ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥೆ: ರಾಜಿ

Last Updated 17 ಜನವರಿ 2021, 4:11 IST
ಅಕ್ಷರ ಗಾತ್ರ

ಆಲದ ಮರದ ಕೆಳಗಿದ್ದ ಚಂದ್ರು ಕೂಗಿದ ಸದ್ದಿಗೆ ತೆವರಿನ ಮೇಲೆ ನಿಂತಿದ್ದ ಅಪ್ಪ ಬಸವಯ್ಯ ಕೈಎತ್ತಿ ಬರುವಂತೆ ಸೂಚಿಸಿದ. ಕಾಲುವೆಯಲ್ಲಿ ರಾಕ್ಷಸ ಗಾತ್ರದ ಹೆಜ್ಜೆಗುರುತುಗಳು ಅಚ್ಚಾದವು. ಹದಿನಾರು ವಯಸ್ಸಿಗೆ ಚಂದ್ರುವಿನ ದೇಹ ಅಗಲವಾಗಿ ಬೆಳೆದಿತ್ತು. ದನಿ ಗಡುಸೆಂದರೆ ಗಡುಸು. ಎಂಟನೇ ಕ್ಲಾಸಿಗೆ ಸ್ಕೂಲು ಬಿಟ್ಟಿದ್ದ. ದನ, ಕರು ಮೇಯಿಸಲು ಶುರುಮಾಡಿ ನೇಗಿಲು ಹಿಡಿಯುವುದನ್ನು ಕಲಿಯುತ್ತಿದ್ದ. ಇನ್ನಿಬ್ಬರು ಸ್ಕೂಲು ಬಿಟ್ಟು ಹೊಲಗದ್ದೆ ನಂಟಿಗೆ ಅಂಟಿಕೊಂಡು ಎಲ್ಲರೂ ಕಾಡುಮಾಳಕ್ಕೆ ದನ, ಕರು ಹೊಡಕೊಂಡು ಹರಟುತ್ತಾ ನಡೆಯುತ್ತಿದ್ದರು. ಕರಿಕಲ್ಲು ಕೆರೆಯ ಅಂಚಿಗಿದ್ದ ರೋಡು ಮಳೆ ಬಿದ್ದರೆ ಕೆಸರಾಗುತ್ತಿತ್ತು. ಮುಂಚೆ ಕೆರೆ ರೋಡಿನಿಂದ ಇಪ್ಪತ್ತೈದು ಮೀಟರು ದೂರಕ್ಕಿತ್ತು. ಹೊಲಗದ್ದೆಗಳ ಮಾರಾಟದಿಂದ ಗಣಿಗಾರಿಕೆ ನೆಲವನ್ನು ವಿಸ್ತಾರಮಾಡಿಕೊಂಡು ರೋಡಿನ ಅಂಚಿಗೆ ಬಂದಿತ್ತು. ಸಣ್ಣ ಸಣ್ಣ ಮೂರು ಕೆರೆಗಳನ್ನು ಒಂದು ಮಾಡಿದ್ದರು. ಕೆರೆ ನೂರು ಮೀಟರ್ ಉದ್ದ, ಆಳ ಅಲ್ಲಲ್ಲಿ ಐದು ಮೀಟರ್‌ನಿಂದ ಇಪ್ಪತ್ತೈದು ಮೀಟರ್‌ವರೆಗೂ ಮುಟ್ಟಿತ್ತು. ಕೆರೆಯೊಳಗೆಲ್ಲ ಕೇಕಿನಂತೆ ಕಲ್ಲುಗಳನ್ನು ಕುಯ್ದು ಅವುಗಳ ಮೇಲೆ ಅಳತೆ ಬರೆದಿದ್ದರು. ವೇಸ್ಟು ಕಲ್ಲುಗಳ ರಾಶಿ ಕೆರೆಯ ಸುತ್ತಲೂ ಇತ್ತು. ಚೂರುಪಾರು ಕಲ್ಲು, ಕಲ್ಲಿನ ಚೆಕ್ಕೆಗಳು, ಅಲ್ಲಲ್ಲಿ ರಂಗೋಲಿ ಪುಡಿ ಹಿಂಟೆಗಳು ಬಿದ್ದಿದ್ದವು. ಎಕ್ಕದೆಲೆ ಗಿಡಕ್ಕೆ ಹಸು ಕಟ್ಟಿ ರಂಗ ಚಡ್ಡಿ ಬಿಚ್ಚಿ ಗಿಡದ ಮರೆಯಲ್ಲಿ ಕೂತಿದ್ದ. ಹಸುಗಳು ಮಾಳದಲ್ಲಿ ಮೇಯುತ್ತಿದ್ದವು. ಗೊಬ್ಬಳಿ ಗಿಡದ ಕೆಳಗೆ ನೆಲ ಕೆದಕುತ್ತಿದ್ದ ನವಿಲುಗಳೆಡೆಗೆ ಪ್ರಸಾದ ಕಲ್ಲೆಸೆದ. ಅವು ಗದ್ದೆಗೆ ಹಾರಿದವು. ಅಷ್ಟು ದೂರಕ್ಕೆ ಕಲ್ಲೆಸೆವ ತಾಕತ್ತಿಲ್ಲದೆ ರಂಗನ ದಿಕ್ಕಿಗೆ ಮಣ್ಣಿನ ಹುಂಡೆ ಎಸೆದ. ಚಡ್ಡಿಯನ್ನು ಕಟ್ಟದೆ ರಂಗನೂ ಕಲ್ಲೆಸೆದ. ನೀರಲ್ಲಿ ಅಲೆಗಳು ಮೂಡಿದವು.

‘ಎಲ್ಲಾ ಕಾಣುಸ್ತು’ ಪ್ರಸಾದ ಹೇಳ್ದ.

‘ಬಾ ನಾನೇ ತೋರುಸ್ತೀನಿ’ ಎಂದ ರಂಗ.

‘ಚಂದ್ರು ಬಡ್ಡೇದ ಎಲ್ಗೋದ’ ಇಬ್ಬರದು ಒಂದೇ ಮಾತು.

‘ಗದ್ದೆಲಿರ್ಬೇಕು, ಬಾ ಅಲ್ಗೆ ಹೋಗವು’ ಇಬ್ಬರು ದನಗಳ ಸದ್ದು ಮಾಡಿ ಹೊರಟರು.

ಮರದ ಬುಡದಲ್ಲಿ ಅಪ್ಪ- ಮಗನ ಬಟ್ಟೆ ನೋಡಿ ‘ಡೇ ಇಲ್ಲೆ ಅವ್ರ ಬಡ್ಡೇಕ’ ಅನ್ನುತ್ತ ಕೆಸರು ಗದ್ದೇಲಿ ಕಾಲಿಟ್ಟರು. ಚಂದ್ರು ಇವರತ್ತ ನೋಡಿ ಹಲ್ಲುಬಿಟ್ಟ. ಅವರೂ ಅಷ್ಟೇ. ಹೆಂಗಸು ನೋವಿನಿಂದ ಚೀರುವ ಸದ್ದು ಬಸವಯ್ಯನ ಕಿವಿಗೆ ತಲುಪಿ ಅವನು ದೂರ ಸರಿದ. ಮೊಬೈಲ್ ಜೇಬಿಗೆ ತುರುಕಿಕೊಂಡ ಪ್ರಸಾದ ಕೆಸರನ್ನು ದಾಟಿ ಬದುವಿಗೆ ಬಂದ. ಅವನಿಂದೆ ರಂಗನೂ ಹೆಜ್ಜೆ ಇಟ್ಟ. ದನಗಳು ಹುಲ್ಲಿಗೆ ಬಾಯಾಕಿದ್ದವು. ಬಸವಯ್ಯನ ತಲೆ ಕೆಟ್ಟಿತ್ತು. ಅದೇ ಚಿತ್ರ ಅವನಲ್ಲಿ ತರಾವರಿಯಾಗಿ ಮೂಡುತ್ತ ಕೋಪ ಹೊಗೆಯಾಡುತ್ತ ಮನಸ್ಸು ವಿಲವಿಲ ಒದ್ದಾಡಿತು. ಮಗನಿಗೆ ಹೇಳಲಿಲ್ಲ. ಮರೆತಂತೆ ಕಲ್ಪಿಸಿಕೊಂಡ. ಸತ್ಯ ಸತ್ಯವೇ ತಾನೆ. ಮಿಂಚಿನಂತೆ ಅದೇ ಚಿತ್ರ ನೆನಪಿಗೆ ಬರುತ್ತಿತ್ತು. ಮನಸ್ಸು ಘಾಸಿಗೊಳ್ಳುತ್ತಿತ್ತು. ತಣ್ಣನೆ ಗಾಳಿ ಮೈ ಸೋಕಿ ತೆವರಿನಲ್ಲಿ ಕೂತು ಆಲದ ಮರ ನೊಡಿದ. ಹಕ್ಕಿಗಳ ಕಚ್ಚಾಟದಲ್ಲಿ ಸೋತದ್ದು ಹಾರಿಹೋಯ್ತು. ಉಳಿದವು ಗೂಡಿಗೆ ಸೇರಿದವು.

ಮಾದಯ್ಯನ ತೋಟದಲ್ಲಿ ಪ್ರಸಾದ, ರಂಗ ಗರಿ ಹಾಸಿಕೊಂಡು ಮಲಗಿ ಮೊಬೈಲ್ ನೋಡುತ್ತಿದ್ದರು. ಕುರಿಗಳ ಮೇಯಿಸುತ್ತಿದ್ದ ಹೆಂಗಸು ಬಳಿ ಬಂದು ಟೈಮ್ ಕೇಳಿದಳು. ಎತ್ತಿಟ್ಟಿದ್ದ ಕಾಯಿಯನ್ನು ಅವಳಿಗೆ ಕೊಟ್ಟ. ಅವಳೂ ಬೇಡ ಎನ್ನಲಿಲ್ಲ. ಈಸಿಕೊಂಡಳು. ಪ್ರಸಾದ ಸೊಪ್ಪು ಕೀಳಲು ಎದ್ದು ಹೋದ. ತೆಂಗಿನ ಮರದಿಂದ ಒಣಗಿದ ಮಟ್ಟೆ ಬಿದ್ದ ಸದ್ದಿಗೆ ರಾಣಿ ತಿರುಗಿದಳು. ರಂಗ ಸನ್ನೆ ಮಾಡಿದ್ದಕ್ಕೆ ನಗುತ್ತ ಹಾಗೆ ಮುಂದೆ ಹೋದಳು.

ಚಂದ್ರುವಿಗೆ ವಿಪರೀತ ಹಸಿವಾಗಿ ಅಪ್ಪನ ಕೂಗಿ ‘ಊಟ’ ಉಣ್ಣಲೇಬೇಕೆಂದ. ಮಧ್ಯಾಹ್ನದ ಊಟ ಮುದ್ದೆ, ಅನ್ನ, ಸಾರು. ಜೊತೆಗೆ ಎರಡು ಈರುಳ್ಳಿ. ಬಸವಯ್ಯ ಮಗನ ಹತ್ತಿರಕ್ಕೆ ಬಂದು ‘ಅವನಿಗೆ ಹೊಡಿಬೇಕು’ ಅಂದ ಮೆಲ್ಲಗೆ. ‘ಯಾರಿಗಪ್ಪ?’ ಚಂದ್ರು ಪ್ರಶ್ನೆ.

‘ರಾಜೇಂದ್ರನಿಗೆ’
‘ಯಾಕಪ್ಪ’
‘ಆ ಬಡ್ಡೇದ.......’
ಮಗ ಯಾಕೆಂದು ಕೇಳುತಲಿದ್ದಾಗ ‘ಆ ಬಡ್ಡೇದ, ನಿವ್ವವ್ವ ಜೊತ್ಗ ಇದ್ದ’ ಅಂದ.

ಚಂದ್ರುಗೆ ಸಿಟ್ಟು ಧುಮುಕುತ್ತಿತ್ತು. ರಾಜಿಗೆ ರಾಜೇಂದ್ರನೊಡನೆ ಸಂಬಂಧವಿತ್ತು. ಅವನ ತೋಳ ತೆಕ್ಕೆಯಲ್ಲಿ ಅವಳು ಅದೆಷ್ಟೋ ಬಾರಿ ಬೆತ್ತಲಾಗಿದ್ದಳು. ಅದು ಕೇರಿಯ ಜನರಿಗೂ ಗೊತ್ತಿತ್ತು. ಗೋಡೆಗಳು ಹೇಳುವಂತಿದ್ದರೆ ಅವೂ ಎಂದೋ ಹೇಳಿಬಿಡುತ್ತಿದ್ದವು. ನೆರೆಹೊರೆಯ ಹೆಂಗಸರ ಹರಟೆಯ ವೇಳೆಯಲ್ಲಿ ‘ಅವನು ಬೇಲಿ ಹಾರಿದ್ದು, ಇವಳು ಕೂಡಿದ್ದು, ಅವನು ಹೋದದ್ದು.’ ಎಲ್ಲವೂ ಚರ್ಚೆಯಾಗುತ್ತ ಬಾಯಿಂದ ಬಾಯಿಗೆ ಹಬ್ಬುತ್ತವೆ. ನೀರಿಗೆ ಬಂದಾಗ, ಬಟ್ಟೆ ಒಗೆಯುವಾಗ, ಕೆರೆಕಡೆ ಹೋಗುವಾಗ ಇಂಥವೇ ಮಾತುಗಳು. ಮೂಗನಂತಿದ್ದ ಬಸವಯ್ಯನಲ್ಲಿ ಅದೇಕೋ ಇತ್ತೀಚೆಗೆ ರೋಷ ಉಕ್ಕಿಬರತೊಡಗಿತು. ಮಗ ಎದೆ ಮಟ್ಟಕ್ಕೆ ಬೆಳೆದ ಮೇಲೆ ಅನೇಕ ಬಾರಿ ಹೆಂಡತಿಗೆ ಬೈದು ತವರಿಗೆ ಕಳಿಸಿದ್ದ. ಮತ್ತೆ ಅವನೇ ಹೋಗಿ ಕರ್ಕೊಂಡು ಬರಬೇಕಾಗಿತ್ತು.

ಹಿತ್ತಲಿನಲ್ಲಿದ್ದ ರಾಜಿಗೆ ಚಾನೆಲ್ ಬಳಿಯಿದ್ದ ರಾಜೇಂದ್ರನ ಸನ್ನೆ ತಿಳಿಯುತ್ತಿತ್ತು. ಮನೆ ಬಾಗಿಲು ಹಾಕಿ ಕೆರೆದಿಕ್ಕು ಹೋಗುವವಳಂತೆ ಹೊರಟಳು. ಕಳ್ಳಿಬೇಲಿ ಮಾತುಕತೆಯಲ್ಲಿ ಅವಳ ಎದೆಯನ್ನು ಮುಟ್ಟಿದ. ದೂರ ನಿಂತಳು ರಾಜಿ. ‘ಇದ್ಯಾಕ ಇವತ್ತು ಈತರ’ ಅಂದನು. ‘ಗಂಡನಿಗೆ ಡೌಟು ಬಂದಿದೆ’ ಕಕ್ಕಿದಳು. ‘ಏನು ಆಗಲ್ಲ ಬಿಡು’ ಕಷ್ಟ ನಿವಾರಕನಂತೆ ಮಾತಾಡಿದ ರಾಜೇಂದ್ರ.

ಸೂರ್ಯ ಹುಟ್ಟಿ ಬೆಳಕು ಚೆಲ್ಲುತ್ತಿದ್ದ. ಕರಿಕಲ್ಲು ಕೆರೆಯ ಬಳಿ ದನ, ಕರು ನಡೆದವು ಮೇವಿಗೆ. ಕುರಿಗಳ ಹಿಂಡು ನೋಡಿ ರಂಗ ಗೊಬ್ಬಳಿ ಮರದತ್ತಿರ ಬಂದ. ರಾಣಿ ಕೂತಿದ್ದಳು. ‘ಕೊಡು ಮತ್ತೆ. ಕಂತಿನವರದು ಕಾಟ ಆಗೋಗಿದೆ’ ಬೇಜಾರಿನ ದನಿಯಲ್ಲಿ ಕೇಳಿದಳು. ‘ಇರೋದೆ ಇಷ್ಟು. ಮುನ್ನೂರು’ ಅವಳ ಕೈಗೆ ಅವನಿಂದ ನೋಟುಗಳು ಜಾರಿದವು. ತೋಟದತ್ತ ಸಾಗಿದರು. ಕಳ್ಳಿಬೇಲಿಯಲ್ಲಿ ಹಕ್ಕಿಗಳ ಮಿಲನ ನಿರಂತರವಾಗಿತ್ತು.

ಗದ್ದೆಯಲ್ಲಿದ್ದ ಬಸವಯ್ಯ ಚಂದ್ರುವಿಗೆ ಬರುವಂತೆ ಹೇಳಿಬಿಡಲು ಮನೆಗೆ ಹೋಗುತ್ತಿದ್ದ ರಾಚಯ್ಯನಿಗೆ ಹೇಳಿದ್ದ. ತಲೆ ಅಲ್ಲಾಡಿಸಿದ ಅವನ ಮೈಯೆಲ್ಲ ಕೆಸರಾಗಿತ್ತು. ಅವನಿಂದಿಂದೆ ಎರಡು ಕುರಿಗಳು ‘ಬಾ ಬಾ’ ಎಂಬ ಅವನದೇ ಸದ್ದಿಗೆ ಓಡುತ್ತಿದ್ದವು. ಕಾಲಿಗೆ ಕಲ್ಲು ಚುಚ್ಚಿದ್ದರಿಂದ ಬಂಡೆ ಮೇಲೆ ಕೂತು ಗಣಿಗಾರಿಕೆಗೆ ಶಪಿಸುತ್ತ ‘ಕೇರಿಯಲ್ಲಿ ಎಂಜಲು ನಾಯಿಗಳಿವೆ. ಅವರಿವರು ತಿಂದು ಬಿಟ್ಟಿದ್ದನ್ನು ತಿನ್ನುತ್ತವೆ. ಗಣಿಗಾರಿಕೆ ನಿಂತುಹೋದರೆ ಅವರುಗಳಿಗೆಲ್ಲ ಹಿಟ್ಟಿಗೆ ಗತಿಯಿಲ್ಲದಂತಾಗುತ್ತದೆ. ಅಂಥವರಿರುವ ಊರಿದು’ ವಿಷಾದ ವ್ಯಕ್ತಪಡಿಸಿದ. ಕಾಲುವೇಲಿದ್ದ ಎಮ್ಮೆ ನೀರಬಿಟ್ಟು ಏಳಲಿಲ್ಲ. ಏಟುಗಳು ಬಿದ್ದರು ಒಂದಿಂಚು ಕದಲದೆ ಹಾಗೆ ಇತ್ತು. ಕೋಲು ಮುರಿಯಿತಷ್ಟೇ. ನೀರು ಕೊಳಕಾಯಿತು. ಉಳಿದ ಎಮ್ಮೆಗಳನ್ನು ಮೂಗ ಮಾಳಕ್ಕೆ ಅಟ್ಟಿದ.

ಬ್ಯಾಗು ಹಿಡಿದು ಚಂದ್ರು ಗದ್ದೆಗೆ ಬಂದ. ಹೊಟ್ಟೆ ಒತ್ತಾಯಕ್ಕೆ ಗಬಗಬ ಮುಂದೆ ತಿಂದು ಅನ್ನ ಹಾಕಿಸಿಕೊಂಡ. ಹಕ್ಕಿಗಳ ಸದ್ದು ಇಂಪಾಗಿತ್ತು. ಬಸವಯ್ಯನಿಗೆ ನಿದ್ದೆ ಬಂದಂತಾಗಿ ಮರದ ಕೆಳಗೆ ಟವಲ್ ಹಾಸಿದ. ಚಂದ್ರು ಕಾಲುವೆ ಅಂಚಿನ ತೆವರಿನಲ್ಲಿ ನಡೆಯುತ್ತಿದ್ದ. ಕಾಲುವೆ ಬಿಲಗಳಲ್ಲಿ ನಳ್ಳಿಗಳು ಇಣುಕಿದ್ದವು.

ಸೂರ್ಯ ಕರಗುತಲಿದ್ದ. ಆಕಾಶ ಕೆಂಬಣ್ಣವಾಗಿತ್ತು. ಬಸವಯ್ಯ ಮಗನನ್ನು ಕರೆದು ಪಿಸುಗುಟ್ಟಿದ. ಮಗ ತಲೆಯಾಡಿಸಿ ಬೇಲಿಗೆ ಕೈಹಾಕಿದ. ಗಾಡಿ ಗೂಟ ಸಿಕ್ಕಿತು. ಅದಕ್ಕಿಂತ ದಪ್ಪನೆಯ ದೊಣ್ಣೆ ಅಪ್ಪನಲ್ಲಿತ್ತು. ಹೊಂಚು ಹಾಕಿರುವಂತೆ ಯಾರಿಗಾದರೂ ತಿಳಿಯುವುದಿಲ್ಲ. ಅಷ್ಟು ಸ್ವಾಭಾವಿಕವಾಗಿ ಗದ್ದೆ ಕೆಲಸದಲ್ಲಿ ತೊಡಗಿದ್ದರು.

ಗದ್ದೆಗೆ ಹೋಗಿ ಬರುವುದು ರಾಜೇಂದ್ರನಿಗೆ ಮಾಮೂಲು. ದಿನಕ್ಕೆರಡು ಬಾರಿ ಗದ್ದೆಯ ಸಮೀಪ ಸುಳಿದಾಡುತ್ತ ಸಂಜೆ ಹೊತ್ತಿಗೆ ಮನೆ ದಾರಿ ಹಿಡಿವ. ಅವನ ಚಲನವಲನ ಗಮನಿಸಿದ್ದ ಅಪ್ಪ-ಮಗ ಕಾದಿದ್ದರು. ಮುಸ್ಸಂಜೆಯಾಗಿ ಕತ್ತಲು ಬಲಿಯುತ್ತಿತ್ತು. ಬೈಕ್ ಸದ್ದು ಕೇಳಿ ಜಾಗೃತಗೊಂಡವರು ಮರದಿಂದೆ ಅವಿತಿದ್ದರು. ಬೈಕ್ ಸ್ಪೀಡ್ ಇಪ್ಪತ್ತರಷ್ಟಿತ್ತು. ಕಲ್ಲೆಸೆದ ಚಂದ್ರು ರಾಜೇಂದ್ರನ ಬೆನ್ನಿಗೆ ಎರಡೇಟು ಬಿಗಿದ. ಬಸವಯ್ಯ ತೋಳಿಗೆ ರಪ್ಪರಪ್ಪನೆ ಬಿಡುವಿಲ್ಲದೆ ಬಾರಿಸಿದ. ಹೆಂಗೋ ಅಪ್ಪ-ಮಗನನ್ನು ನೂಕಿ ರಾಜೇಂದ್ರ ತಪ್ಪಿಸಿಕೊಂಡ. ಅವನ ಅಜ್ಜಿ ಕಂಬಕ್ಕೆ ಒರಗಿ ಅಳುತ್ತಿದ್ದರೆ, ಹೆಂಡತಿ ಸುಮತಿ ಯಾರನ್ನೋ ಟಾರ್ಗೆಟ್ ಮಾಡಿ ಬೈಯುತ್ತಿದ್ದಳು. ನೆರೆಯವರು ಎಲ್ಲಿ? ಯಾವಾಗ? ಹೇಗೆ? ಎಂದು ವಿವರಿಸಿ ಹೇಳುವಂತೆ ಹಿಂಸೆ ನಿಡುತ್ತಿದ್ದರು. ಹೇಳಿದ್ದನ್ನೇ ಅವನು ಎಷ್ಟು ಸಾರಿ ಹೇಳುತ್ತಾನೆ. ನಿಂತಿದ್ದವರು ಅಂದದ್ದಕ್ಕೆಲ್ಲ ತಲೆಯಾಡಿಸುತ್ತಿದ್ದ. ಇಡಿ ಕೇರಿಗೆ ವಿಷಯ ಮುಟ್ಟಿ ಗಂಡಸರು, ಹೆಂಗಸರು, ಯುವಕರು ಎನ್ನದೇ ಎಲ್ಲರೂ ಇದೊಂದೆ ಮಾತನ್ನು ಸವೆಸುತ್ತ ಅವರಿಗವರೇ ಕುತೂಹಲ ಉಂಟು ಮಾಡಿಕೊಳ್ಳುತ್ತಿದ್ದರು.

ಚಾವಡೀಲಿ ಈ ವಿಷಯ ಪ್ರಸ್ತಾಪವಾಗಿ ಕೂತಿದ್ದವರೆಲ್ಲ ಎದ್ದು ಹೋದಮೇಲೆ ಮೋಟು ಬಿಡಿಗಳಷ್ಟೆ ಉಳಿದವು. ಹಳೆಯ ಕೆಟ್ಟಿದ್ದ ರೇಡಿಯೋ ಅದೇ ಮರದ ಪೆಟ್ಟಿಗೆಯಲ್ಲಿತ್ತು. ಒಂದು ಕಾಲಕ್ಕೆ ಅದು ಬೀದಿಯ ಎಲ್ಲರ ಆಸ್ತಿಯಾಗಿತ್ತು. ಹಾಡಿಗೆ, ಹವಾಮಾನ ವರದಿಗೆ, ಮತ್ತು ಇನ್ನಿತರ ಸುದ್ದಿಗಳಿಗೆ.

ಚಾವಡೀಲಿ ಬೆಳಿಗ್ಗೆ ನ್ಯಾಯಕ್ಕೆ ಸೇರಬೇಕೆಂದು ಸಿದ್ದಯ್ಯ ಸಾರಿದ್ದ. ರಾಜಿ ಮುನಿಸಿಕೊಂಡಿದ್ದಳು. ಮಗನನ್ನು ಸಹ ನೋಡಲಿಲ್ಲ. ಚಂದ್ರುವಿನಲ್ಲಿ ಬೇಜಾರು, ನೋವು, ಸಂಕಟ. ಬಸವಯ್ಯ ಕ್ಯಾಕರಿಸಿ ಉಗಿಯುತ್ತ ‘ನಿಂಗೆ ನಾನು ಸಾಕಾಯ್ತ ಇರ್ಲಿಲ್ವ? ಬಡ್ಡೇ ನಿನ್ನ ಸುಮ್ನ ಬುಟ್ಟನಾ? ಕತ್ನ ತರ್ದು ಊರ ಬಾಗುಲ್‍ಗ ನೇತಾಕ್ತೀನಿ’ ತನ್ನೆಲ್ಲ ಪೌರುಷವನ್ನೆಲ್ಲ ಕಕ್ಕಿದನು. ಮಗ ಸದ್ದು ಬರದಂಗೆ ಎದ್ದು ಹೊರಕ್ಕೆ ನಡೆದ. ದೇವಸ್ಥಾನಕ್ಕೆ ಹೋಗುತ್ತಿದ್ದ ಶಿವಯ್ಯ ಹಲ್ಲಿಗೆ ಕಡ್ಡಿ ಚುಚ್ಚುತ್ತಿದ್ದ. ರಗ್ಗು ಅವನ ಹೆಗಲ ಮೇಲೆ, ಚಾಪೆ ಎಡ ಕಂಕುಳಿನಲ್ಲಿತ್ತು.

ಮಬ್ಬಿಗೆ ಜನ ಚಾವಡಿ ಮುಂದೆ ಜಮಾಯಿಸಿದ್ದರು. ಯಜಮಾನರು, ಮುಖಂಡರು ಗುಂಪಿನ ಮಧ್ಯೆ ಕೂತರು ಚಾಪೆಯ ಮೇಲೆ. ಬಸವಯ್ಯ ಎದ್ದು ‘ಇದಿಷ್ಟು ಸ್ವಾಮಿ ನಡ್ದಿದ್ದು’ ಅಂದ. ಮುಖಂಡ ಬೀಡಿ ಸೇದುತ್ತಲೇ ‘ಯಾಕಪ್ಪ ಹೊಡುದ್ರಿ’ ಅನ್ತಲೇ ನಿಂತಿದ್ದವರಲ್ಲಿ ಗುಸುಗುಸು ಆರಂಭವಾಯ್ತು. ‘ನಮ್ ಮನೆ ಫೋನಿಗೆ ಕಾಲ್ ಮಾಡಿದ್ದ ಸ್ವಾಮಿ.’ ಹೇಳಿದ ಬಸವಯ್ಯನಲ್ಲಿ ಕೆಲವು ವಿಷಯಗಳು ಆಚೆಗೆ ಬರಲಿಲ್ಲ. ತನ್ನ ಹೆಂಡತಿಯದ್ದು ತಪ್ಪಿದ್ದಾಗ ರಾಜೇಂದ್ರನನ್ನೇ ದೂರುವುದು ಅವನಿಗೆ ಸಾಧ್ಯವಾಗಲಿಲ್ಲ. ‘ಕರೆ ಮಿಸ್ಸಾಗು ಬಂದಿರಬಹುದು. ಅಷ್ಟಕ್ಕೆ ಹೊಡೆಯೋಕಾಗುತ್ತ’ ಮಾದೇವ ಪ್ರಶ್ನೆ ಎಸೆದ. ಚಂದ್ರು ಹೊರಡಿಸಿದ ಸದ್ದಿಗೆ ಗುಂಪಲ್ಲಿ ಮೌನ ಆವರಿಸಿತು. ಅವನ ಹೇಳಿಕೆ ಅಸ್ಪಷ್ಟವಾಗಿತ್ತು. ಅರಿವಿಗೆ ಬಂದಿದ್ದಷ್ಟು ಹೇಳಿದ್ದ. ಅವ್ವನ ಬಗ್ಗೆ ಮಗ ಇನ್ನೇನು ತಾನೆ ಹೇಳಬಹುದು. ಪ್ರಶ್ನೆಗಳು ರಾಜೇಂದ್ರನತ್ತ ತಿರುಗಿದವು. ಹೆಚ್ಚುಮಂದಿ ಒಪ್ಪುವಂತ ಸಮಜಾಯಿಷಿಯನ್ನೇ ಹೇಳಿದ. ರಾಜಿಯ ಬಗ್ಗೆ ಗುಂಪುಗಳಲ್ಲಿ ಚರ್ಚೆಯಾಗುತ್ತ, ‘ಹಾದರಗಿತ್ತಿ’ ಎಂಬ ಮಾತು ಕೇಳಿಬಂತು. ‘ಮೊನ್ನೆ ರಾತ್ರಿ ರಾಜೇಂದ್ರ ನನ್ನ ಮನೆಯಲ್ಲಿದ್ದ. ನಾನು ಹೋದ ಗಳಿಗೆ ಅವನು ಗಲಿಬಿಲಿಗೊಂಡು ತನ್ನನ್ನು ಬಲವಾಗಿ ತಳ್ಳಿ ಓಡಿಹೋದ’ ಮೊನಚಾದ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲಾಗದೇ ಬಸವಯ್ಯ ಕೊನೆಗೂ ಹೇಳಿಬಿಟ್ಟ. ಜನರೆಲ್ಲರೂ ನಕ್ಕಿ, ‘ಇದನ್ನ ಮೊದಲೇ ಹೇಳಿದ್ದರೆ ವೇಸ್ಟ್ ಮಾತುಗಳು ಇರುತ್ತಿರಲಿಲ್ಲ’ ಎಂದಾಗ ಚಂದ್ರುವಿಗೆ ಬೇಜಾರಾಯಿತು. ‘ನೀ ಯೋಳದು ಯಾ ತರ್ಕ್ಯಾ ಬಸ್ವ’ ಯಜಮಾನ ನೀಲಯ್ಯನ ಮಾತು ಎಲ್ಲರಲ್ಲೂ ನಗು ಉಕ್ಕಿಸಿತು. ತುಂಡೈಕ್ಳ ಗುಂಪು ಅತ್ತಗಿತ್ತಗ ನುಗ್ಗಿತು. ನಿಂತಿದ್ದೋರೆಲ್ಲ ಒಂದೇ ಬಾಯಾಗಿ ‘ಇನ್ನೇನ ತೀರ್ಮಾನ ಮಾಡ್ಬುಡಿ’ ಎಂದರು.

ಮುಖಂಡರ ತೀರ್ಮಾನದಂತೆ ಇಬ್ಬರಿಗೂ ತಪ್ಪು ಬಿದ್ದಿತು. ಜೇಬಿನಲ್ಲಿದ್ದಷ್ಟು ಮಡಗಿ ರಾಜೇಂದ್ರ ಕೈಮುಗಿದು ಸೈಡಿಗೆ ಬಂದ. ಅವನಂತೆ ಬಸವಯ್ಯನೂ ಮಾಡಿದ. ಸುಮಾರು ಹೊತ್ತಿಂದ ಕೂತಿದ್ದವರೆಲ್ಲ ಎದ್ದು ಮೈಮುರಿದರೆ, ಕೆಲವರು ಧೂಳು ಒರೆಸಿಕೊಂಡರು. ಚಾವಡಿಯಿಂದ ಬಂದವರನ್ನು ಹೆಂಗಸರು ಕೆಣಕುತ್ತ, ನ್ಯಾಯದ ತೀರ್ಮಾನ ಕೇಳಿದರು. ಹಟ್ಟಿಗೆ ಬಂದ ಬಸವಯ್ಯ ಸಪ್ಪಗಿದ್ದ. ರಾಜೀಯಲ್ಲಿ ಕೋಪ ಉರಿಯುತ್ತಿತ್ತು. ಜೋರು ಮಾತಾಡಿ ಜಗಳ ತೆಗೆದಳು. ಬಸವಯ್ಯ ಉಸಿರೆತ್ತದೆ ಕುಳಿತುಕೊಂಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT