ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಕಥೆ: ಪಾಪ, ಕಬ್ಬನ್‌ ಪಾರ್ಕಿನ ಕಾಡುಪಾಪ

Last Updated 14 ನವೆಂಬರ್ 2021, 2:04 IST
ಅಕ್ಷರ ಗಾತ್ರ

ಬೆಂಗಳೂರಿನ ಕಬ್ಬನ್‌ ಪಾರ್ಕಿನ ಬಾಲಭವನದಲ್ಲಿ ಪುಟಾಣಿ ರೈಲು ಉಸ್ಸಂತ ನಿಂತಿತ್ತು. ಪುಟ್ಟ ಹುಡುಗಿ ನೀಲಿ ಒಂದು ಕೈಯಲ್ಲಿ ಚಪ್ಪಲ್‌ ಹಿಡಿದು ಇನ್ನೊಂದನ್ನ ಹುಡುಕ್ತಾ ಪೊದೆಯ ಹತ್ರ ಬಂದ್ಲು. ನೋಡಿದ್ರೆ ಅವಳ ಕಣ್ಣೆದುರೇ ಠಪ್‌ ಅಂತ ಒಂದು ಅಳಿಲು ಪಲ್ಟಿ ಹೊಡೆದು ಬಿತ್ತು.

ಅರೆ, ಇದಕ್ಕೇನಾಯ್ತು ಅಂತ ಹತ್ತರ ಹೋಗಿದ್ದೇ ತಡ, ಅದು ಕುಂಟ್‌ತಾ ಕುಂಟ್‌ತಾ ದೂರ ಹೋಯ್ತು. ‘ಅಯ್ಯೋ ಪಾಪ ಎತ್ಕೊಳೋಣ’ ಅನ್ಕೊಂಡು ನೀಲಿ ಅದರ ಹತ್ರ ಹೋದ್ಲು. ಅಳಿಲು ಇನ್ನೂ ಕೊಂಚ ದೂರ, ಮತ್ತೂ ಕೊಂಚ ದೂರ ಹೋಯ್ತು. ಹೋಗಿ ಹೋಗಿ ಒಂದು ಪುಟ್ಟ ಹಳ್ಳಕ್ಕೆ ಇಳೀತು.

ಅಲ್ಲಿ ನೋಡಿದ್ರೆ ಜಾತ್ರೆ! ಅಳಿಲು, ಅದರ ಅಮ್ಮ, ಬೆಳ್ಳಕ್ಕಿ, ಗೂಬೆ, ಬಾವಲಿ, ನೀರ್‌ಕಾಗೆ ಎಲ್ಲ ಸೇರಿ ಅಕಾ ಅಕ್ಕಾ ಬಾ ಬಾ ಅಂತ ನೀಲೀನ ಕರೆದವು. ಇನ್ನೂ ಹತ್ರ ಹೋದರೆ ದೊಡ್ಡ ಕಣ್ಣುಗಳ ಪುಟಾಣಿ ಕಾಡುಪಾಪ ಅಳ್ತಾ ಇತ್ತು. ನೀಲಿಗೆ ಗಾಬರಿ ಆಯ್ತು.

‘ಏನಾಯ್ತು ಕಾಡುಪಾಪಂಗೆ? ಯಾಕೆ ನೀವೆಲ್ಲ ಸಪ್ಪಗಿದೀರಿ?’ ಅಂತ ನೀಲಿ ಕೇಳಿದಳು.

ಕಾಡುಪಾಪ ಮೂಗು ಒರೆಸಿಕೊಂಡು, ‘ನನಗೆ ಏನೂ ಆಗಿಲ್ಲಮ್ಮ; ಆದರೆ ನಮ್‌ ಪುಟಾಣಿಗೆ ಮೈಯೆಲ್ಲ ಸುಟ್ಟು ಹೋಗಿದೆ. ಸಹಾಯ ಬೇಕು’ ಅಂದ್ಲು. ನೀಲಿ ತುಸು ಬಗ್ಗಿ ನೋಡಿದ್ಲು. ಪುಟ್ಟ ಕಾಡುಪಾಪ ಅತ್ತು ಅತ್ತು ಸುಸ್ತಾಗಿ ನಡುಗ್ತಾ ಅಮ್ಮನ ಮಡಿಲಲ್ಲಿ ಮಲಗಿತ್ತು. ಅಲ್ಲೇ ಪಕ್ಕದಲ್ಲಿ ಒಂದು ರಾಕೆಟ್‌ ಬಿದ್ದಿತ್ತು.

ನೀಲಿ ಸುತ್ತ ನೋಡಿದ್ಲು. ಅಲ್ಲೇ ಕೊಂಬೆ ಮೇಲೆ ನೇತಾಡ್ಕಂಡಿದ್ದ ಬಾವಲಿ ಮಾತಾಡ್ತು.

‘ದೀಪಾವಳಿ ಅಂತ ಯಾರೋ ಪಟಾಕಿ ಹಾರಿಸಿದ್ದು ಇವನ ಮೇಲೆ ಬಿದ್ದಿದೆ; ಮೈ ಸುಟ್ಟುಹೋಗಿದೆ. ಎರಡು ದಿನ ಆಯ್ತು. ಯಾರೂ ಏನೂ ಸಹಾಯ ಮಾಡಕೆ ಆಗ್ತಾ ಇಲ್ಲ. ನಮಗೂ ಪಟಾಕಿ ಗಲಾಟೇಲಿ ಉಸಿರಾಡಕೆ ಆಗ್ತಾ ಇಲ್ಲ. ಬೆಂಕಿ, ಹೊಗೆ, ಢಾಂ ಢಾಮ್‌ ಸದ್ದು, ಆಕಾಶದಿಂದ ಕಿಡಿ ಬೀಳೋದು. ನನಗೂ, ಗೂಬಣ್ಣಂಗೂ ಊಟಕ್ಕೆ ಹೋಗೋ ಹಾಗೂ ಇಲ್ಲ. ಮಿಕ್ಕ ಯಾರಿಗೂ ರಾತ್ರಿ ಇಡೀ ನಿದ್ದೆ ಇಲ್ಲ. ನೀರ್‌ಕಾಗೆ, ಬೆಳ್ಳಕ್ಕಿ, ಮೈನಾ, ಕೋಗಿಲೆ... ನಾವೆಲ್ಲ ಉಪವಾಸ ಇದ್ದೀವಿ, ಮೂರು ದಿನ ಆಯ್ತು; ಯಾರೂ ಸಹಾಯಕ್ಕೆ ಬರ್ತಾನೂ ಇಲ್ಲ’ ಅಂತು ಬಾವಲಿ.

ನೀಲಿಗೆ ಕಣ್ಣೀರೇ ಬಂದಂತಾಯ್ತು. ಏನಾದ್ರೂ ತಿಂಡಿ ಕೊಡೋಣ ಅಂದ್ರೆ ಟಿಫಿನ್‌ ಬಾಕ್ಸೂ ಬಾಲಭವನದಲ್ಲೇ ಉಳೀತು. ಪುಟ್ಟ ಕಾಡುಪಾಪನ ಎತ್ತಿ ಗಾಯದ ಮೇಲೆ ಉಫ್‌ ಅಂತ ಊದಿದ್ಲು. ‘ನೀವು ಯಾರ ಹತ್ರ ಸಹಾಯ ಕೇಳಕ್ಕೆ ಹೋದ್ರಿ?’ ಅಂತ ಕೇಳಿದ್ಲು.

