ವ್ಯಾಕರಣತೀರ್ಥ ಚಂದ್ರಶೇಖರಶಾಸ್ತ್ರಿ

7

ವ್ಯಾಕರಣತೀರ್ಥ ಚಂದ್ರಶೇಖರಶಾಸ್ತ್ರಿ

Published:
Updated:
Prajavani

ಎಪ್ಪತ್ತೆಂಟು ವರ್ಷಗಳ ಹಿಂದೆ ಇದೇ ಧಾರವಾಡದ ನೆಲದಲ್ಲಿ (1940ರಲ್ಲಿ) 25ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಂಘಟಿಸಲಾಗಿತ್ತು. ಆ ಸಮ್ಮೇಳನಾಧ್ಯಕ್ಷರು ‘ವ್ಯಾಕರಣತೀರ್ಥ’ ಚಂದ್ರಶೇಖರ ಶಾಸ್ತ್ರಿಗಳು.

ಕರ್ನಾಟಕದ ಏಕೀಕರಣ ಸಂದರ್ಭದಲ್ಲಿ ‘ಕನ್ನಡ-ಕನ್ನಡಿಗ-ಕರ್ನಾಟಕತ್ವ’ವೆಂದು ಹೋರಾಡುತ್ತಿದ್ದ ಪ್ರಮುಖರಲ್ಲಿ ಚಂದ್ರಶೇಖರ ಶಾಸ್ತ್ರಿ ಸಹ ಒಬ್ಬರು. ಆಲೂರು ವೆಂಕಟರಾಯ, ಮದುವೀಡು ಕೃಷ್ಣರಾಯ, ನಾ. ರಾಜು ಪುರೋಹಿತ ಮೊದಲಾದವರೊಂದಿಗೆ ಏಕೀಕರಣಕ್ಕಾಗಿ ಅವಿರತವಾಗಿ ಹೋರಾಡಿದವರು. ‘ಕನ್ನಡವೇ ಕನ್ನಡಿಗರ ಉಸಿರು, ಕರ್ನಾಟಕದ ಏಕೀಕರಣವೇ ಕನ್ನಡಿಗರ ಜೀವಾಳ’ ಎಂಬ ಘೋಷಣೆಯನ್ನು ನೀಡುವುದರ ಮೂಲಕ ಏಕೀಕರಣ ಹೋರಾಟಕ್ಕೆ ತಾತ್ವಿಕ ನೆಲಗಟ್ಟನ್ನು ಒದಗಿಸಿದ್ದವರು.

ಕರ್ನಾಟಕ ಏಕೀಕರಣ ಹೋರಾಟದ ಕೇಂದ್ರ ಧಾರವಾಡವೇ ಆಗಿತ್ತು. ಧಾರವಾಡವನ್ನು ಕೇಂದ್ರವನ್ನಾಗಿರಿಸಿಕೊಂಡು ಉತ್ತರ ಕರ್ನಾಟಕದ ಹಾಗೂ ಗಡಿಭಾಗಗಳಲ್ಲಿ ತೀವ್ರ ತೆರನಾದ ಕಾರ್ಯಗಳನ್ನು ನಿರ್ವಹಿಸಿದವರು. ಈ ಭಾಗದಲ್ಲಿ ಒಂದಿಲ್ಲೊಂದು ಸಭೆ, ಸಮಾರಂಭಗಳನ್ನು ಸಂಘಟಿಸಿ ಜನರಲ್ಲಿ ಏಕೀಕರಣದ ಬಗ್ಗೆ ಜಾಗೃತಿಯನ್ನುಂಟು ಮಾಡಿದವರು. ಧಾರವಾಡ ಹಾಗೂ ಯಾದಗಿರಿಯಲ್ಲಿ ನಾಡಹಬ್ಬಗಳನ್ನು ಸಂಘಟಿಸಿದವರು. ಏಕೀಕರಣದ ಮಂತ್ರವನ್ನು ತಮ್ಮ ಜೋಳಿಗೆಯಲ್ಲಿ ತುಂಬಿಕೊಂಡು ಕನ್ನಡದ ನಾಡನ್ನು ಜಂಗಮ ಜೋಗಿಯಂತೆ ಅಲೆದವರು. ತಮ್ಮ ಯೌವ್ವನದ ಮಹತ್ವದ ದಿನಗಳನ್ನು ಕನ್ನಡದ ನಾಡು-ನುಡಿಗಾಗಿ ಧಾರೆ ಎರೆದವರು. ಈ ನಾಡು-ನುಡಿ ಬಗ್ಗೆ ಅವರಿಗಿದ್ದ ಜವಾಬ್ದಾರಿಗಳು ಮತ್ತು ಬದ್ಧತೆಗಳು ಅವರನ್ನು ಮನೆ-ಮಕ್ಕಳನ್ನು ಮರೆತು ನಾಡಿಗಾಗಿ ಹೋರಾಡಲು ಪ್ರೇರೇಪಿಸಿತ್ತು.

ಏಕೀಕರಣ ಹೋರಾಟದಲ್ಲಿ ತೀವ್ರವಾಗಿ ತೊಡಗಿಸಿಕೊಂಡಿದ್ದ ಶಾಸ್ತ್ರಿಗಳ ಸಾರ್ವಜನಿಕ ಜೀವನವು, ನಾಡು-ನುಡಿಯ ಚಳವಳಿಯನ್ನು ಮೀರಿ ಶೈಕ್ಷಣಿಕ, ಸಾಮಾಜಿಕ, ಸಾಹಿತ್ಯ ಕ್ಷೇತ್ರಗಳಲ್ಲಿಯೂ ವ್ಯಾಪಿಸಿತ್ತು. ಶಾಸ್ತ್ರಿಗಳು ಸಂಸ್ಕೃತದ ಪ್ರಕಾಂಡ ಪಂಡಿತರಾಗಿದ್ದರು. ಯಾದಗಿರಿ - ಹುಬ್ಬಳ್ಳಿಯ ಸಂಸ್ಕೃತ ಕಾಲೇಜುಗಳ ಪ್ರಾಂಶುಪಾಲರಾಗಿದ್ದರು. ಆದರೆ ಅವರ ಮನಸ್ಸು ಮಾತ್ರ ಕನ್ನಡ ಸಾಹಿತ್ಯ, ನಾಡು-ನುಡಿ ಸೇವೆಗಾಗಿ ಮೀಸಲಿಟ್ಟಿದ್ದರು.

ಕಾಶಿಯಿಂದ ವಿದ್ಯಾಭ್ಯಾಸ ಮುಗಿಸಿಕೊಂಡು ಕರ್ನಾಟಕಕ್ಕೆ ಬಂದಾಗ, ಇಲ್ಲಿಯ ಕನ್ನಡದ ದುಃಸ್ಥಿತಿಯನ್ನು ಕಂಡು ಮಮ್ಮಲ ಮಲಗಿದರು. 22 ತುಂಡಾಗಿದ್ದ ಕನ್ನಡದ ನಾಡನ್ನು ರನ್ನಗನ್ನಡಿಯಾಗಿಸುವ ಛಲದಂಕ ಮಲ್ಲರಾದರು. ಹೈದರಬಾದ್-ಕರ್ನಾಟಕ, ಉತ್ತರ ಕರ್ನಾಟಕದಲ್ಲಿ ಇವರು ಮಾಡಿದ ಕಾರ್ಯಗಳಿಗೆ ಐತಿಹಾಸಿಕ ಮಹತ್ವವಿದೆ.

ಅವಿರತವಾಗಿ ಕನ್ನಡದ ಕಾರ್ಯಗಳನ್ನು ನಿರ್ವಹಿಸುತ್ತಿದ್ದ ಚಂದ್ರಶೇಖರ ಶಾಸ್ತ್ರಿಗಳನ್ನು, 25ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಗಾದೆಗೆ ಕನ್ನಡ ಸಾಹಿತ್ಯ ಪರಿಷತ್ತು ಸೂಚಿಸಿತು. ಆದರೆ ಎ.ಆರ್. ಕೃಷ್ಣಶಾಸ್ತ್ರಿ, ಹರ್ಡೇಕರ ಮಂಜಪ್ಪ, ತುಂಗಭದ್ರ ತಾರನಾಥ, ಆರ್. ಕಲ್ಯಾಣಮ್ಮ ಇವರುಗಳು ತಮ್ಮನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕೆಂದು ಧ್ವನಿ ಎತ್ತಿದ್ದರು. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ಗೆ ಸವಾಲು ಎದುರಾಯಿತು. ಆಗ ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆಯ ಮೂಲಕ ಅಧ್ಯಕ್ಷರನ್ನು ಆಯ್ಕೆ ಮಾಡುವ ತೀರ್ಮಾನಕ್ಕೆ ಬಂದಿತು. ಧಾರವಾಡದ 25ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆದಾಗ ಚಂದ್ರಶೇಖರ ಶಾಸ್ತ್ರಿಗಳೇ ಅಧಿಕ ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರು. ಸಾಹಿತ್ಯ ಪರಿಷತ್ತಿನಲ್ಲಿ ಈವರೆಗೆ ಶಾಸ್ತ್ರಿಗಳೊಬ್ಬರೇ ಚುನಾವಣೆಯ ಮೂಲಕ ಆಯ್ಕೆಗೊಂಡ ಅಧ್ಯಕ್ಷರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸುವರ್ಣ ಮಹೋತ್ಸವ ಹಾಗೂ ಕನ್ನಡ ಸಾಹಿತ್ಯ ಸಮ್ಮೇಳನ ಎರಡು ಒಟ್ಟಿಗೇ ನಡೆಯುತ್ತಿದ್ದುದರಿಂದ, ಧಾರವಾಡದ ಸಾಹಿತ್ಯ ಸಮ್ಮೇಳನಕ್ಕೆ ವಿಶೇಷ ಮಹತ್ವ ಬಂದಿತ್ತು. ವೈ. ನಾಗೇಶ ಶಾಸ್ತ್ರಿಗಳ ಅಧ್ಯಕ್ಷತೆಯಲ್ಲಿ 1933ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ 19ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯದರ್ಶಿಯಾಗಿ ಚಂದ್ರಶೇಖರ ಶಾಸ್ತ್ರಿಗಳು ಸಮ್ಮೇಳನವನ್ನು ಸಂಘಟಿಸಿದ್ದರು. ಅದರಲ್ಲಿ ಕವಿ ಸಮ್ಮೇಳನ ಏರ್ಪಡಿಸಿ, ಮೊಟ್ಟಮೊದಲ ಬಾರಿಗೆ ಕುವೆಂಪು ಅವರನ್ನು ಹುಬ್ಬಳ್ಳಿಗೆ ಕರೆತಂದರು. 1957ರಲ್ಲಿ ಕುವೆಂಪು ಅವರೇ ಮುಂದೆ ಧಾರವಾಡದಲ್ಲಿ ನಡೆದ 34ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾದರು.

ಕರ್ನಾಟಕ ಏಕೀಕರಣ ಹೋರಾಟದಿಂದ ಗೋಕಾಕ್ ಕನ್ನಡ ಚಳವಳಿವರೆಗಿನ ಹೋರಾಟದಲ್ಲಿಯೂ ಪಾಲ್ಗೊಂಡಿದ್ದರು. ಹಂಪಿಯಲ್ಲಿ ಕನ್ನಡ ವಿಶ್ವವಿದ್ಯಾಲಯ ಸ್ಥಾಪಿಸಬೇಕೆಂಬ ಕೂಗು ಕೇಳಿ ಬಂದಾಗ ಶಾಸ್ತ್ರಿಗಳು ಸಹ ಬೆಂಬಲಿಸಿದ್ದರು. ಮುಂದೆ ಕನ್ನಡ ವಿಶ್ವವಿದ್ಯಾಲಯ ಸ್ಥಾಪನೆಯಾದಾಗ ಸಂಸ್ಥಾಪಕ ಕುಲಪತಿಗಳಾಗಿದ್ದ  ಚಂದ್ರಶೇಖರ ಕಂಬಾರರ ಜತೆ ಸಂಪರ್ಕದಿಂದ ಇದ್ದು ಸಲಹೆ - ಸೂಚನೆಗಳನ್ನು ನೀಡಿದ್ದರು. ಕನ್ನಡ ನಾಡು, ನುಡಿ ಬಗ್ಗೆ ಇದ್ದ ಅಭಿಮಾನ ಹಾಗೂ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಕನ್ನಡ ವಿಶ್ವವಿದ್ಯಾಲಯ ಶಾಸ್ತ್ರಿಗಳಿಗೆ ‘ನಾಡೋಜ’ ಪದವಿ ನೀಡಿತ್ತು. ಚಂದ್ರಶೇಖರ ಕಂಬಾರರೇ ಅದನ್ನು ಪ್ರದಾನ ಮಾಡಿದ್ದರು.

ಶಾಸ್ತ್ರಿಗಳು ತಮ್ಮ ಜೀವಿತಾವಧಿಯಲ್ಲಿ ತಪ್ಪದೇ ಎಲ್ಲ ಸಾಹಿತ್ಯ ಸಮ್ಮೇಳನಗಳಲ್ಲಿಯೂ ಭಾಗವಹಿಸಿದ್ದರು. 105 ವರ್ಷ ಬದುಕಿದ್ದ ಶಾಸ್ತ್ರಿಯವರು 1997ರಲ್ಲಿ ನಿಧನರಾದರು. ಕೊನೆಯ ದಿನಗಳನ್ನು ಬಳ್ಳಾರಿ ಜಿಲ್ಲೆಯ ಹಡಗಲಿ ತಾಲೂಕಿನ ತುಂಗಭದ್ರ ತೀರದ ಮಾಗಳ ಗ್ರಾಮದಲ್ಲಿ ಕಳೆದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !