ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಜ್ರಮುಷ್ಟಿ’ ಕಾಳಗ

ಈ ವಿಶೇಷ ಕುಸ್ತಿಗೆ 400 ವರ್ಷಗಳ ಇತಿಹಾಸ
Last Updated 16 ಅಕ್ಟೋಬರ್ 2018, 1:55 IST
ಅಕ್ಷರ ಗಾತ್ರ

ಕೆಂಪುಮಣ್ಣಿನ ವೃತ್ತಾಕಾರದ ನೆಲಹಾಸಿನ ಅಖಾಡ ದೂಳು ಏಳಲು ಸಜ್ಜಾಗಿದೆ. ದೂಳು ಎಬ್ಬಿಸಲು ತಲೆ ಜಗಜಟ್ಟಿಗಳು ಮುಷ್ಟಿಗೆ ಆಯುಧತೊಟ್ಟು ನಿಂತಿದ್ದಾರೆ. ಪೈಲ್ವಾನರ ಸೂಚನೆಗಾಗಿ ಕಾಯುತ್ತಿದ್ದಾರೆ. ಅವರು ಸಂಖ್ಯೆ ಎಣಿಸುತ್ತಾ ಸೂಚನೆ ಕೊಡುತ್ತಿದ್ದಂತೆ ಮುಷ್ಟಿಗಳನ್ನು ಮುಂದೆ ಮಾಡುತ್ತಾ ಜಗಜಟ್ಟಿಗಳು ’ಕಾಳಗ’ಕ್ಕೆ ಇಳಿದೇಬಿಟ್ಟರು. ಪ್ರೇಕ್ಷಕರು ಚಪ್ಪಾಳೆ ತಟ್ಟಿ, ಜಟ್ಟಿಗಳಲ್ಲಿ ಹುರುಪು ತುಂಬುತಿದ್ದರು.

ಮೈಸೂರಿನಲ್ಲಿ ನಡೆಯುವ ನಾಡಹಬ್ಬ ದಸರಾ ಎಂದರೆ ಚಿನ್ನದ ಅಂಬಾರಿ, ಅಂಬಾರಿ ಹೊರುವ ಆನೆ, ಸ್ತಬ್ಧಚಿತ್ರಗಳು ಮಾತ್ರವೇ ಅಲ್ಲ. ಕುಸ್ತಿಯಂತಹ ಸಾಂಪ್ರದಾಯಿಕ ಕ್ರೀಡೆಗಳೂ ಇರುತ್ತವೆ. ಇದರಲ್ಲಿ ವಜ್ರಮುಷ್ಟಿ ಕಾಳಗ ತುಂಬಾ ವಿಶೇಷವಾದದ್ದು.

ವಿಶ್ವಪ್ರಸಿದ್ಧ ಜಂಬೂ ಸವಾರಿ ಮೆರವಣಿಗೆ ಸಾಗಬೇಕು ಎಂದರೆ ಮೊದಲು ಇತಿಹಾಸ ಪ್ರಸಿದ್ಧ ‘ವಜ್ರಮುಷ್ಟಿ’ ಕಾಳಗ ನಡೆಯಲೇಬೇಕು. ಇದು ನಡೆಯದ ಹೊರತು, ದಸರೆಯ ಪೂಜಾ ಕಾರ್ಯಗಳೇ ಆರಂಭವಾಗುವುದಿಲ್ಲ. ಇದಕ್ಕಾಗಿ ಅರಮನೆಯ ಜಗಜಟ್ಟಿಗಳು ತಿಂಗಳ ಮುಂಚೆಯೇ ಸಿದ್ಧತೆ ನಡೆಸಿ ವಿಜಯದಶಮಿಯ ದಿನದಂದು ಅರಮನೆಯ ಕರಿಕಲ್ಲುತೊಟ್ಟಿಯಲ್ಲಿ ಸೆಣಸಾಡುತ್ತಾರೆ. ವಜ್ರಮುಷ್ಟಿಯಿಂದ ಗುರಿಯಿಟ್ಟು ತಲೆಗೆ ಹೊಡೆಯುವ ಈ ಕಾಳಗದಲ್ಲಿ ಯಾರ ತಲೆಗೆ ಮೊದಲು ಆ ಆಯುಧ ತಾಗಿ ರಕ್ತ ಚಿಮ್ಮುವುದೋ ಆಗ ಕಾಳಗ ಮುಕ್ತಾಯವಾ ಗುತ್ತದೆ. ಇದು ಈ ಕಾಳಗದ ಸಾರಾಂಶ.

ಮೈಸೂರು ಸಂಸ್ಥಾನದಲ್ಲಿ ಒಡೆಯರ್ ಆಳ್ವಿಕೆ ಶುರುವಾದ ಬಳಿಕ (1610ರಿಂದಲೂ) ಈ ವಜ್ರಮುಷ್ಟಿ ಕಾಳಗವನ್ನು ಪ್ರೋತ್ಸಾಹಿಸಲಾಗುತ್ತಿದೆ. ರಾಜವಂಶಸ್ಥರು ಹಾಜರಿದ್ದು, ಈ ಕಾಳಗ ವೀಕ್ಷಿಸುವುದು ಪರಂಪರೆ. ಇದೊಂದು ಮೈನವಿರೇಳಿಸುವಂತಹ ಸಮರಕಲೆ. ಇದನ್ನು ಮಲ್ಲಯುದ್ಧ ಎನ್ನಬಹುದು. ಹಾಗೆಯೇ ಇದೊಂದು ಅಪಾಯ ತಂದೊಡ್ಡುವ ಕಲೆಯೂ ಹೌದು. ಈ ಕಾಳಗದಲ್ಲಿ ಜಗಜಟ್ಟಿಯೊಬ್ಬ ಗೆಲ್ಲಬೇಕೆಂದರೆ ರಕ್ತ ಚಿಮ್ಮಲೇಬೇಕು. ಗೆದ್ದ ಮಲ್ಲನಿಗೆ ಸನ್ಮಾನಿಸಿ ನಗನಾಣ್ಯಗಳನ್ನು ನೀಡುವುದು ವಾಡಿಕೆ.

ಕಾಳಗಕ್ಕೆ ಬೇಕು ‘ವಜ್ರನಖ’: ವಜ್ರಮುಷ್ಟಿ ಕಾಳಗನಿರತ ಜಟ್ಟಿಗಳು ‘ವಜ್ರನಖ’ವೆಂಬ ಆಯುಧವನ್ನು ತಮ್ಮ ಮುಷ್ಟಿಗೆ ಕಟ್ಟಿಕೊಂಡು ಸೆಣಸುತ್ತಾರೆ. ಈ ‘ವಜ್ರನಖ’ಗಳನ್ನು ಮೊದಲು ಆನೆಯ ದಂತ ಅಥವಾ ಸಾರಂಗದ ಕೊಂಬಿನಿಂದ ತಯಾರಿಸುತ್ತಿದ್ದರು. ಈ ವಜ್ರನಖವು ಮುಷ್ಟಿಯ ನಾಲ್ಕು ಬೆರಳುಗಳಿಗೆ ತಾಕುವಂತಿರುತ್ತದೆ; ಬಲಗೈಯಲ್ಲಿ ಧರಿಸುವಂತೆ ವಿನ್ಯಾಸಗೊಳಿಸಲಾಗಿರುತ್ತದೆ. ಈ ಆಯುಧದ ತುದಿಭಾಗವು ಉಗುರಿನಂತೆ ಮೊನಚಾಗಿರುತ್ತದೆ. ಇದರ ಹೊಡೆತಕ್ಕೆ ಸಿಕ್ಕಿದ ಎದುರಾಳಿಯ ಮುಖದ ಚಹರೆಯೇ ಬದಲಾಗುವಷ್ಟು ಹರಿತ ಈ ‘ವಜ್ರನಖ’ಕ್ಕೆ ಇರುತ್ತದೆ.

ಈ ಆಯುಧವು ಮೈಸೂರು ರಾಜರ ಆಶ್ರಯದಲ್ಲಿದ್ದ ಜಗಜಟ್ಟಿಗಳೇ ವಿನ್ಯಾಸಗೊಳಿಸಿದ್ದು ಎನ್ನಲಾಗುತ್ತದೆ. ಮರಾಠ ಚಕ್ರವರ್ತಿ ಶಿವಾಜಿಯ ಆಸ್ಥಾನದಲ್ಲಿ ಇದೇ ಮಾದರಿಯ ‘ವ್ಯಾಘ್ರನಖ’ವನ್ನು ಬಳಸಲಾಗುತ್ತಿತ್ತು ಎಂಬ ಉಲ್ಲೇಖಗಳೂ ಇವೆ. ಆದರೆ, ಈಗಲೂ ಚಾಲ್ತಿಯಲ್ಲಿರುವುದು ಈ ವಜ್ರಮುಷ್ಟಿ ಕಾಳಗ ಮಾತ್ರ ಎಂಬುದು ವಿಶೇಷ.

ಮಲ್ಲರ ಮೈಕಟ್ಟು!: ಎಲ್ಲರ ಕೈಲೂ ವಜ್ರಮುಷ್ಟಿ ಕಾಳಗ ಆಡಲು ಸಾಧ್ಯವಿಲ್ಲ. ಸತತ ಅಭ್ಯಾಸದಿಂದ ಹುರಿಗಟ್ಟಿದ ದೇಹದವರಾದ ಈ ಮಲ್ಲರು ತಮ್ಮ ತಲೆ ಬೋಳಿಸಿಕೊಂಡಿರುತ್ತಾರೆ. 9 ದಿನಗಳ ಕಾಲ ಕಟ್ಟುನಿಟ್ಟಿನ ವ್ರತ ಪಾಲಿಸುತ್ತಾರೆ. ದಸರೆಗೆ ಒಂದು ತಿಂಗಳ ಮುಂಚೆಯಿಂದಲೇ ತಾಲೀಮು ನಡೆಸುತ್ತಾರೆ. ದಸರಾ ದಿನ ತಮ್ಮ ಸಾಹಸ ಪ್ರದರ್ಶಿಸಿ ಕಾಳಗಕ್ಕೆ ಮೆರುಗು ತರುತ್ತಾರೆ.

