ಭಾನುವಾರ, ಸೆಪ್ಟೆಂಬರ್ 20, 2020
21 °C

ಮಕ್ಕಳ ಕಥೆ | ಸ್ವಾರ್ಥಕ್ಕೆ ಬಲಿಯಾದ ಮೂರು ಇಲಿಗಳು

ಸಿದ್ದಾರಾಮೇಶ ನಾಯಕ ರಾಮತ್ನಾಳ Updated:

ಅಕ್ಷರ ಗಾತ್ರ : | |

ಒಂದು ಕಾಡು. ಆ ಕಾಡಿನ ತುಂಬ ದಟ್ಟವಾದ ವೃಕ್ಷಗಳು ಆಕಾಶಕ್ಕೂ ಭೂಮಿಗೂ ಸೇತುವೆಗಳೋ ಎಂಬಂತೆ ಬೆಳೆದು ನಿಂತಿದ್ದವು. ಅಲ್ಲಲ್ಲಿ ದೊಡ್ಡದಾಗಿ ಚಾಚಿದ ಕಲ್ಲುಬಂಡೆಗಳು, ಆ ಬಂಡೆಯ ನೆರಳಿನಲ್ಲಿ ನಿರುತ್ಸಾಹದಿಂದ ಎಂಬಂತೆ ಗರಿಕೆಹುಲ್ಲು ಬೆಳೆದು ಬಾಡುತ್ತಿತ್ತು. ಮಳೆ ಕಾಲಕ್ರಮೇಣ ಕ್ಷೀಣಿಸುತ್ತಾ ಹೋಗುತ್ತಿತ್ತು. ಹೀಗಿರುವಾಗ ಆ ಕಾಡಿನಲ್ಲೊಂದು ಇಲಿಗಳ ಗುಂಪು ದೊಡ್ಡದಾಗಿ ಚಾಚಿದ ಬಂಡೆಯ ಕೆಳಭಾಗದಲ್ಲಿ ಬಿಲವನ್ನು ತೋಡಿ ವಾಸಿಸುತ್ತಿದ್ದವು. ಆ ಬಿಲದಲ್ಲಿ ಯಾವಾಗಲೂ ಹತ್ತಿಪ್ಪತ್ತಕ್ಕಿಂತ ಹೆಚ್ಚಿನ ಇಲಿಗಳು ಇರುತ್ತಿದ್ದವು. ಅಲ್ಲದೆ ವರ್ಷಕ್ಕೆ ಬೇಕಾಗುವಷ್ಟು ಆಹಾರವನ್ನು ಕೂಡಿ ಹಾಕುವುದು ಇಲಿಗಳಿಗೆ ವಾಡಿಕೆಯಾಗಿತ್ತು.

ಆ ಬಿಲದಲ್ಲಿ ಹೆಚ್ಚಿನ ಸಂಖ್ಯೆಯ ಇಲಿಗಳು ಇರುವುದನ್ನು ತಿಳಿದ ನಾಗರಹಾವೊಂದು ಅಲ್ಲಿಗೆ ಬಂದು ನಾಲ್ಕಾರು ಇಲಿಗಳನ್ನು ಸಂಹರಿಸಿತು. ಅಲ್ಲದೆ ದಿನದಿಂದ ದಿನಕ್ಕೆ ಹಾವಿನ ಉಪಟಳ ಜಾಸ್ತಿಯಾಯಿತು. ದಿನ ಕಳೆದಂತೆ ಅದು ಅನೇಕ ಇಲಿಗಳನ್ನು ತಿಂದು ಮುಗಿಸಿತು. ಕೊನೆಗೆ ಆ ಬಿಲದಲ್ಲಿ ಹಿಂದೆ ಕೂಡಿಹಾಕಿದ್ದ ಆಹಾರ ಮತ್ತು ಮೂರು ಇಲಿಗಳು ಮಾತ್ರ ಬದುಕುಳಿದವು.

‘ಇನ್ನೇನು, ನಾಳಿನ ದಿನ ನಮ್ಮ ಸರದಿ. ಆ ನಾಗರಹಾವು ನಮ್ಮನ್ನು ತಿಂದು ಮುಗಿಸುತ್ತದೆ’ ಎಂಬ ಭಯದಲ್ಲಿ ಮೂರೂ ಇಲಿಗಳು ಕುಳಿತಿದ್ದವು. ಆಗ ಬಿಲದ ಮುಂದಿನ ದಾರಿಯಿಂದ ಮುಂಗುಸಿಯೊಂದು ಹೋಗುತ್ತಿತ್ತು. ಆ ಮುಂಗುಸಿಯನ್ನು ಕಂಡ ಇಲಿಗಳಿಗೆ ಉಪಾಯವೊಂದು ಹೊಳೆಯಿತು. ‘ನಾವು ಹೇಗಾದರೂ ಮಾಡಿ ಈ ಮುಂಗುಸಿಯ ಸ್ನೇಹ ಮಾಡಬೇಕು. ಅದರ ಸ್ನೇಹದಿಂದ ಮಾತ್ರ ನಾವು ಬದುಕಲು ಸಾಧ್ಯ’ ಎಂದು ಭಾವಿಸಿದವು. ಅದರಂತೆ ಆ ಮುಂಗುಸಿಯ ಸ್ನೇಹ ಕೋರಿದವು. ಮುಂಗುಸಿಗೆ ಬೇರೆ ಯಾರೂ ಇಲ್ಲದ್ದರಿಂದ ಇಲಿಗಳ ಒಂದೇ ಮಾತಿಗೆ ಅವರ ಸ್ನೇಹ ಒಪ್ಪಿಕೊಂಡಿತು.

ಮೂರು ಇಲಿಗಳು ಅತೀವ ಸಂತಸದಿಂದ, ತಾವು ವಾಸಿಸುವ ದೊಡ್ಡ ಬಿಲದೊಳಗೆ ಮುಂಗುಸಿಯನ್ನು ಕರೆತಂದು ಉಪಚರಿಸ ತೊಡಗಿದವು. ಹಿಂದೆ ತಾವೆಲ್ಲ ಸೇರಿ ಕೂಡಿಹಾಕಿದ್ದ ದವಸಧಾನ್ಯವನ್ನು ಮುಂಗುಸಿಗೆ ತಿನ್ನಲು ಕೊಡುತ್ತಿದ್ದವು. ಹೀಗೆ ಇಲಿಗಳು ಮತ್ತು ಮುಂಗುಸಿಯ ಸ್ನೇಹ ಬಲು ಆತ್ಮೀಯತೆಯಿಂದ ಕೂಡಿತ್ತು.

ವಾರಗಳ ಕಾಲ ಇಲಿಗಳ ಬೇಟೆಗೆ ಬಾರದಿದ್ದ ನಾಗರಹಾವು ಮತ್ತೆ ಇಲಿಗಳ ದೊಡ್ಡಬಿಲದ ಮಾರ್ಗವಾಗಿ ಬರತೊಡಗಿತು. ಹಾವು ತಮ್ಮನ್ನು ತಿನ್ನಲು ಬರುತ್ತಿರುವುದನ್ನು ಕಂಡ ಇಲಿಗಳು, ಮನೆಯೊಳಗಿದ್ದ ಮುಂಗುಸಿಯನ್ನು ಕರೆದು ಹಾವು ತಮ್ಮ ಕಡೆಗೆ ಬರುವ ವಿಷಯ ತಿಳಿಸಿದವು. ಮುಂಗುಸಿಯು ಹಾವನ್ನು ಕಂಡು ರಭಸದಿಂದ ಹೊರಗೆ ಬರಲು, ಮುಂಗಸಿಯ ರೌದ್ರಾವತಾರ ಕಂಡ ಹಾವು ದಿಕ್ಕಾಪಾಲಾಗಿ ಓಡಿ ಪ್ರಾಣ ಉಳಿಸಿಕೊಂಡಿತು. ಮುಂಗುಸಿಯು ಇಲಿಗಳ ಬಳಿಗೆ ಬಂದು-

‘ನಾನಿರುವತನಕ ನಿಮ್ಮ ಪ್ರಾಣಕ್ಕೆ ಭಯವಿಲ್ಲ’ ಎಂದು ಅಭಯ ಕೊಟ್ಟು ಆ ಇಲಿಗಳ ಜೀವದ ಕಾವಲುಗಾರನಾಗಿ ನಿಂತಿತು. ಎಲ್ಲಾ ಇಲಿಗಳು ಇದ್ದಾಗ ಕೂಡಿಹಾಕಿದ್ದ ದವಸಧಾನ್ಯ ಖಾಲಿಯಾಗುತ್ತ ಬಂತು. ಆಗ ಮೂರು ಇಲಿಗಳು ಮಾತಾಡಿಕೊಂಡು ‘ನೋಡು ಮುಂಗುಸಿರಾಯ, ನಾವು ಮತ್ತೆ ಹೊಸದಾಗಿ ಆಹಾರ ಶೇಖರಿಸುತ್ತೇವೆ. ಶೇಖರಿಸಿದ ಆಹಾರದಲ್ಲಿ ಎರಡು ಭಾಗ ಮಾಡೋಣ. ಅದರಲ್ಲಿ ಒಂದು ಭಾಗ ನಿನಗೆ, ಉಳಿದ ಒಂದು ಭಾಗದಲ್ಲಿ ನಾವು ಮೂವರಿಗೆ’ ಎಂದು ಕರಾರು ಮಾಡಿಕೊಂಡವು. ಆ ಕರಾರಿಗೆ ಮುಂಗುಸಿ ಮುಂದಾಲೋಚಿಸದೆ ಒಪ್ಪಿಗೆ ನೀಡಿತು.

ಮತ್ತೆ ಮಾತು ಮುಂದುವರಿಸಿದ ಇಲಿಗಳು ‘ನೋಡು ಮುಂಗುಸಿರಾಯ, ನಿನಗೆ ಸೇರಬೇಕಾದ ಒಂದು ಭಾಗದ ಆಹಾರ ಪೂರೈಸುವ ಜವಾಬ್ದಾರಿ ನಮ್ಮದು. ನೀನು ಅದರ ಬಗ್ಗೆ ಚಿಂತಿಸಬೇಡ. ಆದರೆ ನಮ್ಮ ಕಡುವೈರಿಯಾದ ಆ ಹಾವಿನಿಂದ ನಮ್ಮ ಪ್ರಾಣ ನೀನೇ ಕಾಪಾಡಬೇಕು’ ಎಂದು ಹೇಳಿದವು. ಮುಂಗುಸಿಯು ಅದಕ್ಕೆ ಒಪ್ಪಿಗೆ ನೀಡಿತು.

ಅದೊಂದು ದಿನ ನಾಗರಹಾವು ಇಲಿಗಳು ವಾಸಿಸುವ ಮನೆಗೆ ಮತ್ತೆ ಬಂದಿತು. ಮನೆಯೊಳಗಿದ್ದ ಮುಂಗುಸಿಯನ್ನು ಕಂಡ ಹಾವು ಹೆದರಿ ಓಡಲಾರಂಭಿಸಿತು. ಮುಂಗಸಿಯು ಅದರ ಹಿಂದೆಯೇ ಓಡಿತು. ಹೇಗೋ ಅದೃಷ್ಟವೆಂಬಂತೆ ಪೊದೆಯೊಳಗೆ ಸೇರಿ ಹಾವು ಪ್ರಾಣಾಪಾಯದಿಂದ ತಪ್ಪಿಸಿಕೊಂಡಿತು. ಹಾವಿನ ಓಟ ಕಂಡು ಇಲಿಗಳು ಹರ್ಷದಿಂದ ಕುಣಿದು ಕುಪ್ಪಳಿಸಿ, ಮನೆಗೆ ಮರಳಿದ ಮುಂಗುಸಿಯನ್ನು ಮುದ್ದಿಸಿದವು. ಮುಂಗುಸಿಯು ಇಲಿಗಳಿಗೆ ಕೊಟ್ಟ ವಚನದಂತೆ ಮನೆಯಲ್ಲಿ ಕುಳಿತಿರುತ್ತಿತ್ತು. ಇಲಿಗಳು ಆಹಾರವನ್ನು ಹುಡುಕಿ ತಂದು ಕೊಡುತ್ತಿದ್ದವು. ಆದರೆ, ಆ ಇಲಿಗಳು ಆಹಾರ ಹುಡುಕುವ ಸಮಯದಲ್ಲಿ ತಾವು ಹೊಟ್ಟೆತುಂಬಾ ತಿಂದು ಮನೆಯಲ್ಲಿಯ ಮುಂಗಸಿಗೆ ಸ್ವಲ್ಪಭಾಗ ಮಾತ್ರ ತಂದುಕೊಡುತ್ತಿದ್ದವು. ಹಾಗೆ ತಂದುಕೊಟ್ಟದ್ದರಲ್ಲೂ ಎರಡು ಭಾಗ ಮಾಡಿ, ಒಂದನ್ನು ತಮಗೆ ಇರಿಸಿಕೊಳ್ಳುತ್ತಿದ್ದವು!

ಮುಂಗುಸಿಯ ಮನಸ್ಸಿನಲ್ಲಿ ಇಲಿಗಳ ಬಗ್ಗೆ ಸಂಶಯ ಬಂದು, ‘ಈ ಇಲಿಗಳು ಮೊದಲಿನಂತೆ ನನಗೆ ಆಹಾರ ಕೊಡುತ್ತಿಲ್ಲ’ ಎಂಬು ತಿಳಿಯಿತು. ಆದರೂ, ಕೊಟ್ಟ ವಚನ ತಪ್ಪಬಾರದೆಂದು ನಿಶ್ಚಯಿಸಿ ಇಲಿಗಳು ಕೊಟ್ಟ ಆಹಾರದಲ್ಲಿಯೇ ಜೀವನ ಸಾಗಿಸುತ್ತಿತ್ತು. ಇದರಿಂದಾಗಿ, ಮುಂಗುಸಿಗೆ‌ ದಿನದಿಂದ ದಿನಕ್ಕೆ ಹಸಿವು ಹೆಚ್ಚಾಗತೊಡಗಿತು. ಹಾಗಾಗಿ ಅದು ಇಲಿಗಳಲ್ಲಿ, ‘ನನಗೆ ಊಟ ಕಡಿಮೆಯಾಗುತ್ತಿದೆ. ಸ್ವಲ್ಪ ಸಮಯವಾದರೂ ನನ್ನನ್ನು ಹೊರಗಡೆ ಬಿಡಿ. ನಾನೂ ಸ್ವಲ್ಪ ಆಹಾರ ಹುಡುಕಿಕೊಂಡು ತಿನ್ನುತ್ತೇನೆ. ಮತ್ತೆ ಬಂದು ನಿಮ್ಮನ್ನು ನಾನು ಕಾಯುತ್ತೇನೆ’ ಎಂದು ಬೇಡಿಕೊಂಡಿತು. ಆಗ ಇಲಿಗಳು ‘ಮುಂಗುಸಿ, ನೀನು ಕೊಟ್ಟ ಮಾತಿನಂತೆ ನಡೆದುಕೊ’ ಎಂದು ತಾಕೀತು ಮಾಡಿದವು.

ಅದೇಕೋ ಬಹಳ ದಿನಗಳಾದರೂ ನಾಗರಾವು ಇತ್ತ ಕಡೆ ತಲೆ ಹಾಕಲಿಲ್ಲ. ಹಾವಿನ ಹೆದರಿಕೆ ಇಲಿಗಳ ಮನಸ್ಸಿನಲ್ಲಿ ಹಿಂದಕ್ಕೆ ಸರಿಯಿತು. ಮುಂಗುಸಿ ಮಾತ್ರ ದಿನದಿಂದ ದಿನಕ್ಕೆ ಹಸಿವಿನಿಂದ ಕೃಶವಾಯಿತು. ಮುಂಗುಸಿ ಎಷ್ಟು ಬೇಡಿಕೊಂಡರೂ ಇಲಿಗಳು ಅದರ ಮಾತಿಗೆ ಕಿಮ್ಮತ್ತು ಕೊಡಲಿಲ್ಲ. ಕೊಟ್ಟ ಮಾತು ತಪ್ಪಬಾರದು ಎಂದು ಮುಂಗುಸಿಯು ಹೊಟ್ಟೆಗೆ ಊಟವಿಲ್ಲದೆ, ಮೇಲೇಳಲು ಶಕ್ತಿಯಿಲ್ಲದೆ ಕುಳಿತುಬಿಟ್ಟಿತ್ತು.

ಎಲ್ಲೋ ಮರೆಯಾಗಿದ್ದ ನಾಗರಹಾವು ಇಲಿಗಳ ದೊಡ್ಡ ಬಿಲಕ್ಕೆ ಒಂದು ದಿನ ಧಾವಿಸಿತು. ಹಾವು ಬರುವುದನ್ನು ಕಂಡ ಇಲಿಗಳು ಮೇಲೇಳಲೂ ಶಕ್ತಿ ಇಲ್ಲದಿದ್ದ ಮುಂಗುಸಿಯ ಬಳಿ ಬಂದು ರಕ್ಷಣೆಗೆ ಅಂಗಲಾಚಿದವು. ಸಮಯ ಅದಾಗಲೇ ಮೀರಿ ಹೋಗಿತ್ತು. ಹಲವು ದಿನಗಳಿಂದ ಹಸಿವಿನಿಂದ ಬಳಲುತ್ತಿದ್ದ ಮುಂಗುಸಿಗೆ ಹಾವಿನ ಜೊತೆ ಯುದ್ಧ ಮಾಡುವಷ್ಟು ಶಕ್ತಿ ಇರಲಿಲ್ಲ. ಅದು ನೆಲದ ಮೇಲೆ ಕಾಲು ಚಾಚಿ ಕುಳಿತುಬಿಟ್ಟಿತು. ಮನೆಯೊಳಗೆ ಧಾವಿಸಿದ ಹಾವು ಒಂದರ ಹಿಂದೆ ಒಂದರಂತೆ ಮೂರೂ ಇಲಿಗಳನ್ನು ತಿಂದುಬಿಟ್ಟಿತು. ಹೀಗೆ ಸ್ವಾರ್ಥ ಸಾಧನೆಗೆ ಯತ್ನಿಸಿದ ಮೂರು ಇಲಿಗಳ ಜೀವನ ಮುಗಿದುಹೋಯಿತು.

ನೀತಿ:- ಹಿಂದೆ ನಮಗೆ ಸಹಾಯಕ್ಕೆ ಬಂದವರನ್ನು ಮರೆತು ಸ್ವಾರ್ಥಿಗಳಾದರೆ, ಕೇಡು ತಪ್ಪದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.