ಸೋಮವಾರ, ಜೂನ್ 21, 2021
29 °C

ಅಂಬೇಡ್ಕರ್ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ 5 ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ಉತ್ತರ ಹಾಗೂ ದಕ್ಷಿಣ ಭಾಗದಲ್ಲಿ ಅಂಬೇಡ್ಕರ್ ಹೆಸರಿನಲ್ಲಿ ಎರಡು ಸಾಂಸ್ಕೃತಿಕ ಭವನಗಳ ಸ್ಥಾಪನೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ರೂ. 5 ಕೋಟಿ; ಸರ್ಕಾರಿ ವಸತಿನಿಲಯ ಹಾಗೂ ಸರ್ಕಾರಿ ವಸತಿ ಶಾಲೆಗಳಲ್ಲಿನ ವಾಚನಾಲಯಗಳಿಗೆ ಕನಿಷ್ಠ ಒಂದು ಸಾವಿರ ಪುಸ್ತಕಗಳನ್ನು ಒದಗಿಸಲು ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ 2 ಕೋಟಿ ಸೇರಿದಂತೆ ಒಟ್ಟು 7 ಕೋಟಿ ರೂಪಾಯಿಗಳನ್ನು ಶೀಘ್ರ ಬಿಡುಗಡೆ ಮಾಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಎಂ. ಕಾರಜೋಳ ಶುಕ್ರವಾರ ಇಲ್ಲಿ ಭರವಸೆ ನೀಡಿದರು.ಕನ್ನಡ ಪುಸ್ತಕ ಪ್ರಾಧಿಕಾರವು ಕನ್ನಡ ಭವನದ ನಯನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ 2011ನೇ ಸಾಲಿನ ಅತ್ಯುತ್ತಮ ಪ್ರಕಾಶನ, ಡಾ.ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ, ಡಾ. ಅನುಪಮಾ ನಿರಂಜನ ವೈದ್ಯ ವಿಜ್ಞಾನ ಸಾಹಿತ್ಯ ಪ್ರಶಸ್ತಿ ಹಾಗೂ ಕನ್ನಡ ಪುಸ್ತಕ ಸೊಗಸು ಬಹುಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕನ್ನಡ ಪುಸ್ತಕ ಪ್ರಾಧಿಕಾರವು ತನ್ನ ಚಟುವಟಿಕೆಗಳನ್ನು ಮುಂದುವರಿಸಲು ಐದು ಕೋಟಿ ರೂಪಾಯಿಗಳ ಅವಶ್ಯಕತೆಯಿದೆ ಎಂದು ಸರ್ಕಾರದ ಮುಂದೆ ಬೇಡಿಕೆ ಮುಂದಿಟ್ಟಿದೆ. ಇನ್ನೆರಡು ಮೂರು ದಿನಗಳಲ್ಲಿಯೇ ಎರಡು ಕೋಟಿ ರೂಪಾಯಿಗಳನ್ನು ಪ್ರಾಧಿಕಾರಕ್ಕೆ ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದರು.ಪುಸ್ತಕಗಳ ಸಗಟು ಖರೀದಿಗೆ ಈ ಹಿಂದೆ ಪ್ರಾಧಿಕಾರಕ್ಕೆ ನೀಡುತ್ತಿದ್ದ 25ರಿಂದ 30 ಲಕ್ಷ ರೂಪಾಯಿಗಳ ಮೊತ್ತವನ್ನು ಇದೀಗ ಒಂದು ಕೋಟಿ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಅಂತೆಯೇ, ಹಿರಿಯ ಲೇಖಕರ ಕೃತಿಗಳನ್ನು ಬ್ರೈಲ್ ಲಿಪಿಗೆ ತಂದು ಸರ್ಕಾರಿ ಗ್ರಂಥಾಲಯ ಹಾಗೂ ಅಂಧರ ಶಾಲೆಗಳಿಗೆ ಪೂರೈಸುವ ಮೂಲಕ ಅಂಧರಲ್ಲಿಯೂ ಓದುವ ಹವ್ಯಾಸ ಬೆಳೆಸಲು ಪ್ರಯತ್ನಿಸಲಾಗುತ್ತಿದೆ ಎಂದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಸಿದ್ಧಲಿಂಗಯ್ಯ, ಕಳೆದ 11 ವರ್ಷಗಳಿಂದ ಮುದ್ರಣಾಲಯದಲ್ಲಿ ಬಿದ್ದಿದ್ದ ವಚನ ಸಾಹಿತ್ಯ ಸಂಪುಟಗಳನ್ನು ಇನ್ನು 10ರಿಂದ 15 ದಿನಗಳಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ ಎಂದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಬಸವರಾಜು ಹಾಗೂ ಇಲಾಖೆಯ ಆಯುಕ್ತ ಡಾ. ಮನು ಬಳಿಗಾರ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಮೈಸೂರಿನ ಗೀತಾ ಬುಕ್ ಹೌಸ್‌ಗೆ ಅತ್ಯುತ್ತಮ ಪ್ರಕಾಶನ ಪ್ರಶಸ್ತಿ, ಡಾ.ಜಿ. ಕೃಷ್ಣಪ್ಪ ಅವರಿಗೆ ಡಾ.ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ, ಡಾ. ಲೀಲಾವತಿ ದೇವದಾಸ್ ಅವರಿಗೆ ಡಾ. ಅನುಪಮಾ ನಿರಂಜನ ವೈದ್ಯ ವಿಜ್ಞಾನ ಸಾಹಿತ್ಯ ಪ್ರಶಸ್ತಿ ನೀಡಿ ಗೌರವಿಲಾಯಿತು. ಗೀತಾ ಬುಕ್ ಹೌಸ್‌ನ ಪರವಾಗಿ ಗುರುರಾಜರಾವ್ ಪ್ರಶಸ್ತಿ ಸ್ವೀಕರಿಸಿದರು.ಇದಲ್ಲದೆ, ಅತ್ಯುತ್ತಮವಾಗಿ ಪುಸ್ತಕಗಳನ್ನು ಮುದ್ರಿಸಿದ ಆರು ಪುಸ್ತಕ ಪ್ರಕಾಶನಗಳಿಗೆ ಕನ್ನಡ ಪುಸ್ತಕ ಸೊಗಸು ಬಹುಮಾನ ನೀಡಲಾಯಿತು. ಬೆಂಗಳೂರಿನ ಜೂಮ್ ಪಬ್ಲಿಕೇಷನ್‌ನ ಕೆ. ಪ್ರವೀಣ್ ನಾಯಕ್‌ಗೆ (ಪುಸ್ತಕ: ರಾಜ್‌ಕುಮಾರ್: ಒಂದು ಬೆಳಕು) ಪ್ರಥಮ ಬಹುಮಾನ, ಅಭಿನವ ಪ್ರಕಾಶನದ ರವಿಕುಮಾರ್‌ಗೆ (ಬೆಳಕು ನೆರಳು) ದ್ವಿತೀಯ ಬಹುಮಾನ, ಪ್ರಗತಿ ಗ್ರಾಫಿಕ್ಸ್‌ನ ಎಂ. ಬೈರೇಗೌಡ ಅವರಿಗೆ (ಕ್ಲಿಕ್ (ಅ)ಸ್ಥಿರ ಚಿತ್ರಗಳು) ತೃತೀಯ ಬಹುಮಾನ ನೀಡಿ ಗೌರವಿಸಲಾಯಿತು.ಅಲ್ಲದೆ, ಅವಿರತ ಪುಸ್ತಕ ಪ್ರಕಾಶನದ ವಿ. ಹರೀಶ್‌ಕುಮಾರ್‌ಗೆ ನಾಲ್ಕನೇ (ಹುಟ್ಟಿದ ರೇಖೆ ಕಟ್ಟಿದ ಹಾಡು), ರಂಗಚೇತನ ಟ್ರಸ್ಟ್‌ನ ನಂಜುಂಡಸ್ವಾಮಿಗೆ (ಮೂಜಿ ಮುಟ್ಟು ಮೂಜಿ ಲೋಕ) ಐದನೆಯ ಬಹುಮಾನ ಹಾಗೂ ಕೋಲಾರ ಜಿಲ್ಲೆಯ ಅನನ್ಯ ಪ್ರಕಾಶನದ ಅಮರಾವತಮ್ಮ (ಪದ್ಯ ಹೇಳುವ ಮರ) ಅವರಿಗೆ ಮಕ್ಕಳ ಪುಸ್ತಕ ಬಹುಮಾನ ನೀಡಿ ಗೌರವಿಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.