ಭಾನುವಾರ, ಜೂನ್ 20, 2021
21 °C

ಅಂತರಿಕ್ಷ್-ದೇವಾಸ್ ಒಪ್ಪಂದ: ಜಾರಿ ನಿರ್ದೇಶನಾಲಯದ ತನಿಖೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎಸ್-ಬ್ಯಾಂಡ್ ತರಂಗಾಂತರ ಹಂಚಿಕೆಗೆ ಸಂಬಂಧಿಸಿದಂತೆ ಅಂತರಿಕ್ಷ್-ದೇವಾಸ್ ಕಂಪೆನಿಗಳ ನಡುವೆ ಆಗಿದ್ದ ಒಪ್ಪಂದ ಕುರಿತು ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿದೆ. ಆರೋಪಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಆಯ್ಕೆಗಳನ್ನೂ ಜಾರಿ ನಿರ್ದೇಶನಾಲಯ (ಇ.ಡಿ) ಮುಕ್ತವಾಗಿರಿಸಿದೆ.

`ಒಪ್ಪಂದ ಕುರಿತು ತನಿಖೆ ನಡೆಸುವ ನಿಟ್ಟಿನಿಂದ ಬೆಂಗಳೂರು ಶಾಖೆಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಲಾಗಿದೆ. ಎರಡರಿಂದ ಮೂರು ತಿಂಗಳಲ್ಲಿ ತನಿಖಾ ವರದಿ ಸಿದ್ಧವಾಗಲಿದೆ~ ಎಂದು ನವದೆಹಲಿಯಿಂದ ದೂರವಾಣಿ ಮೂಲಕ `ಪ್ರಜಾವಾಣಿ~ ಜೊತೆ ಮಾತನಾಡಿದ ಇ.ಡಿ. ಅಧಿಕಾರಿಗಳು ತಿಳಿಸಿದರು.

ಅಂತರಿಕ್ಷ್ ಕಂಪೆನಿಯು ಬೆಂಗಳೂರಿನಲ್ಲಿ ನೋಂದಾಯಿಸಿಕೊಂಡಿರುವುದು ಮತ್ತು ಒಪ್ಪಂದದ ಕುರಿತು ತನಿಖೆ ನಡೆಸಿರುವ ಸಮಿತಿಗಳು ದೋಷಾರೋಪಣೆ ಮಾಡಿರುವ ವಿಜ್ಞಾನಿಗಳು ಬೆಂಗಳೂರು ನಿವಾಸಿಗಳಾಗಿರುವ ಕಾರಣ, ಇಲ್ಲಿನ ಶಾಖೆಯಿಂದ ತನಿಖೆ ನಡೆಸಲು ಇ.ಡಿ. ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

`ತನಿಖೆ ಈಗ ಆರಂಭಿಕ ಹಂತದಲ್ಲಿದೆ. ಯಾವುದೇ ಬ್ಯಾಂಕ್ ಖಾತೆಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಮುನ್ನ, ಈ ಒಪ್ಪಂದದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ವ್ಯಕ್ತಿಗಳ ನಡುವೆ ಆಗಿರುವ ಕೊಡು-ಕೊಳ್ಳುವ ವ್ಯವಹಾರದ ಬಗ್ಗೆ ತನಿಖೆ ಆಗಬೇಕು~ ಎಂದು ಅಧಿಕಾರಿಗಳು ತಿಳಿಸಿದರು.

ವಿವಾದಿತ ಒಪ್ಪಂದ ಕುರಿತು ತನಿಖೆ ನಡೆಸಿರುವ ಎರಡು ಸಮಿತಿಗಳಿಂದ ದೋಷಾರೋಪಣೆಗೆ ಒಳಗಾಗಿರುವ ವಿಜ್ಞಾನಿಗಳ ವಿರುದ್ಧ ಕಾನೂನು ಕ್ರಮ ಜಾರಿಯಾಗಿಲ್ಲದಿದ್ದರೂ, ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆಯ ಅನ್ವಯ ತನಿಖೆ ನಡೆಸಲು ಇ.ಡಿ.ಗೆ ಅಧಿಕಾರ ಇದೆ ಎಂದು ಮೂಲಗಳು ತಿಳಿಸಿವೆ.

ದೇವಾಸ್ ಕಂಪೆನಿಯ ವಿಶ್ವಾಸಾರ್ಹತೆಯನ್ನು ತನಿಖೆಗೆ ಒಳಪಡಿಸುವುದರ ಜೊತೆಗೇ, ಒಪ್ಪಂದದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಮಾಜಿ ಅಧ್ಯಕ್ಷ ಜಿ. ಮಾಧವನ್ ನಾಯರ್ ಸೇರಿದಂತೆ ನಾಲ್ವರು ವಿಜ್ಞಾನಿಗಳ ಪಾತ್ರದ ಕುರಿತೂ ತನಿಖೆ ನಡೆಯಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.