‘ಎಲ್ಲರನ್ನೂ ಹುಡುಕ್ಕೊಂಡು ಹೋದ್ವಿ. ಕಬ್ಬನ್‌ ಪಾರ್ಕಿನ ಆ ಮೂಲೆಯಿಂದ ಈ ಮೂಲೇವರೆಗೆ ಎಷ್ಟೊಂದು ದೊಡ್‌ ದೊಡ್‌ ಆಫೀಸರ್‌ ಕಚೇರಿ ಇದಾವಲ್ಲ...’ ಬೆಳ್ಳಕ್ಕಿ ಹೇಳಿತು.

‘ಮೊದ್ಲು ಪೊಲೀಸ್‌ ಮಹಾನಿರ್ದೇಶಕರ ಕಚೇರಿಗೆ ಹೋಗಿ ರಕ್ಷಣೆ ಕೊಡೀ ಅಂತ ಕೇಳಿದ್ವಿ: ದೊಡ್ಡೋರೆಲ್ಲ ರಜಾ; ನಾಡಿದ್ದು ಬನ್ನಿ ಅಂದ್‌ಬಿಟ್ರು’ ಮುಂಗುಸಿ ಹೇಳಿತು.

‘ಆಮೇಲೆ ಹೈಕೋರ್ಟಿಗೆ ಹೋದ್ವಿ; ನ್ಯಾಯ ಕೊಡಿ ಅಂತ ಕೇಳಿದ್ವಿ. ಅಲ್ಲೂ ರಜಾನೇ. ಆದರೂ ಒಬ್ಬರು ಅದೇನೋ ಗ್ರೀನ್‌ ಪಟಾಕಿ ಮಾತ್ರ ಹಚ್‌ಬೇಕು; ರಾಕೆಟ್‌ ಹಾರಿಸಿದ್ರೆ ಕೇಸ್‌ ಹಾಕ್‌ಬೌದು. ಆದರೆ ಇದು ದೊಡ್‌ ಕೋರ್ಟು. ನೀವು ಮೊದ್ಲು ಮುಂಗುಸಿ ಕೋರ್ಟಿಗೆ ಹೋಗಬೇಕು ಅಂದ್ರು. ಏನಮ್ಮಾ ಅದು ಮುಂಗುಸಿ ಕೋರ್ಟು?’ ಅಳಿಲಿನ ಅಮ್ಮ ಕೇಳ್ತು.

ನೀಲಿಗೆ ಬೇಸರದಲ್ಲೂ ನಗು ಬಂತು. ‘ಮುಂಗುಸಿ ಅಲ್ಲ ಮಾರಾಯ್ತೀ, ಅದು ಮುನ್ಸೀಫ್‌ ಕೋರ್ಟು; ದೂರ ಇದೆ; ಆದರೆ ಅಲ್ಲಿಗೆ ಹೋಗೋಕ್‌ ಮುಂಚೆ ಪೊಲೀಸ್‌ ಎಫ್‌ಐಆರ್‌ ಆಗಬೇಕು’ ಅಂದ್ಲು.

‘ಪೊಲೀಸ್‌ ಫಾಯರ್ರಾ? ಯಾಕಮ್ಮಾ?’ ಗಡಬಡಿಸಿ ಕೇಳಿದ ಗೂಬೆರಾಯ.

‘ಫಾಯರ್‌ ಅಲ್ಲ, ಎಫ್‌ಐಆರ್‌! ಹಿಂಗಿಂಗಾಯ್ತು ಅಂತ ಪೊಲೀಸರಿಗೆ ಹೇಳಿಕೆ ಕೊಡಬೇಕು; ಅದು ಬಿಡಿ. ಮತ್ತೆಲ್ಲಿಗೆ ಹೋದ್ರಿ? ವಿಧಾನ ಸೌಧಕ್ಕೆ?’ ಕೇಳಿದಳು ನೀಲಿ.

‘ಐ! ಅಲ್ಲಿಗೆ ಹೋಗೋಕೆ ಭಯ! ಹೆಜ್ಜೇನು ಗೂಡಿಗೆ, ಪಾರಿವಾಳಕ್ಕೆ ವಿಷ ಹೊಡೆದು ಸಾಯಿಸಿದ ಹಂಗೆ ನಮಗೂ ಹೊಡೆದ್ರೆ?’ ದಿಗಿಲುಬಿದ್ದ ಬಾವಲಿ ಬಾಯಿ ಹಾಕಿತು.

‘ಆಮೇಲೆ ಪ್ರೆಸ್‌ ಕ್ಲಬ್ಬಿಗೆ ಹೋದ್ವಿ. ನಮ್‌ ಕಷ್ಟದ ಬಗ್ಗೆ ಪ್ರಚಾರ ಕೊಡಿ, ಸುದ್ದಿ ಮಾಡಿ ಅಂತ ಕೇಳಿದ್ವಿ. ಇಷ್ಟು ಬೆಳಿಗ್ಗೆ ಬೆಳಿಗ್ಗೆ ಬಂದ್ರೆ ಹ್ಯಾಂಗೆ, ಹನ್ನೊಂದರ ಮೇಲೆ ಬನ್ನಿ; ಟಿವಿಯವರು, ಪ್ರೆಸ್‌ನವರು ಯಾರಾದರೂ ಇರ್ತಾರೆ’ ಅಂತ ಹೇಳಿದ್ರು. ಯಾವುದಕ್ಕೂ ಇದನ್ನ್‌ ಇಟ್ಕೊಂಡಿರಿ ಅಂತ ಈ ಪೇಪರ್‌ ತುಂಡು ಕೊಟ್ರು... ಏನಮ್ಮಾ ಇದು?

ನೀಲಿ ಅದನ್ನು ಹಿಡಿದು ಅತ್ತ ಇತ್ತ ತಿರುಗಿಸಿ ನೋಡಿ ವಾಪಸ್‌ ಕೊಟ್ಲು. ‘ಸಾರಿ ಕಣಮ್ಮ. ನನಗೆ ಕನ್ನಡ ಓದೋಕೆ ಬರಲ್ಲ; ನಂದು ಇಂಗ್ಲಿಷ್‌ ಮೀಡಿಯಮ್ಮು. ಕನ್ನಡ ಮಾತಾಡ್ತೀನಿ ಅಷ್ಟೆ’ ಅಂದ್ಲು.

‘ಇಲ್ಲಿಗೆ ಬರೋ ಪ್ರವಾಸಿಗಳು ತೆಲುಗು, ಉರ್ದು, ತಮಿಳು, ಹಿಂದಿ, ಮಾತಾಡ್ತಾರೆ; ಕನ್ನಡ ಗೊತ್ತಿರೋರು ಕಮ್ಮಿ. ಮತ್ಯಾರಿದಾರೆ ನಮಗೆ ಸಹಾಯ ಮಾಡೋಕೆ?’ ಕೇಳಿತು ನೀರ್‌ಕಾಗೆ.

ಅಷ್ಟರಲ್ಲಿ ಅಮ್ಮ ಕಾಡುಪಾಪ, ‘ನಾನು ಓದ್ತೀನಿ ಕೊಡು’ ಅಂತ ಆ ಕಾಗದಾನ ಇಸ್ಕೊಂಡ್ಲು. ಅದರಲ್ಲಿ ‘ಪ್ರಜಾವಾಣಿ- ಕ್ಯೂಪಾ ಸಹಯೋಗ’ ಅಂತ ಒಂದು ಸುದ್ದಿ ಇತ್ತು. ಪಟಾಕಿಯಿಂದ ತೊಂದರೆ ಆದರೆ ಕ್ಯೂಪಾ ಸಹಾಯಕ್ಕೆ...’

‘ಹೋ, ಗೊತ್ತಾಯ್ತು ಗೊತ್ತಾಯ್ತು; ಕ್ಯೂಪಾ ಎಲ್ಲಿದೆ ಅಂತ ಗೊತ್ತು; ಹಲಸೂರ್‌ ಕೆರೆ ಪಕ್ಕದಲ್ಲಿ ಅವರು ವನ್ಯಪ್ರಾಣಿಗಳ ಆಸ್ಪತ್ರೆ ನಡೆಸ್ತಾರೆ’ ಎಂದಳು ನೀಲಿ.

‘ನಾನು ಪುಟ್ಟ ಪಾಪಾನ್ನ ಒಯ್ತೀನಿ ಅಲ್ಲಿಗೆ’ ಎಂದಿತು ಬಾವಲಿ. ಆದರೆ ಕಾಡುಪಾಪ ಒಪ್ಪಲಿಲ್ಲ. ‘ಮೂರು ದಿನದಿಂದ ಊಟಾನೂ ಇಲ್ಲ, ನಿದ್ದೆನೂ ಇಲ್ಲ; ನನ್‌ ಮಗೂನ್ನ ಎಲ್ಲಾದ್ರೂ ಬೀಳಿಸಿ ಬಿಟ್ರೆ?’ ಕೇಳಿತು.

‘ಚಿಂತೆ ಮಾಡಬೇಡ; ಇಲ್ಲೇ ಪಕ್ಕದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ಮ್ಯೂಸಿಯಂನಲ್ಲಿ ಒಂದು ಡ್ರೋನ್‌ ಇದೆ. ಅದನ್ನ ಚಾಲೂ ಮಾಡಿ ಇತ್ತ ತಗೊಂಡ್‌ ಬಾ’ ಅಂತ ನೀಲಿ ಬಾವಲಿಗೆ ಹೇಳಿದಳು. ಹೇಳಿ, ನೀಲಿ ತಾನು ತಲೆಗೆ ಕಟ್ಟಿಕೊಂಡಿದ್ದ ಬಟ್ಟೆಯನ್ನು ಬಿಚ್ಚಿ ತೊಟ್ಟಿಲು ಮಾಡಿದ್ಲು. ಹತ್ತೇ ನಿಮಿಷದಲ್ಲಿ ಬಂದ ಆ ಡ್ರೋನ್‌ಗೆ ಆ ತೊಟ್ಟಿಲನ್ನು ಕಟ್ಟಿ, ಬಾವಲಿಯನ್ನೂ ಕೂರಿಸಿ ನೀಲಿ ಆ ಪುಟ್ಟ ಯಂತ್ರವನ್ನು ಹಾರಿ ಬಿಟ್ಟಳು.

ಎಲ್ಲರೂ ಕೈಬೀಸುತ್ತಿದ್ದಾಗ ‘ನೀ ಹ್ಯಾಗೆ ಕನ್ನಡ ಓದೋದನ್ನ ಕಲ್ತೆ?’ ಅಂತ ಕಾಡುಪಾಪಂಗೆ ನೀಲಿ ಕೇಳಿದಳು.

‘ಇದೇ ಕಬ್ಬನ್‌ ಪಾರ್ಕಿನಲ್ಲಿ ಕೇಂದ್ರ ಗ್ರಂಥಾಲಯ ಇದೆ. ಅಲ್ಲೇ ಪಕ್ಕದಲ್ಲಿ ಮಕ್ಕಳಿಗಾಗಿ ವಿಶೇಷ ವಾಚನಾಲಯ ಇದೆ. ನಾವೆಲ್ಲ ಹಗಲೂ ರಾತ್ರಿ ಅಲ್ಲೇ ಸುಳೀತಾ ಇರ್ತೀವಿ. ನೀನೂ ಕನ್ನಡ ಓದೋದನ್ನು ಕಲಿ- ಇದು ಕನ್ನಡ ತಿಂಗಳು ಅಲ್ವಾ?’ ಅಂತ ಹೇಳಿತು ಮುಂಗುಸಿ.

ಅತ್ತು ಅತ್ತು ಕಣ್ಣು ಕೆಂಪಾಗಿದ್ದರೂ ಅಮ್ಮ ಕಾಡುಪಾಪ ನಕ್ಕಳು ಮುಸಿಮುಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT