ಸೋಮವಾರ, ಮೇ 16, 2022
28 °C

ಅಂತರರಾಷ್ಟ್ರೀಯ ಮಟ್ಟದಲ್ಲಿ ಸೇವೆ ಸಲ್ಲಿಸುತ್ತಿರುವ ಕೆಲವು ಯುವಸಂಸ್ಥೆಗಳು

ಅಮಿತ್ ಎಂ.ಎಸ್. Updated:

ಅಕ್ಷರ ಗಾತ್ರ : | |

ಅಂತರರಾಷ್ಟ್ರೀಯ ಮಟ್ಟದಲ್ಲಿ ಸೇವೆ ಸಲ್ಲಿಸುತ್ತಿರುವ ಕೆಲವು ಯುವಸಂಸ್ಥೆಗಳ ಬಗ್ಗೆ ಕಳೆದ ಸಂಚಿಕೆಯಲ್ಲಿ ಮಾಹಿತಿ ನೀಡಲಾಗಿತ್ತು. ತಮ್ಮದೇ ನೀತಿ ನಿಯಮಾವಳಿಗಳ ಚೌಕಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾಮಾಜಿಕವಾಗಿ ಬದಲಾವಣೆ ಮೂಡಿಸುವ ಕಾರ್ಯಗಳಲ್ಲಿ ಭಾಗಿಯಾಗುತ್ತಿರುವ ಇನ್ನು ಹಲವು ಯುವ ಮತ್ತು ಮಕ್ಕಳ ಸಂಸ್ಥೆಗಳತ್ತ ಕಿರು ನೋಟ ಇಲ್ಲಿದೆ. 

                                         --------------ರೊಟರ‌್ಯಾಕ್ಟ್

ರೋಟರಿ ಇಂಟರ್‌ನ್ಯಾಷನಲ್ ಯೂತ್ ಪ್ರೋಗ್ರಾಮ್ ಹೆಸರಿನಲ್ಲಿ 1968ರಲ್ಲಿ ಪ್ರಾರಂಭವಾದ ರೊಟೊರ‌್ಯಾಕ್ಟ್ ಇಂದು ವಿಶ್ವದಾದ್ಯಂತ 9,030 ಕ್ಲಬ್‌ಗಳನ್ನು ಹೊಂದಿರುವ ಸಂಸ್ಥೆಯಾಗಿ ಬೆಳೆದಿದೆ.
ಇದು 18 ರಿಂದ 30 ವರ್ಷದ ಯುವಕ ಮತ್ತು ಯುವತಿಯರಲ್ಲಿ ನಾಯಕತ್ವ ಗುಣ ಮತ್ತು ಸಮುದಾಯ ಸೇವೆಯನ್ನು ಸಂಘಟಿಸುವ ಕಾರ್ಯ ಮಾಡುತ್ತಿದೆ. ಯುವ ವಯಸ್ಕರನ್ನು ಅವರ ಸಮುದಾಯ ಮತ್ತು ಕಾರ್ಯ ಚಟುವಟಿಕೆ ನಡೆಸುವ ಸ್ಥಳಗಳಲ್ಲಿ ನಾಯಕರನ್ನಾಗಿ ಬೆಳೆಸುವುದರ ಕುರಿತು ರೊಟರ‌್ಯಾಕ್ಟ್ ಆದ್ಯತೆ ನೀಡುತ್ತದೆ.ವಿಶ್ವದಾದ್ಯಂತವಿರುವ ರೋಟರಿ ಕ್ಲಬ್‌ಗಳು ಅಂತರರಾಷ್ಟ್ರೀಯ ಸೇವಾ ಯೋಜನೆಗಳು, ಪ್ರಪಂಚದಲ್ಲಿ ಶಾಂತಿ ಮತ್ತು ಪರಸ್ಪರ ಹೊಂದಾಣಿಕೆ ಮೂಡಿಸುವ ನಿಟ್ಟಿನಲ್ಲಿ ಜಾಗತಿಕ ಪ್ರಯತ್ನ ಕಾರ್ಯಗಳನ್ನು ಮಾಡುತ್ತಿದೆ. ರೊಟರ‌್ಯಾಕ್ಟ್ ಎಂದರೆ `ರೋಟರಿ ಇನ್ ಆ್ಯಕ್ಷನ್~. 1962ರಲ್ಲಿ ರೋಟರಿ ಪ್ರೌಢಶಾಲಾ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಆರಂಭಿಸಿತು.ರೊಟರ‌್ಯಾಕ್ಟ್‌ನ ಹೆಚ್ಚಿನ ಚಟುವಟಿಕೆಗಳು ಕ್ಲಬ್ ಹಂತದಲ್ಲಿ ನಡೆಯುತ್ತವೆ. ತಮ್ಮ ಸಮುದಾಯಗಳಲ್ಲಿನ ದೈಹಿಕ ಮತ್ತು ಸಾಮಾಜಿಕ ಅವಶ್ಯಕತೆಗಳ ಬಗ್ಗೆ ಅರಿವು ಮೂಡಿಸಲು ಅಗತ್ಯವಾದ ಜ್ಞಾನ ಮತ್ತು ಕೌಶಲ್ಯವನ್ನು ಯುವಕರು ಮತ್ತು ಯುವತಿಯರಿಗೆ ಅವಕಾಶ ಒದಗಿಸುವುದು, ಪ್ರಪಂಚದೆಲ್ಲೆಡೆ ಸ್ನೇಹ ಸಂಬಂಧ ಮತ್ತು ಸೇವೆಗಳ ಚೌಕಟ್ಟಿನಲ್ಲಿ ಜನರ ನಡುವೆ ಉತ್ತಮ ಬಾಂಧವ್ಯ ಏರ್ಪಡಿಸಲು ಉತ್ತೇಜಿಸುವುದು ರೋಟರ‌್ಯಾಕ್ಟ್‌ನ ಮುಖ್ಯ ಉದ್ದೇಶ.ಜೂನಿಯರ್ ಚೇಂಬರ್ ಇಂಟರ್‌ನ್ಯಾಷನಲ್

ಸಕಾರಾತ್ಮಕ ಬದಲಾವಣೆಗಳನ್ನು ಸೃಷ್ಟಿಸುವ ಮೂಲಕ ವಿಶ್ವದ ಸಮಗ್ರ ಅಭಿವೃದ್ಧಿಗೆ ನೆರವಾಗುವ ಧ್ಯೇಯ ಮತ್ತು ಉದ್ದೇಶ ಹೊಂದಿರುವ ಸರ್ಕಾರೇತರ ಸಂಸ್ಥೆ ಜೂನಿಯರ್ ಚೇಂಬರ್ ಇಂಟರ್‌ನ್ಯಾಷನಲ್ (ಜೆಸಿಐ).
ಒಬ್ಬರಿಂದ ತಮ್ಮನ್ನು ಮತ್ತು ತಮ್ಮ ಸುತ್ತಲಿನ ಪ್ರಪಂಚವನ್ನು ಸುಧಾರಿಸುವ ರೀತಿಯ ಫಲಿತಾಂಶವನ್ನು ಈ ರೀತಿ ಬದಲಾವಣೆಗಳು ನೀಡಬೇಕು ಎನ್ನುವುದನ್ನು ಸಂಸ್ಥೆ ನಂಬಿದೆ. `ದಿ ಯಂಗ್ ಮೆನ್ಸ್ ಪ್ರೊಗ್ರೆಸಿವ್ ಸಿವಿಕ್ ಅಸೋಸಿಯೇಷನ್ (ವೈಎಂಪಿಸಿಎ) 1915ರಂದು ಜನ್ಮತಳೆದು ಐದು ತಿಂಗಳೊಳಗೆ 750ಕ್ಕೂ ಅಧಿಕ ಸದಸ್ಯರನ್ನು ಪಡೆದುಕೊಂಡಿತು.ಅಮೆರಿಕದ ಹೆನ್ರಿ ಜೀಸೆನ್‌ಬೀರ್ ಇದರ ಸಂಸ್ಥಾಪಕ. 1916ರಲ್ಲಿ ಇದು `ಜೂನಿಯರ್ ಸಿಟಿಜನ್ಸ್~ ಎಂಬ ಹೆಸರು ಪಡೆದುಕೊಂಡಿತು. ಕ್ರಮೇಣ ಇದು `ಜೇಸೀಸ್~ ಎಂದು ಹೆಸರಾಯಿತು. ಮೊದಲನೇ ಮಹಾಯುದ್ಧದ ಸಂದರ್ಭದಲ್ಲಿ ಇದರ ಚಟುವಟಿಕೆ ವಿಸ್ತರಣೆಯಾಯಿತು.1944ರಲ್ಲಿ ಮೆಕ್ಸಿಕೋ ನಗರದಲ್ಲಿ ನಡೆದ ಸಭೆಯಲ್ಲಿ ಅಧಿಕೃತವಾಗಿ ಜೂನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಅಸ್ತಿತ್ವಕ್ಕೆ ಬಂದಿತು. ಇಂದು ವಿಶ್ವದಾದ್ಯಂತ ಚಾಚಿಕೊಂಡಿರುವ ಸಂಸ್ಥೆ ಸಮುದಾಯ ಸೇವೆಯ ತತ್ವದಡಿ ವೈಯಕ್ತಿಕ, ಸಾಮುದಾಯಿಕ, ಅಂತರರಾಷ್ಟ್ರೀಯ ಹಾಗೂ ವ್ಯಾವಹಾರಿಕ ವಿಷಯಗಳಲ್ಲಿ ಕಾರ್ಯಚಟುವಟಿಕೆ ನಡೆಸುತ್ತಿದೆ. ಸಕಾರಾತ್ಮಕ ಬದಲಾವಣೆಗಳನ್ನು ತರಲು ಯುವ ಜನರನ್ನು ಸಬಲೀಕರಣಕ್ಕೆ ಅವಕಾಶಗಳನ್ನು ಒದಗಿಸುವುದು ಜೆಸಿಐನ ಗುರಿಗಳಲ್ಲೊಂದು.ಕಿಡ್ಸ್ ಫಾರ್ ಪೀಸ್

`ಕಿಡ್ಸ್ ಫಾರ್ ಪೀಸ್~ ಪ್ರೀತಿ ಮತ್ತು ಕ್ರಿಯೆ ಮೂಲಕ ವಿಶ್ವವನ್ನು ಉನ್ನತಿಗೇರಿಸುವ ಬದ್ಧತೆಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ. ಮಕ್ಕಳ ಸಹಜ ಸ್ವಭಾವವನ್ನು ಸಾಂಸ್ಕೃತಿಕ ಅನುಭವ, ಕಲಾ ಸೇವೆ ಮತ್ತು ಪರಿಸರ ಯೋಜನೆಗಳ ಮೂಲಕ ವಿಕಾಸಗೊಳಿಸುವುದು ಕಿಡ್ಸ್ ಫಾರ್ ಪೀಸ್‌ನ ಮುಖ್ಯ ಧ್ಯೇಯ. ನಾಯಕತ್ವ, ಸೇವೆ, ಕರುಣೆ, ಗೌರವ, ಏಕತೆ, ಜವಾಬ್ದಾರಿ, ಕರ್ತವ್ಯ ಪ್ರಜ್ಞೆ ಮತ್ತು ಮೇಲುಸ್ತುವಾರಿ ಮುಂತಾದವುಗಳ ಕುರಿತು ಮಕ್ಕಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಸಂಸ್ಥೆ ಹಮ್ಮಿಕೊಳ್ಳುತ್ತದೆ.
ಕಿಡ್ಸ್ ಫಾರ್ ಪೀಸ್‌ನ ಮೂಲ ರೂವಾರಿ ಡೇನಿಯಲ್ಲೆ ಗ್ರಾಮ್. ನಾಟಕಕಾರ್ತಿ ಮತ್ತು ನಿರ್ದೇಶಕರಾಗಿದ್ದ ಅವರು 2006ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಇದನ್ನು ಸ್ಥಾಪಿಸಿದರು. 2008ರಲ್ಲಿ ಸಂಸ್ಥೆ ಆರಂಭಿಸಿದ ದಿ ಗ್ರೇಟ್ ಕೈಂಡ್‌ನೆಸ್ ಚಾಲೆಂಜ್ ಅತ್ಯಂತ ಜನಪ್ರಿಯ.ಪ್ರತಿ ಆಗಸ್ಟ್‌ನ ಎರಡನೇ ಶನಿವಾರ ನಡೆಯುವ ದಿ ಗ್ರೇಟ್ ಕೈಂಡ್‌ನೆಸ್ ಚಾಲೆಂಜ್ ಎಲ್ಲಾ ವಯಸ್ಸಿನ ಯುವ ಸಮೂಹಕ್ಕೆ ತೆರೆದಿರುತ್ತದೆ. ಇದರಲ್ಲಿ ಮಕ್ಕಳು ಆ ದಿನದಂದು ಸಮಾಜಕ್ಕೆ ತಮ್ಮಿಂದ ಸಾಧ್ಯವಾದಷ್ಟು ಸಹಾಯ ಕಾರ್ಯವನ್ನು ಮಾಡಬೇಕು. ಇದು ಹಲವು ದೇಶಗಳಲ್ಲಿ ಬೃಹತ್ ಅಭಿಯಾನವಾಗಿಯೂ ಬೆಳೆದಿದೆ.ಜೂನಿಯರ್ ಆಪ್ಟಿಮಿಸ್ಟ್ ಆಕ್ಟೊಗಾನ್ ಇಂಟರ್‌ನ್ಯಾಷನಲ್

1988ರಲ್ಲಿ ಜನ್ಮತಳೆದ ಜೂನಿಯರ್ ಆಪ್ಟಿಮಿಸ್ಟ್ ಆಕ್ಟೊಗಾನ್ (ಜೆಒಒಐ) 18 ವರ್ಷದೊಳಗಿನ ಮಕ್ಕಳಿಗಾಗಿ ಮುಡಿಪಾಗಿರುವ ಸಂಸ್ಥೆ. ಇದು ಸುಮಾರು 675ಕ್ಕೂ ಅಧಿಕ ಸಂಘಟನೆಗಳನ್ನು ಒಳಗೊಂಡು ಬೃಹತ್ತಾಗಿ ಬೆಳೆದು ನಿಂತಿದೆ.
ಜೆಒಒಐ ಮಕ್ಕಳಿಗಾಗಿ ರೂಪುಗೊಂಡ ಸಂಸ್ಥೆ. ಇದರಲ್ಲಿ ವಯಸ್ಸಿನ ಗುಂಪಿಗೆ ಅನುಗುಣವಾಗಿ ಮೂರು ವಿಭಾಗಗಳಿವೆ. 6 ರಿಂದ 9 ವರ್ಷ ವಯಸ್ಸಿನವರಿಗಾಗಿ ಆಲ್ಫಾ ಕ್ಲಬ್ಸ್, ಜೂನಿಯರ್ ಆಪ್ಟಿಮಿಸ್ಟ್ ಕ್ಲಬ್ (10-13) ಮತ್ತು ಆಕ್ಟೊಗಾನ್ ಕ್ಲಬ್ (14-18). ಜೆಒಒಐನ ಪ್ರತಿ ವಿಭಾಗವೂ ತಾನು ಪ್ರತಿನಿಧಿಸುವ ವಯಸ್ಸಿನ ಸಮುದಾಯವನ್ನು ವಿವಿಧ ರೀತಿಯಲ್ಲಿ ಸೇವೆ ಸಲ್ಲಿಸುತ್ತದೆ.ಮಕ್ಕಳಿಂದಲೇ ಮಕ್ಕಳ ಸೇವೆ ಎಂಬ ತತ್ವ ಪ್ರತಿಪಾದಿಸಿರುವ ಜೆಒಒಐ, ಯುವ ಸಮೂಹದ ಸೇವೆಗಾಗಿ ಧನಾತ್ಮಕ ನಿರ್ಣಯಗಳನ್ನು ತೆಗೆದುಕೊಳ್ಳುವಂತೆ ಯುವ ಜನರನ್ನು ಪ್ರೇರೇಪಿಸುವುದು ತನ್ನ ಗುರಿ ಎಂದು ಅದು ಹೇಳಿಕೊಂಡಿದೆ.

 

ಚೈಲ್ಡ್‌ಹುಡ್ ಕ್ಯಾನ್ಸರ್ ಕ್ಯಾಂಪೇನ್ (ಸಿಸಿಸಿ), ಆಪ್ಟಿಮಿಸ್ಟ್ ಇಂಟರ್‌ನ್ಯಾಷನಲ್ ಜೂನಿಯರ್ ಗಾಲ್ಫ್ ಚಾಂಪಿಯನ್‌ಷಿಪ್ (ಓಐಜೆಜಿಸಿ) ಮತ್ತು ವಿದ್ಯಾರ್ಥಿ ವೇತನದಂತಹ ವಿವಿಧ ಚಟುವಟಿಕೆಗಳನ್ನು ಸಂಸ್ಥೆ ನಡೆಸುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.