ಮಂಗಳವಾರ, ಮೇ 18, 2021
30 °C

ಅಂಬೇಡ್ಕರ್‌ರಿಂದ ವಾಣಿಜ್ಯ ರಂಗಕ್ಕೂ ಕೊಡುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಡಾ.ಬಿ.ಆರ್.ಅಂಬೇಡ್ಕರ್ ಅವರು ತುಳಿತಕ್ಕೊಳಗಾದವರ, ದಲಿತರನ್ನು ಮೇಲೆತ್ತುವುದರಲ್ಲಿ ಮಾತ್ರ ತಮ್ಮನ್ನು ತೊಡಗಿಸಿಕೊಂಡಿರಲಿಲ್ಲ; ಅವರೊಬ್ಬ ಆರ್ಥಿಕ ತಜ್ಞರೂ ಆಗಿದ್ದರು. ಆ ಮೂಲಕ ದೇಶದ ವಾಣಿಜ್ಯ ರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ~ ಎಂದು ವಿಜಯಾ ಬ್ಯಾಂಕ್‌ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಚ್.ಎಸ್.ಉಪೇಂದ್ರ ಕಾಮತ್ ನುಡಿದರು.ಅಖಿಲ ಭಾರತ ವಿಜಯಾ ಬ್ಯಾಂಕ್ ಎಸ್‌ಸಿ/ ಎಸ್‌ಟಿ ನೌಕರರ ಸಂಘಟನೆಯು ಡಾ.ಬಿ.ಆರ್.ಅಂಬೇಡ್ಕರ್ ಅವರ 120ನೇ ಜನ್ಮದಿನದ ಅಂಗವಾಗಿ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ವಿದೇಶದಲ್ಲಿ ಎಂ.ಎಸ್ಸಿ ಮಾಡಿದ ಅಂಬೇಡ್ಕರ್ ಅವರು ಆ ನಂತರವೂ ಆರ್ಥಿಕತೆಯ ಕುರಿತಂತೆ ಪ್ರಬಂಧ ಮಂಡಿಸಿದ್ದರು.

 

ನಂತರ ಮುಂಬೈನ ಕಾಲೇಜೊಂದರಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿದ್ದರು. `ಭಾರತದ ರೂಪಾಯಿಯ ಸಮಸ್ಯೆಗಳು~ ಎಂಬ ವಿಷಯ ಕುರಿತೂ ಸಹ ಪ್ರಬಂಧ ಮಂಡಿಸಿದ್ದರು. ಆ ಮೂಲಕ ಪರೋಕ್ಷವಾಗಿ ಬ್ಯಾಂಕಿಂಗ್ ವಲಯಕ್ಕೂ ಸಹಾಯ ಮಾಡಿದರು” ಎಂದು ಹೇಳಿದರು.`ವಿಜಯಾ ಬ್ಯಾಂಕ್ ಗ್ರಾಮೀಣ ಭಾಗದ ಸೇವೆಯನ್ನು ಮುಖ್ಯ ಗುರಿಯಾಗಿ ಇಟ್ಟುಕೊಂಡು ಅಸ್ತಿತ್ವಕ್ಕೆ ಬಂದಿದೆ. ಆದ್ದರಿಂದ ಬ್ಯಾಂಕ್ ಸಿಬ್ಬಂದಿ ಗ್ರಾಹಕರ ಆಶಯಕ್ಕೆ ತಕ್ಕಂತೆ ಕೆಲಸ ನಿರ್ವಹಿಸಬೇಕು. ಈಗಾಗಲೇ ಬ್ಯಾಂಕ್‌ನ ಸಿಬ್ಬಂದಿ ಉತ್ತಮ ಸೇವೆ ನೀಡುತ್ತಿದ್ದಾರೆ ಎಂಬ ವರದಿಗಳಿವೆ.  ಈ ಪ್ರಕ್ರಿಯೆ ಇನ್ನಷ್ಟು ಪರಿಣಾಮಕಾರಿ ಆಗಬೇಕು~ ಎಂದರು.`ನೌಕರರ ಬೇಡಿಕೆಗಳನ್ನು ಒಮ್ಮೆಲೆ ಈಡೇರಿಸಲು ಸಾಧ್ಯವಿಲ್ಲ. ಆದರೆ ಸಂಸ್ಥೆಯ ಮಿತಿಯಲ್ಲಿ ಹಂತ- ಹಂತವಾಗಿ ಬೇಡಿಕೆಗಳ ಈಡೇರಿಕೆಗೆ ಕ್ರಮ ಕೈಗೊಳ್ಳಲಾಗುವುದು~ ಎಂದು ಭರವಸೆ ನೀಡಿದರು.ವಿಧಾನಪರಿಷತ್ ಸದಸ್ಯ ಡಿ.ಎಸ್.ವೀರಯ್ಯ ಮಾತನಾಡಿ, `ಅಂಬೇಡ್ಕರ್ ಸಂವಿಧಾನದಲ್ಲಿ ಒಬ್ಬರಿಗೆ ಒಂದೇ ವೋಟು ಎಂಬ ಸಮಾನತೆಯ ತತ್ವಅಳವಡಿಸುವ ಮೂಲಕ ಬಂಡವಾಳವಾರು- ಕೆಲಸಗಾರರು, ಬಡವ-ಶ್ರೀಮಂತ ಎಂಬ ಭೇದವಿಲ್ಲದೇ ಎಲ್ಲರೂ ಚುನಾವಣೆಯಲ್ಲಿ ಭಾಗವಹಿಸುವ ವ್ಯವಸ್ಥೆ ಮಾಡಿದರು. ಆ ಹಿನ್ನೆಲೆಯಲ್ಲಿಯೇ ಹಲವಾರು ದಲಿತ ಜನಾಂಗದ ನಾಯಕರು ಇಂದು ರಾಜಕೀಯ ಪ್ರವೇಶಿಸಿದ್ದಾರೆ~ ಎಂದರು.ರಾಷ್ಟ್ರೀಯ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಆಯೋಗದ ಉಪಾಧ್ಯಕ್ಷ ರಾಜು ಪರಮಾರ್, ಅಖಿಲ ಭಾರತ ಎಸ್‌ಸಿ/ಎಸ್‌ಟಿ ಸಂಘಟನೆಗಳ ಒಕ್ಕೂಟ ಅಧ್ಯಕ್ಷ ಬಿ.ಎಸ್.ಭಾರ್ತಿ, ಪ್ರಧಾನ ಕಾರ್ಯದರ್ಶಿ ಕೆ.ಪಿ.ಚೌಧರಿ ಇತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.