ಬುಧವಾರ, ಜನವರಿ 29, 2020
28 °C

ಅಕ್ರಮ ಗಣಿಗಾರಿಕೆ ತಡೆಗೆ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  `ಬನ್ನೇರುಘಟ್ಟ, ಕೊಳ್ಳೇಗಾಲ ಹಾಗೂ ಚಾಮರಾಜನಗರದ ಅರಣ್ಯ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು ಅದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲಾಗುತ್ತದೆ~ ಎಂದು ಅರಣ್ಯ ಸಚಿವ ಸಿ.ಪಿ. ಯೋಗೇಶ್ವರ್ ಇಲ್ಲಿ ಹೇಳಿದರು.ಅರಣ್ಯ ಇಲಾಖೆ ಮತ್ತು ಮೃಗಾಲಯ ಪ್ರಾಧಿಕಾರ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನದ ನೂತನ ಪ್ರವೇಶ ದ್ವಾರ ಉದ್ಘಾಟಿಸಿ ಅವರು ಮಾತನಾಡಿದರು.ಆನೆ, ಚಿರತೆಗಳ ಹಾವಳಿಯಿಂದ ಜನರಿಗೆ ತೊಂದರೆ ಆಗುತ್ತಿದೆಯಲ್ಲ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ಅರಣ್ಯ ಮತ್ತು ಅರಣ್ಯಕ್ಕೆ ಹೊಂದಿಕೊಂಡ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಪ್ರಾಣಿಗಳು ನಗರಗಳ ಕಡೆ ನುಗ್ಗಲು ಇದೂ ಒಂದು ಕಾರಣ. ಮಾನವ ಮತ್ತು ಪ್ರಾಣಿಗಳ ಮಧ್ಯೆ ಏರ್ಪಟ್ಟಿರುವ ಸಂಘರ್ಷ ನಿವಾರಣೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧವೂ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ. ಅರಣ್ಯಕ್ಕೆ ಬೇಲಿ ಸಹ ಹಾಕಲಾಗುತ್ತದೆ ಎಂದರು.ಬನ್ನೇರುಘಟ್ಟ ಜೈವಿಕ ಉದ್ಯಾನವನ್ನು ಐವತ್ತು ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಉರಗ, ಪಕ್ಷಿ ಮತ್ತು ವಾನರ ಧಾಮ ನಿರ್ಮಿಸಲಾಗುವುದು. ಹುಲಿ, ಸಿಂಹಧಾಮದ ವಿಸ್ತೀರ್ಣವನ್ನು ವಿಸ್ತರಿಸಲಾಗುತ್ತದೆ. ಪ್ರವಾಸಿಗರಿಗೆ ಸಹ ಉತ್ತಮ ಸೌಕರ್ಯ ನೀಡಲು ಒತ್ತು ನೀಡಲಾಗುತ್ತದೆ. ಒಟ್ಟಾರೆ ಉದ್ಯಾನವನವನ್ನು ಅಂತರರಾಷ್ಟ್ರೀಯ ಉದ್ಯಾನವನದ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಚಿಂತನೆ ಇದೆ ಎಂದು ಅವರು ತಿಳಿಸಿದರು.ಒಂಟಿಯಾಗಿರುವ ಪ್ರಾಣಿಗಳಿಗೆ ಸಂಗಾತಿ ಒದಗಿಸುವ ಯತ್ನ ನಡೆದಿದೆ. ಇನ್ನಷ್ಟು ಪ್ರಾಣಿಗಳನ್ನು ತರಲಾಗುತ್ತದೆ. ಪ್ರಾಣಿಗಳ ಪುನರ್ವಸತಿ ಕೇಂದ್ರವನ್ನೂ ನಿರ್ಮಿಸಲಾಗುತ್ತದೆ. ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ನಗರದಿಂದ ನಾಲ್ಕು ಪಥ ರಸ್ತೆ ನಿರ್ಮಾಣ ಮಾಡಿ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಲಾಗುತ್ತದೆ ಎಂದು ಅವರು ಭರವಸೆ ನೀಡಿದರು.ಅರಣ್ಯಕ್ಕಾಗಿ ಜಮೀನು ಖರೀದಿ: ಇದಕ್ಕೂ ಮೊದಲು ವೇದಿಕೆಯಲ್ಲಿ ಮಾತನಾಡಿದ ಯೋಗೇಶ್ವರ್, `ಅರಣ್ಯ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಖಾಸಗಿ ಜಮೀನು ಖರೀದಿಸಿ ಅರಣ್ಯ ಅಭಿವೃದ್ಧಿಪಡಿಸುವ ಕೆಲಸಗಳೂ ಚಾಲನೆಯಲ್ಲಿವೆ. ಹಾಸನದ ಸಮೀಪ 23 ಹೆಕ್ಟೇರ್ ಜಮೀನು ಖರೀದಿಸಿ ಅರಣ್ಯಕ್ಕೆ ಸೇರಿಸಿಕೊಳ್ಳಲಾಗುತ್ತದೆ. ನೌಕರರಿಗೆ ಅಗತ್ಯ ಮೂಲ ಸೌಕರ್ಯಕ್ಕಾಗಿ ಒದಗಿಸಲು 350 ಕೋಟಿ ರೂಪಾಯಿ ಯೋಜನೆ ರೂಪಿಸಲಾಗಿದೆ. ಆನೆಗಳ ದಾಳಿ ತಡೆಯುವ ಬಗ್ಗೆ ಅಧಿಕಾರಿಗಳ ಕಾರ್ಯಾಗಾರ ನಡೆಸಿ ಆ ನಂತರ ಏನು ಮಾಡಬೇಕು ಎಂದು ನಿರ್ಧರಿಸಲಾಗುತ್ತದೆ ಎಂದರು.`ಮೃಗಾಲಯಗಳ ಅಭಿವೃದ್ಧಿಗೆ ಇನ್ನೂರು ಕೋಟಿ ರೂಪಾಯಿ ವೆಚ್ಚದ ಸಮಗ್ರ ಯೋಜನೆ ರೂಪಿಸಲಾಗುತ್ತಿದೆ. ಇದಕ್ಕೆ ರಾಷ್ಟ್ರೀಯ ಮೃಗಾಲಯ ಪ್ರಾಧಿಕಾರದ ಅನುಮತಿ ಪಡೆಯಲಾಗುತ್ತದೆ~ ಎಂದು ಕರ್ನಾಟಕ ಮೃಗಾಲಯದ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎನ್. ಜಯಕುಮಾರ್ ಹೇಳಿದರು.ನೌಕರರ ಹಿತರಕ್ಷಣೆಗೆ ಕ್ರಮ: ರಾಜ್ಯದಲ್ಲಿರುವ ಎಂಟು ಮೃಗಾಲಯಗಳಲ್ಲಿ 453 ಮಂದಿ ಅರೆಕಾಲಿಕ ನೌಕರರು ಕೆಲಸ ಮಾಡುತ್ತಿದ್ದಾರೆ. ಅವರನ್ನು ನೇಮಕ ಮಾಡುವ ಉದ್ದೇಶದಿಂದ ವೃಂದ ಮತ್ತು ನೇಮಕಾತಿ ನಿಯಮ ರೂಪಿಲಾಗಿದೆ. ಸರ್ಕಾರದ ಒಪ್ಪಿಗೆ ನಂತರ ನೇಮಕಾತಿ ನಡೆಯಲಿದೆ ಎಂದು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ. ನಂಜುಂಡಸ್ವಾಮಿ ಹೇಳಿದರು.

 

ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಎಂ. ಕೃಷ್ಣಪ್ಪ ಮಾತನಾಡಿ, `ಬನ್ನೇರುಘಟ್ಟ ಜೈವಿಕ ಉದ್ಯಾನವನದ ಎದುರು ಅಂಗಡಿ ಇಟ್ಟುಕೊಂಡಿರುವವರಿಗೆ ಮಳಿಗೆ ನಿರ್ಮಿಸಿಕೊಡಲು ಶಾಸಕರ ನಿಧಿನಿಂದ ಹತ್ತು ಲಕ್ಷ ಕೊಡುವುದಾಗಿ~ ಭರವಸೆ ನೀಡಿದರು.ಅರಣ್ಯ ಮತ್ತು ಜೀವಶಾಸ್ತ್ರ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಕೆ. ಸಿಂಗ್, ಹೆಚ್ಚುವರಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ಎಂ.ಎನ್. ಸ್ವಾಮಿನಾಥನ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

ಪ್ರತಿಕ್ರಿಯಿಸಿ (+)