ಶುಕ್ರವಾರ, ಏಪ್ರಿಲ್ 10, 2020
19 °C

ಹೀಗೊಂದು ಮದುವೆ

ಗೀತಾ ಕುಂದಾಪುರ Updated:

ಅಕ್ಷರ ಗಾತ್ರ : | |

ಬಣ್ಣ ಕಪ್ಪಾಗಿದ್ದರೂ ನಕ್ಕರೆ ಕೆನ್ನೆಯಲ್ಲಿ ಗುಳಿ ಬಿದ್ದು, ಬಿಳಿ ಹಲ್ಲು ತೋರುವ, ಮೊಳಕಾಲಿಗಿಂತ ತುಸು ಮೇಲಿನವರೆಗೂ ಉದ್ದದ ಜಡೆಯಿರುವ ಲಕ್ಷಣದ ಹುಡುಗಿ ಲಲಿತಾ. ಮದುವೆ ಮಾತ್ರ ಒಂದಲ್ಲ ಒಂದು ಕಾರಣದಿಂದ ತಪ್ಪಿ ಹೋಗಿ ಮನೆಯವರ ತಲೆನೋವಿಗೆ ಕಾರಣವಾಗಿತ್ತು. ಲಲಿತಾಳಿಗೆ ವರ್ಷವೇನೂ ಹೆಚ್ಚಾಗಿರಲಿಲ್ಲ. ಕಳೆದ ಆಷಾಡ ತಿಂಗಳಿಗೆ ಇಪ್ಪತ್ತೊಂದು ತುಂಬಿತ್ತಷ್ಟೇ. ಆದರೆ ಮನೆಯವರು ಲಲಿತಾಳಿಗೆ ಗಂಡು ಹುಡುಕಲು ಶುರು ಮಾಡಿ ಮೂರು ವರ್ಷಗಳಾಗುತ್ತಾ ಬಂತು. ಏಕೋ ಒಂದಲ್ಲ ಒಂದು ಕಾರಣದಿಂದ ಹತ್ತಿರ ಬಂದ ಸಂಬಂಧಗಳು ತಪ್ಪಿ ಹೋಗುತ್ತಿದ್ದವು.

ಲಲಿತಾ ಮರದ ಕೆಲಸ ಮಾಡುವ ‘ಶಂಕರನಾರಾಯಣ’ ರ ಕೊನೆ ಮಗಳು. ಎರಡು ಗಂಡು ಮತ್ತು ಒಂದು ಹೆಣ್ಣು ಮಗಳ ನಂತರ ಹುಟ್ಟಿದವಳು. ಶಂಕರನಾರಾಯಣ ಊರಿಗೇ ಬೇಕಾದ ಜನ. ಎಲ್ಲರ ಬಾಯಲ್ಲೂ ‘ಶಂಕ್ರಣ್ಣ’. ಹೊಸ ಮನೆಯ ಮಾಡಿನ ಕೆಲಸವಿರಲಿ, ಹಳೆ ಮನೆಯ ರಿಪೇರಿಯಿರಲಿ, ಹಟ್ಟಿಯ ಮಾಡು ಜಾರಿರಲಿ ಶಂಕ್ರಣ್ಣ ಬಂದೇ ಸರಿ ಮಾಡಬೇಕು. ‘ಶಂಕ್ರಣ್ಣ ಕಕ್ಕಸಿನ ಬಾಗಲ ಪೂರ ಒರ್ಲೆ ತಿಂದಿತ್ತ, ಹೊಸ ಬಾಗ್ಲ ಆಯ್ಕ, ಪುರಸೊತ್ತ ಮಾಡ್ಕಣಿ ಕಾಂಬ’ ಎಂದರೆ, ಯಾವುದಕ್ಕೂ, ಯಾರಿಗೂ ಇಲ್ಲವೆನ್ನದ ಶಂಕ್ರಣ್ಣ ‘ಈ ಮಳೆ ಸಲ್ಪ ಹಿಂದ ಅಯ್ಲಿ, ಫಸ್ಟಿಗೇ ನಿಮ್ಮನೆ ಕಕ್ಕಸಿನ ಕೆಲ್ಸವೇ ಹಿಡ್ಕಂಬ’ ಎನ್ನುತ್ತ ತಮ್ಮ ಪುಟ್ಟ ಡೈರಿಯಲ್ಲಿ ಗುರುತು ಹಾಕಿಕೊಳ್ಳುತ್ತಿದ್ದರು. ಕೆಲಸಕ್ಕೆ ಸರಿಯಾಗಿ ಸಂಪಾದನೆಗೇನೂ ಕೊರತೆಯಿರಲಿಲ್ಲ, ಮನೆಯೂ ಸಾಕಷ್ಟು ದೊಡ್ಡದಾಗೇ ಊರಿನ ಮಧ್ಯದಲ್ಲಿ ಕಟ್ಟಿಸಿದ್ದರು. ಆದರೆ ಕುಟುಂಬಕ್ಕೆ ಹಿಡಿದ ಶಾಪವೆಂಬಂತೆ ಮನೆಯಲ್ಲಿ ಹೆಂಗಸರದ್ದು ಸದಾ ಅನಾರೋಗ್ಯ. ಶಂಕ್ರಣ್ಣನ ಅಮ್ಮನೂ ಲಕ್ವ ಬಡಿದು ವರ್ಷಗಟ್ಟಲೆ ಹಾಸಿಗೆ ಹಿಡಿದು ಸತ್ತು ಹೋಗಿದ್ದರು. ಶಂಕ್ರಣ್ಣನ ಹೆಂಡತಿ ರುಕ್ಮಣಿಗೆ ಗೂರುಬ್ಬಸ, ನಾಲ್ಕು ಮಕ್ಕಳನ್ನು ಹೆರುವಷ್ಟರಲ್ಲಿ ಉಬ್ಬಸ ಜಾಸ್ತಿಯಾಗಿ ಹತ್ತು ನಿಮಿಷಕ್ಕಿಂತ ಜಾಸ್ತಿ ನಿಂತುಕೊಳ್ಳಲು ಆಗುತ್ತಿರಲಿಲ್ಲ. ಈಗಂತೂ ರುಕ್ಮಣಿಯ ಕಾಯಂ ವಿಳಾಸ ಮನೆಯ ಮೂಲೆಯ ಹಾಸಗೆಯಾಗಿದೆ. ಲಲಿತಾಳಿಗೆ ಅಕ್ಕ ಇದ್ದಾಳೆ, ಆದರೆ ಮಂಡೆ ಸರಿ ಇಲ್ಲ. ಹುಟ್ಟುವಾಗ ಸರಿ ಇದ್ದವಳು ಸುಮಾರು ಎಂಟು ವರ್ಷವಿರುವಾಗ ಕಾಗೆಯೊಂದು ಮೈ ಮೇಲೆ ಕಕ್ಕಸು ಮಾಡಿದ್ದು ಹೆಳೆ, ಹೆಣ್ಣು ಹುಚ್ಚರ ಹಾಗೆ ಮಾಡಲು ಶುರು ಮಾಡಿತು, ಮುಂದೆ ಸರಿಯಾಗಲೇ ಇಲ್ಲ. ಸರಿ ಇರುವವರಿಗೇ ಗಂಡು ಸಿಗುವುದು ಕಷ್ಟ, ಅರೆ ಹುಚ್ಚಿಯೆಂದು ಹಣೆಪಟ್ಟಿ ಕಟ್ಟಿಕೊಂಡ ಹೆಣ್ಣನ್ನು ಮದುವೆಯಾಗುವವರು ಯಾರು? ತೀರಾ ಗಲಾಟೆ ಜಾಸ್ತಿಯಾದಾಗ ಯಾವುದಾದರೂ ಕೊಣೆಯಲ್ಲಿ ಕೂಡಿ ಹಾಕುತ್ತಿದ್ದರು. ಮನೆ ಕೆಲಸಕ್ಕೆ ಕಾಯಂ ಜನ ಉಂಟು. ಮನೆಯಲ್ಲಿ ಸರಿಯಿದ್ದ ಹೆಣ್ಣೆಂದರೆ ಲಲಿತಾ ಮಾತ್ರ. ಎಲ್ಲರ ಕಣ್ಗೊಂಬೆ. ಗಂಡು ಮಕ್ಕಳಿಗೆ ಮದುವೆಯಾಗುವ ಮೊದಲೇ ಹದಿನೆಂಟು ವರ್ಷ ತುಂಬುತ್ತಿದ್ದಂತೆ ಲಲಿತಾಳಿಗೆ ಗಂಡು ಹುಡುಕಲು ಶುರು ಮಾಡಿದರು. ಆದರೆ ಯಾಕೋ ಏನೋ ಯಾವ ಸಂಬಂಧಗಳೂ ‘ಸೆಟ್’ ಆಗುತ್ತಿರಲಿಲ್ಲ.

ಮನೆಯಲ್ಲಿರುವ ಹೆಂಗಸರ ಗತಿ ನೋಡಿಯೋ, ಇಲ್ಲವೇ ಸತ್ತ ತಂಗಿಯ ನೆನಪಾಗಿಯೋ ಶಂಕ್ರಣ್ಣ ಮಗಳ ಮದುವೆಯನ್ನು ಆದಷ್ಟು ಬೇಗ ಮಾಡಲು ನೋಡುತ್ತಿದ್ದರು. ಆದರೆ ಅದಕ್ಕೆ ಹಲವು ಅಡ್ಡಿಗಳು. ಒಮ್ಮೆ ಹುಡುಗಿ ನೋಡಲು ಬರುವವರ ಕಾರು ಅಪಘಾತಕ್ಕೀಡಾಗಿ ಸಂಬಂಧ ಕುದುರಲಿಲ್ಲ. ಮತ್ತೊಮ್ಮೆ ಹೆಣ್ಣು ನೋಡಲು ಬಂದಾಗ ಹೆಣ್ಣು ಮುಟ್ಟಾಗಿ ಹೆಣ್ಣು ನೋಡುವ ಶಾಸ್ತ್ರವಾಗಲಿಲ್ಲ. ಮತ್ತೊಂದಂತೂ ಎರಡು ಮನೆಯವರು ಒಪ್ಪಿ ಮಠದಲ್ಲಿ ಪ್ರಸಾದ ನೋಡಿದಾಗ ಸರಿ ಬರಲಿಲ್ಲ, ಸಂಬಂಧ ಅಲ್ಲಿಗೇ ನಿಂತಿತು. ಆಗ ಬಂತು ಊರವರ ಪುಕ್ಕಟೆ ಸಲಹೆ ‘ಆಚಾರ್ರೇ ನಾಗನ ಉಪದ್ರ ಇತ್ತಾ ಕಾಣತ್ತ, ನಾಗನ ಸಂಸ್ಕಾರ ಮಾಡಿದ್ರ ಆತಿತ್ತ’. ಸರಿ ಅದೂ ನಡೆಯಿತು. ಆದರೂ ಲಲಿತಾಳಿಗೆ ಕಂಕಣ ಬಲ ಕೂಡಿ ಬರಲಿಲ್ಲ. ಮತ್ಯಾರೋ ಅಂದರು ‘ಶಂಕ್ರಣ್ಣ ಉಳ್ಳೂರಾಗೆ ಒಬ್ರ ಭಟ್ಟ್ರ ಇದ್ರ ಬಾಳ ಲಾಯ್ಕ ನಿಮಿತ್ಯ ಕಾಂತ್ರ, ಒಂದ ಸರ್ತಿ ತೊರಸ್ಕ ಬಪ್ಪರಲೇ’. ಅದೂ ಮಾಡಿ ನೋಡುವ ಎಂದುಕೊಂಡ ಶಂಕ್ರಣ್ಣ ಒಂದು ಬೆಳಿಗ್ಗೆ ಉಳ್ಳೂರಿನ  ಭಟ್ಟರ ಮುಂದೆ ಹಾಜರಾದರು. ಭಟ್ಟರು ಕವಡೆಯನ್ನು ಕಲೆಸಿ, ಅಳೆದು, ಸುರಿದು, ಬಾಯಲ್ಲಿದ್ದ ತಾಂಬೂಲವನ್ನು ಪಿಚಕ್ಕನೆ ಉಗಿದು ‘ನಿಮ್ಮ ಕುಟುಂಬದಾಗೆ ಒಂದು ಪ್ರಾಯದ ಹೆಣ್ಣಿನ ದುಮ್ಮರಣ ಆಯಿತ್ತಾ ಕಾಣತ್ತ, ಆ ಹೆಣ್ಣಿನ ಭೂತವೇ ನಿಮ್ಮ ಮಗಳ ಮದಿಗೆ ಅಡ್ಡ ಬತತ, ಅದಕ್ಕೆ ಗತಿ ಕಾಣಿಸ್ಡೇ ನಿಮ್ಮ ಮಗಳ ಮದಿ ಆಪುದ ಕಷ್ಟ ಕಾಣೀ’ ಎಂದಾಗ ಶಂಕ್ರಣ್ಣನಿಗೆ ಹಲವು ವರ್ಷಗಳ ಹಿಂದೆ ತೀರಿಕೊಂಡ ತಮ್ಮ ತಂಗಿಯ ನೆನಪಾಯಿತು. ‘ನಿಮ್ಮ ತಂಗಿಗೆ ಮೊದಲ ಗಂಡ ಕಂಡ ಮದಿ ಮಾಡಿ, ನಂತ್ರ ಮಗಳಿಗೆ ಮದಿ ಮಾಡ್ಲಕ್ಕ’ ಭಟ್ಟರೆಂದಾಗ, ಮಗಳಿಗೆ ಗಂಡು ಹುಡುಕುವುದರಲ್ಲೇ ಏಳು ಬಾವಿಯ ನೀರು ಕುಡಿಯುವ ಪರಿಸ್ಥಿತಿ ಬಂದಿರಬೇಕಾದರೆ ಸತ್ತವರಿಗೆಲ್ಲಿ ಗಂಡನ್ನು ಹುಡುಕುವುದು? ‘ನಿಮ್ಮ ಊರಗೇ ಪ್ರಾಯದಲ್ಲೇ ಸತ್ತ ಹೋದ ಗಂಡ ಇದ್ರೆ ಅದ್ರ ಜಾತ್ಕ ತಕ್ಕಾ ಬನ್ನಿ, ಇಬ್ಬರ ಜಾತ್ಕ ಸರಿ ಹೊದ್ರೆ ಮದಿ ಮಾಡ್ಸಿ ಬಿಡ್ವೊ, ಆ ಮದಿ ಆಪುದೇ ತಡ, ನಿಮ್ಮ ಮಗಳಿಗೆ ಗಂಡ ಹುಡ್ಕ ಬತ್ತ ಕಾಣಿ’

ಶಂಕ್ರಣ್ಣನ ಹುಡುಕಾಟ ಶುರುವಾಯಿತು. ಈ ಸಲ ಮಗಳಿಗಾಗಿ ಅಲ್ಲ, ಸತ್ತ ತಂಗಿಗಾಗಿ. ತಂಗಿ ‘ಜಲಜಾ’ಳ ನೆನಪಾಗಿ ಶಂಕ್ರಣ್ಣನ ಕಣ್ಣು ಒದ್ದೆಯಾಯಿತು. ಹೊರಗಿನ ಕೆಲಸ ಮಾಡಿ ಎಷ್ಟು ಹೊತ್ತಿಗೆ ಮನೆಗೆ ಬಂದರೂ ‘ಅಣ್ಣ ಚಾ ಕುಡಿ’ ಎನ್ನುತ್ತಾ ಬೇಜಾರಿಲ್ಲದೇ ಚಾ ಮಾಡಿಕೊಡುತ್ತಿದ್ದಳು. ಅಮ್ಮ ಲಕ್ವ ಬಡಿದು ಹಾಸಿಗೆ ಹಿಡಿದು ಹಲವು ವರ್ಷಗಳೇ ಕಳೆದಿತ್ತು. ಶಂಕ್ರಣ್ಣನಿಗೆ ಮದುವೆಯಾಗಿ ಹೆಂಡತಿ ಮನೆಗೆ ಬಂದಿದ್ದರೂ ಸದಾ ಬಸುರಿ, ಬಾಣಂತನದ ಗಲಾಟೆ. ಮನೆಯ ಎಲ್ಲಾ ಕೆಲಸಗಳನ್ನು ತಂಗಿ ಜಲಜ ಬೇಜಾರಿಲ್ಲದೆ ಮಾಡುತ್ತಿದ್ದಳು. ಅಲ್ಲದೆ ಹಾಸಿಗೆ ಹಿಡಿದ ಅಮ್ಮನ ಚಾಕರಿಯನ್ನೂ ಮಾಡುತ್ತಿದ್ದಳು. ಜಲಜ ಬೆಳ್ಳಗಿದ್ದರೂ ಚಿಕ್ಕಂದಿನಲ್ಲೇ ಪೋಲಿಯೊ ಬಂದು ಕುಂಟಿಕೊಂಡು ನಡೆಯುತ್ತಿದ್ದಳು. ಮೆಳ್ಳೆಗಣ್ಣು ಬೇರೆ. ಮದುವೆಯಾಗಲು ಮುಂದೆ ಬಂದ ಗಂಡುಗಳೂ ಕಡಿಮೆ. ಬಂದರೂ ವರದಕ್ಷಿಣೆಯಾಗಿ ದೊಡ್ಡ ಗಂಟನ್ನು ಅಪೇಕ್ಷಿಸುವವರೇ ಆಗಿದ್ದರು. ‘ಇದ್ದರೆ ಮನೆಯಲ್ಲೇ ಇರಲಿ ಕೆಲಸಕ್ಕೆ ಜನವಾಯಿತು’ ಎಂದುಕೊಳ್ಳುತ್ತ ತಂಗಿಯ ಮದುವೆಯ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ ಶಂಕ್ರಣ್ಣ. ತಮ್ಮಲ್ಲಿ ಕೆಲಸ ಕಲಿಯಲು ಬರುತ್ತಿದ್ದ ಕೇಶವ ಮತ್ತು  ಜಲಜ ಪರಸ್ಪರ ಇಷ್ಟ ಪಟ್ಟಾಗಲೂ ಹುಡುಗನ ಗೋತ್ರ ತಮ್ಮ ಗೋತ್ರಕ್ಕೆ ಸರಿ ಬರುವುದಿಲ್ಲವೆಂದು ಮದುವೆ ಮಾಡಿಕೊಡಲು ನಿರಾಕರಿಸಿದರು. ಸ್ವಲ್ಪ ದಿನ ಅತ್ತು ಕರೆದ ಜಲಜ ಮನೆಯ ಹಿಂದಿರುವ ಕೇರೆಯ ತಳವನ್ನು ಕಂಡಳು. ಜಲಜ ಇದ್ದಿದ್ದರೆ ಈಗ ಸುಮಾರು 28-30 ವರ್ಷವಾಗಿರುತ್ತಿತ್ತೇನೊ. ಸಕಾಲದಲ್ಲಿ ಮದುವೆ ಮಾಡಿದ್ದರೆ ಎರಡೋ, ಮೂರೊ ಮಕ್ಕಳ ಅಮ್ಮನೂ ಆಗಿರುತ್ತಿದ್ದಳು. ತನ್ನ ಸ್ವಾರ್ಥವೇ ತಂಗಿಯನ್ನು ಬಲಿ ತೆಗೆದುಕೊಂಡಿತು ಎಂದುಕೊಳ್ಳುತ್ತ ಶಂಕ್ರಣ್ಣ ಬಿಕ್ಕಳಿಸಿದರು.

ಒಂದು ಬೆಳಿಗ್ಗೆ ಹಾರೆಯ ಹಿಡಿ ಸರಿ ಮಾಡಿಸಿಕೊಂಡು ಹೋಗಲು ಬಂದ ರಾಮ ಮೇಷ್ಟ್ರು ‘ಬೈಲ ಮನೆ ಗೋಪಾಲ ಬೊಂಬಾಯಿಗೆ ಕೆಲಸಕ್ಕೆ ಅನಕಂಡ ಹೊದವ ಹೆಣ ಆಯೇ ಊರಿಗೆ ಬಂದದ್ದ, ಅವ್ನ ನಿಮ್ಮ ತಂಗಿಗೆ ಜೊತೆ ಆತ್ತ, ಇಬ್ಬರ ಗೋತ್ರವೂ ಹೊಂದತ್ತ ಕಾಣಿ’ ಅಂದರು. ಇದನ್ನು ಕೇಳಿದ ಶಂಕ್ರಣ್ಣನಿಗೆ ತಂಗಿಯ ಮದುವೆಯಾಗಿ, ಮಗಳ ಮದುವೆ ಮಾಡಿದಷ್ಟು ಸಂತೋಷವಾಯಿತು. ಸಂಜೆ ಶಾಲೆ ಬಿಟ್ಟು ಮಕ್ಕಳು ಮನೆಗೆ ಬರುವ ಹೊತ್ತಿನಲ್ಲಿ ಎರಡು ಕೇಜಿ ಮಾವಿನ ಹಣ್ಣನ್ನು ಹಿಡಿದುಕೊಂಡು ಬೈಲು ಮನೆಗೆ ಹೊರಟರು.

ಬೈಲು ಮನೆ ಹೆಸರಿಗೆ ತಕ್ಕಂತೆ ಮನೆಯ ಸುತ್ತಮುತ್ತ ಬೈಲಿತ್ತು. ಆದರೆ ಬೈಲಿನಲ್ಲಿ ಬೇಸಾಯ ಮಾಡಿದ ಕುರುಹು ಸಹ ಇರಲಿಲ್ಲ. ಎಲ್ಲೆಲ್ಲೂ ಕಾಟು ಗಿಡಗಳೇ. ಮನೆಯೋ 60ರ ದಶಕದಲ್ಲಿ ಕಟ್ಟಿಸಿದ್ದ ಹಂಚಿನದ್ದು. ಮನೆಯ ಗಂಡಸರು ಕೆಲಸ ಕಳ್ಳರು. ಕುಲ ಕಸುಬು ಮರದ ಕೆಲಸ. ಆದರೆ ಯಾವ ಕೆಲಸವನ್ನೂ ನಿಯತ್ತಿನಲ್ಲಿ ಮಾಡಿದವರಲ್ಲ. ವಂಶ ಪಾರಂಪರ್ಯವಾಗಿ ಬಂದ ಸ್ವಲ್ಪ ಆಸ್ತಿ ಇತ್ತು. ಅದರ ಬೇಸಾಯವನ್ನೂ ಮಾಡದೆ ಗದ್ದೆಯನ್ನು ಹಾಳುಗೆಡವಿದ್ದರು. ಶಂಕ್ರಣ್ಣನಿಗೆ ತೀರಾ ಪುರಸೊತ್ತಿಲ್ಲದಾಗ ಮಾತ್ರ ಊರ ಜನರು ಬೈಲು ಮನೆಯ ಗಂಡಸರ ಹತ್ತಿರ ಮರದ ಕೆಲಸ ಮಾಡಿಸುತ್ತಿದ್ದರು. ಕೆಲಸ ಮಾಡಿಸಿದವರು ಕೆಲಸ ಸರಿಯಾಗಿ ಆಗದೇ ಬೈದು ಹೋದದ್ದೇ ಹೆಚ್ಚು. ತಮ್ಮ ಕಸುಬಿನಲ್ಲೇ ಹಣ, ಹೆಸರು ಮಾಡಿದ ಶಂಕ್ರಣ್ಣನನ್ನು ಕಂಡಾಗ ದ್ವೇಷ, ಅಸೂಯೆ ಎಲ್ಲವೂ ಇತ್ತು.

ಬೈಲು ಮನೆಯ ಐದು ಜನ ಗಂಡಸರಲ್ಲಿ ಮಧ್ಯದವ ಗೋಪಾಲ. ಮದುವೆಯಿನ್ನೂ ಆಗಿರಲಿಲ್ಲ. ಹೋಟೆಲ ಇಡುತ್ತೇನೆಂದು ಬೊಂಬಾಯಿಗೆ ಹೋಗಿದ್. ಅಲ್ಲಿ ಏನು ಮಾಡಿಕೊಂಡಿದ್ದಾನೆಂದು ಯಾರಿಗೂ ತಿಳಿಯದು. ಬೊಂಬಾಯಿಗೆ ಹೋದ ಮೂರು ನಾಲ್ಕು ವರ್ಷ ಸುದ್ಧಿ ಇಲ್ಲದವನು ಒಂದು ದಿನ ಹೆಣವಾಗಿ ಊರಿಗೆ ಬಂದ. ಗೋಪಾಲ ಎಲ್ಲಿ ಸತ್ತ, ಹೇಗೆ ಸತ್ತ ಊರಿನವರಿಗೆ ಗೊತ್ತಿಲ್ಲ. ಯಾರೋ ಪುಣ್ಯಾತ್ಮರು ಹೆಣವನ್ನು ಊರಿಗೆ ಕಳುಹಿಸಿದ್ದರು. ‘ನನ್ನ ಮಗಳಿಗೆ ಎಷ್ಟ ಗಂಡ ಬಂದ್ರೂ ಲಗ್ನ ಸೆಟ್ಟ ಆತಿಲ್ಯೇ, ನನ್ನ ತಂಗಿ ಒಬ್ಳ ಕಾರೆಗೆ ಬಿದ್ದ ಸತ್ತ ಹೊಯಿದ್ಲ, ಅವ್ಳ ಭೂತವೇ ಮದಿಗೆ ಅಡ್ಡ ಬತತ ಅಂಬ್ರ, ಸತ್ತ ಹೋದವ್ಳಿಗೆ ಲಗ್ನ ಮಾಡಸಿದ್ರೆ ಸರಿ ಹೊತ್ತ ಅಂತ್ರ ಭಟ್ರ, ಅಲ್ಲಾ ನಿಮ್ಮನೆ ಗೋಪಾಲ ಮದಿ ಮಾಡ್ಕಂಡದೆ ಸತ್ತ ಹೋದ ಅಲ್ದಾ? ಅವ್ನ ಜಾತ್ಕ ಇದ್ರೆ ಕೊಡಿ, ನನ್ನ ತಂಗಿಗೆ ಸರಿಯಾತ್ತ ಕಾಂಬ’ ಎಂದರು. ತಮಗಿಂತ ಜಾಸ್ತಿ ಹಣ, ಹೆಸರು ಮಾಡಿದ ಶಂಕ್ರಣ್ಣ ತಮ್ಮ ಕಾಲ ಬುಡಕ್ಕೆ ಬಂದಾಗ ಬೈಲು ಮನೆಯವರ ಸಂತೋಷಕ್ಕೇ ಪಾರವೇ ಇರಲಿಲ್ಲ. ಆದರೂ ಪಟ್ಟು ಬಿಡದೆ ‘ನಮ್ಮ ಗೋಪಾಲ ಮದಿ ಮಾಡ್ಕಣದೆ ಸತ್ತದ್ದ ಹೌದ. ಆದ್ರೆ ಶಂಕ್ರಣ್ಣ ನಿಮ್ಮ ತಂಗಿಗೆ ಕಾಲ ಕುಂಟ. ಕಣ್ಣೂ ಸಮಾ ಇರಲಿಲ್ಲ. ನಿಮ್ಮನೆ ಹೆಣ್ಣ ಮದಿಗೆ ಮೊದ್ಲೇ ಬಸರೂ ಆಯಿತ್ತ ಅಂಬೊ ಸುದ್ದಿಯೂ ಇತ್ತ. ಅಂತ ಹುಡ್ಗಿನ ನಮ್ಮ ಮನೆ ಹುಡ್ಗ ಒಪ್ಪತ್ನಾ?’  ‘ಆಯ್ಲಿ, ನೀವ ದೊಡ್ಡವರು ಮನೆ ಬಾಗ್ಲಿಗ ಬಂದೀರಿ. ಬ್ಯಾಡ ಅಂಬುಕ ಆತ್ತಾ, ಹೆಣ್ಣಿನೊಟ್ಟಿಗೆ ಎಂತಾ ಕೊಡ್ತ್ರಿ? ಸುಮ್ಮನೆ ಮದಿ ಮಾಡ್ಸುಕೆ ಆತ್ತಾ? ಮದಿ ಆದ್ರ ಮ್ಯಾಲೆ ವರ್ಷ ವರ್ಷಕ್ಕೂ ಹೆಣ್ಣಿನ ತಿಥಿ ಮಾಡೂದ ಬ್ಯಾಡದಾ?’ ‘ಅಲ್ಲದೆ ಗೋಪಾಲನ ಜಾತ್ಕ ಎಲ್ಲಿತ್ತ ಅಂತ ಗೊತ್ತಿಲ್ಲ, ಹುಡ್ಕಕ, ನಾಡ್ದಿಗೆ ಬನ್ನಿ’ ಎಂದರು ಮನೆಯಲ್ಲಿದ್ದವರು.

ಶಂಕ್ರಣ್ಣ ನಾಲ್ಕೈದು ಸಲ ಬೈಲು ಮನೆಗೆ ತಿರುಗಾಡಿದ ಮೇಲೆ, ಶಂಕ್ರಣ್ಣ ಕಷ್ಟಪಟ್ಟು ದುಡಿದು, ಗಳಿಸಿ, ಉಳಿಸಿದ ಅಸ್ತಿಯಾದ ಎರಡೆಕರೆ ತೆಂಗಿನ ತೋಟದ ಅರ್ಧ ಭಾಗ ಮತ್ತು ಎಂಟು ಸವರನ್ ಚಿನ್ನ ಕೊಡಲು ಒಪ್ಪಿದಾಗಲೇ ಬೈಲು ಮನೆಯವರು ಸತ್ತವರ ಮದುವೆಗೆ ಒಪ್ಪಿದ್ದು. ಸತ್ತು ದಶಕಗಳೇ ಕಳೆದವನ ಜಾತಕವೂ ಕಳೆದುಹೋಗಿತ್ತು. ಯಾರದ್ದೋ ಜಾತಕದ ಹೆಸರು, ಇಸುವಿ ಬದಲಾಯಿಸಿ ಶಂಕ್ರಣ್ಣನ ಕೈಗೆ ಕೊಟ್ಟರು. ಗೋಪಾಲ ಮತ್ತು ಜಲಜಾಳ ಜಾತಕ ಕೂಡಿ ಬಂದು ಸೋಣೆ ತಿಂಗಳ ಹದಿನಾಲ್ಕಕ್ಕೆ ಮದುವೆಯೆಂದು ತೀರ್ಮಾನವಾಯಿತು.
ಸತ್ತವರ ಮದುವೆಗಾಗಿ ಶಂಕ್ರಣ್ಣನ ಮನೆಯ ಹಿಂದಿರುವ ಮಕ್ಕಿ ಬೈಲಿನಲ್ಲಿ ಹಸಿ ಮಡಲಿನ ಚಪ್ಪರ ರೆಡಿಯಾಯಿತು. ಊರಿನವರೆಲ್ಲಾ ಬಂದು ಸೇರಿದರು. ಭಟ್ಟರೂ ಬಂದರು. ಹುಡುಗ, ಹುಡುಗಿಯ ಫೋಟೊವನ್ನು ದೊಡ್ಡದಾಗಿ ಫ್ರೇಮ್ ಹಾಕಿಸಿ ಕುರ್ಚಿಯ ಮೇಲಿಟ್ಟು, ದೊಡ್ಡದಾಗಿ ಚೆಂಡು ಹೂವಿನ ಸರವನ್ನೂ ಹಾಕಿದ್ದರು. ಬೈಲು ಮನೆಯವರು ತಾಳಿ ಕಟ್ಟುವ ಶಾಸ್ತ್ರದ ಮೊದಲು ‘ಹೆಣ್ಣಿಗೆ ಕೊಡ್ಕಾದ್ದ ಚಿನ್ನ, ತೋಟದ ಕಾಗದ, ಪತ್ರ ಎಲ್ಲಾ ಬರ್ಲಿ ಕಾಂಬ’ ಎನ್ನುತ್ತಾ ಬರಬೇಕಿದ್ದ ಎಲ್ಲದನ್ನೂ ವಸೂಲಿ ಮಾಡಿದರು. ಜಲಜಾಳ ಫೋಟೊಗೆ ಹಗ್ಗದಲ್ಲಿ ಕಟ್ಟಿಸಿದ್ದ ಕರಿಮಣಿಯನ್ನು ಕಟ್ಟಿದರು. ಮದುವೆಯ ಶಾಸ್ತ್ರ ಮುಗಿಯುತ್ತಿದ್ದಂತೆ ಇಬ್ಬರ ಆತ್ಮಗಳಿಗೂ ಶಾಂತಿ ಸಿಗಲು ತಿಥಿಯನ್ನೂ ಮಾಡಿ ಮುಗಿಸಿದರು. ನೆರೆದವರು ಮದುವೆಯೂಟದೊಟ್ಟಿಗೆ ತಿಥಿಯ ವಡೆಯನ್ನೂ ತಿಂದರು. ಆದರೆ ಮದುವೆಯ ಗಲಾಟೆಯಲ್ಲಿ ಬೆಳಗ್ಗಿನಿಂದ ಲಲಿತಾಳ ಸುದ್ದಿಯಿರಲಿಲ್ಲ. ಮದುವೆಯಲ್ಲಿ ಆರತಿ ಮಾಡಲು ಕರೆದರೂ ಪತ್ತೆಯಿಲ್ಲ. ಪಕ್ಕದ ಮನೆಯವರೇ ಆರತಿಯ ಶಾಸ್ತ್ರ ಮಾಡಿದರು.

ಮದುವೆ ಮುಗಿಯುತ್ತಿದ್ದಂತೆ ಶಂಕ್ರಣ್ಣನಿಗೇನೊ ನೆಮ್ಮದಿ. ತಂಗಿ ಬದುಕಿದ್ದಾಗಲೇ ಮದುವೆ ಮಾಡಿ ಕೊಡಬೇಕಿತ್ತು. ಇರಲಿ ಸತ್ತ ಮೇಲಾದರೂ ಅಣ್ಣನಾಗಿ ಕರ್ತವ್ಯ ತೀರಿಸಿದ ಸಮಾಧಾನ. ಅದೂ ಸುಮ್ಮನೆ ಮದುವೆ ಮಡಿಕೊಟ್ಟದ್ದೂ ಅಲ್ಲ. ತಂಗಿಗೆ ಆಸ್ತಿಯಲ್ಲಿ ಪಾಲೂ ಕೊಟ್ಟಿದ್ದಾಯಿತು, ಚಿನ್ನವನ್ನೂ ಮಾಡಿಸಿದೆ, ಊರಿನವರಿಗೆ ಊಟವೂ ಹಾಕಿಸಿದ್ದಾಯಿತು, ಇನ್ನಾದರೂ ತಂಗಿ ನೆಮ್ಮದಿಯಾಗಿರಲಿ ಎಂದು ಮನಸ್ಸು ಬಯಸಿತು. ಇನ್ನು ಮಗಳಿಗೆ ಗಂಡು ಹುಡುಕಬೇಕು. ಸತ್ತ ತಂಗಿಯ ಮದುವೆಯನ್ನೇ ಇಷ್ಟು ಗಡದ್ದಾಗಿ ಮಾಡಿದವ ಮಗಳ ಮದುವೆಗೆ ಕಡಿಮೆ ಮಾಡುತ್ತೇನೆಯೇ ಎಂದುಕೊಂಡರು.

ಮದುವೆಯ ಕಾರ್ಯಗಳೆಲ್ಲಾ ಮುಗಿದು ಪೇಟೆಗೆ ಒಂದು ರೌಂಡ್ ಹಾಕಿ ಮನೆಗೆ ಬಂದಾಗ ಮನೆ ಕತ್ತಲಲ್ಲಿ ಮುಳುಗಿತ್ತು. ಮನೆಯ ಮೂಲೆಯಿಂದ ಎಡೆಬಿಡದೆ ಹೆಂಡತಿಯ ಕೆಮ್ಮು ಕೇಳಿ ಬಂತು. ಗಂಡು ಮಕ್ಕಳು ರಾತ್ತಿ ಒಂಬತ್ತಕ್ಕೇ ಮನೆಗೆ ಬರುವುದು. ಕರೆಂಟ್ ಹೋಗಿದ್ದರೆ ಚಿಮಣಿ ದೀಪವನ್ನಾದರೂ ಹಚ್ಚಬೇಕಿತ್ತು ಮಗಳು. ತುಳಸಿಗೂ ದೀಪವಿಟ್ಟಿಲ್ಲ, ಎಲ್ಲಿಗೆ ಹೋದಳು ಇವಳು! ಬೆಳಗಿನಿಂದ ಕಂಡ ನೆನಪಾಗುತ್ತಿಲ್ಲ ಎಂದುಕೊಳ್ಳುತ್ತಾ ಅಕ್ಕ ಪಕ್ಕದವರನ್ನು ವಿಚಾರಿಸಿದರು. ಅಲ್ಲಿಂದಲೂ ನಕಾರಾತ್ಮಕ ಉತ್ತರವೇ ಸಿಕ್ಕಿತು. ‘ಜಲಜನಿಗೆ ಗೋಪಾಲ ಇಷ್ಟ ಆಯಿಲಿಲ್ಯಾ ಕಾಣತ್ತ ಅದಕ್ಕೆ ಲಲಿತ ಹೆಣ್ಣಿನ ಕರ್ಕಂಡ್ಲೇನೊ, ಕೆರೆ ಹುಡ್ಕಿ ಕಾಂಬ, ಹೆಣ್ಣ ಕೆರೆಗೆ ಬಿತ್ತೊ ಏನೊ’ ಎಂಬ ಡೌಟ್ ಹಲವರಿಗೆ. ಬೆಳಿಗ್ಗೆಯಾಗುತ್ತಲೇ ಆಳುಗಳನ್ನು ಕರೆಸಿ ಕೆರೆಯನ್ನೆಲ್ಲಾ ಜಾಲಾಡಿಸಿದರು ಶಂಕ್ರಣ್ಣ. ಅಲ್ಲಿಯೂ ಇಲ್ಲ! ಲಲಿತಾ ಹೊದದ್ದಾದರೂ ಎಲ್ಲಿಗೆ?

ಈ ಮಧ್ಯೆ ‘ಪಡಿಯಾರ’ರ ದಿನಸಿ ಅಂಗಡಿಯಲ್ಲಿ ಸಾಮಾನು ಕಟ್ಟಿ ಕೊಡುತ್ತಿದ್ದ ಹುಡುಗ ‘ಕ್ರಷ್ಣ’ ನೂ ಕೆಲಸಕ್ಕೆ ಬರಲಿಲ್ಲ. ‘ನಿಮ್ಮನೆ ಲಲಿತಾ ಯಾವತ್ತೂ ಆ ಪಡಿಯಾರರ ಅಂಗಡಿಗೆ ಹೊಗತಿದ್ಲ’, ‘ಅವ್ರಿಬ್ರೂ ಕಿಸಿ ಕಿಸಿ ಮಾತಾಡೂದೂ ನಾವ ಕಂಡಿತ್ತ’, ‘ಶಂಕ್ರಣ್ಣ ನೀವ ಭೂತಕ್ಕೆ ಮದುವೆ ಮಾಡುವ ಗೌಜಿನಾಗೆ ಮಗಳ ಓಡಿ ಹೋದ್ಲ ಕಾಣಿ’ ಎಂದು ಜನರು ಮಾತಾಡತೊಡಗಿದಾಗ ಶಂಕ್ರಣ್ಣ ತಲೆ ಮೇಲೆ ಕೈ ಹೊತ್ತು ಕೂತರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)