ಸೋಮವಾರ, ಮಾರ್ಚ್ 30, 2020
19 °C

ಕಥೆ | ಅನ್ನಕ್ಕೆ ಸತ್ತುದು ಕೋಟಿ

ದುಡ್ಡನಹಳ್ಳಿ ಮಂಜುನಾಥ್ Updated:

ಅಕ್ಷರ ಗಾತ್ರ : | |

‘ಮುಂಡೆ ಆಸ್ತಿ ಬೇಕೇನ್ರೋ, ಮುಂಡೆ ಮಕ್ಕುಳ್ರಾ’.....

ಯಾವ್ಯಾವ ಮರದಲ್ಲಿ ಯಾವ್ಯಾವ ಹಕ್ಕಿ ಪಕ್ಷಿ ಮಲಗಿದ್ದವೋ ಅವು ಅಲ್ಲೇ ಬೆಚ್ಚಿದವು, ಯಾವ್ಯಾವ ಬಿಲದಲ್ಲಿ ಯಾವ್ಯಾವ ಹುಳ ಹುಪ್ಪಟೆ ಒರಗಿದ್ದವೋ ಅವು ಅಲ್ಲೇ ಬೆದರಿದವು. ಎಳೆಯ ಮಕ್ಕಳು ಅವರ ಅವ್ವಂದಿರನ್ನು ತಬ್ಬಿದವು, ಅವ್ವಂದಿರು ಅವರ ಗಂಡಂದಿರನ್ನು ತಬ್ಬಿದರು, ಗಂಡಂದಿರು ‌‘ಇವತ್ತೇನು ಹೊಸದಾಗಿ ಕೇಳ್ತಿದೀಯಾ ಹೆದರೋಕೆ, ಆ ಸಾಕಮ್ಮಜ್ಜಿದು ದಿನಾಲೂ ಇದ್ದದ್ದೆ ಅಲ್ವಾ, ಮನಿಕಳೆ ದೂರ’ ಎಂದು ನಿದ್ದೆಗಣ್ಣಲ್ಲೇ ಬೈದರು.

ಬೆಳಗಾಗುತ್ಲೆ ಅರಕೆರೆಯ ಜನ ತಮ್ಮಪಾಡಿಗೆ ತಾವು ಹೆಂಗುಸ್ರಾದರೆ ಕಡ್ಡಿಪುಳ್ಳೆ ಮುರಿದು ಒಲೆ ಹತ್ಸಿ ಟೀ ಕಾಯ್ಸದು, ಗಂಡುಸ್ರಾದ್ರೆ ದನಕರಗಳ್ನ ಆಚೆ ಗೊಂತಿಗೆ ಕಟ್ಟಿ ಕೊಟ್ಟಗೇಲ್ಲಿರೋ ಸಗಣಿನಾ ಕಸದ ಮಂಕ್ರಿಗೆ ತುಂಬದು, ವಯಸ್ಸಿನ ಹುಡುಗೀರು ಹಟ್ಟಿ ಬಾಗ್ಲುಗೆ ನೀರು ಹಾಕೋದು, ಹುಡುಗ್ರು ಅಳ್ಳೀ ಮರದತಾವ ನಿಂತ್ಕಂಡು ಬಿಸಿಲು ಕಾಯ್ಸದು ಮಾಡ್ತಿದ್ರು. ಹಳೇ ಮುದುಕಾ ಮುದುಕೀರು ಅದು ಮಾಡಿದ್ರೆ ಇದ್ಯಾಕೆ ಮಾಡ್ಲಿಲ್ಲ, ಇದು ಮಾಡಿದ್ರೆ ಅದ್ಯಾಕೆ ಮಾಡ್ಲಿಲ್ಲ ಅಂತ ಮನೇಲಿರೋರಿಗೆ ಬೈಕಂಡು ಕುಂತಿದ್ರು. ರಾತ್ರಿಯ ಕೂಗು ಅವರ‍್ಯಾರಿಗೂ ನೆನಪೇ ಇರಲಿಲ್ಲ. ಹಟ್ಟಿ ಮುಂದೆ ಸೌದೆ ಮುರೀತಿದ್ದ ಚೌಡಮ್ಮಳು ಸಾಕಮ್ಮಜ್ಜಿ ಮನೆ ಬಾಗ್ಲು ಇನ್ನೂ ತೆಗಿದೆ ಇರೋದು ನೋಡಿ ತನ್ನ ಸೊಸೆನ ಕರೆದು ‘ಲೇ ರತ್ನಿ ಆ ಸಾಕಮ್ಮಜ್ಜಿ ಇನ್ನೂ ಬಾಗ್ಲು ತೆಗೆದಿಲ್ಲ ಕಣೆ, ವಸಿ ಹೋಗಿ ನೋಡೆ, ಏನಾದ್ರೂ ಹೆಚ್ಚು ಕಡಿಮೆ ಆಯ್ತೆನೋ’ ಅಂದವಳಿಗೆ ತನ್ನತ್ತೆ ನಿಂಗವ್ವನ ನೆನಪಾಯ್ತು. ಹಿಂಗೆ ಸಾಕಮ್ಮಜ್ಜಿ ಏಳದು ತಡ ಆದಾಗೆಲ್ಲ ನಿಂಗವ್ವ ‘ಲೇ ಚೌಡಿ ಯಾಕೋ ಆ ಸಾಕವ್ವ ಇನ್ನೂ ಬಾಗ್ಲು ತೆಗೆದಿಲ್ಲ ಕಣೆ, ವಸಿ ಹೋಗಿ ನೋಡು. ಏನಾರ ಹೆಚ್ಚು ಕಡಿಮೆ ಆಯ್ತೆನೋ. ಗಂಡ ಮಕ್ಳು ಇಲ್ದಿರೋ ದರವೇಸಿ, ಏನಾದ್ರೂ ಆದ್ರೆ ಮನೆ ಮುಂದೆ ಇರೋ ತಪ್ಗೆ ನಾವೇ ಮಾಡ್ಬೇಕು’ ಅಂತಿದ್ಲು. ಹಿಂಗೆ ಹೇಳಿ ಹೇಳಿ ಒಂದಿನ ನಿಂಗವ್ವನೇ ಮಲಗಿದ್ದಾಗ ಹೆಚ್ಚು ಕಡಿಮೆ ಆಗಿ ಹೊಂಟೋಗಿದ್ಲು. ಬಾಗ್ಲು ತಟ್ಟಕೇ ಅಂತ ಹೋಯ್ತಿದ್ದ ಸೊಸೆನ ಕೂಗಿ ‘ಏನೂ ಬ್ಯಾಡ ನೀನು ವಳಿಕೋಗಿ ಕೆಲ್ಸ ನೋಡು. ಆ ಹಾಳು ಮುದುಕಿ ಸಾವಾಸನೇ ಬ್ಯಾಡ. ಎಲ್ಲಾರ್ಗೂ ವಯಸ್ಸಾಗುತ್ಲೆ ಮರುವು ಜಾಸ್ತಿ ಆಯ್ತದಂತೆ. ಒಬ್ಬೊಬ್ರಿಗೆ ತಮ್ ಮನೆ ಎಲ್ಲದೆ ಅಂತ ಮರೆತೋಯ್ತದೆ, ಒಬ್ಬೊಬ್ರಿಗೆ ತನ್ನ ಹೆಸರು ಮರೆತೋಯ್ತದೆ, ಈ ಮುದುಕಿಗೆ ಸಾಯದೆ ಮರೆತೋಗದೆ. ಯಾವಾಗಾದ್ರೂ ಎದ್ದೇಳ್ಳಿ’ ಅಂತ ಸೊಸೆನ ಒಳಿಕೆ ಕಳ್ಸಿ, ಸೌದೆ ಮುರ್ಕಂಡು ತಾನೂ ಹೋದ್ಲು.

ಹೊತ್ತು ಒಂದಾಳುದ್ದ ಮೇಲಕ್ಕೆ ಬಂದಮೇಲೆ ಸಾಕಮ್ಮಜ್ಜಿ ತನ್ನಷ್ಟೇ ಜೀರ್ಣವಾಗಿದ್ದ ಬಾಗಿಲನ್ನು ನಿಧಾನಕ್ಕೆ ತೆಗೆದು, ಪಿಚ್ಚರಿನಲ್ಲಿ ಹೀರೋ ತೋರಿಸುವಂತೆ ಮೊದಲಿಗೆ ತನ್ನ ಬಲಗೈಯನ್ನು ಬಾಗಿಲ ಚೌಕಟ್ಟಿನ ಮೇಲಿರಿಸಿ, ಆಮೇಲೆ ಬಲಗಾಲನ್ನು ಕತ್ತಲಿನಾಳದಿಂದೆತ್ತಿ ಹೊರಗಿನ ಬೆಳಕಿಗಿಟ್ಟಳು. ಕೊನೆಯದಾಗಿ ರಾಚುತ್ತಿದ್ದ ಬಿಸಿಲಿಗೆ ಅಡ್ಡಲಾಗಿ ಎಡಗೈಯನ್ನು ಹಣೆಯ ಮೇಲಿಟ್ಟುಕೊಂಡು ಇಡೀ ಮೈಯನ್ನು ಹೊರಗೆ ತಂದು ನಿಲ್ಲಿಸಿದಳು. ಬೀದಿಯಲ್ಲಿ ನಿಂತು ಆ ತುದಿಯಿಂದ ಈ ತುದಿಯವರೆಗೆ ಒಮ್ಮೆ ಕಣ್ಣಾಡಿಸಿದಳು. ತಾನು ನೋಡುವುದಕ್ಕಿಂತ ಇನ್ನೊಂದು ಬೆಳಗನ್ನು ನಾನು ಕಂಡೆ ಅನ್ನುವುದನ್ನು ಊರವರು ನೋಡಬೇಕೆಂಬುದು ಅವಳ ಉದ್ದೇಶವಾಗಿತ್ತು.

‘ಯಾಕೇ ಮುದುಕಿ ಹೊತ್ತು ನೆತ್ತಿಗೆ ಬಂದಾಗ ಎದ್ದಿದ್ದಿಯಲ್ಲ ಹೆಣ್ ಹೆಂಗ್ಸು’ ಅಲ್ಲೇ ಪಾತ್ರೆ ತೊಳಿತಿದ್ದ ಚೌಡಮ್ಮ ಕೇಳಿದ್ಲು.

‘ಬೇಗ ಎದ್ದು ನಾನೇನು ಇಸ್ಕೂಲಿಗೆ ಹೋಗ್ಬೇಕಿತ್ತೇನೇ, ಈ ಊರಲ್ಲಿ ನಾನು ನೆಮ್ದಿಯಾಗಿ ನಿದ್ದೇನೂ ಮಾಡಂಗಿಲ್ಲ’

‘ಹಂಗಾರೆ ನೀನು ಇಸ್ಕೂಲಿಗೆ ಹೋಗಲ್ವೆನೇ, ತಾಳು ತಾಳು ಆ ಮೇಷ್ಟ್ರಪ್ಪ ಬರ್ಲಿ ನಿನ್ನ ಇಸ್ಕೂಲು ತಾವ ಸೇರುಸ್ಕಬ್ಯಾಡ ಅಂತ ಹೇಳ್ತಿನಿ’

‘ಯಾಕ್ಲೇ ಸೇರಿಸಲ್ಲ ಅಂತಾನೆ, ಇಸ್ಕೂಲು ಏನು ಅವರಪ್ಪಂದೇ, ನಾನು ಹೋಗದೆಯಾ’

‘ನಿನ್ನ ಸುಮ್ಮಾನ ನೋಡೆ ಸುಮ್ಮಾನವಾ. ದಿನಾ ಮಧ್ಯಾಹ್ನ ಆಯ್ತು ಅಂದ್ರೆ ಹುಡುಗ್ರುಗಿಂತ ಮುಂದಾಗಿ ಹೋಗಿ ನಿಂತಿರ್ತಳೆ ತಪ್ಪಲೆ ಹಿಡ್ಕಂಡು. ಮಧ್ಯಾಹ್ನ ರಾತ್ರಿ ಎಲ್ಡೊತ್ತಿಗೂ ಆಗುವಂಗೆ ನಿಂಗೆ ಅನ್ನ ಸಾರು ಬಿಟ್ಟು ಕಳಿಸ್ತಾರೆ ನೋಡು ಅದುಕ್ಕೆ ನಿಂಗೆ ಕೊಬ್ಬು. ಅವರನ್ನ ತಿಂದು ಅವ್ರಿಗೆ ಬೈತಿಯಲ್ಲ ಈ ಬುದ್ಧಿಗೆ ದೇವ್ರು ನಿನ್ನ ಹಿಂಗೆ ಮಡಗಿರದು’

‘ಓಹೋ ನಿನ್ನೇನು ಮೈಸೂರು ಮಾರಾಣಿ ಮಾಡಿ ಸಿಮ್ಮಾಸನದ ಮ್ಯಾಲೆ ಕೂರಿಸವ್ನೆ ನೋಡು. ಹೋಗ್ ಹೋಗೆ ಬಿನ್ನಾಣಗಿತ್ತಿ, ಕಂಡಿದ್ದಿನಿ ನಿನ್ ಬಾಳಾಟ್ವಾ’

‘ಅನ್ನು ಅನ್ನು ಎಷ್ಟು ದಿನ ಅಂತಿಯ ನಾನು ನೋಡ್ತಿನಿ, ಈಗಲ್ಲ ಕಣೇ ಇಸ್ಕೂಲು ರಜ ಕೊಟ್ಟಾಗ ‘ಚೌಡವ್ವಾ ಎನ್ ಸಾರು ಮಾಡಿದ್ದಿಯವ್ವಾ’ ಅಂತ ರಾಗ ಎಳ್ಕ ಬತ್ತಿಯಲ್ಲ ಅವಾಗ ಕಣ್ಲೆ ನಿಂಗೆ ಇರೊದು’

‘ಹೂ ಕಣ್ಲೆ ನೀನು ಇದ್ದಿಯಾ ಅಂತ್ಲೇ ನಮ್ಮವ್ವ ನನ್ನ ಹೆತ್ತಿದ್ದು, ನೀನು ಇದ್ದಿಯಾ ಅಂತ್ಲೆ ನಮ್ಮಪ್ಪ ನನ್ನ ಈ ಊರಿಗೆ ಕೊಟ್ಟುದ್ದು, ನೀನು ಇರೋದ್ಕೆ ನನ್ ಹೆಂಡ್ರುಗೆ ಏನು ತೊಂದ್ರೆ ಇಲ್ಲ ಅಂತ ನನ್ ಗಂಡ ನನ್ನ ಬಿಟ್ಟು ಹೊಂಟುದ್ದು’

‘ನಿಂಗೆ ಯಾರಾದ್ರು ಬಾಯಿ ಕೊಡುಕೆ ಆಯ್ತದ, ಬತ್ತಿಯ ಹೋಗು ಅವಾಗದೆ’ ಅಂತ ಚೌಡವ್ವ ಎದ್ದು ಒಳಕ್ಕೆ ಹೋದ್ಲು.

ಅಂದಾಜಿನ ಮೇಲೆ ಹೆಜ್ಜೆಯಿಡುತ್ತಾ ಸಾಕವ್ವನೂ ಅವಳ ಹಿಂದೆಯೇ ಬಂದು ಬಾಗಿಲಿಗೆ ಒರಗಿ ಕೂತು ‘ಚೌಡವ್ವಾ ಚೌಡವ್ವಾ’ ಎಂದಳು.

‘ನನ್ನ ಬಾಳಾಟ ಕಂಡಿದ್ದಿನಿ ಅಂದಲ್ಲ ಈಗ ಇನ್ನೇನು ಕಾಣಕೆ ಬಂದೇ, ನಡಿ ನಡಿ ಎದ್ದು’

‘ಅಲ್ಲ ಕಣ್ಲೆ, ನಾನೇನೋ ಅನ್ನಬಾರದ್ದು ಅಂದೆ ಅನ್ನುವಂಗೆ ಆಡ್ತಿಯಲ್ಲೆ, ಏನಿತ್ಲೇ ನೀನು ಈ ಮನೆಗೆ ಬಂದಾಗ, ಹಿಟ್ಟು ಸಾರು ಮಾಡಕೆ ಎಲ್ಡು ತಪ್ಪಲೆ ಉಣ್ಣಕೆ ಎಲ್ಡು ತಾಟು. ನಿಮ್ಮ ಅತ್ತೆ ಮಾವ ಉಂಡಮೇಲೆ ನೀನು ನಿನ್ ಗಂಡ ಉಣ್ಬೇಕಿತ್ತು. ಅಂತ ಮನೆನ ನೀನು ಹೆಂಗೆ ಮಾಡಿ ನಿಲ್ಸಿದ್ದಿಯವ್ವ. ಅಂತ ಗಯ್ಯಾಳಿ ಅತ್ತೆ ತಾವ ನೀನು ಆಗಿದ್ಕೆ ಬಾಳಾಟ ಮಾಡ್ದೆ ಇನ್ಯಾವಳಾದ್ರೂ ಆಗಿದ್ರೆ ಮೂರೆ ದಿನುಕ್ಕೆ ಓಡೋಗರು.’

‘ಅನ್ನೋದೆಲ್ಲ ಅಂದು ಈಗ ಏನು ಬೆಣ್ಣೆ ಮಾತಾಡಿ ನನ್ನ ಕರಗುಸಕೆ ಬಂದಿದ್ದಿಯಾ’

‘ಏನಿಲ್ಲ ಕಣವ್ವ ನಿನ್ನೆ ಮಧ್ಯಾಹ್ನ ಊಟ ಮಾಡಿದಮೇಲೆ ಹಾಳಾದೋಳು ಸಾರಿನ ತಪ್ಪಲೆ ಮುಚ್ಚದು ಮರ್ತಿದ್ದೆ ರಾತ್ರೆ ಉಣ್ಣಕೆ ಅಂತ ಹೋಗಿ ನೋಡ್ತಿನಿ ಜಂತೆ ಇಂದ ಇರುಬ ಬಿದ್ದಿದ್ದೋ, ಅದ್ಕೆ ರಾತ್ರೆನು ಊಟ ಇಲ್ಲ. ಈಗ ಏನಾದ್ರು ಇದ್ರೆ ಕೊಡು ತಿನ್ಕಂಡು ಇಸ್ಕೂಲು ತಾವ ಹೋಯ್ತಿನಿ’

‘ಏನು ಇಲ್ಲ ಹೋಗು ನಮ್ಮನೇಲ್ಲು ಮಾಡಿದ್ದು ಮುಗ್ದೋಗದೆ ಕಣಾ’

‘ಅಲ್ಲಾ ಕಣ್ಲೆ ನಿಮ್ಮ ಮಾವ ನನ್ನ ತೊಡೆ ಮ್ಯಾಲೆ ಬೆಳೆದ, ನಿನ್ನ ಗಂಡ ನನ್ನ ತೊಡೆ ಮ್ಯಾಲೆ ಬೆಳೆದ, ನಿನ್ನ ಮಗ ಅದೆಷ್ಟು ಸಲ ನನ್ನ ಸ್ಯಾಲೆ ಮ್ಯಾಲೆ ಉಚ್ಚೆ ಉಯ್ದವ್ನೆ. ಅವೆಲ್ಲ ನಿಂಗೆ ಮರೆತೋಯ್ತೆನೆ, ನಾನು ಅಂದಿದ್ದು ಒಂದು ಮಾತೆ ದೊಡ್ಡದಾಯ್ತೆ’

‘ಇಲ್ದೇ ಇರೋದ್ನ ಎಲ್ಲಿಂದ ತಂದು ಕೊಡ್ಲಿ, ಈಗ ತಾನೆ ಎಲ್ಲಾ ಪಾತ್ರೆ ತೊಳ್ಕ ಬಂದಿದ್ದು ನೀನೇ ನೋಡ್ಲಿಲ್ವೆ, ಹೋಗು ಹೋಗು’ ಅಂದ್ಲು ಚೌಡವ್ವ. ಇನ್ನೇನಿದ್ರೂ ಮಧ್ಯಾಹ್ನ ಇಸ್ಕೂಲು ಊಟನೇ ಗತಿ ಅಂತ ಸಾಕವ್ವ ತನ್ನ ಹಟ್ಟೀಗೆ ಹೋಗಿ ಒಂದು ತಂಬಿಗೆ ನೀರು ಕುಡುದು ಪಾತ್ರೆ ತಗಂಡು ಹೊಂಟ್ಲು.

ಸಾಕವ್ವ ಎದ್ದು ಬೀದಿಗೆ ಬಂದಿದ್ದು, ಚೌಡವ್ವನ ಮನೆಗೆ ಹೋಗಿದ್ದು ಎಲ್ಲ ನೋಡ್ತಿದ್ದ ಕೊನೆ ಮನೆ ಪುಟ್ಟಮ್ಮಕ್ಕ ದನ ಹೊಡ್ಕಂಡು ಹೋಗ್ತಿದ್ದವ್ಳು ಚೌಡವ್ವನ ಮನೆ ಮುಂದೆ ನಿಂತು ‘ಏನ್ಲೆ ಬೆಳಿಗ್ಗೆನೆ ಸಾಕವ್ವ ಬಂದು ಜಗಳ ಮಾಡ್ತಿದ್ಲು, ಏನ್ ವಿಸ್ಯ’ ಅಂದ್ಲು.

‘ಜಗಳ ಏನಿಲ್ಲ ರಾತ್ರೆ ಇಸ್ಕೂಲು ಊಟದಲ್ಲಿ ಹುಳ ಇದ್ವಂತೆ, ಅದ್ಕೆ ಉಣ್ಲಿಲ್ಲವಂತೆ ಹೊಟ್ಟೆ ಹಸಿತದೆ ಊಟ ಇದ್ರೆ ಕೊಡು ಅಂತ ಬಂದಿದ್ಲು ನಂಗು ಯಾಕೋ ಇವತ್ತು ಅವಳ ಮ್ಯಾಲೆ ಶಾನೆ ಕೋಪ ಬಂದಿತ್ತು ಅದ್ಕೆ ಊಟ ಇದ್ರು ಇಲ್ಲ ಅಂತ ಹೇಳಿ ಕಳುಸ್ದೆ ಅಷ್ಟೇ’

‘ಹೋಗ್ಲಿ ಬಾ ಅವಳಿಗೆ ಕೊಟ್ರು ತಾನೇ ಅವಳೇನು ನೆನುಸ್ತಾಳ, ತಿರುಗ ಸಂಜೆಗೆ ಬಂದು ನಿನ್ನೆ ಬೈತಾಳೆ, ಆದ್ರೂ ಅವಳ ಕಷ್ಟ ಯಾರ್ಗೂ ಬರಬಾರ್ದು ಕಣವ್ವ. ಆ ಬೇವರ್ಸಿಗಳು ಅವಳ ಭಾವನ ಮಕ್ಳು ಇರೋವರ್ಗು ಅವಳಿಗೆ ನೆಮ್ದಿ ಇಲ್ಲ, ತಾವು ಸಾಕಲ್ಲ, ಯಾರಾದ್ರೂ ಅವಳಿಗೆ ನಾಲಕ್ಕು ದಿನ ಹಿಟ್ಟು ಹಾಕಿದ್ರೆ ಆಗಲೆ ಅವರ ಮನೆ ಮುಂದೆ ಹೋಗಿ ‘ಯಾಕ್ರೋ ನಮ್ಮ ಚಿಗವ್ವನ್ನ ಬುಟ್ಟಿಗೆ ಹಾಕ್ಕಂಡು ನಮ್ಮ ಚಿಗಪ್ಪನ ಆಸ್ತಿ ಹೊಡ್ಯಕೆ ಅವಳಿಗೆ ಹಿಟ್ಟು ಹಾಕ್ತಿರಾ, ಯಾಕೆ ನಾವು ಇಲ್ವ ಅವ್ಳುನ್ನ ನೋಡ್ಕಳಕೆ. ಇನ್ನೊಂದ್ಸಲ ಅವ್ಳು ನಿಮ್ಮ ಹಟ್ಟಿತಾವ ಕಂಡ್ರೆ ಚೆನ್ನಾಗಿರಲ್ಲ’ ಅಂತ ಜಗಳ ಮಾಡ್ತವೆ, ಅವರಿಂದ ಊರಲ್ಲಿ ಯಾರು ಅವಳಿಗೆ ಅನ್ನ ಕೊಡಲ್ಲ. ಸುಮ್ ಸುಮ್ಕೆ ಯಾರಾದ್ರೂ ಯಾಕೆ ಬೈಸ್ಕತಾರೆ ಹೇಳು, ಏನೋ ಇಸ್ಕೂಲಲ್ಲಿ ಊಟ ಕೊಡದ್ಕೆ ಇನ್ನೂ ಬದುಕವ್ಳೆ.’ ಅಂತ ಹೇಳಿ ಪುಟ್ಟಮ್ಮಕ್ಕ ದನ ಹೊಡ್ಕಂಡು ಹೊಂಟ್ಳು. ಊರ ಅಳ್ಳಿ ಮರದತಾವ ಇಸ್ಕೂಲು ಐಕ್ಳು ನೋಡಿ ಚೌಡವ್ವ ಹೇಳಿದ್ದು ನೆನಪಾಗಿ ‘ಲೇ ಹುಡುಗ್ರಾ ನಿನ್ನೇ ಇಸ್ಕೂಲು ಊಟದಲ್ಲಿ ಹುಳ ಇದ್ವಂತಲ್ರೋ. ನೋಡಿದ್ರೋ ಇಲ್ಲ ಹಂಗೆ ತಿಂದ್ರೋ, ನೀವು ಬಕಾಸುರನ ವಂಸದೋರು ಹುಳನು ಬುಡಲ್ಲ ಮೇಷ್ಟ್ರುನ್ನು ಬುಡಲ್ಲ’

‘ಇಸ್ಕೂಲು ಊಟದಲ್ಲಿ ಹುಳ ಇದ್ವಂತ ಯಾರು ಹೇಳಿದ್ದೂ’ ಅಲ್ಲೇ ಇದ್ದ ಪಾಪಣ್ಣ ಕೇಳ್ದ. ಅವನ ಹೆಂಡ್ರುನ ಅಡುಗೆ ಕೆಲ್ಸಕ್ಕೆ ಸೇರಿಸ್ಕಂಡಿಲ್ಲ ಅಂತ ಅವನು ಏನಾದರೂ ಕಿತಾಪತಿ ಮಾಡೋಕೆ ಕಾಯ್ತಿದ್ದ.

‘ಆ ಸಾಕವ್ವ ದಿನಾ ಅಲ್ಲೇ ಅಲ್ವೆ ಊಟ ತರದು ಅವ್ಳು ಹೇಳಿದ್ಲು’

‘ಯಾಕೆ ಸಂಬಳ ಕೊಡಲ್ವಂತ ಆ ಭಿನ್ನಾಣಗಿತ್ತಿರ್ಗೆ, ದಿನಾ ಅಲಂಕಾರ ಮಾಡ್ಕಂಡು ಹೋಗದು ಗೊತ್ತಾಯ್ತದೆ ಅಚ್ಕಟ್ಟಾಗಿ ಅಡುಗೆ ಮಾಡದು ಗೊತ್ತಾಗಲ್ವಂತ’ ಎಂದು ತನ್ನ ಜೊತೆಗೆ ಮೇಷ್ಟ್ರು ಮೇಲೆ ಜಗಳ ಮಾಡಲು ಕಾದಿದ್ದ ಕಾಲೇಜು ಬಿಟ್ಟು ಪೋಲಿ ತಿರುಗುತ್ತಿದ್ದ ನಾಲ್ಕೈದು ಹುಡುಗರನ್ನು ಕಟ್ಟಿಕೊಂಡು ಪಾಪಣ್ಣ ಇಸ್ಕೂಲು ಕಡೆ ಹೊರಟ.

ಇತ್ತ ಇಸ್ಕೂಲಿಗೆ ಹೊರಟ ಸಾಕವ್ವನು ತನ್ನ ಗಂಡನಾದ ಚೆಲುವಯ್ಯನ ಅಣ್ಣನ ಮಕ್ಕಳಾದ ರಂಗಣ್ಣ, ರಾಮಣ್ಣನ ಮನೆ ಮುಂದೆ ಬಂದವಳೆ ಒಂದು ಹಿಡಿ ಮಣ್ಣನ್ನು ಅವರ ಮನೆಯತ್ತ ತೂರಿ ‘ಮುಂಡೆ ಆಸ್ತಿ ಬೇಕೇನ್ರೋ ಮುಂಡೆ ಮಕ್ಕುಳ್ರಾ, ನಂಗೆ ಒಂದು ದಿನುಕ್ಕಾದ್ರು ಹಿಟ್ಟಾಕಿದ್ದಿರಾ? ನಿಮ್ಗೆ ನನ್ನ ಆಸ್ತಿ ಯಾಕ್ರೋ ಸಿಕ್ಕಬೇಕು ಇವತ್ತೇ ಹೋಗಿ ಆ ಮೇಷ್ಟ್ರಪ್ಪನಿಗೆ ಹೇಳಿ ಇಸ್ಕೂಲಿಗೆ ನನ್ನ ಆಸ್ತಿ ಕೊಡುವಂಗೆ ಪತ್ರ ಮಾಡುಸ್ತಿನಿ, ನೀವು ಬಾಯಿ ಬಡ್ಕಬೇಕು ಕಣ್ರೋ ಹಂಗೆ ಮಾಡ್ತಿನಿ ನೋಡ್ತಿರಿ’ ಅಂತ ಬಿರಬಿರನೆ ಹೊರಟರೆ, ಅಣ್ಣ ತಮ್ಮಂದಿರು ಬೈಕು ಹತ್ತಿ ಅವಳಿಗೂ ಮೊದಲೇ ಇಸ್ಕೂಲು ತಲುಪಿದರು.

ಬೆಳ್ಳಂಬೆಳಗ್ಗೆ ಇಸ್ಕೂಲಿನ ಮುಂದೆ ಅರ್ಧ ಊರೇ ಸೇರಿತ್ತು.

‘ಬ್ಯಾಡ ಬ್ಯಾಡ ಅಂದ್ರೂ ಚಿಕ್ಕ ವಯಸ್ಸಿಗೇ ಗಂಡ ಸತ್ತೋಗವ್ನೆ ಪಾಪ ಅಂತ ಇವಳುನ್ನ ಈ ಮೇಷ್ಟ್ರೇ ಸೇರುಸ್ಕಂಡಿದ್ದು ಅದೇನು ಅವಳತ್ರ ಅಡುಗೆ ಮಾಡಿಸ್ತಾನೋ ಏನು ಮಾಡಿಸ್ತಾನೋ ಕೇಳ್ರೀ’

‘ನೋಡಕೆ ಒಳ್ಳೇನಂಗೆ ಕಾಣ್ತನೆ ನಮ್ಮ ಆಸ್ತಿ ಮ್ಯಾಲೆ ಕಣ್ಣಾಕವ್ನೆ. ಇಸ್ಕೂಲಿಗೆ ಬರಬೇಕು, ಐಕ್ಳುಗೆ ಓದಿಸ್ಬೇಕು, ಮನೆ ಕಡೆ ಹೋಯ್ತಾ ಇರ್ಬೇಕು ಅದು ಬಿಟ್ಟು ಇವ್ನೇನು ಇಲ್ಲಿ ಅನ್ನದಾನ ಮಾಡ್ತಾವ್ನ ಮುದುಕ್ರು, ಮೋಟ್ರುಗೆಲ್ಲ’

‘ಅಲ್ಲ ಇವ್ರೂ ಅದೇ ಅನ್ನ ತಾನೇ ತಿನ್ನದು ಹುಳ ಇದ್ದಿದ್ದು ಇವ್ರಿಗೆ ಕಾಣ್ಲಿಲ್ವ, ಇಲ್ಲ ಕಂಡ್ರೂ ಕಾಣ್ದೋರಂಗೆ ಇದ್ದುಬಿಟ್ರೋ’

‘ಈ ಮೇಷ್ಟ್ರುಗೆ ಯಾಕ್ರೀ ಊರ ಉಸಾಬರಿ, ತಾನಾಯ್ತು ತನ್ನ ಕೆಲಸ ಆಯ್ತು ಅಂತ ಇರೋದು ಬಿಟ್ಟು’

ಹಿಂಗೆ ಅಲ್ಲಿ ಸೇರಿದ್ದವರೆಲ್ಲ ತಲೆಗೆ ಒಂದೊಂದು ಮಾತಾಡಿದ ಮೇಲೆ ಊರ ಹಿರಿಯರೆಲ್ಲ ಸೇರಿ, ಇನ್ನು ಮುಂದೆ ಹೀಗೆ ಆಗದಂತೆ ಸರಿಯಾಗಿ ಅಡುಗೆ ಮಾಡಬೇಕು, ಮತ್ತೆ ಹಿಂಗೆ ಆದರೆ ಅಡುಗೆಯವರನ್ನ ಬದ್ಲಾಯಿಸಬೇಕು, ಇಲ್ಲದಿದ್ದರೆ ಮೇಷ್ಟ್ರು ಮೇಲೇ ಅವರ ಆಫೀಸಿಗೆ ಪತ್ರ ಬರೆಯೋದು ಅಂತ ತೀರ್ಮಾನ ಮಾಡಿ ಎಲ್ಲರೂ ಅಲ್ಲಿಂದ ಹೊರಟರು.

ಇದ್ಯಾವುದೂ ಗೊತ್ತಿಲ್ಲದ ಸಾಕವ್ವ ಮಧ್ಯಾಹ್ನದವರೆಗೆ ದಾರಿ ಮಧ್ಯೆ ಮರದಡಿಯಲ್ಲಿ ಕುಂತು ಸುಧಾರಿಸಿಕೊಂಡು ಊಟದ ಹೊತ್ತಿಗೆ ಸರಿಯಾಗಿ ಬಂದಳು.

‘ಅಜ್ಜಿ ಇನ್ಮೇಲೆ ನಿಂಗೆ ಊಟ ಕೊಡಲ್ಲ ಹೋಗು’ ಮೇಷ್ಟ್ರು ಕೋಪ ತಡೆದುಕೊಂಡು ಸಾಧ್ಯವಾದಷ್ಟು ತಾಳ್ಮೆಯಿಂದ ಹೇಳಿದರು.

‘ಯಾಕಪ್ಪ ಮೇಷ್ಟ್ರಪ್ಪ ನಾನೇನಪ್ಪ ಮಾಡಿದೆ’ ಅಜ್ಜಿಗೆ ಮಾತೇ ಬರದಂತಾಗಿ ಮೆತ್ತಗೆ ಕೇಳಿದಳು.

‘ಯಾಕಾದ್ರೂ ಆಗಲಿ ಇನ್ಮೇಲೆ ನೀನು ಸ್ಕೂಲು ಹತ್ರ ಬರಬೇಡ ಅಷ್ಟೆ’.

‘ಸ್ವಾಮಿ ನಿನ್ನ ಕಾಲು ಮುಗಿತಿನಿ ಹಂಗೆ ಅನ್ನಬ್ಯಾಡಪ್ಪ’ ಮೇಷ್ಟ್ರು ಕೈ ಹಿಡಿಯಲು ಹೋದಳು ಸಾಕವ್ವ.

‘ಊಟದಲ್ಲಿ ಹುಳ ಇದ್ವು ಅಂತ ಹೇಳಿದ್ದಿಯಲ್ಲ, ಹೋಗು ಹುಳ ಬಿದ್ದಿರೋ ಊಟ ಯಾಕೆ ತಿಂತಿಯಾ’ ಬರುತ್ತಿದ್ದ ಕೋಪ ತಡೆಯುತ್ತಾ, ಅವಳನ್ನು ದೂರ ತಳ್ಳಿದರು.

‘ಅಯ್ಯೋ ನಾನೆಲ್ಲಪ್ಪ ಹಂಗಂದೆ, ದೇವರಾಣೆ ಅಂದಿಲ್ಲಪ್ಪ’ ಅಜ್ಜಿಯ ಕಣ್ಣಲ್ಲಿ ನೀರು ಸುರಿಯಲಾರಂಭಿಸಿತು.

‘ನೀನು ಹೇಳ್ದೆ ಇಲ್ಲಿ ಊರವರೆಲ್ಲ ಬಂದು ಜಗಳ ಮಾಡುದ್ರಾ, ಅಯ್ಯೋ ಪಾಪ ಅಂತ ಊಟ ಕೊಟ್ರೆ ಕೊಬ್ಬು ತೋರುಸ್ತೀಯಾ’.

‘ಇಲ್ಲ ಸ್ವಾಮೀ ನಾನು ಏನೂ ಹೇಳಿಲ್ಲಪ್ಪ, ನಿನ್ನ ಅನ್ನ ತಿಂದು ನಿನ್ನ ಮ್ಯಾಲೆ ಚಾಡಿ ಹೇಳ್ತೀನಾ, ನಾನು ಹಂಗೆ ಹೇಳಿದ್ರೆ ನನ್ನ ಬಾಯಿ ಸೇದಿ ಹೋಗ್ಲಿ, ನಂಗೆ ಊಟ ಇಲ್ಲ ಅಂತ ಮಾತ್ರ ಹೇಳಬ್ಯಾಡಪ್ಪ. ರಾತ್ರೆಯಿಂದ ಊಟ ಇಲ್ದೆ ನಿಲ್ಲಕೂ ಆಗ್ತಿಲ್ಲ’.

‘ನೀನು ಏನು ಹೇಳಿದ್ರು ಅಷ್ಟೆ, ನಿನ್ನ ಇನ್ಮೇಲೆ ಇಲ್ಲಿ ಸೇರಿಸಲ್ಲ, ಬರಬೇಡ’.

‘ನನ್ನ ಆಸ್ತಿನೆಲ್ಲ ಇಸ್ಕೂಲಿಗೆ ಪತ್ರ ಬರುಸ್ತೀನಿ ನಂಗೆ ದಿನಾ ಒಂದು ಹೊತ್ತು ಊಟ ಕೊಡಪ್ಪ ಸಾಕು. ನಿನ್ನ ಕೈ ಮುಗಿತಿನಿ, ಕಾಲಿಗೆ ಬೀಳ್ತಿನಿ’ ಎಂದು ಅಜ್ಜಿ ಕಾಲು ಹಿಡಿಯಲು ಹೋದಳು.

ಯಾವಾಗ ಅಜ್ಜಿ ಆಸ್ತಿ ವಿಷಯ ಎತ್ತಿದಳೊ ಮೇಷ್ಟ್ರಿಗೆ ಕೋಪ ತಡೆಯಲಾರದಾಗಿ ಅಜ್ಜಿಯ ತೋಳನ್ನು ಹಿಡಿದು, ಎಳೆದು ತಂದು ಗೇಟಿಂದ ಆಚೆ ಬಿಟ್ಟು, ಹುಡುಗರಿಗೆ ಹೇಳಿ ಬೀಗ ಹಾಕಿಸಿದರು. ಅಜ್ಜಿ ಅತ್ತು ಅತ್ತು ಸಾಕಾಗಿ ನಿಧಾನಕ್ಕೆ ತನ್ನ ಹಟ್ಟಿಗೆ ಬಂದಳು. ಸಂಜೆ ಕತ್ತಲಾಗುವ ಮುನ್ನವೇ ಒಂದು ತಂಬಿಗೆ ನೀರು ಕುಡಿದು ಹಾಗೇ ಗೋಡೆಗೆ ಒರಗಿದಳು. ಊಟವಿಲ್ಲದ ಸುಸ್ತಿಗೆ ಹಾಗೆ ತೂಕಡಿಕೆ ಬಂದಂತಾಗಿ ಮಲಗಿಬಿಟ್ಟಳು.

ನಟ್ಟನಡುರಾತ್ರಿ

‘ಮುಂಡೆ ಅನ್ನ ಕಿತ್ಕಂತಿರೆನ್ರೋ ಮುಂಡೆ ಮಕ್ಕುಳ್ರಾ’ ಅರಕೆರೆ ಪಶು, ಪಕ್ಷಿ, ಜನರೆಲ್ಲ ಯಥಾಪ್ರಕಾರ ಎದ್ದು ಮತ್ತೆ ಮಲಗಿದರು.

ಮರುದಿನ ಸೂರ್ಯ ಎರಡಾಳುದ್ದ ಮೇಲೆ ಬಂದರೂ ಸಾಕವ್ವನ ಮನೆ ಬಾಗಿಲು ಇನ್ನೂ ತೆರೆದಿರಲಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)