ಸೋಮವಾರ, ಮೇ 17, 2021
22 °C

ಅಕ್ಷರ ದಾಸೋಹ: ಜಿಲ್ಲೆಯಲ್ಲಿ 524 ಸಿಲಿಂಡರ್ ಕಳ್ಳತನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಜಿಲ್ಲೆಯಲ್ಲಿ 2003ರ ಜೂನ್ ತಿಂಗಳಲ್ಲಿ `ಅಕ್ಷರ ದಾಸೋಹ~ ಯೋಜನೆ ಜಾರಿಯಾಗಿದೆ. ಹಾಸನದಲ್ಲಿ ಈ ವ್ಯವಸ್ಥೆ ಅತ್ಯುತ್ತಮವಾಗಿ ಜಾರಿಯಾಗಿದ್ದರೂ, ಶಾಲೆಗಳಿಂದ ಸಿಲಿಂಡರ್ ಕಳ್ಳತನವಾಗುತ್ತಿರುವ ವಿಚಾರ ಇಲಾಖೆಗೆ ಚಿಂತೆ ಉಂಟುಮಾಡಿದೆ. ಒಂಬತ್ತು ವರ್ಷಗಳಲ್ಲಿ ಜಿಲ್ಲೆಯ ವಿವಿಧ ಶಾಲೆಗಳಿಂದ 524 ಸಿಲಿಂಡರ್‌ಗಳ ಕಳ್ಳತನವಾಗಿದೆ. ಅದರಲ್ಲಿ ಪತ್ತೆಯಾಗಿರುವುದು 49 ಮಾತ್ರ.ಅಕ್ಷರ ದಾಸೋಹ ಯೋಜನೆ ಜಾರಿಗೊಳಿಸುವಲ್ಲಿ ಕರ್ನಾಟಕ ಮತ್ತು ಮೇಘಾಲಯಗಳು ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ರಾಜ್ಯಮಟ್ಟದಲ್ಲಿ ಹೇಳುವುದಾದರೆ ಹಾಸನ ಜಿಲ್ಲೆ ಇತರ ಜಿಲ್ಲೆಗಳಿಗಿಂತ ಒಂದು ಹೆಜ್ಜೆ ಮುಂದಿದೆ ಎಂಬ ವಿಶ್ವಾಸವನ್ನು ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಕುಮಾರಯ್ಯ ಡಿ.ಎಚ್. ವ್ಯಕ್ತಪಡಿಸುತ್ತಾರೆ.ಜಿಲ್ಲೆಯಲ್ಲಿ 2665 ಸರ್ಕಾರಿ ಶಾಲೆಗಳು, 170 ಅನುದಾನಿತ ಶಾಲೆಗಳ 1,83,049 ವಿದ್ಯಾರ್ಥಿಗಳು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. 5323 ಮಂದಿ ಅಡುಗೆ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ವಾರ್ಷಿಕ 14.36 ಕೋಟಿ ರೂಪಾಯಿ ಅನುದಾನದಲ್ಲಿ ಈ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಅವರು ತಿಳಿಸಿದರು.ಬಹುತೇಕ ಎಲ್ಲ ಶಾಲೆಗಳಲ್ಲೂ ಅಡುಗೆ ಕೋಣೆಗಳಿವೆ. ಈಚೆಗೆ ಮಂಜೂರಾಗಿರುವ ಕೆಲವು ಶಾಲೆಗಳಿಗೆ ಸರಿಯಾದ ಕಟ್ಟಡವೇ ಇಲ್ಲ. ಅಂಥ ಶಾಲೆಗಳಲ್ಲಿ ಅಡುಗೆ ಕೋಣೆಗಳಿಲ್ಲ. ಉಳಿದಂತೆ 2006-07ನೇ ಸಾಲಿನಿಂದೀಚೆಗೆ ಇಲಾಖೆ ಒಟ್ಟು 928 ಅಡುಗೆ ಕೋಣೆ ನಿರ್ಮಾಣಕ್ಕೆ ಮಂಜೂರಾತಿ ನೀಡಿದೆ. ಕೆಲವೆಡೆ ಇನ್ನೂ ಕಾಮಗಾರಿ ನಡೆಯುತ್ತಿದೆ. ನಿರ್ಮಾಣದ ವೆಚ್ಚ ಹೆಚ್ಚಾಗಿರುವುದರಿಂದ ಕೆಲವೆಡೆ ತೊಂದರೆಯಾಗುತ್ತಿದೆ.ಯೋಜನೆ ಆರಂಭಿಸುವಾಗ ಪ್ರತಿ ಅಡುಗೆ ಕೋಣೆಗೆ 60 ಸಾವಿರ ರೂಪಾಯಿ ಅಂದಾಜು ವೆಚ್ಚ ನಿಗದಿ ಮಾಡಲಾಗಿತ್ತು. ಆ ದರ ಇನ್ನೂ ಪರಿಷ್ಕರಣೆ ಆಗಿಲ್ಲ. ಈಗ ವೆಚ್ಚ ದ್ವಿಗುಣ ಗೊಂಡಿದೆ. ಆದರೂ ಸ್ಥಳೀಯ ದಾನಿಗಳು, ವಿವಿಧ ಜನಪ್ರತಿನಿಧಿಗಳ ಅನುದಾನ ಮುಂತಾದವುಗಳನ್ನು ಬಳಸಿಕೊಂಡು ನಿರ್ಮಾಣ ಕಾರ್ಯ ನಡೆಯುತ್ತಿದೆ. ಇದರಿಂದಾಗಿ ಅಡುಗೆ ಕೋಣೆ ನಿರ್ಮಾಣ ಕಾರ್ಯ ಸ್ವಲ್ಪ ನಿಧಾನ ಗತಿಯಲ್ಲಿ ಸಾಗುತ್ತಿದೆ.ಗುಣಮಟ್ಟ ಚೆನ್ನಾಗಿದೆ: ಜಿಲ್ಲೆಯಲ್ಲಿ ಮಕ್ಕಳಿಗೆ ನೀಡುವ ಊಟದ ಗುಣಮಟ್ಟ ತುಂಬ ಚೆನ್ನಾಗಿದೆ. ಕಳಪೆ ಅಕ್ಕಿ, ಬೇಳೆ ಬಳಸಿದ ಉದಾಹರಣೆ ಎಲ್ಲೂ ಇಲ್ಲ. ಆಹಾರ ಉತ್ಪನ್ನಗಳ ಗುಣಮಟ್ಟ ಪರೀಕ್ಷಣೆಗಾಗಿಯೇ ಒಬ್ಬ ವ್ಯಕ್ತಿ ಇದ್ದಾರೆ. ಗೋದಾಮಿನಲ್ಲೇ ಅಕ್ಕಿ, ಬೇಳೆ ತಪಾಸಣೆ ನಡೆಸಿ ಗುಣಮಟ್ಟ ಇಲ್ಲದಿದ್ದರೆ ಅದನ್ನು ಅಲ್ಲಿಯೇ ತಿರಸ್ಕರಿಸಲಾಗುತ್ತದೆ ಎಂದರು.`ಶಾಲೆ ಆವರಣದಲ್ಲೇ ಸೊಪ್ಪು, ತರಕಾರಿ ಬೆಳೆಯಬೇಕು ಎಂಬ ಸೂಚನೆ ಇದ್ದರೂ ಜಿಲ್ಲೆಯಲ್ಲಿ ಇದು ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿಲ್ಲ. ಶೇ 50ರಷ್ಟು ಶಾಲೆಗಳಲ್ಲಿ ಮಾತ್ರ ತರಕಾರಿ ಬೆಳೆಯುತ್ತಿದ್ದಾರೆ~ ಎಂದು ಹೆಸರು ತಿಳಿಸಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.ಕೆಲವು ಶಾಲೆಗಳಲ್ಲಿ ಮಕ್ಕಳು, ಶಿಕ್ಷಕರು ಸೇರಿಕೊಂಡು ಅತ್ಯುತ್ತಮ ತೋಟ ನಿರ್ಮಿಸಿದ್ದಾರೆ. ಇನ್ನೂ ಕೆಲವು ಶಾಲೆಗಳ ಶಿಕ್ಷಕರು ಇದರಲ್ಲಿ ಆಸಕ್ತಿಯನ್ನೇ ತೋರಿಲ್ಲ. ಅನೇಕ ಶಾಲೆಗಳ ಸುತ್ತ ಕಾಂಪೌಂಡ್ ಗೋಡೆ ಇಲ್ಲ, ಕೆಲವೆಡೆ ನೀರಿನ ವ್ಯವಸ್ಥೆ ಇಲ್ಲ. ಇದರಿಂದಾಗಿ ತರಕಾರಿ ಬೆಳೆಯುವುದು ಕಷ್ಟವಾಗಿದೆ ಎಂದು ಶಿಕ್ಷಕರು ನುಡಿದಿದ್ದಾರೆ.ಖಾಸಗಿ ಸಂಸ್ಥೆಗಳಿಂದ ಸೇವೆ: ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಇಸ್ಕಾನ್ ಸಂಸ್ಥೆಯವರು ಬಿಸಿಯೂಟ ನೀಡುತ್ತಿದ್ದರೆ, ಹಾಸನ ಜಿಲ್ಲೆಗೆ ಇನ್ನೂ ಅವರು ಕಾಲಿಟ್ಟಿಲ್ಲ. ಆದರೆ ಜಿಲ್ಲೆಯಲ್ಲಿ ಮೂರು ಮಠಗಳು ಒಟ್ಟಾರೆ 44 ಶಾಲೆಗಳ ಮಕ್ಕಳಿಗೆ ಬಿಸಿಯೂಟ ನೀಡುತ್ತಿವೆ.ಅರಕಲಗೂಡು ತಾಲ್ಲೂಕಿನ ಶಿರದನಹಳ್ಳಿ ಮಠ ಐದು ಶಾಲೆಗಳಿಗೆ ಮತ್ತು ಚಿಲುಮೆ ಮಠ 22 ಶಾಲೆಗಳ ಮಕ್ಕಳಿಗೆ ದಾಸೋಹ ನೀಡುತ್ತಿದೆ. ಹಾಸನ ತಾಲ್ಲೂಕಿನಲ್ಲಿ ಜವೇನಹಳ್ಳಿ ಮಠ 17 ಶಾಲೆಯ ಮಕ್ಕಳಿಗೆ ಊಟ ನೀಡುತ್ತಿದೆ. ಈ ಮಠಗಳಿಗೆ ಇಲಾಖೆ ಅಕ್ಕಿ ಮತ್ತು ಬೇಳೆ ಮಾತ್ರ ನೀಡುತ್ತದೆ. ತರಕಾರಿ ಮತ್ತಿತರ ವಸ್ತುಗಳನ್ನು ಅವರೇ ಹೊಂದಿಸುತ್ತಿದ್ದಾರೆ.ಹೊಸತನಕ್ಕೆ ಅವಕಾಶ ಬೇಕು: ಮಕ್ಕಳಿಗೆ ಪ್ರತಿನಿತ್ಯ ಅನ್ನ ಸಾಂಬಾರನ್ನೇ ನೀಡಬಾರದು ಎಂಬ ಕಾರಣಕ್ಕೆ ವಾರದಲ್ಲಿ ಒಂದುದಿನ ಬಿಸಿಬೇಳೆ ಬಾತ್ ಹಾಗೂ ಇನ್ನೊಂದು ದಿನ ಪಲಾವ್ ನೀಡುತ್ತಿದ್ದೇವೆ. ಆದರೆ ಸ್ಥಳೀಯವಾದ ಕೆಲವು ಆಹಾರ ಪದ್ಧತಿಗಳಿದ್ದು ಅದಕ್ಕೂ ಅವಕಾಶ ನೀಡಬೇಕು ಎಂದು ಅನೇಕ ಶಾಲೆಗಳವರು ಮನವಿ ಮಾಡಿದ್ದಾರೆ. ಆದರೆ ನಿಯಮಾವಳಿಯಲ್ಲಿ ಇದಕ್ಕೆ ಅವಕಾಶವಿಲ್ಲ.ಈಚೆಗೆ ದುದ್ದ ಹೋಬಳಿಯಲ್ಲಿ ವಿವಿಧ ಶಾಲಾಭಿವೃದ್ಧಿ ಸಮಿತಿಯವರು ವಿಶೇಷ ಕಾರ್ಯಕ್ರಮ ಆಯೋಜಿಸಿ ಸರ್ಕಾರ ನೀಡುವ ಅಕ್ಕಿ, ಬೇಳೆಯಿಂದಲೇ ತಯಾರಿಸಬಹುದಾದ ವಿವಿಧ ತಿನಿಸುಗಳ ಪ್ರದರ್ಶನ ಮಾಡಿದ್ದರು. ಇಡ್ಲಿ, ದೋಸೆ, ಶಾವಿಗೆ ಮುಂತಾದ ಅನೇಕ ತಿಂಡಿಗಳು ಇದರಲ್ಲಿದ್ದವು. ಸರ್ಕಾರ ಅನುಮತಿ ಕೊಟ್ಟರೆ ಕಡಿಮೆ ಮಕ್ಕಳಿರುವ ಶಾಲೆಗಳಲ್ಲಿ ಇವುಗಳನ್ನು ತಯಾರಿಸಿ ಕೊಡಬಹುದು. ಮಕ್ಕಳಿಗೂ ಏಕತಾನತೆ ತಪ್ಪುತ್ತದೆ ಎಂದು ಅವರು ಮನವಿ ಮಾಡಿದ್ದಾರೆ. ಈಗಾಗಲೇ ಕೆಲವು ಶಾಲೆಗಳಲ್ಲಿ ವಿಶೇಷ ದಿನಗಳಂದು ಶಾವಿಗೆ ತಯಾರಿಸಿ ಕೊಟ್ಟು ಪ್ರಯೋಗವನ್ನೂ ಮಾಡಲಾಗಿದೆ.`ಜಿಲ್ಲೆಯಲ್ಲಿ ಎಲ್ಲವೂ ಸರಿಯಾಗಿದೆ ಎಂದು ಹೇಳುತ್ತಿಲ್ಲ. ಹೊಸದಾಗಿ ಆರಂಭವಾಗಿರುವ ಕೆಲವು ಅಡುಗೆ ಕೋಣೆಗಳಿಗೆ ಇನ್ನೂ ಪಾತ್ರಗಳನ್ನು ಇನ್ನೂ ನೀಡಿಲ್ಲ. ಕೆಲವು ಸಣ್ಣ ಪುಟ್ಟ ಲೋಪದೋಷಗಳಿವೆ ಅವುಗಳನ್ನು ಶೀಘ್ರದಲ್ಲೇ ನಿವಾರಿಸುತ್ತೇವೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಈ ಯೋಜನೆ ಅತ್ಯಂತ ಯಶಸ್ವಿಯಾಗಿ ಜಾರಿಯಾಗುತ್ತಿದೆ~ ಎಂದು ಕುಮಾರಯ್ಯ ತಿಳಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.