ಬುಧವಾರ, ಮೇ 18, 2022
24 °C

`ಅಂಗಡಿ ತೆರವು ಕಾರ್ಯಾಚರಣೆಗೆ ತಡ ಬೇಡ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಚನ್ನಪಟ್ಟಣ ಮತ್ತು ಮಾಗಡಿ ಪಟ್ಟಣಗಳಲ್ಲಿ ರಸ್ತೆ ಬದಿಗಳ ಅಂಗಡಿ ತೆರವಿಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಜಿಲ್ಲಾಧಿಕಾರಿ ವಿ. ಶ್ರೀರಾಮರೆಡ್ಡಿ ಆದೇಶಿಸಿದರು.ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಮಂಗಳವಾರ ಸಂಜೆ ನಡೆದ ಜಿಲ್ಲೆಯ ನಾಲ್ಕು ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, `ಕನಕಪುರದಲ್ಲಿ ಈಗಾಗಲೆ ಪಾದಚಾರಿ ಅಂಗಡಿ ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಅಲ್ಲಿ ಪಾದಚಾರಿಗಳ ಅಂಗಡಿಯವರೇ ಸ್ವಯಂಪ್ರೇರಿತವಾಗಿ ತೆರವುಗೊಳಿಸಿದ್ದಾರೆ. ಹಾಗೆಯೇ ಮಾಗಡಿ ಮತ್ತು ಚನ್ನಪಟ್ಟಣಗಳಲ್ಲೂ ಅಂಗಡಿ ಮಾಲೀಕರು ಸ್ವಯಂ ಪ್ರೇರಿತರಾಗಿ ತೆರವು ಕಾರ್ಯಾಚರಣೆಗೆ ಸಹಕಾರ ನೀಡಬೇಕು' ಎಂದರು.

ರಾಮನಗರದಲ್ಲಿ ಕರಗ ಉತ್ಸವ ಮುಗಿದ ಕೂಡಲೇ ನಗರದ ಮಾಗಡಿ ರಸ್ತೆ, ಎಂ.ಜಿ ರಸ್ತೆಯಲ್ಲಿರುವ ಪಾದಚಾರಿ ಅಂಗಡಿಗಳನ್ನು ತೆರವುಗೊಳಿಸಲು ಕಾರ್ಯಾಚರಣೆ ನಡೆಸಲಾಗುವುದು ಎಂದು ಹೇಳಿದರು.ಡೆಂಗೆ-ಮುನ್ನೆಚ್ಚರಿಕೆಗೆ ಸೂಚನೆ: ಜಿಲ್ಲೆಯಲ್ಲೆ ಡೆಂಗೆ ಪ್ರಕರಣ ಹೆಚ್ಚಾಗುತ್ತಿವೆ. ನಗರಸಭೆ ಮತ್ತು ಪುರಸಭೆಗಳು ಎಚ್ಚೆತ್ತುಕೊಂಡು ನಗರಮಟ್ಟದಲ್ಲಿ ಸ್ವಚ್ಛತಾ ಆಂದೋಲನ ಹಮ್ಮಿಕೊಳ್ಳಬೇಕು. ಸೊಳ್ಳೆ ನಿಯಂತ್ರಿಸಲು `ಫಾಗಿಂಗ್' ಯಂತ್ರವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಅಗತ್ಯ ಇರುವೆಡೆ ಬ್ಲೀಚಿಂಗ್ ಪೌಡರ್ ಸಿಂಪಡಿಸಬೇಕು. ರಾಮನಗರದಲ್ಲಿ ಕರಗ ಉತ್ಸವ ಇರುವುದರಿಂದ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಸೂಚಿಸಿದರು.ಟ್ಯಾಂಕರ್ ನೀರು ಪೂರೈಕೆ ನಿಲ್ಲಿಸಿ: ಜಿಲ್ಲೆಯಲ್ಲಿ ಈಗಾಗಲೇ ಮಾಗಡಿ, ಚನ್ನಪಟ್ಟಣ, ಕನಕಪುರದಲ್ಲಿ ಕುಡಿಯುವ ನೀರನ್ನು ಸಮರ್ಪಕವಾಗಿ ಪೂರೈಸಲಾಗುತ್ತಿದೆ. ಆದರೆ ರಾಮನಗರದಲ್ಲಿ ಕುಡಿಯುವ ನೀರನ್ನು ಟ್ಯಾಂಕರ್‌ಗಳಲ್ಲಿ ಪೂರೈಸುತ್ತಿರುವುದು ಏಕೆ? ಐದು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಸಾರ್ವಜನಿಕರಿಂದ ದೂರುಗಳು ಬಂದಿವೆ. ಜಲಮಂಡಳಿ ಅಧಿಕಾರಿಗಳು ಏಕೆ ಸೂಕ್ತ ಕ್ರಮ ತೆಗೆದುಕೊಂಡಿಲ್ಲ ಎಂದು ಜಿಲ್ಲಾಧಿಕಾರಿ ತರಾಟೆಗೆ ತೆಗೆದುಕೊಂಡರು.ಕೂಡಲೇ ರಾಮನಗರದ ನಗರ ವ್ಯಾಪ್ತಿಯಲ್ಲಿಯೂ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡುವುದನ್ನು ನಿಲ್ಲಿಸಿ, ಪ್ರತಿದಿನ ಮನೆಗಳಿಗೆ ನೀರು ಪೂರೈಕೆಯಾಗುವಂತೆ ಕ್ರಮ ತೆಗೆದುಕೊಳ್ಳಿ ಎಂದು ಅವರು ನಿರ್ದೇಶಿಸಿದರು. ಕೊಳವೆ ಬಾವಿಗಳ ಮೂಲಕ ಬರುವ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸರಿಯಾದ ಕ್ರಿಯಾ ಯೋಜನೆಯನ್ನು ರೂಪಿಸದಿರುವುದು ಬೇಜಾವಾಬ್ದಾರಿತನಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದರು.ಸಬೂಬು ಸಲ್ಲದು: ಜಿಲ್ಲೆಯ ನಗರಸಭೆ, ಪುರಸಭೆಗಳು ತಮ್ಮಲ್ಲಿರುವ ಅನುದಾನ ಹಾಗೂ ಸರ್ಕಾರದಿಂದ ಬಂದಿರುವ ಅನುದಾನಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಸಮರ್ಪಕವಾಗಿ ಕ್ರಿಯಾ ಯೋಜನೆ ರೂಪಿಸಿಕೊಳ್ಳದೆ ಇರುವುದರಿಂದ ಬರುವ ಅನುದಾನಗಳನ್ನು ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಸಭೆಗಳಲ್ಲಿ ಭಾಗವಹಿಸುವ ಅಧಿಕಾರಿಗಳು ಸಬೂಬು ಹೇಳುವುದನ್ನು ಬಿಟ್ಟು ಅನುದಾನಗಳನ್ನು ಸಮರ್ಪಕ ರೀತಿಯಲ್ಲಿ ಬಳಸಿಕೊಳ್ಳಲು ಚಿಂತಿಸಬೇಕು. ಕಂದಾಯ ಸಂಗ್ರಹಕ್ಕೂ ಒತ್ತು ನೀಡಬೇಕು ಎಂದು ಅವರು ಸೂಚಿಸಿದರು.ಸ್ಥಳೀಯ ಶಾಸಕರ ಮೂಲಕ ನಗರೋತ್ಥಾನ ಯೋಜನೆಗಳಿಗೆ ಗುದ್ದಲಿ ಪೂಜೆ ನೆರವೇರಿಸಬೆಕು. ವಾರ್ಡ್‌ಗಳಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಲು ಪ್ರತಿ ವಾರ್ಡ್‌ನಲ್ಲೂ ವಾರ್ಡ್ ಸಮಿತಿ ರಚಿಸಬೇಕು. ಇದಕ್ಕೂ ಮೊದಲು ಪತ್ರಿಕಾ ಪ್ರಕಟಣೆಗಳನ್ನು ನೀಡಿ ಸ್ಥಳೀಯರನ್ನು ಆಯ್ಕೆ ಮಾಡಬೇಕು. ಇದರಿಂದ ಸಮಸ್ಯೆಗಳು ಬಗೆಹರಿಯಲು ಸಾಧ್ಯವಾಗುತ್ತದೆ ಎಂದು ಅವರು ಸೂಚಿಸಿದರು.ಘನತ್ಯಾಜ್ಯ ವಸ್ತುಗಳ ನಿರ್ವಹಣೆ, ವಿವಿಧ ಕಾಮಗಾರಿಗಳು, ಬಡತನ ನಿರ್ಮೂಲನೆ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು. ರಾಮನಗರ ನಗರ ಸಭೆಯ ಆಯುಕ್ತ ಜಿ.ಎ. ಯಶವಂತ್ ಕುಮಾರ್, ಚನ್ನಪಟ್ಟಣ ನಗರಸಭೆ ಆಯುಕ್ತ ಮುನಿಸ್ವಾಮಪ್ಪ, ಮಾಗಡಿ ಪುರಸಭೆ ಅಧಿಕಾರಿ ಮಂಜುನಾಥ್, ಕನಕಪುರ ಪುರಸಭೆ ಅಧಿಕಾರಿ ಮಾಯಣ್ಣಗೌಡ, ಯೋಜನಾ ನಿರ್ದೇಶಕಿ ವೈಶಾಲಿ, ನಗರಸಭೆಯ ಪರಿಸರ ಅಭಿಯಂತರೆ ಬಿ.ಸಿ. ಅರ್ಚನಾ, ಎಂಜಿನಿಯರ್ ಷಣ್ಮಗಪ್ಪ, ಸಮುದಾಯ ಅಧಿಕಾರಿ ಸಿದ್ದರಾಜು ಇತರರು ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.