ಭಾನುವಾರ, ಸೆಪ್ಟೆಂಬರ್ 27, 2020
21 °C

ಮಳೆ

ಎಲ್. ಗಿರಿಜಾ ರಾಜ್ Updated:

ಅಕ್ಷರ ಗಾತ್ರ : | |

Prajavani

ಒ ಣಗಿದ್ದ ಕೆರೆ ದಿಟ್ಟಿಸುತ್ತ ಕುಂತಿದ್ದ ತಾತಯ್ಯ, ಆ ಕೆರೆಯಂತೆ ಅವನ ಕಣ್ಣುಗಳೊಳಗಿನ ನೀರೂ ಬತ್ತಿ ಹೋಗಿತ್ತು. ತಾತಯ್ಯನ ಕೊರಳಿಗೆ ತನ್ನ ಕೈಗಳೆರಡನ್ನೂ ಹಾರದಂತೆ ಹಾಕಿ, ಪುಟ್ಟ ಅವನ ಬಿಳಿಯ ಮೀಸೆ ಪೊದರಿನೊಳಗೆ ಕೈ ಹಾಕಿ ಆಟವಾಡುತ್ತಿದ್ದ. ನೆಪ ಮಾತ್ರಕ್ಕೆ ತೆಳು ಚರ್ಮ ಮುಚ್ಚಿಕೊಂಡು, ನರಗಳ ಬಲೆಯಂತೆ ಕಾಣ್ತಿದ್ದ ಬಲಗೈಯನ್ನು ಸುಕ್ಕು ಹಣೆಯ ಮ್ಯಾಗಿರಿಸಿ ಕಣ್ಣು ಕಿರಿದು ಮಾಡಿ ತಾತಯ್ಯ ಆಕಾಶದ ಕಡೆ ನೋಡಿದ. ಕರಿಯ ಮೋಡಗಳು ಕವಿದುಕೊಂಡು ಬಂದಂಗೆ ಕಾಣಿಸ್ತು. ಮೆಲ್ಲಗೆ ಮಿಂಚು, ಬಳ್ಳಿ ಚೂರಿನಂಗೆ ಅತ್ತಾಗೊಂದು ಸಲ ಇತ್ತಾಗೊಂದು ಸಲ ‘ಫಳಕ್’ ಅಂದಾಗ ಅವನ ಮೈಯೊಳಗೆ ಮಿಂಚು ಹರಿದಂತೆ ಆಯ್ತು. ಗುಡುಗು ಒಂದೆರಡು ಸಲ ಕೇಳ್ಸಿ, ಆ ಬತ್ತಿದ ಕಣ್ಣುಗಳಲ್ಲಿ ಜೀವನೋತ್ಸಾಹ ಮಿಂಚಿ, ಆಸೆಯ ಪಲ್ಲವ ಚಿಗುರಿದಂತಾಯ್ತು… ‘ನೋಡ್ದಾ ಮಗ ಕತ್ತೆ ಮದುವೆ ಮಾಡಿದ್ದು ಫಲ ನೀಡೈತೆ’ ಎಂದು ಪುಟ್ಟನ ಕಡೆಗೆ ತಿರುಗಿದರೆ ಅವನಿರಲೇ ಇಲ್ಲ. ‘ಅರೆ! ಎಲ್ಲಿ ಹೋಯ್ತು ಈ ಹೈದ?’ ಅನ್ನೋವತ್ತಿಗೆ ಅವನಾಗಲೇ ಓಡಿ ಹೋಗಿ, ನಾಗಿ ಜೊತೆ ಕುಂಟುಬಿಲ್ಲೆ ಆಡುತ್ತಿದ್ದ.

ಮಳೆಯ ಕನಸಿನಲ್ಲಿದ್ದ ತಾತಯ್ಯ ಗೆಲುವಿನಿಂದ ನೋಡು ನೋಡ್ತಿದ್ದಂಗೆ ಬಲವಾಗಿ ಗಾಳಿ ಬೀಸಿ ಮೋಡಗಳನ್ನು ಚದುರಿಸಿತು. ನಿರಾಸೆಯಿಂದ ಕೈಚೆಲ್ಲಿ ಹೆಗಲ ಮೇಲಿಂದ ಟವಲು ಜೋರಾಗಿ ಒಂದ್ಸಲ ವದರಿ ‘ಥತ್ ಇದರವ್ನ’ ಅಂತ ಬಯ್ಯಲು ಬಾಯವರೆಗೆ ಬಂದಿದ್ದನ್ನು ತಡೆದು ‘ತೆಪ್ಪಾಯ್ತು ನನ್ನಯ್ಯ, ಮಳೆರಾಯ, ಜನ ಜಾನುವಾರು ಸಾಯ್ತಾ ಅವೆ. ದಯಾ ತೋರ್ಸೋ’ ಎಂದು ಮೇಲೆ ನೋಡುತ್ತಾ ಕೈ ಮುಗಿದು ಮನೆ ಕಡೆ ಹೊರಟ..... ಆದರೆ, ಪುಟ್ಟ ಆಟದ ಪ್ರತಿ ಕ್ಷಣವನ್ನು ಆನಂದದಿಂದ ಅನುಭವಿಸುತ್ತಿದ್ದ.... ಅವ್ವ ಬೆಳಿಗ್ಗೆ ಕೊಟ್ಟಿದ್ದ ಒಣಕಲು ರೊಟ್ಟಿ ಹೊಟ್ಟೆಯಲ್ಲಿ ಕರಗಿ ಹೋಗಿದ್ದರೂ ಜೀವನೋತ್ಸಾಹದಿಂದ ಪುಟಿಯುತ್ತಿದ್ದ.

