ಭಾನುವಾರ, ಜನವರಿ 19, 2020
29 °C

ಅಕ್ಕಿ ಗಿರಣಿಗಳ ತ್ಯಾಜ್ಯಕ್ಕೆ ತೊಟ್ಟಿಯಾದ ಉಪ್ಪಕೆರೆ

ಪ್ರಜಾವಾಣಿ ವಾರ್ತೆ/ ವಿಶೇಷ ವರದಿ/ ಕಾಂತರಾಜ್ Updated:

ಅಕ್ಷರ ಗಾತ್ರ : | |

ಬಂಗಾರಪೇಟೆ: ತಾಲ್ಲೂಕಿನ ಕೀಲುಕೊಪ್ಪ ಉಪ್ಪಕೆರೆ ಒಡಲಿಗೆ ನಿತ್ಯ ವಿಷಬೂದಿ ಭರ್ತಿಯಾಗುತ್ತಿದೆ. ಪಟ್ಟಣದ ಅಕ್ಕಿ ಗಿರಣಿ­ಗಳಿಂದ ಹೊರಬೀಳುವ ತ್ಯಾಜ್ಯ­ವನ್ನು  ಕೆರೆಗೆ ಸುರಿಯಲಾಗುತ್ತಿದೆ. ಕಳೆದ ಒಂದು ವರ್ಷದಿಂದ ಬೂದಿ ತುಂಬು­ತ್ತಿದ್ದು, ಕೆರೆ ಒಡಲಿನ ಬಹುತೇಕ ಸ್ಥಳ­ದಲ್ಲಿ ಬೂದಿ ರಾಶಿಗಳು ಹರಡಿವೆ.ಕೇವಲ ಒಂದು ಗಿರಣಿಯಿಂದ ದಿನಕ್ಕೆ ಸುಮಾರು 30 ಟ್ರ್ಯಾಕ್ಟರ್‌ ಬೂದಿ ಕೆರೆ­ಯಂಗಳದಲ್ಲಿ ಸುರಿಯಲಾಗುತ್ತಿದೆ. ಪಟ್ಟಣದಲ್ಲಿ 10ಕ್ಕೂ ಹೆಚ್ಚು ಅಕ್ಕಿ ಗಿರಣಿಗಳು ಕಾರ್ಯ ನಿರ್ವಹಿಸುತ್ತಿದ್ದು, ಬಹುತೇಕ ಗಿರಣಿಗಳ ತ್ಯಾಜ್ಯವನ್ನು ಇಲ್ಲಿಯೇ ಎಸೆಯಲಾಗುತ್ತಿದೆ.ಪಟ್ಟಣದಿಂದ ಕಾಮಸಮುದ್ರ, ಕೃಷ್ಣಗಿರಿಯತ್ತ ಸಾಗುವ ಮುಖ್ಯರಸ್ತೆ ಕೆರೆ ಅಂಚಿನಲ್ಲಿ ಸಾಗಿದೆ. ರಸ್ತೆ ಪಕ್ಕ ಕೆರೆ­ಯಂಗಳದಲ್ಲೆ ಸುರಿದಿರುವ ಬೂದಿ ರಾಶಿ­ಗಳಿಂದ ವಾಹನ ಸವಾರರಿಗೂ ತೊಂದರೆ­ಯಾಗಿದೆ. ಗಾಳಿ ಜೋರಾಗಿ ಬೀಸಿದಾಗ ರಸ್ತೆಯಲ್ಲಿ ಚಲಿಸುವರ ಕಣ್ಣುಗಳಿಗೆ ಬೂದಿ ನಾಟಿ ಉರಿ ಉಂಟು ಮಾಡು­ತ್ತಿದೆ. ಆಟೊದಲ್ಲಿ ಸಂಚರಿಸುವ ಶಾಲಾ ಮಕ್ಕಳಿಗೂ ಇದರಿಂದ ಕಿರಿಕಿರಿಯಾಗಿದೆ, ಅಪಘಾತಗಳಿಗೂ ಎಡೆ ಮಾಡಿದೆ.ಗಾಳಿಗೆ ಹಾರುತ್ತಿರುವ ಬೂದಿ ಕಣ್ಣಿಗೆ ತಾಗಿ ನೋವುಂಟುಮಾಡುತ್ತಿದೆ. ಕೆರೆ­ಯುದ್ದಕೂ ಇರುವ ರಸ್ತೆ ದಾಟುವುದು ಗಂಡಾಂತರ ಎನಿಸಿದೆ. ಇದಕ್ಕೆ ಮೋಕ್ಷ ಇಲ್ಲವೆ? ಎಂಬುದು ನಿತ್ಯ ದ್ವಿಚಕ್ರ ವಾಹನ­ದಲ್ಲಿ ಸಂಚರಿಸುವ ಕರಿಮಾನಹಳ್ಳಿ ರಮೇಶ್‌ ಅವರ ಪ್ರಶ್ನೆ.ಕೆರೆ ಅಭಿವೃದ್ಧಿಗೆ ಹಣ: ಸಮಗ್ರ ಕೆರೆ ಅಭಿವೃದ್ಧಿ ಯೋಜನೆಯಡಿ ಸರ್ಕಾರದ ಸಣ್ಣ ನೀರಾವರಿ ಇಲಾಖೆಯಿಂದ 2010ರಲ್ಲಿ ಕೆರೆ ಅಭಿವೃದ್ಧಿಗೆ ಸುಮಾರು ₨ 27.5 ಲಕ್ಷ ಮಂಜೂರಾಗಿದೆ. ಅಲ್ಲದೆ ಸಿವಿಲ್‌ ಕಾಮಗಾರಿಗಳ ಹೆಸರಲ್ಲಿ ₨ 24 ಲಕ್ಷ ಬಿಡುಗಡೆಗೊಂಡಿದೆ. ಕೆರೆ ಸಂರಕ್ಷಣೆ­ಗಾಗಿಯೇ ಮಾರಮ್ಮ ಕೆರೆ ಬಳಕೆದಾರರ ಸಂಘ, ಜಲ ಸಂವರ್ಧನ ಯೋಜನಾ ಸಂಘ ಅಸ್ತಿತ್ವದಲ್ಲಿದೆ ಎಂಬುದನ್ನು ಕೆರೆ­ಯಂಗಳದಲ್ಲಿ ಅಳವಡಿಸಿರುವ ನಾಮ ಫಲಕದಲ್ಲಿ ಬರೆಯಲಾಗಿದೆ. ಕೆರೆ­ಯಂಗಳದಲ್ಲಿ ಕಲ್ಲು ಕೂಚಗಳನ್ನು ನೆಟ್ಟಿದ್ದು, ಕೆರೆ ಒತ್ತುವರಿಯಾಗಿದೆ ಎನ್ನು­ವುದು ತಟ್ಟನಹಳ್ಳಿ ಗ್ರಾಮಸ್ಥರ ದೂರು.ಬೂದಿ ಸುರಿಯದಂತೆ ಟ್ರ್ಯಾಕ್ಟರ್‌ ಚಾಲಕರಿಗೆ ತಿಂಗಳ ಹಿಂದೆಯೇ ತಿಳಿಸ­ಲಾಗಿದೆ. ಆದರೂ ಪ್ರಯೋಜನವಾಗಿಲ್ಲ ಎಂಬುದು ಬೆಂಗನೂರು ಪಂಚಾಯಿತಿ ವ್ಯಾಪ್ತಿಯ ಕೀಲುಕುಪ್ಪ ಗ್ರಾಮದ ಸದಸ್ಯ ಎಲ್ಲಪ್ಪ ಅವರ ನುಡಿ.ಕಳೆದ ಆರೇಳು ವರ್ಷಗಳಿಂದ ಮಳೆ ಇಲ್ಲದ ಕಾರಣ ಕೆರೆಯಲ್ಲಿ ನೀರಿಲ್ಲ. ಮುಳ್ಳು ಗಿಡಗಳು ಬೆಳೆದಿವೆ. ಮತ್ತೊಂದೆಡೆ ಉದ್ಯೋಗ ಖಾತ್ರಿ ಯೋಜನೆಯಡಿ ತೆಗೆದಿರುವ ಹಳ್ಳಗಳಲ್ಲಿ ಬೂದಿ ತುಂಬಿಸಲಾಗುತ್ತಿದ್ದು, ಕೆರೆ ಅವನತಿಯತ್ತ ಸಾಗಿದೆ. ತಾಲ್ಲೂಕಿನ ತಟ್ಟನಹಳ್ಳಿ, ಹೊಸಕೋಟೆ, ಕೀಲುಕುಪ್ಪ ಗ್ರಾಮಗಳ ಮಧ್ಯೆ ಇರುವ ಈ ಕೆರೆ ತುಂಬಿದರೆ ಕೀಲುಕುಪ್ಪ ಗ್ರಾಮಕ್ಕೆ ಹೆಚ್ಚು ಪ್ರಯೋಜನ. ಆದರೆ ಬೂದಿಮಯ ಆಗುತ್ತಿರುವ ಕೆರೆಯನ್ನು ತಡೆಗಟ್ಟುವಲ್ಲಿ ಯಾವುದೇ ದಿಟ್ಟ ಕ್ರಮ ಕೈಗೊಳ್ಳದಿ­ರುವುದು ವಿಪರ್ಯಾಸ. ಕೆರೆಯಲ್ಲಿ ಬೂದಿ ಸುರಿಯುವ ಪ್ರಕ್ರಿಯೆ ಮುಂದು­ವರೆದರೆ ಮಳೆ ಬಂದು ಕೆರೆ ತುಂಬಿದರೂ ನೀರು ವಿಷ ಆಗಬಹುದು ಎಂಬ ಆತಂಕ ಗ್ರಾಮಸ್ಥರಲ್ಲಿ ಮೂಡಿದೆ.ಬೂದಿ ಸುರಿಯುವುದನ್ನು ನಿಷೇಧಿಸಿ, ಕೆರೆ ಅಚ್ಚುಕಟ್ಟು ಪ್ರದೇಶವನ್ನು  ಸಂರ­ಕ್ಷಿಸುವ ಕೆಲಸಕ್ಕೆ ಗ್ರಾಮ ಪಂಚಾಯಿತಿ, ತಾಲ್ಲೂಕು ಆಡಳಿತ ಮುಂದಾಗಬೇಕು ಎಂಬುದು ಕೆರೆ ಸಮೀಪದ ಗ್ರಾಮಸ್ಥರ ಆಗ್ರಹ.ಕೆರೆ ಸುಮಾರು 30 ಎಕರೆ ವಿಸ್ತೀರ್ಣ ಹೊಂದಿದೆ. ಪಂಚಾಯಿತಿ ಸದಸ್ಯರ ಸಹ­ಮತ ಪಡೆದು ಕೆರೆ ಒತ್ತುವರಿ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರ­ಲಾಗು­ವುದು ಎಂದು ಬೆಂಗನೂರು ಪಂಚಾ­ಯಿತಿ ಅಭಿವೃದ್ಧಿ ಅಧಿಕಾರಿ ವೆಂಕಟೇಶ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

 

ಪ್ರತಿಕ್ರಿಯಿಸಿ (+)