ಬುಧವಾರ, ಮೇ 12, 2021
18 °C

ಅಂಗನವಾಡಿ ಪಕ್ಕದಲ್ಲೇ ವಾಸ ಮಾಡಿ: ಕೃಷ್ಣ ಗೌಡಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: `ಅಂಗನವಾಡಿಯಿಂದ ಕನಿಷ್ಠ ಐದು ಕಿಲೋ ಮೀಟರ್‌ಗಿಂತ ದೂರದಲ್ಲಿ ವಾಸ್ತವ್ಯ ಮಾಡಿರುವ ಅಂಗನವಾಡಿ ಕಾರ್ಯಕರ್ತೆಯರು ಇನ್ನು ಮುಂದೆ ಅಂಗನವಾಡಿ ಇರುವ ಕಡೆ ವಾಸ್ತವ್ಯ ಮಾಡಲು ಕ್ರಮ ಕೈಗೊಳ್ಳಬೇಕು' ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೃಷ್ಣ ಗೌಡಾ ಸೂಚನೆ ನೀಡಿದರು.ನಗರದ ಎಂ.ಜಿ.ರಸ್ತೆಯಲ್ಲಿರುವ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.`ಕೆಲವು ಕಡೆಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಎಂಟು ಕಿಲೋ ಮೀಟರ್‌ಗಿಂತಲೂ ದೂರದಿಂದ ಬರುತ್ತಿದ್ದು, ಅಂಗವಾಡಿಗಳನ್ನು ಸಮರ್ಪಕವಾಗಿ ನಡೆಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಆದಷ್ಟು ಕೇಂದ್ರಸ್ಥಾನದಲ್ಲೇ ವಾಸಿಸಲು ಸೂಚನೆ ನೀಡಬೇಕು. ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗಳನ್ನು ಆದಷ್ಟು ಬೇಗನೆ ತುಂಬಲು ಕ್ರಮ ಕೈಗೊಳ್ಳಬೇಕು' ಎಂದರು.ರೈತರಿಗೆ ಬೆಳೆ ಸಾಲ: `ಎಲ್ಲಾ ಬ್ಯಾಂಕುಗಳು ರೈತರಿಗೆ ಸಕಾಲದಲ್ಲಿ ಬೆಳೆ ಸಾಲವನ್ನು ಒದಗಿಸಬೇಕು. ಈ ಹಿಂದೆ 25ಸಾವಿರಕ್ಕಿಂತ ಕಡಿಮೆ ಮೊತ್ತದ ಬೆಳೆ ಸಾಲ ಪಡೆದ ರೈತರಿಗೆ ಬ್ಯಾಂಕುಗಳು ಹೊಸದಾಗಿ ಸಾಲ ನೀಡಲು ಹಿಂದೇಟು ಹಾಕುತ್ತಿರುವ ಬಗ್ಗೆ ದೂರುಗಳು ಬಂದಿವೆ. ರಸಗೊಬ್ಬರ ಖರೀದಿಗೆ ರೈತರಿಗೆ ಈಗ ಸಾಲದ ಅಗತ್ಯವಿದ್ದು, ತಕ್ಷಣ ಬ್ಯಾಂಕುಗಳಿಗೆ ಈ ಕುರಿತು ಸೂಚನೆ ನೀಡಬೇಕು' ಎಂದು ಅವರು ತಿಳಿಸಿದರು.ಸಾಂಕ್ರಾಮಿಕ ರೋಗ ತಡೆಯಲು ಕ್ರಮ: `ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಮೂಲಕ ಸೊಳ್ಳೆಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು. ಪಂಚಾಯ್ತಿ ಮಟ್ಟದಲ್ಲಿರುವ ಆರೋಗ್ಯ ರಕ್ಷಾ ಸಮಿತಿಗಳೊಂದಿಗೆ ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು' ಎಂದು ಅಧ್ಯಕ್ಷರು ಹೇಳಿದರು.`ಜಿಲ್ಲೆಯಲ್ಲಿ ಇದುವರೆಗೆ 226ಡೆಂಗೆ ಶಂಕಿತ ಪ್ರಕರಣಗಳನ್ನು ಗುರುತಿಸಲಾಗಿದ್ದು, 117ಪ್ರಕರಣಗಳಲ್ಲಿ ರಕ್ತ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 39 ಪ್ರಕರಣಗಳಲ್ಲಿ ಡೆಂಗೆ ದೃಢಪಟ್ಟಿದ್ದು, ಎಲ್ಲರಿಗೂ ಸೂಕ್ತ ಚಿಕಿತ್ಸೆಯನ್ನು ಒದಗಿಸಲಾಗಿದೆ. ಇಬ್ಬರಿಗೆ ಮಾತ್ರ ಇನ್ನೂ ಚಿಕಿತ್ಸೆ ಮುಂದುವರಿದಿದೆ' ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಅಶೋಕ್‌ಕುಮಾರ್ ಹೇಳಿದರು.ಪಠ್ಯಪುಸ್ತಕ ಸರಬರಾಜು: `ಜಿಲ್ಲೆಯಲ್ಲಿ ಎಲ್ಲ ಶಾಲೆಗಳು ಆರಂಭವಾಗಿದ್ದು, ಇದುವರೆಗೆ ಶೇ 91ರಷ್ಟು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ಒದಗಿಸಲಾಗಿದೆ. ಹಿಂದಿ ಪಠ್ಯಪುಸ್ತಕ ಒಂದೆರಡು ದಿನದಲ್ಲಿ ಪೂರೈಕೆಯಾಗಲಿದೆ. ಸಮವಸ್ತ್ರಗಳು ಮುಂದಿನ ವಾರ ಒದಗಿಸಲಾಗುವುದು. ಆರ್‌ಟಿಇ ಅಡಿಯಲ್ಲಿ ಎಲ್ಲಾ ಶಾಲೆಗಳಲ್ಲಿ ಬಹುತೇಕ ಸೀಟುಗಳು ಭರ್ತಿಯಾಗಿದ್ದು, ಪ್ರವೇಶ ದಿನಾಂಕವನ್ನು ಜೂನ್ 30ರ ವರೆಗೆ ವಿಸ್ತರಿಸಲಾಗಿದೆ' ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರೇವಣ ಸಿದ್ಧಪ್ಪ ತಿಳಿಸಿದರು.ಬಿತ್ತನೆ ಬೀಜ: `ಮುಂಗಾರು ಸರಿಯಾದ ಸಮಯಕ್ಕೆ ಆಗಮಿಸಿರುವ ಕಾರಣ ಜಿಲ್ಲೆಯಲ್ಲಿ ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಬಿತ್ತನೆ ಬೀಜ ಹಾಗೂ ರಸಗೊಬ್ಬರಕ್ಕೆ ಯಾವುದೇ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ದಾಸ್ತಾನು ಇದ್ದು, ಯಾವುದೇ ಕೊರತೆಯಾಗಿಲ್ಲ. 2304ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದ್ದು, ಗರಿಷ್ಟ ಬೆಂಬಲ ಬೆಲೆಯ ಪ್ರಕಾರ ಮಾರಾಟ ಮಾಡಲು ಈಗಾಗಲೇ ಸೂಚನೆಗಳನ್ನು ನೀಡಲಾಗಿದೆ' ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪರಾಜು ಮಾಹಿತಿ ನೀಡಿದರು.ಬಸ್ ಪಾಸ್: `ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಬಸ್‌ಪಾಸ್‌ಗಳನ್ನು ಒದಗಿಸಲಾಗುತ್ತಿದೆ. ಅಂಗವಿಕಲರಿಗೆ ನೀಡಲಾಗುವ ರಿಯಾಯಿತಿ ದರದ ಬಸ್‌ಪಾಸ್ ಮಾರ್ಗಸೂಚಿಯಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದೆ. ಕುಷ್ಠ ರೋಗ ನಿವಾರಣೆಯಾದವರನ್ನು ಅಂಗವಿಕಲರ ಪಟ್ಟಿಯಿಂದ ಕೈಬಿಡಲಾಗಿದೆ.

 

ಅಂಧರಿಗೆ ಉಚಿತ ಪಾಸ್ ವಿತರಿಸುತ್ತಿರುವ ಕಾರಣ ಅವರನ್ನು ಅಂಗವಿಕಲರ ಪಟ್ಟಿಯಲ್ಲಿ ಬಿಡಲಾಗಿದೆ. ರಿಯಾಯಿತಿ ದರದ ಪ್ರಯಾಣದ ಸೌಲಭ್ಯಕ್ಕಾಗಿ ಹಿರಿಯ ನಾಗರಿಕರ ವಯಸ್ಸಿನ ಮಿತಿಯನ್ನು 60ಕ್ಕೆ ಇಳಿಸಲಾಗಿದೆ.ಸಂಸ್ಥೆಯ ವತಿಯಿಂದಲೂ ಹಿರಿಯ ನಾಗರಿಕರ ಗುರುತಿನ ಚೀಟಿ ನೀಡಲಾಗುತ್ತಿದೆ. ಇದನ್ನು ಹೊರತು ಪಡಿಸಿ ಸರ್ಕಾರದಿಂದ ನೀಡಲಾಗಿರುವ ವಯಸ್ಸಿನ  ದಾಖಲೆಯಿರುವ ಯಾವುದೇ ಭಾವಚಿತ್ರ ಇರುವ ಗುರುತಿನ ಚೀಟಿಯನ್ನು ತೋರಿಸಿ ಈ ಸೌಲಭ್ಯ ಪಡೆಯಬಹುದಾಗಿದೆ' ಎಂದು ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳು ತಿಳಿಸಿದರು.ಜಿಲ್ಲಾ ಪಂಚಾಯ್ತಿ ಸಿಇಒ ಕೆ.ಸುಬ್ರಾಯ ಕಾಮತ್, ಉಪಾಧ್ಯಕ್ಷೆ ಲಲಿತಾ ಪಟಗಾರ, ಸ್ಥಾಯಿ ಸಮಿತಿ ಅಧ್ಯಕ್ಷ ಅಲ್ಬರ್ಟ್ ಡಿಕೋಸ್ತ, ಅಶೋಕ್ ಸಿರ್ಸಿಕರ್, ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.