ತಾತಯ್ಯ ಮನೆಗೆ ಬಂದಾಗ ಕರ ದೇವೀರಿ, ಅದರ ತಾಯಿ ಗಂಗೆ, ಹಸಿವು ಬಾಯಾರಿಕೆಗಳಿಂದ ಸಂಕಟಪಡ್ತಿದ್ದವು. ಸೊಸೆ ಕರೆದು ‘ಲಕ್ಷ್ಮವ್ವ, ಬಾನಿಗೆ ಒಂದಿಷ್ಟು ಸುರಿ ತಾಯಿ, ಒದ್ದಾಡ್ತವೆ ಪಾಪ’ ಎಂದ.

ಲಕ್ಷ್ಮವ್ವ ‘ಕುಡಿಯಾಕೆ ನಮಗೇ ಒಂದೀಟು ನೀರಿಲ್ಲ ಮಾವಯ್ಯ, ಅವಕ್ಕೆಲ್ಲಿ ತರಾನೆ’ ಎಂದು ಒಳಗೆ ಹೊರಟವಳನ್ನು ಕೂಗಿ ‘ಅಂಗನಬ್ಯಾಡ ತಾಯಿ, ಎಂಗಾರ ಮಾಡು, ಎಲ್ಲಾರ ತಂದಾಕು’ ಎಂದ. ಲಕ್ಷ್ಮವ್ವ ‘ನಾನೇನ್ಮಾಡ್ಲಿ ಮಾವಯ್ಯ ಮನೆಯಾಗೂ ಇಲ್ಲ. ಕೊಡ ತಗಂಡು ಹೊಂಟೀನಿ, ಆ ಬಾವಿ ಮನೆ ಎಂಕ್ಟೇಸನ ಮನೆಗೆ. ಅವನ ಮನೆ ಬಾವೀಲಿ ಒಂದೀಟು ನೀರೈತೆ ಅಂತ ಭಾರಿ ಜಂಭ ಮುಂಡೇದ್ಕೆ..... ಒಂದು ಕೊಡಕ್ಕೆ ಐದು ರೂಪಾಯಿ ಕೇಳ್ತಾನೆ ಮಾವಯ್ಯ’ ಎಂದು ಗೊಣಗಾಡುತ್ತಲೇ ಹೊರಟಳು.

ತಾತಯ್ಯ ಹುಲ್ಲು ಹುಡುಕಿ ಹೊರಟ. ಬಡಕಲಾಗಿದ್ದ ದೇವೀರಿ ಕಣ್ಣಲ್ಲಿ ನೀರು ಕಂಡು ಅದರ ಸಂಕಟ ನೋಡಲಾರದೆ ಪುಟ್ಟ ಕರಗಿ ಹೋದ.... ಮೊದಲೆಲ್ಲಾ ಎಷ್ಟ್ ಸಂದಾಗಿ ತನ್ನ ಜೊತೆ ಆಡ್ತಿದ್ದಳು. ಅದರ ಕಪ್ಪು ಕಣ್ಣುಗಳ ಕಂಡ್ರೆ ಪುಟ್ಟಂಗೆ ಬಲೇ ಇಷ್ಟ. ಹಂಗೇ ಕಣ್ಕಪ್ಪ ಅಚ್ಚಿದಂಗೆ ಕಾಣ್ತಾ ಇತ್ತು..... ಅಂಗಳದ ತುಂಬಾ ಅದು ನೆಗೆದಾಡುತ್ತಿದ್ದರೆ ತಾನೂ ಹಂಗೆ ಆಡಲು ಹೋಗುತ್ತಿದ್ದ.... ಈಗ ಅದರ ಸ್ಥಿತಿ ಕಂಡು ತಡೆಯಲಾರದೆ ದೇವೀರಿಯ ಕೊರಳು ತಬ್ಬಿ ಗಳಗಳನೆ ಅತ್ತು ಬಿಟ್ಟ.

