ಶುಕ್ರವಾರ, ಏಪ್ರಿಲ್ 10, 2020
19 °C

ಮಮತೆಯ ಮರಣ

ಅಭಿಲಾಷ್ ಟಿ. ಬಿ. Updated:

ಅಕ್ಷರ ಗಾತ್ರ : | |

ಮಾರನೆಯ ದಿನ ಹಬ್ಬ, ಪಕ್ಕದ ಕಳಸಾಪುರದಲ್ಲಿ ಎಷ್ಟು ಸಂಭ್ರಮವೋ, ಅಷ್ಟೇ ಸಂಭ್ರಮ ನಮ್ಮ ಊರಿನಲ್ಲೂ. ಹಬ್ಬವೆಂದರೆ ಸುಮ್ಮನೆಯೆ? ಮನೆಯ ಮುಂದಕ್ಕೆ ಸಗಣಿ ಹಾಕಿ ಸಾರಿಸಬೇಕು, ಗುಡಿಗೆ ಹೋಗಬೇಕು, ಸಂಜೆಗೆ ಮನೆ ಮನೆಗೆ ಅರಿಶಿನ ಕುಂಕುಮಕ್ಕೆ ಹೋಗಬೇಕು, ಇಷ್ಟೆಲ್ಲಾ ಕೆಲಸದ ಜೊತೆಗೆ ದಿನನಿತ್ಯದ ಮನೆಗೆಲಸವೂ ಕೂಡ. ಹಬ್ಬದ ದಿನ ನಮ್ಮಂತಹ ಹೆಂಗಸರಿಗೆ ಸಾಕು ಸಾಕಾಗಿಹೋಗುತ್ತದೆ. ಆದ್ದರಿಂದಲೇ, ಹಿಂದಿನ ದಿನವೇ ಮನೆಯ ಮುಂದೆ ಸಗಣಿ ಹಾಕಿ ಸಾರಿಸಿಬಿಟ್ಟು ರಂಗೋಲಿ ಎಳೆದುಬಿಟ್ಟರೆ ಮಾರನೆಯ ದಿನಕ್ಕೆ ಕೆಲಸ ಕಮ್ಮಿಯಾಗುತ್ತದೆ ಎಂದು ಸಗಣಿ ತರುವುದಕ್ಕೆ ನಮ್ಮ ಚಿಕ್ಕ ಮಾವನವರ ಮನೆಯ ಕಡೆ ಮುಖ ಮಾಡಿ ಹೊರಟೆ.

ಚಿಕ್ಕ ಮಾವಯ್ಯನವರು ಎಂದರೆ ನನ್ನ ಗಂಡನ  ಕೊನೆಯ ಚಿಕ್ಕಪ್ಪ. ನಮ್ಮ ಮಾವಯ್ಯನೂ ಸೇರಿ ಅವರು ಮೂರು ಜನ ಅಣ್ಣ ತಮ್ಮಂದಿರು. ಒಬ್ಬರು ನಮ್ಮ ಯಜಮಾನರ ತಂದೆ. ಇನ್ನೊಬ್ಬರು ವೃತ್ತಿಯಲ್ಲಿ ಉಪಾಧ್ಯಾಯರಾಗಿದ್ದರು, ನಿವೃತ್ತಿಯಾಗಿ ಈಗ ಹಾಸನದಲ್ಲಿದ್ದಾರೆ. ಕೊನೆಯವರೇ ನಾಗಣ್ಣ ಮಾವ.

ನಮ್ಮದು ಊರೊಳಗೆ ಇರುವ, ಬೀದಿಗೆ ಮುಖಮಾಡಿ ನಿಂತಿರುವ ದೊಡ್ಡಮನೆ. ಪಿತ್ರಾರ್ಜಿತ ಆಸ್ತಿ ಪಾಲಾಗುವಾಗ ಅಜ್ಜಯ್ಯ ನಾಗಣ್ಣ ಮಾವನಿಗೆ ‘ಸುಮ್ನೆ ಮನೆ ಯಾಕೆ ಭಾಗ ಮಾಡುವುದು? ಎರಡನೆಯವನು ಮೇಷ್ಟ್ರು, ಅವನೇನ್ ಇಲ್ಲಿ ಇರಾಕಿಲ್ಲ, ದೊಡ್ಡೋನ್ಗೆ, ಈ ಮನೆ ಇರಲಿ. ನೀನು, ಈ ಮನೆ ಹಿಂದೆ ಇರೋ ಜಾಗದಲ್ಲೇ ಮನೆ ಕಟ್ಟಿಸ್ಕಂಡು ಬಿಡ್ಲ’ ಅಂದಿದ್ದರಂತೆ. ಅದರಂತೆ ನಾಗಣ್ಣ ಮಾವ, ಮನೆಯ ಹಿತ್ತಲಿನಲ್ಲಿ ಒಂದು ಮನೆ ಕಟ್ಟಿಸಿಕೊಂಡು ವಾಸವಾಗಿದ್ದರು.

ಅದು ನಮ್ಮ ಮನೆಯ ಹಿಂದಗಡೆ ಇರುವುದರಿಂದ ಮುಖ್ಯ ಬೀದಿಗೆ ಕಾಣುವುದಿಲ್ಲ. ನಮ್ಮ ಮನೆಯ ಪಕ್ಕದಲ್ಲಿರುವ ಸಣ್ಣಗಲ ಜಾಗದಲ್ಲಿ ಹೋದರೆ, ವಿಶಾಲವಾದ ಬಯಲು. ಬಯಲಿನಲ್ಲಿ ತುಳಸಿಕಟ್ಟೆ, ಮನೆಯ ಮುಂದಕ್ಕೆ ಮಲ್ಲಿಗೆ ಬಳ್ಳಿ, ಪಾರಿಜಾತ ಬಳ್ಳಿ ಒಂದು ಕಡೆಯಾದರೆ, ಇನ್ನೊಂದೆಡೆ ಹಗಲಿನಲ್ಲಿ ದನ ಕಟ್ಟಲು ಐದಾರು ಗೂಟಗಳು, ಶೌಚಾಲಯ. ಮನೆಗೆ ಹೊಂದಿಕೊಂಡಂತೆ, ಅಗಲವಾದ ಜಗಲಿ, ಮಂಗಳೂರು ಹೆಂಚಿನ ಸೂರು, ಸೂರಿನಡಿಯಲ್ಲಿ, ತಲೆತಗ್ಗಿಸಿಹೋದರೆ, ಪಕ್ಕದಲ್ಲೇ ದನಕಟ್ಟುವ ಜಾಗ, ಮುಂದೆ ಹೋದರೆ, ಅಡಿಗೆ ಮನೆ, ಒಂದು ಕೋಣೆ, ರಾಗಿ, ಭತ್ತದ ಚೀಲಗಳನ್ನಿಟ್ಟ ಅಂಕಣ.

ಸಂಜೆ ಏಳರ ಸಮಯ ಇರಬೇಕು. ಓಣಿಯಲ್ಲಿ ಹೋಗಿ ಚಿಕ್ಕಮಾವಯ್ಯನವರ ಮನೆಯ ಬಾಗಿಲಿಗೆ ಬಂದೆ. ಬಾಗಿಲು ಸಣ್ಣಗೆ ತೆರೆದಿತ್ತು. ನಿಧಾನವಾಗಿ ತೆಗೆದೆ. ಲ್ಯಾಂಪ್ ಗಾಜಿನೊಳಗೆ ದೀಪ ಸಣ್ಣಗೆ ಉರಿಯುತಿತ್ತು. ಒಳಗೆ ಹೋದೆ. ಪಕ್ಕದ ಕೋಣೆಯಲ್ಲಿ ದನಗಳು ಉಸಿರಾಡುತ್ತಿದ್ದದು ಬಿಟ್ಟರೆ, ಬೇರೇನೂ ಕೇಳಿಸುತ್ತಿರಲಿಲ್ಲ. ಆದರೂ ಒಮ್ಮೆ, ‘ಮಾವಯ್ಯ’ ಎಂದು ನಿಧಾನವಾಗಿ ಕೂಗಿದೆ.

‘ಯಾರು ಲಲಿತನೇನೆ?’ ಎಂದು ಕೋಣೆಯಿಂದ ಎಪ್ಪತ್ತು ದಾಟಿರುವ ಗಂಡಸಿನ ಧ್ವನಿಯೊಂದು ಕೋಣೆಯಿಂದ ಆಚೆ ಬಂದಿತು. ‘ಹೂಂ ನಾನೆಯ. ಸಗಣಿ ತಗಂಡ್ ಹೋಗಾಣ ಅಂತ ಬಂದೆ’ ‘ಹೌದಾ, ಹೋಗ್ತಾ ಹಾಗೆ ಬಾಗ್ಲು ಎಳೆದುಕೊಂಡು  ಹೋಗೇ’

‘ರಾತ್ರಿಗೆ ಏನ್ ಮಾಡ್ಕಂಡಿದಿರಾ, ಅಲ್ಲೆ ಬನ್ನಿ ಊಟಕ್ಕೆ, ನಾಳೆ ಹಬ್ಬಕ್ಕೂ ಅಲ್ಲೆ ಬನ್ನಿ’

‘ನೋಡ್ತೀನಿ’ ಅಂದಾದ ಮೇಲೆ ನಾನು ಏನೇ ಕೇಳಿದರೂ ಮತ್ತೆ ಉತ್ತರ ಬರಲಿಲ್ಲ. ಸುಮ್ಮನೆ ದನಗಳನ್ನು ಸ್ವಲ್ಪ ಸರಿಸಿ, ಸಗಣಿ ಬಾಚಿಕೊಂಡು ಬಾಗಿಲನ್ನು ನಿಧಾನವಾಗಿ ಮುಂದಕ್ಕೆ ಎಳೆದುಕೊಂಡೆ.

ಆಗಲೇ ಗೊತ್ತೊ, ಗೊತ್ತಿಲ್ಲದೆಯೋ, ಎರಡು  ಹನಿಗಳು, ಕಣ್ಣಿನಿಂದ  ಬಿದ್ದವು. ಸುಮ್ಮನೆ ಮನೆ ಮುಂದಿನ ಜಗಲಿ ಮುಂದೆ ಹೋಗಿ ಕುಳಿತೆ. ಕಣ್ಣ ಮುಂದೆ ಹಳೆಯ ನೆನಪುಗಳು...

ಈ ಮನೆ ನಮ್ಮ ಮನೆಯ ಹಾಗೆ, ಜಗಳದ ಮನೆಯಲ್ಲ. ಸದಾ ಕಾಗೆಯಂತೆ, ಕವ ಕವ ಅನ್ನುವ ನಮ್ಮತ್ತೆಯಂತೆ ಈ ಮನೆಯೊಡತಿಯಲ್ಲ. ಇರುವ ಅಲ್ಪ ಸ್ವಲ್ಪ ಆಸ್ತಿಯನ್ನು, ದನಕರುಗಳನ್ನು ನಿಭಾಯಿಸಿಕೊಂಡು ಮನೆ ಬೆಳಗಿದ ಮಹಾಮಾತೆ ಅವಳು. ನಾಗಣ್ಣ ಮಾವನಿಗೆ ತಕ್ಕ ಜೋಡಿಯೆಂದರೆ ನಮ್ಮ ಸುಶೀಲತ್ತೆಯೇ. ಸದಾ ಯಾವಾಗಲೂ ಏನಾದರೂ ಒಂದು ಕೆಲಸದಲ್ಲಿ ತೊಡಗಿಸಿಕೊಂಡಿರುತ್ತಿದ್ದಳು. ಸುಸ್ತು ಎನ್ನುವುದು ಇವಳಿಗೆ ಬಲುದೂರ. ಸದಾ ನಗುಮುಖ. ನಮ್ಮತ್ತೆ ಗಟ್ಟಿಗಿತ್ತಿ, ಜೋರುಬಾಯಿ. ಆದರೆ ಇವಳದು ಎಲ್ಲವೂ ವಿರುದ್ಧ. ನಾನು ಮದುವೆಯಾಗಿ ಬಂದಾಗಿನಿಂದಲೂ ಇವಳನ್ನು ಕಂಡರೆ ಏನೋ ಅಚ್ಚುಮೆಚ್ಚು. ತಾಯಿ ಇಲ್ಲದ ತಬ್ಬಲಿಯಾದ  ನನಗೆ ಒಂದು ರೀತಿಯಲ್ಲಿ ಅಮ್ಮನ ಪ್ರೀತಿಯನ್ನು ತೋರಿದವಳು. ನಾನು ಅತ್ತೆ ಎನ್ನುವುದಕ್ಕಿಂತ, ಅಮ್ಮ ಎನ್ನುತ್ತಿದ್ದುದೇ ಹೆಚ್ಚು.

ನನಗೆ ಮಕ್ಕಳಾದಾಗ ನನ್ನ ಅತ್ತೆ ‘ಹಾಳ್ ಮುಂಡೆ, ಬೇಕಾದ್ರೆ ಎಣ್ಣೆ ಹಚ್ಚಿ ನೀರು ಹಾಕುತಾಳೆ ಅವ್ಳ ಮಕ್ಕಳಿಗೆ’ ಎಂದು ದೂರ ತಳ್ಳಿದಾಗ, ಸುಶೀಲತ್ತೆ, ನನ್ನ ಮಕ್ಕಳಿಗೆ ನೀರು ಹಾಕಿ, ನನಗೂ ಬಾಣಂತನದಲ್ಲಿ ಚೆಂದವಾಗಿ ಎಣ್ಣೆ ಹಚ್ಚಿ,‘ಬಾಣಂತಿ ಬೆಚ್ಚಗಿರಬೇಕು ಕಣೆ’ ಎಂದು ಬಿಸಿ ಬಿಸಿ ನೀರನ್ನು ಎರೆಯುತ್ತಿದ್ದಳು. ಇವೆಲ್ಲಾ ಮರೆಯಲು ಸಾಧ್ಯವೇ ಇಲ್ಲ.

ಸುಶೀಲತ್ತೆಗೆ ಒಂದು ಗಂಡು, ಒಂದು ಹೆಣ್ಣು ಮಗು ಮಾತ್ರ. ನಾಗಣ್ಣ ಮಾವ ಚಿಕ್ಕಮಗಳೂರಿನ ಹತ್ತಿರದ ಯಾರದೋ ಕಾಫಿ ಎಸ್ಟೇಟ್‌ನಲ್ಲಿ ಮೇಸ್ತ್ರಿಯಾಗಿದ್ದರಿಂದ ಮನೆ, ಮಕ್ಕಳ ಜವಾಬ್ದಾರಿಯಲ್ಲ ಸುಶೀಲತ್ತೆದೇ. ದಿನ ಪೂರ್ತಿ ಕೆಲಸ, ಐದಕ್ಕೆ ಎದ್ದರೆ ಮುಗೀತು, ಇನ್ನು ರಾತ್ರಿ ಒಂಬತ್ತು ಗಂಟೆಗೆ ಚಿಕ್ಕಮಗಳೂರಿನಿಂದ ಬಾಣಾವರಕ್ಕೆ ನಮ್ಮೂರಿನ ಮೇಲೆ ಹೋಗುತ್ತಿದ್ದ ಕೊನೆ ಬಸ್‌ನಲ್ಲಿ ನಾಗಣ್ಣ ಮಾವ ಬಂದು ಊಟ ಮಾಡಿ ಮಲಗಿದ ಮೇಲೆಯೇ ಇವರಿಗೆ ವಿಶ್ರಾಂತಿ.

ಸುಶಿಲತ್ತೆ ಬೆಳಗಿನ ಕೆಲಸಗಳನ್ನು ಮುಗಿಸಿಕೊಂಡು ಸುಮಾರು ಹನ್ನೊಂದರ ಹೊತ್ತಿಗೆ ದನ ಎಮ್ಮೆಗಳನ್ನು ಹೊಡೆದುಕೊಂಡು ತೋಟಕ್ಕೆ ಹೋಗುತ್ತಿದ್ದಳು. ಬೆಳಿಗ್ಗೆಯ ಸಮಯದಲ್ಲಿ ನನಗೂ ಮನೆಯಲ್ಲಿ ಕೆಲಸವಿರುತ್ತಿದ್ದರಿಂದ ಅವಳ ಮನೆಗೆ ಬೆಳಗಿನ ಸಮಯದಲ್ಲಿ ಹೆಚ್ಚಾಗಿ ಹೋಗುತ್ತಿರಲಿಲ್ಲ. ಆದರೆ ಸಂಜೆ ಐದಾಗುವುದೇ ಕಾಯುತ್ತಿದ್ದೆ. ಸೂರಿನಡಿಯಲ್ಲಿ ನಿಂತು ಸುಶಿಲತ್ತೆ ತೋಟದಿಂದ ಬರುವುದನ್ನು ಕಾಯುತ್ತಾ. ಒಂದು ವೇಳೆ ನಾನೇರಾದರೂ ಕಾಣಲಿಲ್ಲವೇಂದರೆ, ದನಗಳನ್ನು ಅಂಗಳದಲ್ಲಿ ಕಟ್ಟಿ, ಕಿಟಕಿಯಲ್ಲಿ ಒಮ್ಮೆ ‘ಲಲಿತಾ,ಏನ್ ಮಾಡ್ತೀಯೇ’ ಎಂದು ಕೂಗಿ ಹೋಗುತ್ತಿದ್ದಳು.

ಸುಶೀಲತ್ತೆ, ದನಗಳ ಹಾಲು ಕರೆದು, ಅವುಗಳನ್ನು ಒಳಗೆ ಕಟ್ಟಿ, ಸಂಜೆಯ ವರ್ತನೆಯವರಿಗೆ ಹಾಲು ಕೊಟ್ಟು ಬರುವಷ್ಟರಲ್ಲಿ ಏಳಾಗುತಿತ್ತು. ನಾನೂ ಅದೇ ಸಮಯಕ್ಕೆ ಅವರ ಮನೆಯ ಮುಂದಿನ ಜಗಲಿಯ ಮೇಲೆ ಹಾಜರಾಗುತ್ತಿದ್ದೆ. ಬಿಸಿ ಬಿಸಿ ಕಾಫಿ ಹಿಡಿದು ಬರುತ್ತಿದ್ದರು. ಇಬ್ಬರೂ ಕಾಫಿ ಹೀರುತ್ತಾ ಕೂತರೆ ರಾತ್ರಿ ಮಾವಯ್ಯ ಬರುವತನಕ ನಮ್ಮ ಹರಟೆ ನಿಲ್ಲುತ್ತಿರಲಿಲ್ಲ. ಅಡುಗೆ, ರಂಗೋಲಿ, ಬಾಣಂತನ ಹೀಗೆ ಹತ್ತು ಹಲವು ವಿಷಯ ಬಗ್ಗೆ ಮಾತನಾಡುತ್ತಿದ್ದಳು.

ಇದು ಅವಳ ಅರವತ್ತು ವರುಷದ ದಿನನಿತ್ಯದ ಕೆಲಸಗಳು, ಮಾವಯ್ಯನ ಬಿಡುಗಾಸು ಸಂಬಳ, ಇವಳ ಒಂದಿಷ್ಟು ಹಣದಿಂದ ಮಕ್ಕಳನ್ನು ಓದಿಸಿದಳು, ಮಗಳಿಗೆ ಮದುವೆ ಮಾಡಿದಳು.

ಹೀಗೇ ಒಂದು ವರುಷದ ಈ ಹಬ್ಬ. ಅವತ್ತು ಹನ್ನೆರಡು ಗಂಟೆ ಹೊತ್ತಿಗೆ, ‘ಲಲಿತಾ, ಒಬ್ಬಟ್ಟು ತಿನ್ ಬಾರೆ’ ಎಂದು ಕೂಗಿ ಹೋದಳು. ನಾನು ತಕ್ಷಣವೇ ಹೋದೆ.

‘ಲಲಿತಾ, ಇನ್ ನಿಮ್ ಮಾವ ಚಿಕ್ಕಮಗಳೂರಿಗೆ ಕೆಲ್ಸಕ್ಕೆ ಹೋಗಲ್ಲ. ಮಗ ದುಡಿತಾನೆ, ಸಾಕು ಮಾಡಿ ಕೆಲ್ಸ ಅಂತ ಹೇಳಿದ್ದೆ. ಅದಕ್ಕೆ ಎಸ್ಟೇಟ್ ಯಜಮಾನ್ರು ಕೂಡ ಒಪ್ಕಂಡಿದಾರೆ. ಇವತ್ತು ಸುಶೀಲಮ್ಮನೋರನ್ನ ಕರ್ಕಂಡು ಬನ್ನಿ ಅಂತ ಹೇಳಿದಾರೆ. ಅವ್ರು ಬೆಳಿಗ್ಗೆನೇ ಹೋಗಿದಾರೆ. ನಾನು ಚಿಕ್ಕಮಗಳೂರಿಗೆ ಹೋಗಿ ಬರ್ತಿನಿ. ಸಂಜೆ ಏನಾದ್ರೂ ಬರದ್ ತಡವಾದ್ರೆ, ದೇವರಿಗೆ ದೀಪ ಹಚ್ಚಿ, ನಮ್ಮ ಗಂಗಮ್ಮನ ಜೊತೆ ಮಾಡ್ಕಂಡು ಆರತಿ ಬೆಳಗಿ ಬಿಡು.’ ಎಂದು ಹೇಳಿ ಚಿಕ್ಕಮಗಳೂರಿಗೆ ಹೋಗಲು ಬಸ್‌ಸ್ಟ್ಯಾಂಡ್‌ ಕಡೆ ಹೊರಟರು.

ಸುಮಾರು ಅರ್ಧ ಗಂಟೆಯಾಗಿತ್ತೇನೋ. ಮನೆ ಮುಂದೆ ಯಾರೋ ಮಾತನಾಡಿದಂತಾಯಿತು.‘ಹಳೇಬೀಡ್ ಕ್ರಾಸ್‌ನಲ್ಲಿ ಯಾವ್ದೋ ಚಿಕ್ಕಮಗಳೂರು ಬಸ್ ಆ್ಯಕ್ಸಿಡೆಂಟ್ ಆಗಿದ್ಯಂತೆ’. ಒಮ್ಮೆಗೆ ಜೀವ ಹೋಯಿತು. ದೇವರ ಮುಂದೆ ಹೋದೆ ಮತ್ತೆ ದೇವರ ಮೇಲೆ ಭಾರ ಹಾಕಲು. ಅಟ್ಟದ ಮೇಲೆ ಹೋದೆ, ಮತ್ತೆ ಕೆಳಗೆ ಬಂದು ವರಮಹಾಲಕ್ಷ್ಮಿಯ ಮುಂದೆ ಉರಿಯುತ್ತಿದ್ದ ದೀಪದ ಮುಂದೆ ಕುಳಿತೆ. ಮತ್ತೆ ಒಂದು ಗಂಟೆ ಕಳೆದಿರಬಹುದು, ಆಂಬುಲೆನ್ಸ್ ಮನೆಯ ಮುಂದೆ ಬಂದಂತೆ ಆಯಿತು. ಅಟ್ಟ ಇಳಿದು ಓಣಿಯಲ್ಲಿ ಓಡಿದೆ. ‘ನಿಧಾನ, ನಿಧಾನಕ್ಕೆ ಇಡ್ರಿ...’ ಎನ್ನುವ ಮಾತೊಂದು ಕೇಳಿಸುತ್ತಿತ್ತು. ಜನ ಹಾಗೂ ಅಂದರು ‘ಮುತ್ತೈದೆ ಸಾವು ಕಣ್ರಿ ಸುಶೀಲಮ್ಮನದು’ ಅಂತ ಆದರೆ ನನಗೆ ಮಮತೆಯ ಮಡಿಲೇ ಮಡಿದಂತಾಗಿತ್ತು.

ಸಂಜೆ ಐದಾಗುವುದೇ ತಡ, ‘ಲಲಿತಾ,ಏನ್ ಮಾಡ್ತಿದಿಯೇ...’ ಎನ್ನುವುದು ಕೇಳಿಸುತ್ತದೆ. ಸುಮ್ಮನೆ ಓಣಿಯಲ್ಲಿ ಹೋಗಿ, ಜಗಲಿಯ ಮೇಲೆ ಕುಳಿತು ಬರುವುದಷ್ಟೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)