ಬುಧವಾರ, ಮೇ 18, 2022
24 °C

ಅಂಗಳದಲ್ಲಿ ಹುಲಿಗಳಾಗಬೇಕು: ಯುವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕಾಗದದ ಮೇಲೆ ಬಲವಾಗಿ ಕಾಣಿಸುವುದು ಮುಖ್ಯವಲ್ಲ; ಅಂಗಳದಲ್ಲಿ ಹುಲಿಗಳಾಗಬೇಕು’ ಎಂದು ಭಾರತ ಕ್ರಿಕೆಟ್ ತಂಡದ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಹೇಳಿದ್ದಾರೆ.

ತಂಡವೊಂದು ಕಾಗದದ ಮೇಲಿನ ಲೆಕ್ಕಾಚಾರದಲ್ಲಿ ಬಲವಾಗಿದ್ದು ಪಂದ್ಯಗಳಲ್ಲಿ ಯಶಸ್ವಿ ಆಗದಿದ್ದರೆ ಪ್ರಯೋಜನವಾಗದು ಎಂದು ಶುಕ್ರವಾರದ ಅಭ್ಯಾಸದ ನಂತರ ಸುದ್ದಿಗಾರರಿಗೆ ತಿಳಿಸಿದರು.

ಫೆಬ್ರುವರಿ 19ರಂದು ಆರಂಭವಾಗಲಿರುವ ವಿಶ್ವಕಪ್‌ಗಾಗಿ ಇಲ್ಲಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(ಎನ್‌ಸಿಎ)ನಲ್ಲಿ ನಡೆಯುತ್ತಿರುವ ದೈಹಿಕ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿರುವ ‘ಯುವಿ’ ಅವರು ಮಹೇಂದ್ರ ಸಿಂಗ್ ದೋನಿ ನಾಯಕತ್ವದ ಪಡೆಯನ್ನು 1983ರಲ್ಲಿ ವಿಶ್ವಕಪ್ ಗೆದ್ದ ‘ಕಪಿಲ್ಸ್ ಡೆವಿಲ್ಸ್’ಗೆ ಹೋಲಿಕೆ ಮಾಡಲು ಕೂಡ ಒಪ್ಪಲಿಲ್ಲ.

‘ಆಗ ವಿಶ್ವಕಪ್ ಗೆದ್ದ ತಂಡವು ನಮಗೆ ಪ್ರೇರಣೆ. ಆದರೆ ಅದೊಂದೇ ಕಾರಣವೂ ಅಲ್ಲ. ಅನೇಕ ಅಂಶಗಳು ಮಹತ್ವ ಪಡೆಯುತ್ತವೆ. ನಾವು ಆಡುವಾಗ ಎಷ್ಟು ಉನ್ನತ ಮಟ್ಟದ ಸಾಮರ್ಥ್ಯ ತೋರುತ್ತೇವೆ ಎನ್ನುವುದೇ ನಿರ್ಣಾಯಕ ಅಂಶವಾಗುತ್ತದೆ. ಬಾಕಿ ಎಲ್ಲವೂ ಕಾಗದದ ಮೇಲೆಯೇ ಉಳಿಯುತ್ತದೆ. ಪಂದ್ಯದಿಂದ ಪಂದ್ಯಕ್ಕೆ ಯಶಸ್ವಿಯಾಗುತ್ತಾ ಸಾಗಬೇಕು. ಅದರ ಹೊರತಾಗಿ ಬೇರೆ ಯಾವುದೇ ವಿಶ್ಲೇಷಣೆ ಅಗತ್ಯವಿಲ್ಲ’ ಎಂದು ಸ್ಪಷ್ಟಪಡಿಸಿದರು.

29 ವರ್ಷ ವಯಸ್ಸಿನ ಬ್ಯಾಟ್ಸ್‌ಮನ್ ಯುವರಾಜ್ ಅವರು ತಂಡದಲ್ಲಿನ ತಮ್ಮ ಜವಾಬ್ದಾರಿಯ ಕುರಿತು ವಿವರಿಸಿ ‘ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ ಪರಿಸ್ಥಿತಿಗೆ ತಕ್ಕಂತೆ ಆಡಬೇಕು. ಆದರೆ ಕ್ರೀಸ್‌ಗೆ ಬಂದಾಗ ತಂಡಕ್ಕೆ ಯಾವರೀತಿಯ ಆಟವು ಅಗತ್ಯವಾಗಿ ಎನ್ನುವುದು ಸ್ಪಷ್ಟವಾಗಿರಬೇಕು. ಜೊತೆಯಾಟ ಬೆಳೆಸಲು ಸಹಕಾರಿ ಆಗಬೇಕು. ಕೆಲವೊಮ್ಮೆ ಎದುರಾಳಿ ಬೌಲರ್‌ಗಳು ಹೇಚ್ಚಿಸಿದ ಒತ್ತಡವು ನಿವಾರಣೆ ಆಗುವಂತೆಯೂ ಆಕ್ರಮಣಕಾರಿ ಆಗಬೇಕು. ದೀರ್ಘ ಕಾಲದಿಂದ ತಂಡಕ್ಕಾಗಿ ನಾನು ಮಾಡಿಕೊಂಡು ಬಂದಿರುವ ಕೆಲಸವದು’ ಎಂದು ವಿವರಿಸಿದರು.

2007ರ ವಿಶ್ವಕಪ್‌ನಲ್ಲಿ ಅನುಭವಿಸಿದ ಆಘಾತವನ್ನು ಮರೆತಿಲ್ಲ. ಅಲ್ಲಿ ಮಾಡಿದ ತಪ್ಪುಗಳು ಈಗಲೂ ಕಾಡುತ್ತವೆ. ಆ ತಪ್ಪುಗಳು ಮರುಕಳಿಸದಂತೆ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದ ಅವರು ‘ವೆಸ್ಟ್ ಇಂಡೀಸ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಪಾಲ್ಗೊಂಡಿದ್ದಾಗ ತಂಡವು ಉನ್ನತ ಮಟ್ಟದಲ್ಲಿ ಇರಲಿಲ್ಲ. ಹೊಂದಾಣಿಕೆಯೂ ಕಷ್ಟವಾಗಿತ್ತು.

ಮಹತ್ವದ ಟೂರ್ನಿಗೂ ಮುನ್ನ ಯಶಸ್ಸಿನ ಬಲವೂ ಉತ್ಸಾಹದ ಪ್ರವಾಹವಾಗಿರಲಿಲ್ಲ. ಆದ್ದರಿಂದ ಅರ್ಹತಾ ಹಂತದಲ್ಲಿಯೇ ನಿರ್ಗಮಿಸಬೇಕಾಯಿತು. ಆದರೆ ಈಗ ಸ್ಥಿತಿ ಬೇರೆಯೇ ಆಗಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.