ಗುರುವಾರ , ಮೇ 19, 2022
24 °C

ಅಕ್ರಮ ಪತ್ತೆಗೆ ಸಿಎಜಿ ಪ್ರತಿನಿಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗ್ರಾಮೀಣ ಪ್ರದೇಶದಲ್ಲಿನ ದುಡಿಯುವ ಕೈಗಳಿಗೆ ವರ್ಷದಲ್ಲಿ ನೂರು ದಿನವಾದರೂ ಉದ್ಯೋಗ ನೀಡಬೇಕೆನ್ನುವುದು ಕೇಂದ್ರ ಸರ್ಕಾರದ ಉದ್ದೇಶ. ಇದಕ್ಕಾಗಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಜಾರಿಯಲ್ಲಿದೆ. ಈ ಕಾರ್ಯಕ್ರಮ ಜಾರಿಯಲ್ಲಿ ಹಲವಾರು ಅಕ್ರಮಗಳು ನಡೆಯುತ್ತಿರುವುದು ಈಗ ರಹಸ್ಯವಾಗೇನೂ ಉಳಿದಿಲ್ಲ. ಈ ಯೋಜನೆಯಲ್ಲಿನ ಅಕ್ರಮ ದೇಶದಾದ್ಯಂತ ನಡೆಯುತ್ತಿರುವುದು ದುರದೃಷ್ಟಕರ. ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೇ ಕಾಮಗಾರಿಗಳು ಮತ್ತು ಫಲಾನುಭವಿಗಳ ಆಯ್ಕೆ ನಡೆಯುವುದರಿಂದ ಅಕ್ರಮಗಳು ನಡೆಯುವುದಿಲ್ಲ ಎಂದು ನಂಬಿದ್ದ ಕೇಂದ್ರ ಮತ್ತು ಸರ್ಕಾರಗಳಿಗೀಗ ಭ್ರಮನಿರಸನವಾಗಿದೆ.ಜಾಬ್ ಕಾರ್ಡ್ ದುರುಪಯೋಗ, ನಕಲಿ ಹೆಸರುಗಳ ಸೇರ್ಪಡೆ, ಕೆಲಸ ನಡೆಯದಿದ್ದರೂ, ಕೆಲಸ ನಡೆದಿರುವುದಾಗಿ ಬಿಲ್ ಮಾಡುವುದು ಹೀಗೆ ಹತ್ತುಹಲವು ರೂಪದಲ್ಲಿ ಅಕ್ರಮ ಮತ್ತು ಭ್ರಷ್ಟಾಚಾರ ವ್ಯಾಪಕವಾಗಿ ನಡೆಯುತ್ತಿದೆ. ಕರ್ನಾಟಕದಲ್ಲಿ 62 ಲಕ್ಷ ಜಾಬ್ ಕಾರ್ಡ್‌ಗಳಲ್ಲಿ 12 ಲಕ್ಷ ನಕಲಿ ಜಾಬ್ ಕಾರ್ಡ್‌ಗಳು ಪತ್ತೆಯಾಗಿವೆ. ಈ ಪ್ರಕರಣಗಳಲ್ಲಿ ಈಗಾಗಲೇ 337 ಮಂದಿ ಅಧಿಕಾರಿಗಳನ್ನು ಅಮಾನತ್ತು ಮಾಡಲಾಗಿದೆ. ವ್ಯಾಪಕವಾಗಿ ನಡೆಯುತ್ತಿರುವ ಈ ಭ್ರಷ್ಟಾಚಾರ ತಡೆಯಲು ಈಗಾಗಲೇ 15 ಜಿಲ್ಲೆಗಳಲ್ಲಿ ಒಂಬುಡ್ಸ್‌ಮನ್‌ಗಳನ್ನು ನೇಮಕ ಮಾಡಲಾಗಿದ್ದು, ಅಕ್ರಮಗಳನ್ನು ಸ್ವಲ್ಪಮಟ್ಟಿಗೆ ನಿಯಂತ್ರಿಸಲು ಸಾಧ್ಯವಾಗಿದೆ.ಈ ಉದ್ಯೋಗ ಖಾತರಿ ಯೋಜನೆಯಲ್ಲಿನ ಅಕ್ರಮ ಮತ್ತು ಭ್ರಷ್ಟಾಚಾರದಲ್ಲಿ ಜನಪ್ರತಿನಿಧಿಗಳು ಮತ್ತು ಸಂಬಂಧಿಸಿದ ಗ್ರಾಮಮಟ್ಟದ ಅಧಿಕಾರಿ ಹಾಗು ನೌಕರ ಸಿಬ್ಬಂದಿ ಕಾರಣ ಎನ್ನುವುದು ಎಲ್ಲರಿಗೂ ತಿಳಿದ ಸಂಗತಿ. ಹೀಗಾಗಿ ದುಡಿಮೆಯನ್ನೇ ನಂಬಿರುವ ಬಡವರು ಕೂಲಿ ಇಲ್ಲದೆ ಮತ್ತೆ ನರಳುವಂತಾಗಿದೆ. ಈ ಯೋಜನೆಯಲ್ಲಿ ಭ್ರಷ್ಟಾಚಾರ ತಡೆಗೆ ಕೇಂದ್ರ ಸರ್ಕಾರ ಆಗಿಂದಾಗ್ಗೆ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರುಗಳ ಸಮಾವೇಶ ನಡೆಸಿ ಹತ್ತಾರು ಸಲಹೆಗಳನ್ನು ನೀಡಿದರೂ ಪ್ರಯೋಜವಿಲ್ಲದಂತಾಗಿರುವುದು ವಿಪರ್ಯಾಸ. ಆದ್ದರಿಂದ ಪ್ರತಿಯೊಂದು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಹಾಲೇಖಪಾಲರ (ಸಿಎಜಿ) ಪ್ರತಿನಿಧಿಯೊಬ್ಬರನ್ನು ನೇಮಿಸಲು ಕೇಂದ್ರ ಸರ್ಕಾರ ನಿರ್ಧರಿಸಿರುವುದು ಸ್ವಾಗತಾರ್ಹ.ಪ್ರತಿಯೊಂದು ಗ್ರಾಮಪಂಚಾಯಿತಿಗಳಿಗೆ ಮಂಜೂರಾಗಿ ಬಂದ ಹಣ, ಕೈಗೆತ್ತಿಕೊಂಡಿರುವ ಕಾಮಗಾರಿ ಮತ್ತು ಜಾಬ್ ಕಾರ್ಡ್ ನೀಡಿಕೆಯಲ್ಲಿನ ಲೋಪಗಳನ್ನು ಕಂಡುಹಿಡಿಯುವುದು ಸೇರಿದಂತೆ ಈ ಯೋಜನೆಯ ಜಾರಿಯಲ್ಲಾಗುತ್ತಿರುವ ಅಕ್ರಮಗಳ ಮೇಲೆ ಈ ಸಿಎಜಿ ಪ್ರತಿನಿಧಿ ಕಣ್ಣಿಡಲಿದ್ದಾರೆ. ಈಗಾಗಲೇ ಹಲವು ಅಕ್ರಮ ಮತ್ತು ಭ್ರಷ್ಟಾಚಾರ ನಡೆದಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಅನೇಕ ಪ್ರಕರಣಗಳಲ್ಲಿ ತಪ್ಪಿತಸ್ಥರನ್ನು ಪತ್ತೆ ಹಚ್ಚಲಾಗಿದೆ. ಆದರೆ ಅವರಿಗೆ ಶಿಕ್ಷೆ ಆಗಿರುವ ಉದಾಹರಣೆಗಳು ಕಾಣುತ್ತಿಲ್ಲ. ಇಂತಹ ತಪ್ಪಿತಸ್ಥರ ವಿರುದ್ಧ ಇನ್ನಾದರೂ ಕಾನೂನು ಕ್ರಮ ಜರುಗಿಸಬೇಕು. ಭ್ರಷ್ಟಾಚಾರದಿಂದ ಕಬಳಿಸಿರುವ ಹಣವನ್ನು ವಾಪಸ್ ಪಡೆಯುವ ಕ್ರಮದಲ್ಲಿ ವಿಳಂಬ ಆಗಕೂಡದು. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಂಡಾಗ ಮಾತ್ರ ಭ್ರಷ್ಟಾಚಾರ ಮಾಡುವ ಮತ್ತು ಅದಕ್ಕೆ ಕುಮ್ಮಕ್ಕು ನೀಡುವ ಮಂದಿಗೆ ಭಯ ಬರಲಿದೆ. ಇಷ್ಟು ಪ್ರಮಾಣದಲ್ಲಾದರೂ ಕ್ರಮ ಕೈಗೊಂಡರೆ ಅಕ್ರಮಗಳನ್ನು ನಿಯಂತ್ರಿಸಲು ಸಾಧ್ಯ. ಇದಕ್ಕೆ ರಾಜ್ಯ ಸರ್ಕಾರ ತನ್ನ ಬದ್ಧತೆಯನ್ನು ಪ್ರದರ್ಶಿಸಬೇಕು.


 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.