ಕಾಳಗದಲ್ಲಿ ಪಾಲ್ಗೊಳ್ಳುವ ಜಗಜಟ್ಟಿಗಳು ಪರಿಪೂರ್ಣ ಬ್ರಹ್ಮಚಾರಿಗಳಾಗಿರಲೇಬೇಕು ಎನ್ನುವುದು ನಿಯಮ. ಮನಸು ಸಂಪೂರ್ಣವಾಗಿ ಏಕಾಗ್ರತೆಯ ಕಡೆಗೆ ಇದ್ದಲ್ಲಿ ಮಾತ್ರ ಈ ಕಾಳಗದಲ್ಲಿ ಗೆಲ್ಲಲು ಸಾಧ್ಯ ಎನ್ನುವುದಕ್ಕಾಗಿ ಈ ನಿಯಮ. ಹಾಗಾಗಿ, ಕುಸ್ತಿಯ ವಿವಿಧ ಪಟ್ಟುಗಳನ್ನು ಕರಗತ ಮಾಡಿಕೊಳ್ಳುವ ಜತೆಗೆ, ‘ವಜ್ರನಖ’ವನ್ನು ಸಂಪೂರ್ಣವಾಗಿ ಅರಿತುಕೊಳ್ಳುವುದು ಇದಕ್ಕೆ ಅಗತ್ಯವಾಗಿ ಬೇಕಾದ ವಿದ್ಯೆ.

‘ಆಯುಧವನ್ನು ಅರ್ಥಮಾಡಿಕೊಳ್ಳಲಾಗದೇ, ಯುದ್ಧದಲ್ಲಿ ಗೆಲ್ಲಲಾಗದು’ ಎಂಬುದು ಈ ಕಾಳಗದ ಗುಟ್ಟು. ಹೂವಿನಿಂದ ಸಿಂಗರಿಸಿದ ಮಣ್ಣಿನ ಅಖಾಡದಲ್ಲಿ ನಾಲ್ವರು ಜಟ್ಟಿಗಳು ‘ವಜ್ರನಖ’ ಧರಿಸಿ ಕಾಳಗಕ್ಕೆ ಇಳಿಯುತ್ತಾರೆ. ಕಾಳಗ ನಿಲ್ಲುವುದು ಒಂದು ತೊಟ್ಟು ರಕ್ತ ನೆಲಕ್ಕೆ ಬಿದ್ದಾಗ ಎನ್ನುವುದು ನಿಜ. ಆದರೆ, ನಾಲ್ವರೂ ಮಲ್ಲರೇ ಆಗಿರುವ ಕಾರಣ ಅಷ್ಟು ಸುಲಭವಾಗಿ ತಮ್ಮ ತಲೆಗೆ ‘ವಜ್ರನಖ’ ತಾಗದೇ ಇರುವಂತೆ ಎಚ್ಚರ ವಹಿಸುತ್ತಾರೆ. ಸೆಣಸಾಟ ಸಾಕಷ್ಟು ಸಮಯ ನಡೆದು ಕೊನೆಗೆ ಒಮ್ಮೆ ಮಲ್ಲನ ತಲೆಗೆ ಆಯುಧ ತಾಗಿ ರಕ್ತ ಚಿಮ್ಮುತ್ತದೆ.

ಸ್ವಾತಂತ್ರ್ಯ ಪೂರ್ವದಲ್ಲಿ ಈ ಕಾಳಗವು ಸಾಕಷ್ಟು ರೋಚಕವಾಗಿ ನಡೆಯುತ್ತಿತ್ತು. ಪ್ರಾಣಕ್ಕೆ ಅಪಾಯವಾಗಿದ್ದೂ ಉಂಟು. ಈಗ ಇದು ಸಾಂಪ್ರದಾಯಿಕ ಆಚರಣೆಯಾಗಿ ಉಳಿದಿದೆ. ಹಾಗಾಗಿ, ವಾಡಿಕೆಯಂತೆ ಕಾಳಗ ನಿರತ ಜಟ್ಟಿಗಳ ತಲೆಯಿಂದ ಕೊಂಚವೇ ರಕ್ತ ಹೊರಬಂದರೂ ಸಾಕು. ಒಂದು ತೊಟ್ಟನ್ನು ಮಣ್ಣಿಗೆ ತಾಕಿಸಿ ಕಾಳಗವನ್ನು ಅಂತ್ಯಗೊಳಿಸುತ್ತಾರೆ. ಆ ಬಳಿಕವೇ ವಿಜಯದಶಮಿಯ ಇತರೇ ಕಾರ್ಯಗಳು ಸಾಂಗವಾಗಿ ಮುನ್ನಡೆಯುತ್ತವೆ. ಈ ಬಾರಿ ಅ.19ರಂದು ವಿಜಯದಶಮಿ ಉತ್ಸವ ನಡೆಯಲಿದ್ದು, ಅದು ವಜ್ರಮುಷ್ಟಿ ಕಾಳಗವೂ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT