ಮಂಗಳವಾರ, ಜನವರಿ 21, 2020
19 °C

ಅಕ್ರಮ ಮುಚ್ಚಿಕೊಳ್ಳಲು ಬಿಜೆಪಿ ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (ಬಿಬಿಎಂಪಿ) ದುರಾಡಳಿತ ಮೂಲಕ ನಿರಂತರವಾಗಿ ಸರ್ಕಾರದ ಬೊಕ್ಕಸವನ್ನು ಲೂಟಿ ಮಾಡುತ್ತಿರುವ ಬಿಜೆಪಿ ಮುಖಂಡರು, ಅಕ್ರಮಗಳನ್ನು ಮುಚ್ಚಿಕೊಳ್ಳಲು ನಗರದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ನೆರವು ನೀಡುತ್ತಿಲ್ಲ ಎಂಬುದಾಗಿ ದೂರುತ್ತಿದ್ದಾರೆ ಎಂದು ಮಾಜಿ ಮೇಯರ್‌ಗಳಾದ ಪಿ.ಆರ್. ರಮೇಶ್, ಎಂ.ರಾಮಚಂದ್ರಪ್ಪ ಮತ್ತು ಜೆ.ಹುಚ್ಚಪ್ಪ ಆರೋಪಿಸಿದರು.ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಬಿಬಿಎಂಪಿಯಲ್ಲಿ ಜನರ ತೆರಿಗೆ ಹಣ ಲೂಟಿಯಾಗುತ್ತಿದೆ. ಸಂಸದ ಅನಂತಕುಮಾರ್ ಅವರ ತಂಡ ಈ ಕೆಲಸದಲ್ಲಿ ಸಕ್ರಿಯವಾಗಿದೆ. ಆದರೆ, ಬೆಂಗಳೂರು ಅಭಿವೃದ್ಧಿಯ ಬಗ್ಗೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದ್ದೆ ಎಂದು ಆರೋಪಿಸಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ~ ಎಂದು ಅವರು ದೂರಿದರು.ಕೇಂದ್ರ ಸರ್ಕಾರ `ನರ್ಮ್~ ಯೋಜನೆ ಅಡಿಯಲ್ಲಿ ಎರಡು ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಅನುದಾನ ನೀಡಿದೆ. ಇನ್ನೂ ಏಳು ಸಾವಿರ ಕೋಟಿ ರೂಪಾಯಿ ಅನುದಾನ ಪಡೆಯಲು ಅವಕಾಶ ಇತ್ತು. ಆದರೆ, ಪಾಲಿಕೆಯಲ್ಲಿ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಆಡಳಿತದಲ್ಲಿ ನಿರ್ಲಕ್ಷ್ಯ ವಹಿಸಿದ ಕಾರಣ ಅದು ಸಾಧ್ಯವಾಗಿಲ್ಲ. ಹಿಂದಿನ ತಿಂಗಳು `ಓವರ್ ಡ್ರಾಫ್ಟ್~ ಪಡೆದು ವೇತನ ನೀಡಲಾಗಿದೆ. ಪಾಲಿಕೆ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಲು ಬಿಜೆಪಿ ಆಡಳಿತವೇ ಕಾರಣ ಎಂದು ರಮೇಶ್ ವಾಗ್ದಾಳಿ ನಡೆಸಿದರು.`ಬಿಬಿಎಂಪಿಯಲ್ಲಿ ನಡೆದಿರುವ ಹಗರಣಗಳು ನಿತ್ಯವೂ ಹೊರಬರುತ್ತಿವೆ. ಆದರೆ, ರಾಜ್ಯ ಸರ್ಕಾರ ಈ ವಿಷಯದಲ್ಲಿ ಮೌನ ವಹಿಸಿದೆ. ಬೆಂಗಳೂರಿನ ಅಭಿವೃದ್ಧಿಗಾಗಿ ಪ್ರತಿ ವರ್ಷವೂ ಬಜೆಟ್‌ನಲ್ಲಿ ಹೊಸ ಯೋಜನೆಗಳನ್ನು ಘೋಷಿಸಿದ ಈ ಸರ್ಕಾರ ಒಂದನ್ನೂ ಜಾರಿಗೊಳಿಸಿಲ್ಲ. ಗುತ್ತಿಗೆದಾರರು ಕಳಪೆ ಕಾಮಗಾರಿ ನಡೆಸಿ ಹಣ ಲೂಟಿ ಮಾಡುತ್ತಿದ್ದರೂ ಕರಾರಿನ ಪ್ರಕಾರ ಕ್ರಮ ಜರುಗಿಸದೇ ಮೌನ ವಹಿಸಲಾಗಿದೆ~ ಎಂದು ಟೀಕಿಸಿದರು.`ದಂಡುಪಾಳ್ಯ ಗ್ಯಾಂಗ್~

 ರಾಮಚಂದ್ರಪ್ಪ ಮಾತನಾಡಿ, `ನಗರವನ್ನು ಪ್ರತಿನಿಧಿಸುವ ಸಚಿವರು ಮತ್ತು ಪಾಲಿಕೆಯ ಆಡಳಿತದ ಚುಕ್ಕಾಣಿ ಹಿಡಿದವರು ನಿರಂತರವಾಗಿ ಲೂಟಿ ಮಾಡುತ್ತಿದ್ದಾರೆ. `ದಂಡುಪಾಳ್ಯ ಗ್ಯಾಂಗ್~ ರೀತಿ ಬಿಜೆಪಿ ನಾಯಕರು ಪಾಲಿಕೆ ಬೊಕ್ಕಸವನ್ನು ಲೂಟಿ ಮಾಡುತ್ತಿದ್ದಾರೆ. ಅನಂತಕುಮಾರ್ ಅವರೇ ಈ ತಂಡದ ನಾಯಕ~ ಎಂದು ವ್ಯಂಗ್ಯವಾಡಿದರು.

ಪ್ರತಿಕ್ರಿಯಿಸಿ (+)