ಶುಕ್ರವಾರ, ಮಾರ್ಚ್ 5, 2021
27 °C
ಸೆಲಿಬ್ರಿಟಿ ಡಿಸೈನರ್‌ ಸಂಜಯ್ ಗರ್ಗ್ ಮಾತು-ಕತೆ

ಫ್ಯಾಷನ್‌ ಗುರುವಿಗೆ ದಶಕದ ಖುಷಿ

ಸುಶೀಲಾ ಡೋಣೂರ Updated:

ಅಕ್ಷರ ಗಾತ್ರ : | |

*ನಿಮ್ಮ ಅಚ್ಚುಮೆಚ್ಚಿನ ಉಡುಪು, ಬಣ್ಣ, ಶೈಲಿ...
ಸೀರೆ. ಇದು ಬರೀ ಒಂದು ದಿರಿಸಲ್ಲ. ಇದೊಂದು ಸಂಪ್ರದಾಯ, ಸಂಸ್ಕೃತಿ. ನೂರಾರು ವರ್ಷಗಳ ಹಿಂದೆಯೂ ಸೀರೆ ಇತ್ತು. ಈಗಲೂ ಇದೆ, ಮುಂದೆಯೂ ಇರುತ್ತದೆ. ಆದರೆ ಸೀರೆಯನ್ನು ನೋಡುವ ದೃಷ್ಟಿಕೋನ, ಶೈಲಿ, ಆದ್ಯತೆಗಳು ಬದಲಾಗುತ್ತ ಹೋಗುತ್ತವೆ. ಒಂದೊಂದು ಪೀಳಿಗೆಯೂ ಸೀರೆಯನ್ನು ನೋಡುವ, ಗ್ರಹಿಸುವ, ತೊಡುವ ಕ್ರಮಗಳು ಭಿನ್ನವಾಗುತ್ತ ಹೋಗುತ್ತವೆ. ನನಗೆ ನೀಲಿ, ಹಸಿರು, ರಾಣಿ ಪಿಂಕ್‌ ಅಚ್ಚುಮೆಚ್ಚು.

*ಸಂಪ್ರದಾಯ ಮತ್ತು ಫ್ಯಾಷನ್‌ ಬಗ್ಗೆ ನಿಮ್ಮ ವ್ಯಾಖ್ಯಾನ?
ಹಾಗೆ ನೋಡಿದರೆ ಫ್ಯಾಷನ್‌–ಟ್ರಡಿಷನ್‌ ಬೇರೆ ಬೇರೆ ಅಲ್ಲ.. ಎರಡೂ ಸ್ಥಿರವಲ್ಲ, ಬದಲಾವಣೆ ಅವುಗಳ ಗುಣ. ಇಂದಿನ ಫ್ಯಾಷನ್‌ ನಾಳೆ ಸಂಪ್ರದಾಯದ ಪಟ್ಟಿಯಲ್ಲಿ ಸೇರಿಕೊಳ್ಳುತ್ತದೆ. ಹಾಗೆಯೇ ಸಂಪ್ರದಾಯ ಆಗಾಗ ಹೊಸರೂಪ ಪಡೆದು ಫ್ಯಾಷನ್‌ ಆಗಿ ಕಾಣಿಸಿಕೊಳ್ಳುತ್ತದೆ.

*ಹೊಸತನ–ಅನನ್ಯತೆಯ ಪರಿಕಲ್ಪನೆಗಳನ್ನು ಎಲ್ಲಿಂದ ಎತ್ತಿಕೊಳ್ಳುತ್ತೀರಿ?
ಹೊಸತನ–ಅನನ್ಯತೆ ಬೇರೆ ಗ್ರಹದಿಂದ ದೊರೆಯುವಂಥದ್ದಲ್ಲ. ನಮ್ಮ ಪ್ರಕೃತಿ–ಸಂಸ್ಕೃತಿಯಲ್ಲಿ ಇರುವಂಥದ್ದು. ಸಾಮಾನ್ಯ ವರ್ಗದ ನನ್ನ ಗ್ರಾಹಕರಿಗೆ ಇಷ್ಟವಾಗುವ, ಅವರ ಮನಸ್ಸಿಗೆ ಹತ್ತಿರವಾಗುವ, ದೇಹಾಕೃತಿಗೆ ಒಪ್ಪುವ ವಿನ್ಯಾಸ, ಬಣ್ಣ, ಶೈಲಿಗಳನ್ನು ಅಲ್ಲಿಂದಲೇ ಪಡೆಯುತ್ತೇನೆ ಮತ್ತು ಅದನ್ನು ಅಷ್ಟೇ ಸರಳವಾಗಿ ಅಳವಡಿಸುತ್ತೇನೆ. 

*ಈ ಹತ್ತು ವರ್ಷಗಳಲ್ಲಿ ಗ್ರಾಹಕರ ಖರೀದಿಯ ಮನೋಭಾವದಲ್ಲಿ ಯಾವ ರೀತಿಯ ವ್ಯತ್ಯಾಸವನ್ನು ಗುರುತಿಸಿದ್ದೀರಿ?
ಗ್ರಾಹಕರು ಹೆಚ್ಚು ಜಾಗೃತರಾಗಿದ್ದಾರೆ ಮತ್ತು ದಿರಿಸಿನ ಗುಣಮಟ್ಟಕ್ಕೆ ಆದ್ಯತೆ ನೀಡುತ್ತಿದ್ದಾರೆ. ಒಂದು ಉತ್ಪನ್ನ/ಉಡುಪಿನ ಇತಿಹಾಸ ಅಥವಾ ಕಥೆಗೆ ಅವರು ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಇದರಿಂದ ಈಗ ವಿನ್ಯಾಸಕರ ಮೇಲಿನ ಜವಾಬ್ದಾರಿಗಳು ಹೆಚ್ಚಿವೆ. ಒಂದು ದಿರಿಸನ್ನು ವಿನ್ಯಾಸ ಮಾಡಿದರಷ್ಟೇ ಮುಗಿಯದು, ಅದರ ಐತಿಹಾಸಿಕ ನಿಲುವು– ಸಮಕಾಲೀನ ಪ್ರೇರಣೆಯೂ ಮುಖ್ಯವಾಗುತ್ತದೆ. ವಿನ್ಯಾಸ ಕುಸುರಿ ಕೆಲಸ. ಕಲಾತ್ಮಕತೆ ಮುಖ್ಯ.

*ವಿನ್ಯಾಸಕರು ಹಾಗೂ ನೇಕಾರರ ನಡುವಿನ ಬಾಂಧವ್ಯ ಈಗ ಹೇಗಿದೆ? 
ನೇಕಾರರು ನಮ್ಮ ಕುಟುಂಬದ ಮುಖ್ಯಸ್ಥರಿದ್ದಂತೆ. ಅವರಿಗೂ ತಾವು ಉದ್ಯಮದ ಮಹತ್ವದ ಭಾಗ ಎನ್ನುವುದು ಗೊತ್ತಿದೆ. ಅವರಿಗೆ ನ್ಯಾಯವಾದ ಮನ್ನಣೆ, ವೇತನ ಸಿಗಬೇಕು. ಈಗೀಗ ಸಿಗುತ್ತಿದೆ. ವಿನ್ಯಾಸಕರಿಗಿರುವ ಅವಕಾಶ, ಗೌರವಗಳು ತಮಗೆ ಸಿಗುತ್ತಿಲ್ಲ ಎನ್ನುವ ಖೇದ ಕೆಲವು ನೇಕಾರರಿಗೆ ಇದೆ. ನನ್ನ ಪ್ರಕಾರ ಅವರೇ ನಮ್ಮ ಗುರು, ಶಿಕ್ಷಕರು. ಯಾವುದೇ ಮಟ್ಟದ ಶೈಕ್ಷಣಿಕ ಅರ್ಹತೆ ಅವರ ಕೌಶಲಕ್ಕೆ, ಅನುಭವಕ್ಕೆ ಸಮವಾಗಲಾರದು.

*ನಿಮ್ಮ ವಿನ್ಯಾಸದ ವೈಶಿಷ್ಟ್ಯಗಳೇನು?
ಸರಳತೆ ಮತ್ತು ಅನನ್ಯತೆ. ಸಾಂಪ್ರದಾಯಿಕ ನೋಟದ ಜೊತೆಗೆ ಸಮಕಾಲೀನ ಸೌಂದರ್ಯವನ್ನು ತುಂಬುವುದು ನನ್ನ ಆದ್ಯತೆ. ನಾನು ಯಾವುದೇ ಹೊಸಗಾಳಿ ಅಥವಾ ಪ್ರವೃತ್ತಿಯ(ಟ್ರೆಂಡ್‌) ಬೆನ್ನು ಹತ್ತಿ ಹೋಗುವುದಿಲ್ಲ. ಹಳೆ ಬೇರಿನ ಮೇಲೆ ಹೊಸತನದ ನಿರಂತರ ಅನ್ವೇಷಣೆ, ವಿಶಿಷ್ಟ ಒಳನೋಟ, ವಿಭಿನ್ನ ದೃಷ್ಟಿಕೋನವಿರುವ ಒಂದು ಶಿಸ್ತುಬದ್ಧ ಪ್ರಕ್ರಿಯೆ ಇದು. 


ಸಂಜಯ್‌ ಗರ್ಗ್‌

ವೈಭೋಗವಿಲ್ಲದ ಪ್ರಸ್ತುತಿಯೇ ಗರ್ಗ್‌ ವೈಶಿಷ್ಟ್ಯ
ರಾಜಸ್ಥಾನದ ಮುಬಾರಕ್‌ಪುರ ಎಂಬ ಸಣ್ಣ ಊರಿನಿಂದ ಬಂದವರು ಸಂಜಯ್‌. ವಿನ್ಯಾಸದ ಬಗೆಗೆ ಗಟ್ಟಿ ಅಡಿಪಾಯವನ್ನು ಒದಗಿಸಿಕೊಟ್ಟಿದ್ದು ಜೈಪುರದ ಐಐಸಿಡಿ ಕ್ರಾಫ್ಟ್ ಶಾಲೆ. ಅವರನ್ನು ಸೃಜನಶೀಲ, ಸಂವೇದನಾಶೀಲ ವಿನ್ಯಾಸಕರನ್ನಾಗಿ ರೂಪುಗೊಳಿಸಿದ್ದು ಎನ್‌ಐಎಫ್‌ಟಿ ಶಿಕ್ಷಣ ಸಂಸ್ಥೆ. ನಂತರ ಸ್ವತಂತ್ರ ವಿನ್ಯಾಸಕರಾಗಿ ಕೆಲ ಯೋಜನೆಗಳಲ್ಲಿ ಕೆಲಸ ಮಾಡಿದರು. ಆದರೆ ಅವರಿಗೆ ಪ್ರಾಥಮಿಕ ಹಂತದಿಂದ ವಿನ್ಯಾಸದ ಅನುಭವವನ್ನು ಮಾಡಿಸಿಕೊಟ್ಟಿದ್ದು ‘ಚಾಂದೇರಿ ಕ್ಲಸ್ಟರ್ ಅಭಿವೃದ್ಧಿ ಕಾರ್ಯಕ್ರಮ’.

ದೇಶದ ನಾನಾ ಭಾಗಗಳ ನೇಕಾರರ ಸಂಪರ್ಕಕ್ಕೆ ಬಂದಿದ್ದು ಆಗಲೇ. ಅವರ ನಿಜವಾದ ಕನಸು ಸಾಕಾರಗೊಂಡಿದ್ದು 2008ರಲ್ಲಿ, ‘ರಾ ಮ್ಯಾಂಗೊ’ ಸ್ಥಾಪನೆಯ ಮೂಲಕ. ಅವರ ವಿನ್ಯಾಸಗಳನ್ನು ಪ್ರದರ್ಶಿಸುವ ರೂಪದರ್ಶಿಯರೂ ಅಷ್ಟೇ. ಯಾವುದೇ ವೈಭೋಗ, ವೈಯಾರಗಳಿಲ್ಲದ, ಸಾಮಾನ್ಯ ಹೆಣ್ಣುಮಕ್ಕಳಂತೆ, ಸಾಮಾನ್ಯ ನೋಟದಲ್ಲಿ ಕಂಗೊಳಿಸುವ ರೂಪದರ್ಶಿಯರು ಸ್ಪರ್ಧೆಗಳಲ್ಲಿ ಖ್ಯಾತನಾಮರನ್ನೇ ಹಿಂದಿಕ್ಕುವುದೂ ಇದೆ.

*
ಯಶಸ್ಸಿಗೆ ಯಾವುದೇ ಸಿದ್ಧ ಸೂತ್ರಗಳಿಲ್ಲ. ನಿಯಮಗಳನ್ನು ಮುರಿಯಿರಿ ಮತ್ತು ಗಡಿಯನ್ನು ತಳ್ಳಿಕೊಂಡು ಮುಂದಡಿ ಇಡಿ. ನಿಮ್ಮ ಕೌಶಲ–ಸಾಮರ್ಥ್ಯಕ್ಕೆ ಪರದೆ ಹಾಕಬೇಡಿ. ಸಂಪ್ರದಾಯಗಳನ್ನು ಅಧ್ಯಯನ ಮಾಡಿ, ಅನುಸರಿಸಿ ಆದರೆ ಅಲ್ಲಿಗೇ ನಿಲ್ಲಬೇಡಿ. ಅದನ್ನು ದಾಟಿಕೊಂಡು ಮುಂದೆ ಹೋಗಿ, ಅಗತ್ಯವೆನಿಸಿದರೆ ಸಂಪ್ರದಾಯ ಮುರಿದು ಹೊಸತನ ಸೃಷ್ಟಿಸಿ.
– ಸಂಜಯ್ ಗರ್ಗ್

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.