ಬುಧವಾರ, ಜನವರಿ 22, 2020
28 °C

ಅಂಗವಿಕಲರು ನಿಜ, ಅಬಲರಲ್ಲ

ಪ್ರಜಾವಾಣಿ ವಾರ್ತೆ/ಶರತ್ ಹೆಗ್ಡೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ಯಾವುದೋ ಒಂದು ದೈಹಿಕ ನ್ಯೂನತೆ. ಅದೇ ಬದುಕಿಗೊಂದು ಸವಾಲು. ಒಂದೆಡೆ ಸಮಾಜದ ಅನುಕಂಪದ ದೃಷ್ಟಿ. ಒಮ್ಮೊಮ್ಮೆ ಕಾಡುವ ಅಸಹಾಯಕ ಭಾವ. ಎಲ್ಲ ಕೊರತೆಗಳ ಮಧ್ಯೆಯೂ ಸ್ವಾಭಿಮಾನದಿಂದ ಬದುಕುವ ಮಂದಿ.

ಹೀಗೆ ಒಂದೆರಡಲ್ಲ ಅಂಗವಿಕಲರ ಬದುಕಿಗೆ ಹಲವಾರು ಮುಖಗಳು.ಪೋಲಿಯೋ ಪೀಡಿತರಾಗಿ ಊರುಗೋಲು ಹಿಡಿದು ಅಂಗವಿಕಲರ ಕಲ್ಯಾಣಾಧಿಕಾರಿ ಕಚೇರಿ ಮುಂದೆ ಸಾಲುಗಟ್ಟುವ ಮಂದಿ. ಕಣ್ಣಿಲ್ಲದವರು ಅನ್ಯರ ನೆರವಿನೊಂದಿಗೆ ಧಾವಿಸುವ ಪರಿ. ಬಸ್‌, ರೈಲುಗಳಲ್ಲಿ ಪ್ರಯಾಣಿಸಲು ಕಷ್ಟಪಡುವ ಜನ. ನಮ್ಮ ಬದುಕಿನದ್ದು ಎಲ್ಲವೂ ಮುಗಿದೇ ಹೋಯಿತು ಎಂದು ಭಾವಿಸಿ ಹತಾಶರಾಗಿ ಬಿಕ್ಷಾಟನೆಗೆ ಬರುವ ಮಂದಿ. ಹೀಗೆ ನಗರ ಅಥವಾ ಜಿಲ್ಲೆಯ ಯಾವುದೇ ಭಾಗದಲ್ಲಿ ಸುತ್ತು ಹಾಕಿದರೆ ಇಂಥ ಬದುಕಿನ ಹಲವು ಚಿತ್ರಗಳು ಕಣ್ಣಿಗೆ ರಾಚುತ್ತವೆ.ಜಿಲ್ಲೆಯಲ್ಲಿ ಒಟ್ಟು 20,756 ವಿವಿಧ ಸ್ವರೂಪದ ಅಂಗವಿಕಲರಿದ್ದಾರೆ. ಸರ್ಕಾರದ ಸೌಲಭ್ಯದ ಅರಿವಿದ್ದವರು ಕಚೇರಿಗಳಿಗೆ ಅಲೆದು ಅವೆಲ್ಲವನ್ನೂ ಗಿಟ್ಟಿಸಿಕೊಂಡರೆ ನೂರಾರು ಮಂದಿ ಇನ್ನೂ ತೆರೆಮರೆಯಲ್ಲೇ ಇದ್ದಾರೆ.ಯಲಬುರ್ಗಾ, ಕುಷ್ಟಗಿ ತಾಲ್ಲೂಕಿನಲ್ಲಿ ಅಂಗವಿಕಲರ ಪ್ರಮಾಣ ಹೆಚ್ಚು ಇದೆ. ಪ್ರತಿ ವರ್ಷ ಹೆಚ್ಚು ಸಂಖ್ಯೆಯಲ್ಲಿ ಹೊಸ ಪ್ರಕರಣಗಳು ಗುರುತಿಸಲ್ಪಡುತ್ತಿವೆ. ಅಪಘಾತದಂಥ ಕೆಲವು ಪ್ರಕರಣ ಹೊರತುಪಡಿಸಿ, ಹುಟ್ಟುವ ಮಕ್ಕಳಿಗೆ ಒಂದಲ್ಲ ಒಂದು ದೋಷ, ಅಂಗ ಊನತೆ, ಅಸಮರ್ಪಕ ಬೆಳವಣಿಗೆ ಇತ್ಯಾದಿ ಏಕಾಗುತ್ತವೆ ಎಂಬ ಬಗ್ಗೆ ವಿಶೇಷ ಸಂಶೋಧನೆ ನಡೆದಿಲ್ಲ ಎನ್ನುತ್ತಾರೆ ಜಿಲ್ಲೆಯ ಅಂಗವಿಕಲರ ಒಕ್ಕೂಟದ ಅಧ್ಯಕ್ಷ ಮಲ್ಲಿಕಾರ್ಜುನ ಪೂಜಾರ.ನ್ಯೂನ ಪೋಷಣೆ, ಬಾಲ್ಯವಿವಾಹ ಇತ್ಯಾದಿ ಸಾಮಾನ್ಯ ಕಾರಣಗಳನ್ನು ಅಧಿಕಾರಿಗಳು ನೀಡುತ್ತಾರಾದರೂ ಅದೊಂದೇ ಕಾರಣ ಅಲ್ಲ. ಭೂಮಿಗೆ ಸಿಂಪಡಿಸುವ ರಾಸಾಯನಿಕಗಳು, ಕಲ್ಲು ಗಣಿಗಾರಿಕೆ ಘಟಕಗಳಿಂದ ಭೂಮಿ ಸೇರುವ ರಾಸಾಯನಿಕ ನೀರಿನಲ್ಲಿ ಬೆರೆಯುವುದು ಇತ್ಯಾದಿ ಕಾರಣಗಳೂ ಇರಬಹುದಲ್ಲವೇ ಎಂಬುದು ಅಂಗವಿಕಲರ ಶಂಕೆ.ವಿಶ್ವ ಅಂಗವಿಕಲರ ದಿನದ ಸಂದರ್ಭ ಅವರ ಬದುಕನ್ನು ಅವಲೋಕಿ­ಸಲೇಬೇಕಾದ ಸಂದರ್ಭವಿದು.ಜಿಲ್ಲೆಯಲ್ಲಿ ಅಂಗವಿಕಲರ ಭವನ­ವೊಂದು ಇತ್ತೀಚೆಗೆ ತಲೆಯೆತ್ತಿದೆ. 26.73 ಲಕ್ಷ ವೆಚ್ಚದಲ್ಲಿ ನಿರ್ಮಾಣ­ವಾದ ಭವನದ ಕಾಮಗಾರಿ ಕಳಪೆಯಾಗಿದೆ ಎಂಬ ಆರೋಪವೂ ಇದೆ. ಕಾಮಗಾರಿ ಸರಿಪಡಿಸಿದ್ದರೂ ಉದ್ಘಾಟನೆ (ಮರು ಉದ್ಘಾಟನೆ!)ಯನ್ನು ವಿಧಾನಸಭಾ ಅಧಿವೇಶನದ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ. ಅಂಗವಿಕಲರ ಬದುಕಿನ ಕೆಲವು ಚಿತ್ರಗಳು ಹೀಗಿವೆ.‘ಎಲ್ಲ ತಂಗಿಗಾಗಿ’

‘ ಸಾರ್‌ ನನ್ನ ತಂಗಿಗೆ ಮದುವೆ ಮಾಡಬೇಕು. ಅದೊಂದೇ ಗುರಿ. ನಾನು ಎಲ್ಲಾದರೂ ಭಿಕ್ಷೆಬೇಡಿ ಹೊಟ್ಟೆ ತುಂಬಿಸಿಕೊಳ್ಳಬಲ್ಲೆ. ಅವರಿಗೆ ಯಾರು ಗತಿ?...– ಕೊಪ್ಪಳದ ಬಜಾರ್‌ ಪ್ರದೇಶದಲ್ಲಿ ಆಟೋರಿಕ್ಷಾ ಓಡಿಸುತ್ತಿದ್ದ ಮೆಹಬೂಬ್‌ ಜಿಲಾನ್‌ ಮುಗ್ಧವಾಗಿ ನುಡಿದರು.29ರ ಹರೆಯದ ಜಿಲಾನ್‌ಗೆ ಕಾಲು ಸ್ವಾಧೀನ ಕಳೆದುಕೊಂಡಿದೆ. ತಮ್ಮ 5ರ ಹರೆಯದಲ್ಲೇ ಪೋಲಿಯೋ ಬಾಧಿಸಿತು. ಇಂದಿಗೆ 15 ವರ್ಷಗಳ ಹಿಂದೆ ಅವರ ಪೋಷಕರು ಇಹಲೋಕ ತ್ಯಜಿಸಿದರು. ನಗರದ ಗೌರಿ ಅಂಗಳದ ಪುಟ್ಟ ಬಾಡಿಗೆ ಮನೆಯಲ್ಲಿ ತಮ್ಮ ಮೂವರು ತಂಗಿಯರ ಜತೆ ಬಾಳಿದರು ಜಿಲಾನ್‌.ಬಾಡಿಗೆಗೆ ಆಟೋರಿಕ್ಷಾ ಪಡೆದು ಓಡಿಸಿಕೊಂಡು ಸ್ವಾಭಿಮಾನದಿಂದ ಬದುಕುತ್ತಿದ್ದಾರೆ. ಅದೇ ದುಡಿಮೆಯಲ್ಲಿ ಇಬ್ಬರು ತಂಗಿಯರ ಮದುವೆ ಮಾಡಿದರು. ಇನ್ನೂ ಒಬ್ಬರ ಮದುವೆಯಾದರೆ ಮುಂದೆ ತನ್ನ ಯೋಚನೆ ಎನ್ನುತ್ತಾರೆ ಜಿಲಾನ್‌.‘ನಾನು ಅಂಗವಿಕಲ. ಕಾನೂನು ನಿಯಮ ಪ್ರಕಾರ ನನಗೆ ಲೈಸೆನ್ಸ್‌ ನೀಡಲಾಗುವುದಿಲ್ಲವಂತೆ. ಹೀಗಾಗಿ ಆಟೋರಿಕ್ಷಾ ಓಡಿಸಬಾರದು ಎಂದು ಪೊಲೀಸರು ಹೇಳಿದ್ದಾರೆ. ಆದರೆ, ಮಾನವೀಯತೆಯ ನೆಲೆಯಲ್ಲಿ ದುಡಿಯಲು ಬಿಟ್ಟಿದ್ದಾರೆ. ಆದರೆ, ನಾನು ಹೊಟ್ಟೆಪಾಡಿಗೆ ಏನು ಮಾಡಲಿ? ಬೇರೆ ಉದ್ಯೋಗ ಮಾಡಲು ನಾನು ಓದಿಲ್ಲ. ಮೂರು ಚಕ್ರದ ಬೈಕ್‌ ಓಡಿಸಬಹುದಂತೆ. ನಾನು ಆಟೋರಿಕ್ಷಾ ಓಡಿಸಬಾರದಂತೆ. ನನಗೊಂದು ಲೈಸೆನ್ಸ್‌ ಪಡೆಯಲು ಕಾನೂನು ಅವಕಾಶ ಮಾಡಿಕೊಡಬೇಕು. 15 ವರ್ಷಗಳಿಂದ ಆಟೋರಿಕ್ಷಾ ಓಡಿಸುತ್ತಿದ್ದೇನೆ. ಒಂದೇ ಒಂದು ಅಪಘಾತ ಆದ ಕಪ್ಪುಚುಕ್ಕೆ ನನ್ನ ಚಾಲನಾ ವೃತ್ತಿಯಲ್ಲಿಲ್ಲ. ನನಗೊಂದು ಲೈಸೆನ್ಸ್‌ ಸಿಕ್ಕಿದರೆ ಸ್ವಂತ ಆಟೋರಿಕ್ಷಾ ಓಡಿಸುವ ಕನಸು ಇದೆ ಎಂದರು ಜಿಲಾನ್‌.ಸರ್ಕಾರದಿಂದ ಮಾಸಿಕ ರೂ 1 ಸಾವಿರ ಅಂಗವಿಕಲರ ಮಾಸಾಶನ ಬರುತ್ತದೆ. ನಿವೇಶನಕ್ಕೆ ಅರ್ಜಿ ಹಾಕಿದೆ. ಅದೂ ಸಿಗಲಿಲ್ಲ. ಉಳಿದಂತೆ ಯಾವ ಸೌಲಭ್ಯವೂ ಇಲ್ಲ.  ನಾನು ಕೇಳಲೂ ಹೋಗಿಲ್ಲ. ಸ್ವಾಭಿಮಾನದಿಂದ ದುಡಿಯುವ ಶಕ್ತಿಯಿದೆ ಅದರಂತೆ ದುಡಿಯುತ್ತಿದ್ದೇನೆ ಎಂದು ಜಿಲಾನ್‌ ಹೇಳುತ್ತಿದ್ದಂತೆಯೇ, ಏ ಆಟೋ... ಎಂದು ಪ್ರಯಾಣಿಕರೊಬ್ಬರು ಕರೆದರು. ಜಿಲಾನ್‌ ಭರ್ರನೆ ಆಟೋ ಚಾಲನೆ ಮಾಡಿ ಹೊರಟರು.

‘ಏನಾದರೂ ಮಾಡಬೇಕು’

ನನಗೆ ಹುಟ್ಟಿನಿಂದಲೂ ಕಾಲು ಊನವಾಗಿದೆ. ನಮ್ಮ ಕಾಲೇಜಿನಲ್ಲಿ ಮೂವರು ಅಂಗವಿಕಲರಿದ್ದೇವೆ. ನಮ್ಮ ಬದುಕು ಕಷ್ಟವಿದೆ. ಆದರೆ, ನಮ್ಮ ಸಹಪಾಠಿಗಳು ನೆರವಾಗು­ತ್ತಾರೆ. ಪ್ರೀತಿ ಗೌರವದಿಂದಲೇ ಕಾಣುತ್ತಾರೆ. ಓದಿ ಏನಾದರೂ ಸಾಧಿಸಬೇಕು ಎಂದಿದ್ದೇನೆ.

ಪ್ರತಿಯೊಂದು ಸೌಲಭ್ಯಕ್ಕೂ ನಾವು ಜಿಲ್ಲಾ ಕೇಂದ್ರಕ್ಕೆ ಬರುವಂತಾಗಬಾ­ರದು. ಶಿಕ್ಷಣ ಸಂಸ್ಥೆ ಅಥವಾ ಗ್ರಾಮ ಪಂಚಾಯಿತಿಮಟ್ಟದಲ್ಲೇ ಬಸ್‌ಪಾಸ್‌, ವಿದ್ಯಾರ್ಥಿವೇತನ, ಸಲಕರಣೆಗಳು ಸಿಗುವಂತಾಗಬೇಕು.

–ಬಸವರಾಜ್‌, ಪ್ರಥಮ ಪಿಯು ವಿದ್ಯಾರ್ಥಿ, ನಾಗರಾಳ, ಕುಷ್ಟಗಿ ತಾ.‘ಅನುಕಂಪ ಬೇಡ ಅವಕಾಶ ಬೇಕು’


ಸಮಾಜ ಅಂಗವಿಕಲರ ಬಗ್ಗೆ ಅನುಕಂಪದ ಬದಲಾಗಿ ಅವಕಾಶ ಕೊಡಬೇಕಾಗಿದೆ. ಜಿಲ್ಲೆಯಲ್ಲಿ 8 ತಿಂಗಳಿಂದ ಖಾಲಿ ಇರುವ ಅಂಗವಿಕಲರ ಕಲ್ಯಾಣಾಧಿಕಾರಿ ಹುದ್ದೆ ಭರ್ತಿಯಾಗಬೇಕು. ಅಂಗವಿಕಲರಿಗಾಗಿ ರೈಲಿನಲ್ಲಿರುವ ಬೋಗಿಗಳು ಅವರಿಗಾಗಿಯೇ ಮೀಸಲಿರಬೇಕು. ನೈಜ ಅಂಗವಿಕಲರ ಸೌಲಭ್ಯಗಳು ಅನೇಕ ನಕಲಿ ಅಂಗವಿಕಲರ ಪಾಲಾಗುವುದು ತಪ್ಪಬೇಕು. ಅಂಗವಿಕಲರಿಗಾಗಿ ಮೀಸಲಿರುವ ಶೇ 3ರ ಅನುದಾನ ಸದ್ಬಳಕೆ ಆಗಬೇಕು.ಅಂಗವಿಕಲ ಸರ್ಕಾರಿ ನೌಕರರಿಗೆ ಸೌಲಭ್ಯ ನೀಡುವಾಗ ಹಲವಾರು ಕಡೆ ಅಲೆದಾಡಿಸಿ ವಿಳಂಬ ಮಾಡುವ ಪ್ರವೃತ್ತಿ ನಿಲ್ಲಬೇಕು. ಕೆಲವರು ನಿವೃತ್ತಿಗೆ ಕೆಲವೇ ದಿನಗಳಿರುವಾಗ ಸೌಲಭ್ಯ ಪಡೆದದ್ದೂ ಇದೆ. ಇತ್ತೀಚೆಗೆ ಅಂಗವಿಕಲ ಮಹಿಳೆಯರ ಮೇಲೆ ಅತ್ಯಾಚಾರದಂತಹ ಪ್ರಕರಣಗಳು ಹೆಚ್ಚುತ್ತಿದೆ. ಅಂಗವಿಕಲ ಮಹಿಳೆಯರಿಗೆ ರಕ್ಷಣೆ ನೀಡಬೇಕಿದೆ.ಗ್ರಾಮ ಪಂಚಾಯಿತಿ ಹಂತದಲ್ಲಿ ಕಾರ್ಯನಿರ್ವಹಿಸುವ ಸ್ವಯಂ ಸೇವಕ ಅಂಗವಿಕಲರಿಗೆ ನೀಡುವ ಗೌರವ ಧನ ರೂ 1,500ನ್ನು ಹೆಚ್ಚಿಸಬೇಕು. ಎಲ್ಲ ಅಂಗವಿಕಲರನ್ನು ಒಂದೆಡೆ ಸೇರಿಸಿ ಅವರಿಗೆ 10ವರ್ಷಗಳ ಅವಧಿಗೆ ಗುರುತಿನ ಚೀಟಿ ನೀಡಬೇಕು. ಹೀಗಾದಾಗ ಪದೇ ಪದೇ ವೈದ್ಯಕೀಯ ಪ್ರಮಾಣ ಪತ್ರಕ್ಕಾಗಿ ಅಲೆದಾಡುವುದು ತಪ್ಪುತ್ತದೆ. ಅಂಗವಿಕಲರಿಗೆ ಸೂಕ್ತ ಉದ್ಯೋಗ ಸರ್ಕಾರಿ ನೇಮಕಾತಿ ಆಗಬೇಕು.ಪ್ರತಿ ಜಿಲ್ಲೆಯಲ್ಲಿ ಒಂದು ಅಂಗವಿಕಲರ ಕಲ್ಯಾಣ ಭವನ ನಿರ್ಮಿಸಬೇಕು. ತಾಲ್ಲೂಕಿಗೊಂದು ಅಂಗವಿಕಲರ ಶಾಲೆ ಮತ್ತು ವಸತಿ ನಿಲಯ ಸ್ಥಾಪಿಸಬೇಕು. ಹೀಗೆ ಅನುಕೂಲ ಕಲ್ಪಿಸಿದಲ್ಲಿ ಅಂಗವಿಕಲರು ಕೂಡಾ ಅಬಲರಲ್ಲ ನಾವೂ ಕೂಡಾ ಸಬಲರು ಎಂದು ತೊರಿಸಿಕೊಟ್ಟಂತಾಗುತ್ತದೆ.

  –ಬೀರಪ್ಪ ಅಂಡಗಿ ಚಿಲವಾಡಗಿ ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ, ಶಿಕ್ಷಕ ಕೊಪ್ಪಳ‘ಹೊಸ ಬದುಕಿಗೆ ಪ್ರೋತ್ಸಾಹ ನೀಡಲಿ’


ಜಿಲ್ಲಾ ಅಂಗವಿಕಲರ ಭವನ ಇತ್ತೀಚೆಗಷ್ಟೇ ಅಸ್ತಿತ್ವಕ್ಕೆ ಬಂದಿದೆ. ಅಲ್ಲಿ ಅಂಗವಿಕಲರಿಗೋಸ್ಕರ ವಿವಿಧ ತರಬೇತಿ, ಸರ್ಕಾರದ ಸೌಲಭ್ಯದ ಬಗ್ಗೆ ಮಾಹಿತಿ ನೀಡುತ್ತೇವೆ. ಮುಂದೆ ಕೌಶಲ ಅಭಿವೃದ್ಧಿ ಸಂಬಂಧಿಸಿದ ತರಬೇತಿ ನೀಡುವ ಚಿಂತನೆ ಇದೆ. ತಮ್ಮ ಕಲ್ಯಾಣ ಸಂಬಂಧಿಸಿದ ಚರ್ಚೆ ಸಭೆ ನಡೆಸಲು ಅಲ್ಲಿ ಅವಕಾಶವಿದೆ.

ಅಂಗವಿಕಲರು ತಾವು ಅಸಹಾಯಕರು ಎಂದು ಚಿಂತಿ­ಸುವುದು ಬೇಡ. ಸಮಾಜವೂ ನಮ್ಮಂಥ ಅಂಗವಿಕ­ಲರಿಗೆ ಅನು­ಕಂಪದ ಬದಲು ಹೊಸ ಬದುಕಿನತ್ತ ತೆರೆದುಕೊಳ್ಳಲು ಪ್ರೋತ್ಸಾಹ ನೀಡಲಿ.

–ಮಲ್ಲಿಕಾರ್ಜುನ ಪೂಜಾರ, ಜಿಲ್ಲಾ ಅಂಗವಿಕಲರ ಒಕ್ಕೂಟದ ಅಧ್ಯಕ್ಷ

 

ಪ್ರತಿಕ್ರಿಯಿಸಿ (+)