ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೃಪ್ತಿ

Last Updated 27 ಅಕ್ಟೋಬರ್ 2019, 10:16 IST
ಅಕ್ಷರ ಗಾತ್ರ

ದೂರದ ಒಂದು ತಾಲ್ಲೂಕಿನಲ್ಲಿ ಯಕ್ಕನಹಳ್ಳಿ ಎಂಬ ಊರು ಇತ್ತು. ಆ ಊರಲ್ಲಿ ರಾಮಣ್ಣ ಎಂಬ ಕುರಿ ಕಾಯುವ ವ್ಯಕ್ತಿಯಿದ್ದ. ರಾಮಣ್ಣ ಬಹಳ ಸಾಧು ಸ್ವಭಾವದವ. ಆರೇಳು ಕುರಿಗಳನ್ನು ಮೇಯಿಸಿಕೊಂಡು, ಪ್ರತೀ ವರ್ಷ ಒಂದಿಷ್ಟು ಕುರಿಮರಿಗಳನ್ನು ಬೆಳೆಸುತ್ತ, ದೊಡ್ಡ ಕುರಿಗಳನ್ನ ಮಾರುತ್ತ, ಜೀವನವನ್ನು ಖುಷಿಯಿಂದ ನಡೆಸುತ್ತಿದ್ದ. ಆ ಊರಿನಲ್ಲಿ ನೂರಾಹತ್ತು ವರ್ಷ ವಯಸ್ಸಿನ ಹಿರಿಯ ಜೀವವೊಂದಿತ್ತು. ಊರ ಮುಂದೆ ಇರುವ ಹನುಮಪ್ಪನ ಗುಡಿಯಲ್ಲಿ ಪೂಜೆ–ಪುನಸ್ಕಾರ ಮಾಡುತ್ತ ಸದಾ ಲಾವಣಿ, ಪದ, ಒಗಟು ಹೇಳುತ್ತ, ಹತ್ತಿರ ಬರುವ ಜನರಿಗೆ ಹಿಂದೆ ಆದ ಘಟನೆಗಳ ಸಾರವನ್ನು ವಿವರಿಸುತ್ತ ಜನಪ್ರಿಯ ಆಗಿದ್ದ ವ್ಯಕ್ತಿ ಆ ಹಿರಿಯ ಜೀವಿ.

ರಾಮಣ್ಣ ಮಾತ್ರ ಪ್ರತೀ ದಿನ ಕುರಿ ಮೇಯಿಸಲು ಹೋಗುವ ಮುನ್ನ ಗುಡಿಗೆ ಹೋಗಿ ಹನುಮಪ್ಪನನ್ನು ಕಂಡು ಕೈಮುಗಿದು ಮುಂದೆ ಹೋಗುವ ಅಭ್ಯಾಸ ಬೆಳೆಸಿಕೊಂಡಿದ್ದ. ಹಾಗೇ, ಕೆಲಸ ಮುಗಿಸಿ ಬರುವಾಗ ಕೂಡ ಹನುಮಪ್ಪನಿಗೆ ಕೈಮುಗಿದು ಬರುತ್ತಿದ್ದ. ಇದು ಅವನ ದಿನಚರಿಯಾಗಿತ್ತು.

ಸುತ್ತಮುತ್ತಲಿನ ಜನರೆಲ್ಲ ತಮ್ಮ ಮನದ ಮಾತುಗಳನ್ನು ಈ ಪೂಜಾರಜ್ಜನ ಬಳಿ ಹೇಳಿಕೊಂಡು ಆತ ನೀಡುವ ಸಲಹೆ, ಸಹಕಾರ, ಮಾರ್ಗದರ್ಶನ ಪಡೆಯುತ್ತ ಇದ್ದರು. ರಾಮಣ್ಣನ ಹೆಂಡತಿ ಸುಶೀಲಮ್ಮ. ಆಕೆ ತನ್ನ ಗಂಡನಲ್ಲಿ, ‘ರೀ ಊರವರೆಲ್ಲಾ ಆ ಅಜ್ಜನ ಬಳಿ ಸಮಸ್ಯೆ ಹೇಳಿ, ಬೇಕಾದ್ದು ಪಡ್ಕೋತಿದ್ದಾರೆ. ನೀವು ಮಾತ್ರ ದೀರ್ಘದಂಡ ಹಾಕಿ ಹೋಗಾದು ಬರಾದು ಮಾಡ್ತೀರಾ. ನಮ್ಮ ಕುರಿಗಳಲ್ಲಿ ಅದೇನು ಸುಖ ಇದೆ? ನಾವು ಉದ್ಧಾರ ಆಗೋದು ಯಾವಾಗ? ಕೇಳ್ಕಂಡ್ ಬರ್‍ರಿ’ ಎಂದು ಪದೇ ಪದೇ ಪೀಡಿಸುತ್ತಿದ್ದಳು.

‘ದೇವರು ನಮಗೇನು ಕಡಿಮೆ ಮಾಡಿದಾನೆ, ಬಿಡೆ. ಇದ್ದ ಹಾಗೆ ಇರಬೇಕು. ಕೊಟ್ಟಿದ್ದು ತಿನ್ನಬೇಕು. ಪರಮಾತ್ಮ ಕರೆದಾಗ ನಡೀಬೇಕು’ ಎಂದು ರಾಮಣ್ಣ ಹೇಳುತ್ತಿದ್ದ. ಆದರೂ ಸುಶೀಲಮ್ಮ ಅವನನ್ನು ಬಿಡದೇ ಕಾಡಿಸಿ, ಅಜ್ಜನ ಬಳಿ ಕಳಿಸಿದಳು. ಗುಡಿಯ ಹೊರಗಿನಿಂದಲೇ ಸದಾ ನಮಸ್ಕರಿಸಿ ಹೋಗುತ್ತಿದ್ದ ರಾಮಣ್ಣ ಇಂದು ಒಳ ಜಗುಲಿಗೆ ಬಂದು, ತಲೆ ತಗ್ಗಿಸಿ ಎದುರಿಗೆ ಕುಳಿತಿದ್ದಾನೆಂದರೆ ಏನೋ ಗಹನವಾದ ಕತೆಯೇ ಇರಬೇಕೆಂದುಕೊಂಡಿತು ಅಜ್ಜ! ‘ಏನು ರಾಮಣ್ಣ, ಬಹಳ ಲೆಕ್ಕ ಇಟ್ಟುಕೊಂಡು ಬಂದು ಕೂತಿದ್ದೀ. ನಮ್ಮ ಹನುಮಪ್ಪನಿಂದ ಏನಾಗಬೇಕು’ ಅಂತ ಪೂಜಾರಜ್ಜ ಅಂದಕೂಡಲೇ ರಾಮಣ್ಣ ಮನೆಯಲ್ಲಿ ನಡೆದ ವಿಚಾರ ತಿಳಿಸಿದ.

ಅಜ್ಜ ದೀರ್ಘವಾಗಿ ಆಲೋಚಿಸಿ, ‘ಬೇಡ ರಾಮಣ್ಣ, ನೀನು ಈಗ ಚೆಂದ ಇದ್ದೀಯ. ಮತ್ತೆ ಬೇರೆ ಬದುಕೇಕೆ’ ಎಂದು ಹೇಳಿದ. ರಾಮಣ್ಣ ತಲೆ ಎತ್ತಲಿಲ್ಲ. ‘ಸರಿ ನನ್ನಿಂದ ಏನು ಬಯಸುತ್ತೀಯ ರಾಮಣ್ಣ’ ಎಂದು ಪೂಜಾರಜ್ಜ ಕೇಳಿದ ಮಾತಿಗೆ ತಲೆಯೆತ್ತಿದ, ‘ನನ್ನ ಕುರಿಗಳು ಭಾಳ ಭಾಳ ಆಗಬೇಕು’ ಅಂದ! ಪೂಜಾರಜ್ಜ ನಕ್ಕು, ‘ಬುಡಕ್ಕೆ ನೀರು ಬರೋತನಕ ಒದ್ದೆಯಾಗಿರೋದು ಗೊತ್ತಾಗಲ್ಲ, ನಡಿ ಹನುಮಪ್ಪ ಇಟ್ಟಂಗಾಗುತ್ತೆ’ ಅಂತ ಹೇಳಿ ಕಳುಹಿಸಿದ. ಮನೆಗೆ ಬಂದ ರಾಮಣ್ಣ ನಡೆದಿದ್ದನ್ನ ಹೆಂಡತಿಗೆ ಹೇಳಿ ಮಲಗಿಬಿಟ್ಟ!

ಅದೇನು ಮಾಯೆಯೋ ಏನೋ. ರಾಮಣ್ಣನ ಕುರಿಗಳು ದಿನ ಕಳೆಯವುದರಲ್ಲಿ ಬೆಳೆಯಲಾರಂಭಿಸಿದವು. ಎಂಟರಿಂದ ಹತ್ತು, ಹತ್ತರಿಂದ ಇಪ್ಪತ್ತು, ಇಪ್ಪತ್ತರಿಂದ ನೂರರತನಕ ವೃದ್ಧಿಯಾಗಿಬಿಟ್ಟವು! ರಾಮಣ್ಣ ಖುಷಿಯಾದ. ಅವನಿಗಿಂತ ಸುಶೀಲಮ್ಮ ಹಿರಿ ಹಿರಿ ಹಿಗ್ಗಿಬಿಟ್ಟಳು. ಆ ಕುರಿಗಳನ್ನು ನೋಡಿಕೊಳ್ಳುತ್ತಾ ರಾಮಣ್ಣ, ಮೊದಲು ದಿನಕ್ಕೆರಡು ಬಾರಿ ಗುಡಿಗೆ ಹೋಗುತ್ತಿದ್ದವನು ಒಂದು ಬಾರಿ ಮಾತ್ರ ಹೋಗತೊಡಗಿದ. ಮರಿಗಳು ಬೆಳೆದಂತೆ ರೊಪ್ಪ ಸಾಲದಾಗಿ ಊರ ಹೊರಗಿನ ಹೊಲದಲ್ಲಿ ಗುಡಿಸಲು ಹಾಕಿಕೊಂಡು ವಾಸಿಸತೊಡಗಿದ. ದಿನಕ್ಕೊಮ್ಮೆ ಗುಡಿ ಬಳಿ ಹೋಗುತ್ತಿದ್ದ ರಾಮಣ್ಣ, ಹನುಮಪ್ಪನ ದರ್ಶನಕ್ಕೆ ಈಗೀಗ ವಾರಕ್ಕೆ, ತಿಂಗಳಿಗೆ ಒಮ್ಮೆ ಎಂಬಂತೆ ಹೋಗಲಾರಂಭಿಸಿದ. ಮನಸ್ಸಿನ ನೆಮ್ಮದಿ ಕಳೆದುಕೊಂಡಂತಾಗಿ ರಾತ್ರಿಯೆಲ್ಲಾ ನಿದ್ದೆಯಿಲ್ಲದೇ ಒದ್ದಾಡತೊಡಗಿದ! ಕುರಿಗಳು ಹೆಚ್ಚಾದವು, ಹಣ ಹರಿಯತೊಡಗಿತು, ಸುಖ ಮನೆ ಬಾಗಿಲಿನಲ್ಲಿ ಸುಳಿದಾಡತೊಡಗಿತು. ಆದರೆ ರಾಮಣ್ಣನ ನೆಮ್ಮದಿ ಕಳೆದುಹೋಯಿತು. ದೇವರ ದರ್ಶನವಿಲ್ಲ. ಪೂಜಾರಜ್ಜನ ಜೊತೆ ಮಾತಿಲ್ಲ, ಪೂಜೆಯಿಲ್ಲ, ಎಡೆಯಿಲ್ಲ, ಭಕ್ತಿ ಮೊದಲೇ ಇಲ್ಲ ಎಂಬಂತಾಗಿ ಒಳಗೊಳಗೇ ರಾಮಣ್ಣ ಸವೆಯಲಾರಂಭಿಸಿದ. ಹೆಂಡತಿಯು ಸುಖದಲ್ಲಿ ತೇಲಿದಳೇ ಹೊರತು ಗಂಡನ ಮನಃಸ್ಥಿತಿ ತಿಳಿಯದಾದಳು.

ಅದೊಂದು ರಾತ್ರಿ ಬಾಗಿಲಿಗೆ ಯಾರೋ ಬಂದಂತಾಯಿತು. ಕುರಿ ರೊಪ್ಪದಲ್ಲಿ ಮಲಗಿದ್ದ ರಾಮಣ್ಣ ಕೆಮ್ಮುತ್ತಾ ಬಂದು ನೋಡಿದರೆ ಪೂಜಾರಜ್ಜ ಎದುರಿನಲ್ಲಿ ಇದ್ದ. ರಾಮಣ್ಣನಿಗೆ ಯಾರೋ ಎದೆಗೆ ಒದ್ದಂತಹ ಅನುಭವ. ಪೂಜಾರಜ್ಜ ಹಿಂದೆ ಆಡಿದ್ದ ಮಾತುಗಳು ಕಿವಿಯಲ್ಲಿ ಗುಂಯ್ಗುಡಲಾರಂಭಿಸಿದವು! ಕೈ ಮುಗಿದು, ಕಟ್ಟೆಯ ಮೇಲೆ ಕುಳ್ಳಿರಿಸಿ, ‘ಇಷ್ಟು ದೂರ ಯಾಕೆ ಬಂದಿರಿ? ಹೇಳಿ ಕಳಿಸಿದ್ದರೆ ನಾನೇ ಬರುತ್ತಿರಲಿಲ್ಲವೇ’ ಎಂದು ರಾಮಣ್ಣ ನುಡಿದಾಗ ಅಜ್ಜ ನಕ್ಕುಬಿಟ್ಟ. ‘ದಿನಾ ಬಂದು ಸ್ವಾಮಿಯನ್ನು ಕಂಡು ಕೈ ಮುಗಿದು ಹೋಗುವ ನೀನು, ಸುಖದಲ್ಲಿ ಮೈ ಮರೆತಿರುವಾಗ ನಿನ್ನನ್ನು ಕರೆದರೆ ಬರುತ್ತಿದ್ದೆಯಾ? ಸುಖ ಕಾಲು ಮುರಿದುಕೊಂಡು ಮನೆ ಬಾಗಿಲಲ್ಲಿ ಬಿದ್ದಿರುವಾಗ ನಾವೇಕೆ, ನಮ್ಮ ಸ್ವಾಮಿಯೇಕೆ ರಾಮಣ್ಣ?’ ಎಂದ ಪೂಜಾರಜ್ಜ.

ರಾಮಣ್ಣನಿಗೆ ಮಾತನಾಡಲು ಬಾಯಿಯೇ ಬಾರದಾಯಿತು. ಸುಶೀಲಮ್ಮ ತಂದಿತ್ತ ಹಾಲಿನ ಲೋಟವನ್ನು ಅಜ್ಜನಿಗೆ ಕೊಡಲು ಹೋದಾಗ ಅಜ್ಜ ನಿರಾಕರಿಸಿದ. ‘ನಿನ್ನ ಸುಖದ ಮನೆಯ ಹಾಲು ನನಗೆ ವಿಷ. ಬೇಡ ಅದು’ ಅಂದುಬಿಟ್ಟ! ‘ನೀನು ಬರ್ತಾ ಹೋಗ್ತಾ ಸ್ವಾಮಿಗೆ ಕೈಮುಗಿದು ಹೋಗುತ್ತಿದ್ದೆಯಲ್ಲಾ? ಅದು ಅವನಿಗೆ ಕ್ಷೀರಾಭಿಷೇಕದಂತೆ ಇತ್ತು’ ಎಂದ ಪೂಜಾರಜ್ಜ. ರಾಮಣ್ಣನ ಕಣ್ಣಲ್ಲಿ ನೀರು ಧಾರಾಕಾರವಾಗಿ ಸುರಿಯುತ್ತಿತ್ತು. ಮಾತು ತಡೆತಡೆದು ಬರುತ್ತಿತ್ತು. ‘ನಿಮ್ಮ ಮಾತು ನಿಜ. ನಾನು ಆಸೆಗೆ ಬಲಿಯಾಗಿ, ಹಣದ ಹಿಂದೆ ಹೋಗಿ ನೆಮ್ಮದಿ ಕಳೆದುಕೊಂಡು ಬಿಟ್ಟೆ. ಸುಖ ಅಂದರೆ ಹೆಚ್ಚು ಕುರಿಗಳು, ಅಧಿಕ ಹಣ, ಮೈ ಮರೆವು ಅಂದುಕೊಂಡು ಭಗವಂತನ ನೆನಪೇ ಇಲ್ಲವಾಗಿತ್ತು. ತೃಪ್ತಿಯೆಂಬುದು ಮಾನವನಿಗೆ ಇಲ್ಲದೇ ಹೋದರೆ ಎಲ್ಲವನ್ನೂ ಗಳಿಸಿಯೂ ಏನನ್ನೋ ಕಳೆದುಕೊಳ್ಳುತ್ತಾನೆ ಅನ್ನುವುದಕ್ಕೆ ನಾನೇ ಉದಾಹರಣೆ’ ಎನ್ನುತ್ತ ಅಜ್ಜನ ಪಾದಕ್ಕೆ ಬಿದ್ದ.

ರಾಮಣ್ಣನ ಮೈದಡವಿದ ಅಜ್ಜ ‘ಏಳು, ಬಲಹೀನತೆಗಳನ್ನು ಮೀರಿ ಬೆಳೆದಾಗ ಮನುಷ್ಯನಿಗೆ ಮುಕ್ತಿ. ನಿನ್ನ ಕಣ್ಣು ತೆರೆದರೆ ಆಯಿತು. ನಾಳೆಯಿಂದ ನಿನ್ನ ಕಾರ್ಯಗಳ ಜೊತೆ ಭಕ್ತಿಯೂ ದುಡಿಮೆ ಎಂಬುದನ್ನ ಅರಿ. ನೀನೇನಾಗಿದ್ದೀಯೋ ಅದಕ್ಕೆ ದೈವ ಕಾರಣ ಅನ್ನುವುದನ್ನು ಮರೆಯದೇ ನಡೆದರೆ ನೀನು ಕಳೆದುಕೊಂಡ ನೆಮ್ಮದಿ ಮತ್ತೆ ಪಡೆಯುತ್ತೀಯ’ ಎಂದು ಪೂಜಾರಜ್ಜ ಹೇಳಿದಾಗ ರಾಮಣ್ಣ ಹೌದೆಂಬಂತೆ ತಲೆಯಾಡಿಸಿದನು. ಮಾರನೇ ದಿನದಿಂದಲೇ ಪುನಃ ಊರು ಸೇರಿ ಕಾಯಕದೊಂದಿಗೆ ಸ್ವಾಮಿಸೇವೆ ಮಾಡುತ್ತಾ ಸುಖವಾಗಿ ಬಾಳಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT