ಶುಕ್ರವಾರ, ಜೂಲೈ 3, 2020
24 °C

ಅಂಪೈರ್ ಸ್ಟೀವ್ ಡೇವಿಸ್ ಶತಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂಪೈರ್ ಸ್ಟೀವ್ ಡೇವಿಸ್ ಶತಕ

ನವದೆಹಲಿ: ಭಾರತ ಮತ್ತು ಹಾಲೆಂಡ್ ತಂಡಗಳ ನಡುವಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಂದ್ಯ ಆಸ್ಟ್ರೇಲಿಯಾದ ಅಂಪೈರ್ ಸ್ಟೀವ್ ಡೇವಿಸ್ ಅವರಿಗೆ ಸ್ಮರಣೀಯ ಎನಿಸಿದೆ. ಈ ಪಂದ್ಯದ ಮೂಲಕ ಅವರು 100 ಏಕದಿನ ಪಂದ್ಯಗಳಲ್ಲಿ ಕಾರ್ಯನಿರ್ವಹಿಸಿದ ಅಂಪೈರ್‌ಗಳ ಪಟ್ಟಿಯಲ್ಲಿ ಸೇರಿಕೊಂಡರು.58ರ  ಡೇವಿಸ್ 1992ರ ಡಿಸೆಂಬರ್‌ನಲ್ಲಿ ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಪಂದ್ಯದ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಂಪೈರ್ ವೃತ್ತಿ ಆರಂಭಿಸಿದ್ದರು. ಇದೀಗ ಅಂಪೈರಿಂಗ್‌ನಲ್ಲಿ ಶತಕ ಸಾಧನೆ ಮಾಡಿದ್ದಾರೆ. 2008 ರಲ್ಲಿ ‘ಐಸಿಸಿ ಎಮಿರೇಟ್ಸ್ ಎಲೈಟ್ ಪ್ಯಾನೆಲ್’ ಅಂಪೈರ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಡೇವಿಸ್ 31 ಟೆಸ್ಟ್ ಹಾಗೂ 14 ಟ್ವೆಂಟಿ-20 ಅಂತರರಾಷ್ಟ್ರೀಯ ಪಂದ್ಯಗಳಲ್ಲೂ ಕಾರ್ಯನಿರ್ವಹಿಸಿದ್ದಾರೆ.ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಬುಧವಾರ ಭಾರತ- ಹಾಲೆಂಡ್ ನಡುವಿನ ಪಂದ್ಯಕ್ಕೆ ಮುನ್ನ ಐಸಿಸಿ ಮ್ಯಾಚ್ ರೆಫರಿ ರಂಜನ್ ಮದುಗಲೆ ಅವರು ಡೇವಿಸ್‌ಗೆ ಸ್ಮರಣಿಕೆ ನೀಡಿ ಗೌರವಿಸಿದರು. 100 ಹಾಗೂ ಅದಕ್ಕಿಂತ ಹೆಚ್ಚಿನ ಏಕದಿನ ಪಂದ್ಯಗಳಲ್ಲಿ ಕಾರ್ಯನಿರ್ವಹಿಸಿದ 14ನೇ ಅಂಪೈರ್ ಎಂಬ ಗೌರವ ಡೇವಿಸ್ ತಮ್ಮದಾಗಿಸಿಕೊಂಡರು.‘ಐಸಿಸಿ ವಿಶ್ವಕಪ್ ಟೂರ್ನಿಯ ವೇಳೆ ಈ ಗೌರವ ಲಭಿಸಿರುವುದು ಸಂತಸದ ವಿಚಾರ’ ಎಂದು ಡೇವಿಸ್ ಪ್ರತಿಕ್ರಿಯಿಸಿದ್ದಾರೆ. ‘ನನ್ನ ಮೊದಲ ಏಕದಿನ ಅಂತರರಾಷ್ಟ್ರೀಯ ಪಂದ್ಯದಿಂದಲೂ ಅಂಪೈರಿಂಗ್ ವೃತ್ತಿಯನ್ನು ಆನಂದಿಸುತ್ತಾ ಬಂದಿದ್ದೇನೆ. ಕೆಲವೊಂದು ಪ್ರಮುಖ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸುವ ಅವಕಾಶ ಲಭಿಸಿದೆ. 100 ಏಕದಿನ ಪಂದ್ಯಗಳಲ್ಲಿ ಕಾರ್ಯನಿರ್ವಹಿಸಿದ ಇತರ 13 ಅಂಪೈರ್‌ಗಳ ಪಟ್ಟಿಯಲ್ಲಿ ಸ್ಥಾನ ದೊರೆತಿರುವುದು ಹೆಮ್ಮೆಯ ವಿಚಾರ’ ಎಂದಿದ್ದಾರೆ. ಡೇವಿಸ್ ಅವರು 2007ರ ವಿಶ್ವಕಪ್ ಕ್ರಿಕೆಟ್ ಟೂರ್ನಿ ಮತ್ತು 2009ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲೂ ಕಾರ್ಯನಿರ್ವಹಿಸಿದ್ದರು.ಅತಿಹೆಚ್ಚು ಏಕದಿನ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ ದಾಖಲೆ ರೂಡಿ ಕೋಟ್ಜೆನ್ (209) ಅವರ ಹೆಸರಿನಲ್ಲಿದೆ. ಸ್ಟೀವ್ ಬಕ್ನರ್ (181), ಡೇವಿಡ್ ಶೆಫರ್ಡ್ (172) ಮತ್ತು ಡೆರಿಲ್ ಹಾರ್ಪರ್ (172) ಬಳಿಕದ ಸ್ಥಾನದಲ್ಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.