ಅವತ್ತು ರಾತ್ರಿ ಒಂದೊತ್ತಲ್ಲಿ ಭರಮಣ್ಣನ ಗೊರಕೆಯ ಸದ್ದು ಚಿತ್ರ ವಿಚಿತ್ರ ಶಬ್ದಗಳನ್ನು ಹೊರಡಿಸುತ್ತ ಆರೋಹಣಕ್ಕೇರಿ ಅವರೋಹಣಕ್ಕಿಳಿಯುತ್ತಿತ್ತು. ಆ ಗೊರಕೆ ಸದ್ದಿಗೆ ಸೂರೇ ಹಾರಿ ಹೋಗುವುದೇನೋ ಅನ್ನಿಸಿ ಪುಟ್ಟನಿಗೆ ಎಚ್ಚರವಾಯಿತು. ಅಮ್ಯಾಕೆ ಕೋಳಿ ಕೂಗುವ ಒತ್ತಾದರೂ ನಿದ್ದೆ ಬಾರದೆ ಒದ್ದಾಡಿದ. ಏನೇನೋ ಯೋಚನೆಗಳು ಮುತ್ಕಂಡು ನಿದ್ದೆಯಿಲ್ಲದಂತೆ ಮಾಡಿದ್ದೊ. ಆ ಪುಟ್ಟ ತಲೆಯಲ್ಲಿ ಅದೆಷ್ಟೋ ಘಟನೆಗಳು ದಾಖಲಾಗಿ, ನೆನಪು ಮರುಕಳಿಸುತ್ತಾ ಹಿಂಸಿಸುತ್ತಿದ್ದವು. ಎಲ್ಲದಕ್ಕಿಂತ ಮಂಚೂರಿನಲ್ಲಿ ಅವತ್ತು ಮಂಚೂರಮ್ಮನಿಗೆ ಕುರಿ ಬಲಿಕೊಟ್ಟಿದ್ದು ಮತ್ತೆ ಮತ್ತೆ ಗೆಪ್ತಿಗೆ ಬಂದು, ಚೆಂಡುವ್ವು ಹಾರ ಹಾಕಿದ್ದ ಕುರಿ ಕತ್ತು ಕತ್ತರಿಸಿ ರಕ್ತ ಕಾಲುವೆಯಂಗೆ ಹರಿಯುತ್ತಿದ್ದುದು ಎಲ್ಲ ನೆಪ್ಪಾಗಿ ಭಯದಿಂದ ಚಡ್ಡಿಯಲ್ಲೇ ಉಚ್ಚೆ ಹೂಯ್ದುಕೊಂಡ. ಕೂಗಿದ ‘ಅವ್ವಾ’ ಅಂತ, ಲಕ್ಷ್ಮವ್ವ ನಿದ್ದೆಗಣ್ಣಲ್ಲೇ ‘ಯಾಕ್ಲಾ ಮಗಾ ಸುಮ್ಕೆ ಮನಿಕ್ಕ ಬಾರ್ದ’ ಎಂದು ಗದರಿ ಮಲಗಿದಳು.

ಬೆಳಗಿನಿಂದ ಸಂಜೆಯವರೆಗೂ ಚಾಕರಿ ಮಾಡಿ ಸೋತಿದ್ದ ಅವಳಿಗೆ ಭರಮಣ್ಣನ ಗೊರಕೆಯಾಗಲಿ, ದೂರದಲ್ಲಿ ಶ್ವಾನಗಳ ಕೂಗಾಟವಾಗಲಿ, ಕಂಠ ಮಟ್ಟ ಕುಡಿದು ಕೆರೆ ಏರಿ ಮ್ಯಾಗೆ ತೂರಾಡುವ ಎಂಕಯ್ಯನ ಹುಚ್ಚು ಮಾತುಗಳಾಗಲೀ ನಿದ್ದೆಗೆ ತೊಡಕಾಗಿರಲಿಲ್ಲ. ಆದರೆ, ಪುಟ್ಟನ ತಲೆಯಲ್ಲಿ ಏನೇನೋ ಯೋಚನೆ ಉಳ ಮುಲಕಾಡಿದಂತೆ, ಉಚ್ಚೆ ಹೂಯ್‍ಕೊಂಡಿದ್ದರಿಂದ ಒದ್ದೆಯಾದ ಚಡ್ಡಿ ತೊಡೆಗೆ ಅಂಟರಿಸುತ್ತಿತ್ತು. ಕಿಟಕಿಯಿಂದ ಗಾಳಿ ಬೀಸಿದಾಗ ಅದರ ಗಬ್ಬುನಾತ ಮೂಗಿಗೆ ಮುತ್ತಿ ‘ಅಯ್ಯಪ್ಪ’ ಅನ್ನುವಂತಾಗುತ್ತಿತ್ತು. ಕೈಯಿಂದ ಮೂಗು ಮುಚ್ಚಿಕೊಂಡು ‘ಥೂ ಬಡ್ಡಿಮಗಂದು ಏನ್ ವಾಸ್ನೆ..... ಥೂಥೂ’ ಅಂತ ಗೊಣಗಿಕೊಂಡ. ಬದಲಾಯಿಸೋಣವೆಂದರೆ ಬಟ್ಟೆ ಕುಕ್ಕೆ ಅಟ್ಟದ ಮ್ಯಾಗೈತೆ. ಗವ್ವಂತ ಕತ್ಲೆ ಬ್ಯಾರೆ, ‘ಅಯ್ಯಪ್ಪ ಭಯ’ ಅಂತ ಹಂಗೆ ಹೊದಿಕೆಯನ್ನು ತಲೆತುಂಬಾ ಕವುಚಿ ಹೆಂಗೋ ಈ ರಾತ್ರಿ ಕಳೆದರೆ ಸಾಕೆಂದು ಆ ಕಡೆ, ಈ ಕಡೆ ಹೊರಳಾಡಿದ.... ಭರಮಣ್ಣ ತನ್ನ ಖಾಸಾ ಗೆಣ್ಯಾ ಕ್ಯಾತೆ ಕಾಳಪ್ಪನ ಮನೆಯಾಗಿ ಗಡದ್ದಾಗಿ ಹಂದಿ ಮಾಂಸ ಹೊಡೆದು, ಕಂಠಮಟ್ಟ ಕಳ್ಳು ಹಾಕಿಕೊಂಡು ಬಂದಿದ್ದರಿಂದ ಅವನು ಈ ಲೋಕದಲ್ಲಿರಲೇ ಇಲ್ಲ.... ಅವನ ಗೊರಕೆ ಸದ್ದು ಕಿವಿಗೆ ಚುಚ್ಚುವಂತಾದಾಗ ಮೊದಲೇ ವಾಸನೆಯ ನರಕದಲ್ಲಿ ಮುಲುಕಾಡುತ್ತಿದ್ದ ಪುಟ್ಟ ‘ಯಾಪಾಟಿ ಗೊರಕೆ ಹೊಡಿತಾನೆ ಈ ಭರಮಣ್ಣಯ್ಯ’ ಎಂದು ಬೈದುಕೊಂಡ.... ತಲೆಯಲ್ಲಿ ತಿರಗ ಏನೇನೋ ಶುರುವಾಯ್ತು.

ಅರಳಿಕಟ್ಟೆ ಮುಂದೆ ಸಭೆ ಸೇರಿ ಅಣ್ಣಯ್ಯಪ್ಪ, ನಾಗಯ್ಯಗೌಡ, ಅಪ್ಪಾಜಪ್ಪ, ಬೋರಯ್ಯ, ತಾತಯ್ಯ ಎಲ್ಲಾ ಮಳೆ ಬರದೆ ಇದ್ದದ್ದಕ್ಕೆ ತಲೆಮ್ಯಾಲೆ ಕೈ ಹೊತ್ತು ಕುಂತಿದ್ದು. ಕತ್ತೆ ಮದುವೆ ಮಾಡುವಾಗ ಹೆಣ್ಣು ಕತ್ತೆ ಜೋಯಿಸಪ್ಪನಿಗೆ ಒದ್ದಿದ್ದು ಎಲ್ಲಾ ನೆಪ್ಪಾಗಿ ಪುಟ್ಟನಿಗೆ ನಗೆ ತಡೆಯಲಾಗಲಿಲ್ಲ. ಆ ಕ್ಷಣ ಭಯ ಮರೆತು ಜೋರಾಗಿ ಮನಸಾರ ನಕ್ಕುಬಿಟ್ಟ. ಕತ್ತೆ ಮದುವೆಯಲ್ಲಿ ಮಾಡಿದ್ದ ಒಬ್ಬಟ್ಟಿನ ಮ್ಯಾಲಿನ ಹಿಟ್ಟು ಕತ್ತೆ ಹಂಗೆ ರಟ್ಟಂಗೆ ಇದ್ದದ್ದು ತಿಂದಿದ್ಕೆ, ಅವನಿಗೆ ಸಣ್ಣಗೆ ಹೊಟ್ಟೆ ವಸಿ ನೋಯಿಸ್ತಿತ್ತು. ಆ ಚೆನ್ನಜ್ಜಿಗೆ ಒಬ್ಬಟ್ಟು ಮಾಡಾಕೆ ಬರಾಕಿಲ್ಲ. ಎಮ್ಮೆ ಚರ್ಮದಂಗೆ ದಪ್ಪ ಹಿಟ್ಟು.... ಥೂ.... ಸಿಟಿಯಿಂದ ಅಪ್ಪಯ್ಯ ಒಂದ ಕಿತ ತಂದಿದ್ನಲ್ಲ.... ಒಳಗೆ ಹೂರಣ ಪೈನಾಗಿತ್ತು.... ಚಡ್ಡಿಯ ವಾಸ್ನೆಗೆ ಮತ್ತೆ ಮುಲುಕಿದ. ಇದ್ದಕ್ಕಿದ್ದಂತೆ ಚಡ್ಡಿಯಲ್ಲಿ ಐದು ರೂಪಾಯಿ ಇರುವುದು ನೆಪ್ಪಾಯ್ತು. ‘ಅಯ್ಯೋ ಅದೂ ತ್ಯಾವ ಆಗೈತೇನೋ.... ವಂದ ತಡ್ಕ ಬ್ಯಾಕಿತ್ತು’ ಎಂದು ಸಂಕಟಪಡುತ್ತ ಕತ್ತಲೆಯಲ್ಲೇ ಜೇಬಿಗೆ ಕೈ ಹಾಕಿ ಒದ್ದೆ ಆಗಿದ್ದ ಐದು ರೂಪಾಯಿ ಆಚೆಗೆ ತೆಗೆದ. ಹಂಗೆ ಅಗಲ ಮಾಡಿ ದಿಂಬಿನ ಕೆಳಗಿಟ್ಟ. ಆ ರೂಪಾಯಿ ನೋಟಿನ ಕತೆ ಗೆಪ್ತಿಗೆ ಬಂದು ತುಂಟ ನಗುವೊಂದು ಅವನ ಮುಖದ ಮೇಲೆ ಸುಳೀತು.

ಹತ್ತು ಬೆರಣಿ ತಟ್ಟಿದ್ದಕ್ಕೆ ಭೇಷ್ ಅಂತ ಬೆನ್ನ ತಟ್ಟಿ ಭರಮಣ್ಣ ದೊಡ್ಡದೊಂದು ಮಾವಿನಹಣ್ಣು ಕೊಟ್ಟಿದ್ದ. ಯಾರಿಗೂ ಕೊಡದೆ ಒಬ್ಬನೇ ಮನಸಾರ ತಿನ್ನಬೇಕೆನಿಸಿ, ಕೆರೆಯ ಬಳಿ ಇದ್ದ ಮಾವಿನ ತೋಪಿಗೆ ಓಡಿದ್ದ. ಬತ್ತಿದ ಕೆರೆಯನ್ನು, ಮುಳುಗುತ್ತಿದ್ದ ಸೂರ್ಯನನ್ನು ನೋಡ್ತಾ ನೋಡ್ತಾ ಓಟೆಯನ್ನು ಚೀಪುತ್ತಲೇ ಇದ್ದಾಗ ಯಾರೋ ನಗುವ, ಪಿಸು ಮಾತಾಡುವ ಸದ್ದು ಕೇಳುಸ್ತು. ಅಂಗೆ ಶಬ್ದ ಬಂದ ಕಡೆ ಸರಿದು ಬಂದಾಗ ಅರೆಬರೆ ನಗ್ನರಾಗಿದ್ದ ಬತ್ತದ ಮಿಲ್ಲಿನ ಮರಿಸ್ವಾಮಿ, ಅಂಗಡಿ ತಿಮ್ಮಿ ಒಬ್ಬರನ್ನೊಬ್ಬರು ಅಪ್ಪಿಕೊಂಡಿದ್ದು ಕಾಣಿಸಿತು.

ಮಾವಿನ ಹಣ್ಣು ತಿಂದ ಖುಷಿಯಲ್ಲಿ ಸಣ್ಣಗೆ ಸಿಳ್ಳೆ ಹಾಕಿದ್ದು ಕೇಳಿ ಮರಿಸ್ವಾಮಿ ನಡುಗಿಹೋದ. ನರಪಿಳ್ಳೆ ಇಲ್ಲವೆಂದುಕೊಂಡರೆ ‘ಇವನೆಲ್ಲಿ ಬಂದ’ ಅಂತ ಅವನನ್ನ ಹತ್ರ ಕರೆದು ‘ನೀನೆಲ್ಲಿ ಕಾಯ್ದುಕೊಂಡಿದ್ದೋ ನಂಗೆ.... ತಗ ಯಾರಿಗೂ ಏಳ್ಬೇಡ.. ಉಸಾರ್’ ಅಂತ ಸ್ವಲ್ಪ ನಯವಾಗಿ, ಸ್ವಲ್ಪ ಬೆದರಿಸಿದಂತೆ ಮಾಡಿ, ಐದು ರೂಪಾಯಿ ಜೇಬಿಗೆ ತುರುಕಿದ್ದ. ಪುಟ್ಟ ಅಷ್ಟು ಕಂಡವನೇ ಅಲ್ಲ. ಏನಿದ್ದರೂ ಒಂದು ರೂಪಾಯಿ.... ಜಾಸ್ತಿ ಅಂದ್ರೆ ಎರಡು ರೂಪಾಯಿ.... ಏನಾದ್ರೂ ಕೆಲಸ ಮಾಡಿಕೊಟ್ಟರೆ ಭರಮಣ್ಣ ಕೊಡುತ್ತಿದ್ದ. ಐದು ರೂಪಾಯಿ ಜೇಬಿಗೆ ಸೇರಿದ್ದೇ ತಡ, ಮುಖ ಇಷ್ಟಗಲವಾಯಿತು ಪುಟ್ಟನಿಗೆ. ‘ಏನಾರ ಮಾಡ್ಕಳ್ಳಿ, ಯಾರ್ಗೂ ಹೇಳಲ್ಲ’ ಅಂತ ಓಡಿ ಮನೆಗೆ ಬಂದಿದ್ದ. ಅಂಥ ಘನವಾದ ಇತಿಹಾಸವುಳ್ಳ ಐದು ರೂಪಾಯಿ ಒದ್ದೆಯಾಗಿದ್ದು ತುಂಬಾ ಬ್ಯಾಸ್ರ ಆಯ್ತು. ‘ಥೂ ಯಾಕಾದ್ರೂ ವಂದ ಮಾಡಿದ್ನೋ ವಸಿ ತಡಕೋಬ್ಯಾಕಿತ್ತು ಥೂ’ ಎಂದು ತನ್ನನ್ನೇ ಐದಾರು ಬಾರಿಯಾದರೂ ಬೈದುಕೊಂಡು ನಾಳೆ ಬಿಸಿಲಲ್ಲಿ ಇಟ್ಟು ರೂಪಾಯಿ ಒಣಗಿಸಬೇಕು, ಇದಕ್ಕೆ ಸಾಬು ಪೆಟ್ಟಿಗೆ ಅಂಗಡೀಲಿ ಏನೇನೈತೋ ಎಲ್ಲ ತಗಂಡು ಬಿಡಬೋದು ಅಂತ ಬೆಳಗಾಗುವುದನ್ನೇ ಕಾದಿದ್ದ...

ಬೆಳಗಿನ ಐದು ಗಂಟೆಯ ಹೊತ್ತಿಗೆ ಸ್ವಲ್ಪ ನಿದ್ದೆಯ ಜೋಂಪು ಹತ್ತಿದ್ದರೂ ಏನೇನೋ ಅವವೇ ತಿರಕ್ಕೊಂಡು ಬಂದು ನಿದ್ದೆ ಕೆಡಿಸ್ತಿದ್ದವು. ಆಮ್ಯಾಕೆ ಎಂಟು ಗಂಟೆ ಹೊತ್ತಿಗೆ ಕಣ್ಣುಜ್ಜುತ್ತ ಪುಟ್ಟ ಎದ್ದು ಹಿತ್ತಲಿಗೆ ಬಂದ. ಎಲ್ಲರೂ ಕೊಟ್ಟಿಗೆಯ ಬಳಿ ಸೇರಿದ್ದು ಕಾಣುಸ್ತು, ಓಡಿದ, ದೇವೀರಿ ಶಾಶ್ವತ ನಿದ್ದೆಗೆ ಸಂದಿತ್ತು. ಏನಾಗಿರಬಹುದೆಂಬುದನ್ನು ಕ್ಷಣಾರ್ಧದಲ್ಲಿ ಊಹಿಸಿದ ಪುಟ್ಟ, ದೇವೀರಿಯ ಕೊರಳು ಹಿಡಿದು ‘ದೇವೀರಿ ದೇವೀರಿ’ ಅಂತ ದೊಡ್ಡ ದನಿ ತೆಗೆದು ಅಳಲಾರಂಭಿಸಿದ.

ಇದಾದ ವಸಿ ದಿನಕ್ಕೆ ಅಪ್ಪರ ಮಳೆ ಸುರೀತು.... ಎಡಬಿಡದೆ ಸುರಿದು ಹೆಜ್ಜೆ ಇಟ್ಟೆಡೆಯೆಲ್ಲಾ ಕೊಚ್ಚೆ, ಕೆಸರು.... ಹಳ್ಳ ಕೊಳ್ಳ ಎಲ್ಲ ತುಂಬಿಹರಿಯಿತು. ‘ಆಕಾಶ ತೂತಾಗೈತೆನೋ ನೋಡು ತಾತಯ್ಯ’ ಅಂತ ಅಚ್ಚರಿಯಿಂದ ಕೇಳಿದ್ದ ಪುಟ್ಟ. ಸುಮಾರು ದಿನ ಮಳೆ ಇಲ್ದೆ ಜೀವ ಕಳಕೊಂಡವರಂಗೆ ಇದ್ದರು ಜನ. ಕರಿಮೋಡ ಕಟ್ಟಿ, ಗುಡುಗು- ಸಿಡಿಲು ಕೇಳಿಸಿ ಕೇರಿ ಜನಗೋಳೆಲ್ಲಾ ಕುಣಿಯಕ್ಕೆ ಶುರು ಮಾಡಿದ್ರು, ದಬ ದಬನೆ ಸುರಿಯಿತು. ಸುರೀತು ಸುರೀತು.... ವಾಟ ಸರಿಯಾಗಿ ಮಾಡದೆ ಇದ್ದ ಮನೆಗಳ ಒಳಗೆಲ್ಲಾ ನೀರೇ ನೀರು. ಗುಡಿಸಲುಗಳು ಕುಸಿದುಬಿದ್ದವು. ತೆಂಗಿನ ಸೋಗೆಯಿಂದ ಗುಡಿಸಲು ಕಟ್ಟಿಕೊಂಡಿದ್ದ ಎಷ್ಟೋ ಮಂದಿ ಪ್ರಾಣ ಉಳಿಸಿಕೊಳ್ಳಲು ಒದ್ದಾಡಿದರು. ತಾತಯ್ಯನ ಕಿರಿ ಮೊಮ್ಮಗ, ನಾಗಿ ಮೊಗ, ಸೋಮಿ ಚಿಕ್ಮೊಗ ಎಲ್ಲಾ ಒಳಗೆ ಸಿಕ್ಕೊಂಡು ಸತ್ತೋದವು. ಮುದುಕಿ ಹಣಮವ್ವ ತುಂಬಿ ಹರಿಯುತ್ತಿದ್ದ ಕೆರೆಯಲ್ಲಿ ಕೊಚ್ಚಿಕೊಂಡೇ ಹೋದಳು. ಹೆಂಚಿನ ಮನೆಗಳವರು ಒಳಗೆ ಸೋರ್ತಾ ಇದ್ದ ಕಡೀಕೆಲ್ಲಾ ಒಂದೊಂದು ಪಾತ್ರೆ ಇಟ್ಕೊಂಡು ಓಡಾಡ್ತಿದ್ರು... ಅದು ತುಂಬೋದ್ನೆ ಕಾಯ್ಕೊಂಡಿದ್ದು ಆಚೆಗೆ ತಕೊಂಡೋಗಿ ಸುರಿತಿದ್ರು. ನೋಡ್ಕಳ್ಳಾದು ಮರುತ್ರೆ ಮನೇಲೆಲ್ಲಾ ನೀರೇ ನೀರು. ಚಾವಣಿ ಹತ್ತಿ ಹಾಳಾಗಿರೋ ಹೆಂಚು ತಗ್ದು ಬ್ಯಾರೆ ಜೋಡ್ಸಾಕೂ ಬುಡ್ನಿಲ್ಲ ಮಳೆ. ಕೊಟ್ಟಿಗೆ ಒಳಿಕ್ಕು ನೀರು ಸುರಿದು ಆ ದನಕರುಗೋಳ್ಳ ಕತೆ ಆ ಶಿವನೇ ಬಲ್ಲ! ತಾತಯ್ಯ ಮನೆ ಕರ ದೇವೀರಿ ಅಂಗೇನೆ ಇನ್ನು ಎಷ್ಟೋ ಜಾನುವಾರುಗಳು ಸತ್ತೋದ್ವು..... ಸಾಲ ಸೋಲ ಮಾಡಿ ಬೀಜ, ಗೊಬ್ಬರ ತಂದು ವ್ಯವಸಾಯದ ಕೆಲಸಕ್ಕೆ ಸುರಿದಿದ್ದ ಮಂದಿ ಸತ್ತಂತೆ ಆದರು. ತೆನೆ ತುಂಬಿ ತೂಗಿ, ಬೆಳೆದವರ ಮನಸ್ಸಿಗೆ ಆನಂದ ತುಂಬುತ್ತಿದ್ದ ಪೈರುಗಳು, ಗಿಡಗಳು ಮಳೆಯ ರಭಸಕ್ಕೆ ನೆಲಕ್ಕೆ ಮಲಗಿದವು. ಎಲ್ಲ ಕಳಕೊಂಡೋರು, ದಿಕ್ಕಿಲ್ಲದೋರು ತಿರುಗಿ ಎಲ್ಲಾ ಕಟ್ಟಿಕೊಳ್ಳಲು ತ್ರಾಣ ಇಲ್ಲದೆ ನಿತ್ರಾಣರಾಗಿ ಊರುಬುಟ್ಟೇ ಹ್ವಾದರು. ‘ಹಳ್ಳಕೊಳ್ಳ ಎಲ್ಲ ಹೆಣ ಹರಿದಾಡಿ ಹೋದವು, ಯಾವಾಗ ಬಂದೆಪ್ಪಾ ಮಳಿರಾಯ?’ ಅಂತ ಕೇಳುವಂಗಾತು.

ಅದೇ ಕೆರೆ ಏರಿಮ್ಯಾಲೆ ತಾತಯ್ಯ ಕುಂತವ್ನೆ, ಅವತ್ತು ಮಳೆಗಾಗಿ ಹಂಬಲಿಸಿದ್ದ, ಮಿಂಚು ಕಂಡ ಕೂಡಲೇ ಮೈಯಲ್ಲೇ ಅದು ಹರಿದಂಗೆ ಉತ್ಸಾಹ ತೋರಿದ್ದ ತಾತಯ್ಯ ತನ್ನ ಮಾತಿಗೆ ನಿಲುಕದ ಪ್ರಕೃತಿ ತತ್ವದ ಮುಂದೆ ಅಸಹಾಯಕನಾಗಿ, ವಿಷಣ್ಣ ವದನನಾಗಿ ಕುಂತಿದ್ದ. ಪುಟ್ಟ ತಾತನ ಮಡಿಲಲ್ಲಿ ಹುದುಗಿಕೊಂಡು ಅಲ್ಲಲ್ಲೇ ಹರಿದಿದ್ದ ಕಂಬಳಿಯ ತೂತಿನೊಳಗಿಂದ ಆಚೆಗೆ ಬೆಳ್ಳ ಹಾಕಿ ಆಟವಾಡುತ್ತಿದ್ದಾನೆ. ಸೊಳೀ, ಸೊಳೀ ಅಂತ ಆಗಾಗ ಮುಲುಕುತ್ತಾನೆ. ಮೌನವಾಗಿ ಕೆರೆ ತುಂಬಿ ಹರಿಯುವುದನ್ನು ನೋಡುತ್ತಾ ಕುಂತಿದ್ದಾನೆ ತಾತಯ್ಯ. ಆಕಾಶದ ಕಡೆ ನೋಡಿದ. ಗದ್ಗದ ದನಿ ಹೊರಬಂತು ‘ಬರದಿದ್ರೆ ಅಂಗೆ, ಬಂದ್ರೆ ಇಂಗೆ, ಈ ಪಾಟಿ ಮಳೆ ಯಾರಿಗೆ ಬೇಕಾಗಿತ್ತು ಸಿವ?’ ಅಂದವನೇ, ‘ನಡೀಲಾ ಪುಟ್ಟ ಓಗಾನ ಏಳೋ’ ಅಂದ. ಆದರೆ, ಪುಟ್ಟ ಕಂಬಳಿ ತೂತುಗಳ ಆಟದಲ್ಲೇ ಮಗ್ನನಾಗಿರುವುದ ಕಂಡು ‘ಬುಡ್ಲಾ ಇರದೆ ಒಂದು ಕಂಬ್ಳಿ, ಲೇ ಕೈಯಿಡಬ್ಯಾಡೋ.... ನೋಡು ಕೈಯಾಕಿ ಕೈಯಾಕಿ ತೂತೆಲ್ಲಾ ಯಾಪಾಟಿ ದೊಡ್ಡದಾಗೈತೆ. ಒಡಿತಿನೀ ನೋಡು’ ಎಂದು ಸಿಟ್ಟಿನಿಂದ ಗದರಿಸಿದ. ತಾತನ ಗದರುವಿಕೆಗೆ ಮೂರು ಕಾಸಿನ ಬೆಲೆಯನ್ನೂ ಕೊಡದೆ ಆಟ ಮುಂದುವರಿಸಿದ್ದ ಪುಟ್ಟ. ಹೊಸ ತೆಂಗಿನ ಸೋಗೆಗಳನ್ನು ಚಾವಣಿಗೆ ಹೊದಿಸುವ ಚಿಂತೆಯಲ್ಲಿದ್ದ ತಾತಯ್ಯ.

ಚಳಿಗೆ ಮುದುರಿಕೊಂಡು ಅಜ್ಜನಿಗೆ ಕಪಿಯಂತೆ ಆತುಕೊಂಡಿದ್ದ ಪುಟ್ಟ ಕಂಬಳಿಯ ದೊಡ್ಡ ತೂತುಗಳಿಂದ ಪಿಳಿಪಿಳಿ ಕಣ್ಣು ಬಿಡುತ್ತಿದ್ದನು. ಅಷ್ಟು ದೂರದಲ್ಲಿ ಏನೋ ಕಂಡವನಂತೆ ‘ತಾತಯ್ಯ ಇಳ್ಸು’ ಅಂದವನೇ ಇಳಿಸುವುದಕ್ಕೆ ಇನ್ನು ಸಮಯವಿರುವಾಗಲೇ ಛಂಗನೆ ಕೆಳಗೆ ನೆಗೆದು ‘ತಾತಯ್ಯ, ಅಲ್ನೋಡು ನಾಗಿ ಮನೇವ್ರು ಊರುಬುಟ್ಟು ಓಗ್ತಾ ಅವ್ರೆ, ಬೇಡ ಅಂತ ಯೋಳು ಬಾ’ ಎಂದು ತಾತಯ್ಯನ ಕೈಹಿಡಿದೆಳೆದಾಗ, ತಾತಯ್ಯ ‘ಲೇ ಬುಡ್ಲಾ, ಆಗ್ಲೇ ಯೋಳಾಯ್ತು, ನಿಂಗಣ್ಣ ಕೇಳಕಿಲ್ಲ ಬುಡ್ಲಾ’ ಎಂದು ಅವನ ಕೈ ಒದ್ರಿ ‘ಅವರವರ ಅಣೆಪಾಡು ಎಂಗೈತೋ ಅಂಗಾಗುತ್ತೆ ಬುಡ್ಲಾ’ ಎಂದ. ಪುಟ್ಟನಿಗೆ ಅಳು ಉಕ್ಕಿಬಂತು. ‘ನಾನು ನಾಗೀನ ಮಾತಾಡ್ಸಿ ಬರ್ತೀನಿ. ನೀನ್ ನಡಿ’ ಎಂದವನೇ ಬಿಲ್ಲಿನಿಂದ ಬಿಟ್ಟ ಬಾಣದಂತೆ ಓಡಿದ.

ನಾಗಿ, ನಾಗಿ ಅಂತ ಒಂದೇ ಸಮನೆ ಕೂಗಿದ.... ಹಿಂದೆಲ್ಲಾ ಆಟವಾಡುವಾಗ ಉತ್ಸಾಹದಿಂದ ಕೂಗುವ ದನಿಗೂ, ಈ ದನಿಗೂ ಅಂತರವಿತ್ತು. ಹತ್ತಿರ ಹೋದಾಗ ನಾಗಿ ತಿರುಗಿ ನೋಡಿದಳು. ಅವನನ್ನು ಕಂಡು ಅವಳಿಗೂ ಅಳು ಉಕ್ಕಿ ಬಂತು. ‘ಪುಟ್ಟ ಬರ್ತೀನಿ’ ಅಂದವ್ಳೇ ಸರಕ್ಕನೆ ಮುಖ ತಿರುಗಿಸಿಕೊಂಡಳು. ಪುಟ್ಟ ಅವಳ ಕೈ ಹಿಡಿದುಕೊಂಡು ‘ನಾಗಿ ಓಗಬ್ಯಾಡ ಕಣೆ’ ಎಂದು ಅಂಗಲಾಚಿದ. ಅವಳು ಅಸಹಾಯಕಳಂತೆ ಅಪ್ಪ ನಿಂಗಣ್ಣನ ಕಡೆ ನೋಡಿದಳು. ನಿಂಗಣ್ಣ ‘ಬಾ ಮಗ... ಬಿರ್‌ನೆ ಕಾಲು ಹಾಕು ಕತ್ತಲಾಯ್ತದೆ’ ಎಂದು ಪುಟ್ಟನ ಕಡೆ ತಿರುಗಿ ‘ಓಗೋ ಪುಟ್ಟಾ.... ನಿಮ್ಮಜ್ಜ ಕಾಯ್ತಾ ಅದೆ....’ ಎಂದ.

ಪುಟ್ಟ ‘ತಡೀ ನಾಗಿ..... ನಿಂಗೆ ಅಂತ ಏನೋ ತಂದೀವ್ನಿ’ ಎಂದು ಚಡ್ಡಿ ಜೇಬಿನೊಳಗಿಂದ ಒಂದು ಹಾಲುಬಿಳುಪಿನ ದುಂಡನೆಯ ಚಪ್ಪಟೆ ಕಲ್ಲು ತೆಗೆದು ‘ತಗ ನಾಗಿ’ ಎಂದು ಕೈ ಚಾಚಿದ ‘ಅಯ್ ಎಷ್ಟ್ ಚಂದಾಗೈತಿ ಬಚ್ಚ’ ಎಂದು ಪುಟ್ಟನ ಕೈಯಿಂದ ತೆಗೆದುಕೊಂಡಳು. ಅವಳ ರೇಶಿಮೆಯಷ್ಟು ನಯವಾದ ಬಿಳಿಯ ಮೊಗದಲ್ಲಿ ದೊಡ್ಡ ನಗೆ ಅರಳಿತು. ಅದು ಮುಂದೆ ಈ ನಗು ಕಾಣಲಾರೆನಲ್ಲ ಎಂದು ಅವನ ಜೀವ ಚಡಪಡಿಸಿತು. ‘ಬರ್ಲಾ ಪುಟ್ಟಾ?’ ಎಂದು ನಾಗಿ ಅಪ್ಪನ ಕೈ ಹಿಡಿದು ಮುಂದಕ್ಕೆ ಹೋದಳು. ಅವಳು ಲಂಗವನ್ನೆತ್ತಿ ಕಣ್ಣೊರೆಸಿಕೊಳ್ಳುತ್ತ ಅಪ್ಪನ ಹಿಂದೆ ನಡೆದಿದ್ದುದು ಅವನ ಕಣ್ಣಿಗೆ ಕಂಡಿತು. ಅವರು ದೂರ ಹೋಗಿ ಚುಕ್ಕಿಯಂತಾಗುವವರೆಗೂ ನೋಡುತ್ತಲೇ ನಿಂತಿದ್ದ ಪುಟ್ಟ ಸಪ್ಪೆ ಮೋರೆ ಹೊತ್ತು ಅಜ್ಜನ ಬಳಿಗೆ ಹಿಂತಿರುಗಿದ.....ಮಳೆ ಧೋ ಎಂದು ಸುರಿಯುತ್ತಲೇ ಇತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು