ಗುರುವಾರ , ಮೇ 6, 2021
23 °C

ಅಂಚೆಕನ್ನಡಿಯಲ್ಲಿ ಗುರುದೇವ

ಎನ್. ಜಗನ್ನಾಥ್ ಪ್ರಕಾಶ್ Updated:

ಅಕ್ಷರ ಗಾತ್ರ : | |

ಜಾಗತಿಕ ವಲಯದಲ್ಲಿ ಭಾರತೀಯ ಆಧುನಿಕ ಸಾಹಿತ್ಯಕ್ಕೆ ಮಹತ್ವದ ಸ್ಥಾನ ತಂದು ಕೊಟ್ಟವರಲ್ಲಿ ರವೀಂದ್ರನಾಥ್ ಟ್ಯಾಗೋರ್ ಮುಖ್ಯರು. ಕಾವ್ಯ, ಕಥೆ, ಕಾದಂಬರಿ, ನಾಟಕ, ಗೀತನಾಟಕ, ಪ್ರಬಂಧ, ಸಣ್ಣಕಥೆ, ಅನುವಾದ- ಹೀಗೆ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ತಮ್ಮದೇ ಛಾಪು ಮೂಡಿಸಿರುವ ಟ್ಯಾಗೋರರದು ಬಹುಮುಖ ಪ್ರತಿಭೆ.ರವೀಂದ್ರನಾಥ್ ಸಂಗೀತ ಪರಂಪರೆಗೆ ಕಾರಣರಾದ ಅವರು ಪ್ರಸಿದ್ಧ ಚಿತ್ರಕಲಾವಿದರು. ಅಭಿನಯ, ಗಾಯನದಲ್ಲೂ ಪರಿಣಿತರು. ಹಲವು ವಿಶಿಷ್ಟ ಶೈಕ್ಷಣಿಕ ಕೇಂದ್ರಗಳನ್ನು ರೂಪಿಸಿದವರು. ರಾಷ್ಟ್ರಪ್ರೇಮಿ ರಬೀಂದ್ರರು ತತ್ವಶಾಸ್ತ್ರಜ್ಞರು, ಸಮಾಜ ಪರಿವರ್ತಕರು.ನಾಗರಿಕತೆ, ಸಂಸ್ಕೃತಿ, ಶಿಕ್ಷಣ ಹಾಗೂ ಸಾಹಿತ್ಯ ಕುರಿತಂತೆ ಏಳು ಸಂಪುಟಗಳಷ್ಟು ಪ್ರಬಂಧಗಳನ್ನು ರಚಿಸಿದ ಗುರುದೇವರು ತಮ್ಮ ಜೀವಿತಾವಧಿಯಲ್ಲಿ ಮೂರು ಸಾವಿರಕ್ಕೂ ಹೆಚ್ಚು ಕವನ ಹಾಗೂ ಗೀತೆಗಳು, ಒಂಬತ್ತು ನಾಟಕಗಳು, ಹನ್ನೆರಡು ಕಾದಂಬರಿಗಳು ಮತ್ತು ಐವತ್ತು ಸಣ್ಣ ಕಥೆಗಳನ್ನು ರಚಿಸಿದರು.

 

ಇಂಥ ಮೇರು ವ್ಯಕ್ತಿತ್ವದ ಟ್ಯಾಗೋರರ 150ನೇ ಜನ್ಮ ದಿನಾಚರಣೆ ಕಳೆದೊಂದು ವರ್ಷದಿಂದ ಭಾರತವಲ್ಲದೆ ಫ್ರಾನ್ಸ್, ಬಾಂಗ್ಲಾ, ಶ್ರೀಲಂಕಾ, ಅಮೆರಿಕ ಇನ್ನಿತರ ದೇಶಗಳಲ್ಲಿ ನಡೆಯುತ್ತಿದೆ.ಸಾಹಿತ್ಯ, ಸಾಂಸ್ಕೃತಿಕ ಕಾರ‌್ಯಕ್ರಮಗಳ ಮೂಲಕ ರವೀಂದ್ರರ ಸ್ಮರಣೆ ಜರುಗುತ್ತಿದ್ದು, ಅವರನ್ನು ನೆನಪಿಸಿಕೊಳ್ಳುವ ಸಂಗತಿಗಳೂ ಒಂದಾದ ಮೇಲೆ ಇನ್ನೊಂದರಂತೆ ಬರುತ್ತಿವೆ. ಅವರು ಬರೆದ `ಜನ ಗಣ ಮನ~ ಗೀತರಚನೆಗೆ ನೂರು ವರ್ಷ (1911)ವಾಯಿತು. ಇಡೀ ಏಷ್ಯಾ ಖಂಡಕ್ಕೆ ಮೊದಲ ಸಾಹಿತ್ಯ ನೋಬೆಲ್ ಪ್ರಶಸ್ತಿ `ಗೀತಾಂಜಲಿ~ಗೆ ಲಭಿಸಿದ್ದು ಒಂದು ಶತಮಾನದ ಹಿಂದೆ (1913). ಈ ಐತಿಹಾಸಿಕ ಘಟನೆಗಳ ಸಾಲಿಗೆ ರವೀಂದ್ರರ 150ನೇ ಜಯಂತಿ ಸಂಭ್ರಮವೂ ಸೇರಿಕೊಂಡಿದೆ.ಸಾಹಿತ್ಯಾಭಿಮಾನಿಗಳಿಗೆ ಮಾತ್ರವಲ್ಲ, ಅಂಚೆಚೀಟಿ ಸಂಗ್ರಹಕಾರರಿಗೂ ಟ್ಯಾಗೋರರೆಂದರೆ ಬಹು ಇಷ್ಟ. ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಸ್ವಾತಂತ್ರ್ಯ ಪಡೆದು ನಮ್ಮದೇ ಗಣರಾಜ್ಯ ರಚಿಸಿಕೊಂಡ ಸಂದರ್ಭದಲ್ಲಿ (1952) ಭಾರತ ಸರ್ಕಾರ ಛಾಪಿಸಿದ ಕವಿ, ಸಾಹಿತಿ, ತತ್ವಜ್ಞಾನಿಗಳ ಅಂಚೆಚೀಟಿ ಸರಣಿಯಲ್ಲಿ ರವೀಂದ್ರರೂ ಗೌರವ ಪಡೆದರು.

 

ಇದು ಇಲ್ಲಿಗೆ ನಿಲ್ಲದೆ ಅನೇಕ ಸಂದರ್ಭಗಳ್ಲ್ಲಲಿ ಟ್ಯಾಗೋರ್ ಅಂಚೆಚೀಟಿಗಳು ಹೊರಬಂದಿವೆ. ಭಾರತ ಮಾತ್ರವಲ್ಲ, ಅನೇಕ ದೇಶಗಳೂ ಟ್ಯಾಗೋರರ ಅಂಚೆಚೀಟಿಗಳನ್ನು ಪ್ರಕಟಿಸುವ ಮೂಲಕ ಗೌರವ ಸಲ್ಲಿಸುತ್ತಿವೆ.ಟ್ಯಾಗೋರರ ಮೊದಲ ಅಂಚೆಚೀಟಿ ಪ್ರಕಟಣೆಗೆ ಈಗ 60 ವರ್ಷ (1 ಅಕ್ಟೋಬರ್ 1952). ಕಬೀರ್, ತುಳಸೀದಾಸ್, ಮೀರಾಬಾಯಿ, ಸೂರದಾಸ್, ಮಿರ್ಜಾ ಗಾಲೀಬ್ ಅವರೊಂದಿಗೆ ಪ್ರಕಟಗೊಂಡ ರವೀಂದ್ರರ ಪ್ರಥಮ ಅಂಚೆಚೀಟಿಯ ಮುಖಬೆಲೆ 12 ಆಣೆ.ಮೇ 7, 1961 ರಾಷ್ಟ್ರಕವಿ ರವೀಂದ್ರರ ಜನ್ಮ ಶತಮಾನೋತ್ಸವ ಆಚರಣೆ ಆರಂಭವಾದ ವರ್ಷ. ಆಗ ಅಂಚೆ ಇಲಾಖೆ 15 ಪೈಸೆ ಬೆಲೆಯ ಕೇಸರಿ ಹಸಿರು ಮಿಶ್ರಿತ ಬಣ್ಣಗಳ ಅಂಚೆಚೀಟಿಯನ್ನು ಬಿಡುಗಡೆ ಮಾಡಿತು. ಚಿತ್ರಕಾರರೂ ಆಗಿದ್ದು ನಂತರ ಪ್ರಸಿದ್ಧ ಚಲನಚಿತ್ರ ನಿರ್ದೇಶಕರಾದ ಸತ್ಯಜಿತ್ ರೇ ಟ್ಯಾಗೋರರ ಈ ಅಂಚೆಚೀಟಿಯನ್ನು ವಿನ್ಯಾಸಗೊಳಿಸಿದ್ದು ವಿಶೇಷ.ವಿಪುಲ ಸಾಹಿತ್ಯ ರಚನೆಯಿಂದ ಗಮನ ಸೆಳೆದ ಟ್ಯಾಗೂರ್ ಮಹಾ ಪ್ರವಾಸ ಪ್ರಿಯರು. ಭಾರತದ ಉದ್ದಗಲಕ್ಕೂ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಸುತ್ತಾಡಿದ ಅವರು ಇಂಗ್ಲೆಂಡ್, ಅರ್ಜೆಂಟೈನಾ, ಜರ್ಮನಿ, ಜಪಾನ್, ರಷ್ಯ ಹೀಗೆ ಹಲವಾರು ದೇಶಗಳಿಗೂ ಹೋಗಿ ಬಂದವರು. ಹೋದ ಕಡೆಗಳಲ್ಲಿ ಇವರು ಸಂಪಾದಿಸಿದ್ದು ಅಸಂಖ್ಯ ಗೆಳೆಯರ ಬಳಗವನ್ನ.ಇಂತಹ ಸ್ನೇಹಪ್ರಿಯ ಕವಿಗೆ ಅವರ ಜನ್ಮಶತಮಾನೋತ್ಸವ ಕಾಲಕ್ಕೆ ರಷ್ಯ 6 ಕೊಪಿಕ್ ಬೆಲೆಯ ಆಕರ್ಷಕ ಅಂಚೆಚೀಟಿ ಪ್ರಕಟಿಸಿತು. ಇದೇ ಸಮಯದಲ್ಲಿ ಗುರುದೇವರಿಗೆ ಅಂಚೆಚೀಟಿ ಮೂಲಕ ಗೌರವಾರ್ಪಣೆ ಮಾಡಿದ ದೇಶ ಅರ್ಜೆಂಟೈನಾ, ಅಶೋಕ ಚಕ್ರವನ್ನೊಳಗೊಂಡ ಮೊದಲ ವಿಶೇಷ ಲಕೋಟೆಯನ್ನು ಬಿಡುಗಡೆಗೊಳಿಸಿತು. ಬ್ರೆಜಿಲ್ ಹಾಗೂ ರೋಮಾನಿಯಾ ದೇಶಗಳೂ ಟ್ಯಾಗೋರ್ ಅಂಚೆಚೀಟಿ ಹೊರತಂದ ದೇಶಗಳ ಸಾಲಿಗೆ ಆಗ ಸೇರಿದವು.ರವೀಂದ್ರರು ಬಂಗಾಲಿ ಭಾಷೆ, ಸಾಹಿತ್ಯ, ಸಂಸ್ಕೃತಿಯ ಉದ್ದೀಪನಕ್ಕಾಗಿ ರೂಪಿಸಿದ ಶೈಕ್ಷಣಿಕ ಕೇಂದ್ರ `ವಿಶ್ವಭಾರತಿ~ ಸ್ಥಾಪನೆಗೆ ಅರ್ಧ ಶತಮಾನವಾದಾಗ (1971), `ವಿಶ್ವಭಾರತಿ~ಯ ಮುಖ್ಯ ಕಟ್ಟಡ ಚಿತ್ರದೊಂದಿಗೆ ಗುರುದೇವರಿರುವ ಅಂಚೆಚೀಟಿಯನ್ನು ಭಾರತ ಸರ್ಕಾರ ಮುದ್ರಿಸಿತು. ಈ ಅಂಚೆ ಚೀಟಿಯ ಮುಖಬೆಲೆ 20 ಪೈಸೆ.ಸ್ವೀಡನ್ ದೇಶ `ನೋಬಲ್~ ಪುರಸ್ಕಾರದ ವಜ್ರಮಹೋತ್ಸವ ಪ್ರಯುಕ್ತ ನೋಬಲ್ ಪುರಸ್ಕೃತರ ಅಂಚೆ ಚೀಟಿಗಳನ್ನು 1961ರಿಂದ ಪ್ರಕಟಿಸಲು ಪ್ರಾರಂಭಿಸಿತು. 1973ರಲ್ಲಿ ಸ್ವೀಡನ್ 1913ರಲ್ಲಿ ನೋಬಲ್ ಪ್ರಶಸ್ತಿ ಪಡೆದ ಮೂವರನ್ನು ಅಂಚೆಚೀಟಿ ಮೂಲಕ ಗೌರವಿಸಿತು. ಅವರಲ್ಲಿ ಟ್ಯಾಗೋರರೂ ಸೇರಿದ್ದರು.ಟ್ಯಾಗೋರರ 120ನೇ ಜನ್ಮ ದಿನಾಚರಣೆಯ ಅಂಗವಾಗಿ ವಿಯಟ್ನಾಂ ವಿಶೇಷ ಅಂಚೆಚೀಟಿಯನ್ನು (1982) ಪ್ರಕಟಿಸಿತು. ಬಲ್ಗೇರಿಯಾ ದೇಶ ವಿಶ್ವ ಶ್ರೇಷ್ಠ ತತ್ವಜ್ಞಾನಿಗಳ ಸರಣಿಯಲ್ಲಿ ರಬೀಂದ್ರನಾಥರ ಅಂಚೆಚೀಟಿ ಹೊರತಂದಿತು.ರವೀಂದ್ರರ ಛಾಯಾಚಿತ್ರ, ಅವರು ಸ್ಥಾಪಿಸಿದ ವಿಶ್ವಭಾರತಿ, ಅವರು ಬಿಡಿಸಿದ ಚಿತ್ರ, ಗುರುದೇವ ಸ್ವರಚಿತ ಭಾವಚಿತ್ರ, ವಾಲ್ಮೀಕಿ ಪ್ರತಿಭಾ ನಾಟಕದ ಪಾತ್ರಧಾರಿಯಾಗಿ ಟ್ಯಾಗೂರರು, ಶಾಂತಿನಿಕೇತನದಲ್ಲಿ ಕಾರ್ಯಮಗ್ನ ಕವಿ- ಹೀಗೆ, ವಿಶ್ವಕವಿಯ ಬಹುಮುಖ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವಂತೆ ಅಂಚೆಚೀಟಿಗಳು ಹೊರಬಂದಿರುವುದೊಂದು ಗಮನಾರ್ಹ ವಿಚಾರ.ರವೀಂದ್ರರನ್ನು ಕುರಿತು ವಿಶೇಷ ಲಕೋಟೆಗಳು, ಸೋವಿನೀರ್ ಷೀಟ್‌ಗಳು, ವಿಶೇಷ ಠಸ್ಸೆಗಳನ್ನು ಜಗತ್ತಿನ 20ಕ್ಕೂ ಹೆಚ್ಚು ದೇಶಗಳು ಹೊರತಂದಿವೆ.

ಒಬ್ಬರೇ ಕವಿಯ ರಚನೆಗಳು ಎರಡು ದೇಶಗಳ ರಾಷ್ಟ್ರಗೀತೆಗಳಾಗಿ ಮಾನ್ಯತೆ ಪಡೆದಿರುವ ನಿದರ್ಶನ ಟ್ಯಾಗೋರರಿಗೆ ಮಾತ್ರ ಸಲ್ಲುತ್ತದೆ.`ಜನಗಣಮನ~ (ಭಾರತ), `ಅಮರ್ ಸೋನಾರ್ ಬಾಂಗ್ಲ~ (ಬಾಂಗ್ಲಾ) ಈ ಗೀತೆಗಳು. ಶ್ರೀಲಂಕಾ ರಾಷ್ಟ್ರಗೀತೆಗೂ ರವೀಂದ್ರರ ಸಂಗೀತವೇ ಪ್ರೇರಣೆ. ಕವಿಯ 150ನೇ ಜನ್ಮದಿನದ ಗೌರವಾರ್ಥ ಶ್ರೀಲಂಕಾ ರಾಷ್ಟ್ರ ಸಿಂಹಳಿ, ತಮಿಳು ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಕವಿಯ ಹೆಸರಿರುವ ಸ್ಮರಣಾರ್ಥ ಅಂಚೆಚೀಟಿಯನ್ನು ಬಿಡುಗಡೆ ಮಾಡಿದೆ.ಗುರುದೇವರ ಅಭಿಮಾನಿ ಹಾಗೂ ಅಂಚೆಚೀಟಿ ಸಂಗ್ರಹಕಾರ ಶೇಖರ್ ಚಕ್ರವರ್ತಿ ರವೀಂದ್ರನಾಥ್ ಟ್ಯಾಗೋರ್ ಗೌರವಾರ್ಥ ಜಗತ್ತಿನಾದ್ಯಂತ ಪ್ರಕಟಗೊಂಡಿರುವ ಅಂಚೆಚೀಟಿ ಹಾಗೂ ಸಾಂದರ್ಭಿಕ ವಿಶೇಷ ಲಕೋಟೆಗಳ ಪ್ರದರ್ಶನವನ್ನು ಕಳೆದ 50 ವರ್ಷಗಳಿಂದ ಭಾರತದಲ್ಲಿ ಏರ್ಪಡಿಸುತ್ತಿದ್ದಾರೆ. ಪ್ರಸ್ತುತ ಈ ಪ್ರದರ್ಶನ ಈಜಿಪ್ಟ್‌ನಲ್ಲಿ ನಡೆದಿದೆ.ಕರ್ನಾಟಕ ಗ್ರಾಮೀಣ ಅಂಚೆ ಚೀಟಿ ಸಂಗ್ರಹಕಾರರ ಸಂಘದ ಪ್ರಧಾನ ಕಾರ‌್ಯದರ್ಶಿ ಎಂ.ಆರ್. ಪ್ರಭಾಕರ್ ಅವರ ಸಂಗ್ರಹದಲ್ಲಿ ಟ್ಯಾಗೋರರ ಅಪೂರ್ವ ಅಂಚೆಚೀಟಿಗಳ ಸಂಗ್ರಹವಿದ್ದು, ಅವುಗಳನ್ನವರು ಶಾಲಾ ಕಾಲೇಜುಗಳಲ್ಲಿ ಪ್ರದರ್ಶಿಸುತ್ತಿದ್ದಾರೆ.

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.