆ ಹೋದ.

ಇಬ್ಬರು ನಡೆದು ಮಾದಪ್ಪ ಕಾಡಿನ ಗುಡ್ಡ ತಲುಪಿದರು. ರಜನೀಶರು ಅಲ್ಲೇ ಜಾಗ ತೋರಿಸಿ ‘ಇಲ್ಲೇ ಸಿಕ್ಕಿದ್ದು’ ಎಂದು ಹೇಳಿ ಏನೋ ಹುಡುಕುತ್ತಿದ್ದರು. ರಾಜೀವನಿಗೆ ಮರಗಳೆಲ್ಲ ಆಕಾಶಕ್ಕೆ ಮುಟ್ಟಿದ ಮರಗಳಂತೆ, ಚಿನ್ನದ ಬಣ್ಣದಂತೆ ಹೊಳೆಯುತ್ತಿರುವಂತೆ ಕಾಣಿಸಿತು. ಅಲ್ಲೊಂದು ಮಾಯಾಲೋಕ ಸೃಷ್ಟಿ ಆದಂತೆ, ಕೆಳಗೆ ಮಿಂಚುಹುಳಗಳು ಇದ್ದಂತೆ, ಅವು ನಕ್ಕಂತೆ ಆಯ್ತು. ಅಷ್ಟರಲ್ಲಿ ಎದುರುಗಡೆ, ಸಣ್ಣ ಬೆಳಕೊಂದು ಮೂಡಿ ಅದೇ ದೊಡ್ಡದಾಯ್ತು, ಸೂರ್ಯನಂತೆ, ಅಲ್ಲಿಂದ ಯಾರೋ ಇಳಿದಂತೆ ಆಯ್ತು, ಬೆಳಕು ಬಂದ ದಿಕ್ಕಿನತ್ತ ರಜನೀಶರು ನೋಡುತ್ತಾರೆ, ರಾಜೀವ ರಜನೀಶರನ್ನ ಕರೆದು ‘ಯು.ಎಫ್.ಓ, ಏಲಿಯನ್, ಯು.ಎಫ್.ಓ,ಏಲಿಯನ್’ ಎಂದು ಇಡೀ ಕಾಡಿಗೆ ಕೇಳುವಂತೆ ಕಿರುಚತೊಡಗಿದ. ಆ ಸದ್ದು ಇಡೀ ಕಾಡಿನಲ್ಲಿ ಪ್ರತಿಧ್ವನಿಯಾಗಿ ಅಲೆ ಅಲೆಯಾಗಿ ಹರಡಿತು

**

ಮೂಡಿಗೆರೆ ಪೊಲೀಸರು ಕಳ್ಳ ಸಿಗಲಿಲ್ಲ ಎಂದು, ಆದರೆ ಆತನ ಬಟ್ಟೆಗಳು ಮಾತ್ರ ಸಿಕ್ಕಿವೆ ಎಂದು ಕಾಡು ಪೂರ್ತಿ ತಂಡ ರಚಿಸಿ ಹುಡುಕಾಟ ಶುರು ಮಾಡಿದ್ದೇವೆ, ಆದರೆ ಅವನು ಕದ್ದ ಮಾಲುಗಳು ಸಿಕ್ಕವೆಂದು ಪತ್ರಿಕಾಗೋಷ್ಠಿ ಕರೆದು ಹೇಳಿದರು. ಕುಕ್ಕೆಯ ‘ಸುಬ್ರಹ್ಮಣ್ಯ ಸುದ್ದಿ’ ಎಂಬ ಸ್ಥಳೀಯ ಪತ್ರಿಕೆಯೊಂದು ಮಾದಪ್ಪ ಕಾಡಿನಲ್ಲಿ ಯು.ಎಫ್.ಓ ಒಂದು ಪತ್ತೆಯಾಗಿರಬಹುದೆಂದು, ಓರ್ವ ಯುವಕ ಕಾಣೆಯಾಗಿದ್ದಾನೆ ಎಂದು ಬರೆದರು. ಅದನ್ನು ನೋಡಿದ ಸಾಕ್ಷಿಯಾಗಿ ರಜನೀಶರ ಹೇಳಿಕೆ ತೆಗೆದುಕೊಂಡಿದ್ದರು. ಇದಾದ ಒಂದು ತಿಂಗಳಿಗೆ ರಜನೀಶರು ಆ ಊರನ್ನು ಬಿಟ್ಟರು. ಅವರು ಇದ್ದ ಸಣ್ಣ ಮನೆಯಲ್ಲಿ ಆ ಬಿಳಿ ರಾಡು ಹಾಗೆ ಇತ್ತು. ಅದು ಹೊಳೆಯುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT