ಕಾಡಿನ ಕತ್ತಲೆಯಲ್ಲಿ ನಡೆಯುತ್ತ...

7

ಕಾಡಿನ ಕತ್ತಲೆಯಲ್ಲಿ ನಡೆಯುತ್ತ...

Published:
Updated:
Deccan Herald

ಏಕಾಂಗಿಯಾಗಿ ಪ್ರವಾಸ ಮಾಡುವುದು ನನ್ನ ನೆಚ್ಚಿನ ಹವ್ಯಾಸಗಳಲ್ಲಿ ಒಂದು. ಆತ್ಮವಿಶ್ವಾಸ ಕುಗ್ಗತೊಡಗಿದಾಗ, ತಲೆಯಲ್ಲಿ ಇಲ್ಲಸಲ್ಲದ ಯೋಚನೆಗಳು ದಾಂಗುಡಿ ಇಟ್ಟಾಗ ಸುಮ್ಮನೆ ಯಾವುದಾದರೊಂದು ಪ್ರೇಕ್ಷಣೀಯ ಸ್ಥಳಕ್ಕೆ ಹೊರಟು ಬಿಡುತ್ತೇನೆ. ಅಲ್ಲಿನ ಅನುಭವಗಳಿಂದ ಹೊಸ ಮನುಷ್ಯನಾಗಿ ಮತ್ತೆ ದೈನಂದಿನ ಚಟುವಟಿಕೆಗಳಲ್ಲಿ ತೊಡಗಲು ಪ್ರೇರಿತನಾಗುತ್ತೇನೆ.

ಹೀಗೆ ಒಮ್ಮೆ ಬೆಳಗಾವಿ ಸಮೀಪದ ಅಂಬೋಲಿಗೆ ಏಕಾಂಗಿಯಾಗಿ ಹೋಗಿದ್ದೆ. ಅದು ದಟ್ಟ ಕಾಡು ಮತ್ತು ಜಲಪಾತಗಳಿರುವ ಪಶ್ಚಿಮ ಘಟ್ಟ ಸಾಲಿನಲ್ಲಿರುವ ರಮಣೀಯ ಪರ್ವತ ಪ್ರದೇಶ. ಅಲ್ಲಿ ತಲುಪುವಷ್ಟರಲ್ಲಿ ಸಂಜೆ 5 ಗಂಟೆಯಾಗಿತ್ತು. ಅಲ್ಲಿಂದ ಎಂಟು ಕಿಲೋ ಮೀಟರ್ ದೂರವಿರುವ ಶಿಖರದ ತುದಿಗೆ ಕಾಲ್ನಡಿಗೆಯಲ್ಲಿ ತೆರಳಿದೆ. ಅಲ್ಲಿಂದ ಸೂರ್ಯಾಸ್ತದ ವೀಕ್ಷಣೆಯು ರೋಮಾಂಚಕಾರಿ ಅನುಭವ ನೀಡುತ್ತದೆ.

ಸಂಜೆಯ ಆಹ್ಲಾದಕರ ಪರಿಸರದಲ್ಲಿ ಹಚ್ಚ ಹಸುರಿನ ದಟ್ಟ ಕಾಡಿನೊಳಗೆ ಏಕಾಂಗಿಯಾಗಿ ನಡೆಯುತ್ತ ಹೋಗುವ ಖುಷಿ ಅವರ್ಣನೀಯ. ಸನ್ ಸೆಟ್ ಪಾಯಿಂಟ್‌ನಿಂದ ಸೂರ್ಯ ಭೂಮಿಯ ಒಡಲಲ್ಲಿ ಲೀನವಾಗುವ ಅತ್ಯದ್ಭುತ ಸೌಂದರ್ಯ ನೋಡುತ್ತ ಮೈಮರೆತೆ. ಪ್ರಕೃತಿಯ ರಮಣೀಯತೆಯನ್ನು ಆಸ್ವಾದಿಸುತ್ತ ಅದೆಷ್ಟು ಹೊತ್ತು ಕುಳಿತಿದ್ದೆನೋ, ಸಮಯ ಸರಿದಿದ್ದೇ ತಿಳಿಯಲಿಲ್ಲ. ಅಲ್ಲಿ ಬಂದಿದ್ದ ಪ್ರವಾಸಿಗರು ತಮ್ಮ ವಾಹನಗಳಲ್ಲಿ ಅದಾಗಲೇ ತೆರಳಿದ್ದರು. ಕಡೆಗೆ ಅಲ್ಲಿ ನಾನೊಬ್ಬನೇ ಉಳಿದಿದ್ದೆ. ಸುತ್ತಲೂ ಕತ್ತಲಾವರಿಸಿತ್ತು. ಹಿಂಜರಿಯುತ್ತ ಬಂದ ದಾರಿಯಲ್ಲಿ ಅಂದಾಜಿನ ಮೇಲೆ ನಡೆಯತೊಡಗಿದೆ. ಅಮವಾಸೆಯ ಆಸುಪಾಸಿನ ರಾತ್ರಿಯಾದ್ದರಿಂದ ಕತ್ತಲು ಗವ್ವೆನ್ನುತ್ತಿತ್ತು. ಜೀರುಂಡೆಗಳ ಝೇಂಕಾರ ಮತ್ತು ತರಗೆಲೆಗಳ ಮೇಲೆ ಸರಪರ ಹರಿದಾಡುವ ಕೀಟಗಳ ಶಬ್ದ ಬಿಟ್ಟರೆ ಎಲ್ಲವೂ ನಿಶ್ಶಬ್ದ.

ಭಯವು ನಿಧಾನವಾಗಿ ಮನವನ್ನು ಆವರಿಸಿತು. ಒಂದು ಕ್ಷಣ ನಿಂತು ನನ್ನನ್ನು ನಾನೇ ಸಂತೈಸಿಕೊಂಡೆ. ನನ್ನೊಳಗಡಗಿರುವ ಅವ್ಯಕ್ತ ಭಯದಿಂದ ಮುಕ್ತನಾಗುವ ಸಂದರ್ಭವಿದು ಎಂದು ಭಾವಿಸಿ ನಡೆಯತೊಡಗಿದೆ.

ಕಾಡಿನ ಮೌನ, ಏಕಾಂಗಿತನ ಹಾಗೂ ಆಗಸದಲ್ಲಿ ಮಿನುಗುತ್ತಿರುವ ನಕ್ಷತ್ರಗಳು ನಾನು ಬೇರಾವುದೋ ಲೋಕದಲ್ಲಿ ಸಂಚರಿಸುತ್ತಿರುವೆನೆನೋ ಎಂಬಂತೆ ಭಾಸವಾಗುತ್ತಿತ್ತು. ಹೀಗೆ ಕಾಡಿನ ಕತ್ತಲೆಯ ನೀರವತೆಯಲ್ಲಿ ಒಂದು ಗಂಟೆ ಏಕಾಂಗಿಯಾಗಿ ಪಯಣಿಸಿ ಊರನ್ನು ತಲುಪಿದಾಗ ನಿರಾಳನಾಗಿದ್ದೆ. ಅಂಬೋಲಿಯ ರೋಮಾಂಚಕಾರಿ ಕಾಡಿನ ಪಯಣ ನನ್ನ ಮನದಲ್ಲಿ ಇಂದಿಗೂ ಅಚ್ಚಳಿಯದ ನೆನಪಾಗಿ ಉಳಿದಿದೆ.
-ಆನಂದ ರಾಮತೀರ್ಥ, ಜಮಖಂಡಿ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !