ಗುರುವಾರ , ಫೆಬ್ರವರಿ 25, 2021
19 °C

ಇದು ಯಶಸ್ವಿಗಾಥೆ...

ಹೇಮಾ ವೆಂಕಟ್ Updated:

ಅಕ್ಷರ ಗಾತ್ರ : | |

Deccan Herald

ಡಿಸೆಂಬರ್ 3 ವಿಶ್ವ ಅಂಗವಿಕಲರ ದಿನ. ಅಂಗವಿಕಲತೆಯನ್ನು ಮೆಟ್ಟಿನಿಂತು ಅಂಗವಿಕಲರನ್ನು ಸಂಘಟಿಸುತ್ತಾ, ಅವರ ಸೌಲಭ್ಯಗಳಿಗಾಗಿ ಶ್ರಮಿಸುತ್ತಿರುವ ಜಿ.ಎನ್‌. ಯಶಸ್ವಿಯ ಕತೆ ಅನೇಕರಿಗೆ ಪ್ರೇರಣೆಯಾಗುವಂಥದ್ದು.

ಜಗತ್ತಿಗೆ ಬಂದಾಗ ಈ ಮಗು ಅಳಲಿಲ್ಲ. ಹೆರಿಗೆ ಸಮಸ್ಯೆಯಿಂದಾಗಿ ಮಗುವಿನ ಮಿದುಳಿನ ಎಡ ಭಾಗದ ಕೆಲ ಭಾಗಗಳಿಗೆ ಹಾನಿಯಾಯಿತು. ಇದರಿಂದ ಮಗುವಿನ ಬಲ ಭಾಗದ ಶಕ್ತಿ ಕುಂದಿತ್ತು. ಜೊತೆಗೆ ಬೌದ್ಧಿಕ ಸಾಮರ್ಥ್ಯಕ್ಕೂ ಹಾನಿಯಾಯಿತು. ಈ ಪರಿಸ್ಥಿತಿಗೆ ಸೆರೆಬ್ರಲ್ ಪಾಲ್ಸಿ ಅಥವಾ ಸ್ಪಾಸ್ಟಿಕ್ ಎನ್ನುತ್ತಾರೆ. ಹಾಗಂತ, ಹೆತ್ತವರು ಅಳಲಿಲ್ಲ. ಸಾಮಾನ್ಯ ಮಕ್ಕಳ ಜೊತೆಗೇ ಮಗುವನ್ನು ಬೆಳೆಸಬೇಕೆಂಬ ಕನಸು ಕಂಡರು. ಅದು ಸಾಧ್ಯವಾಗಲಿಲ್ಲ. ಆದರೆ, ಆ ಮಗು ಈಗ ಅಂಗವಿಕಲರ ಪಾಲಿನ ಆಶಾಕಿರಣ. ರಾಜ್ಯ ಮಾತ್ರವಲ್ಲ ದೇಶದಾದ್ಯಂತ ಅಂಗವಿಕಲರ ಹಕ್ಕುಗಳಿಗಾಗಿ ಹೋರಾಡುತ್ತಾ, ಅಂಗವಿಕಲರನ್ನು ಸಂಘಟಿಸುತ್ತಿರುವ 29ರ ಯುವಕ. ಕರ್ನಾಟಕ ರಾಜ್ಯ ಅಂಗವಿಕಲರ ಮತ್ತು ಪಾಲಕರ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಜಿ.ಎನ್‌. ಯಶಸ್ವಿ. ವಿಶೇಷವೆಂದರೆ, ಈತ ಅಂಗವಿಕಲರ ಕಾಯ್ದೆ 2016ರ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ರಚಿಸಿದ ಸಲಹಾ ಸಮಿತಿಯ ಸದಸ್ಯ!

ಕಾನ್ವೆಂಟ್‌ನಲ್ಲಿ ಎಲ್‌ಕೆಜಿ, ಯುಕೆಜಿ, ನಂತರ ಸೋಫಿಯಾ ಸ್ಪಾಸ್ಟಿಕ್ ಮಕ್ಕಳ ವಿಶೇಷ ಶಾಲೆಯಲ್ಲಿ ಐದು ವರ್ಷ ಶಿಕ್ಷಣ ಪಡೆದರೂ ಓದು ಬರಹ ಸಾಧ್ಯವಾಗಿರಲಿಲ್ಲ. ಆಗ ಯಶಸ್ವಿಗೆ ಹತ್ತು ವರ್ಷ. ಬ್ಯಾಂಕ್‌ ಉದ್ಯೋಗಿ ಅಮ್ಮನಿಗೆ ವರ್ಗಾವಣೆ ಅನಿವಾರ್ಯವಾಗಿತ್ತು. ಚೆನ್ನೈಗೆ ವರ್ಗ ಮಾಡಿಸಿಕೊಂಡು ಅಲ್ಲಿನ ‘ವಿದ್ಯಾಸಾಗರ’ ವಿಶೇಷ ಶಾಲೆಗೆ ದಾಖಲಿಸಿದರು. ಅಲ್ಲಿ ಮಗುವಿನ ಮಾನಸಿಕ ಸ್ಥಿತಿಯ ಮಟ್ಟಕ್ಕನುಗುಣವಾಗಿ ಬೇರೆ ಬೇರೆ ಗುಂಪುಗಳನ್ನು ಮಾಡಿ ಶಿಕ್ಷಣ ನೀಡಲಾಗುತ್ತದೆ. ಈ ಮಗುವನ್ನು ಕೆಂಪು ಗುಂಪಿಗೆ ಸೇರಿಸಿಕೊಳ್ಳುತ್ತಾರೆ. ಓದು, ಬರಹ ಕಲಿಸಲು ಸಾಧ್ಯವೇ ಇಲ್ಲದಿರುವ ಮಕ್ಕಳು ಕೆಂಪು ಗುಂಪಿನಲ್ಲಿರುತ್ತಾರೆ. ಆದರೆ, ಮುಂದೆ ನಡೆದ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಈ ಬಾಲಕ ಕೆಂಪು ಗುಂಪಿನಿಂದ ಹಸಿರು ಗುಂಪಿಗೆ ಬಡ್ತಿ ಪಡೆಯುತ್ತಾನೆ. 

ಕೆಂಪು ಗುಂಪಿನಿಂದ ಹಸಿರು ಗುಂಪಿಗೆ ಬಡ್ತಿ ಪಡೆದ ಕತೆ ರೋಚಕವಾಗಿದೆ. ತಂದೆ ಕಾಮ್ರೇಡ್‌ ಜಿ.ಎನ್‌. ನಾಗರಾಜ್. ಕಾರ್ಮಿಕ, ರೈತ ಹೋರಾಟ ಎಂದು ದೇಶದೆಲ್ಲೆಡೆ ಓಡಾಡುತ್ತಿದ್ದ ಅಪ್ಪ, ಮಗನನ್ನೂ ಜೊತೆಗೇ ಕರೆದೊಯ್ಯುತ್ತಿದ್ದರು. ಅಂಗವಿಕಲ ಮಗುವನ್ನು ಪಕ್ಕದಲ್ಲಿ ಮಲಗಿಸಿಕೊಂಡೇ ಭಾಷಣ ಮಾಡುತ್ತಿದ್ದ ದಿನಗಳವು. ಅದು ಗ್ಯಾಟ್‌ ಒಪ್ಪಂದ, ಡಂಕೆಲ್ ಪ್ರಸ್ತಾವದ ವಿರುದ್ಧ ದೇಶದಾದ್ಯಂತ ಚಳವಳಿ ನಡೆಯುತ್ತಿದ್ದ ಕಾಲ. ಮಗನನ್ನು ಕರೆದುಕೊಂಡು ಹತ್ತಾರು ಸಭೆಗಳಲ್ಲಿ ನಾಗರಾಜ್‌ ಭಾಷಣ ಮಾಡುತ್ತಿದ್ದರು. ಒಮ್ಮೆ ಬೆಂಗಳೂರಿನಿಂದ ತುಮಕೂರು ಕಡೆ ಕಾರಿನಲ್ಲಿ ತೆರಳುತ್ತಿದ್ದಾಗ, ಅಪ್ಪ– ಚಿಕ್ಕಪ್ಪ ಗ್ಯಾಟ್‌ ಒಪ್ಪಂದದ ಬಗ್ಗೆ ಚರ್ಚೆ ಮಾಡುತ್ತಿರುತ್ತಾರೆ. ಅಲ್ಲಿಯವರೆಗೂ ಸುಮ್ಮನಿದ್ದ ಮಗು ಏಕಾಏಕಿ ಗ್ಯಾಟ್‌ ಒಪ್ಪಂದದಿಂದಾಗಿ ರೈತರ ಮೇಲೆ ಆಗುವ ದುಷ್ಪರಿಣಾಮ ಏನು ಗೊತ್ತಾ... ಎಂದು ಹತ್ತು ನಿಮಿಷ ನಿರರ್ಗಳವಾಗಿ ಮಾತನಾಡುತ್ತಾನೆ. ಅಪ್ಪ– ಚಿಕ್ಕಪ್ಪ ನಿಬ್ಬೆರಗಾಗಿ ಆಲಿಸಿದರು. ಆ ಕ್ಷಣ ಈ ಮಗು ಅವರಿಗೆ ವಿಶೇಷ ಎನಿಸಿತು. ತಕ್ಷಣ ಚೆನ್ನೈಗೆ ತೆರಳಿ ಅಲ್ಲಿನ ಶಿಕ್ಷಕರ ಜೊತೆ ಈ ವಿಚಾರ ಪ್ರಸ್ತಾಪಿಸಿದಾಗ ಕೆಂಪು ಗುಂಪಿನಿಂದ, ಹಸಿರು ಗುಂಪಿಗೆ ಬಡ್ತಿ ಸಿಗುತ್ತದೆ. 

ಚೆನ್ನೈನಿಂದ ಬೆಂಗಳೂರಿಗೆ ಬಂದ ಕುಟುಂಬ ಮಗನ ಶಿಕ್ಷಣಕ್ಕಾಗಿ ಶಾಲೆಯಿಂದ ಶಾಲೆಗೆ ಅಲೆದರೂ ಪ್ರಯೋಜನವಾಗಲಿಲ್ಲ. ಮಗುವಿನ ಜ್ಞಾನದ ಬಗ್ಗೆ ಹೇಳಿದರೆ ಯಾವ ಶಾಲೆಯವರೂ ಸೇರಿಸಿಕೊಳ್ಳಲಿಲ್ಲ. ಕಾರಣ ಹದಿನಾರು ವರ್ಷವಾಗಿದೆ ಎಂಬುದಷ್ಟೇ. ಮಗನ ಶಿಕ್ಷಣದ ಆಸೆ ಕೈಬಿಟ್ಟು, ಆತ ಸ್ವತಂತ್ರವಾಗಿ ತನ್ನ ಕೆಲಸ ಮಾಡಿಕೊಳ್ಳುವಷ್ಟು ಶಕ್ತಿ ತುಂಬುತ್ತಾರೆ. ಚೆನ್ನೈನ ಶಾಲೆಯಲ್ಲಿ ಅಂಗವಿಕಲರ ಹಕ್ಕುಗಳು, ಅದಕ್ಕಾಗಿ ಹೇಗೆ ಹೋರಾಡಬೇಕು ಲೀಡರ್‌ಶಿಪ್‌ ಕ್ವಾಲಿಟಿ ಬೆಳೆಸಿಕೊಳ್ಳುವ ಬಗ್ಗೆ ತಿಳಿಸಿಕೊಡಲಾಗಿತ್ತು. ಅದನ್ನು ಬದುಕಿನಲ್ಲಿ ರೂಢಿಸಿಕೊಂಡಿರುವ ಯಶಸ್ವಿ ಈಗ ಅಂಗವಿಕಲರ ಸಂಘಟಕ. ಎಲ್ಲರಿಗೂ ಸಂಘಟನೆ ಇದೆ, ನಮಗೆ ಯಾಕಿಲ್ಲ? ಎಂದು ಹಟ ಹಿಡಿದು ಮನೆಯಲ್ಲಿಯೇ ಅಂಗವಿಕಲರ ಸಂಘದ ಕಚೇರಿ ತೆರೆಯಲು ಪ್ರೇರಣೆಯಾಗಿದ್ದಾನೆ.

ಈತನ ಜ್ಞಾನ ಯಾವುದೇ ಸಾಮಾನ್ಯ ವ್ಯಕ್ತಿಗಿಂತ ಕಡಿಮೆ ಇಲ್ಲ. ಜಗತ್ತಿನ, ದೇಶದ ವಿದ್ಯಮಾನಗಳ ಅರಿವಿದೆ. ದೊಡ್ಡವರ ಚರ್ಚೆಯಲ್ಲಿ ತನ್ನ ಅಭಿಪ್ರಾಯ ಮಂಡಿಸಬಲ್ಲ. ಅಂಗವಿಕಲರ ಸಂಘಟನೆ ಕಟ್ಟಿ ಮನೆಯಲ್ಲಿಯೇ ಕಚೇರಿ ಇಟ್ಟುಕೊಂಡು ರಾಜ್ಯದ ಮೂಲೆ ಮೂಲೆಗಳಿಂದ ಬರುವ ಅಂಗವಿಕಲರ ಸಮಸ್ಯೆಗಳನ್ನು ಆಲಿಸುತ್ತಾನೆ. ಇಡೀ ರಾಜ್ಯದಾದ್ಯಂತ ಅವರ ಹಕ್ಕುಗಳಿಗಾಗಿ ಓಡಾಡುತ್ತಾನೆ. ದೆಹಲಿಯಲ್ಲಿ ಇತ್ತೀಚೆಗೆ ನಡೆದ ಅಂಗವಿಕಲರ ರಾಷ್ಟ್ರೀಯ ಮಟ್ಟದ ಸಮಾವೇಶಕ್ಕೆ ಹೆತ್ತವರ ನೆರವಿಲ್ಲದೇ ರೈಲಿನಲ್ಲಿ ಹೋಗಿ ಬಂದಿದ್ದಾನೆ.  

ಈತನ ಸಾಹಸಗಾಥೆ ಅಲ್ಲಿಗೇ ಮುಗಿಯುವುದಿಲ್ಲ. ವಿಧಾನಸೌಧದವರೆಗೂ ತನ್ನವರ ಬೇಡಿಕೆಗಳನ್ನು ಕೊಂಡೊಯ್ದು, ಅಧಿಕಾರಿಗಳನ್ನು ಭೇಟಿ ಮಾಡಿ ಕೆಲಸ ಮಾಡಿಸುವ ಚಾಕಚಕ್ಯತೆ ಇದೆ. ಅಂಗವಿಕಲರ ಕಾಯ್ದೆ 2016ರ ಜಾರಿಗೆ ದೆಹಲಿಯಲ್ಲಿ ನಡೆದ ಹೋರಾಟದಲ್ಲಿ ಭಾಗವಹಿಸಿದ್ದಾನೆ. ಬೆಂಗಳೂರಿನ ಟೌನ್‌ಹಾಲ್‌ ಮುಂದೆ ನಡೆದ ಸುಮಾರು ಐವತ್ತಕ್ಕೂ ಹೆಚ್ಚು ಹೋರಾಟಗಳಲ್ಲಿ ಭಾಗವಹಿಸಿದ್ದಾನೆ. ಸದಾ ನ್ಯೂಸ್‌ ಚಾನೆಲ್‌ಗಳನ್ನು ನೋಡಿ ಪ್ರಚಲಿತ ವಿದ್ಯಾಮಾನ ತಿಳಿದುಕೊಳ್ಳುತ್ತಾನೆ. ಇಂಗ್ಲಿಷ್‌ ಚಾನೆಲ್‌ಗಳಲ್ಲಿ ನಡೆಯುವ ಸಮಕಾಲೀನ ವಿಷಯಗಳ ಚರ್ಚೆಗಳನ್ನು ಆಲಿಸುತ್ತಾನೆ. ಅಲ್ಲೇನಾದರೂ ಸಂಶಯ ಬಂದರೆ, ಕನ್ನಡ, ತಮಿಳು ಚಾನೆಲ್‌ಗಳಲ್ಲಿನ ಅದೇ ವಿಷಯದ ಚರ್ಚೆ ಆಲಿಸುತ್ತಾನೆ. ಮಕ್ಕಳ ಚಾನೆಲ್, ಮನರಂಜನೆ, ಸಿನಿಮಾ ನೋಡುವ ಆಸಕ್ತಿ ಇಲ್ಲ.  

ಅಗಾಧ ನೆನಪಿನ ಶಕ್ತಿ ಈತನಿಗಿದೆ. ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳ ಹೆಸರು, ಅಂಗವಿಕಲರ ಇಲಾಖೆಯ ಅಧಿಕಾರಿಗಳು, ತಾನು ಹಲವು ವರ್ಷಗಳ ಹಿಂದೆ ಭೇಟಿ ಮಾಡಿದ ವ್ಯಕ್ತಿಗಳನ್ನು ಥಟ್ಟಂತ ಹೇಳಬಲ್ಲ. ಎಲ್‌ಕೆಜಿ ಓದಿದ ಕಾನ್ವೆಂಟ್‌, ಸೋಫಿಯಾ ಶಾಲೆ ಮತ್ತು ಚೆನ್ನೈನ ಶಾಲೆಯ ಶಿಕ್ಷಕರನ್ನು, ಅಲ್ಲಿನ ಚಟುವಟಿಕೆಗಳನ್ನು, ಅಲ್ಲಿಗೆ ಯಾರೆಲ್ಲ ಭೇಟಿ ಕೊಟ್ಟಿದ್ದರು ಎಂದು ಈಗಲೂ ನೆನಪಿಸಿಕೊಳ್ಳುತ್ತಾನೆ.

ಕಾಯ್ದೆಗಾಗಿ ಹೋರಾಟ

ಅಂಗವಿಕಲರ ಹಕ್ಕುಗಳಿಗಾಗಿ ವಿಶ್ವಸಂಸ್ಥೆಯ ಒಡಂಬಡಿಕೆಗೆ‌ ಅನುಗುಣವಾಗಿ ಹೊಸ ಕಾಯ್ದೆಗಾಗಿ ಹತ್ತು ವರ್ಷಗಳಿಗೂ‌ ಹೆಚ್ಚು ಕಾಲ ನಡೆದ ಹೋರಾಟಗಳ ಪ್ರತಿ ಹಂತದಲ್ಲಿಯೂ ಕ್ರಿಯಾಶೀಲವಾಗಿ ಭಾಗವಹಿಸಿದ್ದಾನೆ. ಕೇಂದ್ರ ಸರ್ಕಾರ ಬಿಡುಗಡೆ‌ ಮಾಡಿದ ಕರಡು ತಿದ್ದುಪಡಿ ಸೂಚಿಸಿದ‌ ಕಾರ್ಯಾಗಾರ, ಕಾನೂನಿನ‌ ಶೀಘ್ರ ಅಂಗೀಕಾರಕ್ಕಾಗಿ ದೆಹಲಿಯಲ್ಲಿ ನಡೆದ ಎರಡು‌ ಪ್ರತಿಭಟನೆಗಳಲ್ಲಿ‌‌ ಭಾಗವಹಿಸುವುದಲ್ಲದೆ, ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಗಳನ್ನು ಸಂಘಟಿಸುವುದರಲ್ಲಿ ಚುರುಕಾಗಿ ಪಾತ್ರ ವಹಿಸಿದ್ದಾನೆ.

ಹೀಗೆ ಹಲವು ಹೋರಾಟಗಳ ನಂತರ ‘ಅಂಗವಿಕಲರ ಕಾಯ್ದೆ 2016’ ಅಂತಿಮ ರೂಪ‌ ಪಡೆದ ಕರಡನ್ನು ಸಂಸತ್ತಿನ ‌ಮುಂದೆ ಮಂಡಿಸುವ‌ ಸಮಯದಲ್ಲಿ ನೋಟು‌ ನಿಷೇಧ ಘೋಷಣೆಯಾಯಿತು. ಸಂಸತ್ತು ಕದನ ರಂಗವಾಗಿಬಿಟ್ಟಿತು. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಯಿತು. ಆಗ ತೀವ್ರಗೊಂಡ‌ ಈ ಹೋರಾಟಗಳ ಫಲವಾಗಿ ಎಲ್ಲಾ ಪಕ್ಷಗಳೂ ಎರಡು ಗಂಟೆಗಳ ಕದನ ವಿರಾಮ ಒಪ್ಪಂದ‌ ಮಾಡಿಕೊಂಡು ಈ ಕಾನೂನನ್ನು ಅಂಗೀಕರಿಸಿದವು. ಇಷ್ಟು ದೀರ್ಘ ಹೋರಾಟದ ನಂತರ ಪಡೆದ ಈ ಕಾನೂನು ಇನ್ನೂ ಜಾರಿಗೆ ಬಂದಿಲ್ಲ. ಕೇಂದ್ರ ಸರ್ಕಾರ ಅದರ ಜಾರಿಗೆ ಅವಶ್ಯವಾದ ಬಜೆಟ್ ನೀಡಲಿಲ್ಲ. ರಾಜ್ಯ‌ ಸರ್ಕಾರ ಅದರ ಜಾರಿಗೆ ಅಗತ್ಯವಾದ ನಿಯಮಗಳನ್ನು ರೂಪಿಸಿಲ್ಲ ಎಂಬ ಸಿಟ್ಟು ಯಶಸ್ವಿಗೆ. 

ಪಂಕ್ತಿಭೇದ ಮತ್ತು ಮಡೆಸ್ನಾನದ ವಿರುದ್ಧ ಉಡುಪಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಬಂಧನಕ್ಕೂ ಒಳಗಾಗಿದ್ದ. 

ಇಷ್ಟೆಲ್ಲ ತಿಳಿದ ಮೇಲೂ ಅಚ್ಚರಿಯೊಂದಿದೆ. ಯಶಸ್ವಿಗೆ ಈಗಲೂ ಓದಲು– ಬರೆಯಲು ಬರುವುದಿಲ್ಲ. ಆದರೆ, ಟೀವಿಗಳಲ್ಲಿ ಸ್ಕ್ರಾಲ್‌ ಆಗುವ ಪದಗಳನ್ನು ಗ್ರಹಿಸುತ್ತಾನೆ. ಸದಾ ಸಾಮಾಜಿಕ ಮಾಧ್ಯಮಗಳನ್ನು ಜಾಲಾಡುತ್ತಿರುತ್ತಾನೆ. ಪದಗಳನ್ನು ನೋಡಿಯೇ ವಿಷಯ ಗುರುತಿಸುವ (sight reading) ಸಾಮರ್ಥ್ಯವಿದೆ ಎಂದು ತಂದೆ ಜಿ.ಎನ್‌. ನಾಗರಾಜ್‌ ಹೇಳುತ್ತಾರೆ. 

‘ಮನೆಯಲ್ಲಿ ಪಾತ್ರೆ ತೊಳೆಯುವ ಜವಾಬ್ದಾರಿ ಮಗನಿಗೆ ನೀಡಲಾಗಿದೆ. ಅದನ್ನು ಆತ ಅಚ್ಚುಕಟ್ಟಾಗಿ ನಿರ್ವಹಿಸುತ್ತಾನೆ. ಬಲಗೈ ಬೆರಳುಗಳು ಸ್ವಾಧೀನವಿಲ್ಲ. ಆದರೆ, ಮುಂಗೈ ಬಳಸಿ ಪಾತ್ರೆಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ಎಡಗೈನಿಂದ ಪಾತ್ರೆ ತೊಳೆಯುತ್ತಾನೆ. ಮೊದಲ ಬಾರಿಗೆ ಅಪ್ಪ ಜೊತೆಗಿಲ್ಲದೇ ದೆಹಲಿಗೆ ಪ್ರಯಾಣ ಮಾಡಿ, ಅಲ್ಲಿ ಮೂರು ದಿನ ಇದ್ದು, ಮತ್ತೆ ರೈಲಿನಲ್ಲಿ ವಾಪಸಾಗಿದ್ದಾನೆ. ಕೋಲ್ಕತ್ತಾಗೂ ಹೋಗಿ ಬಂದಿದ್ದಾನೆ. ಈಗೀಗ ಮನೆಯವರ ಸಹಾಯವಿಲ್ಲದೇ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದಾನೆ’ ಎಂಬ ನಿರಾಳತೆ ಅಮ್ಮ ನಿರುಪಮಾ ಅವರದು. 

‘ಹುಟ್ಟಿದಾಗ ಮಗು ಅಳದಿದ್ದರೆ, ಹೆತ್ತವರು ಜೀವನವಿಡೀ ಅಳಬೇಕಾಗುತ್ತದೆ’ ಎಂಬುದು ಈತನ ವಿಷಯದಲ್ಲಿ ಸುಳ್ಳಾಗಿದೆ. ತಾನೂ ಅಳದೇ, ಹೆತ್ತವರಿಗೂ, ಸಮಾಜಕ್ಕೂ ನಗುವನ್ನು ಹಂಚುವುದರಲ್ಲಿ ಯಶಸ್ವಿಯಾಗಿದ್ದಾನೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.