ಶುಕ್ರವಾರ, ಮೇ 7, 2021
19 °C

ಅಕ್ಷಮ್ಯ ಕರ್ತವ್ಯಲೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಮಾನ್ಯ ಜನರ ಜೀವ ರಕ್ಷಣೆಯ ಪ್ರಾಥಮಿಕ ಕರ್ತವ್ಯದಲ್ಲಿ ಸಂಪೂರ್ಣ ವಿಫಲವಾಗುವ ಸರ್ಕಾರ ಅಧಿಕಾರದಲ್ಲಿ ಮುಂದುವರಿಯುವ ಅರ್ಹತೆ ಕಳೆದುಕೊಳ್ಳುತ್ತದೆ. ಬುಧವಾರ ಬೆಳಿಗ್ಗೆ ಬಿಗಿ ಭದ್ರತೆಯ ದೆಹಲಿ    ಹೈಕೋರ್ಟ್ ಆವರಣದಲ್ಲಿ ಸೂಟ್‌ಕೇಸ್‌ನಲ್ಲಿ ಅಡಗಿಸಿಟ್ಟ ಬಾಂಬ್ ಸ್ಫೋಟ ದಿಂದ ಹತ್ತು ಮಂದಿ ಪ್ರಾಣ ಕಳೆದುಕೊಂಡ ಘಟನೆ ಸರ್ಕಾರದ ಬಗ್ಗೆ ಜನ ವಿಶ್ವಾಸ ಇಟ್ಟುಕೊಳ್ಳದಂತೆ ಮಾಡಿದೆ. `ಇದು ಭಯೋತ್ಪಾದಕರ ಕೃತ್ಯ~ ಎಂದು ಕೇಂದ್ರ ಗೃಹಸಚಿವರು ಸಂಸತ್ತಿನಲ್ಲಿ ಔಪಚಾರಿಕ ಹೇಳಿಕೆ ನೀಡಿ ಸರ್ಕಾರದ ಅದಕ್ಷತೆಯನ್ನು ಬಹಿರಂಗಪಡಿಸಿಕೊಂಡಿದ್ದಾರೆ. ಭಯೋತ್ಪಾದಕ ಗುಂಪುಗಳು ದೆಹಲಿಯಲ್ಲಿ ದುಷ್ಕೃತ್ಯ ನಡೆಸುವ ಸಾಧ್ಯತೆಯನ್ನು ಬೇಹುಗಾರಿಕೆ ಸಂಸ್ಥೆಗಳು ದೆಹಲಿ ಪೊಲೀಸರಿಗೆ ತಿಳಿಸಿದ್ದರೂ ಇಂಥ ದಾಳಿ ನಡೆಸಲು ಸಾಧ್ಯ ವಾಗಿದೆ ಎಂದರೆ ಅದು, ಸರ್ಕಾರಕ್ಕೆ ಸಾಮಾನ್ಯ ಜನತೆಯ ರಕ್ಷಣೆಯ ಕುರಿ ತಾಗಿ ಕಿಂಚಿತ್ತೂ ಕಾಳಜಿ ಇಲ್ಲದಿರುವುದನ್ನಷ್ಟೆ ಬಿಂಬಿಸುತ್ತದೆ. ಇದು ಅಕ್ಷಮ್ಯ ವಾದ ಕರ್ತವ್ಯಲೋಪ. ಈಚಿನ ವರ್ಷಗಳಲ್ಲಿ ದೆಹಲಿಯಲ್ಲಿ ಆಗಾಗ ಭಯೋತ್ಪಾದಕರ ದಾಳಿಗಳು ನಡೆಯುತ್ತಿದ್ದರೂ ಸರ್ಕಾರ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದರಲ್ಲಿ ವಿಫಲವಾಗಿದೆ. ದೆಹಲಿ ಹೈಕೋರ್ಟ್ ಆವರಣದಲ್ಲಿ ಕಳೆದ ಮೇ ತಿಂಗಳಲ್ಲಿಯೇ ಭಯೋತ್ಪಾದಕ ಕೃತ್ಯ ನಡೆದಿದ್ದರೂ ಅಲ್ಲಿನ ಚಲನವನಗಳನ್ನು ದಾಖಲಿಸುವಂತಹ ಸಿಸಿಟಿವಿ ವ್ಯವಸ್ಥೆ ಕಲ್ಪಿಸುವುದಕ್ಕೂ ಕ್ರಮ ಕೈಗೊಂಡಿಲ್ಲ. ಇದರಿಂದ ಜನತೆಯ ತೆರಿಗೆ ಹಣದಿಂದ ಸಜ್ಜುಗೊಳಿಸಿರುವ ಪೊಲೀಸು ಮತ್ತು ಭದ್ರತಾ ಪಡೆಗಳು ಅಧಿಕಾರದಲ್ಲಿರುವ ರಾಜಕಾರಣಿಗಳು, ಉನ್ನತ ಅಧಿಕಾರಿಗಳು ಮತ್ತು ಅವರ ಕುಟುಂಬಗಳ ರಕ್ಷಣೆಗಷ್ಟೇ ಮೀಸ ಲಾಗಿವೆಯೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡುವಂತಾಗಿದೆ. ಭಯೋ ತ್ಪಾದಕ ಕೃತ್ಯಗಳಲ್ಲಿ ಸಿಕ್ಕಿ ಬಲಿಯಾದವರ ಕುಟುಂಬಕ್ಕೆ ಸಾಂತ್ವನ ಹೇಳಿ ಪರಿ ಹಾರ ನೀಡುವುದಷ್ಟೇ ನಾಗರಿಕ ಸರ್ಕಾರದ ಕೆಲಸವಾದರೆ ಅಂಥ ಆಡಳಿತದಿಂದ ದೇಶದ ಜನತೆಗೆ ಪ್ರಯೋಜನವಿಲ್ಲ.  

ಭಯೋತ್ಪಾದಕರ ವಿರುದ್ಧ ಉಗ್ರಕ್ರಮ ಕೈಗೊಳ್ಳುವುದಕ್ಕೆ ಕೂಡ ರಾಜಕೀಯ ಲಾಭದ ಲೆಕ್ಕ ಹಾಕುವಂಥ ನೀಚ ಪ್ರವೃತ್ತಿ ಅಧಿಕಾರಸ್ಥ ರಾಜಕಾರಣಿಗಳಲ್ಲಿದೆ. ಆದ್ದರಿಂದಲೇ ಸಂಸತ್ ಮೇಲೆ ದಾಳಿ ನಡೆಸಿದ ಭಯೋತ್ಪಾದಕ ಅಫ್ಜಲ್ ಗುರು ಜೈಲಿನಲ್ಲಿದ್ದರೂ ಶಿಕ್ಷೆಗೆ ಒಳಗಾಗಿಲ್ಲ. ಸರ್ಕಾರದ ಇಂಥ ದೌರ್ಬಲ್ಯದಿಂದ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯೊಂದು ಅಫ್ಜಲ್ ಗುರು ಬಿಡುಗಡೆಗಾಗಿ ದೆಹಲಿಯಲ್ಲಿ ಸ್ಫೋಟ ನಡೆಸಿರುವುದಾಗಿ ಹೇಳಿಕೊಳ್ಳುವ ದಾರ್ಷ್ಟ್ಯವನ್ನು ಪ್ರಕಟಿಸುವಂತಾಗಿದೆ. ಕಟ್ಟುನಿಟ್ಟಿನ ಕ್ರಮಗಳಿಲ್ಲದ ಕಾರಣ ದೇಶದಲ್ಲಿ ಎಲ್ಲಿ ಬೇಕಾದರೂ ದುಷ್ಕೃತ್ಯ ನಡೆಸುವುದು ಭಯೋತ್ಪಾದಕ ಸಂಘಟನೆಗಳಿಗೆ ಸಾಧ್ಯವಾಗುತ್ತಿದೆ. ಮುಂಬೈನಲ್ಲಿ ಎರಡು ತಿಂಗಳ ಹಿಂದೆ ನಡೆದ ಭಯೋತ್ಪಾದಕ ಕೃತ್ಯದ ಬಗ್ಗೆ ಈವರೆಗೂ ಯಾವ ಸುಳಿವೂ ಸರ್ಕಾರಕ್ಕೆ ಸಿಕ್ಕಿಲ್ಲ. ದೇಶದ ವಿಶೇಷ ತನಿಖಾ ಪಡೆಗಳು, ಬೇಹುಗಾರಿಕೆ ಸಂಸ್ಥೆಗಳ ಸಾಮರ್ಥ್ಯವನ್ನೇ ಜನತೆ ಸಂಶಯದಿಂದ ನೋಡುವಂತಾಗಿದೆ. `ಅಮಾಯಕರ ಸಾವಿಗೆ ಕಾರಣವಾದ ಬಾಂಬ್ ದಾಳಿ ಹೇಡಿಗಳ ಕೃತ್ಯ~ವೆಂದು ತಿಪ್ಪೆಸಾರಿಸುವ ಹೇಳಿಕೆ ನೀಡುವುದಕ್ಕಿಂತ ಕಟ್ಟುನಿಟ್ಟಿನ ಕ್ರಮಗಳಿಂದ ಭಯೋತ್ಪಾದನೆಯ ಹುಟ್ಟಡಗಿಸುವ ಪ್ರತಾಪವನ್ನು ಕೇಂದ್ರ ಸರ್ಕಾರ ತೋರಿಸಬೇಕು. ಜನರಿಗೆ ಸುರಕ್ಷತೆಯ ಭಾವ ನೀಡಲಾಗದಿದ್ದರೆ ಅಧಿಕಾರದಿಂದ ನಿರ್ಗಮಿಸಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.