ಮಂಗಳವಾರ, ಜೂನ್ 15, 2021
27 °C

ಅಂಗಾಂಗ ದಾನ: ಅರಿವು ಬೆಳೆಯಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:`ಅಂಗಾಂಗ ದಾನದ ಬಗ್ಗೆ ಸಮಾಜದ ಜನರಲ್ಲಿ ಹೆಚ್ಚಿನ ಅರಿವು ಮೂಡಬೇಕು~ ಎಂದು ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅಭಿಪ್ರಾಯ ಪಟ್ಟರು.ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ಗುರುವಾರ ನಡೆದ ವಿಶ್ವ ಮೂತ್ರಪಿಂಡ ದಿನದ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.`ಅಂಗಾಂಗ ದಾನದಿಂದ ಮತ್ತೊಬ್ಬರ ಜೀವವನ್ನು ಉಳಿಸಲು ಸಾಧ್ಯವಿದೆ. ಅಪಘಾತಗಳಲ್ಲಿ ಹಾಗೂ ಇನ್ನಿತರ ಸಂದರ್ಭಗಳಲ್ಲಿ ಅಂಗಾಂಗಗಳ ವೈಫಲ್ಯ ಉಂಟಾದಾಗ ಅಂತಹ ವ್ಯಕ್ತಿಗಳ ಜೀವ ಉಳಿಸುವುದಕ್ಕಾಗಿ ಅಂಗಾಂಗಗಳ ದಾನಕ್ಕೆ ಎಲ್ಲರೂ ಮುಂದಾಗಬೇಕು. ಅಂಗಾಂಗ ದಾನದ ಲಾಭಗಳ ಬಗ್ಗೆ ಜನರಿಗೆ ಶಿಕ್ಷಣ ನೀಡಬೇಕಿದೆ. ಒಬ್ಬ ದಾನಿಯಿಂದ ಹಲವಾರು ಅಂತಿಮ ಹಂತದ ರೋಗದಲ್ಲಿರುವ ರೋಗಿಗಳಿಗೆ ಜೀವದಾನ ಮಾಡಬಹುದಾಗಿದೆ~ ಎಂದು ಅವರು ನುಡಿದರು.ಮಣಿಪಾಲ್ ಹೆಲ್ತ್ ಎಂಟರ್‌ಪ್ರೈಸಸ್‌ನ ವೈದ್ಯಕೀಯ ನಿರ್ದೇಶಕ ಡಾ. ಎಚ್.ಸುದರ್ಶನ್ ಬಲ್ಲಾಳ್ ಮಾತನಾಡಿ, `ಪ್ರತಿ ವರ್ಷ ಸುಮಾರು ಎರಡು ಲಕ್ಷ ಜನರಿಗೆ ಮೂತ್ರಪಿಂಡ ವೈಫಲ್ಯ ಇರುವುದು ಪತ್ತೆಯಾಗುತ್ತಿದೆ. ಆದರೆ ಅಂಗಗಳು ಅಲಭ್ಯತೆಯಿಂದಾಗಿ ಕೇವಲ 2,500 ಮೂತ್ರಪಿಂಡ ಕಸಿಯನ್ನು ಮಾತ್ರ ವಾರ್ಷಿಕವಾಗಿ ನಡೆಸಲಾಗುತ್ತಿದೆ. ನೂರು ಕೋಟಿಗೂ ಹೆಚ್ಚಿನ ಜನರನ್ನು ಹೊಂದಿರುವ ಭಾರತ ಮೃತ ದಾನಿಗಳ ಕಾರ್ಯಕ್ರಮದ ಅನುಷ್ಠಾನದಲ್ಲಿ ಹಿಂದೆ ಬಿದ್ದಿದೆ~ ಎಂದು ಅವರು ವಿಷಾದಿಸಿದರು.`ಸರ್ಕಾರದ 1994 ರ ಮಾನವ ಅಂಗಾಂಗಗಳ ಕಸಿ ಕಾನೂನು ಇದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಮೃತರ ಅಂಗಾಂಗಗಳ ದಾನದ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ. ಮೆದುಳು ಸಾವಿನ ಸಂದರ್ಭದಲ್ಲಿ ಅಂಗಾಂಗ ದಾನದ ಬಗ್ಗೆ ಸಂಬಂಧಿಕರಿಗೆ ಸಲಹೆ ನೀಡುವುದು ಹಾಗೂ ದಾನಿಗಳು ಮತ್ತು ಆಸ್ಪತ್ರೆಗಳ ನಡುವೆ ಸಮನ್ವಯ ಕಾಪಾಡುವುದು ಅಗತ್ಯ~ ಎಂದು ಅವರು ಹೇಳಿದರು.ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ‌್ಯದರ್ಶಿ ಡಾ.ಇ.ವಿ. ರಮಣರೆಡ್ಡಿ ಮಾತನಾಡಿ, `ಮಾನವ ಅಂಗಾಂಗಗಳ ಕಸಿ ಕಾನೂನುನನ್ನು ಜಾರಿಗೆ ತಂದಿದ್ದು ಮೆದುಳು ಸಾವಿನ ಬಗ್ಗೆ ಮೊದಲ ಬಾರಿಗೆ ಕಾನೂನು ರೂಪಿಸಲಾಗಿದೆ. ಇದರಿಂದ ಹೃದಯ ಮಿಡಿತವಿರುವ, ಆದರೆ ಮೆದುಳಿನ ಸಾವು ಉಂಟಾಗಿರುವ ದಾನಿಗಳಿಂದ ಅಂಗಗಳನ್ನು ಪಡೆದುಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಆದರೆ ಅನೇಕ ಕಾರಣಗಳಿಂದಾಗಿ ಇದು ಸಮರ್ಪಕವಾಗಿ ಆಚರಣೆಗೆ ಬರುತ್ತಿಲ್ಲ~ ಎಂದರು.ನಿಮ್ಹೋನ್ಸ್‌ನ ನಿರ್ದೇಶಕ ಡಾ. ಪಿ. ಸತೀಶ್ ಚಂದ್ರ, ಮಣಿಪಾಲ್ ಹೆಲ್ತ್ ಎಂಟರ್‌ಪ್ರೈಸಸ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಜನ್ ಪಡುಕೋಣೆ ಮತ್ತಿತರರು ಉಪಸ್ಥಿತರಿದ್ದರು.ಶೀಘ್ರ ಪತ್ತೆ ಅಗತ್ಯ

ಬೆಂಗಳೂರು: `ಭಾರತದಲ್ಲಿ ಮೂತ್ರಪಿಂಡದ ಸಮಸ್ಯೆ ಅಪಾಯಕಾರಿಯಾಗಿ ಹೆಚ್ಚುತ್ತಿದ್ದು, ಇದನ್ನು ನಿಯಂತ್ರಿಸಬೇಕಾದ್ದು ಅಗತ್ಯ~ ಎಂದು ಸೇಂಟ್ ಜಾನ್ಸ್ ಆಸ್ಪತ್ರೆಯ ಮೂತ್ರಪಿಂಡ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಗೋಕುಲ್‌ನಾಥ್ ಹೇಳಿದರು.ನಗರದ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಗುರುವಾರ ನಡೆದ ವಿಶ್ವ ಮೂತ್ರಪಿಂಡ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, `ಶೀಘ್ರ ಪತ್ತೆಯಿಂದ ರೋಗಿಗಳು ತಮ್ಮ ಮೂತ್ರಪಿಂಡಗಳ ಕಾರ‌್ಯವನ್ನು ದೀರ್ಘಕಾಲ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದರೆ ರೋಗ ಪತ್ತೆ ಕಾರ್ಯ ನಮ್ಮ ದೇಶದಲ್ಲಿ ಸರಿಯಾಗಿ ಆಗುತ್ತಿಲ್ಲ~ ಎಂದು ಕಳವಳ ವ್ಯಕ್ತ ಪಡಿಸಿದರು.`ಇತ್ತೀಚಿನ ದಿನಗಳಲ್ಲಿ ಪೆರಿಟೋನಿಯಲ್ ಡಯಾಲಿಸಿಸ್ ಚಿಕಿತ್ಸೆ ಹೆಚ್ಚು ಜನಪ್ರಿಯವಾಗುತ್ತಿದೆ. ಇದು ಯಂತ್ರರಹಿತ ವ್ಯವಸ್ಥೆಯಾಗಿದ್ದು ಮನೆಯಲ್ಲಿಯೇ ನೀಡುವ ಚಿಕಿತ್ಸೆ ನಿಡಲಾಗುತ್ತದೆ.ಮನೆಯಲ್ಲಿಯೇ ತಪಾಸಣೆ ಹಾಗೂ ಚಿಕಿತ್ಸೆ ನೀಡುವುದರಿಂದ  ಸಹಜ ಜೀವನಶೈಲಿ  ಸಾಧ್ಯವಾಗುತ್ತದೆ~ ಎಂದು  ಅವರು ತಿಳಿಸಿದರು.ಕಾರ‌್ಯಕ್ರಮದಲ್ಲಿ ಸೇಂಟ್ ಜಾನ್ಸ್ ಆಸ್ಪತ್ರೆಯ ಅಂಗಾಂಗ ದಾನಿಗಳ ಕುಟುಂಬಗಳನ್ನು ಗೌರವಿಸಲಾಯಿತು.  ಸಾವಿನ ನಂತರ ತಮ್ಮ ಅಂಗಗಳನ್ನು ದಾನ ಮಾಡಲು ಬಯಸುವರಿಗೆ ಡೋನರ್ ಕಾರ್ಡ್ ನೀಡಲಾಯಿತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.