ಗುರುವಾರ , ಮೇ 6, 2021
21 °C

ಅಕ್ರಮವಾಗಿ ಸರ್ಕಾರಿ ದಾಖಲೆ ಗಳಿಕೆ: ರಿಲಯನ್ಸ್ ವಿರುದ್ಧ ಕ್ರಿಮಿನಲ್ ಖಟ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಸಂಪುಟ ಸಭೆಗಳ ಕುರಿತ ರಹಸ್ಯ ದಾಖಲೆಗಳನ್ನು ಅಕ್ರಮವಾಗಿ ಪಡೆಯುತ್ತಿದ್ದುದಕ್ಕಾಗಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ ಐ ಎಲ್) ಮತ್ತು ಅದರ ಮೂವರು ಹಿರಿಯ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಖಟ್ಲೆ ಹೂಡಲು ದೆಹಲಿ ನ್ಯಾಯಾಲಯವೊಂದು ಸೋಮವಾರ ಒಪ್ಪಿಗೆ ನೀಡಿದೆ.ರಿಲಯನ್ಸ್ ಇಂಡಸ್ಟೀಸ್ ಲಿಮಿಟೆಡ್ ಮುಖೇಶ್ ಅಂಬಾನಿ ಮತ್ತು ಅನಿಲ್ ಅಂಬಾನಿ ಅವರ ಮಧ್ಯೆ ವಿಭಜನೆ ಆಗುವುದಕ್ಕಿಂತ ಮೊದಲು, 1998ರಲ್ಲಿ ಎಫ್ಐಆರ್ ಸಲ್ಲಿಕೆಯಾಗಿದ್ದು, 14 ವರ್ಷಗಳ ಬಳಿಕ ನ್ಯಾಯಾಲಯ ಸಂಬಂಧ ಆದೇಶ ಹೊರಡಿಸಿದೆ.ಆರ್ ಐ ಎಲ್, ಅದರ ಸಮೂಹ ಅಧ್ಯಕ್ಷ ವಿ. ಬಾಲಸುಬ್ರಮಣಿಯನ್, ಉಪಾಧ್ಯಕ್ಷ ಎ.ಎನ್. ಸೇತುರಾಮನ್ ಮತ್ತು ಜನರಲ್ ಮ್ಯಾನೇಜರ್ (ಕಾರ್ಪೊರೇಟ್ ವ್ಯವಹಾರಗಳು) ಶಂಕರ ಅದವಾಲ್ ಅವರ ವಿರುದ್ಧ ಅಧಿಕೃತ ರಹಸ್ಯ ಕಾಯ್ದೆಯ ಅಡಿಯಲ್ಲಿ ಮೇಲ್ನೋಟಕ್ಕೆ ಅಪರಾಧ ಪ್ರಕರಣ ಕಂಡುಬರುತ್ತದೆ ಎಂದು ಅಡಿಷನಲ್ ಸೆಷನ್ಸ್ ನ್ಯಾಯಾಧೀಶ ನರೀಂದರ್ ಕುಮಾರ್ ಹೇಳಿದರು.ಅಧಿಕೃತ ರಹಸ್ಯ ಕಾಯ್ದೆಯ ಅಡಿಯಲ್ಲಿ ನಾಲ್ಕನೇ ಆರೋಪಿ (ಆರ್ ಐ ಎಲ್) ದೋಷಪೂರಿತ ಸಂಪರ್ಕಹೊಂದಿದ್ದುದು ಮೇಲ್ನೋಟಕ್ಕೇ ಸಾಬೀತಾಗಿದ್ದು, ಇದು ಕಾಯ್ದೆಯ ಪ್ರಕಾರ ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ನ್ಯಾಯಾಧೀಶರು ನುಡಿದರು.ಮಾಹಿತಿ ಪಡೆಯುವ ಹಾಗೂ ರವಾನಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಬಾಲಸುಬ್ರಮಣಿಯನ್, ಸೇತುರಾಮನ್ ಮತ್ತು ಅದವಾಲ್ ಅವರ ಮಧ್ಯೆ ಒಪ್ಪಂದ ಹಾಗೂ ಕ್ರಿಮಿನಲ್ ಒಳಸಂಚು ಇದ್ದುದಕ್ಕೆ ಮೇಲ್ನೋಟಕ್ಕೇ ದಾಖಲೆಗಳಿವೆ ಎಂದೂ ಅವರು ಹೇಳಿದರು.ಏನಿದ್ದರೂ ಅಂಬಾನಿ ಸಹೋದರರ ಹೆಸರುಗಳು ಆರೋಪಿಗಳೆಂದು ಪ್ರಕರಣದಲ್ಲಿ ದಾಖಲಾಗಿಲ್ಲ. ಅಥವಾ ಅವರ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳೂ ಲಭಿಸಿಲ್ಲ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.